ಬಂಗಾರಪ್ಪನೋರು ಬಂಗಾರದಂಥಾ ಕೆಲಸ ಮಾಡಬೋದಿತ್ತು!

ಮೊನ್ನೆ ತಾನೆ ನಾಡಿನ ಮಾಜಿ ಮುಖ್ಯಮಂತ್ರಿಗಳಾದ ಸಾರೆಕೊಪ್ಪದ ಶ್ರೀ ಬಂಗಾರಪ್ಪನೋರು ಎಪ್ಪತ್ತೈದು ವರ್ಷ ಪೂರೈಸಿದ್ರು ಅಂತ ದೊಡ್ದ ಸಮಾರಂಭ ನಡೀತು. ಮಾನ್ಯ ಬಂಗಾರಪ್ಪನವರಿಗೆ ನಮ್ಮ ಅಭಿನಂದನೆಗಳು. ಎಲ್ಲಾ ಸರಿ, ಆದ್ರೆ ಔರು ತಮ್ಮದೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ನಮ್ಮ ನಾಡಿಗೆ ನಿಜವಾದ ನಾಯಕತ್ವ ಕೊಡೋ ಬದ್ಲು ಕೆಲಸಕ್ಕೆ ಬಾರದ, ನಾಡಿಗೆ ಒಂಚೂರೂ ಸಂಬಂಧವಿಲ್ಲದ ಸಮಾಜವಾದಿ ಪಕ್ಷಾನ ಸೇರಿರೋದು ಸರೀನಾ ಗುರು?

ಒಂದು ಕನ್ನಡಪರ ಪಕ್ಷ ಕಟ್ಟೋ ಶಕ್ತಿ ಬಂಗಾರಪ್ನೋರಿಗೆ ಇಲ್ವಾ?

ಬಂಗಾರಪ್ಪನೋರ ಹೋರಾಟದ ಬದುಕು, ಅವರ ಅಧಿಕಾರದ ದಿನಗಳ ಸಾಧನೆಗಳು, ಕಾವೇರಿ ನದಿ ನೀರು ಹಂಚಿಕೆಗೆ ವಿಷಯದಲ್ಲಿ ಅವರ ಸರ್ಕಾರ ತೊಗೊಂಡ ದಿಟ್ಟತನದ ನಿಲುವುಗಳು, ಹೊರಡಿಸಿದ ಸುಗ್ರೀವಾಜ್ಞೆ; ಔರು ಇದ್ದು, ಕಟ್ಟಿ, ಬೆಳೆಸಿದ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಾರ್ಟಿ ಅನ್ನೋ ರಾಜಕೀಯ ಪಕ್ಷಗಳು; 1967ರಿಂದ 1996ರ ತನಕ ಸತತವಾಗಿ ಶಾಸಕರಾಗಿದ್ದು; ಲೋಕಸಭಾ ಸದಸ್ಯರಾಗಿರುವ ಅನುಭವಗಳು; ಇವೆಲ್ಲದರ ಜೊತೆಗೆ ಬಂಗಾರಪ್ನೋರಿಗೆ ಮೈತುಂಬಿ ಬಂದಿರೋ ಕೆಚ್ಚು, ಸಾಮರ್ಥ್ಯಗಳಿಗೆ ತಾವೇ ಒಂದು ರಾಜಕೀಯ ಪಕ್ಷ ಕಟ್ಟೋದು ಕಷ್ಟವೇನು ಆಗ್ತಿರಲಿಲ್ಲ ಗುರು!

ಕನ್ನಡಿಗರಿಗೆ ಸಂಬಂಧವಿಲ್ಲದ ಸಮಾಜವಾದಿ ಪಕ್ಷ


ಸಮಾಜವಾದಿ ಪಕ್ಷ ಯಾವುದೋ ದೂರದಲ್ಲಿನ ಮತ್ತು ಕನ್ನಡಿಗರಿಗೆ ಸಂಬಂಧ ಇಲ್ಲದ ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷ ಗುರು! ಉತ್ತರ ಪ್ರದೇಶದ ಈ ಪಕ್ಷಕ್ಕೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇರಕ್ಕೆ ಸಾಧ್ಯ? ಕನ್ನಡನಾಡಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳಿಗೆ ಉತ್ತರಪ್ರದೇಶದ ಇಲ್ಲವೇ ಅಲ್ಲೀ ಜನರ ಒಪ್ಪಿಗೆ ತೊಗೊಳೋ ಮೂರ್ಖತನವಾದರೂ ಯಾಕೆ? ಉತ್ತರಪ್ರದೇಶದ ಹೈಕಮ್ಯಾಂಡಿಗೆ ತಲೆಬಾಗಿಸಿ ನಡುದ್ರೆ ಅದು ನಮ್ಮನ್ನು ನಾವು ಆಳ್ಕೊಂಡಂಗಾ? ಖಂಡಿತ ಇಲ್ಲ ಗುರು! ಹಿಂದೆ ಕನ್ನಡಪರ ಪಕ್ಷಗಳ್ನ ಕಟ್ಟಿ ಕನ್ನಡಿಗರಿಗಾಗಿ ದುಡಿದಿದ್ದ ಬಂಗಾರಪ್ನೋರಿಗೆ ಇವೆಲ್ಲಾ ಮರೆತುಹೋಗಿತ್ತಾ ಅನ್ನೋ ಪ್ರಶ್ನೆ ಬರತ್ತೆ ಗುರು!

ಆ ಪಕ್ಷದ ಹೆಸರಿಟ್ಟುಕೊಳ್ಳೋದರ ಜೊತೆಗೆ ಹಾಗೆ ಸೇರಿಕೊಂಡ ಕಾರಣಕ್ಕಾಗೆ ಹೊಸದಾಗಿ ಅಲ್ಲಿನೋರ ಹಾಗೇ ಟೋಪಿ ಹಾಕ್ಕೊಳೋದು, ಕರ್ನಾಟಕದಲ್ಲಿ ತಾವು ಮಾಡೋ ಕಾರ್ಯಕ್ರಮದಲ್ಲಿ ಹಿಂದುಗಡೆ ನೇತಾಕಿರೋ ಬ್ಯಾನರ್ ಗಳಲ್ಲಿ ಹಿಂದಿ ಭಾಷೇನ ಬಳಸೋದು...ಇವೆಲ್ಲಾ ಕನ್ನಡತನಾನ ಹೆಜ್ಜೆ ಹೆಜ್ಜೆಯಾಗಿ ಗುಲಾಮಗಿರಿಗೆ ತಳ್ಳೋ ಪ್ರತೀಕಗಳಲ್ವಾ ಗುರು? ಈ ಸೈಕಲ್ ಗುಂಗಿಗೆ ಯಾಕಾದ್ರೂ ಬಿದ್ರು ಬಂಗಾರಪ್ನೋರು?

ನಮ್ಮದೇ ಪಕ್ಷಕ್ಕೆ ಮತವೂ ಬರುತ್ತೆ, ಮಾನವೂ ಬರುತ್ತೆ


ತಮ್ಮದೂ ರಾಷ್ಟ್ರೀಯ ಪಕ್ಷ, ಹಾಗನ್ನೋದ್ರಿಂದ ಕರ್ನಾಟಕದಲ್ಲಿ ಅಧಿಕಾರ ಗಿಟ್ಟುಸ್ಬೋದು ಅಂತ ನಮ್ಮ ನಾಯಕರುಗಳು ಅಂದ್ಕೊಂಡಿದ್ರೆ ಅದು ತಪ್ಪು ಲೆಕ್ಕಾಚಾರ ಆಗಿಬಿಡುತ್ತೆ ಗುರು! ತಮಾಷೆ ಅಂದ್ರೆ ಬಂಗಾರಪ್ಪನೋರು ಕರ್ನಾಟಕ ಕಾಂಗ್ರೆಸ್ ಪಾರ್ಟಿ ಕಟ್ಕೊಂಡು 1994ರ ಚುನಾವಣೇಲಿ ಹತ್ತು ವಿಧಾನಸಭಾ ಸ್ಥಾನ ಗಳಿಸಿದ್ರು. ಅದೇ 2005ರ ಚುನಾವಣೇಲಿ ಸಮಾಜವಾದಿ ಪಕ್ಷದ ಹೆಸರಲ್ಲಿ ಗಳಿಸಿದ್ದು ದೊಡ್ಡ ಸೊನ್ನೆ! ಸಮಾಜವಾದಿ ಪಕ್ಷಕ್ಕೆ ಸಿಕ್ಕಿರೋ ಮತಗಳು ಕೂಡಾ ಬರೀ 0.04% ಮಾತ್ರ. ಸಿದ್ದರಾಮಯ್ಯನೋರೂ ಜನತಾದಳದಿಂದ ಹೊರಗ್ ಬಂದಾಗ ಕಾಂಗ್ರೆಸ್ ಅನ್ನೋ ರಾಷ್ಟ್ರೀಯ ಪಕ್ಷದ ಮಡಿಲು ಸೇರೋ ಬದಲು ತನ್ನದೇ ಪಕ್ಷ ಹುಟ್ ಹಾಕಿದ್ರೂ, ಆ ಮೂಲಕ ಎರಡೇ ಸ್ಥಾನ ಗಳಿಸಿದ್ರೂ ಜನ ಅವರನ್ನು ಇನ್ನಷ್ಟು ಗೌರವದಿಂದ ನೋಡ್ತಾ ಇದ್ರೇನೋ ಗುರು!

ಇದೇ ಮಣ್ಣಿನ ಪಕ್ಷಗಳು ಬೇಕು
ಈ ಸತ್ಯಾನ ಬಂಗರಪ್ಪನೋರು, ಸಿದ್ಧರಾಮಯ್ಯನೋರು ಮಾತ್ರ ಅಲ್ಲ, ಆನೆ ಬೆನ್ನೇರಕ್ ಹೊರಟಿರೋ ಸಿಂಧ್ಯಾ ಅವರೂ ಸೇರಿದಂತೆ ನಾಡಿನ ಎಲ್ಲಾ ರಾಜಕಾರಣಿಗಳು ತಿಳ್ಕೋಬೇಕು. ಇವರುಗಳು ಕನ್ನಡಿಗರದ್ದೇ ಆದಂಥಾ (ಹೈಕಮಾಂಡ್ ಅಂತ ದಿಲ್ಲಿ ಕಡೆ, ಉತ್ತರಪ್ರದೇಶದ ಕಡೆ ಕಣ್ಣು ಕಿವಿ ಕೈ ಚಾಚೋ ಪರಿಸ್ಥಿತಿ ಇಲ್ಲದಂಥಾ) ಪಕ್ಷ ಕಟ್ಬೋದಾಗಿತ್ತಲ್ವಾ ಗುರು? ಅವತ್ತು ಇದ್ದ ಕಾವೇರಿ ಇವತ್ತಿಗೂ ಹಾಗೇ ಸಮಸ್ಯೆಯಾಗೇ ಇದೆ. ಅದನ್ನು ಪರಿಹರಿಸಕ್ಕೆ, ಕನ್ನಡ ಜನತೆಗೆ ನಿಜವಾದ ನಾಯಕತ್ವ ಕೊಡಕ್ಕೆ, ನಮ್ಮನ್ನು ನಾವು ಆಳಿಕೊಳ್ಳಕ್ಕೆ, ನಮ್ಮ ನಾಡಿಗೆ ಸಂಬಂಧ ಪಟ್ಟ ನಿಲುವುಗಳನ್ನು ನಮ್ಮೂರಲ್ಲೇ, ನಮ್ಮವರೇ ತೊಗೊಳ್ಳಕ್ಕೆ...ನಮ್ಮದೇ ಮಣ್ಣಿನ ಪಕ್ಷಗಳೇ ಕಟ್ಟಬೇಕು ಗುರು! ಇದನ್ನೆಲ್ಲಾ ಅರ್ಥ ಮಾಡ್ಕೊಂಡು ಬಂಗಾರಪ್ನೋರು ಕನ್ನಡಿಗರು ಎಂದೆಂದಿಗೂ ಮರೀದಿರೋ ಹಾಗೆ ಬಂಗಾರದಂಥಾ ಕೆಲಸ ಮಾಡಬೋದಿತ್ತು ಗುರು!

7 ಅನಿಸಿಕೆಗಳು:

Anonymous ಅಂತಾರೆ...

ಬಂಗಾರಪ್ಪ, ಸಿದ್ಧರಾಮಯ್ಯನವರಷ್ಟೇ ಅಲ್ಲ ಮಿಕ್ಕ ರಾಜಕಾರಿಣಿಗಳೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮದೇ ರಾಜಕೀಯ ಪಕ್ಷ ಬಂದರೆ ಕಾವೇರಿ ಸಮಸ್ಯೆ ಅಷ್ಟೆ ಅಲ್ಲ ವಲಸಿಗರಿಂದ ಆಗುತ್ತಿರುವ ತೊಂದರೆಗಳೂ ತಪ್ಪುತ್ತವೆ.
ಈ ರಾಜಕಾರಿಣಿಗಳೂ ಜಾತಿ, ಮತ ಪಂಗಡಗಳನ್ನು ಕಟ್ಟಿಕೊಂಡು ಯಾವ ಪಕ್ಷಕ್ಕು ಬಹುಮತ ಬರದೆ ಈಗ ಇರುವ ಅಬ್ಬೇಪಾರಿ ಪರಿಸ್ಥಿತಿ ಸ್ರುಷ್ಟಿಸುವುದರ ಬದಲು, ಕನ್ನಡದ ಪಕ್ಷ ಕಟ್ಟಲಿ. ಬಹುಮತವೂ ಬರುತ್ತದೆ ನಾಡೂ ಉಳಿಯುತ್ತದೆ.

Amarnath Shivashankar ಅಂತಾರೆ...

iduvaregU baMda karnaatakada raajakaaraNigaLige dhairyada korate bahaLa..
tamage paksha kattuva ella saamarthyaviddaru "risk" tagoLakke ishta ilde, yavdo ondu kittogiro raashtreeya paksha serkondu tamma astitvavanne kaLkonDiddare..
innu mundakke paksha katto saamarthya irodu Narayana Gowdarige maatra.
Karnataka Rakshana Vedike ondu praadeshika pakshavaagabEku.Narayana Gowdaru ee kelasavannu aadashtu bega maadabEku..idu karnatakada indina paristhitige anivaarya

Anonymous ಅಂತಾರೆ...

sadyakkiruva kagakka,gubbakka politicians naDuve, banagarappa avaru yeshTo vaasi,, adyaavudo samajavadi party katto hucchu avarigyaake banto,, siddaramaiah, bangarappa, MP Prakash inthavaru adyaavudo hi-command na order ge kaaytha kuro party li irodakintha,, karnataka-da nela, jala kaayovantha party madidre jana khandita vaagyu avara kai hiDitaare,,

Anonymous ಅಂತಾರೆ...

ಯಾವ ಪಕ್ಷ ಬಂದ್ರೂ ರಾಜಕಾರಣೀಗಳು ರಾಜಕಾರಣಿಗಳೇ ಗುರು. ಈಗ ಹೈಕಮಾಂಡು ಲೋಕಮಾಂಡು ಯಾವುದೂ ಇಲ್ಲದೇ ಇರೋ ಜನತಾದಳದಿಂದ ವಿಶೇಷವಾಗಿ ಕನ್ನಡಕ್ಕೆ, ಕನ್ನಡಿಗರಿಗೆ, ಕರ್ನಾಟಕಕ್ಕೆ ಏನಾದ್ರೂ ಲಾಭ ಆಯ್ತಾ? ಅವರು ಕೂಡ ಹೊರಗಿನವರ ಮುಂದೆ ಮತಕ್ಕಾಗಿ ಮಂಡಿಯೂರ್ತಾರೆಯೇ ಹೊರತು ಬೇರೆನಿಲ್ಲ. ರಾಷ್ಟ್ರೀಯ , ಸ್ಥಳೀಯ ಯಾವುದೇ ಪಕ್ಷ ಆಗಿರ್ಲಿ ನಮಗೆ ಬೇಕಾಗಿರೋದು ಕನ್ನಡ, ಕರ್ನಾಟಕದ ಬಗ್ಗೆ ನಿಜವಾದ ಕಳ ಕಳಿ ಇರೋವಂತ ನಾಯಕರು, ಜನರು ಅಷ್ಟೆ.

Anonymous ಅಂತಾರೆ...

ajay avare, janata dala enu maadto ilvo adhu bere vishya.

aadhare, namma neladalle "high command" iro pakshagalaadare bega nirdhaaragalannu togobahudu, yaaro prithviraj chauhan, yashwant sinhagalige salaamu hodkondu avarannu mecchisabekaagi illa. haageye ondu praadeshika pakshavaadare adara kaaryakshetra karnataka maathra aagirutte. karnatakadha korike nyaayavaagiddaru karnatakadha paravaagi maatanaadidare maharashtradallo, andhradallo, tamilu naadinallo vote kalkobeku anta rashtreeya pakshagalu yochane maadtave. ee samasye illadiro kaaranakke belagaavi vishayadalli kumaraswamy saakastu kannada-para kelasa maadalu aagirodhu. nimma sutta iruva ella raajyagalalli praadeshika pakshagalu prabalavaagirovaaga, namannu naavu rakshisikollalu haagu abhivruddhi hondalu namage nammadhe praadeshika paksha anivaarya.

Anonymous ಅಂತಾರೆ...

ನಮ್ಮ ನೆಲದ ದೊಡ್ಡ ಸಮಸ್ಯೆ ಅಂದ್ರ್ರೆ ಸಮಾಜದ ಬಗ್ಗೆ, ಜನರ ಬಗ್ಗೆ ಕಾಳಜಿ ಇರೊವಂತ ನಾಯಕರೆಲ್ಲ ಮೂಲೆ ಗುಂಪಾಗಿ ಅದ್ಯಾರೊ ತಲೆ ಕೆ ಟ್ಟೊರಂಗೆ ಆಡೋ ಚೆನ್ನಿಗಪ್ಪ, ಜಮೀರ ಅಹಮದ್, ಅವರ್ಯಾರೊ ಕಟ್ಟಾ ನಾಯ್ಡು ಅಂತೆ,, ಇಂತ ಪಾಕಡಾ ನನ್ನ ಮಕ್ಕಳು ನಮ್ಮ ರಾಜ್ಯನಾ ಎಲ್ಲಿಗೆ ತಂದು ಹಚ್ಚತಾರೊ ಅಂತ ಚಿಂತೆ ಆಗುತ್ತೆ ಗುರು... ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಅವಕಾಶವಾದಿ ರಾಜಕೀಯ ನಮ್ಮ ನೆಲಕ್ಕೂ ಭರ್ಜರಿಯಾಗಿ ಕಾಲಿಟ್ಟಿದೆ. ಇದನ್ನ ಜನ ಇಗಲೇ ತಡಿಬೇಕು,, ಇಲ್ಲಾ ಅಂದ್ರೆ ನಮ್ಮ ರಾಜ್ಯಾನೂ ಬಿಹಾರ, ಯು.ಪಿ ಆಗೊದ್ರಲ್ಲಿ ಸಂದೇಹಾನೆ ಇಲ್ಲ. ಇದೆಲ್ಲದಕ್ಕು ಉತ್ತರ ನಮ್ಮದೇ ಆದ ಪಕ್ಷ.

Anonymous ಅಂತಾರೆ...

Currently Karnataka lacks a Strong Regional party with a dynamic leader. I think only a local party, which doesnt have any high command or which doesnt depend on the delhi leaders can contribute more towards the overall developments of the state.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails