ನಮ್ಮ ಕರ್ನಾಟಕದ ಘನ ರಾಜ್ಯಪಾಲರಾದ ಶ್ರೀ ಎಚ್. ಆರ್. ಭಾರಧ್ವಾಜ್ ಅವರು ಉರ್ದು ಅಕಾಡಮಿಯ ಒಂದು ಕಾರ್ಯಕ್ರಮದಲ್ಲಿ "ಇನ್ಮುಂದೆ ಕನ್ನಡದವರಿಗೆ ಉರ್ದುವನ್ನು ಕಡ್ಡಾಯ ಮಾಡಬೇಕು" ಎಂದಿದ್ದಾರೆ ಅನ್ನೋ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಶ್ರೀಯುತರು ಮಾತಾಡ್ತಾ ಉರ್ದು ಒಂದು ಅದ್ಭುತವಾದ ಭಾಷೆ, ಇದರಲ್ಲಿ ಅದ್ಭುತ ಸಾಹಿತ್ಯವಿದೆ.. ಇದನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು ಎಂದೆಲ್ಲಾ ಹೇಳುತ್ತಿದ್ದಾಗ ಹೌದಲ್ವಾ ಅಂದ್ಕೊತಾ ಇರೋವಾಗಲೇ ವರಸೆ ಬದಲಾಯಿಸಿ "...ಹಾಗಾಗಿ ಎಲ್ಲಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉರ್ದು ಕಲಿಕೆ ಕಡ್ಡಾಯವಾಗಿ ಕಲಿಸುವಂತಾಗಬೇಕು" ಎಂದರಂತೆ. ಈ ದೊಡ್ಡಜನರಿಗೆ ಯಾಕಪ್ಪಾ "ಕನ್ನಡದೋರಿಗೆ ಅವರಿಗೆ ಸಂಬಂಧ ಇಲ್ದಿರೋ ಭಾಷೆಗಳನ್ನೂ ಕಡ್ಡಾಯವಾಗಿ ಕಲಿಸಿ" ಅಂತ ಹೇಳೋ ತೆವಲು ಅಂತಾ ಅಚ್ಚರಿಯಾಗುತ್ತೆ ಗುರೂ! ಇದೇ ರಾಜ್ಯಪಾಲರು ಕೆಲಕಾಲದ ಹಿಂದೆ ಕನ್ನಡಿಗರೆಲ್ಲಾ ದೇಶದ ಬಗ್ಗೆ ಗೌರವಾ ಇದ್ರೆ ಹಿಂದೀ ಕಲೀಬೇಕು, ಜೊತೇಲಿ ಉರ್ದು ಸಂಸ್ಕೃತಗಳನ್ನು ಕಲೀಬೇಕು ಅಂತಾನೂ ಅಂದಿದ್ರು! ಕೇಂದ್ರಸರ್ಕಾರದೋರು ರಾಜ್ಯಪಾಲರನ್ನು ನೇಮಿಸೋದು ಹಿಂದೀ, ಉರ್ದು, ಸಂಸ್ಕೃತಗಳ ಪ್ರಚಾರಕ್ಕಾ ಅನ್ನೋ ಅನುಮಾನ ನಿಮಗೇನಾರಾ ಬಂದ್ರೆ ಅದುಕ್ ನಾವು ಹೊಣೆಯಲ್ಲಾ ಗುರೂ!
ಕನ್ನಡವೇ ಸತ್ಯಾ! ಅನ್ಯವೆನಲದೇ ಮಿಥ್ಯಾ!!
ಇದು ಕನ್ನಡದವರ ಮೇಲೆ ಪರಭಾಷೆ ಹೇರೋ ಮೊದಲನೇ ಪ್ರಯತ್ನವೇನಲ್ಲ! `ದೇಶದ ಒಗ್ಗಟ್ಟಿನ ನೆಪ ಹೇಳ್ತಾ ತ್ರಿಭಾಷಾ ಸೂತ್ರದ ನೆಪ'ದಲ್ಲಿ ಹಿಂದೀನಾ ಕಡ್ಡಾಯ ಮಾಡಿದ್ದಾಯ್ತು. `ಕನ್ನಡ ನುಡಿಯ ಸೌಂದರ್ಯ ಹೆಚ್ಚಿಸೋ ಸೌಂದರ್ಯ ವರ್ಧಕ ಸಂಸ್ಕೃತ' ಎನ್ನುತ್ತಾ ಶ್ರೀ ಎಸ್ ಎಲ್ ಭೈರಪ್ಪನವರು ಸಂಸ್ಕೃತ ಕಡ್ಡಾಯ ಮಾಡಿ ಎಂಬ ಹೇಳಿಕೆ ಕೊಟ್ಟರು. ಈಗ `ಮುಸ್ಲಿಮರಿಗೆ ಮಾತ್ರಾ ಮೀಸಲು ಮಾಡಬಾರದು, ಸುಂದರ ಭಾಷೆ' ಎನ್ನುತ್ತಾ ಉರ್ದು ಕಡ್ಡಾಯ ಮಾಡಿ ಅಂತಿದ್ದಾರೆ ನಮ್ಮ ರಾಜ್ಯಪಾಲರು. ಇವರೆಲ್ಲರ ಕಣ್ಣಿಗೆ ಕನ್ನಡದೋರು ಹೇರಿಸಿಕೊಳ್ಳಲಿಕ್ಕೆಂದೇ ಇರೋ ಎತ್ತುಗಳ ಹಾಗೇ ಕತ್ತೆಗಳ ಹಾಗೆ ಕಾಣ್ತಿದಾರೋ ಏನೋ! ಕನ್ನಡದವರು ಕನ್ನಡವನ್ನು ಕಲಿತರೆ ಸಾಕಾಗಿದೆ... ಅಂಥಾದ್ರಲ್ಲಿ ಹಿಂದಿ, ಸಂಸ್ಕೃತ, ಉರ್ದುಗಳ ಕಡ್ಡಾಯಗಳು ಯಾಕೋ? ಈ ಪುಣ್ಯಾತ್ಮರಿಗೆಲ್ಲಾ ಕುವೆಂಪು ಹೇಳಿದ "ಕನ್ನಡವೇ ಸತ್ಯಾ!ಅನ್ಯವೆನಲದೇ ಮಿಥ್ಯಾ!!" ಎನ್ನೋದು ಅರ್ಥವಾಗೋದು ಯಾವಾಗಲೋ?
ಕನ್ನಡದೋರು ಬೇರೆ ಭಾಷೆ ಕಲಿಬಾರ್ದಾ?
ಕನ್ನಡದ ಮಕ್ಕಳು ಹಾಗಾದ್ರೆ ಹಿಂದೀ, ಸಂಸ್ಕೃತ, ಉರ್ದು ಭಾಷೆಗಳನ್ನು ಕಲಿಯಬಾರದೆನ್ನುವುದು ನಮ್ಮ ನಿಲುವಲ್ಲ. ತಮಗೆ ಯಾವ ಭಾಷೆ ಬೇಕೋ ಅದನ್ನು ಕಲಿಯೋ ಹಕ್ಕು ಎಲ್ಲರಿಗೂ ಇದೆ. ಆದರೆ ಕಡ್ಡಾಯ ಮಾಡಬೇಕು ಎನ್ನೋ ಮನಸ್ಥಿತಿಯ ಬಗ್ಗೆ ನಮ್ಮ ಆಕ್ಷೇಪ ಅಷ್ಟೇ. ಕೆಲವರು "ಹಾಗಾದ್ರೆ ಕನ್ನಡವನ್ನೂ ಕಡ್ಡಾಯ ಮಾಡಬಾರದು" ಎನ್ನುವ ವಾದವನ್ನು ಮುಂದಿಡುತ್ತಾರೆ. ಈ ನೆಲದ ಪರಿಸರದ ನುಡಿಯನ್ನು ಕಡ್ಡಾಯ ಮಾಡೋದು ಇಲ್ಲಿ ಬದುಕಲು ಅನುಕೂಲವಾಗಲೀ ಎನ್ನುವ ಕಾರಣದಿಂದಲೇ ಆಗಿದೆ. ಈ ನಾಡು ಕನ್ನಡನಾಡು ಮತ್ತು ಇಲ್ಲಿನ ಪರಿಸರದ ನುಡಿ ಅಂದ್ರೆ ಇಲ್ಲಿನ ಜನರಾಡೋ ಮಾತು ಕನ್ನಡ, ಆದ್ದರಿಂದ ಇಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡೋದು ಸಹಜವಾಗಿದೆ. ಹಾಗಾಗಿ ನಮ್ಮದಲ್ಲದ ನುಡಿಯನ್ನು ಕಡ್ಡಾಯ ಮಾಡೋದನ್ನು ಒಪ್ಪೋ ಮಾತೇ ಇಲ್ಲ! ಇನ್ನು ಇಂಗ್ಲೀಶ್ ಕಡ್ಡಾಯ ಮಾಡೋ ವಿಷಯಕ್ಕೂ ಇದೇ ನಿಲುವು ಹೊಂದುತ್ತೆ ಗುರೂ!
5 ಅನಿಸಿಕೆಗಳು:
ಕನ್ನಡದವರ ಮೇಲೆ ಬೇರೆ ಬೇರೆ ನುಡಿಗಳನ್ನ ಹೇರಕ್ಕೆ ಏನೇನು ಕಥೆ ಕಟ್ಟುತಾರೆ ಅಂತ ನೋಡಿದರೆ ಅಚ್ಚರಿ ಆಗುತ್ತೆ ಗುರು.
ದೇಶಪ್ರೇಮಕ್ಕಾಗಿ ಹಿಂದಿ, ಭಾಷಾ ಶುಧ್ಧೀಕರಣಕ್ಕಾಗಿ ಸಂಸ್ಕೃತ, ಶ್ರೀಮಂತ ಭಾಷೆಯಾಗಿರೋದರಿಂದ ಉರ್ದು, ಜಾಗತಿಕ ವ್ಯವಹಾರಕ್ಕಾಗಿ ಇಂಗ್ಲೀಷು.
ಕನ್ನಡಿಗರು ಕನ್ನಡಿಗರಾಗಿ ಬಾಳಿ ಬದುಕೋದು ಇವರಿಗೆ ಬೇಡವಾಗಿದೆಯೇನೋ ಅಂತನಿಸುತ್ತೆ.
ಯಾರೋ ಯಾವ್ದೋ ಭಾಷಣದಲ್ಲಿ ಏನೋ ಹೇಳಿದ್ನೆಲ್ಲಾ ಸೀರಿಯಸ್ಸಾಗಿ ತಗೊಳ್ಳೋದು ಬೇಡ. ಇದೆಲ್ಲಾ ಆಗ ಕೆಲ್ಸ ಅಲ್ಲ. ಹೋಗ ಕೆಲ್ಸ ಅಲ್ಲ ಗುರು.
ಉರ್ದು ಕರ್ನಾಟಕದ ಜನರ 14% ಮಾತೃಭಾಷೆ ಆಗಿದೆ. ಆದ್ದರಿಂದ ".ಹಾಗಾಗಿ ಎಲ್ಲಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉರ್ದು ಕಲಿಕೆ ಕಡ್ಡಾಯವಾಗಿ ಕಲಿಸುವಂತಾಗಬೇಕು" ಸಮಂಜಸವೇ. ಆ ಹೇಳಿಕೆಯ ಉರ್ದು ಪಾಠ ಮತ್ತು ಕಲಿಯಲು ಸೌಲಭ್ಯಗಳನ್ನು ಬಗ್ಗೆ.
ಸಂಸ್ಕೃತ ಅಥವಾ ಕರ್ನಾಟಕದಲ್ಲಿ ಹಿಂದಿ ಕಲಿಯಲು ಸೌಲಭ್ಯವನ್ನು ಪಡೆಯಲು ಬಹಳ ಸುಲಭವಾಗಿದೆ. ಆದಾಗ್ಯೂ, ಉರ್ದು ಅಥವಾ ತೆಲುಗು (7% ತಾಯಿ ಭಾಷೆ) ಕಲಿಯಲು ಲಭ್ಯವಿರುವ ಹೆಚ್ಚಿನ ಸೌಲಭ್ಯಗಳು ಇಲ್ಲ.
ಅವರು ಸ್ಪಷ್ಟವಾಗಿ ಕರ್ನಾಟಕದ ಎಲ್ಲರಿಗೂ ಉರ್ದು ಕಡ್ಡಾಯವಾಗಿ ಕಲಿಕೆ ಮಾಡಲು ಹೇಳಲು ಇಲ್ಲ.
Mr. Bharadwaj, you have been in Karnataka for so long. Have ever tried to learn Kannada. BTW WTH are you to tell us this?
Super comment @Thyagaraj
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!