(ಫೋಟೋ ಕೃಪೆ: www.mysoredasara.gov.in) |
ಮೈಸೂರು ದಸರಾ ನಮ್ಮದಾಗುವತ್ತಾ ಸಾಗುತ್ತಿರುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತಿದೆ ಗುರೂ! ಈ ಬಾರಿ ತನ್ನ ಹಿಂದಿನ ಎಲ್ಲಾ ಕೊರತೆಗಳನ್ನು ನೀಗಿಕೊಂಡು ಕಂಗೊಳಿಸುತ್ತಿದೆ... ಮೈಸೂರು ದಸರಾ ಹಬ್ಬದ ಮಿಂಬಲೆ ತಾಣ. ಈ ಬದಲಾವಣೆಯೇನೂ ತಂತಾನೆ ಆಗಿಲ್ಲಾ... ೨೦೦೭ರಲ್ಲಿ ಇದ್ದ ಪರಿಸ್ಥಿತಿ ಗಮನಿಸಿದ್ದವರಿಗೆ ಈ ಬದಲಾವಣೆ ಅದ್ಭುತ ಎನ್ನಿಸುತ್ತದೆ. ಈ ತಾಣದಲ್ಲಿ ಆಗ ಕನ್ನಡದ ಕಡೆಗಣನೆ ಆಗಿದ್ದನ್ನು ಕಂಡು ಹೊಟ್ಟೆ ಉರಿದುಕೊಂಡು ಅನೇಕ ಜನರು ಸಂಬಂಧಿಸಿದ ಅಧಿಕಾರಿಗಳಿಗೆ ವರ್ಷ ವರ್ಷ ಬಿಡದೇ ಮನವಿ/ ದೂರು ಸಲ್ಲಿಸಿ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಕನ್ನಡ ಗ್ರಾಹಕರ ದನಿ ಗೆದ್ದ ಮತ್ತೊಂದು ಉದಾಹರಣೆ... ಈ ಮೈಸೂರು ದಸರಾ ಅಂತರ್ಜಾಲ ತಾಣ. ಇಷ್ಟಕ್ಕೂ ಈ ಬಾರಿಯ ತಾಣದಲ್ಲಿ ಏನಪ್ಪಾ ಅಂಥಾ ವಿಶೇಷ ಅಂತೀರಾ? ಬನ್ನಿ ಒಮ್ಮೆ ಇಣುಕಿ ನೋಡಿ...
ಸರಿಯಾದ ತಾಣ!
ಈ ತಾಣದಲ್ಲಿ ಮೊದಲನುಡಿ ಇಂಗ್ಲೀಶ್ ಆಗಿತ್ತು. ಕನ್ನಡದಲ್ಲಿ ಇದ್ದದ್ದು ಕಾಟಾಚಾರಕ್ಕಾಗಿ ಅನ್ನುವಂತಿತ್ತು! ಈಗ ಸಂಪೂರ್ಣ ಬದಲಾಗಿದೆ ಈ ತಾಣ. ಇದು ಈಗ ನಮ್ಮ ಮೈಸೂರು ದಸರಾ ಅಂತರ್ಜಾಲ ತಾಣ ಎಂದು ಹೆಮ್ಮೆ ಪಡುವಂತೆ ಇದೆ. ಈ ತಾಣಕ್ಕೆ ಬಂದೊಡನೆ ಕಾಣುವುದು ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳ ಪುಟ. ಇಲ್ಲಿ ಮೇಲೆ ಒಂದು ಕನ್ನಡದ ಟ್ಯಾಬ್ಗಳಿದ್ದು ಇವು ಸದಾ ಇದ್ದೇ ಇರುವಂತೆ ರೂಪಿಸಿದ್ದಾರೆ. ಈ ತಾಣದಲ್ಲಿನ ಕನ್ನಡದ ಎಲ್ಲಾ ಕೊಂಡಿಗಳೂ ಶ್ರದ್ಧೆಯಿಂದ ರೂಪಿತವಾಗಿದ್ದು ಬಹುತೇಕ ಎಲ್ಲಾ ಪುಟಗಳು ಕೆಲಸ ಮಾಡುತ್ತಿವೆ. ನಮ್ಮ ಮೈಸೂರಿನ ಸೊಗಡಿನ, ನಮ್ಮತನ ಸೂಸುವ ಅನೇಕ ಚಿತ್ರಗಳನ್ನು ನಾವಿಲ್ಲಿ ನೋಡಬಹುದು. ಮೈಸೂರು ವಿಳ್ಯೆದೆಲೆ, ಮೈಸೂರು ರೇಶಿಮೆ ಸೀರೆ, ಚಿತ್ರಕಲೆ, ಅಗರಬತ್ತಿ, ಮೈಸೂರು ಬಾಳೆ ಎಲ್ಲವನ್ನೂ ಪರಿಚಯಿಸಿದ್ದಾರೆ.
(ಫೋಟೋ ಕೃಪೆ: www.mysoredasara.gov.in) |
ಈ ತಾಣದಲ್ಲಿ ಒಟ್ಟು ಅರವತ್ತು ಭಾಷೆಗಳಲ್ಲಿ ಮಾಹಿತಿ ಇದೆ. ಯಾವುದೇ ಭಾಷೆಯನ್ನು ಆರಿಸಿಕೊಂಡರೂ ಆ ಭಾಷೆಯಲ್ಲಿ ಮಾಹಿತಿ ಸಿಗುವುದರ ಜೊತೆಯಲ್ಲಿ ಕನ್ನಡದ ಟ್ಯಾಬುಗಳು ಎಲ್ಲಾ ಹೊತ್ತಲ್ಲೂ ಕಾಣುತ್ತಿರುವಂತೆ ರೂಪಿಸಿದ್ದಾರೆ. ಈ ಭಾಷೆಗಳಲ್ಲಿ ಒಂದು ಆಯ್ಕೆ ಕಳೆದ ದಸರೆಯ ಅನುಭವದ ಬಗ್ಗೆ ಅನಿಸಿಕೆ ಕೇಳಲಾಗಿದೆ... ಆ ಅಭಿಮತವು ಆರಿಸಿಕೊಂಡ ಭಾಷೆಯ ಜೊತೆಯಲ್ಲಿ ಕನ್ನಡವೂ ಕಾಣುತ್ತಲೇ ಇರುತ್ತದೆ. ನೋಡಿ... ಹೀಗೆ ಒಂದಾರು ಭಾಷೆಗಳನ್ನು ಬೇರೆಬೇರೆಯಾಗಿ ಆಯ್ಕೆ ಮಾಡಿ ಕೆಳಗಿನ ಚಿತ್ರವನ್ನು ಜೋಡಿಸಿ ಕೊಡಲಾಗಿದೆ.
(ಫೋಟೋ ಕೃಪೆ: www.mysoredasara.gov.in) |
ಇನ್ನೇನು ಹೇಳುವುದು.. ಮೈಸೂರು ದಸರೆಯ ಅಂತರ್ಜಾಲ ತಾಣವಂತೂ ಈಗ ನಮ್ಮದು ಎನ್ನಿಸುತ್ತಿದೆ. ಇನ್ನು ದಸರೆಯ ಕಾರ್ಯಕ್ರಮಗಳಲ್ಲಿ ನಮ್ಮೂರಿನ, ನಮ್ಮವರ ಪ್ರತಿಭೆಗಳ ನಮ್ಮೂರ ಕಲೆಗಳ ಜಗತ್ ಪ್ರದರ್ಶನಕ್ಕೆ ಅವಕಾಶ ಸಿಗುವುದು ಮೊದಲ ಆದ್ಯತೆಯಾಗಿಬಿಟ್ಟರೆ ಸಾಕು! ಇನ್ನೇನು ತಾನೇ ಬೇಕೂ ಗುರೂ!! ಈ ಬದಲಾವಣೆಗೆ ಕಾರಣವಾಗಿರೋ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು!!
ಕೊನೆಹನಿ: ಅಲ್ಲಾ... ಮೈಸೂರಿನಂತಹ ಪುಟ್ಟ ಊರಿನ ಕಾರ್ಯಕ್ರಮದ... ಕರ್ನಾಟಕ ಸರ್ಕಾರದ ಅಧೀನದ ಈ ಅಂತರ್ಜಾಲ ತಾಣದಲ್ಲಿ ಜಗತ್ತಿನ ೬೦ ಭಾಷೆಗಳಲ್ಲಿ ಮಾಹಿತಿ/ ಸೇವೆ ನೀಡುವುದು ಸಾಧ್ಯವಾಗುತ್ತಿದೆ ಎನ್ನುವುದಾದರೆ... ಭಾರತದೇಶದ ಆಡಳಿತ ವ್ಯವಸ್ಥೆಯಲ್ಲಿ ಬ್ಯಾಂಕು, ರೈಲು ಟಿಕೆಟ್, ಪಾಸ್ಪೋರ್ಟ್, ವಿಮೆ, ಆದಾಯಕರ ಇಲಾಖೆಯಂತಹ ತಾಣಗಳಲ್ಲಿ ಭಾರತದ ೨೩ ಭಾಷೆಗಳಲ್ಲಿ ಸೇವೆ ಕೊಡುವಂತೆ ವ್ಯವಸ್ಥೆ ರೂಪಿಸುವುದು ಕಷ್ಟಾ ಅನ್ನೋದನ್ನು ನಂಬಕ್ಕಾಗುತ್ತಾ ಗುರೂ? ಸಮಾನ ಗೌರವದ ಭಾಷಾನೀತಿ ಜಾರಿ ಮಾಡೋಕೆ ತಂತ್ರಜ್ಞಾನದ್ದಂತೂ ಸಹಕಾರವಿದೆ! ದೆಹಲಿಯ ಜನಕ್ಕೆ ಇದನ್ನು ಮನವರಿಕೆ ಮಾಡಿಕೊಡೋ ಹೊಣೆ ನಮ್ಮ ನಿಮ್ಮದು ಅಷ್ಟೇ!
1 ಅನಿಸಿಕೆ:
ಏನ್ಗುರು,ಕೊಂಡಿಗಾಗಿ ತುಂಬಾ ಧನ್ಯವಾದಗಳು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!