- ಚೇತನ್ ಜೀರಾಳ
ಸುಮಾರು ೨೦ ವಿವಿಧ ಆಡಳಿತ ಕೇಂದ್ರಗಳಲ್ಲಿ
ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಕರ್ನಾಟಕವನ್ನಾಗಿ ಒಗ್ಗೂಡಿಸುವಲ್ಲಿ ನಮ್ಮ ಹಿರಿಯರು
ಪಟ್ಟಿರುವ ಶ್ರಮ ತುಂಬಾ ದೊಡ್ಡದು. ಅವರ ಶ್ರಮದ ಫಲವಾಗಿ ೧ನೇ ನವೆಂಬರ್ ೧೯೫೬ರಲ್ಲಿ ಕರ್ನಾಟಕ ರಾಜ್ಯದ
ಉದಯವಾಗಿತು. ಕನ್ನಡ ಮಾತನಾಡುವ ೫ ಪ್ರಾಂತ್ಯಗಳ ಒಗ್ಗೂಡಿಕೆಯಿಂದ ಕರ್ನಾಟಕ
ರಾಜ್ಯದ ಉದಯವಾಯಿತು. ಆ ಪ್ರದೇಶಗಳ ವಿವರಗಳು ಈ ಕೆಳಗಿನಂತಿವೆ:
. ಮೈಸೂರು ರಾಜ್ಯ: ಮೈಸೂರು,
ಮಂಡ್ಯ, ಬೆಂಗಳೂರು, ಕೋಲಾರ,
ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು
ಹಾಗೂ ಹಾಸನ ಜಿಲ್ಲೆಗಳು.
. ಬಾಂಬೆ - ಕರ್ನಾಟಕ:
ಧಾರವಾಡ, ಬೆಳಗಾವಿ, ಬಿಜಾಪುರ
ಹಾಗೂ ಉತ್ತರ ಕನ್ನಡ ಜಿಲ್ಲೆಗಳು
. ಹೈದ್ರಬಾದ್ - ಕರ್ನಾಟಕ:
ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಗಳು
. ಮದ್ರಾಸ್ - ಕರ್ನಾಟಕ:
ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ
ಗಮನಿಸಬೇಕಾದ ವಿಷಯವೆಂದರೆ ಹಿಂದಿನಿಂದಲೂ
ಕನ್ನಡ ರಾಜರ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯವು ಅಭಿವೃದ್ಧಿಯ ಪಥದಲ್ಲಿ ಮುಂದಿತ್ತು. ಹಿಂದಿನ ಮೈಸೂರು
ರಾಜ್ಯ ತನ್ನದೇ ಆದ ಬ್ಯಾಂಕಿಂಗ್ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ,
ರೈಲ್ವೆ ವ್ಯವಸ್ಥೆ ಹಾಗೂ ಸಾರ್ವಜನಿಕ ಉದ್ಯಮಗಳನ್ನು ಹೊಂದಿತ್ತು. ಇವುಗಳ ಜೊತೆಜೊತೆಗೆ ಹಿಂದಿನ ಮೈಸೂರು ರಾಜ್ಯವು ತನ್ನದೇ ಆದ ತೆರಿಗೆ ಸಂಗ್ರಹಣಾ ವ್ಯವಸ್ಥೆ
ಜೊತೆ ಮತ್ತು ನೀರಾವರಿ ಯೋಜನೆಗಳನ್ನು ಹೊಂದಿತ್ತು. ಇದಕ್ಕೆ ವಿರುದ್ಧ ಎನ್ನುವಂತೆ
ಬೇರೆ ಭಾಷೆಗಳ ಪ್ರಾಂತ್ಯಕ್ಕೆ ಸೇರಿ ಹೋಗಿದ್ದ ಉಳಿದ ಕನ್ನಡ ಮಾತನಾಡುವ ಪ್ರದೇಶಗಳು ಅಲ್ಲಿಯ ಆಡಳಿತದ
ಅಡಿಯಲ್ಲಿ ಅಷ್ಟಾಗಿ ಅಭಿವೃದ್ಧಿ ಕಾಣಲಿಲ್ಲ. ಇದಕ್ಕೆ ಇನ್ನೊಂದು ಮುಖ್ಯ
ಕಾರಣ ಈ ಪ್ರದೇಶಗಳು ಉಳಿದ ಪ್ರಾಂತ್ಯಗಳ ಗಡಿ ಭಾಗಗಳಾಗಿದ್ದವು.
ಹಾಗಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದ
ಕನ್ನಡ ಮಾತನಾಡುವ ಜನರು,
ಕರ್ನಾಟಕ ರಾಜ್ಯ ಒಗ್ಗೂಡಿದಾಗ, ಮುಂದುವರಿದ ಮೈಸೂರು ಪ್ರಾಂತ್ಯದ
ಜನರಿಗೆ ಸಿಗುತ್ತಿದ್ದ ಸವಲತ್ತುಗಳನ್ನು ಸಹಜವಾಗೇ ಬಯಸಿದರು. ಕಾಲಕ್ರಮೇಣ
ಯಾವಾಗ ಉತ್ತರ ಭಾಗದ ಜನರಿಗೆ ತಮಗೆ ಸವಲತ್ತುಗಳು ಸಿಗುತ್ತಿಲ್ಲ ಎಂದೆನಿಸಿದಾಗ ಪ್ರಾದೇಶಿಕ ಅಸಮಾನತೆಯ
ಕೂಗು ಕೇಳಿ ಬರಲು ಶುರುವಾಯಿತು. ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕ
ಭಾಗದ ಜನರಿಗೆ ಸರ್ಕಾರಗಳು ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿಲ್ಲ, ಬದಲಾಗಿ ಎಲ್ಲಾ ಅಭಿವೃದ್ಧಿ ಯೋಜನೆಗಳು ದಕ್ಷಿಣ ಕರ್ನಾಟಕದ ಜನರಿಗೆ ದೊರೆಯುತ್ತಿವೆ ಅನ್ನೋ
ದೂರು ಕೇಳಿ ಬರಲಾರಂಭಿಸಿತು.
ಆದರೆ ನಿಜಕ್ಕೂ ಈ ಮೇಲಿನ ಆಪಾದನೆಗಳು
ನಿಜವೇ? ಈ ವಾದದಲ್ಲಿ
ಹುರುಳೇನಾದರೂ ಇದೆಯೇ? ದಕ್ಷಿಣ ಕರ್ನಾಟಕ ಭಾಗ ನಿಜಕ್ಕೂ ಮುಂದುವರೆದಿದೆಯೇ?
ಕರ್ನಾಟಕ ಹಿಂದುಳಿದಿರುವ ಭಾಗಗಳ ಅಭಿವೃದ್ಧಿಗೆ ತಗೆದುಕೊಳ್ಳಬೇಕಾಗಿರುವ ಕ್ರಮಗಳಾವುವು?
ಅನ್ನುವುದರ ಬಗ್ಗೆ ಡಾ. ನಂಜುಂಡಪ್ಪ ವರದಿ ಬೆಳಕು ಚೆಲ್ಲುತ್ತದೆ.
ಅಭಿವೃದ್ಧಿ ಎನ್ನುವುದು ಒಂದು ನಿರಂತರ
ಕ್ರಿಯೆ. ಈ ಕ್ರಿಯೆಯಲ್ಲಿ
ಮನುಷ್ಯ ಉತ್ತಮವಾಗಿ ಬದುಕಲು ಬೇಕಾಗಿರುವ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ಅವಕಾಶವಿರಬೇಕು.
ಒಂದು ಅಭಿವೃದ್ಧಿ ಹೊಂದಿದ ಸಮಾಜದಲ್ಲಿ ಇರಬೇಕಾಗಿರುವ ಸವಲತ್ತುಗಳು ಈ ರೀತಿ ಇವೆ:
- ಮನುಷ್ಯನಿಗೆ
ಬೇಕಾಗಿರುವ ಮೂಲಭೂತ ಸೌಕರ್ಯಗಳು ಉದಾ: ಮನೆ, ನೀರು,
ವಿದ್ಯುತ್, ಶಾಲೆ, ವಾಹನ ಸೌಕರ್ಯ
ಇತ್ಯಾದಿ.
- ಪ್ರತಿಯೊಬ್ಬ
ಮನುಷ್ಯನಿಗೆ ಬೇಕಾಗಿರುವ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ.
- ಉತ್ಪಾದನಾ ಸಾಮರ್ಥ್ಯ
ಹೆಚ್ಚಿಸಿಕೊಳ್ಳಲು ಬೇಕಾಗಿರುವ ಹೊಸ ಕಲಿಕೆಯ ವ್ಯವಸ್ಥೆ
ಈ ಅಭಿವೃದ್ಧಿಯು ಸಾಮಾಜಿಕ - ಆರ್ಥಿಕ
- ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದಬೇಕಾದದ್ದು ಸರಿಯಾದ ದಾರಿ.
ಒಂದು ರಾಜ್ಯದ ಅಥವಾ ಪ್ರದೇಶದ ಅಭಿವೃದ್ಧಿಯುಲ್ಲಿ ಸರ್ಕಾರದ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಆದರೆ ಒಂದು ಪ್ರದೇಶ ಬೆಳವಣಿಗೆಯಲ್ಲಿ
ಹಿಂದುಳಿಯಲು ಮುಖ್ಯ ಕಾರಣ ಅಲ್ಲಿನ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಹಾಗೂ ಸಾಮರ್ಥ್ಯಕ್ಕೆ
ತಕ್ಕಂತೇ ಬಳಸದೇ ಇರುವುದು ಆಗಿದೆ. ನಮ್ಮ ರಾಜ್ಯದಲ್ಲಿ ಹೇರಳವಾಗಿ ನೈಸರ್ಗಿಕ ಸಂಪತ್ತಿದ್ದರೂ,
ಇದರ ಹಂಚಿಕೆ ಸಮಾನವಾಗಿ ಎಲ್ಲಾ ಜಿಲ್ಲೆಗಳಲ್ಲಿಲ್ಲ. ನಮ್ಮ
ರಾಜ್ಯದಲ್ಲಿ ಮಲೆನಾಡು, ಅರೆಮಲೆನಾಡು, ಬಯಲು ಸೀಮೆ,
ಮಳೆಯಾಶ್ರಿತ ಹಾಗೂ ಬರಪೀಡಿತ ಪ್ರದೇಶಗಳಿವೆ. ಇವುಗಳು ನೈಸರ್ಗಿಕವಾಗಿದ್ದರೂ,
ಇವುಗಳ ಪ್ರಭಾವ ಒಂದು ಪ್ರದೇಶದ ಬೆಳವಣಿಗೆಯ ಮೇಲೆ ಇರುತ್ತದೆ. ಅಭಿವೃದ್ದಿ ಹೊಂದದ ಪ್ರದೇಶಗಳನ್ನು ನಾವು ಹಿಂದುಳಿದ ಪ್ರದೇಶಗಳು ಎಂದು ಕರೆಯುತ್ತೇವೆ.
ಹಿಂದುಳಿದ ಪ್ರದೇಶಗಳ ಗುಣಲಕ್ಷಣಗಳು ಈ ಕೆಳಗಿನಂತಿವೆ:
- ಆ ಪ್ರದೇಶದ ಬೆಳವಣಿಗೆಗೆ
ಅವಕಾಶವಿರಬೇಕು
- ಕೆಲವು ಕಾರಣಗಳಿಂದಾಗಿ
ಆ ಪ್ರದೇಶದ ಬೆಳವಣಿಗೆ ಕುಂಠಿತವಾಗಿರಬೇಕು
- ಕೆಲವು ವಿಶೇಷ
ಯೋಜನೆಗಳಿಂದ ಬೆಳವಣಿಗೆಗೆ ಮಾರಕವಾಗಿರುವ ಅಂಶಗಳನ್ನು ಹೋಗಲಾಡಿಸಲು ಸಾಧ್ಯವಿರಬೇಕು
ಈ ಹಿನ್ನೆಲೆಯಲ್ಲಿ ನೋಡಿದಾಗ ಉತ್ತರ
ಕರ್ನಾಟಕ ಭಾಗವನ್ನು ಹಿಂದುಳಿದ ಪ್ರದೇಶಗಳಿಗೆ ಸೇರಿಸಬಹುದು. ಕರ್ನಾಟಕ ರಾಜ್ಯ ಸ್ಥಾಪನೆಯಾದ ನಂತರದ ಸಮಯದಲ್ಲಿ
ಉತ್ತರ ಕರ್ನಾಟಕ ಭಾಗಕ್ಕೆ ನೀರಾವರಿ ಯೋಜನೆಗಳು, ಮೂಲಭೂತ ವ್ಯವಸ್ಥೆಗಳು
ಹಾಗೂ ರಾಜ್ಯ ಮತ್ತು ಕೇಂದ್ರಸರ್ಕಾರದ ಕೆಲವು ನೀತಿಗಳಿಂದಾಗಿ ಈ ಭಾಗಕ್ಕೆ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ತರಬೇತಿ ಕೇಂದ್ರಗಳು ಬರದೇ ಅಭಿವೃದ್ಧಿಯಲ್ಲಿ
ಹಿಂದುಳಿಯಿತು.
ಡಾ. ಡಿ. ಎಂ ನಂಜುಂಡಪ್ಪ ಸಮಿತಿ (HPC
FRRI)
ಕರ್ನಾಟಕದಲ್ಲಿ ಪ್ರದೇಶಿಕ ಅಸಮಾನತೆಯ
ಕೂಗು ಕೇಳಿಬಂದಾಗಲೆಲ್ಲಾ ಸರ್ಕಾರಗಳು ಸಮಿತಿಗಳನ್ನು ರಚಿಸುತ್ತಾ ಬಂದಿವೆ. ಇದು ೧೯೫೪ ರಿಂದ
ಮೊದಲ್ಗೊಂಡು ಇತ್ತೀಚಿನ ೨೦೦೦ ಇಸವಿ ವರೆಗೂ ನಡೆದುಕೊಂಡು ಬಂದಿದೆ. ನಂಜುಂಡಪ್ಪ
ಸಮಿತಿ ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚೆ ಮೂರಕ್ಕಿಂತ ಹೆಚ್ಚು ಸಮಿತಿಗಳನ್ನು ಪ್ರಾದೇಶಿಕ ಅಸಮಾನತೆ
ಅರಿಯಲು ಹಾಗೂ ಅದಕ್ಕೆ ಪರಿಹಾರ ಸೂಚಿಸಲು ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ
ಈ ವರದಿಗಳಿಂದ ಕರ್ನಾಟಕಕ್ಕೆ ಹೆಚ್ಚೇನು ಪ್ರಯೋಜನವಾಗಲಿಲ್ಲ. ಏಪ್ರಿಲ್ ೨೦೦೦ರಲ್ಲಿ
ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣಾರವರು
ಕರ್ನಾಟಕದಲ್ಲಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಹೈ ಪವರ್ ಕಮಿಟಿಯೊಂದನ್ನು ರಚಿಸಿತು.
ಈ ಸಮಿತಿಯ ಮುಖ್ಯ ಉದ್ದೇಶ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು
ಅಭ್ಯಾಸ ಮಾಡಿ ಅವುಗಳಿಗೆ ಪರಿಹಾರ ಸೂಚಿಸುವುದು ಆಗಿತ್ತು. ಈ ಸಮಿತಿಗೆ ಮುಖ್ಯಸ್ಥರನ್ನಾಗಿ
ಖ್ಯಾತ ಅರ್ಥಶಾಸ್ತ್ರಜ್ಞ, ರಾಜ್ಯದ ಯೋಜನಾ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದ
ಡಾ. ಡಿ. ಎಂ. ನಂಜುಂಡಪ್ಪ
ಅವರನ್ನು ನೇಮಿಸಲಾಯಿತು. ಇವರ ಅಡಿಯಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು
ಸದಸ್ಯರನ್ನಾಗಿ ನೇಮಿಸಲಾಯಿತು. ೧೬ನೇ ನವೆಂಬರ್ ೨೦೦೦ರಲ್ಲಿ ಸಮಿತಿಯು ತನ್ನ
ಕಾರ್ಯಾರಂಭ ಮಾಡಿತು.
ನಂಜುಂಡಪ್ಪ ಸಮಿತಿಯು ಈ ಹಿಂದೆ ರಾಷ್ಟ್ರ
ಮಟ್ಟದಲ್ಲಿ ಹಾಗೂ ಇತರೇ ರಾಜ್ಯಗಳಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಮಾಡಿರುವ ಸಮಿತಿಗಳು ಹಾಗೂ
ಅವರ ವರದಿಗಳನ್ನು ಅಭ್ಯಾಸ ಮಾಡಿತು. ಇದರಲ್ಲಿ ಕೇಂದ್ರ ಯೋಜನಾ ಆಯೋಗದ ವರದಿ, ರಾಜ್ಯ ಯೋಜನಾ ಆಯೋಗದ ವರದಿ, ಪಾಂಡೇ ಸಮಿತಿಯ ವರದಿ, ಚಕ್ರವರ್ತಿ ಸಮಿತಿಯ ವರದಿ ಹಾಗೂ ದಾಂಡೇಕರ್ ಸಮಿತಿಯ ವರದಿಗಳನ್ನು ಅಭ್ಯಾಸ ಮಾಡಿತು.
ಇಲ್ಲಿ ಸಮಿತಿಗೆ ಕಂಡು ಬಂದ ಅಂಶಗಳೆಂದರೆ ಎಲ್ಲಾ ಸಮಿತಿಗಳು ಬೇರೆ ಬೇರೆಯಾದ ಮಾನದಂಡಗಳ
ಮೇಲೆ ವರದಿಯನ್ನು ತಯಾರಿಸಿದ್ದವು ಹಾಗೂ ಈ ಮಾನದಂಡಗಳು ಎಲ್ಲಾ ಅಂಶಗಳನ್ನು ಒಳಗೊಂಡಿರಲಿಲ್ಲ.
ಜಿಲ್ಲೆಗಳನ್ನ್ನು ಘಟಕಗಳನ್ನಾಗಿಸಿ ಇವುಗಳು ವರದಿ ನೀಡಿದ್ದವು. ಒಂದು ಜಿಲ್ಲೆಯ ಒಳಗಿನ ಭಿನ್ನತೆ, ಅನನ್ಯತೆಗಳನ್ನು ಲೆಕ್ಕಕ್ಕೆ
ತೆಗೆದು ಕೊಳ್ಮ್ಳವುದಕ್ಕಿಂತ, ಅದಕ್ಕಿಂತಲೂ ಸಣ್ಣ ಘಟಕವಾದ ತಾಲೂಕುಗಳನ್ನು
ನಚಿಜುಂಡಪ್ಪ ಸಮಿತಿ ಲೆಕ್ಕಕ್ಕೆ ತೆಗೆದುಕೊಂಡಿತು ಮತ್ತು ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ರೂಪಿಸುವಲ್ಲಿ
ನಿರತವಾಯಿತು. ಸಮಿತಿಯು ಸತತವಾಗಿ ಒಂದೂವರೆ ವರ್ಷಗಳ ಕಾಲ ಅಧ್ಯಯನ ಮಾಡಿ
ತನ್ನ ವರದಿಯನ್ನು ಸರ್ಕಾರಕ್ಕೆ ೨೦೦೨ರಲ್ಲಿ ಸಲ್ಲಿಸಿತು.
ನಂಜುಂಡಪ್ಪ ಸಮಿತಿ ಸಲ್ಲಿಸಿದ ವರದಿಯಲ್ಲಿ
ಬಹು ಅಚ್ಚರಿಯ ವಿಷಯಗಳು ಕಂಡುಬಂದವು. ಈ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಸ್ಪಷ್ಟವಾಗಿ ಕಂಡು ಬಂದ ಅಂಶವೆಂದರೆ
ಕೇವಲ ಉತ್ತರ ಭಾಗದ ಕರ್ನಾಟಕ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿಲ್ಲಾ. ಬದಲಾಗಿ ದಕ್ಷಿಣ ಕರ್ನಾಟಕದ ಅನೇಕ ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದವು.
ಹಾಗೆಯೇ ಹಲವಾರು ವಿಷಯಗಳಲ್ಲಿ ಉತ್ತರ ಕರ್ನಾಟಕದ ಭಾಗಗಳು ದಕ್ಷಿಣ ಕರ್ನಾಟಕದ ಅನೇಕ
ಭಾಗಗಳನ್ನು ಹಿಂದಿಕ್ಕಿದ್ದು ಕಾಣಸಿಗುತ್ತದೆ.
ಸಮಿತಿಯ ಅಧ್ಯಯನದಿಂದ ತಿಳಿದು
ಬಂದ ಸಂಗತಿಗಳು:
- ಕರ್ನಾಟಕದ ತಲಾದಾಯ
೧೯೭೦-೭೧ ರಲ್ಲಿ ೬೯೫ ರೂ ನಷ್ಟಿತ್ತು ಹಾಗೂ ೧೯೯೯-೨೦೦೦ರದ ಹೊತ್ತಿಗೆ ೧೮,೬೫೧ ರಷ್ಟು ಮುಟ್ಟಿತ್ತು. ಈ ಸಮಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು
ತನ್ನ ತಲಾದಾಯವನ್ನು ಹೆಚ್ಚಿಸಿಕೊಂಡಿವೆ ಅನ್ನುವುದು ಗಮನಾರ್ಹ ಸಂಗತಿ. ಗಮನಿಸಬೇಕಾದ
ಅಂಶವೆಂದರೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳು ರಾಜ್ಯದ ಸರಾಸರಿ ತಲಾದಾಯಕ್ಕಿಂತ ಕಡಿಮೆ ತಲಾದಾಯ
ಹೊಂದಿದ್ದರೆ, ದಕ್ಷಿಣ ಕರ್ನಾಟಕದ ೬ ಜಿಲ್ಲೆಗಳು ಕಡಿಮೆ ತಲಾದಾಯ ಹೊಂದಿದ್ದವು.
- ರಾಜ್ಯದ ೭೮ ತಾಲೂಕುಗಳು
ರಾಜ್ಯದ ಸರಾಸರಿ ಬಡತನ ರೇಖೆಗಿಂತ ಕೆಳಗಿವೆ ಇದರಲ್ಲಿ ೪೮ (೬೨%)
ತಾಲೂಕುಗಳು ಉತ್ತರ ಕರ್ನಾಟಕಕ್ಕೆ ಸೇರಿದ್ದರೆ ೩೦ ತಾಲೂಕುಗಳು (೩೮%) ದಕ್ಷಿಣ ಕರ್ನಾಟಕಕ್ಕೆ ಸೇರಿದ್ದವು.
- ೧೯೯೧ರಲ್ಲಿ ೦.೪೭ ರಷ್ಟಿದ್ದ ಮಾನವ ಬೆಳವಣಿಗೆ ಸೂಚಿ ೧೯೯೮ರ ಹೊತ್ತಿಗೆ ೦.೬೩
ಮುಟ್ಟಿತ್ತು. ಆದರೆ ಉತ್ತರ ಕರ್ನಾಟಕದ ೫ ಹಾಗೂ ದಕ್ಷಿಣ ಕರ್ನಾಟಕದ ೫ ಜಿಲ್ಲೆಗಳ
ಬೆಳವಣಿಗೆ ರಾಜ್ಯದ ಸರಾಸರಿಗಿಂತ ಕಡಿಮೆಯಿತ್ತು.
- ಸಾಕ್ಷರತಾ ಪ್ರಮಾಣ:
ಕರ್ನಾಟಕ ಸಾಕ್ಷರತಾ ಪ್ರಮಾಣ ೧೯೬೧ ರಲ್ಲಿ ಶೇ ೨೯.೮೦ ರಿಂದ
೨೦೦೧ ರಲ್ಲಿ ಶೇ ೬೭.೦೪% ತಲುಪಿತ್ತು.
ಆದರೆ ದಕ್ಷಿಣ ಕರ್ನಾಟಕದ ೩ ಜಿಲ್ಲೆಗಳಲ್ಲಿ (ಕೋಲಾರ,
ಮಂಡ್ಯ ಹಾಗೂ ಮೈಸೂರು) ಹಾಗೂ ಉತ್ತರ ಕರ್ನಾಟಕದ ೬ ಜಿಲ್ಲೆಗಳಲ್ಲಿ
(ಬೆಳಗಾವಿ, ಬಿಜಾಪುರ, ಬಳ್ಳಾರಿ,
ಬೀದರ್, ಗುಲ್ಬರ್ಗಾ ಹಾಗೂ ರಾಯಚೂರು) ಸಾಕ್ಷರತಾ ಪ್ರಮಾಣ ರಾಜ್ಯದ ಸರಾಸರಿಗಿಂತ ಕಡಿಮೆಯಿತ್ತು.
- ಒಂದು ಲಕ್ಷ ಜನಸಂಖ್ಯೆಗೆ
ಸರಾಸರಿ ಪ್ರಾಥಮಿಕ ಶಾಲೆಗಳ ಸಂಖೆ: ೧೯೫೬ರಲ್ಲಿ ೯೬ ಶಾಲಗಳನ್ನು ಹೊಂದಿದ್ದರೆ
೨೦೦೦ನೇ ಇಸವಿಯ ಹೊತ್ತಿಗೆ ಈ ಶಾಲೆಗಳ ಸಂಖ್ಯೆ ೯೪ ಕ್ಕೆ ಇಳಿದಿತ್ತು. ಇದಕ್ಕೆ
ಮುಖ್ಯ ಕಾರಣ ಉತ್ತರ ಕರ್ನಾಟಕದ ಅನೇಕ ಶಾಲೆಗಳು ಬಾಗಿಲು ಮುಚ್ಚಿದವು
- ಒಂದು ಲಕ್ಷ ಜನಸಂಖ್ಯೆಗೆ
ಆಸ್ಪತ್ರೆಯಲ್ಲಿ ಸರಾಸರಿ ಹಾಸಿಗೆಗಳ ಸಂಖ್ಯೆ: ೧೯೫೮-೫೯ ರಲ್ಲಿ ೫೪ ಇದ್ದವು, ೨೦೦೧ನೇ ಇಸವಿಯ ಹೊತ್ತಿಗೆ ಈ ಸಂಖ್ಯೆ
೭೫ಕ್ಕೆ ಮುಟ್ಟಿತ್ತು. ಈ ರಾಜ್ಯದ ಸರಾಸರಿಯ ಲೆಕ್ಕದಲ್ಲಿ ನೋಡಿದಾಗ ದಕ್ಷಿಣ
ಕರ್ನಾಟಕದ ಭಾಗದಲ್ಲಿ ಸರಾಸರಿ ೮೫ ಹಾಸಿಗೆಗಳಿದ್ದರೆ, ಉತ್ತರ ಕರ್ನಾಟಕದ
ಭಾಗದಲ್ಲಿ ೭೫ ಹಾಸಿಗೆಗಳಿದ್ದವು
- ವ್ಯವಸಾಯಕ್ಕೆ
ಒಳಪಡಿಸಿದ ಭೂಮಿ ೧೯೫೭-೫೮ ರಲ್ಲಿ ೭.೬ ಲಕ್ಷ ಹೆಕ್ಟೇರ್
ಇತ್ತು ಹಾಗೂ ೨೦೦೧ರ ಹೊತ್ತಿಗೆ ೨೫.೫ ಲಕ್ಷ ಹೆಕ್ಟೇರ್ ಆಗಿತ್ತು.
ಇದರಲ್ಲಿ ದಕ್ಷಿಣ ಕರ್ನಾಟಕದ ಪ್ರತಿಶತ ಬೆಳವಣಿಗೆ ೨೧ ರಷ್ಟು ಹಾಗೂ ಉತ್ತರ ಕರ್ನಾಟಕದ
ಪ್ರತಿಶತ ಬೆಳವಣಿಗೆ ೭೧ ರಷ್ಟು.
- ೨/೩ ರಷ್ಟು ಕೈಗಾರಿಕೆಗಳು ದಕ್ಷಿಣ ಕರ್ನಾಟಕದಲ್ಲಿವೆ. ಗಮನಿಸಬೇಕಾದ
ಅಂಶಗಳೆಂದರೆ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳು
ದಕ್ಷಿಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಿಗಿಂತ ಕೈಗಾರಿಕಾ ಅಭಿವೃದ್ಧಿಯಲ್ಲಿ ಮುಂದಿವೆ. ಇಲ್ಲಿ ನಾವುಗಳು ಈ ತುಲನೆ ಮಾಡುವಾಗ ಬೆಂಗಳೂರು ನಗರವನ್ನು ಹೊರಗಿಟ್ಟು ನೋಡುವುದು ಸಮಂಜಸವಾಗುತ್ತದೆ.
- ರಾಜ್ಯದ ರಸ್ತೆಯ
ಸರಾಸರಿ ಉದ್ದ: ೨.೩ ಕಿಮಿ (೧೯೫೯) ರಿಂದ ೭೦ ಕಿಮಿ ಪ್ರತಿ ೧೦೦ ಚ. ಕಿಮಿ ಪ್ರದೇಶಕ್ಕೆ. ರಾಜ್ಯದ ಸರಾಸರಿಗಿಂತ ಕೆಳಗಿರುವ ಜಿಲ್ಲೆಗಳೆಂದರೆ
ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ (ದಕ್ಷಿಣ ಕರ್ನಾಟಕ). ಬೆಳಗಾವಿ, ಬಳ್ಳಾರಿ, ಬೀದರ್,
ಗುಲ್ಬರ್ಗಾ, ಬಿಜಾಪುರ, ರಾಯಚೂರು
ಹಾಗೂ ಉತ್ತರ ಕನ್ನಡ (ಉತ್ತರ ಕರ್ನಾಟಕ)
- ಒಂದು ಬ್ಯಾಂಕ್
ನಿಂದ ಸೇವೆ ಪಡೆಯುತ್ತಿದ್ದ ಸರಾಸರಿ ಜನಸಂಖ್ಯೆ: ೧೬೦೦೦ (೧೯೭೫) ರಿಂದ ೧೧,೦೦೦ (೧೯೯೬). ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ. ದಕ್ಷಿಣ ಕರ್ನಾಟಕ - ೧೦,೦೦೦ ವಾದರೆ
ಉತ್ತರ ಕರ್ನಾಟಕದಲ್ಲಿ ೧೩,೦೦೦
- ಸಾಕ್ಷರತೆಯ ಪ್ರಮಾಣದಲ್ಲಿ
ಉತ್ತರ ಕರ್ನಾಟಕದ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಮುಂದಿದ್ದರೆ, ದಕ್ಷಿಣ ಕರ್ನಾಟಕ ಭಾಗದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು ಹಿಂದುಳಿದಿವೆ
- ನೀರಾವರಿ ಕ್ಷೇತ್ರದಲ್ಲಿ
ಉತ್ತರ ಕರ್ನಾಟಕದ ಬೆಳಗಾವಿ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳು ದಕ್ಷಿಣ ಕರ್ನಾಟಕದ ಅನೇಕ
ಜಿಲ್ಲೆಗಳನ್ನು ಹಿಂದಿಕ್ಕಿವೆ.
- ಕೈಗಾರಿಕಾ ಕ್ಷೇತ್ರದಲ್ಲಿ
ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳು ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳನ್ನು ಹಿಂದಿಕ್ಕಿವೆ
- ಆರೋಗ್ಯ ಕ್ಷೇತ್ರದಲ್ಲಿ
ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಗಣನೀಯ ಪ್ರಮಾಣದಲ್ಲಿ ಸುಧಾರಿಸಿದರೆ ತೂಮಕೂರು ಜಿಲ್ಲೆ
ಹಿಂದುಳಿದಿದೆ.
- ರಸ್ತೆ ಅಭಿವೃದ್ಧಿಯಲ್ಲಿ
ಧಾರವಾಡ ಜಿಲ್ಲೆ ಮುಂದಿದ್ದರೆ, ದಕ್ಷಿಣ ಕರ್ನಾಟಕಕ್ಕೆ ಸೇರುವ ಚಿತ್ರದುರ್ಗ
ಜಿಲ್ಲೆ ಹಿಂದುಳಿದಿದೆ.
ಈ ಮೇಲಿನ ಅಂಕೆ ಸಂಖ್ಯೆಗಳಿಂದ ತಿಳಿದು
ಬರುವ ಅಂಶಗಳೆಂದರೆ ಕೇವಲ ಉತ್ತರ ಕರ್ನಾಟದ ಭಾಗಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ ಅನ್ನುವ ವಾದದಲ್ಲಿ
ಯಾವುದೇ ಹುರುಳಿಲ್ಲ,
ಬದಲಾಗಿ ರಾಜ್ಯದ ಎರಡೂ ಭಾಗಗಳಲ್ಲಿ ಅಭಿವೃದ್ಧಿ ಹೊಂದಬೇಕಾಗಿರುವ ತಾಲೂಕುಗಳ ಸಂಖ್ಯೆ
ದೊಡ್ಡದಿದೆ.
ನಂಜುಂಡಪ್ಪ ಸಮಿತಿಯು ತಾಲೂಕು ಮಟ್ಟದಲ್ಲಿ
ಅಭಿವೃದ್ಧಿಯನ್ನು ತಿಳಿಯಲು ಸುಮಾರು ೩೫ ವಿವಿಧ ಅಂಶಗಳನ್ನು ಪಟ್ಟಿಮಾಡಿಕೊಂಡಿತು. ಈ ಎಲ್ಲಾ ಅಂಶಗಳ ಮೇಲೆ ಸಮಿತಿಯು Comprehensive
Composite Development Index (CCDI) ಅನ್ನು ಸಿದ್ಧಪಡಿಸಿತು. ಈ ಅಂಶಗಳ ಸಹಾಯದಿಂದ
ಅಧ್ಯಾಯನ ಮಾಡಿದಾಗ ಕಂಡುಬಂದಿದ್ದೇನೆಂದರೆ ಕರ್ನಾಟಕದಲ್ಲಿ ೧೧೪ ತಾಲೂಕುಗಳು ಹಿಂದುಳಿದಿವೆ
ಅತಿ ಹಿಂದುಳಿದ ತಾಲೂಕುಗಳು - ೩೯
ಹೆಚ್ಚು ಹಿಂದುಳಿದ ತಾಲೂಕುಗಳೂ - ೪೦
ವಿಭಾಗವಾರು ಹಿಂದುಳಿದ ತಾಲೂಕುಗಳ
ಪಟ್ಟಿ ಕೆಳಗಿನಂತಿದೆ:
ಈ ಮೇಲಿನ ಅಂಶಗಳಿಂದ ತಿಳಿದು ಬರುವುದು
ಏನೆಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ೫೯ ಹಿಂದುಳಿದ ತಾಲೂಕುಗಳಿದ್ದರೆ, ೫೫ ಹಿಂದುಳಿದ
ತಾಲೂಕುಗಳು ದಕ್ಷಿಣ ಕರ್ನಾಟಕದಲ್ಲಿ ಇವೆ.
ಕರ್ನಾಟಕದ ಎರಡೂ ಭಾಗದಲ್ಲಿರುವ ಅಸಮಾನತೆಯನ್ನು
ಹೋಗಲಾಡಿಸಲು ನಂಜುಂಡಪ್ಪ ಸಮಿತಿಯು ೮ ವರ್ಷಗಳ ವಿಶೇಷ ಯೋಜನೆಯೊಂದನ್ನು ತಯಾರಿಸಿತು. ಇದರ ಪ್ರಕಾರ
ಸರ್ಕಾರ ಒಟ್ಟು ೩೧,೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕರ್ನಾಟಕದ ಸಮಗ್ರ
ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿತು. ಇದರ ಜೊತೆಗೆ ಯಾವ ಕ್ಷೇತ್ರದಲ್ಲಿ
ಎಷ್ಟು ದುಡ್ಡು ಹೂಡಬೇಕು ಎಂದು ನೀಲನಕ್ಷೆಯನ್ನು ತಯಾರಿಸಿ ಕೊಟ್ಟಿತು. ಸಮಿತಿಯ
ಪ್ರಕಾರ ಸರ್ಕಾರ ಈ ಕೆಳಗೆ ಹೇಳಿರುವ ಕ್ಷೇತ್ರದಲ್ಲಿ ಹಣ ಹೂಡಬೇಕು ಎಂದು ಸಲಹೇ ನೀಡಿತು: ಕಾರ್ಯಪಡೆ (workforce), ಕೃಷಿ, ನೀರಾವರಿ, ಪುಷ್ಪೋದ್ಯಮ, ರೇಷ್ಮೆ ಉದ್ಯಮ ಹಾಗೂ ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ, ಮಾನವ ಸಂಪನ್ಮೂಲ ಬೆಳವಣಿಗೆ,
ಆರೋಗ್ಯ ಕ್ಷೇತ್ರ, ಕಲಿಕೆ, ಗ್ರಾಮೀಣ
ನೀರು ಸರಬರಾಜು ಹಾಗೂ ಒಳಚರಂಡಿ, ನಗರ ನೀರು ಸರಬರಾಜು ಹಾಗೂ ಒಳಚರಂಡಿ,
ನಗರಾಭಿವೃದ್ಧಿ ಹಾಗೂ ಸ್ಲಂಗಳು, ವಾಣಿಜ್ಯ ಬ್ಯಾಂಕ್,
ಸಹಕಾರಿ ಸಂಘಗಳು, ಭಾರತ ಮಟ್ಟದ ಹಾಗೂ ರಾಜ್ಯ ಮಟ್ಟದ ಹಣಕಾಸು
ಅಧ್ಯಯನ ಕೇಂದ್ರಗಳ ಸ್ಥಾಪನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ಸೇವೆಗಳು, ಪ್ರವಾಸೋದ್ಯಮ, ಪ್ರಾದೇಶಿಕ ಮಂಡಳಿಗಳು, ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ವಿಮಾನ ನಿಲ್ದಾಣಗಳೂ, ಮಹಿಳಾ
ಅಭಿವೃದ್ಧಿ.
ಆದರೆ ವರದಿ ಸಲ್ಲಿಕೆಯ ನಂತರ ಬಂದ
ಯಾವ ಸರ್ಕಾರಗಳು, ವರದಿಯನ್ನು
ಗಂಭೀರವಾಗಿ ಪರಿಗಣಿಸಲಿಲ್ಲ. ಕಾಟಾಚಾರಕ್ಕೆ ಎಂಬಂತೆ ನಂಜುಂಡಪ್ಪ ವರದಿ ಅನುಷ್ಠಾನ
ಮಂಡಳಿಯೊಂದನ್ನು ಮಾಡಲಾಗಿದೆ. ಆದರೆ ಈ ಮಂಡಳಿಯಿಂದ ಆಗಬೇಕಾದ ಕೆಲಸಗಳು ಆಗಿಲ್ಲ
ಅನ್ನೋದು ಸತ್ಯ. ಒಂದು ಪ್ರದೇಶ ಹಿಂದುಳಿಯಲು ಅಲ್ಲಿನ ಜನಪ್ರತಿನಿಧಿಗಳೇ
ನೇರ ಕಾರಣ, ತಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ, ದೂರದೃಷ್ಠಿಯಿರದ ರಾಜಕಾರಣದಿಂದ ಇಂದು ಹಿಂದುಳಿದ ಪ್ರದೇಶಗಳ ಜನರು ಕಷ್ಟಪಡುವಂತಾಗಿದೆ.
ವರದಿ ಸಲ್ಲಿಸಿ ೯ ವರ್ಷಗಳಾದರೂ ಸರ್ಕಾರ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರುವಲ್ಲಿ
ವಿಫಲವಾಗಿದೆ. ಈ ಕೂಡಲೇ ಸರ್ಕಾರ ಆದ್ಯತೆಯ ಮೇರೆಗೆ ನಂಜುಂಡಪ್ಪ ವರದಿಯನ್ನು
ಪುನರ್ ವಿಮರ್ಶಿಸಿ ಯೋಜನೆಯ ಅನುಷ್ಠಾನಕ್ಕೆ ಬೇಕಾಗಿರುವ ಹೆಚ್ಚಿನ ಹಣವನ್ನ ಹಾಗೂ ಸಂಪನ್ಮೂಲಗಳನ್ನು
ಒದಗಿಸಿ ನಾಡನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಕೆಲಸ ಮಾಡಬೇಕು.