ಹಿಂದೆ ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಇರಲಿಲ್ಲ ಅಂತ ಯಾವನ್ ಹೇಳಿದ್ದು?

ಕನ್ನಡದ ಪ್ರಾಚೀನ ಕೃತಿಗಳಲ್ಲಿ ವಿಜ್ಞಾನ ಸಾಹಿತ್ಯ ಹೇರಳವಾಗಿತ್ತು ಅಂತ 10ನೇ ಅಕ್ಟೋಬರ್ ವಿ.ಕ. ದಲ್ಲಿ ಬಂದಿರುವ ಸುದ್ದಿ ಕನ್ನಡಿಗರೆಲ್ಲರಿಗೂ ಕಣ್ತೆರೆಸುವಂಥದ್ದು ಗುರು. ಭಾರತದಲ್ಲಿ ಹಿಂದೆ ಇದ್ದ ಸಾಹಿತ್ಯವೆಲ್ಲಾ ಬರೀ ಸಂಸ್ಕೃತದ್ದು, ಅದರಲ್ಲೂ ವಿಜ್ಞಾನ ಅಂದ್ರೆ ಬರೀ ಸಂಸ್ಕೃತದಲ್ಲಿ ಮಾತ್ರ ಇದ್ದಿದ್ದು ಅನ್ಕೊಂಡಿರೋರ ನಂಬಿಕೆಗೆ ವಿ.ಕ.ದ ಆ ಒಂದು ವರದಿ ನೀರೆರಚಿದೆ ಗುರು! ಕನ್ನಡದಲ್ಲಿ ಎಲ್ಲವೂ ಚೆನ್ನಾಗಿ ನಡ್ಕೊಂಡು ಹೋಗ್ತಿದ್ದಿದ್ದು ಹೇಗೆ ಹದಗೆಡ್ತು, ಇವತ್ತಿನ ಇಂಗ್ಲೀಷ್ ಹುಚ್ಚು ಮುಂದುವರೆದರೆ ನಾವು ಯಾವ ಅದ್ಭುತ ಕೊಡುಗೆಯನ್ನ ನಮ್ಮ ಮುಂದಿನ ಪೀಳಿಗೆಯೋರಿಗೆ ಕೊಟ್ಟು ಹೋಗ್ತೀವಿ ಅನ್ನೋದನ್ನ ಸ್ವಲ್ಪ ನೋಡೋಣ.

ಯಾವನ್ ಹೇಳಿದ್ದು ವೈಜ್ಞಾನಿಕ ಸಾಹಿತ್ಯ ಬರೀ ಸಂಸ್ಕೃತದಲ್ಲಿತ್ತು ಅಂತ?

ವಿಜಯನಗರದ ಅರಸರ ಆಡಳಿತದವರೆಗೆ ಕನ್ನಡದಲ್ಲಿ ಲಭ್ಯವಿದ್ದ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಗ್ರಂಥಗಳ ಬಗ್ಗೆ ಉಲ್ಲೇಖ ಕಂಡು ಬರುತ್ತದೆ. ಇದು ಬಹಳ ಸಂತೋಷದ ಸಂಗತಿ. ಹಿಂದೆ ಬರೀ ಸಂಸ್ಕೃತದಲ್ಲಿ ಮಾತ್ರ ವೈಜ್ಞಾನಿಕ ಬರಹಗಳಿದ್ದವು ಎಂದುಕೊಂಡಿದ್ದೆವು! ಆದರೆ ಕನ್ನಡದಲ್ಲೂ ಇವೆಲ್ಲವೂ ಇದ್ದವು ಎಂದು ಸಾರುವ ಈ ಕೆಳಗಿನ ದಾಖಲೆಗಳು ಕನ್ನಡಿಗನ ಕೀಳರಿಮೆಯನ್ನು ಕಿತ್ತೊಗೆಯುವ ಪ್ರಬಲ ಅಸ್ತ್ರವಾಗಬೇಕಿದೆ. ಈ ದಾಖಲೆಗಳು ಕನ್ನಡ ಕೇವಲ ರೆಕ್ಕೆ-ಪುಕ್ಕ ಇರದ ಭಾಷೆ ಆಗಿರಲಿಲ್ಲ, ತಲತಲಾಂತರಗಳಿಂದ ಕನ್ನಡಿಗನ ಬುದ್ಧಿಮತ್ತೆಯಿಂದ, ಪ್ರಖರವಾಗಿ ಕಂಗೊಳಿಸುತ್ತಿದ್ದಂತಹ, ಬಲವಾಗಿ-ಗಟ್ಟಿಯಾಗಿ ನೆಲೆಯೂರಿದ್ದ ಭಾಷೆ-ಸಂಸ್ಕೃತಿ ಅಂತ ಸಾಬೀತು ಮಾಡತ್ವೆ ಗುರು!

ಆ ಬರಹ ತಿಳಿಸಿಕೊಡೋ ಹಾಗೆ ಅಂದು ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಕಂಡು ಬರುವ ದಾಖಲೆಗಳಲ್ಲಿ ಕೆಲವು ಉದಾಹರಣೆಗಳು ಹೀಗಿವೆ:
  • ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಗಜಶಾಸ್ತ್ರ.
  • ಕ್ರಿ.ಶ.942-1025ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಲೋಕೋಪಕಾರ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ
  • ಕ್ರಿ.ಶ. 1040 ರಲ್ಲಿ ಚಂದ್ರರಾಜನೆಂಬುವವರಿಂದ ಮದನತಿಲಕವೆಂಬ ಕಾಮಶಾಸ್ತ್ರದ ಪುಸ್ತಕವು ರಚಿತವಾಗಿದೆ.
  • ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ ಎಂಬುವವರು ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ರಚಿಸಿದ್ದರು.
  • ಕ್ರಿ.ಶ. 1120 ರ ವೇಳೆಗೆ ರಾಜಾದಿತ್ಯರು ಗಣಿತ ಗ್ರಂಥಗಳನ್ನು ರಚಿಸಿದ್ದರು. ಇದು ಕೇವಲ ಸಾಮಾನ್ಯ ಗಣಿತವಾಗಿರದೆ, ಶ್ರೇಣಿಗಳ ಗಣಿತವಾಗಿತ್ತು ಎನ್ನುವುದು ಗಮನಾರ್ಹವಾದದ್ದು.
  • ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ ಗ್ರಂಥ ಕನ್ನಡದಲ್ಲಿ ದೊರಕಿರುವ ಮೊದಲ ವೈದ್ಯ ಶಾಸ್ತ್ರ ಗ್ರಂಥವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಕ್ರಿ.ಶ. 1300 ರಲ್ಲಿ ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ ಪುಸ್ತಕದಲ್ಲಿ ರಟ್ಟಕವಿ ಎಂಬ ಕೃಷಿ ವಿಜ್ಞಾನಿ ಹಿಡಿದಿಟ್ಟಿದ್ದಾರೆ.

ಕನ್ನಡದ ಜಾಗ ಇಂಗ್ಲೀಷ್ ತೊಗೊಂಡಾಗ ಕನ್ನಡಿಗನಿಗೆ ಬಡಿದ ಮಂಕು

ಒಳ್ಳೊಳ್ಳೆ ಕನ್ನಡದ ರಾಜಮನತನಗಳು ನಮ್ಮನ್ನು ಆಳುತ್ತಿದ್ದಾಗ ಈ ಕನ್ನಡದ ವೈಜ್ಞಾನಿಕ ಸಾಹಿತ್ಯ ಹೊರಬರುತ್ತಿತ್ತು ಎಂದು ನಾವು ಕಂಡ್ಕೋಬಹುದಾಗಿದೆ. ಅಂದಿನ ಜ್ಞಾನ-ತಂತ್ರಜ್ಞಾನದ ಉದಾಹರಣೆಯನ್ನು ಇಂದು ನಮಗೆ ಲಭ್ಯವಿರುವ ಅಂದಿನ ಕಾಲದ ಸ್ಮಾರಕಗಳಾದ ವಿಜಯನಗರದ ಹಂಪೆ, ಗಂಗರ ಕಾಲದ ತಲಕಾಡಿನ ದೇವಸ್ಥಾನ, ಹೊಯ್ಸಳರ ಬೇಲೂರು-ಹಳೇಬೀಡುಗಳಲ್ಲಿನ ಶಿಲ್ಪಕಲೆ ಮುಂತಾದವುಗಳ ಮೂಲಕ ಕಾಣಬಹುದಾಗಿದೆ. ನಮ್ಮ ಮೇಲಿನ ಮೊಗಲರ, ಬ್ರಿಟೀಷರ ಆಕ್ರಮಣ ನಂತರದಲ್ಲಿ, ತನ್ನ ಭಾಷೆಯಲ್ಲಿ ಕಲಿಯುತ್ತ ಬುದ್ಧಿವಂತರಾಗುತ್ತಿದ್ದ ಕನ್ನಡಿಗನನ್ನು ಬಗ್ಗು ಬಡಿಯಲು ವಿದ್ಯಾಭ್ಯಾಸದಲ್ಲಿ ಇಂಗ್ಲೀಷ್ ಹೇರಿಕೆ ಮಾಡಿ ನಮ್ಮನ್ನು ಅವರ ಗುಲಾಮರಾಗಿಸಿದ್ದ ತಂತ್ರಗಾರಿಕೆ ಕನ್ನಡಿಗನಿಗೆ ತನ್ನ ಭಾಷೆಯಲ್ಲಿ ವಿಜ್ಞಾನ-ತಂತ್ರಜ್ಞಾನದ ನೇರ ಸಂಶೋಧನೆಗೆ ಹೊಡೆತ ಬಿದ್ದು, ಕನ್ನಡ-ಕನ್ನಡಿಗನ ಪತನಕ್ಕೆ ನಾಂದಿಯಾಯಿತು. ವಿಪರ್ಯಾಸವೆಂದರೆ ಈ ರೀತಿಯ ಇನ್ನೂ ಹಲವಾರು ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಉಪಯುಕ್ತ ಗ್ರಂಥಗಳು ಅಂದೇ ನಮ್ಮ ಹಿರಿಯರು ನಮಗೆ ಕನ್ನಡದಲ್ಲಿ ಲಭ್ಯವಾಗಿಸಿದ್ದನ್ನು, ಸ್ವಾತಂತ್ರ್ಯಾನಂತರವೂ ನಾವೆಲ್ಲರೂ ಮರೆತು, ಕಣ್ಣು ಮುಚ್ಚಿ, ಈಗಿನ ನಮ್ಮ ಎಲ್ಲಾ ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ತಿಳಿಯಲು-ಕಲಿಯಲು ಇಂಗ್ಲೀಷನ್ನು ಅಪ್ಪಿಕೊಂಡಿರುವುದು.

ಇವತ್ತು ವಿಜ್ಞಾನವನ್ನ ಕನ್ನಡಕ್ಕೆ ತರದಿದ್ದರೆ ನಾವು ಬಿಟ್ಟುಹೋಗೋದು ಬರೀ ಸೊನ್ನೆ!

ಎಷ್ಟೋ ಜನ ಇವತ್ತಿಗೂ ಕನ್ನಡಾಂದ್ರೆ ಬರೀ ನಾಟಕ, ಕವಿತೆ, ಕಾದಂಬರಿ - ಹೀಗೆ ಬರೀ ಜುಟ್ಟಿಗೆ ಮಲ್ಲಿಗೆ ಹೂ ಅಂತ ಮಾತ್ರ ತಿಳ್ಕೊಂಡಿದಾರೆ. ಆದರೆ ಇದು ನಮ್ಮ ಏಳ್ಗೆಗೆ ಪೂರಕವಲ್ಲ. ಹೊಟ್ಟೆಗೆ ಹಿಟ್ಟಿಲ್ಲದ ಕನ್ನಡಿಗನಿಗೆ ಈ ಮಲ್ಲಿಗೆ ಹೂ ಇದ್ರೇನು ಬಿಟ್ರೇನು? ಕನ್ನಡಿಗರು ನಿಜವಾಗಲೂ ಉದ್ಧಾರವಾಗಬೇಕಾದ್ರೆ ವಿಜ್ಞಾನ-ತಂತ್ರಜ್ಞಾನಗಳು ಕನ್ನಡಕ್ಕೆ ಬರಬೇಕು. ಹೊಸ ಹೊಸ ಸಂಶೋಧನೆಗಳು ನೇರವಾಗಿ ಕನ್ನಡದಲ್ಲೇ ಆಗಬೇಕು. ವಿಜ್ಞಾನ-ತಂತ್ರಜ್ಞಾನಗಳಿಗೆ ಇಂಗ್ಲೀಷೇ ಸಾಧನ ಅಂದುಕೊಂಡಿರೋದು ನಮ್ಮ ಕೀಳರಿಮೆಯೂ ಹೌದು, ನಮ್ಮ ಏಳ್ಗೆಗೆ ಮಾರಕವೂ ಹೌದು.

ಹಿಂದೆ ವಿಜಯನಗರದ ಅರಸರ ಕಾಲದಲ್ಲಿ, ಹೊಯ್ಸಳರ ಕಾಲದಲ್ಲಿ, ಚಾಲುಕ್ಯರ ಕಾಲದಲ್ಲಿ... ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಸಾಹಿತ್ಯ ಇಲ್ಲದೆ ಹೋಗಿದ್ದರೆ ಯಾವ ಹಂಪೆಯೂ ಇರುತ್ತಿರಲಿಲ್ಲ, ಯಾವ ಬೇಲೂರು-ಹಳೆಬೀಡುಗಳೂ ಇರುತ್ತಿರಲಿಲ್ಲ. ನಿಜಕ್ಕೂ ಒಂದು ದೊಡ್ಡ ಸೊನ್ನೆಯೇ ನಮ್ಮ ಹಿಂದಿನವರು ನಮಗೆ ಬಿಟ್ಟು ಹೋಗುತ್ತಿದ್ದರು.

ಇನ್ನು ಮುಂದೆಯೂ ನಾವೇನಾದರೂ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ್ನ ಕನ್ನಡದಲ್ಲಿ ತರದೇ ಹೋದರೆ, ಕರ್ನಾಟಕದ ಮೂಲೆಮೂಲೆಗಳಲ್ಲಿನ ಪ್ರತಿಭೆಯನ್ನು ಇಂಗ್ಲೀಷೆಂಬ ಕತ್ತಿಯಿಂದ ಮೊಗ್ಗಾಗಿರುವಾಗಲೇ ಕೊಲ್ಲುವುದನ್ನು ನಿಲ್ಲಿಸದೇ ಹೋದರೆ ಇವತ್ತಿಂದ 300-400 ವರ್ಷ ಆದಮೇಲೆ ನಾವು ಯಾವ ಅದ್ಭುತ ಸಾಧನೆಗಳ್ನ ಕನ್ನಡ ವಂಶದಲ್ಲಿ ಹುಟ್ಟಿದೋರಿಗೆ ಬಿಟ್ಟು ಹೋಗ್ತೀವಿ ಗೊತ್ತಾ? ಬರೀ ಒಂದು ದೊಡ್ಡ ಸೊನ್ನೆ!

10 ಅನಿಸಿಕೆಗಳು:

Amarnath Shivashankar ಅಂತಾರೆ...

ಲೇಖನ ಸೊಗಸಾಗಿದೆ..
ಕನ್ನಡೀಗರ ಕೀಳರಿಮೆಯನ್ನು ಕಿತ್ತೊಗೆಯುವಂತಿದೆ..
ಏನ್ಗುರುಗಳೇ, ಧನ್ಯವಾದಗಳು

ಭಾವಜೀವಿ... ಅಂತಾರೆ...

ಉತ್ಕೃಷ್ಟವಾದ ಲೇಖನ!
ಅಂದ ಹಾಗೆ ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಯ ಕನ್ನಡ ಸಂಘವು ಸುಮಾರು ೩೩ ವರ್ಷಗಳಿಂದ "ಕಣಾದ" ಎಂಬ ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಲೇಖನಗಳನ್ನು ಹೊಂದಿದ ವಾರ್ಷಿಕ ಪತ್ರಿಕೆಯನ್ನು ಪ್ರಕಟಿಸುತ್ತಾ ಬಂದಿದೆ. ಇದರಲ್ಲಿ ಖ್ಯಾತನಾಮರ, ವಿಜ್ಞಾನಿಗಳ ಲೇಖನಗಳನ್ನು ಮುದ್ರಿಸುವುದರೊಂದಿಗೆ, ಪ್ರೌಢಶಾಲೆ ಹಾಗು ಕಾಲೇಜು ವಿದ್ಯಾರ್ಥಿಗಳ ಲೇಖನಗಳನ್ನೂ ಸಹ ಪ್ರಕಟಿಸಲಾಗುತ್ತದೆ. ಆದರೆ ಪುನಃ ಇಲ್ಲಿಯೂ ನಮ್ಮ ಕೀಳರಿಮೆ ಹಾಗು ಅಸಡ್ಡೆಯಿಂದಾಗಿ ಇದನ್ನು ಕೇವಲ ಕನ್ನಡ ಶಾಲೆಗಳು ಮಾತ್ರ ಖರೀದಿಸುತ್ತವೆ. ನಮ್ಮ ಪ್ರಜ್ಞಾವಂತ ಕನ್ನಡಿಗರು ಇದನ್ನು ಕೊಂಡು ಓದುವ ಆಸಕ್ತಿ ಬೆಳಸಿಕೊಂಡರೆ ಕನ್ನಡದಲ್ಲಿ ಇನ್ನಷ್ಟು ವಿಜ್ಞಾನ ಸಾಹಿತ್ಯಗಳು ಹೊರಬಂದಾವು.

Unknown ಅಂತಾರೆ...

ಕನ್ನಡದಲ್ಲಿ ನ್ಯಾಯಾಂಗ ಶಾಸ್ತ್ರದ ಬಗ್ಗೆಯೂ ಒಂದು ಗ್ರಂಥ ಇದೆ ಅಂತ, ಪ್ರಜಾವಾಣಿಯಲ್ಲಿ ಓದಿದ ನೆನಪು. ಒಳ್ಳೆಯ ಮಾಹಿತಿ ಇದು. ಎಷ್ಟೋ ವಿಚಾರ ನನಗೆ ತಿಳಿದಿರಲಿಲ್ಲ.

ನನ್ನಿ.

Anonymous ಅಂತಾರೆ...

chennagideree..

Anonymous ಅಂತಾರೆ...

ತುಂಬಾ ಒಳ್ಳೆ ಬರಹ !

ಕನ್ನಡದಲ್ಲಿ ಎಲ್ಲ ವಿಷಯಗಳು ಬರಬೇಕು, ಆಗ್ಲೇ ನಮ್ಮ ಹುಡುಗರ ಬುದ್ಧಿ ಚುರ್ಕಾಗಿ ಓಡೋದು. ಅವರ ಬುದ್ಧಿ ಚುರುಕಾಗಿ ಓಡಿದ್ರೆ ಅವರಿಂದ ಏನಾದ್ರು ಹೊಸ ಅನ್ವೇಷಣೆ ಆಗೋದು. ಗುರುಗಳೇ, ನಿಮ್ಮ ಜೊತೆ ನಾವು ಇದ್ದಿವಿ. great going ! way to go !

Anonymous ಅಂತಾರೆ...

ಒಳ್ಳೆಯ ಬರಹ

ನನ್ನಿ

Anonymous ಅಂತಾರೆ...

Navella kannadigaru, e naadige yenadru kottu, kannadigara chaturya vanna thorisabeku.

Yenanthira gurugale

Anonymous ಅಂತಾರೆ...

ಗುರುಗಳೆ, ಇದೊಂದು ಕಣ್ತೆರೆಸುವ ಬರಹ.

@JOEY, ಚಾಲುಕ್ಯರ ಕಾಲದ ವಿಜ್ಞಾನೇಶ್ವರ "ಮಿತಾಕ್ಷರ" ಎಂಬ ಗ್ರಂಥವನ್ನು ನ್ಯಾಯಶಾಸ್ತ್ರದ ಬಗ್ಗೆ ರಚಿಸಿದ. ಅವನ ನೆನಪಿನಲ್ಲಿ ಇಂದು ಕಲಬುರ್ಗಿ ವಿ.ವಿ.ಯ ಕಾನೂನು ವಿಭಾಗದಲ್ಲಿ ಪೀಠವೊಂದು ತಲೆಯೆತ್ತಲಿದೆ. ಈ ಗ್ರಂಥ ಸಂಸ್ಕೃತದಲ್ಲಿತ್ತು. ಇಂದಿನ Hindu Law ಮಿತಾಕ್ಷರದ ಅನೇಕ ಅಂಶಗಳನ್ನೊಳಗೊಂಡಿದೆ.

http://en.wikipedia.org/wiki/Mitakshara
http://www.hindu.com/edu/2007/07/23/stories/2007072350450200.htm
http://en.wikipedia.org/wiki/Vijnaneshwara
http://www.hindu.com/br/2005/08/30/stories/2005083000201501.htm

Anonymous ಅಂತಾರೆ...

hosatu ennuva maasa patrike kooda ide. namage eshto gottiruvadilla ashte. ee lekhanakke sambanda patta haage innashtu prachara sigbeku gurugale !! - karuNaa

ಗಜೇಂದ್ರಕುಮಾರ.ಎಂ ಅಂತಾರೆ...

ಗಜೇಂದ್ರಕುಮಾರ.ಎಂ
ಮಳೆ ನೀರಿನ ಬಗ್ಗೆ,ಕೃಷಿಯ ಬಗ್ಗೆ,ನೀರಾವರಿಯ ಬಗ್ಗೆ,
ನಮ್ಮ ಪೂರ್ವಿಕರು ಪುಸ್ತಕ ಬರೆದಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails