(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್ ಇ ಪೇಪರ್) |
೨೬.೦೫.೨೦೧೩ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಒಂದು ಬರಹ ಅಚ್ಚಾಗಿದೆ. ಇದು "ROUTES OF LABOUR" ಎನ್ನುವ ಹೆಸರಲ್ಲಿ ಬಂದಿದ್ದು ಇದರಲ್ಲಿ ಅತಿಯಾಗಿ ಗಮನ ಸೆಳೆಯುವ ಸುದ್ದಿಯೇನೆಂದರೆ ಬೆಂಗಳೂರಿನ ಪೊಲೀಸರು ಎದುರಿಸುತ್ತಿರುವ ಸವಾಲಿನದ್ದು! ಬೆಂಗಳೂರಿನ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಹೆಸರಾಗಿದ್ದ ಶ್ರೀ ಬಿ ಬಿ ಅಶೋಕ್ ಕುಮಾರ್ರವರು ಹೇಳಿದ್ದಾರೆಂದು ಪ್ರಕಟವಾಗಿರುವ ಈ ಅನಿಸಿಕೆ ನಿಜಕ್ಕೂ ಮಹತ್ವದ್ದಾಗಿದದ್ದು ನಾಡಿನಲ್ಲಿ ಬದಲಾಗಬೇಕಾದ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತಿದೆ.
ಅನಿಯಂತ್ರಿತ ವಲಸೆ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲು!
ನಗರದಲ್ಲಿ ನಡೆಯುವ ನೂರು ಅಪರಾಧ ಪ್ರಕರಣಗಳಲ್ಲಿ ನಲವತ್ತರಷ್ಟು ನಡೆಯುತ್ತಿರುವುದು ವಲಸಿಗರಿಂದ. ಕೊಲೆ, ಕೊಲೆಯತ್ನ, ದರೋಡೆ, ಕಳ್ಳತನವೇ ಮೊದಲಾದ ಅಪರಾಧಗಳನ್ನು ಎಸಗುವವರಲ್ಲಿ ವಲಸಿಗರದ್ದು ಮೇಲುಗೈ. ಪೊಲೀಸರು ಎದುರಿಸುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಈ ಅಪರಾಧಿಗಳನ್ನು ಪತ್ತೆಹಚ್ಚುವುದರಲ್ಲಿ ಇರುವ ತೊಡಕು. ಹೊರರಾಜ್ಯಗಳಿಂದ ಬಂದ ವಲಸಿಗರೇನಾದರೂ ಅಪರಾಧವೆಸಗಿ ತಮ್ಮ ತವರುರಾಜ್ಯಕ್ಕೆ ಓಡಿಹೋಗಿ ತಲೆಮರೆಸಿಕೊಂಡರೆಂದರೆ ಮುಗಿಯಿತು. ಆ ಅಪರಾಧಿಯ ಸುಳಿವು ಸಿಗುವುದೇ ಕಷ್ಟ, ಸಿಕ್ಕರೂ ಹಿಡಿದು ತರುವುದು ಸುಲಭವಲ್ಲಾ! ಹೀಗಾಗಿ ಕೊನೆಗಾಣದ ನೂರಾರು ಅಪರಾಧ ಪ್ರಕರಣಗಳು ನಮ್ಮಲ್ಲಿವೆ. ಈ ವರದಿಯಲ್ಲಿ ಬರೆಯಲಾಗಿರುವ ಮತ್ತೊಂದು ಕುತೂಹಲದ ವಿಷಯವೆಂದರೆ ನೇಪಾಳದ ವಲಸಿಗರದ್ದು! ದೇಶಭಕ್ತಿಗೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ನೇಪಾಳ ಮತ್ತು ಈಶಾನ್ಯರಾಜ್ಯದ ಜನರು ೧೯೭೦ರಿಂದೀಚಿಗೆ ದಕ್ಷಿಣ ಭಾರತಕ್ಕೆ ವಲಸೆ ಬರುತ್ತಿದ್ದು, ಅವರಲ್ಲಿ ಕೆಲವರು ಇಲ್ಲಿ ಅಪರಾಧ ಮಾಡಿ ತವರಿಗೆ ಮರಳಿ ಸಾಹುಕಾರರಾಗಿರುವುದು ಒಂದು ಟ್ರೆಂಡ್ ಆಗಿದೆಯಂತೆ. ಹಾಗಾಗಿ ಆ ನಾಡಿನ ಕ್ರಿಮಿನಲ್ಲುಗಳಿಗೆ ಬೆಂಗಳೂರು ಒಂದು ಅವಕಾಶಭರಿತ ನಗರವಾಗಿದೆಯಂತೆ! ಪೊಲೀಸರು ಹೇಳುವುದೇನೆಂದರೆ ಕೆಲವು ಕಿಡಿಗೇಡಿಗಳ ತಂಡಗಳು ಈ ತೆರನಾಗಿ ಅಪರಾಧವೆಸಗುತ್ತಿದ್ದು ಅಮಾಯಕ ವಲಸಿಗರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆಯಂತೆ. ಈ ವಲಸಿಗ ಅಮಾಯಕರು ತಮಗೆ ಬೆಂಗಳೂರಿನಲ್ಲಿ ಸಿಗುವ ಕಡಿಮೆ ಸಂಬಳದಿಂದ (ತಿಂಗಳಿಗೆ ಸುಮಾರು ರೂ. ೩೦೦೦/-) ನೊಂದುಕೊಂಡು ಇಂಥಾ ಅಪರಾಧಗಳನ್ನು ಎಸಗುತ್ತಿದ್ದಾರಂತೆ!!
ಇದೆಂಥಾ ಸಮರ್ಥನೆ?
ಪಾಪಾ! ಪೊಲೀಸರು ನಮ್ಮ ನಾಡಿಗೆ ಬರುವ ವಲಸಿಗರನ್ನು ಸಮರ್ಥಿಸುವಂತೆ ನೀಡಿರುವ ಕೆಲವು ಹೇಳಿಕೆಗಳು ಈ ವರದಿಯಲ್ಲಿದೆ. ೪೦%ರಷ್ಟು ಅಪರಾಧಗಳನ್ನು ಎಸಗುವ ಲೆಕ್ಕ ನೀಡುತ್ತಲೇ ಹೀಗೆ ಮಾಡಲು ಅವರಿಗೆ ಸರಿಯಾದ ಸಂಬಳವಿಲ್ಲಾ ಎನ್ನುವ, ಖದೀಮರ ಗ್ಯಾಂಗುಗಳ ಬೆದರಿಕೆಗೆ ಹೀಗೆ ಮಾಡುತ್ತಾರೆನ್ನುವ, ಅವರಿಗೆ ವಾಸಿಸಲು ಯೋಗ್ಯವಾದ ಮೂಲಭೂತ ಸೌಕರ್ಯಗಳಿಲ್ಲ ಎನ್ನುವ ಕಾರಣಗಳನ್ನು ಹೇಳುತ್ತಾರೆ. ಹೀಗೆ ಹೇಳುತ್ತಲೇ ಇಲ್ಲಿ ಅಪರಾಧವೆಸಗಿ ತವರಿಗೆ ಮರಳಿ ಸಾಹುಕಾರಿಕೆಯ ಜೀವನ ಸಾಗಿಸುವ ಟ್ರೆಂಡ್ ಬಗ್ಗೆಯೂ ಹೇಳುತ್ತಾರೆ. ತಮಾಶೆಯೆಂದರೆ ನೇಪಾಳದ ಹೆಸರನ್ನು ನೇರವಾಗಿ ಹೇಲುವವರಿಗೆ ಅಸ್ಸಾಂ, ಬಿಹಾರ ಮೊದಲಾದ ಹೆಸರನ್ನು ನೇರವಾಗಿ ಹೇಳಲು ಆಗಿಲ್ಲಾ! ಹಾಗೆ ಇವರಿಗೆ ಭಾರತದ ಇತರೆ ರಾಜ್ಯಗಳಿಂದ ಬಂದಿರುವ ವಲಸಿಗರ ಮೇಲೆ ಆರೋಪ ಹೊರಿಸಲು ಇನ್ನಾವುದೋ ಹೆದರಿಕೆ ಇರಬಹುದು! ಇರಲಿ, ವಾಸ್ತವವೆಂದರೆ ನಮ್ಮೂರಲ್ಲಿ ಅಪರಾಧವೆಸಗಿ ತಮ್ಮ ತವರು ರಾಜ್ಯಕ್ಕೆ ಓಡಿಹೋಗಬಲ್ಲ ಅವಕಾಶವಿರುವುದರಿಂದಾಗಿ ವಲಸಿಗರಿಂದ ಹೆಚ್ಚಿನ ಅಪರಾಧಗಳು ಆಗುತ್ತಿವೆಯೆನ್ನುವುದು ಮತ್ತು ಅಂತಹ ಅಪರಾಧಿಗಳನ್ನು ಹಿಡಿಯಲು ಕಷ್ಟವಾಗುತ್ತಿದೆ ಎನ್ನುವುದು.
ಸಮಸ್ಯೆಯ ಮೂಲವಿರುವುದು
ನಿಜವಾದ ಸಮಸ್ಯೆಯ ಮೂಲವಿರುವುದು ಭಾರತದ ಸಂವಿಧಾನದಲ್ಲಿ. ಕಾನೂನು ಸುವ್ಯವಸ್ಥೆಗಳನ್ನು ರಾಜ್ಯಸರ್ಕಾರಗಳ ಹೊಣೆಗಾರಿಕೆಯಾಗಿಸಿರುವ ವ್ಯವಸ್ಥೆ ಅಂತಹ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಅನಿಯಂತ್ರಿತ ವಲಸೆಗೆ ತಾನೇ ಉತ್ತೇಜನ ನೀಡುತ್ತದೆ. ಹೊಣೆ ಮಾತ್ರಾ ಹೊರಿಸಿ, ಅದರ ಜಾರಿಯನ್ನು ತೊಡಕಾಗಿಸುವಂಥಾ ನೀತಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿರುವುದು ಸೋಜಿಗದ ವಿಷಯವಾಗಿದೆ. ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕದೆ ಇದ್ದರೆ ಈ ಸಮಸ್ಯೆಗೆ ಕೊನೆಯಿಲ್ಲಾ. ನಮ್ಮೂರಿಗೆ ಬರುವವರ ಮೇಲೆ ನಮಗೆ ಯಾವ ನಿಯಂತ್ರಣವೂ ಇಲ್ಲಾ ಎನ್ನುವುದೇ ಹಾಸ್ಯಾಸ್ಪದವಾದುದಾಗಿದೆ. ಇಲ್ಲಿಗೆ ಬರುವವರು ಯಾರು? ಅವರ ಪೂರ್ವಾಪರವೇನು? ಅವರ ಮೂಲನೆಲೆಯೇನು? ಹಿನ್ನೆಲೆಯೇನು? ಇದ್ಯಾವುದನ್ನೂ ಕೇಳುವ ಹಕ್ಕು, ದಾಖಲಿಸುವ ವ್ಯವಸ್ಥೆ ನಮ್ಮಲ್ಲಿಲ್ಲಾ! ಹೀಗಾಗಿ ಹುಚ್ಚುಹೊಳೆಯಂತೆ ಹರಿದು ಬರುತ್ತಿರುವ ವಲಸೆ, ಯಾವುದೇ ಒಂದು ನಾಡಿನ ಶಾಂತಿ ಸುವ್ಯವಸ್ಥೆಗೆ ತೊಡಕಾದುದಾಗಿದೆ. ಇಂತಹ ಅನಿಯಂತ್ರಿತ ವಲಸೆಯ ಕಾರಣದಿಂದಲೇ ನಮ್ಮ ನಾಡಿನಲ್ಲಿಯೂ ಉಗ್ರವಾದ, ಉಗ್ರಗಾಮಿ ಚಟುವಟಿಕೆಗಳು ಎಗ್ಗುಸಿಗ್ಗಿಲ್ಲದೆ ನಡೆಯಲು ಸಾಧ್ಯವಾಗುವಂತಾಗಿದೆ. ಇದಕ್ಕೆ ಕೊನೆಹಾಡಬೇಕೆಂದರೆ, ನಮ್ಮ ನಾಡಿನ ನೆಮ್ಮದಿ ಉಳಿಯಬೇಕೆಂದರೆ "ಅನಿಯಂತ್ರಿತ ಅಂತರರಾಜ್ಯ ವಲಸೆ ನಿಯಂತ್ರಣ"ಕ್ಕೊಂದು ಕಾಯ್ದೆ ಬರಲೇಬೇಕು!
3 ಅನಿಸಿಕೆಗಳು:
ನೋಡಿ ... ನೀವು ಹೇಳ್ತಿರೋದು ಸರಿ .. ಆದರೆ ಅದರಲ್ಲಿ ಕೆಲವು ತಪ್ಪುಗಳೂ ಸಹ ಇದೆ.
೧. ಕಡಮೆ ಕೂಲಿಗೆ ಕೆಲಸಗಾರರು ಬೇಕು ಅಂದರೆ ಅವರು ವಲಸಿಗರೂ ಮತ್ತು ಕಡಮೆ ನೈತಿಕತೆ-ಇರೋರು, ತುಸುಗಾಸಿಗೆ ಏನು ಮಾಡಲೂ ಹೆಸದವರೇ ಆಗಿರಬೇಕು ಸಾಮಾನ್ಯ.
೨. ಈ ವಲಸಿಗರೂ ನಮಗೆ ಬೇಕಾದ ರಸ್ತೆ, ಕಟ್ಟಡ, ಸ್ವಚ್ಚತೆ ಮುಂತಾದವನ್ನು ಅಗ್ಗವಾಗಿ ಮಾಡುತ್ತಿದ್ದಾರೆ.
ನಮಗೆ ಅವರು ಬೇಕು.
ಆದರೆ ಅವರ ಮೇಲೆ ನಿಗಾ ಇರುವ, ಅವರನ್ನು ಕಂಟ್ರೋಲ್ ಮಾಡುವ ಸಶಕ್ತ ಪೋಲಿಸ್ ಬೇಕು, ಅಷ್ಟೇ .
ಇಲ್ಲಿ ಒಂದೆರಡು ಮಾತುಗಳನ್ನು ಹೇಳಬಯಸುತ್ತೇನೆ. ವಲಸೆ ಬೇಡವೆನ್ನುವುದು ನನ್ನ ನಿಲುವಲ್ಲಾ!ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕು ಎನ್ನುವುದರ ಅರ್ಥವೇ ವಲಸೆ ಇರುವುದು ಸಹಜ ಮತ್ತು ಅದು ನಿಯಂತ್ರಣದಲ್ಲಿರಬೇಕು ಎನ್ನುವುದು. ಅದು ಯಾವುದೇ ನಾಡಾದರೂ ವಲಸಿಗೆ ಕಡಿಮೆ ಕೂಲಿಯ ಹೆಚ್ಚು ಕೆಲಸ ಮಾಡುವವನೇ ಆಗಿರುತ್ತಾನೆ. ಅಮೇರಿಕ, ದುಬೈ, ಸಿಂಗಪುರಗಳಲ್ಲಿರುವ ಕನ್ನಡಿಗರನ್ನು ನೋಡಿದರೂ... ಈ ಊರಿನ ಬಿಹಾರಿಗಳನ್ನು ನೋಡಿದರೂ ಇದನ್ನೇ ನಾವು ಸಮಾನವಾಗಿ ಕಾಣಬಹುದಾದದ್ದು! ಇನ್ನು ಕಡಿಮೆ ಕೂಲಿಯ ಕಾರಣದಿಂದ ವಲಸೆ ಬೇಕು ಎನ್ನುವುದರ ಮತ್ತು ಇಂಥಾ ವಲಸೆಯಿಂದ ನಾಡಿನ ಜನರ ಭಾಶೆ, ಬದುಕು, ಕೆಲಸದ ಅವಕಾಶಗಳ ಮೇಲಾಗುವ ಕೆಟ್ಟ ಪರಿಣಾಮಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎನ್ನುವುದು ನನ್ನ ನಿಲುವು.
ಈ ವಲಸಿಗರೂ ನಮಗೆ ಬೇಕಾದ ರಸ್ತೆ, ಕಟ್ಟಡ, ಸ್ವಚ್ಚತೆ ಮುಂತಾದವನ್ನು ಅಗ್ಗವಾಗಿ ಮಾಡುತ್ತಿದ್ದಾರೆ.
ನಮಗೆ ಅವರು ಬೇಕು. !!!
ಅಗ್ಗವಾಗಿ ಸಿಗುತ್ತಾರೆ ಅಂತ ಅವರನ್ನು ತಲೆಮೇಲೆ ಎಳೆದುಕೊಂಡು ನಮ್ಮ ಕೂಲಿಗಳ ಉಪವಾಸಕ್ಕೆ ಕಾರಣ ಆಗಬೇಕ, ಮತ್ತೆ ನೀವೆ ಹೇಳುವಂತೆ ಅವರನ್ನು ಕಂಟ್ರೋಲ್ ಮಾಡುವಂತ ಅನಗತ್ಯ ಕೆಲಸ ಬೇರೆ ಅದಕ್ಕೆ ನಿಮ್ಮದೆ ಟ್ಯಾಕ್ಸ್ ಹಣ ಖರ್ಚಾಗಲ್ವೆ ಸಾರ್, ಇದೆಲ್ಲ ಮಾಡೊ ಬದಲಿಗೆ ಸರಿಯಾದ ಕಾನೂನಿನ ಮೂಲಕ ಅನಿಯಂತ್ರಿತ ವಲಸೆ ನಿಯಂತ್ರಿಸಿ ರಾಜ್ಯದಲ್ಲಿ ಶಾಂತಿ ನೆಮ್ಮದಿ ಕಾಪಾಡೋದು ಮುಖ್ಯ ಅನ್ನಿಸಲ್ವೆ, ನಮಗೆ ಈ ಕಾಂಕ್ರೀಟು ಕಾಡು ಇಲ್ಲದಿದ್ದರು ಪರವಾಗಿಲ್ಲ, ಮೊದಲಿಗೆ ಬೇಕಾಗಿರುವುದು ನೆಮ್ಮದಿ.
ಹಾಗೆ ಹಣದ ಬಗ್ಗೆ ಮಾತನಾಡ ಹೊರಟರೆ, ಅದರ ಇನ್ನೊಂದು ಮುಖ, ಇತಂಹ ಶ್ರೀಮಂತ ವಲಸೆಗಾರರಿಂದ ಬೆಂಗಳೂರಿನಲ್ಲಿ ಎಲ್ಲವು ಕಾಸ್ಟ್ಲಿ ಆಗಿರುವುದು ಅಲ್ಲವೆ, ಇಲ್ಲದಿದ್ದರೆ ನಗರದ ಮದ್ಯದಲ್ಲಿ ಚದುರಕ್ಕೆ ೧೦-೧೫ ಸಾವಿರ ಹಣವೆಂದರೆ ಬರಿ ೩೦/೪೦ ಸೈಟಿಗೆ ೪೦/೫೦ ಲಕ್ಷ ಕೊಡಬೇಕೆಂದರೆ ಇಲ್ಲಿಯವರಿಗೆ ಸಾದ್ಯವೆ ಮದ್ಯಮ ವರ್ಗದವರೆಲ್ಲ ಬೆಂಗಳೂರು ತೊರೆದು ದೂರ ಸರಿಯುತ್ತಿದ್ದರೆ ಹೊರವಲಯಕ್ಕೆ. ಇಲ್ಲಿ ವಲಸೆ ಬಂದ ಹಣವಂತರು ಹಾಗು ವಲಸೆ ಕೂಲಿಗಳು ಮಾತ್ರ ಇರುತ್ತಿದ್ದಾರೆ ಅಷ್ಟೆ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!