ವಿ.ವಿ.ಗಳೇ ಕಾಪಿ ಹೊಡುದ್ರೆ ಹೇಗೆ?

ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಆಡಳಿತ ಕನ್ನಡದಲ್ಲೇ ಆಗಬೇಕು ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಕ್ಟೋಬರ್ 21ಕ್ಕೆ ಮೈಸೂರಲ್ಲಿ ಗದರು ಹಾಕಿದೆ. ಅಲ್ಲಾ - ಈ ವಿ.ವಿ.ಗಳಿಗೆ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಕನಿಷ್ಠ ತಿಳುವಳಿಕೇನೂ ಇಲ್ಲದಿದ್ದರೆ, ಅದಕ್ಕೆ ಬೇಕಾಗಿರೋದ್ನೆಲ್ಲಾ ಮಾಡ್ತೀವಿ ಅನ್ನೋ ಜವಾಬ್ದಾರಿ ಇಲ್ಲದಿದ್ದರೆ ಇವರೇನು ಕರ್ನಾಟಕವನ್ನ ಉದ್ಧಾರ ಮಾಡೋದು? ಇವರೇನು ಕನ್ನಡಿಗರನ್ನ ಉತ್ತಮ ಪ್ರಜೆಗಳಾಗಿಸೋದು? ಇವರು ಯಾವ ಸೀಮೆ ಪಾಠ ಕಲಿಸಾರು?

ಆಡಳಿತಕ್ಕಂತೂ ಬೇರೆ ಭಾಷೆ ಬೇಕಾಗೇ ಇಲ್ಲ

ಕರ್ನಾಟಕದ ವಿ.ವಿ.ಗಳು ಕನ್ನಡ ಕೈಬಿಟ್ಟರೆ ಕನ್ನಡಿಗರಿಗೆ ದಾರಿ ತೋರ್ಸೋರು ಯಾರು? ಹೀಗೆ ಬೇಜವಾಬ್ದಾರಿಯಿಂದ ನಡ್ಕೊಳೋ ಬದ್ಲು ಇವುಗಳು ಆಡಳಿತವನ್ನಂತೂ ಪೂರ್ತಿ ಕನ್ನಡದಲ್ಲಿ ಮಾಡ್ಬೇಕು. ಆಡಳಿತ ಕನ್ನಡದಲ್ಲಿ ಸಾಧ್ಯವಿಲ್ಲ ಅನ್ನೋದು ಬರೀ ಸುಳ್ಳು. ಆಡಳಿತಕ್ಕೆ ಬೇಕಗಿರೋ ಎಲ್ಲಾ ಪದಗಳು ಕನ್ನಡದಲ್ಲಿ ಈಗಾಗಲೇ ಇವೆ. ಹೊಸದಾಗಿ ಹುಟ್ಟಾಕ್ಬೇಕು ಅನ್ನೋ ಗೋಜೂ ಇಲ್ಲ.

ಇಂಗ್ಲೀಷ್ ಬಳಕೆಯ ಒಳಗುಟ್ಟು

ಇಲ್ಲಿ ಒಳಗುಟ್ಟೇನಪ್ಪಾ ಅಂದ್ರೆ ಎಲ್ಲಾ ಕಡೆ ಆಡಳಿತ ಅನ್ನೋದು ಇವತ್ತು ಪೂರ್ತಿ ಗಣಕಯಂತ್ರದ ನೆರವಿಂದ ಆಗ್ತಿದೆ. ಆದ್ರೆ ಆ ಗಣಕಕ್ಕೆ ಕನ್ನಡ ಬರೋದಿಲ್ಲ ಅನ್ನೋ ಪೆದ್ದತನ ನಮಗೆ ಇದೆಯಲ್ಲಾ? ಗಣಕಯಂತ್ರಕ್ಕೆ ಇಂಗ್ಲೀಷೇ ಬರೋದು, ಅದು ಥೇಮ್ಸಲ್ಲೇ ತೊಳ್ಕೊಳೋದು ಅನ್ನೋ ಮೂರ್ಖತನ ಇದೇ ವಿ.ವಿ.ಗಳಲ್ಲಿ ಪಾಠ ಮಾಡ್ತಿರೋ ಗಣಕ ವಿಭಾಗದ ಪ್ರೊಫೆಸರ್ಗಳಿಗೂ ಲೆಕ್ಚರರ್ ಗಳಿಗೂ ಇದೆ ಗುರು! ಇಂಥೋರಿಗೆ ಹೋಗಿ ಗಣಕಕ್ಕೆ ಯಾವ ಕೀಳರಿಮೇನೂ ಇಲ್ಲ, ಇರೋದು ನಮಗೇ ಅಂತ ಬುದ್ವಾದ ಯೋಳ್ಬೇಕು ಗುರು! ವಿ.ವಿ.ಗಳೇ ಹೀಗೆ ಸ್ವಂತ ಬುದ್ಧಿಯಿಂದ ಕನ್ನಡಾನ ಆಡಳಿತದಲ್ಲಿ ಬಳಸೋದಕ್ಕೆ ಬೇಕಾಗಿರೋದ್ನೆಲ್ಲಾ ಮಾಡದೆ ಇಂಗ್ಲೀಷಿನೋರಿಂದ ಕಾಪಿ ಹೊಡುದ್ರೆ ಇವು ವಿದ್ಯಾರ್ಥಿಗಳಿಗೆ ಏನು ಹೇಳ್ಕೊಟ್ಟಾವು?

ನಾವು ಯೋಚ್ನೆ ಮಾಡೋ ರೀತೀನೇ ಬದಲಾಗಬೇಕು

ಈಗ ನಮ್ಮ ಜನ "ಗಣಕದಲ್ಲಿ ಕನ್ನಡ ಬರ್ಸಕ್ಕಾಗಲ್ಲ, ಆದ್ದರಿಂದ ಆಡಳಿತ ಇಂಗ್ಲೀಷಲ್ಲಿ ಮಾಡೋಣ" ಅಂತ ಕಾರಣ ಕೊಡೋದು ಏನ್ ತೋರ್ಸತ್ತೆ ಅಂದ್ರೆ - ಗಣಕದಲ್ಲಿ ಕನ್ನಡ ಅನ್ನೋದು ಯಾರೋ ನಮಗೆ ಕೊಡಬೇಕಾಗಿರೋ ಕೊಡುಗೆ, ದೇವ್ರು ಸುರಿಸೋ ಮಳೆ ಇದ್ದಂಗೆ, ಇದ್ರೆ ಉಪಯೋಗುಸ್ಕೋತೀವಿ, ಇಲ್ದಿದ್ರೆ ನಾವೇನೂ ಮಾಡಕ್ಕಾಗಲ್ಲ ಅನ್ನೋ ಷಂಡತನ. ಇದು ಹೇಡಿಗಳ ಮಾತು. ಈ ಗುಂಗಿಗೆ ಬಿದ್ರೆ ನಾವು ಯಾವುದೇ ಸ್ವಂತ ಚಿಂತನೆ, ವಿಜ್ಞಾನ-ತಂತ್ರಜ್ಞಾನಗಳ್ನ ಹುಟ್ಟಿಸಕ್ಕಾಗೋದೇ ಇಲ್ಲ. ಹೊರರಾಜ್ಯದೋರು ಮತ್ತೆ ಹೊರದೇಶದೋರು ಒದ್ದ ಕಡೆ ಹೋಗೋ ಕಾಲ್ಚೆಂಡಾಗೋಗ್ತೀವಿ!

ನಾವು ಯೋಚ್ನೆ ಮಾಡೋ ರೀತೀನೇ ಬದಲಾಗಿ ಮೊದ್ಲು "ಆಡಳಿತ ಕನ್ನಡದಲ್ಲೇ ಆಗಬೇಕು" ಅನ್ನೋ ಭದ್ರವಾದ ನಿಲುವು ಇಟ್ಟುಕೋಬೇಕು. ಆಗ ಅದಕ್ಕೆ ಬೇಕಾಗಿರೋ ವಿಜ್ಞಾನ-ತಂತ್ರಜ್ಞಾನ, ಮಣ್ಣು-ಮಸಿ, ಗಣಕ-ಗಿಣಕ, ತಂತ್ರಾಂಶ-ಗಿಂತ್ರಾಂಶ ಎಲ್ಲಾನೂ ನಾವೇ ಹುಟ್ಟಿಸಬೇಕು. ಇಂಥದ್ದೊಂದು ಆಗಬೇಕು ಅನ್ನೋ ಬಯಕೆ ಇದ್ರೆ ತಾನೆ ಅದನ್ನ ಪೂರೈಸಕ್ಕೆ ಮನುಷ್ಯ ಕೆಲಸ ಮಾಡೋದು? ಆ ಬಯಕೇನೇ ಇಲ್ದೇ ಹೋದ್ರೆ ಕಡಲಲ್ಲಿ ನಿಯಂತ್ರಣ ತಪ್ಪಿದ ಹಡಗು ಹೇಗೆ ಗಾಳಿ ಬಂದ ಕಡೆ ತೂರತ್ತೋ ಹಾಗಾಗತ್ತೆ ಕರ್ನಾಟಕದ ಸ್ಥಿತಿ!

ಕನ್ನಡ-ಕನ್ನಡಿಗ-ಕರ್ನಾಟಕಗಳ್ನ ಕಡೆಗಣಿಸೋದು, ಇಲ್ಲಾ ಕನ್ನಡ ಅಂದ್ರೆ ಜುಟ್ಟಿಗೆ ಮಲ್ಲಿಗೆ ಹೂ ಮಾತ್ರ ಅನ್ಕೊಳೋದು ನಮ್ಮ ಏಳ್ಗೆಗೇ ಕೊಡ್ಲಿಯೇಟು ಅನ್ನೋದು ಬರೀ ಬಾಯ್ಮಾತಲ್ಲಾಮ್ಮಾ!

1 ಅನಿಸಿಕೆ:

Anonymous ಅಂತಾರೆ...

ಕನ್ನಡದ ಸ್ಥಾನ ಇಲ್ಲಿ ನೋಡಿ
http://srikslib.blogspot.com/2007/10/kannadagoing-miles.html

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails