ಭಾರತೀಯ ಸ್ಪರ್ಧಾ ಆಯೋಗ (CCI)ದ ತೀರ್ಪು: ಮುಂದೇನು?

"ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗಿರೋದು ಕನ್ನಡ ಚಿತ್ರರಂಗವೇ! ತನ್ನ ಸ್ವಾರ್ಥದಿಂದಾಗಿ, ತನ್ನ ಸದ್ಯದ ಲಾಭಕ್ಕಾಗಿ ಇಡೀ ಚಿತ್ರರಂಗದ ಜೊತೆಜೊತೆಗೆ ಕನ್ನಡನಾಡನ್ನೇ ಬಲಿಕೊಡಲು ಮುಂದಾಗಿರೋ ಚಿತ್ರರಂಗದ ಕೆಲವು ಜನರಿಂದಾಗಿಯೇ ಈ ದುಃಸ್ಥಿತಿ ಬಂದಿದೆ!!"

CCI ಅಂದರೆ, ಭಾರತೀಯ ಸ್ಪರ್ಧಾ ಆಯೋಗವು ಮೊನ್ನೆ ಮೊನ್ನೆ "ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ಏಳು ವಾರಗಳ ಅಂತರ, ಇಂತಿಷ್ಟೇ ಪ್ರತಿಗಳ ಮಿತಿ ಹೇರಿರುವುದು ತಪ್ಪು, ಇನ್ಮುಂದೆ ಇವೆಲ್ಲಾ ನಡೆಯಲ್ಲಾ, ಈಗ ನೀವು ದಂಡ ಕಟ್ಟಿ" ಎಂದು ನೀಡಿದ ತೀರ್ಪನ್ನು ನೋಡಿದಾಗ ಇಂಥದ್ದೊಂದು ಭಾವನೆ ನಿಮ್ಮಲ್ಲೂ ಮೂಡಿದ್ದರೆ ಆಶ್ಚರ್ಯವಿಲ್ಲ. ಆದರೆ ಇಂಥಾ ತೀರ್ಪಿಗೆ ಕನ್ನಡ ಚಿತ್ರರಂಗದ ಹುಂಬತನದ, ಅವೈಜ್ಞಾನಿಕವಾದ, ಅಸಂವಿಧಾನಿಕವಾದ ನಿಲುವುಗಳು ಹೇಗೆ ಕಾರಣವೋ, ಹಾಗೇ ಭಾರತದ ಹುಳುಕಿನ ಭಾಷಾನೀತಿಯೂ, ಈ ನೀತಿಯ ಹುನ್ನಾರವನ್ನು ಅರಿತೋ ಅರಿಯದೆಯೋ ತೆಪ್ಪಗಿರುವ ಕರ್ನಾಟಕ ರಾಜ್ಯಸರ್ಕಾರವೂ ಕಾರಣ ಎಂದರೆ ತಪ್ಪಾಗಲಾರದು. ಹೇಗೆ ಅಂತಾ ಸ್ವಲ್ಪ ನೋಡೋಣ ಬನ್ನಿ!
ಸಮಸ್ಯೆ ಏನು?


ಕರ್ನಾಟಕದಲ್ಲಿ ಸುಮಾರು ೬೦೦ ಚಿತ್ರಮಂದಿರಗಳಿವೆ. ಈಚಿನ ದಿನಗಳಲ್ಲಿ ಯಾವುದೇ ಚಿತ್ರ ಬಿಡುಗಡೆಯಾದರೆ ಒಟ್ಟೊಟ್ಟಿಗೆ ಹೆಚ್ಚೆಚ್ಚು ತೆರೆಗಳಲ್ಲಿ ಬಿಡುಗಡೆ ಮಾಡುವ ಪದ್ದತಿ ಶುರುವಾಗಿದೆ. ಪರಭಾಷಾ ಚಿತ್ರಗಳು ಬಿಡುಗಡೆಯಾಗಬೇಕಾದರೆ ಒಟ್ಟಿಗೆ ಇನ್ನೂರು ಮುನ್ನೂರು ತೆರೆಗಳನ್ನು ಬಳಸಲು ಶುರುಮಾಡಿದರೆ ಆಗ ಕನ್ನಡ ಚಿತ್ರಗಳಿಗೆ ತೆರೆಗಳೇ ಸಿಗುವುದಿಲ್ಲ ಎನ್ನುವುದು ಸಮಸ್ಯೆ. ಹಬ್ಬಗಳ ಸಮಯದಲ್ಲಂತೂ ಹೆಚ್ಚು ಜನ ಸಿನಿಮಾ ನೋಡ್ತಾರೆ ಎಂದು ಎಲ್ಲರೂ ಒಟ್ಟೊಟ್ಟಿಗೆ ಬಿಡುಗಡೆ ಮಾಡಲು ಮುಂದಾಗುತ್ತಾರೆ. ಹಾಗೆ ಕನ್ನಡ ಸಿನಿಮಾಗಳೇ ಸಾಲುಸಾಲಾಗಿ ನಿಂತಿರುವಾಗ ಹಿಂದೀದೋ, ಮತ್ತೊಂದು ಭಾಷೇದೋ ಚಿತ್ರಗಳು ಮುನ್ನೂರು ನಾನ್ನೂರು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡರೆ ಏನು ಮಾಡೋದು? ಹೌದು! ಬಿಡುಗಡೆ ಎಷ್ಟ್ರಲ್ಲೇ ಆಗಲಿ, ಚೆನ್ನಾಗಿಲ್ಲದಿದ್ದರೆ ಒಂದೇ ವಾರಕ್ಕೆ ಎತ್ತಂಗಡಿಯೂ ಆಗಲಿ.. ಆದರೆ ಹಬ್ಬದಂಥಾ ಪ್ರಮುಖ ಸಂದರ್ಭದಲ್ಲಿ ನಮ್ಮ ಚಿತ್ರಗಳಿಗೆ ಟಾಕೀಸು ಸಿಗದೆ ಹೋಗುತ್ತದಲ್ಲಾ ಇದಕ್ಕೇನು ಮಾಡೋದು? ಇಂತಹ ಕಾರಣದಿಂದಲೇ ಪರಭಾಷೆಯ ಚಿತ್ರಗಳಿಗೆ ಚಿತ್ರಮಂದಿರಗಳ ಸಂಖ್ಯೇನ ಮಿತಿಗೊಳಿಸೋ ಪ್ರಯತ್ನಾನ ಚಿತ್ರರಂಗದವರು ಮಾಡಿದ್ದು ಅನ್ನಿಸುತ್ತದೆ. ಇದೇ ಕೆಲಸಾನ ರಾಜ್ಯಸರ್ಕಾರವೇ ಮಾಡಿದ್ದಲ್ಲಿ ಸಮಸ್ಯೇನೇ ಇರ್ತಿರಲಿಲ್ಲವೇನೋ? ಆಗ ಕೇಸು ಸರ್ಕಾರದ ಮೇಲೆ ಬೀಳ್ತಿತ್ತು ಅನ್ನೋದಾದರೆ ಸರ್ಕಾರ ತನ್ನ ಬತ್ತಳಿಕೆಯಲ್ಲಿ ಇರೋ ನೂರಾರು ಅಸ್ತ್ರಗಳನ್ನು ಬಳಸಿ ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿತ್ತು!

ಸ್ಪರ್ಧಾ ಆಯೋಗದ ತೀರ್ಪು

ಕೆಲವರ್ಷಗಳ ಹಿಂದೆ ಕರ್ನಾಟಕದಲ್ಲಿ ರಿಲೆಯನ್ಸ್ ಸಂಸ್ಥೆಯವರು ಕೈಟ್ ಎನ್ನುವ ಹಿಂದೀ ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಹಾಕಿರುವ ನಿಯಮಗಳನ್ನು ಲೆಕ್ಕಕ್ಕಿಡದೆ ತಮಗೆಷ್ಟು ಕಡೆ ಆಗುತ್ತೋ ಅಷ್ಟೂ ಕಡೆ ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ಆಗ ಕನ್ನಡ ಚಿತ್ರರಂಗದೋರು ಭಾರೀ ಪ್ರತಿಭಟನೆ ಮಾಡಿದ್ದರಿಂದಾಗಿ ಅದಕ್ಕೆ ಮಣಿದವರಂತೆ ಮಾಡಿ ಹಿಂದಡಿಯಿಟ್ಟರು. ನಂತರ ಭಾರತೀಯ ಸ್ಪರ್ಧಾ ಆಯೋಗ (CCI)ದ ಮುಂದೆ ಒಂದು ದೂರು ಕೊಟ್ಟು ‘ಹೀಗೆ ಕರ್ನಾಟಕದ ಚಿತ್ರರಂಗದವರು ಸಂಘ ಮಾಡಿಕೊಂಡು ಅಸಂವಿಧಾನಿಕ ನಿಯಮಗಳನ್ನು ಹೇರಿ ನಮ್ಮನ್ನು ಸ್ಪರ್ಧೆ ಮಾಡದಂತೆ ತಡೆದು ನಷ್ಟಕ್ಕೆ ಕಾರಣರಾಗಿದ್ದಾರೆ’ ಎಂದರು. ಈ ದೂರನ್ನು ಸಲ್ಲಿಸಿದವರು ಬರೀ ರಿಲಯನ್ಸ್‍ನವರು ಮಾತ್ರವಲ್ಲ. ಇವರೊಟ್ಟಿಗೆ ನಂತರದಲ್ಲಿ ಯುಟಿವಿ  ಸಾಫ಼್ಟ್‌ವೇರ್ ಕಮ್ಯುನಿಕೇಶನ್ಸ್, ಎರೋಸ್ ಇಂಟರ್ ನ್ಯಾಶನಲ್ ಮತ್ತು ಫಿಕ್ಕಿ ಮಲ್ಟಿಫ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾದವರು ಸೇರಿಕೊಂಡರು. ದೂರಿನ ಮುಖ್ಯ ಅಂಶ ಏನೆಂದರೆ ಕೆಲವು ಸಂಘ ಸಂಸ್ಥೆಗಳು ಸೇರಿಕೊಂಡು ನ್ಯಾಯವಾಗಿ ತಾವು ವ್ಯಾಪಾರ ಮಾಡಲು ಬಿಡುತ್ತಿಲ್ಲ, ಸದಸ್ಯತ್ವ ತೆಗೆದುಕೊಳ್ಳದೆ ವ್ಯವಹರಿಸುವಂತಿಲ್ಲ ಎಂಬ ಕಟ್ಟಳೆ ಮಾಡುತ್ತಿವೆ ಎಂಬುದಾಗಿದೆ. ಇದಕ್ಕೆ ಸ್ಪಂದಿಸಿರುವ ಸಿಸಿಐ, ಪ್ರಾದೇಶಿಕ ಚಿತ್ರರಂಗಗಳ ಮೇಲೆ ಗದೆ ಬೀಸಿದೆ. ತೀರ್ಪಿನ ಅನ್ವಯ ಇನ್ಮುಂದೆ ಹೀಗೆಲ್ಲ ಮಾಡುವಂತಿಲ್ಲ. "ಇದುವರೆಗೆ ನಡೆದುಕೊಂಡ ರೀತಿ ತಪ್ಪು. ಪರಭಾಷಾ ಚಿತ್ರಗಳನ್ನು ಯಾವುದೇ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಹಕ್ಕು, ಯಾವುದೇ ಸಂಘ ಸಂಸ್ಥೆಯ ಸದಸ್ಯರಾಗದೆಯೂ ವ್ಯಾಪಾರ ಮಾಡುವ ಹಕ್ಕು ಇದೆ. ಯಾವುದೇ ಭಾಷೆಯ ಚಿತ್ರಗಳನ್ನು ಎಷ್ಟಾದರೂ ಕೇಂದ್ರಗಳಲ್ಲಿ ಬಿಡುಗಡೆ ಮಾಡಬಹುದು" ಎಂದಿದೆ ಈ ತೀರ್ಪು.

ತೀರ್ಪಿನ ತೊಡಕು

ಈ ತೀರ್ಪನ್ನು ನೋಡಿದಾಗ ಚಿತ್ರರಂಗದವರ ನಡವಳಿಕೆ ಸರಿಯಿಲ್ಲವೆಂದೂ, ಸ್ಪರ್ಧೆಗೆ ತೆರೆದುಕೊಳ್ಳುವುದು ಸರಿಯಾದುದೆಂದೂ ಅನ್ನಿಸಬಹುದು. ಆದರೆ ವಾಸ್ತವವಾಗಿ ಇದು ಒಂದು ಭಾಷಾ ಜನಾಂಗದ ಮೇಲೆ ಎಸಗಲಾಗುತ್ತಿರುವ ಅನ್ಯಾಯದ ಕ್ರಮ ಎನ್ನುವುದನ್ನು ನಾವು ಅರಿಯಬಹುದಾಗಿದೆ. ಈ ತೀರ್ಪಿನಿಂದಾಗಿ ನಾಳೆ ಕನ್ನಡನಾಡಿನಲ್ಲಿ ಕನ್ನಡ ಚಿತ್ರಗಳು  ಮೊದಲು ಚಿತ್ರಮಂದಿರಗಳಿಲ್ಲದೆ ಸೊರಗಬೇಕಾಗುತ್ತದೆ, ನಂತರ ಚಿತ್ರ ತಯಾರಿಸುವರೂ, ನೋಡುವವರೂ ಇಲ್ಲದೆ ಶಾಶ್ವತವಾಗಿ ಕಣ್ಮುಚ್ಚಬೇಕಾಗುತ್ತದೆ. ಹಿಂದೀ, ತೆಲುಗು, ತಮಿಳು ಮೊದಲಾದ ಪರಭಾಷಾ ಚಿತ್ರಗಳಿಗೆ ಕರ್ನಾಟಕದ ಮಾರುಕಟ್ಟೆ ಮೊದಲ ಮಾರುಕಟ್ಟೆಯಲ್ಲ. ಅವುಗಳಿಗೆ ಇದು ಹೆಚ್ಚುವರಿ ಮಾರುಕಟ್ಟೆ ಮಾತ್ರಾ. ದಾರ ಕಟ್ಟಿ ಬೆಟ್ಟ ಎಳೆದು ಬಂದರೆ ಬೆಟ್ಟ ಹೋದರೆ ದಾರ ಎನ್ನುವಂತೆ ಇಲ್ಲಿನ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಗಳು ಬಿಡುಗಡೆಯಾಗಲು ಅತಿ ಕಡಿಮೆ ದುಡ್ಡಿಗೆ ವಿತರಣೆಯ ಹಕ್ಕುಗಳನ್ನು ಇವರು ನೀಡಬಲ್ಲವರಾಗುತ್ತಾರೆ. ಅದೇ ಹೊತ್ತಲ್ಲಿ ಖಾಲಿ ಚಿತ್ರಮಂದಿರಗಳನ್ನೂ ದುಬಾರಿ ಬಾಡಿಗೆ ಕೊಟ್ಟು ಉಳಿಸಿಕೊಳ್ಳಬಲ್ಲವರಾಗಿರುತ್ತಾರೆ. ಹಾಗಾಗಿ ಇಲ್ಲೊಂದು ನ್ಯಾಯಯುತ ಸ್ಪರ್ಧೆಯೇ ಇಲ್ಲವಾಗುತ್ತದೆ. ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗ ಕಣ್ಣು ಮುಚ್ಚಬಹುದಾಗಿದೆ. (ತಮಾಶೆಯೆಂದರೆ ಸಿಸಿಐ ನೇರವಾಗಿ ಇಲ್ಲಿ  ಎದುರಾಳಿಗಳನ್ನಾಗಿಸಿರುವುದು ಪ್ರಾದೇಶಿಕ ಚಿತ್ರಗಳು ಮತ್ತು ರಾಷ್ಟ್ರೀಯ ಚಿತ್ರಗಳನ್ನಂತೆ! ವರದಿಯಲ್ಲಿ ಹೀಗೆ ಬರೆಯುವ ಮೂಲಕ ಪತ್ರಿಕೆ, ಹಿಂದೀಯೊಂದೇ ರಾಷ್ಟ್ರೀಯ ಎನ್ನುವ ತೀರ್ಪನ್ನು ನೀಡಿದೆ!) ಮೂಲತಃ ಸಿಸಿಐ ನೀಡಿರುವ ತೀರ್ಪಿನಿಂದ ಎಲ್ಲಾ ರಾಜ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕಡೆಗೆ ಲಾಭವಾಗುವುದು ಹಿಂದೀ ಚಿತ್ರಗಳಿಗೇ ಆಗಿದೆ. ಇದಕ್ಕೆ ಹೊಣೆ ಮೊದಲೇ ಹೇಳಿದ ಹಾಗೆ ಚಿತ್ರರಂಗ, ಕೇಂದ್ರ ಮತ್ತು ರಾಜ್ಯಸರ್ಕಾರಗಳೇ ಆಗಿವೆ.

ಕೇಂದ್ರಸರ್ಕಾರ ಮತ್ತು ಸ್ಪರ್ಧೆ!

ಭಾರತದ ಕೇಂದ್ರಸರ್ಕಾರಕ್ಕೆ ಭಾರತೀಯರೆಲ್ಲಾ ಒಂದೇ. ಹಾಗಾಗಿ ಹಿಂದೀ ಸಿನಿಮಾ ಕನ್ನಡ ಚಿತ್ರರಂಗವನ್ನು ಕೊಂದು ಹಾಕಿದರೂ ಅದಕ್ಕೆ ಪರವಾಗಿಲ್ಲ.. ಏಕೆಂದರೆ ಹಿಂದೀ ಈ ದೇಶದ ಬಹುಜನರ ಭಾಷೆ ಎನ್ನುವುದು ಅದರ ಲೆಕ್ಕಾಚಾರವಿರಬಹುದು. ನೀವೇ ಗಮನಿಸಿ ನೋಡಿ... ಈ ದೇಶದಲ್ಲಿ ಗ್ರಾಹಕ ಸೇವೆ ಕಾಯ್ದೆಗಳಲ್ಲಿ ಭಾಷಾ ಆಯಾಮವೇ ಇಲ್ಲ! ಕನ್ನಡನಾಡಿನಲ್ಲಿ ಕನ್ನಡದಲ್ಲಿ ಎಲ್ಲಾ ಸೇವೆಗಳೂ ಸಿಗಬೇಕೆನ್ನುವ ಒತ್ತಾಸೆಯೇ ಕೇಂದ್ರಕ್ಕಿಲ್ಲ. ಅದೇನಿದ್ದರೂ ‘ಭಾರತದಲ್ಲಿ ಬಹುಜನರಾಡುವ ಭಾಷೆಯಾದ ಹಿಂದೀಯಲ್ಲಿ ಎಲ್ಲಾ ಸೂಚನೆಗಳು ಇರತಕ್ಕದ್ದು’ ಎಂದು ಕಾನೂನು ಮಾಡಬಲ್ಲದು ಅಷ್ಟೇ. ಹಿಂದೀಯೇತರ ಭಾಷೆಗಳ ಬಗ್ಗೆ ಇಂತಹ ಕಿಂಚಿತ್ತು ಸಂವೇದನೆಯನ್ನೂ ಹೊಂದಿರದ ಕೇಂದ್ರಸರ್ಕಾರ, ಅರವತ್ತು ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಮಾತ್ರಾ ಹಿಂದಿಯನ್ನು ಭಾರತೀಯರಿಗೆಲ್ಲಾ ಒಪ್ಪಿಸುವ ಕೆಲಸವನ್ನು ಮಾತ್ರವೇ. ಸಮಾಜವಾದದ ಹೆಸರಲ್ಲಿ ಸಮೂಹ ಮಾಧ್ಯಮಗಳನ್ನು ತಾನೇ ನಡೆಸುತ್ತಾ ದೂರದರ್ಶನ, ಆಕಾಶವಾಣಿಗಳ ಮೂಲಕ ಮಾಡಿದ್ದು ಹಿಂದೀ ಪ್ರಚಾರವನ್ನೇ. ಇಂತಹ ನಿಲುವಿನ ಕೇಂದ್ರಸರ್ಕಾರಕ್ಕೆ ಇನ್ನೆಂಥಾ ಮನಸ್ಥಿತಿ ಇದ್ದೀತು? ಫೇರ್ ಕಾಂಪಿಟೇಶನ್ ಪರವಾಗಿ ತೀರ್ಪು ನೀಡುವೆ ಎನ್ನುವ ಸಂಸ್ಥೆಗೆ ಮೊದಲ ಮಾರುಕಟ್ಟೆ ಮತ್ತು ಹೆಚ್ಚುವರಿ ಮಾರುಕಟ್ಟೆಗಳ ವ್ಯತ್ಯಾಸವನ್ನೇ ಗುರುತಿಸಲಾಗದ ಕುರುಡುತನ ಇದೆಯೇನೋ ಎಂಬ ಅನುಮಾನ ಕನ್ನಡಿಗರದ್ದು.

ಕನ್ನಡ ಚಿತ್ರರಂಗದ ತಪ್ಪುಹೆಜ್ಜೆಗಳು

ತಾವೆಲ್ಲಾ ಸೇರಿಕೊಂಡು ಒಂದು ಸಂಘ ಮಾಡಿಕೊಂಡು ಬಿಟ್ಟರೆ ಇಡೀ ವ್ಯವಸ್ಥೆ ತಾನು ಹೇಳಿದಂತೆ ನಡೆಯುತ್ತದೆ ಎನ್ನುವ ಭ್ರಮೆ ನಮ್ಮ ಚಿತ್ರ ಜಗತ್ತಿಗಿದ್ದಂತಿದೆ. ಇಂಥಾ ಭ್ರಮೆಯನ್ನೇ ಈಗಿನ ಈ ತೀರ್ಪು ಒಡೆದು ಹಾಕಿರುವುದು. ಈ ಭ್ರಮೆಯ ಇನ್ನೊಂದು ರೂಪ ಡಬ್ಬಿಂಗ್ ನಿಷೇಧ ಎನ್ನುವ ನಿಲುವಿನದೂ ಆಗಿದೆ. ತಾವು ಹೇಳಿದ್ದೆ ಆಟ ಎನ್ನುವಂತೆ ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿಯೇ ಇಂದು ಚಿತ್ರರಂಗಕ್ಕೆ ಈ ಸ್ಥಿತಿ ಬಂದಿರುವುದು ಎಂದರೆ ತಪ್ಪಿಲ್ಲ, ಅರೆರೆ... ಡಬ್ಬಿಂಗ್ ಮಾತ್ಯಾಕೆ ಇಲ್ಲಿ ಬಂತು ಎಂದುಕೊಳ್ಳುವಿರಾದರೆ ಸ್ವಲ್ಪ ತಾಳಿ, ನಿಧಾನಕ್ಕೆ ಆ ವಿಷಯಕ್ಕೂ ಹೋಗೋಣ. ಸದ್ಯದ ಮಾತೆಂದರೆ ತಮ್ಮ ಉದ್ಯಮದ ಉಳಿವಿಗಾಗಿ ಕನ್ನಡ ಚಿತ್ರರಂಗವು ತೆಗೆದುಕೊಂಡಿರುವ 'ಏಳು ವಾರ ತಡೆದು ಬಿಡುಗಡೆ ಮಾಡಬೇಕು, ನಾಲ್ಕೇ ಪ್ರಿಂಟ್ ಇರಬೇಕು, ಡಬ್ಬಿಂಗ್ ನಿಷೇಧ...' ಇತ್ಯಾದಿ ಕ್ರಮಗಳು ಸಂವಿಧಾನಬಾಹಿರವಾಗಿವೆ. ಹಾಗಾಗೆ ಈಗ ಸಿಸಿಐನ ತೀರ್ಪಿನಿಂದ ಕಂಗೆಟ್ಟಿರುವ ಚಿತ್ರರಂಗವು ದೇಶದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವ ಮಾತಾಡುತ್ತಿದೆ. ಅಲ್ಲೂ ಕೂಡಾ ಇದಕ್ಕಿಂತ ಭಿನ್ನವಾದ ತೀರ್ಪಿನ ಸಾಧ್ಯತೆ ಕಮ್ಮಿಯೇ. ಹಾಗೆ ಅಲ್ಲೂ ಇದೇ ತೀರ್ಪು ಬಂದಲ್ಲಿ ಮುಂದಿನ ದಾರಿಯೇನು? ಬೀದಿಗಿಳಿದು ಹೋರಾಟವೇ? ಉಪವಾಸ ಸತ್ಯಾಗ್ರಹವೇ? ಮತ್ತೊಂದು ಸುತ್ತಿನ ಹೋರಾಟವೇ?

ಚಿತ್ರರಂಗದ ಗೆಳೆಯರು ಅರಿಯಬೇಕಾದ ಒಂದು ಮಾತೆಂದರೆ ಸ್ಪರ್ಧೆಯನ್ನು ಎದುರಿಸಲು ಇಂಥಹ ಅಸಂವಿಧಾನಿಕ ಕ್ರಮಗಳು ಶಕ್ತವಾಗಿಲ್ಲ. ಸ್ಪರ್ಧೆ ಇದ್ದಲ್ಲಿ ಗುಣಮಟ್ಟ, ಸ್ಪರ್ಧೆಯಿದ್ದಲ್ಲಿ ಗ್ರಾಹಕನಿಗೆ ಅತ್ಯುತ್ತಮ ಸೇವೆ. ಹಾಗಾಗಿ ಸ್ಪರ್ಧೆ ಸಹಜ ಮತ್ತು ಅನಿವಾರ್ಯವೇ ಆಗಿದೆ! ಹಾಗಾದರೆ ಸ್ಪರ್ಧೆಯನ್ನೂ ಎದುರಿಸಿ, ಎದುರಾಳಿಗೂ ಸಮಾನ ಅವಕಾಶ ನೀಡಿ, ಕನ್ನಡ ಚಿತ್ರರಂಗವನ್ನೂ ಕಾಪಾಡಿಕೊಳ್ಳುವುದು ಯಾರ ಹೊಣೆ? ಇಷ್ಟಕ್ಕೂ ಸಮಾನ ಅವಕಾಶದ ಸ್ಪರ್ಧೆ ಎಂದರೇನು? ಹೇಗೆ ಕರ್ನಾಟಕದ ಒಳಗೆ ಕನ್ನಡ ಮತ್ತು ಕನ್ನಡೇತರ ಚಿತ್ರಗಳು ಸಮಾನ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಕನ್ನಡ ಕನ್ನಡತನ ಕನ್ನಡಿಗರ ಉಳಿವಿಗೆ ಬೇಕಿರುವುದು ಏನು? ಯಾರು ಈ ಹೊಣೆ ಹೊಂದಿದ್ದಾರೆ? ಎಂದರೆ ಇದಕ್ಕುತ್ತರ ಕರ್ನಾಟಕ ರಾಜ್ಯಸರ್ಕಾರ ಎನ್ನುವುದಾಗಿದೆ.

ರಾಜ್ಯಸರ್ಕಾರ ಮರೆತ ಹೊಣೆಗಾರಿಕೆ!

ಭಾರತ ಸರ್ಕಾರಕ್ಕೆನೋ ಕನ್ನಡನಾಡು ನುಡಿ ಉಳಿಸಬೇಕೆಂಬ ದರ್ದು ಇಲ್ಲದಿರಬಹುದು, ಸಹಿಸೋಣ. ಆದರೆ ನಮ್ಮದೇ ನಾಡಿನ ಸರ್ಕಾರಗಳಿಗೆ ಏನು ಧಾಡಿ ಬಂದಿದೆಯೋ ಗೊತ್ತಿಲ್ಲ. ನ್ಯಾಯಯುತ ಸ್ಪರ್ಧೆಯ ಸರಿಯಾದ ಅರ್ಥವಾದರೂ ರಾಜ್ಯಸರ್ಕಾರ ತಿಳಿದಿರಬೇಕು. ನ್ಯಾಯಯುತ ಸ್ಪರ್ಧಾತ್ಮಕೆಯ ಹೆಸರಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಎಗ್ಗುಸಿಗ್ಗಿಲ್ಲದೆ ಬಿಡುಗಡೆಯಾಗುವುದು ಕನ್ನಡಿಗರ ಮೇಲೆ ಕೇಂದ್ರ ನಡೆಸುವ ದೌರ್ಜನ್ಯ ಎನ್ನುವುದನ್ನಾದರೂ ಅರಿಯಬೇಕು. ಇದರಿಂದಾಗುವ ಕೆಡುಕನ್ನು ತಪ್ಪಿಸಬಲ್ಲ ಮನಸ್ಸು ನಮ್ಮ ಸರ್ಕಾರಕ್ಕಿರಬೇಕು. ವಿಶ್ವಸಂಸ್ಥೆಯ ಭಾಷಾ ನೀತಿಯಲ್ಲಿ ಏನು ಹೇಳಿದೆ ಎನ್ನುವ ಅರಿವು ಸರ್ಕಾರಕ್ಕೆ ಇರಬೇಕು. ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾಹಕ್ಕು ಘೋಷಣೆಯ ಈ ಎರಡು ಅಂಶಗಳೇ ಸಾಕು...

Article 44
All language communities are entitled to access to intercultural programmes, through the dissemination of adequate information, and to support for activities such as teaching the language to foreigners, translation, dubbing, post-synchronization and subtitling.
Article 45
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life).
ಆದರೆ ಇಂದು ಕನ್ನಡ ಚಿತ್ರರಂಗವನ್ನು ಅದರ ಸಂಘ ಸಂಸ್ಥೆಗಳಿಗೆ ಆಳಿಕೊಳ್ಳಲು ಬಿಟ್ಟಂತೆ ಸರ್ಕಾರ ಸುಮ್ಮನಿದೆ. ನಾಳೆ ಪರಭಾಷಾ ಚಿತ್ರವೊಂದು ಬಿಡುಗಡೆಯಾಗಿ ಏನಾದರೋ ಪ್ರತಿಭಟನೆ ಗಿತಿಭಟನೆ ಅಂತಾ ಗಲಾಟೆಯಾದರೆ ಮಾತ್ರಾ ಕಾನೂನು ಸುವ್ಯವಸ್ಥೆ ಎಂದು ಲಾಟಿ ಹಿಡಿದು ಮೈಮೇಲೆ ಬಿದ್ದೀತು ಅಷ್ಟೇ! ಇಂಥದಕ್ಕೆ ಆಸ್ಪದ ನೀಡದೆ, ಈಗಲೇ ಎಚ್ಚೆತ್ತು  ಸೂಕ್ತಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಆಗ್ರಹ! ಪ್ರೊಟೆಕ್ಷನಿಸಂ ಅನ್ನೋದು ಇರಬಾರದು, ಅದು ಸ್ಪರ್ಧಾ ಮನೋಭಾವಕ್ಕೆ ವಿರುದ್ಧವಾಗಿದೆ ಎನ್ನುವ ಮಾತು ಒಪ್ಪತಕ್ಕದ್ದಾದರೂ ಕೆಲವಷ್ಟು ವಿಷಯಗಳಿಗೆ ಈ ರೀತಿಯ ರಕ್ಷಣೆ ಬೇಕಾಗಿಯೇ ಇರುತ್ತದೆ ಮತ್ತು ಜಗತ್ತಿನ ಯಾವ ದೇಶದಲ್ಲೂ ಇಂತಹ ರಕ್ಷಣೆ ಇಲ್ಲದೆ ಇಲ್ಲ. ಹಾಗಾಗಿ ಈ ಹೊಣೆ ರಾಜ್ಯಸರ್ಕಾರದ್ದೇ ಆಗಿದೆ.

ಕನ್ನಡ ಚಿತ್ರರಂಗಕ್ಕಿಂತಾ ಕನ್ನಡ ಸಮಾಜ ಪ್ರಮುಖವಾದುದು!

ಹೌದೂ! ಇಂಥದ್ದೊಂದು ಮಾತು ಹೇಳಲೇಬೇಕಾಗಿದೆ. ಇಡೀ ಕನ್ನಡ ಸಮಾಜದ ಒಂದು ಅಂಗ ಮಾತ್ರವೇ ಕನ್ನಡ ಚಿತ್ರರಂಗ. ಅದು ತನ್ನ ಉಳಿವಿನ ಹೆಸರಿನಲ್ಲಿ ಅಸಂವಿಧಾನಿಕವಾಗಿ ನಡೆದುಕೊಂಡು ಇಡೀ ಕನ್ನಡಕುಲಕ್ಕೇ ಮಾರಕವಾಗುವಂತೆ ನಡೆದುಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ಹಾಗಾಗಿ ರಾಜ್ಯಸರ್ಕಾರವೇ ಈಗ ಕೇಂದ್ರಸರ್ಕಾರದ ಜೊತೆ ಮಾತಾಡಬೇಕಾಗಿದೆ. ಆಯೋಗ ನೀಡಿದ ತೀರ್ಪು ಹೇಗೆ ವಿಶ್ವಸಂಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ, ಹೇಗೆ ಕನ್ನಡ ಜನಾಂಗವನ್ನೇ ಕಂಟಕಕ್ಕೆ ತಳ್ಳಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಹಾಗಾದರೆ ನ್ಯಾಯಯುತ ಸ್ಪರ್ಧೆಯಲ್ಲಿ ಪರಭಾಷಿಕರು ಭಾಗವಹಿಸಬಾರದೆ? ಅವರೂ ಭಾರತೀಯರಲ್ಲವೇ? ಎನ್ನುವ ಪ್ರಶ್ನೆಗೆ ಉತ್ತರವನ್ನೂ ಕಂಡುಕೊಳ್ಳಬೇಕಾಗಿದೆ.

3 ಅನಿಸಿಕೆಗಳು:

ಸೀನ ಅಂತಾರೆ...

ಇದು ಇಲ್ಲಿಗೆ ನಿಲ್ಲೋದಿಲ್ಲ. ಇಡಿ ದೇಶವನ್ನ ಹಿಂದಿಮಯ ಮಾಡುವ ಹುನ್ನಾರ ಈ ಕೇಂದ್ರ ಸರ್ಕಾರದ್ದು. ಇಷ್ಟಕ್ಕೂ ಈ ದೇಶವನ್ನು ಆಳುತ್ತ ಇರುವವರು ಹಿಂದಿ ಯವರು. ಇವರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾದ್ಯ? ಇನ್ನು ನಮ್ಮ ರಾಜ್ಯದ ರಾಜಕಾರನಿಗಳೆಲ್ಲ ಈ ಹೈ ಕಮಾಂಡ್ ಎಂಬ ಸೂತ್ರಕ್ಕೆ ಕುಣಿಯುವ ಗೊಂಬೆಗಳಷ್ಟೇ. ನನ್ನ ಪ್ರಕಾರ, ನಮ್ಮ ಕನ್ನಡತನ ಉಳಿಯ ಬೇಕಾದರೆ, ಒಂದು, ಈ ಭಾರತ ಒಕ್ಕೂಟ ದಿಂದ ನಾವು ಹೊರ ಬರಬೇಕು. ಅಥವಾ, ನಮ್ಮಲ್ಲೇ ತುಂಬಾ ಬಲ ವಾದ ಪ್ರಾದೇಶಿಕ ಪಕ್ಷ ವನ್ದೊನ್ನ ಬೆಳಿಸಿ ಗೆಲ್ಲಿಸಿ, ಸ್ವ೦ಮಿಧಾನ ದಲ್ಲಿ ನಮ್ಮ ರಾಜ್ಯಕ್ಕೆ ವಿಶೇಷ ಹಕ್ಕು ಇರಬೇಕು. ಇಲ್ಲದಿದ್ದರೆ ಕನ್ನಡಡ ನಾಶ ಖಂಡಿತ.

ವಿಪರೀತನ್ ಅಂತಾರೆ...

ಈ ತರದ ಕಾನೂನು ಸದ್ಯಕ್ಕೆ ಬೇಕಾಗಿದೆ ಅಂತ ಅನ್ನಿಸುತ್ತೆ.ಸಿನಿಮಾ ಅಂದ್ರೆ ಏನೂಂತ ಗೊತ್ತಿಲ್ಲದವ್ರೆ ತುಂಬಿ ಹೋಗಿದ್ದಾರೆ ಕನ್ನಡ ಚಿತ್ರರಂಗದಲ್ಲಿ.ತೆಲುಗಿನಲ್ಲಿ 'ಹ್ಯಾಪಿ ಡೇಸ್ ' ,'ಏ ಮಾಯಾ ಚೆಸಾವೆ' ಮೊದಲಾದ ಕಡಿಮೆ ಬಜೆಟ್ ಅಲ್ಲದೆ ಹೊಸಬರೇ ಇದ್ದ ಚಿತ್ರಗಳು ಒಳ್ಳೆ ಗುಣಮಟ್ಟದಿಂದ ಯಶಸ್ವಿಯಾದವು.ಕೋಟಿಗಟ್ಟಲೆ ದುಡ್ಡು ಸುರಿದು , ಜನಪ್ರಿಯ ನಟರನ್ನ ಹಾಕ್ಕೊಂಡು ಕನ್ನಡದಲ್ಲಿ ತಯಾರಾಗೋದು 'ಜಾಕಿ' 'ಜೋಗಯ್ಯ' 'ಸಾರಥಿ ' ಮುಂತಾದ ಕಳಪೆ ಚಿತ್ರಗಳು.ಇವನ್ನ ಏನಿದ್ದರೂ ಬೀದಿ ರೌಡಿಗಳು , ಆಟೋ ಡ್ರೈವರ್ ಗಳು ನೋಡಬೇಕಷ್ಟೇ.ಇಂತ ಕಾನೂನು ನಿಜವಾಗ್ಲೂ ಕರ್ನಾಟಕ ಸರ್ಕಾರ ತರಬೇಕಾಗಿತ್ತು..ಇದರಿಂದ ' ಬೆರಕೆ ಸೊಪ್ಪಿನ ಸಾರು ' ಮಾಡೋ ನಿರ್ದೇಶಕರಿಂದ ಕನ್ನಡಿಗರಿಗೆ ಮುಕ್ತಿ ಸಿಗುತ್ತದೆ.ನಿಜವಾದ ಪ್ರತಿಬೆಗಳು ಮಾತ್ರವೇ ಗಟ್ಟಿಯಾಗಿ ಉಳೀತವೆ.

chandramouli ಅಂತಾರೆ...

Super article..I like it..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails