ಕಲಿಕಾ ಮಾಧ್ಯಮ: ಕಂಬಾರರ ಕಿಂದರಿ ಮತ್ತು ಸರ್ಕಾರವೆನ್ನುವ...


ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಕಲಿಕಾ ಮಾಧ್ಯಮದ ಬಗ್ಗೆ ಒಂದೊಳ್ಳೇ ಹೇಳಿಕೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆಯಾಗಬೇಕು ಎನ್ನುವ   ಅವರ ಹೇಳಿಕೆ ಸರಿಯಾಗೇ ಇದೆ. ಕರ್ನಾಟಕ ಸರ್ಕಾರವು ನಾಡಿನ ಕಲಿಕಾ ವ್ಯವಸ್ಥೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿ, ಸರಿಯಾದ ವ್ಯವಸ್ಥೆ ರೂಪಿಸುವಲ್ಲಿ ತನ್ನ ಬದ್ಧತೆಯನ್ನು ತೋರ್ಪಡಿಸಬೇಕಾಗಿದೆ.

ಕಲಿಕಾ ಮಾಧ್ಯಮ ಮತ್ತು ನುಡಿ

‘ಕಲಿಕಾ ಮಾಧ್ಯಮ ತಾಯ್ನುಡಿಯಲ್ಲಿರಬೇಕಾದ್ದು ಸರಿಯಾದ್ದು ಮತ್ತು ಒಳ್ಳೆಯದು’ ಎನ್ನುವುದು ಸಹಜವೂ ಸತ್ಯವೂ ಆದದ್ದಾಗಿದ್ದರೂ ಕೂಡಾ... ಈ ನಮ್ಮ ನಾಡಿನಲ್ಲಿ ಆ ಮಾತು ಹೇಳುವುದೂ, ಕೇಳುವುದೂ ಆದಾಗ ಅದು ಒಂದು ರೀತಿಯಲ್ಲಿ ಅವಾಸ್ತವಿಕ ಮತ್ತು ಕಾರ್ಯಸಾಧುವಲ್ಲದ್ದು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ವಾಸ್ತವವೆಂದರೆ ಇಂದಿಗೂ ನಮ್ಮ ನಾಡಿನಲ್ಲಿ ನೂರಕ್ಕೆ ಎಂಬತ್ತೈದರಷ್ಟು ಮಕ್ಕಳಿಗೆ ಶಿಕ್ಷಣವು ಕನ್ನಡ ಮಾಧ್ಯಮದಲ್ಲೇ ಸಿಗುತ್ತಿದೆ. ಹೀಗಿರುವಾಗ ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲಾ ಹಂತದ ಕಲಿಕೆಯನ್ನು ಸರ್ಕಾರವು ಕನ್ನಡದಲ್ಲೇ ದೊರಕಿಸಿಕೊಡಬೇಕಾದ್ದು ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಖಚಿತವಾದ ಕ್ರಮಕ್ಕೆ ಮುಂದಾಗಲಿ.

ಕಿಂದರಿ ಊದಿದ ಕಂಬಾರರು...

ಹೀಗಿರುವಾಗ ಸರ್ಕಾರವು ಇತ್ತೀಚಿಗೆ ನಿಧಾನವಾಗಿ ಕನ್ನಡ ಮಾಧ್ಯಮದಿಂದ ದೂರ ಸರಿಯುತ್ತಿರುವ ನಾಡಜನರನ್ನು ಮತ್ತೆ ತಾಯ್ನುಡಿ ಕಲಿಕೆಯತ್ತ ಸೆಳೆಯುವ ಕೆಲಸ ಮಾಡಬೇಕಾಗಿದೆ. ಸಮಾನ ಶಿಕ್ಷಣ ಮತ್ತು ತಾಯ್ನುಡಿ ಶಿಕ್ಷಣ ಎನ್ನುವುದನ್ನು ಸಾಕಾರಗೊಳಿಸುವತ್ತ ಸರ್ಕಾರ ಯೋಜಿಸಿ ಕಾರ್ಯೋನ್ಮುಖವಾಗಬೇಕಾಗಿದೆ. ಆದರೆ ಅಕ್ರಮ ಇಂಗ್ಲೀಶ್ ಶಾಲೆಗಳ ಬಗ್ಗೆ ಕಠಿಣ ಕ್ರಮಕ್ಕೆ ಇಂದಿನವರೆಗೂ ಮುಂದಾಗಿಲ್ಲ ಎನ್ನುವ, ಭಾಷಾ ಮಾಧ್ಯಮದ ವಿಷಯವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಮೊಕದ್ದಮೆಯ ವಿಷಯವಾಗಿ ರಾಜ್ಯಸರ್ಕಾರವು ಅಸಡ್ಡೆ ತೋರುತ್ತಿದೆಯೆನ್ನುವ ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಂಬಾರರ ಹೇಳಿಕೆಗಳು ಸರ್ಕಾರವೆನ್ನುವ ಕೋಣನ ಮುಂದೆ ಊದುತ್ತಿರುವ ಕಿಂದರಿಯೇನೋ ಎನ್ನಿಸುತ್ತಿದೆ ಗುರೂ!

ನಲಿವಿನ ಹಾರೈಕೆಗಳು ನೆಚ್ಚಿನ ಕಂಬಾರ ಅವರಿಗೆ !

ಕನ್ನಡನಾಡಿನ ಹೆಮ್ಮೆಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರಿಗೆ ಈಗ ಜ್ಞಾನಪೀಠ ಪ್ರಶಸ್ತಿಯ ಗರಿ. ಇದು ಕರ್ನಾಟಕಕ್ಕೆ ಎಂಟನೆ ಬಾರಿ ಸಂದ ಗೌರವ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಚಿತ್ರನಟ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಕನ್ನಡ ಸಾಹಿತ್ಯ ಲೋಕದ ಸಿರಿಯನ್ನು ಹೆಚ್ಚಿಸಿದವರು ಇವರು. ಕುವೆಂಪು, ಶಿವರಾಮ ಕಾರಂತ, ದ ರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ ಕೃ ಗೋಕಾಕ, ಗಿರೀಶ್ ಕಾರ್ನಾಡ್ ಮತ್ತು ಯು ಆರ್ ಅನಂತಮೂರ್ತಿಯವರ ನಂತರ ಈಗ ಕಂಬಾರರು ಕರ್ನಾಟಕಕ್ಕೆ ಗೌರವ ತಂದಿದ್ದಾರೆ. ಅವರಿಗೆ ಬನವಾಸಿ ಬಳಗ ಮನದುಂಬಿ ಶುಭಾಶಯಗಳನ್ನು  ಸಲ್ಲಿಸುತ್ತದೆ.

ಉಚ್ಚ ನ್ಯಾಯಾಲಯದಲ್ಲಿ ಕನ್ನಡ: ರಾಜ್ಯಸರ್ಕಾರದ ಒಳ್ಳೆ ಹೆಜ್ಜೆ!


ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಕನ್ನಡದಲ್ಲಿ ತೀರ್ಪು ನೀಡಿದ ಹಲವು ನ್ಯಾಯಾಧೀಶರಿಗೆ ಸನ್ಮಾನ ಮಾಡುವ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ಕಾನೂನು ಮಂತ್ರಿಗಳು, ನಾಡಿನ ಹೈಕೋರ್ಟಿನಲ್ಲಿ ಕನ್ನಡದಲ್ಲೇ ಕಲಾಪ ನಡೆಯುವಂತೆ, ತೀರ್ಪು ನೀಡುವಂತಹ ವ್ಯವಸ್ಥೆ ಜಾರಿಗೊಳಿಸಲು ಬೇಕಿರುವ ಅಗತ್ಯ ಕಾನೂನು ತಿದ್ದುಪಡಿಯನ್ನು ಮಾಡಲು ರಾಜ್ಯಸರ್ಕಾರವು ಮುಂದಾಗುವುದಾಗಿ ತಿಳಿಸಿದರು. ಕೋರ್ಟುಗಳಲ್ಲಿ ಬಳಸುವ ಭಾಷೆಗಳ ಬಗ್ಗೆ ಭಾರತದ ಸಂವಿಧಾನ ಹೀಗೆನ್ನುತ್ತದೆ ನೋಡಿ:

ಸಂವಿಧಾನದ ಪುಟಗಳಲ್ಲಿ...

ಭಾರತೀಯ ಸಂವಿಧಾನದ XVIIನೇ ಭಾಗದ ಮೂರನೇ ಅಧ್ಯಾಯದ ೩೪೮ನೇ ವಿಧಿಯು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ಭಾಷೆ ಮತ್ತು ಮುಂತಾದವುಗಳ ಬಗ್ಗೆ ಹೀಗೆ ಹೇಳುತ್ತದೆ.
ಭಾರತ ಸಂವಿಧಾನ : : ಅಧ್ಯಾಯ ೩: ವಿಧಿ ೩೪೮
೧. ಕೆಳಗೆ ಹೇಳಿರುವ ಎಲ್ಲಾ ಅಂಶಗಳು ಇಂಗ್ಲೀಷಿನಲ್ಲಿ ಇರತಕ್ಕದ್ದು.
(a) ಸರ್ವೋಚ್ಚ ನ್ಯಾಯಾಲಯದ ಮತ್ತು ರಾಜ್ಯಗಳ ಉಚ್ಚ ನ್ಯಾಯಲಯಗಳ ನಡಾವಳಿಗಳು
(b) ಈ ಕೆಳಕಂಡ ವಿಷಯಗಳ ಅಧಿಕೃತ ಹೊತ್ತಗೆಗಳು
I. ಸಂಸತ್ತಿನ ಎರಡೂ ಸದನಗಳಲ್ಲಿ ಹಾಗೂ ರಾಜ್ಯದ ಶಾಸಕಾಂಗದಲ್ಲಿ ಮಂಡಿಸಲಾಗುವ ಅಥವಾ ಬದಲಾವಣೆಗೊಳಗಾಗುವ ಮಸೂದೆ.
II. ಸಂಸತ್ತಿನಲ್ಲಿ ಪಾಸಾಗುವ ಎಲ್ಲಾ ಕಾಯ್ದೆಗಳು ಅಥವಾ ರಾಜ್ಯದ ಶಾಸಕಾಂಗ ಪಾಸು ಮಾಡುವ ಕಾಯ್ದೆಗಳು ಮತ್ತು ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಹೊರಡಿಸುವ ತೀರ್ಮಾನಗಳು.
III. ಈ ಸಂವಿಧಾನದಲ್ಲಿರುವ ಆದೇಶಗಳು, ನಿಯಮಗಳು, ರೆಗ್ಯೂಲೇಟರ್‌ಗಳು ಮತ್ತು ಬೈ-ಲಾಗಳು ಮತ್ತು ಪಾರ್ಲಿಮೆಂಟ್ ಅಥವಾ ರಾಜ್ಯಸರ್ಕಾರಗಳು ಮಾಡುವ ಕಾನೂನುಗಳು
೨. ಈ ನಿಯಮದ ಅನ್ವಯ ಉಚ್ಚ ನ್ಯಾಯಾಲಯ ತೀರ್ಪು, ಡಿಕ್ರೀ ಅಥವಾ ಆದೇಶ ನೀಡಿಲ್ಲದೇ ಇದ್ದ ಪಕ್ಷದಲ್ಲಿ ಅಧಿನಿಯಮ(೧)ರ  ಉಪ ಅಧಿನಿಯಮ (ಎ)ನಲ್ಲಿ ಹೇಳಿರುವದನ್ನು ಹೊರತುಪಡಿಸಿ, ರಾಜ್ಯಪಾಲರು, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಹಿಂದಿ ಭಾಷೆ ಅಥವಾ ಬೇರೆ ಯಾವುದೇ ಭಾಷೆಯನ್ನು ರಾಜ್ಯದ ಆಡಳಿತದ ಉದ್ದೇಶಕ್ಕಾಗಿ, ಆ ರಾಜ್ಯದ ಒಳಗೇ ಇರುವ ಉಚ್ಚ ನ್ಯಾಯಾಲಯದ ನಡಾವಳಿಗಳಿಗಾಗಿ ಉಪಯೋಗಿಸಲು ಅಧಿಕಾರವನ್ನು ನೀಡಬಹುದು: 
(೩) ಅಧಿನಿಯಮ (೧)ರ ಉಪ ಅಧಿನಿಯಮ (ಬಿ)ನಲ್ಲಿ ಹೇಳಿರುವುದನ್ನು ಹೊರತುಪಡಿಸಿ ಒಂದು ರಾಜ್ಯವು ಇಂಗ್ಲೀಷ್ ಅಲ್ಲದೇ ಬೇರೆ ಭಾಷೆಯನ್ನು ಕೋರ್ಟಿನ ತೀರ್ಪು, ಆದೇಶ, ನಿಯಮಗಳಿಗಾಗಿ ಬಳಸಿದ್ದರೆ ಅಂತಹವುಗಳ ಇಂಗ್ಲೀಶ್ ಭಾಷೆಯ ಅಧಿಕೃತ ತರ್ಜುಮೆಯು ರಾಜ್ಯಪಾಲರ ಅಂಕಿತ ಪಡೆದುಕೊಂಡು ರಾಜ್ಯಪತ್ರದಲ್ಲಿ ಪ್ರಕಟವಾದ ತರ್ಜುಮೆಯದ್ದಾಗಿರುತ್ತದೆ.
ಅಂದರೆ  ಉಚ್ಚ ನ್ಯಾಯಾಲಯದ ಕಲಾಪವು ಇಂಗ್ಲೀಶಿನಲ್ಲಿರತಕ್ಕದ್ದು ಎನ್ನುವುದು ಮೂಲವಾಗಿದ್ದು, ರಾಜ್ಯ ಭಾಷೆಯಲ್ಲಿ ಬೇಕಾದರೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ರಾಜ್ಯಪಾಲರು ಅಧಿಕಾರ ನೀಡಬಹುದು ಎನ್ನಲಾಗಿದೆ. ಇದನ್ನು ಕಂಡಾಗ, ಒಂದು ನಾಡಿನ ವ್ಯವಸ್ಥೆಯನ್ನು ಜನಗಳ ಭಾಷೆಯಲ್ಲಿ ನಡೆಸುವುದು ಸರಿಯಾದ ವಿಧಾನ ಎಂದು ಭಾರತ ಸರ್ಕಾರ ಏಕೆ ಅರಿಯದೇ ಹೋಯಿತು? ಜನರ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಸಲು ಅವರಿಂದ ಇವರಿಂದ ಒಪ್ಪಿಗೆ ಪಡೆಯಬೇಕೆನ್ನುವ ತಿರುಗಣೆಯ ಸರ್ಕಸ್ ಯಾಕೆ? ಎಂದನ್ನಿಸದೇ ಇರದು.

ಏನಾದರೂ, ಕರ್ನಾಟಕ ರಾಜ್ಯಸರ್ಕಾರ ಮತ್ತು ಕಾನೂನು ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರು ಈಗ ಹೈಕೋರ್ಟಿನಲ್ಲೂ ಕನ್ನಡ ತರಲು ಮುಂದಾಗಿರುವುದು ಮೆಚ್ಚುಗೆಯ ವಿಷಯವಾಗಿದೆ. ಜನರ ಭಾಷೆಯಲ್ಲಿ ಆಡಳಿತ ನಡೆಸುವುದು ಜನಕ್ಕೂ, ಆಡಳಿತ ಯಂತ್ರಕ್ಕೂ, ಸರ್ಕಾರಕ್ಕೂ ಸಲೀಸು ಮತ್ತು ಅನುಕೂಲಕರವಾಗಿದೆ ಎನ್ನುವುದೇ ಸತ್ಯವಾಗಿದೆ. ಅಲ್ವಾ ಗುರೂ?

ತಾರತಮ್ಯದ ಈ ನೀತಿ ಕೊನೆಯಾಗಲಿ...


ಭಾರತದ ಭಾಷಾನೀತಿಯು ತುರ್ತಾಗಿ ಬದಲಾಗಲಿ! ಸೆಪ್ಟೆಂಬರ್ ೧೪ರ ಹಿಂದೀ ದಿವಸ್ ಆಚರಣೆಗಳು ಕೊನೆಯಾಗಲಿ! ಭಾರತವು ನಿಜವಾದ ಒಪ್ಪುಕೂಟವಾಗಲಿ... ಕನ್ನಡಿಗರ ಮೇಲಿನ ಹಿಂದೀ ಹೇರಿಕೆ ನಿಲ್ಲಲಿ!!!

ಯಶಸ್ವಿಯಾಗಿ ನಡೆದ ಭಾಷಾನೀತಿ ಕಾರ್ಯಕ್ರಮ...



ಬಹುಭಾಷಾ ಪ್ರಾಂತ್ಯಗಳ ಒಕ್ಕೂಟವಾದ ಭಾರತದಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿಸಿಕೊಂಡು ಅದರ ಬಳಕೆಯನ್ನು ಕಡ್ಡಾಯವಾಗಿ ಹೆಚ್ಚಿಸುವ ಗುರಿಯಿಟ್ಟುಕೊಂಡು ಕೇಂದ್ರಸರ್ಕಾರ ರೂಪಿಸಿಕೊಂಡಿರುವ ಇವತ್ತಿನ ಭಾರತದ ಭಾಷಾ ನೀತಿ ಎಂತದ್ದು? ಅದರಲ್ಲಿನ ತೊಂದರೆಗಳೇನು? ಅದನ್ನು ಒಪ್ಪುವುದರಿಂದ ನಮಗಾಗುವ ಹಾನಿಯೇನು? ಎಲ್ಲ ಭಾರತೀಯರಿಗೂ, ಎಲ್ಲ ಭಾರತೀಯರ ಭಾಷೆಗೂ ಸಮಾನ ಸ್ಥಾನಮಾನ ನೀಡುವ, ಎಲ್ಲರನ್ನು ಸಮಾನವೆಂದು ಕಾಣುವ ಭಾಷಾ ನೀತಿ ಎಂತದ್ದು? ಒಟ್ಟಾರೆ ಭಾರತಕ್ಕೊಪ್ಪೋ ಭಾಷಾ ನೀತಿ ಹೇಗಿರಬೇಕು ಅನ್ನುವ ಬಗ್ಗೆ ಬನವಾಸಿ ಬಳಗ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲಿಗೆ, "ಭಾರತದ ಭಾಷಾ ನೀತಿ ಮತ್ತು ಒಕ್ಕೂಟ ಧರ್ಮ" ಅನ್ನುವ ವಿಷಯದ ಬಗ್ಗೆ ಮಾತನಾಡಿದ ಹಿರಿಯ ಕನ್ನಡಪರ ಚಿಂತಕರಾದ ಶ್ರೀ. ಡಾ.  ಪಿ.ವಿ.ನಾರಾಯಣ ಅವರು ಭಾರತವೆನ್ನುವುದು ಒಂದು ರಾಜ್ಯಗಳ ಒಕ್ಕೂಟ, ಅಲ್ಲಿ ಯೂರೋಪಿಯನ್ ಒಕ್ಕೂಟದಲ್ಲಿರುವಂತೆ ಎಲ್ಲ ಭಾಷೆಗಳಿಗೂ ಅವಕಾಶವನ್ನು ಕೊಡುವ ಭಾಷಾ ನೀತಿ ಬೇಕು. ಸಂಸತ್ತಿನಲ್ಲಿ ಎಲ್ಲ ಭಾಷೆಗಳನ್ನು ಬಳಸುವಂತಹ ಅನುಕೂಲಗಳನ್ನು ಕಲ್ಪಿಸಬೇಕು. ಎಲ್ಲ ನುಡಿಗಳಿಗೂ ಸಮಾನ ಗೌರವ, ಸಮಾನ ಸ್ಥಾನಮಾನ ನೀಡುವ ಭಾಷಾ ನೀತಿಯನ್ನು ರೂಪಿಸುವುದೇ ನಿಜವಾದ ಒಕ್ಕೂಟ ಧರ್ಮವೆಂದು ನುಡಿದರು.

ಎರಡನೆಯವರಾಗಿ ಮಾತನಾಡಿದ ಹಿರಿಯ ಚಿತ್ರ ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ.ಟಿ.ಎಸ್.ನಾಗಾಭರಣ ಅವರು "ಭಾರತೀಯ ಚಿತ್ರರಂಗವೆಂದರೆ ಹಿಂದಿ ಚಿತ್ರರಂಗವೇ?" ಎಂಬ ವಿಷಯದ ಬಗ್ಗೆ ಮಾತನಾಡುತ್ತ, "IIFA ಹೆಸರಿನಲ್ಲಿ ಹಿಂದಿ ಚಿತ್ರಗಳನ್ನಷ್ಟೇ ಪ್ರೋತ್ಸಾಹಿಸುವುದು, ಆಸ್ಕರ್ ಪ್ರಶಸ್ತಿಗೆ ಅತಿ ಹೆಚ್ಚು ಬಾರಿ ಹಿಂದಿ ಚಿತ್ರವನ್ನೇ ನಾಮಾಂಕಿತಗೊಳಿಸುವುದು, ಪ್ರಸಾರ ಭಾರತಿಯ ಅಂಗವಾದ ದೂರದರ್ಶನ, ವಿವಿಧ ಭಾರತಿಗಳ ಮೂಲಕ ಹಿಂದೀ ಪ್ರಸಾರಕ್ಕೆ ಹೆಚ್ಚಿನ ಉತ್ತೇಜನ ನೀಡುವುದು, ಇಂತಹ ಹಲವು ತಪ್ಪುಗಳ ಮೂಲಕ ಹಿಂದಿಯೇತರ ನುಡಿಗಳನ್ನು ಅವುಗಳ ನೆಲದಲ್ಲೇ ಮೂಲೆಗುಂಪಾಗಿಸುತ್ತಿರುವುದರ ಬಗ್ಗೆ ನೋವು ವ್ಯಕ್ತಪಡಿಸಿದರು. ಗುಜರಾತಿ, ಪಂಜಾಬಿ, ಮರಾಠಿ, ಬೆಂಗಾಲಿ, ಒರಿಯಾದಂತಹ ನುಡಿಗಳನ್ನು ಆಡುವವರ ಸಂಖ್ಯೆ ಗಣನೀಯವಾಗಿದ್ದರೂ ಆ ಭಾಷೆಗಳ ಚಿತ್ರೋದ್ಯಮ ಸೋತು ಸೊರಗಿರುವುದರ ಹಿಂದೆ ಹಿಂದೀ ಚಿತ್ರರಂಗದ ಕರಿ ನೆರಳಿದೆ, ಇದು ಬದಲಾಗಬೇಕು ಎಂದು ನುಡಿದರು.
 ಮೂರನೆಯವರಾಗಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ. ಟಿ.ಎ.ನಾರಾಯಣ ಗೌಡವರು "ಹಿಂದಿ ಹೇರಿಕೆ ವಿರೋಧಿ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿ" ಎಂಬ ವಿಷಯದ ಬಗ್ಗೆ ಮಾತನಾಡಿದರು. ತಮಿಳುನಾಡಿನಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಹೋರಾಟ ಮತ್ತು ಅದರಿಂದ  ದೊರೆತ ಗೆಲುವನ್ನು ಬಣ್ಣಿಸಿದ ಅವರು ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳ ಕೈಗೊಂಬೆಗಳಾಗಿರುವ ಇಲ್ಲಿನ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕರ್ನಾಟಕ ಹೇಗೆ ಹಿಂದೀ ಹೇರಿಕೆಗೆ ತುತ್ತಾಗಬೇಕಾಗಿ ಬಂದಿದೆ ಎಂಬುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು. ೨೦೦೬ರಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸಿ ಕರವೇ ನಡೆಸಿಕೊಂಡು ಬಂದಿರುವ ಹೋರಾಟಗಳ ವಿವರವನ್ನು ತೆರೆದಿಟ್ಟರು. ದೇಶಕ್ಕೊಪ್ಪೊ ಭಾಷಾ ನೀತಿ ರೂಪಿಸಲು ಪಕ್ಷಭೇದ ಮರೆತು ಕರ್ನಾಟಕದ ರಾಜಕಾರಣಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಬನವಾಸಿ ಬಳಗ ಹೊರ ತಂದಿರುವ, ಭಾರತದ ಭಾಷಾ ನೀತಿಯ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲುವ "ಹಿಂದೀ ಹೇರಿಕೆ- ಮೂರು ಮಂತ್ರ, ನೂರು ತಂತ್ರ" ಅನ್ನುವ ಪುಸ್ತಕ ಅತಿಥಿಗಳಿಂದ ಬಿಡುಗಡೆಗೊಂಡಿತು.
ಕೊನೆಯಲ್ಲಿ ಮಾತನಾಡಿದ ಉದಯವಾಣಿ ಸಮೂಹ ಸಂಪಾದಕರಾದ ಶ್ರೀ. ರವಿ ಹೆಗ್ಡೆಯವರು ಭಾರತಕ್ಕೊಪ್ಪೊ ಭಾಷಾ ನೀತಿ ಎಲ್ಲ ಭಾಷೆಗಳಿಗೂ ಸಮಾನ ಗೌರವ, ಸ್ಥಾನಮಾನ ನೀಡುವಂತದ್ದಾಗಿರಬೇಕು ಹಾಗೂ ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯ ಸಾರ್ವಭೌಮತ್ವ ಎತ್ತಿ ಹಿಡಿಯುವಂತದ್ದು, ಅಲ್ಲಿನ ಅನನ್ಯತೆಯನ್ನು ಕಾಪಾಡುವಂತದ್ದು ಆಗಿರಬೇಕು ಎಂದರು ಹಾಗೂ ಬಹಳಷ್ಟು ಅಂಕಿಅಂಶಗಳ ಸಮೇತ ಬನವಾಸಿ ಬಳಗ ತಂದಿರುವ ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಕನ್ನಡಪರ ಚಿಂತಕ ಶ್ರೀ.ಕೆ.ರಾಜಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ ಹೊತ್ತಗೆಯನ್ನು ಕೊಳ್ಳಬಯಸುವವರು sanjeeva@banavasibalaga.orgನ್ನು ಸಂಪರ್ಕಿಸಬಹುದಾಗಿದೆ.

ಹಿಂದೀ ದಿನಾಚರಣೆ: ಭಾರತ ಒಕ್ಕೂಟಕ್ಕಂಟಿದ ಕಪ್ಪುಮಸಿ!

(ಬೆಂಗಳೂರಿನ ಎನ್.ಎ.ಎಲ್ ಸಂಸ್ಥೆಯಲ್ಲಿ ೨೦೦೯ರಲ್ಲಿ ನಡೆದ ಹಿಂದೀ ದಿನಾಚರಣೆ)
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅತಿಯಾಗಿ ಚರ್ಚೆಗಾದ ವಿಷಯಗಳಲ್ಲೊಂದು "ಭಾರತದ ಭಾಷಾನೀತಿ". ಸಂವಿಧಾನ ರಚಿಸುವಾಗ ಯಾವ ಭಾಷೆಯಲ್ಲಿ ಬರೆಯಬೇಕು ಎನ್ನುವುದರಿಂದ ಆರಂಭವಾದ ಈ ಚರ್ಚೆ ಭಾರತಕ್ಕೆ ಯಾವುದು ರಾಷ್ಟ್ರಭಾಷೆಯಾಗಬೇಕು ಎನ್ನುವವರೆಗೂ ಮುಂದುವರೆಯಿತು. ಭಾರತದ ಸಂವಿಧಾನವನ್ನು ರಚಿಸಿ, ಜಾರಿಗೆ ತರಲು ಸಂವಿಧಾನ ಸಮಿತಿಯನ್ನು (Constituent assembly) ರೂಪಿಸಲಾಯಿತು. ಇದರ ಅಧ್ಯಕ್ಷರಾಗಿ ಡಾ. ಬಾಬು ರಾಜೇಂದ್ರಪ್ರಸಾದ್ ನೇಮಕವಾದರು. ಡಾ. ಬಿ ಆರ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾದರು. ಡಿಸೆಂಬರ್ ೧೧, ೧೯೪೬ರಂದು ಮೊದಲು ಸಭೆ ಸೇರಿದ ಸಮಿತಿಯು ಜನವರಿ, ೨೬ರಂದು ಭಾರತದ ಸಂವಿಧಾನ ಜಾರಿಯಾಗಿ, ಮೊದಲ ಸಾರ್ವಜನಿಕ ಚುನಾವಣೆಗಳು ನಡೆದು ಸರ್ಕಾರ ರೂಪುಗೊಳ್ಳುವವರೆಗೂ ಅಸ್ತಿತ್ವದಲ್ಲಿತ್ತು.


ಸಂವಿಧಾನ ಸಮಿತಿ ಮತ್ತು ಆಡಳಿತ ಭಾಷೆ

ಭಾರತಕ್ಕೆ ಹಿಂದೀಯನ್ನು ರಾಷ್ಟ್ರಭಾಷೆ ಮಾಡಬೇಕೆನ್ನುವ ಪ್ರಯತ್ನಗಳು ಆ ದಿನಗಳಲ್ಲಿ ನಡೆದರೂ ಹಿಂದೀಯೇತರ ಪ್ರದೇಶಗಳ ತೀವ್ರ ವಿರೋಧದ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಸಂವಿಧಾನ ಸಮಿತಿಯಲ್ಲಿ/ ಅದಕ್ಕೆ ಮುನ್ನ ನಡೆದ ಚರ್ಚೆಗಳಲ್ಲಿ ಗಮನ ಸೆಳೆವ ಎರಡು ಹೇಳಿಕೆಗಳನ್ನು ನೋಡಿದರೆ ಹಿಂದೀ ಪರರ ಮತ್ತು ವಿರೋಧಿಗಳ ಮನಸ್ಥಿತಿ ಅರ್ಥವಾಗುತ್ತದೆ.

ಪ್ರಖರ ಹಿಂದೀವಾದಿ, ಶ್ರೀ ಆರ್.ವಿ. ಧುಲೇಕರ್ ಅವರು  ೧೦ನೇ ಡಿಸೆಂಬರ್ ೧೯೪೬ರಲ್ಲಿ ಇತಿಹಾಸ ಪ್ರಸಿದ್ಧವಾದ ‘ಹಿಂದಿಯನ್ನು ತಿಳಿಯದ ಯಾವೊಬ್ಬನಿಗೂ ಭಾರತದಲ್ಲಿ ಬದುಕುವ ಹಕ್ಕಿಲ್ಲ. ಭಾರತದ ಸಂಸತ್ತಿನಲ್ಲಿ ಭಾಗವಹಿಸುವ ಹಕ್ಕಿಲ್ಲ. ಅಂಥವರು ಭಾರತ ಬಿಟ್ಟು ತೊಲಗಲಿ’ಎನ್ನುವ ಹೇಳಿಕೆಯನ್ನು ನೀಡಿದರು. ಇದೊಂದು ಹೇಳಿಕೆ ಹಿಂದೀ ಪರವಾದವರ ಮನಸ್ಥಿತಿಯನ್ನು, ಹಿಂದೀಯೇತರರ ಬಗೆಗಿನ ಅಸಹನೆಯನ್ನೂ ತೋರುತ್ತದೆ.

ಇದಕ್ಕುತ್ತರವಾಗಿ ಶ್ರೀ ಟಿ. ಟಿ ಕೃಷ್ಣಮಾಚಾರಿಯವರು “ಹಿಂದಿಯನ್ನು ನಾನು ಕಲಿಯಲಾರೆ. ಏಕೆಂದರೆ ಹಾಗೆ ಕಲಿಯಿರಿ ಎನ್ನುವ ಮೂಲಕ ನನ್ನಮೇಲೆ ನಾನಾ ಕಟ್ಟುಪಾಡುಗಳನ್ನು ಹೇರಲಾಗುತ್ತದೆ. ದೇಶ ಒಡೆಯಬೇಕೆನ್ನುವ ಕೂಗಿಗೆ ನಾವೂ ದನಿಗೂಡಿಸುವಂತೆ ನಿಮ್ಮ ಒತ್ತಾಯದ ನಡವಳಿಕೆ ಇರದಿರಲಿ. ನನ್ನ ಪ್ರೀತಿಯ ಉತ್ತರಪ್ರದೇಶದ ಮಿತ್ರರೇ, ನಿಮಗೆ ಒಗ್ಗೂಡಿದ ಭಾರತ ಬೇಕೋ? ಅಥವಾ ಹಿಂದೀಭಾರತ ಬೇಕೋ ತೀರ್ಮಾನಿಸಿ”ಎಂಬ ಹೇಳಿಕೆ ನೀಡಿದರು.

ಕೊನೆಗೆ ಎರಡೂ ಪಂಗಡಗಳ ನಡುವೆ ೧೯೪೯ರಲ್ಲಿ  ಒಂದು ರಾಜೀಸೂತ್ರ ಏರ್ಪಟ್ಟಿತು. ಇದಕ್ಕೆ ಮುನ್ಶಿ-ಅಯ್ಯಂಗಾರ್ ರಾಜಿ ಒಪ್ಪಂದ ಎನ್ನಲಾಯಿತು. ಹಿಂದೀ ಪರ ಮತ್ತು ವಿರೋಧದ ಎರಡೂ ಬಣಗಳ ನಡುವೆ "ಅಯ್ಯಂಗಾರ್ - ಮುನ್ಶಿ ರಾಜಿ ಒಪ್ಪಂದ"ವುಂಟಾಗಿ ಹಿಂದೀಯನ್ನು ರಾಷ್ಟ್ರಭಾಷೆಯನ್ನಾಗಿಸದೆ ಆಡಳಿತ ಭಾಷೆಯನ್ನಾಗಿಸುವ ಪ್ರಯತ್ನಗಳಾದವು.


ಹಿಂದೀ ದಿನಾಚರಣೆ

ಭಾರತದ ಸಂವಿಧಾನದಲ್ಲಿ ಆಡಳಿತ ಭಾಷೆಯಾಗಿ ಹಿಂದೀ ಸ್ಥಾಪಿತವಾದ ದಿನ ಸೆಪ್ಟೆಂಬರ್ ೧೪, ೧೯೪೯ರಂದು. ಆ ದಿನವನ್ನು ಕೇಂದ್ರಸರ್ಕಾರದ ಎಲ್ಲಾ ಕಛೇರಿಗಳಲ್ಲಿ ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಇಂದಿಗೂ ಹಿಂದೀ ದಿನಾಚರಣೆ ಎಲ್ಲೆಡೆ ನಡೆಯುತ್ತಿದ್ದು, ದಿವಸ್ ಈಗ ವಾರ, ಪಕ್ಷವಾಗಿ ಬದಲಾಗಿದೆ. ಕೇಂದ್ರಸರ್ಕಾರಿ ನೌಕರರನ್ನೂ, ಅವರ ಮಕ್ಕಳು ಮರಿ ಕುಟುಂಬವನ್ನು ಹಿಂದೀ ಒಪ್ಪಿದ್ದಕ್ಕಾಗಿ ಅಭಿನಂದಿಸುವ, ಕಲಿಯಲು ಪ್ರೋತ್ಸಾಹಿಸುವ, ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಕ್ಕೇ ನೂರಾರು ರೂಪಾಯಿ ಬಹುಮಾನ ನೀಡುವ ವ್ಯವಸ್ಥೆ ಇಂದಿಗೂ ಭಾರತದ ಮೂಲೆಮೂಲೆಯಲ್ಲಿ ಜಾರಿಯಲ್ಲಿದೆ. ಸಮಾನತೆಯೇ ಜೀವಾಳವಾಗಬೇಕಾದ ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಒಕ್ಕೂಟದಲ್ಲಿ ಉಳಿದ ಯಾವ ನುಡಿಗಳಿಗಿಲ್ಲದ ಸ್ಥಾನಮಾನವನ್ನು ಹಿಂದೀ ನುಡಿಗೆ ನೀಡಿರುವ ದಿನವನ್ನು ಹಬ್ಬವಾಗಿ, ವಿಜಯೋತ್ಸವವಾಗಿ ಸರ್ಕಾರವೇ ಆಚರಿಸುತ್ತಿರುವುದು, ಭಾರತ ಒಕ್ಕೂಟದ ಮುಖಕ್ಕೆ ಬಳಿದ ಕಪ್ಪುಮಸಿಯಂತೆ ಕಾಣುತ್ತಿಲ್ಲವಾ? ಗುರೂ!

"ಭಾರತಕ್ಕೊಪ್ಪೋ ಭಾಷಾನೀತಿ" - ಬಳಗದ ಕಾರ್ಯಕ್ರಮಕ್ಕೆ ಬನ್ನಿ..

ಸೆಪ್ಟೆಂಬರ್ ಹತ್ತರಂದು ಬನವಾಸಿ ಬಳಗವು ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಈ ಅಕ್ಕರೆಯ ಕರೆಯೋಲೆ. ಅಂದಿನ ಕಾರ್ಯಕ್ರಮದಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಅತಿಥಿಗಳು ಮಾತನ್ನಾಡಲಿದ್ದಾರೆ. ಭಾರತದ ಭಾಷಾನೀತಿಯ ಬಗ್ಗೆ, ಅದರ ಇಂದಿನ ಸ್ವರೂಪ, ಅದರಿಂದಾಗಿರುವ ಪರಿಣಾಮಗಳು, ಬದಲಾವಣೆಯ ಅಗತ್ಯಗಳು ಮತ್ತು ಸರಿಯಾದ ಭಾಷಾನೀತಿಯ ಬಗ್ಗೆ ಅಂದಲ್ಲಿ ಮಾತುಕತೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ಹಿಂದೀ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಬಿಡುಗಡೆ ಮಾಡಲಾಗುತ್ತದೆ. ಅನೇಕ ಮೈನವಿರೇಳಿಸುವ ವಿಷಯಗಳನ್ನು ಒಳಗೊಂಡಿರುವ ಈ ಹೊತ್ತಗೆಯಲ್ಲಿ ಭಾರತದ ಭಾಷಾನೀತಿಯ ಬಗ್ಗೆ ಚರ್ಚಿಸಲಾಗಿದೆ. ಕನ್ನಡದಲ್ಲಿ ಹಿಂದೆಂದೂ ಇರದ ಹೊಸ ವಿಷಯಗಳನ್ನು ಈ ಹೊತ್ತಗೆ ಒಳಗೊಂಡಿದೆ. ಬನವಾಸಿ ಬಳಗಕ್ಕಿದು ಮಹತ್ವದ ಕಾರ್ಯಕ್ರಮ. ನೀವು ನಮ್ಮೊಡನೆ ಇದ್ದರೆ ನಮಗೆ ಹೆಚ್ಚು ಖುಷಿ. ಬನ್ನಿ... ಕಾರ್ಯಕ್ರಮದ ವಿವರ ಇಂತಿದೆ: 


Related Posts with Thumbnails