ಇವತ್ತು ಮಕ್ಕಳಿಗೆ ಹೇಳ್ಕೊಡ್ತಾ ಇರೋದು ನಿಜಕ್ಕೂ ಕನ್ನಡದ ವ್ಯಾಕರಣಾನಾ?

ಇವತ್ತಿನ ದಿನ ಕನ್ನಡದ ವ್ಯಾಕರಣದ ನಿಜವಾದ ಸ್ವರೂಪ ಏನು ಅಂತ ಅರ್ಥ ಮಾಡ್ಕೊಂಡಿರೋ ಪ್ರಾಯಶಃ ಒಬ್ಬನೇ ಒಬ್ಬ ಕನ್ನಡಿಗ-ಭಾಷಾವಿಜ್ಞಾನಿ ಅಂದರೆ ಮೈಸೂರಿನಲ್ಲಿ ವಾಸ ಮಾಡ್ತಿರೋ ಶ್ರೀ ಡಿ.ಎನ್. ಶಂಕರಭಟ್ಟರು. ಕನ್ನಡ ವ್ಯಾಕರಣ ಅಂದರೆ ಸಂಸ್ಕೃತ ವ್ಯಾಕರಣದ ಒಂದು ಉಪವ್ಯಾಕರಣ ಅಂತ ಪರಿಗಣಿಸೋ ಮೂರ್ಖತನವನ್ನ ಖಂಡಿಸಿ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" (ಇದು ಅವರ ಒಂದು ಪುಸ್ತಕದ ಹೆಸರೂ ಕೂಡ) ಅಂತ ವಾದಿಸುತ್ತಾ ಹೇಳಿಕೊಡುತ್ತಾ ಬಂದ ಮಹಾನ್ ಭಾಷಾವಿಜ್ಞಾನಿ ಶ್ರೀ ಶಂಕರಭಟ್ಟರು. ಇವರು ಕನ್ನಡ ಮಾತ್ರವಲ್ಲದೆ ಸಂಸ್ಕೃತ ಮತ್ತು ಇಂಗ್ಲೀಷ್ ಭಾಷಾತಜ್ಞರೂ ಕೂಡ.

ಅವರು ಬರೆದಿರೋ "ಭಾಷೆಯ ಬಗ್ಗೆ ನೀವೇನು ಬಲ್ಲಿರಿ" ಅನ್ನೋ ಪುಸ್ತಕದಿಂದ ಒಂದು ತುಣುಕನ್ನು ಇಲ್ಲಿ ನೋಡಿ. ಕನ್ನಡದ ವ್ಯಾಕರಣ ಹೇಳ್ಕೊಡ್ತೀವಿ ಅಂತ ಹೊರಟಿರೋ ಕನ್ನಡದ ಪಠ್ಯಪುಸ್ತಕಗಳು ನಿಜವಾಗಲೂ ಕನ್ನಡದ ವ್ಯಾಕರಣ ಹೇಳ್ಕೊಡ್ತಿವೆಯೋ ಅಥವಾ ಸಂಸ್ಕೃತದ ವ್ಯಾಕರಣ ಹೇಳ್ಕೊಡ್ತಿವೆಯೋ ನೀವೇ ನಿರ್ಧಾರ ಮಾಡಿ:

ನಮ್ಮ ಶಾಲಾ ವ್ಯಾಕರಣಗಳ ಮುಖ್ಯ ದೋಷವೇನೆಂದರೆ, ಅವು ಹೊಸಗನ್ನಡದ ಸ್ವರೂಪವೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ಯತ್ನಿಸುವ ಬದಲು, ಕೇಶಿರಾಜ, ಪಾಣಿನಿ ಮೊದಲಾದವರು ಚರ್ಚಿಸಿದ ಅತೀ ಕ್ಲಿಷ್ಟವಾದ ಮತ್ತು ಹೊಸಗನ್ನಡಕ್ಕೆ ಸ್ವಲ್ಪವೂ ಸಂಬಂಧಿಸದಂತಹ ನೂರಾರು ವಿಷಯಗಳನ್ನು ವಿದ್ಯಾರ್ಥಿಗಳ ತಲೆಯೊಳಗೆ ತುಂಬಲು ಯತ್ನಿಸುತ್ತವೆ.

ಸಂಸ್ಕೃತ ಭಾಷೆಗೆ ಸಂಬಂಧಿಸಿದಂತಹ ಗುಣ, ವೃದ್ಧಿ, ಶ್ಚುತ್ವ, ಷ್ಟುತ್ವ, ಜಶ್ತ್ವ, ಮೊದಲಾದ ಸಂಧಿಕಾರ್ಯಗಳನ್ನು ಹೇಳಿಕೊಡುವ ಈ ವ್ಯಾಕರಣಗಳಿಗೆ ಕನ್ನಡದ ಉದಾಹರಣೆಗಳು ಸಿಗುವುದು ಅಸಂಭವವೇ. ಹಾಗಾಗಿ ಎಂಟನೇ ತರಗತಿಗೆ ಸಿದ್ಧವಾದ ವ್ಯಾಕರಣಗಳಲ್ಲಿ ೠವಿಲ್ಲ, ಅಮ್ಮಯ, ಷಡೂರ್ಮಿ ಮೊದಲಾದ, ಕನ್ನಡದ ಮಟ್ಟಿಗೆ ತೀರ ವಿಚಿತ್ರವಾಗಿ ಕಾಣಿಸುವ ಪದಗಳ ಪ್ರಯೋಗ ಕಾಣಸಿಗುತ್ತದೆ. ಇವನ್ನೆಲ್ಲ ಪರೀಕ್ಷೆಗಾಗಿ ಬಾಯಿಪಾಠ ಮಾಡಬೇಕಾಗಿರುವ ವಿದ್ಯಾರ್ಥಿಗಳಿಗೆ ವ್ಯಾಕರಣವೆಂಬುದೊಂದು ವಿಚಿತ್ರವಾದ ವಿಷಯವೆನಿಸಿದರೆ ತಪ್ಪೇನು?

ಹಾಗಾಗಿ, ಶಾಲಾ ವ್ಯಾಕರಣಗಳನ್ನು ಬರೆಯುವವರು ಮತ್ತು ಅವರಿಗೆ ಮಾರ್ಗದರ್ಶನ ಮಾಡುವ ಪಠ್ಯಪುಸ್ತಕ ಸಮಿತಿಯವರು ಈ ವ್ಯಾಕರಣಗಳನ್ನು ಬರೆಯುವುದರ ಮತ್ತು ಕಲಿಸುವುದರ ಉದ್ದೇಶವೇನೆಂಬುದನ್ನು ಮೊದಲಿಗೇನೇ ನಿರ್ಧರಿಸಿಕೊಳ್ಳಬೇಕು. ತಮ್ಮ ತಾಯಿನುಡಿಯ ಸ್ವರೂಪವೇನೆಂಬುದನ್ನು ತಿಳಿದುಕೊಳ್ಳಲು ಮತ್ತು ಆ ಭಾಷೆಯಲ್ಲಿ ಬರಹದ ಮೂಲಕ ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಇತರರಿಗೆ ಸರಿಯಾಗಿ ಅರ್ಥವಾಗುವ ಹಾಗೆ ತಿಳಿಸಲು ಹಾಗು ಇತರರು ಬರೆದುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ವ್ಯಾಕರಣವನ್ನು ಕಲಿಸುವ ಅವಶ್ಯಕತೆ ಇದೆ. ಅವರು ಯಾವ ರೀತಿಯ ಬರಹವನ್ನು ಬಳಸುತ್ತಿದ್ದಾರೆ, ಬಳಸಬೇಕಾಗಿದೆ ಎಂಬುದರ ಮೇಲೆ ಈ ವ್ಯಾಕರಣದ ರಚನೆ ಅವಲಂಬಿಸಿರಬೇಕು.

ಹೊಸಗನ್ನಡದ ವ್ಯಾಕರಣದಲ್ಲಿ ಹೊಸಗನ್ನಡದ ವಿಚಾರಗಳನ್ನು ಮಾತ್ರವೇ ವಿವರಿಸಬೇಕು. ಸಂಸ್ಕೃತದ, ಇಲ್ಲವೇ ಹಳೆಗನ್ನಡದ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಹೇಳುವುದರಿಂದ ಪ್ರಯೋಜನವೇನಾದರೂ ಇದೆಯೆಂದು ಈ ವಿದ್ವಾಂಸರ ಮತವಾದರೆ, ಆ ವಿಷಯಗಳಿಗಾಗಿ ಬೇರೆಯೇ ಪುಸ್ತಕವನ್ನು ಬರೆಯುವುದು ಉತ್ತಮ. ಇವೆಲ್ಲವನ್ನೂ ಹೊಸಗನ್ನಡ ವ್ಯಾಕರಣದಲ್ಲೇ ಸೇರಿಸುವುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲವಲ್ಲದೆ ಬೇರೇನೂ ಮೂಡಲಾರದು.

ಹೆಚ್ಚಿನ ಮಾಹಿತಿಗಾಗಿ ಭಟ್ಟರ ಪುಸ್ತಕಗಳನ್ನು ಕೊಂಡು ಓದಿ. ಒಟ್ಟಿನಲ್ಲಿ ನಮ್ಮ ಕನ್ನಡದ ವ್ಯಾಕರಣಕಾರರಿಗೂ ಕನ್ನಡ ಸಂಸ್ಕೃತದಿಂದಲೇ ಬಂದಿರಬೇಕು ಅನ್ನೋ ತಪ್ಪು ತಿಳುವಳಿಕೆ ಹಿಂದಿನಿಂದಲೂ ಇದೆ. ಆದರೆ ನಿಜಕ್ಕೂ ನೋಡಿದರೆ ಸಂಸ್ಕೃತಕ್ಕೂ ಕನ್ನಡಕ್ಕೂ ಯಾವ ಭಾಷಾವೈಜ್ಞಾನಿಕ ನಂಟೂ ಇಲ್ಲ. ಕನ್ನಡ ಸ್ಪ್ಯಾನಿಷ್ಷು, ಪೋರ್ಚುಗೀಸು, ಅರಬ್ಬಿ, ತಮಿಳು, ತೆಲುಗು, ಮಲಯಾಳಿ, ಇಂಗ್ಲೀಷು - ಇವೆಲ್ಲವುಗಳಿಗಿಂತ ಹೆಚ್ಚಾಗಿ ಸಂಸ್ಕೃತದಿಂದ ಪದಗಳ್ನ ಎರವಲು ಪಡೆದಿರುವುದೇನೋ ನಿಜ. ಹಾಗೆಂದ ಮಾತ್ರಕ್ಕೆ ಸಂಸ್ಕೃತದಿಂದಲೇ ಕನ್ನಡ ಹುಟ್ಟಿ ಬಂದಿರೋದು ಅನ್ನೋದು ಶುದ್ಧ ತಪ್ಪು. ಕನ್ನಡ ವ್ಯಾಕರಣವನ್ನ ಸಂಸ್ಕೃತ ವ್ಯಾಕರಣದ ಒಂದು "ಅಪಭ್ರಂಶ" ಅಂದುಕೊಳ್ಳೋದಂತೂ ಭಾಷಾವಿಜ್ಞಾನದ ಕೊಲೆಯೇ. ಆ ಕೊಲೆ ಕೇಶೀರಾಜನಿಂದ ಹಿಡಿದು ಇಲ್ಲೀವರೆಗೆ ಕನ್ನಡದ ವ್ಯಾಕರಣಕಾರರೆಲ್ಲರೂ ಮಾಡಿದಾರೆ ಗುರು! ಆ ಕೊಲೆ ನಿಲ್ಲಬೇಕು ಅಂತ ಧೈರ್ಯವಾಗಿ ಕೂಗುಹಾಕಿರೋ ಒಬ್ಬರೇ ಒಬ್ಬರೂಂದ್ರೆ ಶ್ರೀ ಶಂಕರಭಟ್ಟರು.

ನಿಜಕ್ಕೂ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಸಂಸ್ಕೃತದ ವ್ಯಾಕರಣವನ್ನ ಕನ್ನಡಕ್ಕೆ ಹೊಂದಿಸೋದಕ್ಕೆ ಹೊರಟಂತಹ ಇಲ್ಲೀವರೆಗಿನ ಎಲ್ಲಾ ವ್ಯಾಕರಣಕಾರರೂ ಈ ಕೆಲಸದಲ್ಲಿ ಸೋತಿದ್ದಾರೆ ಗುರು! ಇಂದಿಗೂ ನಿಜವಾದ ಕನ್ನಡದ ವ್ಯಾಕರಣ ಅನ್ನೋದು ಇಲ್ಲ. ಇರೋದೆಲ್ಲಾ ಸಂಸ್ಕೃತವ್ಯಾಕರಣದ "ಅಪಭ್ರಂಶ"ಗಳೇ. ಸಂಸ್ಕೃತ-ಕನ್ನಡಗಳ ನಡುವೆ ಮೂರ್ಖರು ಹೇಳೋ ನಂಟನ್ನು ತಳ್ಳಿಹಾಕಿ ನಿಜವಾದ ಕನ್ನಡ ವ್ಯಾಕರಣ ಬರಿಯಕ್ಕೆ ಕನ್ನಡನಾಡಿನಲ್ಲಿ ಭಾಷಾವಿಜ್ಞಾನದ ಕ್ಷತ್ರಿಯರು ಎಚ್ಚೆತ್ತುಕೋಬೇಕು ಗುರು!

20 ಅನಿಸಿಕೆಗಳು:

Anonymous ಅಂತಾರೆ...

Good introduction. Certainly this is the right approach to learning/teaching grammar.

Anonymous ಅಂತಾರೆ...

ಶಂಕರ ಭಟ್ಟರ ಹಲವು ಹೊತ್ತಗೆಗಳು ಬಲು ಚನ್ನಾಗಿವೆ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕನ್ನಡ ಬರಹವನ್ನು ಸರಿಪಡಿಸೋಣ
ಭಾಷೆಗಳಲ್ಲಿ ಮೇಲು ಕೀಳಿಲ್ಲ( ಈ ತೆರದ ಹೆಸರು )

-ನನ್ನಿ

Anonymous ಅಂತಾರೆ...

Grammer of Sanskrit Language is a model to any language. The article's concept is nothing other than mere stupidity.

-unhappy

rajashekar kc ಅಂತಾರೆ...

Excellent work!

Anonymous ಅಂತಾರೆ...

ಅಪ್ಪಾ ಅನ್ ಹ್ಯಾಪಿ,

ಏನು ತೀರ್ಪು ಕೊಟ್ಯಲ್ಲಾ ನಿನ್ನ ಮಾತಿಗೆ ಏನಾದರೂ ಆಧಾರ ಗೀಧಾರ ಅನ್ನೋದೇನಾದ್ರು ಇದ್ರೆ ಒಸಿ ಒದ್ರು ಒಂತಪ್ಪ. ಸುಮ್ನೆ ಬಂದ ಅದೇ ರಾಗ ಕಿಸ್ಯಕ್ಕೆ. ಯಾವನೋ ಹೇಳ್ಕೊಟ್ಟಿರ್ತಾನೆ ಸಂಸ್ಕೃತ ಅಂದ್ರೆ ಹಂಗೆ ಹಿಂಗೆ ಅಂತ, ಇವನು ತಲೇಲಿ ಜೇಡಿಮಣ್ಣಿರೋದ್ರಿಂದ ನಂಬ್ದ. ಒಂದ್ ಬಿಡಿಗಾಸಷ್ಟು ತಲೆ ಉಪಯೋಗಿಸಕ್ಕೆ ಬರದೇ ಹೋದರೂ ಸರಿ, ದೊಡ್ಡ ದೊಡ್ಡ ತೀರ್ಪು ಕೊಡಕ್ಕೇನು ಕಮ್ಮಿಯಿಲ್ಲ.

ಮೊದಲು ಬರ್ದಿರೋದ್ನ ಓದು ಕೂಸ.

Anonymous ಅಂತಾರೆ...

school li irbekdre sandhi samaasa da jote neevu heLiro sanskrita da klishTa shabdagaLu tale tinta idvu,, kananda andre e kelsakke baarada shabdagaLanna kaliyode antha annisittu,, adakkiruva mulha kaarana illide,, neevu heLida haage gamanrhavada badalavane aagbEkide.. nimmadu modala, sariyaad hejje antha nanna anisike

Anonymous ಅಂತಾರೆ...

ಪಾಣಿನಿಯ ಸಂಸ್ಕೃತ ವ್ಯಾಕರಣ ಪ್ರಪಂಚದ ಎಲ್ಲಾ ವ್ಯಾಕರಣಗಳಿಗಿಂತಲೂ ವಿಶಿಷ್ಟವಾದದ್ದು ಮತ್ತು ಅದ್ಭುತವಾದದ್ದು. ಆ ವಿಶಿಷ್ಟತೆ, ಆ ಅದ್ಭುತ ಏನು ಎಂದರೆ - ಒಂದೇ ವಾಕ್ಯದಲ್ಲಿ - ವ್ಯಾಕರಣವನ್ನು ಸೂತ್ರರೂಪದಲ್ಲಿ ಆತ ರಚಿಸಿರುವುದು.

ಹೀಗೆ ಸೂತ್ರರೂಪದಲ್ಲಿ ರಚಿಸಬಹುದು ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟ ಮೊದಲಿಗ ಪಾಣಿನಿ.

ಈ ಸೂತ್ರರೂಪ ಎನ್ನುವುದು ಪ್ರಪಂಚದ ಎಲ್ಲಾ ಭಾಷೆಗಳ ವ್ಯಾಕರಣಗಳಿಗೂ ಮಾದರಿಯಾಗಿರುವುದು ನಿಜ. ಆದರೆ ಸಂಸ್ಕೃತದ ಸಂಧಿಗಳು, ಅದರ ವರ್ಣಮಾಲೆ, ಅದರ ಸಮಾಸಗಳು - ಇವೆಲ್ಲವೂ ಬೇರೆಭಾಷೆಗಳಿಗೆ "ತಾಯಿ" ಎಂದು ನಂಬಿಕೊಂಡವರು ಕಗ್ಗತ್ತಲೆಯನ್ನೇ ಬೆಳಕೆಂದು ನಂಬಿದವರಿಗೆ ಕಡಿಮೆಯಿಲ್ಲ.

ಕನ್ನಡಕ್ಕೆ ಸೂತ್ರರೂಪದ ವ್ಯಾಕರಣ ಬರೆಯಬಹುದು ಎನ್ನುವುದನ್ನು ಪಾಣಿನಿಯಿಂದ ಕಲಿಯಬೇಕಾದ ವಿಷಯವೇ. ಇಷ್ಟಕ್ಕೇ ನಿಲ್ಲುತ್ತದೆ ಕನ್ನಡಕ್ಕೆ ಪಾಣಿನಿಯ ಕೊಡುಗೆ. ಇದಕ್ಕಿಂತ ಹೆಚ್ಚಿನದೇನೂ ಇಲ್ಲ.

ಸಂಸ್ಕೃತ ಪ್ರಪಂಚದ ಭಾಷೆಗಳಿಗೆಲ್ಲ ತಾಯಲ್ಲ ಎಂದೋ ಅದರ ವ್ಯಾಕರಣ ಪ್ರಪಂಚದ ಎಲ್ಲಾ ಭಾಷೆಗಳಿಗೂ ಮಾದರಿ ಅಲ್ಲ ಎಂದೋ ತೋರಿಸಿಕೊಟ್ಟರೆ Unhappy ಆಗುವ ಅವಶ್ಯಕತೆಯಿಲ್ಲ.

ಇದು ನಿಜ. ನಿಜದಿಂದ ನಿಮಗೆ Unhappy ಆಗುತ್ತದೆ ಎಂದು ಸುಳ್ಳನ್ನೇ ನಂಬಿಕೊಂಡಿರುತ್ತೀರೇನು?

nIlagrIva ಅಂತಾರೆ...

ಕನ್ನಡ ಸಂಸ್ಕೃತದಿಂದ ಹುಟ್ಟಿಲ್ಲ ಎಂಬುದು ಒಂದು ರೀತಿಯಲ್ಲಿ ಸರಿಯಾದರೂ ಇವೆರಡೂ ಭಾಷೆಗಳ ಮಧ್ಯೆ ವೈಷಮ್ಯ ತರಬಹುದಂಥ ಮಾತುಗಳನ್ನು ಭಾರತೀಯರಾದ ನಾವು ತಿಳಿಯದೆ ಆಡಬಾರದು. ಹೊಸಗನ್ನಡದಲ್ಲಿ ಸಂಸ್ಕೃತಶಬ್ದಗಳ ಸುಳಿವಿಲ್ಲದೆಯೇ ಅದೆಷ್ಟು ಅರ್ಥವಾಗುವಷ್ಟು ಬರೆಯಬಲ್ಲಿರೋ ನೀವೇ ನೋಡಿ. ಅವೆಷ್ಟು ಶಬ್ದಗಳು ಸಂಸ್ಕೃತದಿಂದ ಬಂದಿಲ್ಲ! ಸಂಸ್ಕೃತವ್ಯಾಕರಣವನ್ನು ಕನ್ನಡಿಗರು ಕಲಿಯಲೇಬೇಕಾದುದು ಏಕೆಂದರೆ - ಈ ಶಬ್ದಗಳ ಸ್ವರೂಪವನ್ನು ನಿಷ್ಕರ್ಷಿಸಲು ಮಾತ್ರ. ಸೂತ್ರರೂಪದ ವ್ಯಾಕರಣ ಈಗಿನ ಕಾಲಕ್ಕಲ್ಲ. ಅಂದ ಮಾತ್ರಕ್ಕೆ ಸಂಸ್ಕೃತದ್ದು ಅಷ್ಟು ಮಾತ್ರ ಕೊಡುಗೆಯಲ್ಲ. ಕೇಶಿರಾಜನಿಂದ ಮೊದಲ್ಗೊಂಡು ನಮ್ಮ ಉನ್ನತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಡಿವಿಜಿ ಮುಂತಾದವರೆಲ್ಲರೂ ದಡ್ಡರೇ? ಅಥವಾ ಕನ್ನಡದ ಬಗ್ಗೆ ಪ್ರೇಮವಿಲ್ಲದವರೇ? ಇಂಥ ರಾಮಯಣದರ್ಶನಂ ಮಹಾಕಾವ್ಯವನ್ನೋದಿ - ಸಂಸ್ಕೃತ-ಕನ್ನಡಗಳ ಬಾಂಧವ್ಯದ ಬಗ್ಗೆ ನಿಮಗೇ ತಿಳಿಯುತ್ತದೆ.

ಕನ್ನಡದ ಬಗ್ಗೆ ಅಭಿಮಾನವಿರಬೇಕು, ದಿಟ. ಆದರೆ ಈ ಅಭಿಮಾನ ತಮಿಳರ ತಮ್ಮ ಭಾಷೆಯ ಬಗೆಗಿರುವ ದುರಭಿಮಾನದ ಮಟ್ಟಿಗೆ ಹೋಗಬಾರದು. ಈ ಲೇಖನ ಮತ್ತು ಅದಕ್ಕೆ ಸಿಕ್ಕಿದ ಕೆಲವು ಪ್ರತಿಕ್ರಿಯೆಗಳು ಆ ದಿಕ್ಕಿನಲ್ಲಿ ನಾವೇನಾದರೂ ಪಯಣಿಸುತ್ತಿದ್ದೇವೆಯೋ ಅನ್ನುವ ಸಂದೇಹ ಮೂಡಿಸುತ್ತದೆ.

ಸೇಡಿಯಾಪು ಕೃಷ್ಣಭಟ್ಟರು, ರಂಗನಾಥ ಶರ್ಮರು ಕನ್ನಡಸಂಸ್ಕೃತ-ಉಭಯಭಾಷಾ-ಕೋವಿದರು, ವೈಯಾಕರಣರು. ಇವರ ದೃಷ್ಟಿಯನ್ನು ಶಂಕರಭಟ್ಟರು ಪರಾಮರ್ಶಿಸಿದ್ದಾರೆಯೇ? ಇದು ಪ್ರಶ್ನೆ.

ಸಿರಿಗನ್ನಡಂ ಗೆಲ್ಗೆ! ಜೀಯಾತ್ ಗೀರ್ವಾಣಭಾರತೀ!

Anonymous ಅಂತಾರೆ...

ಕನ್ನಡ ಅಕ್ಷರ ಮಾಲೆಯೂ ಸಂಸ್ಕೃತದ್ದೇ. ಇದನ್ನೂ ಬದಲಿಸೋಣವೇ?

Anonymous ಅಂತಾರೆ...

ಕನ್ನಡಡಿಗರ ನಾಲಿಗೆಯಲ್ಲಿ ಈ ಕೆಳಗಿನವು ಇಲ್ಲವೇ ಹೊರಳುವುದಿಲ್ಲ ಇಲ್ಲ ಉಪಯೋಗದಲ್ಲಿಲ್ಲ, ಇಲ್ಲವೇ (ಮಹಾಪ್ರಾಣಗಳಿಗೆ) ಅಲ್ಪಪ್ರಾಣಗಳನ್ನು ಹಾಕಿದರೆ ವೆತ್ಯಾಸವಿಲ್ಲ:

ಋ, ೠ,
ಖ, ಘ, ಙ,
ಛ, ಝ, ಞ,
ಠ, ಢ,
ಥ, ಧ,
ಫ, ಭ.

ಆದ್ದರಿಂದ ಹೌದು, ಸಂಸ್ಕೃತದಿಂದ ವರ್ಣಮಾಲೆಯನ್ನು ಕಣ್ಮುಚ್ಚಿಕೊಂಡು ನಕಲಿಸುವುದು ತಪ್ಪು. "ದೊಡ್ಡವರು", ಹಿಂದಿನವರು ಮಾಡಿದ್ದಾರೆ, ಈಗ ಬದಲಾಯಿಸುವುದು ಕಷ್ಟ ಎಂದು ಈಗ ಸುಮ್ಮನಿರಬೇಕಷ್ಟೆ.

nIlagrIva ಅಂತಾರೆ...

kIrtana-avare,
nimma rIti hOdare kannaDavU tamiLU oMdE AgibiDuttade, aShTe!

doDDavaru hiMdinavaru mADiddellA sari eMdu hELuttilla. Adare doDDavaru mADiddellavU tappu eMdU hELabAradu. omme kumAra-vyAsa bhAratavannO rAmAyaNa-darshanavannO athavA shivarudrappanavara kavanagaLannO Odi nODi. AmEle alpaprANakkU mahAprANakkU vyatyAsavideyO illavO nODi hELi.
alpaprANa-mahAprANagaLu nAlageyalli horaLuvudilla eMbudu nimma vaiyaktika (vaiyuktika - shuddha tappu) abhiprAya mAtra. nanna nAlageyalli chennAgiyE horaLuttave.

jotege badalAvaNegOskara badalAvaNe athavA pragatigOskara pragati eMba vAdavannu oppuvudu kaShTa.

AmEle, ee kAvyavella bEDa sAmAnyanige aMdare biDi, nimmoDane nannadEnU mAtilla.

koneyadAgi, kannaDa kelavobbara svattu mAtravalla. kannaDa-bhASheyu adeShTu nimmadO, aShTE nannadu. aShTannu nAvella tiLidukoMDare chennu.

Anonymous ಅಂತಾರೆ...

ನೀಲಗ್ರೀವ ಅವರೆ,

೧. ವರ್ಣಮಾಲೆಯಲ್ಲಿ ಯಾವ ಬದಲಾವಣೆಯನ್ನಾದರೂ ಮಾಡಬೇಕು ಎಂದು ನಾನು ತೀರ್ಮಾನಿಸಿ ಹೇಳಿಲ್ಲ ಎನ್ನುವುದನ್ನು ಮರೆಯಬೇಡಿ. ಇದನ್ನು ಮರೆಯದೆ ಇರಲು ನಿಮಗೆ ಸಾಧ್ಯವಾದರೆ ಮುಂದೆ ಓದಿ.

೨. ಕನ್ನಡ ತಮಿಳು ತರಹ ಆಗಿಬಿಡುತ್ತದೆ ಎನ್ನುವುದು ಆತಂಕದ ವಿಷಯವಾಗಬೇಕಿಲ್ಲ. ಕನ್ನಡ ಮತ್ತು ತಮಿಳುಗಳು ಎಷ್ಟೇ ಆದರೂ ಹತ್ತಿರದ ಭಾಷೆಗಳೇ.

೩. ಮಹಾಪ್ರಾಣಗಳು ಕನ್ನಡದಲ್ಲಿ ಇವೆಯೋ ಇಲ್ಲವೋ ಎಂದು ತೀರ್ಮಾನಿಸಲು ಯಾವುದೋ ಒಂದು ವರ್ಗದ ಕನ್ನಡಿಗರು ಬರೆದಿರುವುದನ್ನು ನೋಡುವುದು ಸರಿಯಾದ ವಿಧಾನವಲ್ಲ. ಇವತ್ತಿನ ದಿನ ಕರ್ನಾಟಕದಲ್ಲಿ ಒಂದು poll ಮಾಡಿ ನೋಡಿ, ಎಷ್ಟು ಜನರ ಬಾಯಲ್ಲಿ ಮಹಾಪ್ರಾಣ ಹೊರಡುತ್ತದೆ, ಎಷ್ತು ಜನರ ಬಾಯಲ್ಲಿ ಹೊರಡುವುದಿಲ್ಲ ಎಂದು ನಿಮಗೆ ಅರ್ಥವಾಗುತ್ತದೆ. ಇದೇ ಸರಿಯಾದ ವಿಧಾನ.

೪. ನಿಮ್ಮ ನಾಲಿಗೆಯಲ್ಲಿ ಮಹಾಪ್ರಾಣ ಚೆನ್ನಾಗಿ ಹೊರಳಿದರೆ ಏನು? ನನ್ನ ನಾಲಿಗೆಯಲ್ಲೂ ಹೊರಳುತ್ತದೆ. ಪ್ರಶ್ನೆ ಇದಲ್ಲ. ಪ್ರಶ್ನೆ: ಶೇಕಡ ಎಷ್ಟು ಜನ ಕನ್ನಡಿಗರ ನಾಲಿಗೆಯಲ್ಲಿ ಹೊರಳುತ್ತದೆ ಎನ್ನುವುದು. ಈ ಸಂಖ್ಯೆ ಬಹಳ ಕಡಿಮೆ. ನೀವು ಯಾವುದೋ ಒಂದು ವರ್ಗದ ಜನರನ್ನು ಮಾತ್ರ ಪರಿಗಣಿಸಿ ಮಾತಾಡುವುದು ಸರಿಯಲ್ಲ.

೫. ಈ "ಕೆಲವೊಬ್ಬರ ಸ್ವತ್ತು" ಎನ್ನುವುದರ ಆರೋಪ ಅನ್ವಯಿಸುವುದು ನಿಮಗೇ. ಶೇ.೯೦ ಜನ ಕನ್ನಡಿಗರ ಬಾಯಲ್ಲಿ ಏನು ಹೊರಳುತ್ತದೆಯೋ, ಏನು ಹೊರಳುವುದಿಲ್ಲವೋ ಅದನ್ನೇ ಸರಿಯೆಂದು ಒಪ್ಪುವುದು ಸಾಧು. ನಮ್ಮಿಬ್ಬರ ಬಾಯಲ್ಲಿ ಹೊರಳುವುದನ್ನಲ್ಲ.

Anonymous ಅಂತಾರೆ...

ಏನ್ಗುರುಗಳೇ, ಕನ್ನಡದ ಉದ್ದಾರ, ಕನ್ನಡಿಗರ ಉದ್ದಾರ - ಇ ಉದ್ದೇಶಗಳನ್ನು ಬಿಟ್ಟು ನೀವು ದಾರಿ ತಪ್ಪಿದ್ದೀರಿ ಎಂದೆನಿಸುತ್ತಿದೆ. ಎಲ್ಲದಕ್ಕೂ ಒಂದು ಮಿತಿ ಎಂಬುದಿರುತ್ತದೆ. ತೀರ ಭಾಷೆಯ ಮೂಲ, ಅದರ ವ್ಯಾಕರಣದ ಮೂಲ ಎಲ್ಲಿಂದ ಬಂದದ್ದು, ಅದನ್ನೇ ಬದಲಿಸೋಣ ಎಂಬ ವಾದ ಸರಿಯಲ್ಲ. ಯಾರೋ ಒಬ್ಬರು ಅವರ ವಯ್ಯುಕ್ತಿಕ ಅಭಿಪ್ರಾಯಗಳನ್ನು ದಾಖಲಿಸಲು ಒಂದು ಪುಸ್ತಕ ಬರೆದ ಮಾತ್ರಕ್ಕೆ ಅದೇ ನಮಗೆ ಮಹಾಭಾರತ/ಬೈಬಲ್ ಅಲ್ಲವಲ್ಲ? ಹೀಗೆ ವ್ಯಾಕರಣ, ಅಕ್ಷರಮಾಲೆ ಇವುಗಳನ್ನು ಬದಲಿಸುತ್ತಾ ಹೋದರೆ ಅದಕ್ಕೆ ಕೊನೆಮ್ೊದಲಿಲ್ಲ. ಈ ಭಾಷೆಗೆ ಒಂದು ನಿರ್ದಿಷ್ಟ ರಚನೆಯೇ ಇಲ್ಲ ಎಂದು ಜನಗಳಿಗೆ, ನಮ್ಮ ಮುಂದಿನ ಪೀಳಿಗೆಗೆಅನ್ ನಿಸುವುದಿಲ್ಲವೇ? ಈ ರೀತಿಯ ಬೆಳವಣಿಗೆಗಳು, ಭ್ಹಾಷೆಯ ಉಪಯೋಗವನ್ನು ಕುಂಠಿತ ಗೊಳಿಸುವುದಿಲ್ಲವೇ? ಸ್ವಲ್ಪ ಯೋಚಿಸಿ ಬರೆಯುವುದು ಒಳ್ಳೆಯದು.

Anonymous ಅಂತಾರೆ...

ಅಚ್ಯುತ ರಾಯರೆ,

ಕನ್ನಡ ಭಾಷೆಯ ಮುಲ, ಅದರ ವ್ಯಾಕರಣ - ಇವೆಲ್ಲವನ್ನೂ ನೀವು ಹೇಳುವಷ್ಟು ಸುಲಭವಾಗಿ ಕಡೆಗಣಿಸಲು ಸಾಧ್ಯವಿಲ್ಲ. ಹೋಗಬೇಕು, ಬುಡಕ್ಕೇ ಕೈ ಹಾಕಬೇಕು. ಹೆದರಿಕೊಳ್ಳಬೇಕೇಕೆ?

ಹಾಗೆಂದ ಮಾತ್ರಕ್ಕೆ ಯಾವ ಬದಲಾವಣೆಗಳನ್ನು ಮಾಡಬೇಕು, ಯಾವುದನ್ನು ಈಗಿರುವಂತೆಯೇ ಒಪ್ಪಿಕೊಳ್ಳಬೇಕು ಎನ್ನುವ ವಿವೇಚನೆ ಕಳೆದುಕೊಳ್ಳಬೇಕು ಎಂದಲ್ಲ.

ಪ್ರಪಂಚದಲ್ಲಿ ಒಂದೇ ಒಂದು ಭಾಷೆಗೆ "ನಿರ್ದಿಷ್ಟವಾದ ರಚನೆ" ಇರುವುದು. ಅದು ಸಂಸ್ಕೃತ. ಮಿಕ್ಕೆಲ್ಲ ಭಾಷೆಗಳೂ ಪ್ರತಿದಿನವೂ ಪ್ರತಿಕ್ಷಣವೂ ಬದಲಾಗುತ್ತಿವೆ. ಕನ್ನಡ ಅಂತಹ ಒಂದು ಭಾಷೆ. ಜನರು ದೈನಂದಿನ ಜೀವನದಲ್ಲಿ ಬಳಸುವ ಭಾಷೆಗಳೆಲ್ಲವೂ ಬದಲಾಗುವಂಥವೇ. ಇದಕ್ಕಾಗಿ ಅಂಜಬೇಡಿ.

ಭಾಷೆಯನ್ನು ದೇಹಿಯೆಂದು ಉಪಾಸಿಸಿ ಸಂಸ್ಕೃತದಲ್ಲೇ ಹೇಳಬೇಕಾದರೆ:

ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ |
ತಥಾಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ||

nIlagrIva ಅಂತಾರೆ...

kIrtana avare,
(kaMglIShigAgi kShame kOruttEne).

shEkaDa 90 maMdi Enu mADuttArO nanage tiLiyadu. nimage nijavAgi ee viShaya nikharavAgi tiLidideyE? dayaviTTu AdhAravodagisidare nODi kaliyabahudu.

kannaDa sAhityadalli alpaprANa-mahAprANagaLa upayOgavannu bahaLa hiMdiniMda kANuttA baMdiddEve. kelavara (athavA nimma prakAra, halavara) bAyalli horaLuvudillaveMdare adannu tegedu hAkabEkeMbudEnU illa.

innoMdu viShaya - kannaDada ADu mattu likhita bhAShegaLa naDuve vyatyAsagaLive. ADu mAtigU nIvu hELiddannu anvayamADuvudu kaShTa. Adare grAMthikabhAShege alpa-prANa mahAprANagaLilladiddare anEka shabdagaLannu nAvu kaLedukoLLabEkAguttade.

shEkaDA toMbhattu jana oMdannu hELuttAre eMdare adE sariyE? idu swalpa kaShTada prashne. illi dIrghavAgi uttarisalu nAnu yatnisuvudilla. nanna prakAra - sariyAgabEku eMbudEnU illa. shAleya makkaLannu nIvu "poll" mADidare - manegelasa, parIkShe yAvudU bEDa annuvavarE siguttAre. hAgeMda mAtrakke avu bEDavE?

"kelavobbara svattu" eMba mAtannu nAnaMdaddu bEreya rItiyalli. kannaDada "bagge" mAtanADuvavara svattu mAtravalla kannaDabhAshe. tamma jIvanagaLalli kannaDavannu nitya upayOgisuva halavara bhASheyU adAgide; avara para yArobbarU vakAlattu vahisuvudu kaShTa- eMdu mAtra hELabayasuttEne.

yAvudO oMdu varga eMdiri - kuveMpu, shivarudrappa, nisAr ahamad, Di.vi.ji, bEMdre - ivarellara bhASheyannu nIvE nODi. ivarella rAjakIyavAgi, arthikavAgi, bEre bEre vargagaLiMda baMdiruvavaru. iMtha mahanIyara kannaDa namagella mAdariyallavE?

bhASheya bagge mADuva badalAvaNe "poll" mADi niShkarShe mADuvaShTu sulabhavalla eMdu vinayadiMda hELuttEne.

En guru, kannaDavanna nIvu bhArata-dEshadiMda bEre aMta nODtidIralla? saMskruta, iMgLIShu aMdare yAke nimagaShTu hiDisalla? ivella joteyallidkoNDive, innU hAgE iratve kUDa. yAvdE oMdanna tegdhAkOdu aShTu sulabha alla. bhASheyannu dvESha mADOdu tappu. ee dvEShavE namma kILarime tOrsOdu. dvESha illadE mane-managaLalli kannaDa uLisikoLLONa. namma parisaradalli kannaDa haraDONa. Aga nODONa, kannaDa ArthikavAgi yAk uddhAra Agalla anta. gaddala ommomme mADabEku. Adare vairada manObhAvaneyiMda kelasa mADidare namagE oLLEdalla. illA guru, sumne nanaganisiddanna hELde.bEjAr mADkobEDi. bhAShegU jAtIgU ella kaTTiTTiddAre. namm bhAShe sthitiyanna chennAgi mADOdE nanagU iShTa. aShTEnu chennAgillada nam bhASheya eegin sthiti innU chennAgAgbEku. bErEyavran tegeLak muMche nam sthiti chennAg mADkobEku. nAvu oLagiMda gaTTiyAgbEku. iMtha vAgvAdagaLiMda prayOjana illa aMta alla. swalpa kaDime aShTe.

iMtu (iMtiyalla),
-nIlagrIva

Anonymous ಅಂತಾರೆ...

ನೀಲಗ್ರೀವ ಅವರೆ,

೧. ಶೇ.೯೦ರಷ್ಟು ಜನ ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಇವತ್ತಿಗೂ ಹೊರಳುವುದಿಲ್ಲ ಎನ್ನುವುದು ನಿಜ. ನೀವು ಎಲ್ಲಾ ಜಾತಿಯ ಕನ್ನಡಿಗರನ್ನೂ ಪರಿಗಣಿಸಿ ನೋಡಿ. (ಇಲ್ಲಿ ನನ್ನನ್ನು ಜಾತಿವಾದ ಮಾಡುವವಳು ಎಂದು ದುಡುಕುವುದಿಲ್ಲ ನೀವು ಎಂದುಕೊಂಡಿದ್ದೇನೆ).

೨. ಹೊರಳುವುದಿಲ್ಲ ಎಂದ ಮಾತ್ರಕ್ಕೆ ತೆಗೆದುಹಾಕಬೇಕು ಎಂದೇನು ನಾನು ಹೇಳಲಿಲ್ಲ. ನನ್ನ ಹಿಂದಿನ ಅನಿಸಿಕೆಯ ಮೊದಲನೇ ಅಂಶವನ್ನು ನೀವು ಓದಲಿಲ್ಲ. ಛೆ!

೩. ಆಡುಮಾತಿಗೆ "ನಾನು ಹೇಳುತ್ತಿರುವುದನ್ನು" ಹೊಸದಾಗಿ ಅಳವಡಿಸಬೇಕಾದದ್ದೇನಾದರೂ ಇದ್ದರೆ ಕೇವಲ ಶೇ. ೧೦ ಕನ್ನಡಿಗರಿಗೆ ಮಾತ್ರ! ಮಿಕ್ಕ ಶೇ. ೯೦ ಜನರಿಗೆ "ನೀವು ಹೇಳುತ್ತಿರುವುದನ್ನು" ಅಳವಡಿಸಲು ನೀವು ಹೊರಟಿದ್ದೀರಿ, ಅಷ್ಟೆ!

೪. ಶೇ. ೯೦ರಷ್ಟು ಜನರು ಹೇಳುವುದೆಲ್ಲಾ ಸರಿಯಲ್ಲ ಎಂಬ ವಿವೇಕ ನನಗಿದೆ. ಆದರೆ ಸ್ವಾಮಿ, ಭಾಷೆಯ ವಿಷಯದಲ್ಲಿ "ಇಂಥದ್ದು ಸರಿ", "ಇಂಥದ್ದು ಸರಿಯಲ್ಲ" ಎಂಬುದೇನೂ ಇಲ್ಲ. ಯಾವುದು ಬಹುಮತವೋ ಅದೇ ಸರಿ! ಸಂಸ್ಕೃತವನ್ನು ಸ್ವಲ್ಪ ಕಲಿತವರೆಲ್ಲಾ ಈ ಸರಿ-ತಪ್ಪಿನ ವಿಷಯದಲ್ಲಿ ತಪ್ಪು ಮಾಡುತ್ತಾರೆ, ಏಕೆಂದರೆ ಸಂಸ್ಕೃತ ವ್ಯಾಕರಣ ನಿಂತ ನೀರು.

೫. "ಯಾವುದೋ ಒಂದು ವರ್ಗ" ಎಂದಿದ್ದಕ್ಕೆ ನೀವು ಕೊಟ್ಟಿರುವ ಹೆಸರುಗಳೆಲ್ಲಾ ಒಂದೇ ವರ್ಗಕ್ಕೆ ಸೇರುತ್ತವೆ ಸ್ವಾಮಿ: ಸಾಹಿತಿಗಳ ವರ್ಗ!

೬. poll ಮಾಡಿ ತೀರ್ಮಾನಕ್ಕೆ ಬರುವುದೇ ಸರಿ ಎಂದು ಮೇಲೂ ವಾದಿಸಿದ್ದೇನೆ, ಮತ್ತೊಮ್ಮೆಯೂ ಹೇಳುತ್ತೇನೆ, ಏಕೆಂದರೆ poll ಇಲ್ಲದೆ ಭಾಷೆಯ ವಿಷಯದಲ್ಲಿ "ಇಂಥದ್ದು ಸರಿ, ಇಂಥದ್ದು ತಪ್ಪು" ಎನ್ನುವುದೆಲ್ಲಾ ಯಾವುದೋ ಒಂದು "ನಿಂತ ನೀರಿ"ಗೆ ಹೋಲಿಸಿದಾಗ ಮಾತ್ರ. ಕನ್ನಡ ಅಂತಹ ನಿಂತನೀರಲ್ಲ.

nIlagrIva ಅಂತಾರೆ...

ನನ್ನ ಕಡೆಯ ಪ್ರಯತ್ನ.
೧. ಶೇಕಡಾ ೯೦ ಕ್ಕೆ ಕನ್ನಡದ ಮಹಾಪ್ರಾಣ ಹೊರಳುವುದಿಲ್ಲ ಎಂದು ನೀವು ಹೇಳುತ್ತಿದ್ದೀರಿ. ವೈಜ್ಞಾನಿಕವಾಗಿ ನೀವೇನೂ ಇದನ್ನು ಪ್ರಮಾಣಿಸಿ ತೋರಿಸಿಲ್ಲ. ಆದ್ದರಿಂದ ಅಂದಾಜಿನ ನಿಮ್ಮ ಈ ಮಾತನ್ನು ಒಪ್ಪಲು ಸಾಧ್ಯವಿಲ್ಲ.

೨. ತೆಗೆದುಹಾಕಬೇಕು ಎಂದು ನೀವು ಹೇಳುವ ಹಾಗಿರುವುದರಿಂದ ನಾನು ಹಾಗೆ ಹೇಳಬೇಕಾಯ್ತು.

೩. ನೀವು ಸಂಖ್ಯೆಗಳನ್ನು ಪುರಾವೆಯಿಲ್ಲದೆ ಉಪಯೋಗಿಸಲಾರಿರಿ. ಮತ್ತೊಮ್ಮೆ, ಇದು ನಿಮ್ಮ ಅಂದಾಜಿನ ಮಾತು.

೪. ಭಾಷೆಯಲ್ಲಿ "ಸರಿ"ಯಾಗುವುದು ಬಹಳಷ್ಟು ಕಾರಣಗಳಿಂದ - ಆರ್ಥಿಕ, ರಾಜಕೀಯ ಮೊದಲಾದವು. ನೂರು ವರ್ಷಗಳ ಹಿಂದೆ ಆಡಿದ ಕನ್ನಡ ಈಗೇನೂ ಆಡುವುದಿಲ್ಲ. ಅಷ್ಟೇಕೆ ಮೈಸೂರಿನ ಕನ್ನಡ slang ಗೂ ಬೆಂಗಳೂರಿನದಕ್ಕೂ ವ್ಯತ್ಯಾಸವಿದೆ. ಇದರಲ್ಲಿ ಸರಿ/ತಪ್ಪು ಎಂದೇನು ಇಲ್ಲ. ಸಂಸ್ಕೃತವ್ಯಾಕರಣವನ್ನು ಪಾಣಿನಿ ಇದಮಿತ್ಥಂ ಎಂದು ನಿಲ್ಲಿಸಿದ್ದರಿಂದಲೇ ಸಾವಿರಾರು ವರ್ಷಗಳ ಹಿಂದಿನ ರಾಮಾಯಣದ ಸಾಲುಗಳು ನಮಗೀಗಲೂ ಅರ್ಥವಾಗುವುದು. "ನಿಂತ ನೀರು" ಎಂದು ಅದನ್ನು ಕರೆದರೆ ಏನು ಹೇಳಬೇಕೋ ತಿಳಿಯದು. That is an intended feature, not a bug. ಇನ್ನೊಂದು ಮಾತನ್ನು ನಿಸ್ಸಂಕೋಚವಾಗಿ ಹೇಳುತ್ತೇನೆ. ಕನ್ನಡದಲ್ಲಿ ನೂತನಪದಗಳ ನಿರ್ಮಾಣ ಶಕ್ತಿ ಸುಲಭವಾಗಿ ಬರಬೇಕಾದರೆ ಅದು ಸಂಸ್ಕೃತದಿಂದಲೇ ಬರಬೇಕು. ಇಲ್ಲವೆಂದರೆ ಆಂಗ್ಲವೋ,ಉರ್ದುವೋ, ಅಥವಾ ಬೇರೆ ಭಾಷೆಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. "ನಿಂತ ನೀರಿನ" ವ್ಯಾಕರಣದ ಸಂಸ್ಕೃತಕ್ಕೆ ಅನಂತಪದನಿರ್ಮಾಣದ ಅಂತಃಶಕ್ತಿಯಿದೆ. ಕನ್ನಡಿಗರಾದ ನಾವು ಅದನ್ನು ಬಳಸಿಕೊಳ್ಳಬೇಕು. ಸಂಸ್ಕೃತ-ಕನ್ನಡಗಳ ನಡುವಿನ ಪಂದ್ಯವಲ್ಲ ಇದು.
೫. ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುವವರು ಸಾಹಿತಿಗಳಲ್ಲದೇ ಇನ್ಯಾರು? ಇನ್ಯಾವ ವರ್ಗದ ಬಗ್ಗೆ ನೀವು ಹೇಳಿದ್ದಿರಿ? ದಿನ ನಿತ್ಯ ದುಡಿಯುವವರಿಗೆ ವಾಸ್ತವವಾಗಿ ಯಾವ ಭಾಷೆಯಾದರೂ ಪರವಾ ಇಲ್ಲ. ಅವರಿಗೆ ಸಂವಹನ ನಡೆದರೆ ಸಾಕು. ಈ ಭಾಷೆ ನಮ್ಮದು ಎಂದು ಅಭಿಮಾನಿಸುವುದಕ್ಕೂ ಸ್ವಲ್ಪ ಸಮಯ ಬೇಕು.ಅದಕ್ಕೆ ಸಾಹಿತಿಗಳ ಭಾಷಾಪ್ರಯೋಗ ನಮಗೆ ಮುಖ್ಯ ಎಂದು ಹೇಳುವುದು.
೬. ಕನ್ನಡ ನಿಂತ ನೀರಲ್ಲ, ಒಪ್ಪಿದೆ. ಹಾಗಾದರೆ ನಿಮ್ಮ ಪ್ರಕಾರ ಜನಪ್ರಿಯ ತಪ್ಪನ್ನು ಕ್ರಮೇಣ ಭಾಷೆಯಲ್ಲಿ ಸೇರಿಸಬಹುದು. ನಾನು ಹಿಂದೆ ಕೊಟ್ಟ ಮಕ್ಕಳ ಪರೀಕ್ಷೆಗಳ ಬಗೆಗಿನ ಉದಾಹರಣೆಯ ಬಗ್ಗೆ ಮತ್ತೊಮ್ಮೆ ಯೋಚಿಸಿ ನೋಡಿ. ಹೇಗಾದರೂ ಇರಲಿ, ನಿಮ್ಮ ಈ ವಿಚಾರ ನನಗೆ ತೀರ ಒಪ್ಪದ ಮಾತಾದ್ದರಿಂದ ಇನ್ನು ಮುಂದಣ ಚರ್ಚೆ ವ್ಯರ್ಥ. ಭಾಷೆ ಮತ್ತು ಅದರ ಉಪಯೋಗಗಳ ಬಗ್ಗೆ ನಮ್ಮಿಬ್ಬರದು ವಿರುದ್ಧ ಯೋಚನೆಗಳೆಂದು ಹೇಳಿ ನನ್ನ ಇಲ್ಲಿನ ಕೊನೆಯ ಮಾತನ್ನು ಮುಗಿಸುತ್ತೇನೆ.

ಎಲ್ಲರಿಗೂ ಒಳ್ಳೆಯದಾಗಲಿ.

ಆನಂದ್ ಅಂತಾರೆ...

ಗೆಳೆಯರೇ,
ನಿಮ್ಮ ವಾದಗಳು ನಮ್ಮ ಅರಿವನ್ನು ಹೆಚ್ಚಿಸುತ್ತಿದೆ.
ಕೀರ್ತನಾ ಅವರೆ,
ನೀಲಗ್ರೀವ ಅವರಂದಂತೆ ಕನ್ನಡದಲ್ಲಿ ಅಮೂಲಾಗ್ರ ಬದಲಾವಣೆ ಮಾಡುದ್ರೆ ತೊಂದರೆಗಳು ಎದುರಾಗಬಹುದೇನೋ. ಆದರೆ ನೀವಂದಂತೆ 'ಋ' ಅಕ್ಷರದಂತಹ ಕೆಲ ಅಕ್ಷರಗಳ ಅಗತ್ಯ ಕನ್ನಡಕ್ಕೆ ಇರುವಂತೆ ಕಾಣುವುದಿಲ್ಲ. ಅಂಥ ಅಕ್ಷರಗಳನ್ನು ತೆಗೆದು ಹಾಕೋದು ಕಲಿಕೆಗೆ ಸುಲಭ ಆಗೋದಾದ್ರೆ ಮುಲಾಜಿಲ್ಲದೆ ತೆಗೀಬೇಕು. ತಾಂತ್ರಿಕವಾಗಿ 'ಋ' ಮತ್ತು 'ರು' ಮಧ್ಯೆ ವ್ಯತ್ಯಾಸ ತೋರಿಸಬಹುದಾಗಿದ್ದರೂ ಉಚ್ಚರಣೆಯಲ್ಲಿ ಅಸಾಧ್ಯ. ಹಾಗೂ ತೋರುಸಕ್ಕೆ ಸಾಧ್ಯ ಅಂದ್ರೆ ಅದು ಪಂಡಿತರಿಗೆ ಮಾತ್ರ ಸಾಧ್ಯ, ಸಾಮಾನ್ಯರಿಗೆ ಅಲ್ಲ ಅಂತ ನನ್ ಭಾವ್ನೆ.
ನೀಲಗ್ರೀವರೆ,
ನಿಮ್ಮ ಕೆಲ ಅನಿಸಿಕೆಗಳ ಬಗ್ಗೆ ನನಗೆ ಅನುಮಾನಗಳಿವೆ. ಬಗೆಹರಿಸಿ.
೧. ಕನ್ನಡ ಭಾಷೆಯ ವ್ಯಾಕರಣ ಈ ದಿನ ಸಂಸ್ಕೃತ ಆಧಾರವಾಗಿದೆ ಅನ್ನೋದನ್ನು ಒಪ್ತೀರಾ ತಾನೆ?
೨. ಕನ್ನಡ ಮತ್ತು ಸಂಸ್ಕೃತಗಳು ಭಿನ್ನ ಮೂಲದ ಭಾಷೆಗಳು, ಅವುಗಳ ಪದವರ್ಗ, ವಾಕ್ಯರಚನಾ ಶೈಲಿ, ಸಂಧಿ ಸಮಾಸಗಳು... ಇವೆಲ್ಲಾ ಒಂದಕ್ಕಿಂತ ಇನ್ನೊಂಡು ಭಿನ್ನವಾಗಿದೆ ಅಲ್ಲವೇ?
೩. ನಿಮ್ಮ ಅನಿಸಿಕೆಯಂತೆ ವ್ಯಾಕರಣವನ್ನು ಸಂಸ್ಕೃತದಿಂದ ಆಮದಾದ ಪದಗಳನ್ನು ಅರ್ಥ ಮಾಡಿಕೊಳ್ಳಲು ಕಲಿಯಬೇಕು ಎನ್ನುವುದು ಸರಿಯೇ? ಯಾಕೆಂದರೆ ನಾವು ಪದಗಳನ್ನು ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಲ್ಯಾಟಿನ್ ಇತ್ಯಾದಿಗಳಿಂದಲೂ ಪಡೆದುಕೊಂಡಿದ್ದೇವೆ ಮತ್ತು ಪಡೆದು ಕೊಳ್ಳುತ್ತಾ ಇದ್ದೇವೆ. ಅವುಗಳೆಲ್ಲದರ ವ್ಯಾಕರಣವನ್ನೂ ಕಲಿಯಬೇಕೆ ಅಥವಾ ಆ ಪದದ ಅರ್ಥ, ನಮ್ಮ ಬಳಕೆಯಲ್ಲಿ ಅದರ ಉದ್ದೇಶ ಅರಿತರೆ ಸಾಕಲ್ಲವೇ? ಯಾಕೆಂದರೆ ಈಗ ಅದೇ ರೀತಿ ನಾವು ಕಲೀತಿರೋದು ಮತ್ತು ಬಳಸ್ತಿರೋದು.
ಉದಾಹರಣೆಗೆ : ನಾವು ಸಾಮಾನ್ಯವಾಗಿ ಬಳಸುವ ಉದ್ಯೋಗ, ಉದ್ಧಾರ, ಉತ್ಪ್ರೇಕ್ಷೆ, ವಾನರ ಇವುಗಳನ್ನು ಸಂಸ್ಕೃತ ವ್ಯಾಕರಣದ ಮೂಲಕ ಅರ್ಥ ಮಾಡಿಕೊಳ್ಳುತ್ತೇವೆಯೇ? ಸಂಸ್ಕೃತದಲ್ಲಿ ಇವುಗಳ ಹುಟ್ಟಿನ ಮೂಲ ಹೀಗಿವೆ.
ಉದ್ಯೋಗ - ಉತ್ + ಯೋಗ [ ಉತ್ = ಮೇಲೆ, ಯೋಗ = ಜೋಡಿಸುವಂಥದ್ದು]
ಉದ್ಧಾರ - ಉತ್ + ಧಾರ [ಉತ್ = ಮೇಲೆ, ಧಾರ = ಎತ್ತಿ ಹಿಡಿಯುವುದು, ಧರಿಸು]
ಉತ್ಪ್ರೇಕ್ಷೆ - ಉತ್ + ಪ್ರ + ಈಕ್ಷಾ [ಉತ್ = ಮೇಲೆ, ಪ್ರ ಅನ್ನೋದು ವಿಶೇಷ ಅರ್ಥಕೊಡುವ ಉಪಸರ್ಗ, ಈಕ್ಷಾ = ನೋಡುವುದು] ವಾನರ - ವಾನಂ + ರಾತಿ ಇತಿ ವಾನರಃ [ ವಾನಂ = ಕಾಡಿನಲ್ಲಿ, ರಾತಿ = ಸಂಚರಿಸೋ]
ನಮ್ಮ ಬಳಕೆ ಮತ್ತು ಗ್ರಹಿಕೆಯಲ್ಲಿ ಈ ಪದಗಳ ಶಬ್ದ ಸ್ವರೂಪ ನಿಷ್ಕರ್ಶೆಗೆ ಮಹತ್ವವೋ ಅಥವಾ ಅದು ನಮ್ಮಲ್ಲುಂಟು ಮಾಡುವ ಅರ್ಥಕ್ಕೋ? ಒಟ್ಟಾರೆ ಸಂಸ್ಕೃತ ಪದಗಳ ನಿಷ್ಕರ್ಷೆ ಮಾಡಲಿಕ್ಕಾಗಿ ಕನ್ನಡಿಗರೆಲ್ಲಾ ಸಂಸ್ಕೃತ ವ್ಯಾಕರಣ ಕಲಿಯಲೇಬೇಕು ಅನ್ನುವುದು ಸರಿಯಲ್ಲ ಅನ್ನಿಸುತ್ತದೆ, ಏನಂತೀರಾ?
೪. ಕನ್ನಡಕ್ಕೆ ಸಂಸ್ಕೃತದಿಂದ ಬಹಳ ಪದಗಳು ಬಂದಿವೆ ಮತ್ತು ಉಲಿಯಲು ಸರಳವಾಗುವಂತೆ ಬದಲಾಗಿವೆ. ಉಚ್ಚರಣೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯದೇನೆ ಅದನ್ನು ಬಳಸುವ ಜನ ಅಂಥ ಬದಲಾವಣೆ ಮಾಡ್ತಾರೆ. ಮಾಡ್ತಾರೆ ಅನ್ನಕ್ಕಿಂತ ಅದಾಗುತ್ತೆ. ಆ ಕಾರಣಕ್ಕೆ ತತ್ಸಮ ತದ್ಭವಗಳು ಆದದ್ದು ಅಂದ್ರೆ ಒಪ್ತೀರಾ? ಉದಾಹರಣೆಗೆ ನಿದ್ರೆ ಅನ್ನೋದು ನಿದ್ದೆ ಆಗಿರೋದು (ಇಂಥಾ ಸಾವಿರಾರು ಉದಾಹರಣೆಗಳಿವೆ)
೫.ಶ್ರೀ ಶಂಕರ ಭಟ್ಟರ ಹೊತ್ತಿಗೆಗಳನ್ನು ಖಂಡಿತಾ ಓದಿ. ಅವರು ಈ ವಿಷಯದಲ್ಲಿ ತಳಮಟ್ತದ ಅಧ್ಯಯನ ಮಾಡಿದ್ದಾರೆ ಮತ್ತು ಪ್ರತಿಯೊಂದು ವಿಷಯಕ್ಕೂ ಸೂಕ್ತವಾಗಿ ಸಮರ್ಥನೆಗಳನ್ನು ಕೊಟ್ಟಿದ್ದಾರೆ. ನಿಮಗೆ ಯಾವ ಅನಿಸಿಕೆ ಇದೆಯೋ ತಿಳಿಯದು ಆದರೆ ಕನ್ನಡವೆನ್ನುವ, ಸಂಸ್ಕೃತದಿಂದ ಭಿನ್ನವಾದ ಜಾತಿಗೆ ಸೇರಿದ ಭಾಷೆಗೆ ಅದರದ್ದೇ ಆದ ನಿಯಮಗಳಿವೆ ಅನ್ನುವುದನ್ನು ಅವರು ನಿರೂಪಿಸಿದ್ದಾರೆ. ಯಾವ 'ಇಸಂ' ಗಳೂ ಇಲ್ಲದೆ ಓದಿದರೆ ಅವರ ಮಾತುಗಳು ಅರ್ಥವಾಗೋದು ಕಷ್ಟವಾಗಲ್ಲ. ಸಂಸ್ಕೃತದ ಬಗ್ಗೆ ಅವರಿಗೆ ಗೌರವವಿದ್ದು ಕನ್ನಡ ಭಾಷೆಯನ್ನು ಅದು ಹೇಗೆ ಶ್ರೀಮಂತಗೊಳಿಸಿದೆ ಅನ್ನೋ ವಿವರಣೆಯೂ ಇದೆ. ಅಲ್ಲಿರುವುದು ವಿಜ್ಞಾನಿಯೊಬ್ಬನ ಹುಡುಕಾಟವೇ ಹೊರತು ಸಿದ್ಧಾಂತಿಯೊಬ್ಬನ ಸಮರ್ಥನೆಯೂ ಅಲ್ಲ ಅವರ ವೈಯಕ್ತಿಕ ಅಭಿಪ್ರಾಯವೂ ಅಲ್ಲ. ಕೇಶಿರಾಜನಾಗಲೀ, ಉಭಯಭಾಷಾ ವಿಶಾರದರುಗಳಾಗಲಿ ಜನಸಾಮಾನ್ಯರ ಬಳಕೆಯಲ್ಲಿರುವ ಪದಗಳನ್ನು, ವಾಕ್ಯರಚನಾ ಶೈಲಿಗಳನ್ನು ಬದಲಾಯ್ಸಕ್ ಆಗಲ್ಲ. ಕನ್ನಡಿಗರು ಯಾವ ವಾಕ್ಯರಚನಾ, ಪದರಚನಾ ನಿಯಮಗಳನ್ನು ಅನುಸರಿಸ್ತಾ ಇದಾರೋ ಅದನ್ನೇ ನಮ್ಮ ವ್ಯಾಕರಣ ಅನ್ನಬೇಕು ಅಂತಾರೆ. ಇದು ಸರಿ ಕೂಡಾ ಅಂತ ನನ್ನ ಅನಿಸಿಕೆ, ಏನಂತೀರಾ?

ತಿಮ್ಮಯ್ಯ

Anonymous ಅಂತಾರೆ...

ನೀಲಗ್ರೀವ,

ನಿಮ್ಮ ಈ "ಕಡೆಯ ಪ್ರಯತ್ನ"ದ ಮಾತು ಯಾಕೋ ಹಿಡಿಸಲಿಲ್ಲ. ನೀವು ಹೇಳುವುದರಲ್ಲಿ ಹುರುಳಿರುವುದು ನಿಜವೇ ಆದರೆ ನಿಂತು ವಾದ ಮಾಡಿ. ಓಡಿ ಹೋಗಬೇಡಿ.

ಸಂಸ್ಕೃತದ ಗಂಧವಿಲ್ಲದಿದ್ದರೂ ಸಂಸ್ಕೃತ ಹಾಗೆ ಹೀಗೆ ಎಂದು ವಾದಿಸುವವ ಹೆಂಗಸರ ಮುಂದೆ ನಿಮ್ಮ ಉತ್ತರನ ವಾದ ನಿಲ್ಲಬಹುದು. ರಣರಂಗದಿಂದ ಹೇಡಿಯಂತೆ ಓಡಿಹೋಗದೆ ಇಲ್ಲೇ ನಿಂತು ವಾದಿಸಿ. ಇದೇ ನಿಮಗೆ ಶ್ರೇಯಕರವು.

೧. ತೆಗೆದುಹಾಕಬೇಕು ಎಂದು ನಾನು ಹೇಳುವ "ಹಾಗಿದೆ" ಎನಿಸಿರುವುದು ನಿಮ್ಮ ಭ್ರಮೆಯಷ್ಟೆ.

೨. ನಾನು ಕೊಟ್ಟಿರುವ ಸಂಖ್ಯೆಗೆ ಪುರಾವೆ ಕೊಟ್ಟಿಲ್ಲ, ನಿಜ. ಆದರೆ ಹುಡುಕುವುದಕ್ಕೆ ನೀವು ಯಾವುದೇ ಒಂದು ಕರ್ನಾಟಕದ ಹಳ್ಳಿಗೆ ಹೋದರೂ, ಇಲ್ಲವೇ ಬ್ರಾಹ್ಮಣೇತರ ಕನ್ನಡಿಗರನ್ನು ಮಾತಾಡಿಸಿ ನೋಡಿದರೆ ಸಾಕು. ಇದನ್ನು ಮಾಡಿ ನೋಡಿ ಎಂದು ನನ್ನ ಕೋರಿಕೆ.

೩. ಸಂಸ್ಕೃತ ವ್ಯಾಕರಣವನ್ನು ಪಾಣಿನಿ "ಇದಮಿತ್ಥಂ ಎಂದು ನಿರ್ಧರಿಸಿದ" ಎನ್ನುವುದು ಪಾಣಿನಿಯ ಕೆಲಸದ ಬಗ್ಗಿನ ಮತ್ತು ವ್ಯಾಕರಣವೆಂದರೆ ಏನು ಎಂಬುದರ ಬಗ್ಗೆಯೇ ನಿಮ್ಮ ಅರಿವಿನ ಕೊರತೆಯನ್ನು ಸೂಚಿಸುತ್ತದೆ. ಪಾಣಿನಿ ಏನನ್ನೂ ನಿರ್ಧರಿಸಲಿಲ್ಲ. ನಿರ್ಧರಿಸುವುದು ವೈಯಾಕರಣಿಯ ಕೆಲಸವಲ್ಲ. ಇರುವುದನ್ನು ಇದ್ದಂತೆ ಹೇಳುವುದೇ ವೈಯಾಕರಣಿಯ ಕೆಲಸ. ಇಲ್ಲದ್ದನ್ನು ಹೀಗಿರಬೇಕೆಂದು ನಿರ್ಧರಿಸಲು ವೈಯಾಕರಣಿಯೇನು ನುಡಿಯಾಡುವವರೊಳಗಿನ ಪ್ರಜಾಪತಿಯಲ್ಲ ಸ್ವಾಮಿ! ಇವತ್ತಿನ ದಿನ ನೀವು ೯೦% ಕನ್ನಡಿಗರು ಮಹಾಪ್ರಾಣವನ್ನು ಉಚ್ಚರಿಸಬೇಕು ಎಂದು "ನಿರ್ಧರಿ"ಸುವುದೂ ಇಂತಹ ಮೂರ್ಖತನವೇ!

೪. ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸಲು ಸಂಸ್ಕೃತದ ನೆರವು ಬೇಕೇ ಬೇಕು ಎನ್ನುವುದು ಸಂಸ್ಕೃತವಾದಿಗಳು ನಿಮ್ಮ ಮೇಲೆ ಮಾಡಿರುವ ಮೋಡಿಯನ್ನು ತೋರಿಸುತ್ತದೆಯಷ್ಟೆ. ಸಂಸ್ಕೃತದ ಪ್ರತಿಯೊಂದು ಪದವನ್ನೂ ನೀವಂದುಕೊಂಡಿರುವಂತೆ ಕನ್ನಡಿಗನ ನಾಲಿಗೆಗೆ ಸುಲಭವಾಗಿ ಬರುವುದಿಲ್ಲ. ಸುಲಭವಾಗಿ ಬರುವಂಥವೂ ಇವೆ, ಅಂಥವು ಮಾತ್ರ ಉಳಿದುಕೊಳ್ಳುತ್ತವೆ. ಮಿಕ್ಕವು ಇಲ್ಲವೇ ಮಾರ್ಪಾಡುಗಳನ್ನು ಹೊಂದುತ್ತವೆ, ಇಲ್ಲ ಇಂಗ್ಲೀಷಿನಿಂದಲೋ ಮತ್ತೊಂದು ಭಾಷೆಯಿಂದಲೋ (ಅವುಗಳನ್ನು ಉಲಿಯುವುದು ಸುಲಭವಾಗಿದ್ದರೆ) ಆಮದಾಗುತ್ತವೆ.

೫. ಕನ್ನಡಕ್ಕೆ ಹೊಸ ಪದಗಳು ಹೊರಗಿನಿಂದಲೇ ಬರಬೇಕು ಎನ್ನುವುದೂ ನಿಮ್ಮ ಕನ್ನಡದ ಬಗ್ಗಿನ ಅರಿವಿನ ಕೊರತೆಯೇ.

೬. ಬೇರೆ ಭಾಷೆಗಳಲ್ಲಿರುವ ಒಂದು ಪದಕ್ಕೆ ಕನ್ನಡದಲ್ಲೂ ಒಂದೇ ಪದ ಇರಬೇಕೆಂಬುದೂ ಸಂಧಿ-ಸಮಾಸಗಳಲ್ಲಿ ಬೇಕಿಲ್ಲದಿದ್ದರೂ ಮುಳುಗಿರುವ ಅರೆಬರೆ ಸಂಸ್ಕೃತ ಕಲಿತವರ ಹುಚ್ಚಷ್ಟೇ. ಜರ್ಮನ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಪದಗುಂಪುಗಳನ್ನು ಹುಟ್ಟಿಸುವ ವಾಡಿಕೆಯಿದೆ. Eau de Toilette ಎನ್ನುವುದು ಫ್ರೇಂಚಿನಲ್ಲಿ ಒಂದು ಪದವಲ್ಲ ಎಂದು ಮರೆಯದಿರಿ.

೭. "ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುವುದು ಸಾಹಿತಿಗಳು" ಎನ್ನುತ್ತೀರಲ್ಲ, ನಿಮಗೆ ಹುಚ್ಚೇ ಹಿಡಿದಿರಬೇಕು. ದಿನಾ ನೀವು ಭಾಷೆಯಲ್ಲದೆ ಇನ್ನೇನು ಉಪಯೋಗಿಸುತ್ತೀರಿ ಸ್ವಾಮಿ? ನಾನಂತೂ ದಿನಾ ಭಾಷೆಯನ್ನೇ ಉಪಯೋಗಿಸುವುದು. ನಾನೇನು ಸಾಹಿತಿಯಲ್ಲ. ನನಗೆ ಗೊತ್ತಿರುವವರೆಲ್ಲರೂ ಭಾಷೆಯನ್ನೇ ಉಪಯೋಗಿಸುವುದು. ಅವರಾರೂ ಸಾಹಿತಿಗಳಲ್ಲ!

೮. "ಜನಪ್ರಿಯ ತಪ್ಪನ್ನು ಕ್ರಮೇಣ ಭಾಷೆಯಲ್ಲಿ ಸೇರಿಸಬಹುದು", ಹೌದು. ಆದರೆ ಮೊದಲು "ತಪ್ಪು" ಎಂದು ನಿರ್ಧರಿಸಲು 5000 ವರ್ಷದ ಹಿಂದೆ ಯಾವುದೋ ಬೇರೆಯೊಂದು ಭಾಷೆಯಲ್ಲಿ ಯಾರೋ ಬರೆದ ವ್ಯಾಕರಣ ಆಧಾರವಲ್ಲ ಎಂದು ನೆನಪಿಡಿ! ಇವತ್ತಿನ ದಿನ ನೀವು "ವೈಯುಕ್ತಿಕ", "ಇಂತು", "ಆಸ್ಪತ್ರೆ", "ಶಿವಪೂಜೆಯಲ್ಲಿ ಕರಡಿ" - ಮುಂತಾದವುಗಳನ್ನು ತಪ್ಪು ಎಂದು ಎಷ್ಟು ಬಾಯಿ ಬಡೆದುಕೊಂಡರೂ ಅದೇ ಸರಿ ಸ್ವಾಮಿ! "ಮುಕ್ಯಮಂತ್ರಿ" ಎನ್ನುವುದು ತಪ್ಪು ಎಂದು ಎಷ್ಟು ನೀವು ಬಾಯಿ ಬಡೆದುಕೊಂಡರೂ ಅದೇ ಸರಿ!

Anonymous ಅಂತಾರೆ...

ಇಷ್ಟು ರಸವತ್ತಾಗಿ ಮಾತುಕತ ನಡೆಯುತ್ತಿರವಾಗ ಈ ಕೊಂಡಿಯನ್ನು ಕೊಡದೇ ಇರಲಾಗಲಿಲ್ಲ!

http://www.sampada.net/blog/hamsanandi/16/04/2007/3720

-ನೀಲಾಂಜನ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails