ಗ್ರಾಹಕನ ಈ ಹಕ್ಕು ಅತಿಮುಖ್ಯ...

ಕರ್ನಾಟಕದಲ್ಲಿನ ಗ್ರಾಹಕರಲ್ಲಿ ತಮ್ಮ ಸಾಮಾನ್ಯ ಹಕ್ಕುಗಳ ಅರಿವು ಹೆಚ್ಚುತ್ತಿದೆ ಎಂದು ಹೇಳುತ್ತಾ ಇಲ್ಲಿ ಇತ್ತೀಚೆಗೆ ರಾಷ್ಟ್ರೀಯ ಗ್ರಾಹಕ ಹಕ್ಕು ದಿನಾಚರಣೆ ಹೆಸರಿನ ಕಾರ್ಯಕ್ರಮವೊಂದು ನಡೀತು. ಮಾರುಕಟ್ಟೆಗೆ ಹೋಗುವ ಗ್ರಾಹಕನಿಗೆ ತನ್ನ ಹಕ್ಕುಗಳ ಅರಿವು ಇರುವುದು ಬಹಳ ಮುಖ್ಯವಾಗುತ್ತೆ. ಅದೂ ಇವತ್ತಿನ ಉದಾರೀಕರಣ ಮತ್ತು ಜಾಗತೀಕರಣದ ಪ್ರಭಾವವಿರುವ ನಮ್ಮ ಮಾರುಕಟ್ಟೆಯಲ್ಲಂತೂ ಗ್ರಾಹಕನ ಜಾಗೃತಿ ಅತಿ ಮುಖ್ಯವಾಗೋಗಿದೆ. ಹೀಗಾಗಿ ಕನ್ನಡಿಗರ ಮಧ್ಯೆ ಗ್ರಾಹಕರ ಸಾಮಾನ್ಯ ಹಕ್ಕುಗಳ ಅರಿವು ಹೆಚ್ಚಿರುವುದು ನಮಗೆ ಸಂತಸ ಕೊಡುವಂತದ್ದು. ಆದರೆ ಕರ್ನಾಟಕದಲ್ಲಿ ಗ್ರಾಹಕರ ಅನುಭವಗಳನ್ನ ಮೆಲಕು ಹಾಕುತ್ತಾ ಈ ಜಾಗೃತಿಯಲ್ಲಿ ಏನೋ ಕೊರತೆ ಇರುವುದು ಕಾಣತ್ತೆ ಗುರು. ಏನದು ಬನ್ನಿ ನೋಡಣ.
ಅಂದು - ಗುಣಮಟ್ಟ, ಪ್ರಮಾಣ, ಬೆಲೆ ಮಾತ್ರಾ : ಇಂದು - ಮಾಹಿತಿ, ಭಾಷೆ ಕೂಡಾ
ಮಾರುಕಟ್ಟೆಯಲ್ಲಿ ಕೊಂಡ ಸಾಮಾನಿನ ಬೆಲೆ, ತೂಕ, ಗುಣಮಟ್ಟ ಇವೇ ಕೆಲವು ವಿಚಾರಗಳಲ್ಲಿ ಇದುವರೆಗೂ ಗ್ರಾಹಕ ತನ್ನ ಹಕ್ಕುಗಳನ್ನು ಚಲಾಯಿಸಿ ಸಮಸ್ಯೆ ಬಗೆಹರಿಸ್ಕೋಬಹುದಿತ್ತು. ಆದರೆ ಇಂದಿನ ಜಾಗತೀಕರಣಗೊಂಡ ಮತ್ತು ಉದಾರೀಕರಣಗೊಂಡ ಮಾರುಕಟ್ಟೆಯ ಲಕ್ಷಣಗಳೇ ಬೇರೆ. ಇಲ್ಲಿ ವಸ್ತುಗಳೊಡನೆ ಮಾಹಿತಿ, ಸೇವೆ, ಸೌಕರ್ಯ ಎಲ್ಲವೂ ಬಿಕರಿಗಿದೆ. ಇಂದು ನಾವು ಇವುಗಳೆಲ್ಲದರ ಗ್ರಾಹಕರಾಗ್ತಿದ್ದೇವೆ. ಈ ಹೊಸ ಪರಿಸ್ಥಿತಿಯಲ್ಲಿ ಗ್ರಾಹಕನ ಹಕ್ಕುಗಳಿಗೆ ಹೊಸದೊಂದು ಆಯಾಮ ಹುಟ್ಟಿಕೊಂಡಿದೆ. ಅದೇನಂದ್ರೆ "ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಥವಾ ಸೇವೆಯು ಗ್ರಾಹಕನಿಗೆ ಸರಿಯಾದ್ದೋ ಅಲ್ವೋ, ಉತ್ತಮವಾದ್ದೋ ಇಲ್ವೋ, ಅವನಿಗೆ ಯಾವುದೇ ಹಾನಿಯುಂಟು ಮಾಡುತ್ತೋ ಇಲ್ವೋ..." ಇವೇ ಮುಂತಾದ ವಿಷಯಗಳ ಬಗ್ಗೆ ಗ್ರಾಹಕನಿಗೆ ಮಾಹಿತಿ ಕೊಡಲಾಗಿದೆಯೇ ಅನ್ನೋದು. ಹಾಗೆ ಕೊಡೋ ಮಾಹಿತಿ ಗ್ರಾಹಕನಿಗೆ ಅರ್ಥ ಆಗ್ದೇ ಇದ್ರೆ ಅಂಥಾ ಮಾಹಿತಿ ಕೊಟ್ಟೂ ಕೊಡದಹಾಗಲ್ವೇ? ಇದೆಲ್ಲದರ ಅರ್ಥ ಏನಪ್ಪ ಅಂದ್ರೆ ಗ್ರಾಹಕನಿಗೆ ಅವನ ನುಡಿಯಲ್ಲಿ ಈ ಮಾಹಿತಿ ಸೇವೆಯನ್ನು ಕೊಡಬೇಕು ಅನ್ನೋದು. ಏಕೆಂದರೆ ತನ್ನ ಭಾಷೆಯಲ್ಲಿರುವ ಮಾಹಿತಿಯೇ ಯಾವುದೇ ಗ್ರಾಹಕನಿಗೆ ಸರಿಯಾಗಿ ತಿಳಿಯುವುದು, ಚೆನ್ನಾಗಿ ಅರ್ಥವಾಗುವುದು. ಜರ್ಮನಿಯಲ್ಲಿ ಗ್ರಾಹಕರಿಗೆ ಸೇವೆ, ಮಾಹಿತಿ ಎಲ್ಲವೂ ಜರ್ಮನ್ ನುಡಿಯಲ್ಲಿ ಹೇಗೋ, ಇಸ್ರೇಲಿನಲ್ಲಿ ಹೀಬ್ರೂ ನುಡಿಯಲ್ಲಿ ಹೇಗೋ ಹಾಗೇ ಕರ್ನಾಟಕದಲ್ಲಿ ಗ್ರಾಹಕ ಸೇವೆ ಕನ್ನಡದಲ್ಲಿ ಸಿಕ್ಕೋದೆ ಸರಿಯಾದ್ದು. ಇಂಗ್ಲಿಷಿನಲ್ಲೋ, ತಮಿಳಲ್ಲೋ, ಹಿಂದಿಯಲ್ಲೋ ಅಲ್ಲ! ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕನ ಭಾಷೆಯ ಪ್ರಯೋಗದ ವಿಚಾರ ಅವನ ಹಿತ ಕಾಪಾಡಲು ಅತಿ ಮುಖ್ಯ ಆಯಾಮವೆಂದು ಹೇಳಬಹುದು.
ಗ್ರಾಹಕ ಹಕ್ಕುಗಳಲ್ಲಿ ಭಾಷಾ ಆಯಾಮ!
ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಸಿಗಬೇಕಾದ ವಸ್ತುವೋ, ಸೇವೆಯೋ ಅವನಿಗೆ ಸರಿಯಾಗಿ ಸಿಗದೇ ಇರೋದ್ರಿಂದ ತೊಂದರೆ ಉಂಟಾಗಬಹುದು. ಇಂತದ್ದೇ ತೊಂದರೆ ಅಂತ ನಿಖರವಾಗಿ ನಮ್ಮ ಗ್ರಾಹಕ-ಕಾನೂನು ಹೇಳದಿದ್ದರೂ ಸಾಮಾನ್ಯವಾಗಿ ತೊಂದರೆಗಳಾದಾಗೆಲ್ಲಾ ಗ್ರಾಹಕರಿಗೆ ಅವರ ಹಕ್ಕುಗಳ ಪ್ರಕಾರ ನ್ಯಾಯ ಸಿಕ್ಕೇ ಇದೆ. ಆ ಕಾನೂನಿನ ಈ ಒಂದು ಭಾಗವನ್ನ ಸೂಕ್ಷ್ಮವಾಗಿ ನೋಡಿದರೆ ಈ ಮಾತು ಅರ್ಥವಾದೀತು:
Section 2(1)(g) of the Act provides that, "deficiency" means any fault, imperfection, shortcoming or inadequacy in the quality, nature and manner of performance which is required to be maintained by or under any law for the time being in force or has been undertaken to be performed by a person in pursuance of a contract or otherwise in relation to any service.
From this definition it can be said that
(i) "Deficiency" means any fault, imperfection, shortcoming or inadequacy in the quality, nature and manner of performance ...

ಹಾಗೆಯೇ, ಮಾರಾಟಕ್ಕಿರುವ ಸಾಮಾನೊಂದರ ಮೇಲೆ ಗ್ರಾಹಕನಿಗೆ ಅರ್ಥವಾಗದಂತೆ (ಅಂದರೆ ಅವನದಲ್ಲದ ಭಾಷೆಯಲ್ಲಿ) ಮಾಹಿತಿಯಿದ್ದಲ್ಲಿ ಅದು ಕೂಡಾ ಗ್ರಾಹಕನಿಗೆ ದೊರಕಿಸೋ ಅಸಮರ್ಪಕ ಸೇವೆಯೆನ್ನಿಸುತ್ತದೆಯಲ್ವಾ ಗುರು?

ಗ್ರಾಹಕರಾಗಿ ನಾವು ಮಾಡಬೇಕಾದ್ದು?

ಕನ್ನಡ ನಾಡಿನಲ್ಲಿ ಗ್ರಾಹಕರಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಕನ್ನಡದಲ್ಲಿ ಗ್ರಾಹಕ-ಸೇವೆಗೆ ಒತ್ತಾಯಿಸಬೇಕಾದ್ದು ನಮ್ಮ ಕರ್ತವ್ಯ. ಜನರಲ್ಲಿ ಈ ವಿಚಾರದ ಬಗ್ಗೆ ಅರಿವು ಮೂಡಿಸಲು ಮುಂದಾಗೋಣ. ಹೊಸ ವರ್ಷದ ಹೊಸ್ತಿಲಿನಲಿ ನಿಂತು ಇನ್ನು ಮುಂದೆ ಇಂತಹ ಅನ್ಯಾಯಗಳನ್ನು ಆಗಬಿಡುವುದಿಲ್ಲ ಮತ್ತು ಅವುಗಳ ವಿರುದ್ಧ ಒಗ್ಗಟ್ಟಿನಿಂದ ದನಿಗೂಡಿಸಿ ಕನ್ನಡದಲ್ಲಿ ಗ್ರಾಹಕ ಸೇವೆಗೆ ಒತ್ತಾಯ ಮಾಡೋಣ, ಗ್ರಾಹಕ ನ್ಯಾಯಾಲಯಗಳಿಗೆ ದೂರು ಸಲ್ಲಿಸಲೂ ಆ ಮೂಲಕ ನಮ್ಮ ಹಕ್ಕನ್ನು ದಕ್ಕಿಸಿಕೊಳ್ಳಲೂ, ಕನ್ನಡದಲ್ಲಿ ಸೇವೆ ನಿರಾಕರಿಸುವವರಿಗೆ ತಕ್ಕ ಪಾಟವನ್ನು ಕಲಿಸಲೂ ಮುಂದಾಗೋಣ ಬಾ ಗುರು!

ಘಜನಿ ದಾಳಿ ಹಿಮ್ಮೆಟ್ಟಲಿ!

ಹಿಂದಿ ಚಿತ್ರಗಳಿಂದ ದೊರಕುವ ಮನರಂಜನೆ ಕನ್ನಡದ ಚಿತ್ರಗಳಿಗಿಂತ ಹೆಚ್ಚಿನದೇನಲ್ಲ ಎನ್ನುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಹಿಂದಿ ಚಿತ್ರಗಳನ್ನು ನೋಡುವುದರಿಂದ ನಾಡಿನಲ್ಲಿ ಹಿಂದಿ ಹೇರಿಕೆಗೆ ನಾವೇ ಮಣೆ ಹಾಕಿದಂತಾಗುತ್ತದೆ, ಹಿಂದಿಯವರು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕನ್ನಡಿಗರನ್ನು ತುಳಿಯಲು ಸುಲಭ ಮಾಡಿಕೊಟ್ಟಂತಾಗುತ್ತದೆ. ಈ ಮೂಲಕ ನಮ್ಮ ನಾಡಿಗೆ ನಾವೇ ದ್ರೋಹಬಗೆದಂತಾಗುತ್ತದೆ. ಆದ್ದರಿಂದ...

ಸ್ವಾಭಿಮಾನಿ ಕನ್ನಡಿಗರೇ! ಈ "ಘಜನಿ" ಚಿತ್ರವೇ ಮೊದಲಾಗಿ ಯಾವ ಹಿಂದಿ ಚಿತ್ರವನ್ನೂ ನೀವು ನೋಡುವುದಿಲ್ಲವೆಂದು ಆಣೆ ಮಾಡಿ! ನಿಮ್ಮ ಗೆಳೆಯರಿಗೂ ನೋಡಬೇಡಿರೆಂದು ಜಾಗೃತಿ ಮೂಡಿಸುತ್ತೀರೆಂದು ಆಣೆ ಮಾಡಿ!
ಇದೇ ತಿಂಗಳ 25ರಂದು ಹೊಸ ಹಿಂದಿ ಸಿನಿಮಾ "ಘಜನಿ" ನಿಯಮ ಮೀರಿ ಬಿಡುಗಡೆಯಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಚಲನ ಚಿತ್ರ ಹಂಚಿಕೆದಾರರು ಮತ್ತು ಪ್ರದರ್ಶಕರ ಜೊತೆ ಆಗಿದ್ದ ಒಡಂಬಡಿಕೆಯನ್ನು ಮುರಿದದ್ದಕ್ಕೆ ತುರ್ತು ಸಭೆ ಕರ್ದು ಮುಂದಿನ ವಾರದಿಂದ ಈ ಚಿತ್ರ ಪ್ರದರ್ಶನಾನ ಹಿಂದೆ ಒಪ್ಪಿದ ಹಾಗೆ ಒಪ್ಪಿದಷ್ಟು ಟಾಕೀಸಲ್ಲಿ ಓಡುಸ್ಬೇಕು ಅನ್ನೋ ಮಾತುಕತೆ ನಡೆದ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ ಗುರು!

ಮನರಂಜನೆ ರೂಪದ ಸಾಂಸ್ಕೃತಿಕ ದಾಳಿ!

ನಮ್ಮ ನಾಡಿನ ಉದ್ದಿಮೆ, ಭಾಷೆ, ಸಂಸ್ಕೃತಿಗಳನ್ನೆಲ್ಲಾ ಕಾಪಾಡಿಕೊಳ್ಳೋ ಮೂಲಭೂತ ಹಕ್ಕು ನಮಗಿದ್ದೇ ಇದೆ. ಇಂಥಾ ಹಕ್ಕನ್ನು ಮೊಟಕು ಮಾಡೋ ಪ್ರಯತ್ನಾನೆ ಈ ರೀತಿ ಎಗ್ಗು ಸಿಗ್ಗಿಲ್ಲದೆ ಬೇರೆ ಭಾಷೆ ಚಿತ್ರಾನ ನಮ್ಮೂರುಗಳಲ್ಲಿ ಬಿಡುಗಡೆ ಮಾಡೋದು. "ಇದು ಭಾರತ, ಯಾರು ಎಲ್ಲಿ ಬೇಕಾದರೂ ತಮ್ಮ ಸಿನಿಮಾನ ಬಿಡುಗಡೆ ಮಾಡ್ಬೋದು" ಅಂತ ಕಥೆ ಹೊಡೆಯೋರು ಅರ್ಥ ಮಾಡ್ಕೊಬೇಕಾದ್ದು ಏನಪ್ಪಾ ಅಂದ್ರೆ ಒಬ್ಬರ ಸಿನಿಮಾ ಬಿಡುಗಡೆ ಮಾಡೊ ಹಕ್ಕು ಒಂದು ಇಡೀ ಪ್ರದೇಶದ ನುಡಿ, ಸಂಸ್ಕೃತಿ ಮತ್ತು ಉದ್ದಿಮೆ, ಉದ್ಯೋಗಗಳ ಅಸ್ತಿತ್ವಕ್ಕೇ ಕೊಡಲಿ ಕಾವಾಗಿದ್ರೆ ಆ ಪ್ರದೇಶದ ಜನತೆ ಹೇಗೆ ಸುಮ್ಮನಿರಕ್ಕಾಗುತ್ತೆ? ಅನ್ನೋದು. ಹಲವು ಹತ್ತು ವರ್ಷಗಳ ಹಿಂದೆ ಭಾರತೀಯ ಚಿತ್ರರಂಗ ಅಂದ್ರೆ ತಮಿಳು, ತೆಲುಗು, ಮಲಯಾಳಂ, ಕನ್ನಡ, ತುಳು, ಮರಾಠಿ, ಗುಜರಾತಿ, ಅಸ್ಸಾಮಿ, ಒಡಿಯಾ, ಪಂಜಾಬಿ, ಕಾಶ್ಮೀರಿ, ಭೋಜಪುರಿ ಮೊದಲಾದ ಚಿತ್ರರಂಗಗಳಿಂದ ಸಮೃದ್ಧವಾಗಿತ್ತು. ಅಂದ್ರೆ ಆಯಾ ಪ್ರದೇಶಗಳ ಚಲನಚಿತ್ರ ಉದ್ಯಮ, ಅದರಿಂದ ಹುಟ್ಟಿಕೊಳ್ಳೋ ಉದ್ಯೋಗಗಳೂ ಸಮೃದ್ಧವಾಗಿದ್ದವು. ನಿಧಾನವಾಗಿ ಒಂದೊಂದೇ ಚಿತ್ರರಂಗಗಳನ್ನು ನುಂಗಿ ನೀರು ಕುಡಿಯುತ್ತಾ ಹಿಂದಿ ಚಿತ್ರರಂಗ ಉಳಿದವುಗಳ ಸರ್ವನಾಶ ಮಾಡಿದ್ದು ಇವತ್ತಿನ ದಿನ ಕಾಣ್ತಿದೆ. ಇವತ್ತು ಈ ಹಿಂದಿ ಮನರಂಜನೆಯೆಂಬ ಪೆಡಂಭೂತಕ್ಕೆ ಇನ್ನೂ ಪೂರ್ತಿ ಬಲಿಯಾಗದೇ ಇರೋ ಚಿತ್ರರಂಗಗಳು ಅಂದ್ರೆ ಬಹುಷಃ ಕನ್ನಡ, ತೆಲುಗು. ತಮಿಳು, ತುಳು ಮತ್ತು ಮಲಯಾಳಂಗಳು ಮಾತ್ರಾ. ಈ ಹಿನ್ನೆಲೆಯಲ್ಲಿ ನೋಡುದ್ರೆ ಈ ಭೂತದ ಮುಂದಿನ ಗುರಿಯೂ ತೆಲುಗು ಮತ್ತು ಕನ್ನಡ ಚಿತ್ರರಂಗಗಳೇ ಅನ್ನೋದೂ ತಿಳಿಯುತ್ತೆ. ಒಟ್ಟಾರೆ ಇದು ಸಿನಿಮಾ ಮೂಲಕ ಒಂದು ನಾಡಿನ ಅಭಿರುಚಿಯನ್ನೇ ಬದಲಾಯಿಸೋ, ಒಂದು ಜನರ ತಮ್ಮ ಭಾಷೆಯಲ್ಲೇ ಮನರಂಜನೆಯನ್ನು ಪಡೆದುಕೊಳ್ಳುವ ಉದ್ದಿಮೆಯನ್ನು ಕೊನೆಗೊಳಿಸೋ ಸಾಂಸ್ಕೃತಿಕ ದಾಳಿ ಆಗುತ್ತೆ ಗುರು!

ಮನರಂಜನೆಯ ರೂಪದ ಸಿಹಿ ವಿಷ
ಮೇಲುನೋಟಕ್ಕೆ ಇದು ಒಂದು ಭಾಷೆಯ ಸಿನಿಮಾ ಬಿಡುಗಡೆಯೆಂಬ ಸಣ್ಣ ವಿಷಯಕ್ಕೆ, ಭಾರತದ ಸಂವಿಧಾನ ಕೊಡಮಾಡಿರೋ ಹಕ್ಕಿನ ಪ್ರತಿಪಾದನೆಯಂತೆ ಕಂಡರೂ ಈ ದಾಳಿಯ ಪರಿಣಾಮ ಘೋರವಾಗಿದೆ. ಅದಕ್ಕೆ ಉದಾಹರಣೆ ಮುಂಬೈ ಮತ್ತು ಮಹಾರಾಷ್ಟ್ರದ ಇಂದಿನ ಸ್ಥಿತಿ. ಮನರಂಜನೆಯ ರೂಪದ ಈ ದಾಳಿ ಹಿಂದಿ ವಸಾಹತಿನ ಸ್ಥಾಪನೆಗೆ ಭದ್ರ ಬುನಾದಿ. ಈ ಮೂಲಕ ಕನ್ನಡಿಗರಿಗೆ ಹಿಂದಿ ಕಲಿಸೋದು, ಹಿಂದಿ ನಾಡಿನಿಂದ ಇಲ್ಲಿ ಬರೋ ವಲಸಿಗರಿಗೆ ಅತ್ಯಂತ ಅನುಕೂಲಕರ ವಾತಾವರಣ ಕಟ್ಟಿ ಕೊಡತ್ತೆ. ಈ ಮೂಲಕ ನಮ್ಮ ನಾಡಿನಲ್ಲೇ ನಮ್ಮ ನುಡಿಯ ಸಾರ್ವಭೌಮತ್ವವನ್ನು ಅಳಿಸುತ್ತಾ ಹೋಗುತ್ತೆ. ಇದರ ಮೂಲಕವೇ ನಮ್ಮೂರಿನ ಅಂಗಡಿ ಮುಂಗಟ್ಟುಗಳ ವ್ಯವಹಾರ ಭಾಷೆಯಾಗಿ ಹಿಂದಿಯೂ ಆರಂಭವಾಗುತ್ತೆ. ಇಲ್ಲೆಲ್ಲಾ ಕನ್ನಡಿಗರಿಗೆ ಕೆಲಸ ಬೇಕು ಅಂದ್ರೆ ತಮ್ಮದಲ್ಲದ ನುಡಿಯಾದ ಹಿಂದಿಯನ್ನು ಕಲಿತಿರಲೇಬೇಕಾದ ಅನಿವಾರ್ಯತೇನ ಹುಟ್ಟುಹಾಕುತ್ತೆ. ಕಡೆಗೆ ಮಾರುಕಟ್ಟೇಲಿ ಮೆರೀಬೇಕಾದ ಕನ್ನಡ ಅಡಿಗೆಮನೆಗೆ ಮೀಸಲಾಗುತ್ತೆ.. ಅಷ್ಟೆ.

ವಾಣಿಜ್ಯ ಮಂಡಳಿಯ ನಿಲುವನ್ನು ಬೆಂಬಲಿಸೋಣ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರಾಗಿರೋ ಶ್ರೀಮತಿ ಜಯಮಾಲ ಅವರ ನೇತೃತ್ವದ ಮಂಡಲಿ ಇವತ್ತು ಸಭೆ ಕರೆದು ತೆಗೆದುಕೊಂಡಿರೋ ನಿರ್ಧಾರ ಯಾವ್ದೇ ಕಾರಣಕ್ಕೂ ಜಾರಿಯಾಗದೇ ಇರಬಾರದು. ಇಡೀ ಕನ್ನಡ ಚಲನ ಚಿತ್ರರಂಗ ಈ ದಿಕ್ಕಲ್ಲಿ ಒಟ್ಟಾಗಿ ಕೆಲಸಮಾಡಲಿ ಅಂತ ಹಾರೈಸೋಣ. ಇವತ್ತು ಘಜಿನಿ ಸಿನಿಮಾ ಅರವತ್ತು ಕಡೆ ಬಿಡುಗಡೆ ಆಗಿ ಒಂದು ವಾರ ಓಡಕ್ಕೆ ಅವಕಾಶ ಕೊಟ್ಟಿರೋ ಅಂತಹ ಘಟನೆಗಳೂ ಮರುಕಳಿಸಬಾರದು. ನಮ್ಮ ಮನರಂಜನೆ, ನಮ್ಮ ಉದ್ಯಮಗಳನ್ನು ಕಾಪಾಡಿಕೊಳ್ಳೋದು ನಮ್ಮ ಹಕ್ಕು ಅನ್ನೋದನ್ನು ಸರ್ಕಾರಗಳು ಮರೀಬಾರ್ದು ಗುರು!

ಕೊನೆಹನಿ : ಒಂದು ದೊಡ್ಡ ಕೆರೆ ಕಟ್ಟಿ ಅಲ್ಲಿ ನೂರಾರು ಥರದ ಮೀನುಗಳನ್ನಿಟ್ಟು ಯಾವ್ದು ಯಾವ್ದುನಾದ್ರೂ ತಿನ್ನಬಹುದು ಅಂದ್ರೆ ಕಡೆಗೆ ಅಲ್ಲಿ ಉಳಿಯೋದು ಬರೀ ಶಾರ್ಕ್ ಒಂದೇ ಅಲ್ವಾ? ಎಲ್ರೂ ಸಮಾನರು, ಎಲ್ಲರನ್ನು ಕಾಪಾಡಕ್ಕೇ ಈ ಕೆರೆ ಕಟ್ಟಿದೀವಿ ಅಂತ ಯಾರಾದ್ರೂ ಬಾಯಲ್ಲಿ ಅನ್ನುತ್ತಾ ಇಂಥಾ ನುಂಗೋ ಹಕ್ಕನ್ನು ಕೊಡೋದಕೆ ಮುಂದಾದ್ರೆ ಅದು ಸಮಾನತೆ ಆದೀತಾ ಗುರು?

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೮: ಸರಣಿಯ ಸಾರಾಂಶ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ಕಳೆದ ಹದಿನೈದು ದಿನಗಳಿಂದ ಇಡುತ್ತ ಬಂದಿದೆ. ಈ ಕಡೆಯ ಬರಹದಲ್ಲಿ ಸರಣಿಯ ಸಾರಾಂಶವನ್ನು ಕೊಟ್ಟಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ / ಕೆಲಸಗಳನ್ನು ಮಾಡಲು ಆಸೆಯಿರುವವರು ನಮಗೊಮ್ಮೆ ಮಿಂಚಿಸಿ.

-- ಸಂಪಾದಕ, ಏನ್ ಗುರು

ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಅದರ ಜನರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳು ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿರುತ್ತವೆ. ಆದ್ದರಿಂದ ಇವುಗಳನ್ನು ಏಳಿಗೆಯ ಮೂರು ಕಂಬಗಳೆಂದು ಕರೆಯಬಹುದು. ಇವುಗಳನ್ನು ಭದ್ರವಾಗಿ ನಿಲ್ಲಿಸದೆ ಹೋದರೆ ಯಾವ ಜನಾಂಗವೂ ಏಳಿಗೆಹೊಂದಲು ಸಾಧ್ಯವಿಲ್ಲ. ಇವುಗಳನ್ನು ನಿಲ್ಲಿಸದೆ ಹೋದ ಜನಾಂಗಗಳು ಇತಿಹಾಸದಲ್ಲಿ ಕುಸಿದುಬಿದ್ದಿವೆ. ಇವತ್ತಿನ ದಿವಸ ಕನ್ನಡಿಗರು ಕಲಿಕೆ, ದುಡಿಮೆ ಮತ್ತು ಒಗ್ಗಟ್ಟು - ಈ ಮೂರರಲ್ಲೂ ಬಹಳ ಹಿಂದಿದ್ದಾರೆ. ಈ ಮೂರು ಕಂಬಗಳನ್ನು ಕನ್ನಡದಿಂದಲೇ ಕಟ್ಟಲಾಗುವುದು. ಕನ್ನಡಿಗರೆಲ್ಲರ ಕಲಿಕೆಯನ್ನು ಕನ್ನಡವಲ್ಲದ ಬೇರೆಯೊಂದು ನುಡಿಯಲ್ಲಿ ಸಾಧಿಸಲಾಗುವುದಿಲ್ಲ. ಕನ್ನಡಿಗರೆಲ್ಲರ ದುಡಿಮೆಯ ನುಡಿಯೂ ಕನ್ನಡವಲ್ಲದೆ ಬೇರೊಂದು ನುಡಿಯಾಗಲಾರದು. ಕನ್ನಡಿಗರೆಲ್ಲರನ್ನೂ ಒಗ್ಗೂಡಿಸುವುದು ಕನ್ನಡವೊಂದೇ.

ಕನ್ನಡಕ್ಕೆ ಇಷ್ಟೆಲ್ಲ ಮಹತ್ವವಿರುವುದರಿಂದ ಅದರ ಸ್ವರೂಪವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ಎಂತಹ ನಂಟಿದೆಯೆಂಬುದರ ಬಗ್ಗೆ ಕನ್ನಡಿಗರಲ್ಲೇ ಸಾಕಷ್ಟು ತಪ್ಪು ತಿಳುವಳಿಕೆಯಿದೆ. ಕನ್ನಡವು ಸಂಸ್ಕೃತದಿಂದ ಹುಟ್ಟಿಬಂದ ನುಡಿಯೆಂಬ ತಪ್ಪು ತಿಳುವಳಿಕೆಯಿದೆ. ಸಾಮಾನ್ಯವಾಗಿ ಜನರು ಆಡುವ ಕನ್ನಡವು ಕೀಳುಮಟ್ಟದ್ದೆಂದೂ ಸಂಸ್ಕೃತದ ಪದಗಳಿಂದ ತುಂಬಿದ್ದರೆ ಮಾತ್ರ ಅದು ಒಳ್ಳೆಯ ಕನ್ನಡವೆಂದೂ ಜನರಲ್ಲಿ ತಪ್ಪು ತಿಳುವಳಿಕೆಯಿದೆ.

ಇದರಿಂದ ಕನ್ನಡಿಗರಲ್ಲಿ ಮೇಲು-ಕೀಳು ಮನೋಭಾವನೆಯೇ ಮೊದಲಾದ ತೊಂದರೆಗಳು ಹುಟ್ಟಿಕೊಂಡುಬಿಟ್ಟಿವೆ. ಆದ್ದರಿಂದ ಎಲ್ಲಾದರೂ ಎಂತಾದರೂ ಇರುವ ಕನ್ನಡಿಗರು ಇವತ್ತಿನ ದಿವಸ ಆಡುತ್ತಿರುವ ನುಡಿಯೇ ಕನ್ನಡವೆಂದು ಕಾಣಬೇಕಾದ್ದು ನುಡಿಯರಿಮೆಯ ನಿಟ್ಟಿನಿಂದಲೂ ಕನ್ನಡಿಗರಲ್ಲಿರುವ ಸಾಮಾಜಿಕ ತೊಂದರೆಗಳ ಹೋಗಲಾಡಿಸುವಿಕೆಯ ನಿಟ್ಟಿನಿಂದಲೂ ಬಹಳ ಮುಖ್ಯ. ಈ ಮೂಲಕ ಕನ್ನಡಿಗರ ಕಲಿಕೆ ಮತ್ತು ದುಡಿಮೆಗಳು ಹೆಚ್ಚುತ್ತವೆ, ಮತ್ತು ಕನ್ನಡಿಗರ ಒಗ್ಗಟ್ಟೂ ಹೆಚ್ಚುತ್ತದೆ.

ಹಿಂದೆ ಸಂಸ್ಕೃತದ ಪದಗಳನ್ನು ಎಡೆತಡೆಗಳಿಲ್ಲದೆ ಕನ್ನಡದ ಬರಹಗಳಿಗೆ ಮತ್ತು ತಿಳುವಳಿಕಸ್ತರ ಆಡುನುಡಿಗೆ ಸೇರಿಸಿಕೊಂಡ ಕಾಲಕ್ಕೂ ಈಗಿನ ಕಾಲಕ್ಕೂ ಅನೇಕ ಸಾಮಾಜಿಕ ಬದಲಾವಣೆಗಳಾಗಿವೆ. ಉದಾಹರಣೆಗಾಗಿ ಅಂದು ಓದು-ಬರಹಗಳು ನಾಡಿಗರಿಗೆಲ್ಲ ಬರಬೇಕೆಂಬುದೇ ಇರಲಿಲ್ಲ. ಬೆರಳೆಣಿಕೆಯ ಕೆಲವರಿಗೆ ಓದು-ಬರಹ ಬಂದಿದ್ದರೆ ಸಾಕಾಗಿತ್ತು. ಆದರೆ ಈಗ ಹಾಗಿಲ್ಲ. ಇವತ್ತಿನ ದಿವಸ ಜುಟ್ಟಿಗೆ ಮಲ್ಲಿಗೆ ಹೂವಿಗಿಂತ ಹೊಟ್ಟೆಗೆ ಹಿಟ್ಟಿನ ಮಹತ್ವ ಹೆಚ್ಚಿದೆ. ಇವತ್ತಿನ ದಿವಸ ಧರ್ಮ-ಮೋಕ್ಷಗಳಿಗಿಂತ ಅರ್ಥ-ಕಾಮಗಳ ವಿದ್ಯೆಗಳ ಬೇಕಾಗುವಿಕೆ ಹೆಚ್ಚಿದೆ. ಆದ್ದರಿಂದ ಈಗ "ಎಲ್ಲರ ಕನ್ನಡ"ಕ್ಕೆ ಸಂಸ್ಕೃತಮಯವಾದ ಕನ್ನಡಕ್ಕಿಂತ ಬಹಳ ಹೆಚ್ಚಿನ ಮಹತ್ವವಿದೆ.

ಹಿಂದೆ ಬರಹದ ಉದ್ದೇಶವೇ ಬೇರೆಯಿತ್ತು. ಬರೆದಿದ್ದನ್ನು ಇಡೀ ಕನ್ನಡಜನಾಂಗವೇ ಓದಲಿ ಎಂಬ ಉದ್ದೇಶವೇ ಬರಹಕ್ಕಿರಲಿಲ್ಲ. ಆದರೆ ಈಗ ಇಡೀ ನಾಡೇ ಓದಬೇಕಾದಂಥದ್ದೆಲ್ಲ ಬರಹದ ರೂಪದಲ್ಲಿ ಬರುತ್ತಿದೆ. ಮುಂದೆ ಹೋಗುತ್ತ ಇಂಥವು ಇನ್ನೂ ಹೆಚ್ಚುತ್ತವೆ, ಹೆಚ್ಚಬೇಕು. ಆದ್ದರಿಂದ ಸಂಸ್ಕೃತವೆಂಬ ಗ್ರಾಂಥಿಕ ಭಾಷೆಯಿಂದ ಪ್ರೇರಣೆಯನ್ನು ಪಡೆದು ಜನರಿಗೆ ಉಲಿಯಲಾರದ್ದನ್ನೆಲ್ಲ, ಅರ್ಥವಾಗದ್ದನ್ನೆಲ್ಲ ಸಂಸ್ಕೃತದ ಪದಗಳೆಂಬ ಕಾರಣಕ್ಕೆ ಬರಹಕ್ಕೆ ಸೇರಿಸಿಕೊಂಡರೆ ಬದಲಾದ ಬರಹದ ಉದ್ದೇಶವು ಈಡೇರಿದಂತಾಗುವುದಿಲ್ಲ. ಅದರ ಬದಲಾಗಿ ಜನರಿಗೆ ಉಲಿಯಲಾಗುವ ಮತ್ತು ಸುಲಭವಾಗಿ ಅರ್ಥವಾಗುವ ಕನ್ನಡದ ಪದಗಳನ್ನು ಬಳಸುವುದೇ ಜಾಣತನ.

ಯಾವುದೇ ಜನಾಂಗದವರ ನಾಲಿಗೆಯಲ್ಲಿ ಓಡಾಡುವ ಪದಗಳು ಅವರ ಏಳಿಗೆ ಮತ್ತು ಏಳಿಗೆಯ ಹರವು - ಎಂಬಿವೆರಡರ ಗುರುತು. ಕನ್ನಡದ ಪದಗಳೆಂದರೆ ಯಾವುವು ಎಂಬ ವಿಷಯದಲ್ಲಿ ಅನೇಕರಿಗೆ ಗೊಂದಲವಿದೆ. ಆ ಗೊಂದಲದ ನಿವಾರಣೆಯನ್ನು ನಾವು ಈ ಸರಣಿಯಲ್ಲಿ ಮಾಡಿಸಿರುತ್ತೇವೆ. ಮುಖ್ಯವಾಗಿ ಹಿಂದಿನವರಿಗೂ ನಮಗೂ ಈ ವಿಷಯವಾಗಿ ಇರುವ ವ್ಯತ್ಯಾಸವೇನೆಂದರೆ ಹಿಂದಿನವರು ಕನ್ನಡದಲ್ಲಿ ಹುಟ್ಟಿಸಿದ ಹೊಸ ಪದಗಳು ಕನ್ನಡಿಗರಿಗೆ ಉಲಿಯಲಾಗಬೇಕು, ಅವರು ಉಲಿಯಬೇಕು ಎಂಬುದನ್ನೇ ಮರೆತಿರುವುದು, ಮತ್ತು ನಾವದನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ಆಗಿದೆ. ಎಂದರೆ - ಕನ್ನಡಿಗರು ಹಿಂದೆ ಉಲಿದಿದ್ದು, ಇಂದು ಉಲಿಯುತ್ತಿರುವುದು ಮತ್ತು ಮುಂದೆ ಉಲಿಯುವುದು - ಇವುಗಳನ್ನೇ ಕನ್ನಡದ ಪದಗಳೆನ್ನಲಾಗುವುದು. ಈ ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗದ ಪದಗಳು ಕನ್ನಡದ ಪದಗಳೆಂದು ಎಣಿಸಲಾಗುವುದಿಲ್ಲ. ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗುವ ಪದಗಳೆಂಥವು ಎಂದು ನಾವು ಈ ಸರಣಿಯಲ್ಲಿ ನಮ್ಮ ಕೈಲಾದಷ್ಟು ತೋರಿಸಿಕೊಟ್ಟಿದ್ದೇವೆ.

ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಸಂಸ್ಕೃತದ ಸೊಲ್ಲರಿಮೆಯ ಅಪಭ್ರಂಶವೆಂಬಂತೆ ಹಿಂದೆ ಸೊಲ್ಲರಿಗರು ತಪ್ಪಾಗಿ ಕಂಡಿದ್ದಾರೆ. ಇದರಿಂದ ಕನ್ನಡದ ನಿಜವಾದ ಸೊಲ್ಲರಿಮೆಗಳೇ ಹೊರಬಂದಿಲ್ಲವೆನ್ನುವ ಕಟು ಸತ್ಯವನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ. ಹೀಗಿರುವುದರಿಂದ ಕನ್ನಡವನ್ನು ಕಲಿಯುವುದು ಮತ್ತು ಕಲಿಸುವುದು ಮುಂತಾದ ಕಡೆ ಬಹಳ ತೊಡಕುಂಟಾಗಿವೆ. ಇದೇ ಮುಂತಾದ ಅನೇಕ ತೊಂದರೆಗಳನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ, ಮತ್ತು ಈ ತೊಂದರೆಗಳನ್ನೆಲ್ಲ ಹೋಗಲಾಡಿಸಬಲ್ಲ ಒಂದು ನಿಜವಾದ ಕನ್ನಡದ ಸೊಲ್ಲರಿಮೆಯ ಬೇಕಿರುವಿಕೆ ಎಷ್ಟಿದೆಯೆಂದು ವಾದಿಸಿದ್ದೇವೆ. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರ ಸಂಶೋಧನೆಗಳು ಮತ್ತು ಹೊತ್ತಗೆಗಳು ಎಷ್ಟು ವೈಜ್ಞಾನಿಕವಾಗಿವೆ, ಮತ್ತು ಈ ತೊಂದರೆಗಳನ್ನು ಹೋಗಲಾಡಿಸುವಲ್ಲಿ ಎಷ್ಟು ಮುಖ್ಯವಾದ ಪಾತ್ರವನ್ನು ಹೊತ್ತಿವೆಯೆಂದು ಕೂಡ ವಾದಿಸಿದ್ದೇವೆ.

ಇವತ್ತಿನ ದಿವಸ ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ಬಯಸುವವರಿಗೆ ಇಂಗ್ಲೀಷ್ ನುಡಿಯು ಬಹಳ ನೆರವು ನೀಡಿದೆ. ಆದರೆ ಕನ್ನಡಿಗರ ಏಳಿಗೆಯಲ್ಲಿ ಇಂಗ್ಲೀಷಿನ ನಿಜವಾದ ಪಾತ್ರವೇನು ಎಂಬ ವಿಷಯದಲ್ಲಿ ಜನರಿಗೆ ಬಹಳ ಗೊಂದಲವಿದೆ. ಆ ಗೊಂದಲವನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಿದ್ದೇವೆ. ಕನ್ನಡಿಗರೆಲ್ಲ ಇಂಗ್ಲೀಷಿನಿಂದ ಅರ್ಥ-ಕಾಮಗಳನ್ನು ಪಡೆದುಕೊಳ್ಳುತ್ತಾರೆ ಎಂಬ ತಪ್ಪು ತಿಳುವಳಿಕೆಯು ಹೋಗಬೇಕಿದೆ (ಇದೇ ತಪ್ಪನ್ನು ಇಂದು ಕೂಡ ಸಂಸ್ಕೃತದ ವಿಷಯದಲ್ಲಿ ಜನರು ಮಾಡುತ್ತಾರೆ). ಅದರ ಬದಲಾಗಿ ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆದುಕೊಂಡು ಬಿಡಬೇಕಾದ್ದನ್ನು ಬಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಇಂಗ್ಲೀಷು ಇವತ್ತಿನ ದಿವಸ ಪ್ರಪಂಚದಲ್ಲಿ ಪಡೆದುಕೊಂಡಿರುವ ಸ್ಥಾನವನ್ನು ಕನ್ನಡವು ಪಡೆದುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ" ಕನ್ನಡಿಗರಲ್ಲಿ ಹುಟ್ಟಬೇಕಿದೆ. ಈ ಆಸೆಯು ಈಡೇರದಿದ್ದರೂ ಆ ನಿಟ್ಟಿನಲ್ಲಿ ಆಗುವ ಕೆಲಸದಿಂದ ನಾಡಿನ ಏಳಿಗೆಯಾಗುತ್ತದೆ. ಅಷ್ಟೇ ಅಲ್ಲದೆ, ಕನ್ನಡಕ್ಕೆ ಆ ಸ್ಥಾನವನ್ನು ಪಡೆದುಕೊಳ್ಳುವ ಯೋಗ್ಯತೆಯೆಲ್ಲ ಇದೆ. ಇಲ್ಲದಿರುವುದು ಕನ್ನಡಿಗರ ಯೋಗ್ಯತೆ ಮಾತ್ರ. ಆ ಯೋಗ್ಯತೆಯನ್ನು ಬರಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಿಗರು ಕೆಲಸ ಮಾಡಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೭: ಏಳಿಗೆಗೆ ಇಂಗ್ಲೀಷನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಳ್ಳಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಹಿಂದೆ ಸಂಸ್ಕೃತವು ಹೇಗೆ ತಿಳುವಳಿಕಸ್ತ ಕನ್ನಡಿಗರ ಧರ್ಮ ಮತ್ತು ಮೋಕ್ಷಗಳ ಬೇಡಿಕೆಗಳನ್ನು ಪೂರೈಸಿತ್ತೋ, ಹಾಗೆ ಇಂದು ಇಂಗ್ಲೀಷು ತಿಳುವಳಿಕಸ್ತ ಕನ್ನಡಿಗರ ಅರ್ಥ ಮತ್ತು ಕಾಮಗಳ ಬೇಡಿಕೆಗಳನ್ನು ಪೂರೈಸುತ್ತಿದೆ. ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ತಂದುಕೊಡುವ ವಿದ್ಯೆಗಳು ಕನ್ನಡದಲ್ಲಿ ಇನ್ನೂ ಎಳವೆಯಲ್ಲಿವೆಯೆಂದರೆ ತಪ್ಪಾಗಲಾರದು. ಇವತ್ತಿನ ದಿವಸ ಇಂಗ್ಲೀಷಿನಿಂದ ಕನ್ನಡಿಗರು ಪಡೆದುಕೊಳ್ಳಬೇಕಾದದ್ದು ಬಹಳವಿದೆಯೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಪಡೆದುಕೊಳ್ಳಬೇಕಾದ್ದನ್ನು ಪಡೆದುಕೊಂಡು ಬೇಡದ್ದನ್ನು ದೂರವಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಕನ್ನಡದ ದೀಪವನ್ನು ಹಚ್ಚಲು ಹೊರಟಾಗ ಇಂಗ್ಲೀಷಿನ ಗಾಳಿಯು ಬೇಕೇ ಬೇಕು. ಆದರೆ ಇಂಗ್ಲೀಷಿನ ಬಿರುಗಾಳಿ ಬಂದರೆ ಆ ದೀಪ ಆರಿಹೋಗುತ್ತದೆ. ಇಂಗ್ಲೀಷು ಇವತ್ತಿನ ದಿನ ಕನ್ನಡಕ್ಕಿಂತ ಹೆಚ್ಚು ಅನ್ನ ತಂದುಕೊಡುವ ಭಾಷೆಯಾಗಿದೆಯೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಹೀಗೇ ಮುಂದುವರೆದರೆ ಕನ್ನಡಜನಾಂಗಕ್ಕೆ ಏಳಿಗೆಯಿಲ್ಲ. ಕನ್ನಡಜನಾಂಗದ ಭಾಷೆ ಕನ್ನಡವಾಗಿರುವಾಗ ಎಲ್ಲರೂ ಇಂಗ್ಲೀಷಿನಿಂದಲೇ ಅನ್ನವನ್ನು ಗಳಿಸಿಕೊಳ್ಳಲಿ ಎನ್ನುವುದು ಮಾಡಿತೀರಿಸಲಾರದ ಮಾತು.

ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆಯಬೇಕು, ಬಾರದ್ದನ್ನು ಕೈಬಿಡಬೇಕು. ಮಡಿವಂತಿಕೆ ಬೇಡ.

ಕೆಲವರಿಗೆ ಇಂಗ್ಲೀಷು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ ವಸಾಹತುಶಾಹಿ ಇಂಗ್ಲೇಂಡಿನ ನುಡಿ. ಆದ್ದರಿಂದ ಅದನ್ನು ನಮ್ಮ ಹತ್ತಿರವೇ ಸೇರಿಸಿಕೊಳ್ಳಬಾರದು ಎಂಬ ತಪ್ಪು ತಿಳಿವಳಿಕೆಯಿದೆ. ಆದರೆ ಇವತ್ತಿನ ದಿವಸ ಇಂಗ್ಲೀಷಿನಲ್ಲಿರುವಷ್ಟು ಜ್ಞಾನ-ವಿಜ್ಞಾನಗಳು ಪ್ರಪಂಚದ ಯಾವ ನುಡಿಯಲ್ಲೂ ಇಲ್ಲ. ಅದಕ್ಕೆ ಪ್ರಪಂಚದಲ್ಲೆಲ್ಲ ಒಪ್ಪಿಗೆಯೂ ಇದೆ. ಆದ್ದರಿಂದ ಅದನ್ನು ಕನ್ನಡಿಗರೆಲ್ಲ ಕಲಿಯಲೇಬೇಕು. ಇನ್ನೂ ಕೆಲವರಿಗೆ ಇಂಗ್ಲೀಷು ಕನ್ನಡದ ಹಗೆಯೆಂಬ ಅನಿಸಿಕೆಯಿದೆ. ಆದರೆ ಇಂಗ್ಲೀಷು ಕನ್ನಡದ ಹಗೆಯಲ್ಲ. ಇಂಗ್ಲೀಷಿನಿಂದ ನಮಗೆ ಸಿಗಬೇಕಾದದ್ದು ಬಹಳವಿದೆ. ಅದನ್ನು ಕನ್ನಡಿಗರು ಬೇಕಾದಷ್ಟು ಮಾತ್ರ ಬಳಸಿಕೊಂಡು, ಮಿಕ್ಕಿದ್ದನ್ನು ಬಿಡಬೇಕು. ಕನ್ನಡದ ತಿಳುವಳಿಕಸ್ತರಿಗೆ ಇಂಗ್ಲೀಷಿನ ಪದಗಳನ್ನು ಕನ್ನಡಕ್ಕೆ ಸೇರಿಸಿದರೆ ಕನ್ನಡ ಕೆಡುತ್ತದೆ ಎಂಬ ಅನಿಸಿಕೆಯಿದೆ. ಆದರೆ ಈ ಮಡಿವಂತಿಕೆಯ ಅವಶ್ಯಕತೆಯಿಲ್ಲವಷ್ಟೇ ಅಲ್ಲ, ಈ ಮಡಿವಂತಿಕೆಯನ್ನು ಜನರೇ ದೂರಮಾಡಿಕೊಂಡಿದ್ದಾರೆ. ಯಾವ ನುಡಿಯಿಂದ ಬೇಕಾದರೂ ಕನ್ನಡಕ್ಕೆ ಪದಗಳು ಎರವಲು ಬರಬಹುದು. ಎರವಲು ಬಂದ ಪದಗಳು ಕನ್ನಡಜನಾಂಗದ "ನಾಲಿಗೆಯ ಪರೀಕ್ಷೆ"ಯಲ್ಲಿ ಪಾಸಾಗಿ ಅವುಗಳು ಯಾವ ರೂಪವನ್ನು ಪಡೆಯುತ್ತವೋ ಅವೆಲ್ಲ ಕನ್ನಡದ ಪದಗಳೇ.

ಇಂಗ್ಲೀಷನ್ನು ಮುಂದುವರೆದ ಮತ್ತು ಮುಂದುವರೆಯದ ಜನಾಂಗಗಳು ಕಾಣುವ ಬಗೆಯಲ್ಲಿ ಇರುವ ಹೆಚ್ಚು-ಕಡಿಮೆ

ಮುಂದುವರೆದ ಜನಾಂಗಗಳಿಗೂ ಮುಂದುವರೆಯದ (ಇಲ್ಲವೇ ಮುಂದುವರೆಯುತ್ತಿರುವ) ಜನಾಂಗಗಳಿಗೂ ಇಂಗ್ಲೀಷನ್ನು ನೋಡುವ ರೀತಿಯಲ್ಲಿ ಬಹಳ ವ್ಯತ್ಯಾಸಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸೇರಿಸಿದ್ದೇವೆ. ಈ ಪಟ್ಟಿಯನ್ನು ಓದುವಾಗ ನಾವು - ಎಂದರೆ ಕನ್ನಡಿಗರು - ಆಯಾ ಸಂದರ್ಭಗಳಲ್ಲಿ ಯಾವ ನಿಲುವನ್ನು ಇಟ್ಟುಕೊಂಡಿದ್ದೇವೆ ಎಂದು ನೀವೇ ಯೋಚನೆ ಮಾಡಿದಾಗ ನಾವು ಮುಂದುವರೆಯದ ಜನಾಂಗಗಳಂತೆ ನಮ್ಮ ನುಡಿಯನ್ನೇ ಕಡೆಗಣಿಸಿ ಇಂಗ್ಲೀಷಿಗೆ ಹಾಕಬಾರದ ಮಣೆಯನ್ನು ಹಾಕುತ್ತಿದ್ದೇವೆ ಎಂಬ ಅರಿವು ನಿಮಗಾಗುತ್ತದೆ. ಇಲ್ಲಿ ನಾವು ಮುಂದುವರೆದ ಜನಾಂಗಗಳೆಂದು ಕರೆದಿರುವುದು ಉದಾಹರಣೆಗೆ ಜಪಾನೀಸರು, ಡಚ್ಚರು, ಫ್ರೆಂಚರು, ಜರ್ಮನ್ನರು, ಇಸರೇಲಿಗಳು, ತೆಂಕಣ ಕೊರಿಯನ್ನರು, ಮುಂತಾದವರು. ಮುಂದುವರೆಯದವೆಂದು ಕರೆದಿರುವ ಜನಾಂಗಗಳಿಗೆ ಉದಾಹರಣೆಗಳು ಎಲ್ಲಾ ಭಾರತೀಯ ನುಡಿಜನಾಂಗಗಳು, ಆಫ್ರಿಕಾದ ನುಡಿಜನಾಂಗಗಳು, ಮುಂತಾದವು.

(ಗಮನಿಸಿ: ಕೆಲವು ಜನಾಂಗದವರಿಗೆ ಇಲ್ಲಿ ಏನನ್ನು ಇಂಗ್ಲೀಷೆಂದು ಕರೆದಿರುವೆವೋ ಅದು ಫ್ರೆಂಚ್, ಡಚ್ ಮುಂತಾದ ಇತರ ಯೂರೋಪಿನ ಭಾಷೆಗಳಾಗಿವೆ)
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಇನ್ನೊಂದು ನುಡಿಜನಾಂಗದವರೊಡನೆ ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ (ಅರಿವಿನ ಹೆಚ್ಚಳಗಳಿಗೆ) ಬಳಸುತ್ತಿವೆ. ಮುಂದುವರೆಯದವು ತಮ್ಮೊಳಗೇ. ವ್ಯಾಪಾರ ಮತ್ತು ಅರಿವೆಚ್ಚಳಗಳಿಗೆ ಇಡೀ ಜಗತ್ತಿನಲ್ಲೆಲ್ಲ ಇಂಗ್ಲೀಷನ್ನೇ ಬಳಸಿಕೊಳ್ಳಬೇಕೆಂಬ ತಪ್ಪುತಿಳುವಳಿಕೆಯು ಮುಂದುವರೆಯದ ಜನಾಂಗದವರಿಗೆ ಇದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ತಮ್ಮ ನಾಡಿನ ಎಲ್ಲೆಯೊಳಗೆ, ಎಂದರೆ ತಮಗಾಗಿಯೇ ಕಟ್ಟಿರುವ ಯಾವ ಏರ್ಪಾಟುಗಳಲ್ಲೂ ಬಳಸುವುದಿಲ್ಲ. ಮುಂದುವರೆಯದವು ಬಳಸುತ್ತವೆ. ಮುಂದುವರೆದ ಜನಾಂಗಗಳಿಗೆ ಮುಂದುವರಿಕೆಗೂ ತಮ್ಮ ನಾಡಿನ ಏರ್ಪಾಟುಗಳು ತಮ್ಮದೇ ನುಡಿಯಲ್ಲಿರುವುದಕ್ಕೂ ಯಾವ ವಿರೋಧವೂ ಕಾಣಿಸುವುದಿಲ್ಲ; ಇನ್ನೂ ಅದು ಪೂರಕವಾಗಿಯೇ ಕಾಣುತ್ತದೆ.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯನ್ನು ಕೈಬಿಟ್ಟು ಇಂಗ್ಲೀಷನ್ನೇ ತಮ್ಮ ಜನಾಂಗದವರು ಎಲ್ಲಾ ಕೆಲಸಗಳಿಗೂ ಬಳಸಬೇಕು ಎಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯ ಕೈಯಲ್ಲಿ ಏನೂ ಆಗುವುದಿಲ್ಲವೆಂಬ ತಪ್ಪು ತಿಳುವಳಿಕೆಯಿದೆ. ಆದರೆ ನಿಜಕ್ಕೂ ನೋಡಿದರೆ ಆಗುವುದು ಬಿಡುವುದು ನುಡಿಯ ಕೈಯಲ್ಲಲ್ಲ, ಜನರ ಕೈಯಲ್ಲಿ. ಮುಂದುವರೆಯದ ಜನಾಂಗದ ಜನರ ಕೈಯಲ್ಲಿ ಕೆಲಸವಾಗಿದ್ದರೆ ಆಗ ಅವರ ನುಡಿಯೇ ಎಲ್ಲಾ ಕೆಲಸಗಳಿಗೂ ಬಳಸಲ್ಪಡುತ್ತಿತ್ತು.
  • ಮುಂದುವರೆದ ಜನಾಂಗಗಳು ತಮ್ಮ ನುಡಿಯಲ್ಲಿ ಜ್ಞಾನ-ವಿಜ್ಞಾನಗಳ ಅರಿವೆಚ್ಚಳಗಳಿಗೆ ಬಳಸಲು ಸಾಧ್ಯವಿಲ್ಲವೆಂದು ತಿಳಿದಿಲ್ಲ. ಮುಂದುವರೆಯದವು ತಿಳಿದಿವೆ. ಈ ಜ್ಞಾನ-ವಿಜ್ಞಾನಗಳಿಗಂತೂ ತಮ್ಮ ನುಡಿಯು ಹೇಳಿ ಮಾಡಿಸಿಲ್ಲವೆಂದೂ ಇಂಗ್ಲೀಷನ್ನು ಹೇಳಿ ಮಾಡಿಸಿದೆಯೆಂದೂ ಇವುಗಳು ತಿಳಿದಿವೆ. ಇದು ಬರೀ ತಪ್ಪು.
  • ಮುಂದುವರೆದ ಜನಾಂಗಗಳು ಬೇರೆ ನುಡಿಜನಾಂಗಗಳೊಡನೆಯೂ ಮೊದಲು ತಮ್ಮ ನುಡಿಯಲ್ಲೇ ವ್ಯವಹರಿಸಲು ಹೊರಡುತ್ತವೆ. ಮುಂದುವರೆಯದವು ಇಂಗ್ಲೀಷಿನಲ್ಲಿ. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಎಲ್ಲೆಲ್ಲೂ ಬಳಸಿ ಅಭ್ಯಾಸವಾಗಿಹೋಗಿರುತ್ತದೆ. ಆದ್ದರಿಂದ ಇನ್ನೊಬ್ಬರೊಡನೆ ಮಾತನಾಡುವಾಗಲೂ ಮೊದಲಿಗೆ ತಮ್ಮ ನುಡಿಯನ್ನೇ ಬಳಸಲು ಮುಂದಾಗುತ್ತವೆ. ಆದರೆ ಮುಂದುವರೆಯದವಕ್ಕೆ ಬೇರೆ ಜನಾಂಗದವರೊಡನೆ ಮಾತನಾಡಿದಾಗೆಲ್ಲ ಇಂಗ್ಲೀಷನ್ನೇ ಬಳಸಬೇಕು, ಇಲ್ಲದಿದ್ದರೆ ತಮ್ಮನ್ನು ಕೀಳಾಗಿ ಅವರು ಕಂಡಾರು ಎಂಬ ಆಧಾರವಿಲ್ಲದ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳು ಇಂಗ್ಲೀಷಿನಲ್ಲಿರುವ ಒಳ್ಳೆಯದನ್ನು ಬಳಸಿಕೊಂಡು ತಮಗೆ ಹಾನಿಯಾಗುವುದನ್ನು ಬಿಡುತ್ತಾರೆ. ಮುಂದುವರೆಯದವು ಹಾನಿಯಾಗುವುದನ್ನೇ ಹೆಚ್ಚು ತೆಗೆದುಕೊಳ್ಳುತ್ತವೆ. ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಮಹತ್ವ ಚೆನ್ನಾಗಿ ಗೊತ್ತಿದೆ. ಅದರಿಂದ ಸಿಗಬೇಕಾದ್ದೇನು ಎನ್ನುವುದು ಚೆನ್ನಾಗಿ ಗೊತ್ತಿದೆ. ಅದರಿಂದ ಏನನ್ನು ಒಳಕ್ಕೆ ಸೇರಿಸಿಕೊಳ್ಳಬಾರದು ಎಂದೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವುಗಳಿಗೆ ಈ ವಿಷಯದಲ್ಲಿ ನಿಧಾನವಾಗಿ ಅಳತೆ ಮಾಡಿ ಬೇಕಾದ್ದನ್ನು ಬರಮಾಡಿಕೊಳ್ಳುವ ಶಕ್ತಿಯಿದೆ.
  • ಮುಂದುವರೆದ ಜನಾಂಗಗಳು ಅವಕಾಶ ಸಿಕ್ಕಾಗೆಲ್ಲ ತಮ್ಮ ನುಡಿಯನ್ನು ಪ್ರಪಂಚದಲ್ಲೆಲ್ಲ ಹರಡುವ ಪ್ರಯತ್ನ ಮಾಡುತ್ತವೆ. ಮುಂದುವರೆಯದವು ಇಂಗ್ಲೀಷನ್ನು. ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆದಷ್ಟೂ ಬಳಕೆಯಲ್ಲಿಟ್ಟಿರಬೇಕು, ಪ್ರಪಂಚದವರಿಗೆಲ್ಲ ಅದನ್ನು ಕಲಿಸಬೇಕು ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿಯು ತಮಗೇ ಬೇಡವಾಗಿರುತ್ತದೆ. ಆದ್ದರಿಂದ ಅದನ್ನು ಹರಡುವ ಆಸೆಯಾಗಲಿ ಅದಕ್ಕೆ ಬೇಕಾದ ಯೋಗ್ಯತೆಯಾಗಲಿ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಂದ ಅವರವರ ನುಡಿಗೆ ಹೆಚ್ಚು ಹೆಚ್ಚು ಪದಗಳು ಸೇರಿಸಲ್ಪಡುತ್ತಿದೆ. ಮುಂದುವರೆಯದವಿಂದ ಇಂಗ್ಲೀಷಿಗೆ. ಮುಂದುವರೆದ ಜನಾಂಗಗಳು ಹೊಸ ಸಂಶೋಧನೆಗಳನ್ನು ತಮ್ಮ ನುಡಿಯಲ್ಲೇ ಮಾಡುವುದರಿಂದ, ತಮ್ಮ ಏರ್ಪಾಟುಗಳಿಗೆ ತಮ್ಮ ನುಡಿಯನ್ನೇ ಬಳಸುವುದರಿಂದ ಅವುಗಳಲ್ಲಿ ಬೇಕಾಗುವ ಹೊಸ ವಸ್ತು ಮತ್ತು ಎಣಿಕೆಗಳಿಗೆ ತಮ್ಮ ನುಡಿಯ ಪದವನ್ನೇ ಸಹಜವಾಗಿ ಹುಟ್ಟಿಸುತ್ತವೆ. ಆದರೆ ಮುಂದುವರೆಯದವು ಎಲ್ಲೆಲ್ಲೂ ಇಂಗ್ಲೀಷನ್ನು ಬಳಸುವುದೇ ಹೆಗ್ಗಳಿಕೆಯೆಂದು ತಪ್ಪಾಗಿ ತಿಳಿದಿರುವುದರಿಂದ ಇವುಗಳಿಂದ ಇಂಗ್ಲೀಷಿನ ಪದಗಳು ಹುಟ್ಟಿಸಲ್ಪಡುತ್ತವೆ.
  • ಮುಂದುವರೆದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಗೌರವವೂ ಇದೆ, ಹೊಟ್ಟೆಕಿಚ್ಚೂ ಇದೆ. ಮುಂದುವರೆಯದವಿಗೆ ಗೌರವವು ಮಾತ್ರ. ಮುಂದುವರೆದ ಜನಾಂಗಗಳು ಇಂಗ್ಲೀಷನ್ನು ಅಖಾಡದಲ್ಲಿ ಸೋಲಿಸಬೇಕಾದ ತನ್ನದೇ ಮಟ್ಟದ ಕುಸ್ತಿಯ ಪಟುವೆಂದು ತಿಳಿದಿರುತ್ತವೆ. ಆದರೆ ಮುಂದುವರೆಯದವಿಗೆ ಇಂಗ್ಲೀಷೆಂಬುದು ಅಖಾಡದಲ್ಲಿ ಎಂದಿಗೂ ಸೋಲಿಸಲಾರದ ಇಡೀ ಜಗತ್ತನ್ನೇ ಗೆಲ್ಲುವ ಕುಸ್ತಿಯ ಪಟುವೆಂಬ ಕೀಳರಿಮೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯ ಉಪಯೋಗ ಬರೀ ಜುಟ್ಟಿಗೆ ಮಲ್ಲಿಗೆ ಹೂವಿಗೆ ಎನಿಸುವುದಿಲ್ಲ. ಮುಂದುವರೆಯದವಿಗೆ ಅನಿಸುತ್ತದೆ. ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯೆಂದರೆ ಬರೀ ನಾಟಕ, ಕವಿತೆ, ಕಾದಂಬರಿ ಮುಂತಾದವುಗಳಿಗೆ ಮೀಸಲಾಗಿರುವುದು ಎಂಬ ಅನಿಸಿಕೆಯಿರುವುದಿಲ್ಲ. ಮುಂದುವರೆಯದವಕ್ಕೆ ಇವುಗಳಿಗೆ ಮಾತ್ರವೇ ತಮ್ಮ ನುಡಿ ಹೇಳಿಮಾಡಿಸಿದೆಯೆಂಬ ತಪ್ಪು ತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯು ಇಂಗ್ಲೀಷಿಗಿಂತ ಕಡಿಮೆ ಸ್ಥಾನದಲ್ಲಿರುವುದಕ್ಕೆ ತಾವೇ (ಎಂದರೆ ಆ ಜನಾಂಗದ ಜನರೇ) ಕಾರಣವೆಂಬ ಅರಿವಿದೆ. ಮುಂದುವರೆಯದವಕ್ಕೆ ವಿಧಿ ಕಾರಣವೆಂಬ ತಪ್ಪುತಿಳುವಳಿಕೆಯಿದೆ. ಎಂದರೆ - ಮುಂದುವರೆದ ಜನಾಂಗಗಳಿಗೆ ನುಡಿಯ ಮೇಲು-ಕೀಳೆಂಬುದು ತಮ್ಮ ಮೇಲು-ಕೀಳಿನ ಸ್ಥಿತಿಯನ್ನೇ ಪ್ರತಿಬಿಂಬಿಸುತ್ತದೆಯೆಂಬುದರ ಅರಿವಿರುತ್ತದೆ. ಆದರೆ ಮುಂದುವರೆಯದವಕ್ಕೆ ತಮ್ಮ ನುಡಿ ಕೀಳಾಗಿರುವುದಕ್ಕೆ ತಮ್ಮ ಕೈಗೆಟುಕದಂತಹ ಶಕ್ತಿಗಳು ಕಾರಣವೆಂಬ ತಪ್ಪುತಿಳುವಳಿಕೆಯಿರುತ್ತದೆ.
  • ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯಲ್ಲಿ ಯಾವ ಕೊರತೆಯೂ ಇದೆಯೆನಿಸುವುದಿಲ್ಲ. ಮುಂದುವರೆಯದವಿಗೆ ಇದೆಯೆನಿಸುತ್ತದೆ. ನಿಜಕ್ಕೂ ನೋಡಿದರೆ ಯಾವ ನುಡಿಯಲ್ಲೂ ಕೊರತೆಯೆಂಬುದಿರುವುದಿಲ್ಲ. ಕೊರತೆಯೆಲ್ಲಾದರೂ ಇದ್ದರೆ ಅದನ್ನಾಡುವ ಜನರಲ್ಲಿ. ಹೀಗಿರುವುದರಿಂದ ಮುಂದುವರೆಯದ ಜನಾಂಗಗಳಿಗೆ ಇಂಗ್ಲೀಷಿನ ಬಗ್ಗೆ ಅತಿ ಹೆಚ್ಚು ಮೋಹವಿರುವುದಿಲ್ಲ.
  • ಮುಂದುವರೆದ ಜನಾಂಗಗಳಿಗೆ ಒಂದಲ್ಲೊಂದು ದಿನ ಇಂಗ್ಲೀಷಿಗಿರುವ ಪಟ್ಟವನ್ನು ತಮ್ಮ ನುಡಿಯು ತೆಗೆದುಕೊಳ್ಳಬೇಕೆಂಬ ಹಂಬಲವಿದೆ, ತಮ್ಮ ಸರದಿಗಾಗಿ ಕಾಯುತ್ತಿವೆ. ಮುಂದುವರೆಯದವಿಗಿಲ್ಲ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯು ಇನ್ನೇನು ಸಾಯಿತ್ತಿದೆ, ಇದು ಇಂಗ್ಲೀಷನ್ನು ಸೋಲಿಸುವ ಮಟ್ಟಕ್ಕೆ ಬರುವುದು ಹಾಗಿರಲಿ, ತಾನು ಅಡುಗೆಮನೆಯಲ್ಲಿ ಬದುಕಿ ಬಾಳುವುದೇ ಕಷ್ಟವಿದೆಯೆಂಬ ಹೇಡಿತನವಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷ್ ಬಾರದವರಿಗೆ ತಮ್ಮ ನಾಡಿನಲ್ಲಿ ತಾವೇ ಪರದೇಸಿಗಳೆನಿಸುವುದಿಲ್ಲ. ಮುಂದುವರೆಯದವಲ್ಲಿ ಅನಿಸುತ್ತದೆ. ಇದು ಏಕೆಂದರೆ ಮುಂದುವರೆಯದ ಜನಾಂಗಗಳಲ್ಲಿ ಇಂಗ್ಲೀಷನ್ನು ತಲೆಯಮೇಲೆ ಕೂಡಿಸಿಕೊಂಡು ಪ್ರತಿಯೊಂದಕ್ಕೂ ಇಂಗ್ಲೀಷು ಬೇಕೇ ಬೇಕೆಂಬ ಪರಿಸ್ಥಿತಿ ಹುಟ್ಟಿಬಿಟ್ಟಿರುವುದರಿಂದ. ಆದರೆ ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷನ್ನು ಎಲ್ಲಿಡಬೇಕೋ ಅಲ್ಲಿಟ್ಟಿರುವುದರಿಂದ ಜನರಿಗೆ ಇಂಗ್ಲೀಷ್ ಬರದೆ ಹೋದರೂ ಎಲ್ಲಾ ಸೌಲತ್ತುಗಳೂ ಕಲಿಕೆಯೂ ಕೆಲಸವೂ ಸಿಗದೆ ಹೋಗುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ದುಡಿಮೆಯಲ್ಲಿ ಅವರವರೇ ಇಂಗ್ಲೀಷಿನಲ್ಲಿ ಮಾತನಾಡಿಕೊಳ್ಳುವುದಿಲ್ಲ. ಮುಂದುವರೆಯದವಲ್ಲಿ ಹೀಗಿದೆ. ಇದೇಕೆಂದರೆ ಅನ್ನವೆಂಬುದು ಇಂಗ್ಲೀಷಿನಿಂದಲೇ ಗಿಟ್ಟಬಲ್ಲುದು ಎಂಬ ತಪ್ಪು ತಿಳುವಳಿಕೆಯು ಮುಂದುವರೆಯದ ಜನಾಂಗಗಳಲ್ಲಿ ಚೆನ್ನಾಗಿ ಹಬ್ಬಿರುತ್ತದೆ. ಇಂಗ್ಲೀಷನ್ನು ಬಳಸದೆ ತಮ್ಮ ನುಡಿಯನ್ನೇನಾದರೂ ಬಳಸಿದರೆ ಅವರನ್ನು ಯಾರಾದರೂ ಕೀಳೆಂದು ತಿಳಿದಾರು ಎಂಬ ಹೆದರಿಕೆ ಅವರಿಗಿರುತ್ತದೆ.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯನ್ನು ಕಡೆಗಣಿಸಿದರೆ ಒಗ್ಗಟ್ಟು ಹಾಳಾಗುತ್ತದೆಯೆಂಬ ಅರಿವಿದೆ. ಮುಂದುವರೆಯದವಿಗಿಲ್ಲ. ಮುಂದುವರೆಯದವಿಗೆ ತಮ್ಮ ಒಗ್ಗಟ್ಟೇ ಬೇಕಾಗಿರುವುದಿಲ್ಲ. ತಮ್ಮ ಒಗ್ಗಟ್ಟಿನಿಂದ ಏನನ್ನು ಸಾಧಿಸಬಹುದು ಎಂಬ ಅರಿವೂ ಅವುಗಳಿಗಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ತಿಳುವಳಿಕಸ್ತರು ಇಂಗ್ಲೀಷಿನಿಂದ ಜನರು ಕಲಿಯಬೇಕಾದ್ದನ್ನೆಲ್ಲ ತಮ್ಮ ನುಡಿಗೆ ಅನುವಾದಿಸಿಕೊಳ್ಳುತ್ತಾರೆ. ಮುಂದುವರೆಯದವಲ್ಲಿ ಅನುವಾದಿಸುವುದಿಲ್ಲ, ಇಂಗ್ಲೀಷ್ ಬಲ್ಲವರು ಮಾತ್ರ ಅದನ್ನು ಕಲಿಯುತ್ತಾರೆ. ಇದು ಏಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಜನರೆಲ್ಲ ಆ ತಿಳುವಳಿಕೆಯ ಉಪಯೋಗವನ್ನು ಪಡೆಯಬೇಕು, ಏಳಿಗೆಯೆಂಬುದು ಆದಷ್ಟೂ ತಮ್ಮ ಜನಾಂಗದಲ್ಲಿ ಹಬ್ಬಬೇಕೆಂಬ ಆಸೆಯಿರುತ್ತದೆ. ಮುಂದುವರೆಯದವಕ್ಕೆ ಹಾಗೆ ಆಸೆಯಿರುವುದಿಲ್ಲ.
  • ಮುಂದುವರೆದ ಜನಾಂಗಗಳಲ್ಲಿ ಇಂಗ್ಲೀಷಿನ ಮಾಧ್ಯಮಗಳಿಗೆ ಕ್ಯಾರೆಯೆನ್ನುವವರಿಲ್ಲ. ಮುಂದುವರೆಯದವಲ್ಲಿ ಅವುಗಳದೇ ಎತ್ತಿದ ಕೈ. ಮಾಧ್ಯಮಗಳು ಇತ್ತೀಚೆಗೆ ಬಹಳ ಮುಖ್ಯವಾದ ಪಾತ್ರವನ್ನು ಪಡೆದುಕೊಂಡಿವೆ. ಇಂಗ್ಲೀಷ್ ಮಾಧ್ಯಮಕ್ಕೆ ಮುಂದುವರೆಯದ ಜನಾಂಗಗಳಲ್ಲಿ ಅತಿಹೆಚ್ಚು ಪ್ರಾಮುಖ್ಯ ಸಿಗುವುದಕ್ಕೆ ಕಾರಣವೇನೆಂದರೆ ಈ ಜನಾಂಗಗಳಿಗೆ ಕೇಳಬೇಕಾದ, ಓದಬೇಕಾದ ಸುದ್ದಿಯಿರುವುದು ಇಂಗ್ಲೀಷಿನಲ್ಲೇ ಎಂಬ ತಪ್ಪು ತಿಳುವಳಿಕೆ.
  • ಮುಂದುವರೆದ ಜನಾಂಗಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೋಗಲು ಇಂಗ್ಲೀಷ್ ಕಲಿಯಬೇಕೆಂಬ ಕಟ್ಟಳೆಯಿಲ್ಲ. ಮುಂದುವರೆಯದವಲ್ಲಿದೆ. ವಿಶ್ವವಿದ್ಯಾಲಯಗಳು ಒಂದು ಜನಾಂಗದ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುತ್ತವೆ. ಆದರೆ ಮುಂದುವರೆಯದ ಜನಾಂಗಗಳಿಗೆ ಆ ವಿಶ್ವವಿದ್ಯಾಲಯಗಳನ್ನು ತಮ್ಮ ಜನರಿಗೋಸ್ಕರ ಮಾಡಬೇಕೆಂಬುದರ ಅರಿವೇ ಇರುವುದಿಲ್ಲ. ಹಾಗಿದ್ದಿದ್ದರೆ ಅವುಗಳಲ್ಲಿ ತಮ್ಮ ನುಡಿಯನ್ನೇ ಹೆಚ್ಚಾಗಿ ಬಳಸುತ್ತಿದ್ದವು.
  • ಮುಂದುವರೆದ ಜನಾಂಗಗಳಲ್ಲಿ ತಮ್ಮ ನುಡಿಯ ಸೊಲ್ಲರಿಮೆಯನ್ನು ಬಲ್ಲ ಪಂಡಿತರಿದ್ದಾರೆ. ಮುಂದುವರೆಯದವಲ್ಲಿ ಇಂಗ್ಲೀಷಿನ ಸೊಲ್ಲರಿಮೆಯನ್ನು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ನುಡಿಯನ್ನು ಆಳವಾಗಿ ತಿಳಿಯುವುದರಿಂದ ಬಹಳ ಉಪಯೋಗಗಳಿವೆಯೆಂಬ ಅರಿವಿರುತ್ತದೆ. ಮುಂದುವರೆಯದ ಜನಾಂಗಗಳಿಗೆ ತಮ್ಮ ನುಡಿಯಿಂದ ಯಾವ ಬಿಡಿಗಾಸು ಪ್ರಯೋಜನವೂ ಇಲ್ಲವೆನಿಸಿರುವುದರಿಂದ ಅವುಗಳ ಸೊಲ್ಲರಿಮೆಯನ್ನು ಬಲ್ಲವರು ಅವುಗಳಲ್ಲಿ ಇರುವುದಿಲ್ಲ.
  • ಮುಂದುವರೆದ ಜನಾಂಗಗಳ ಅತ್ಯುತ್ತಮ ಶಾಲೆಗಳು ಇಂಗ್ಲೀಷ್ ಮಾಧ್ಯಮದವಲ್ಲ. ಮುಂದುವರೆಯದವಲ್ಲಿ ಇಂಗ್ಲೀಷ್ ಮಾಧ್ಯಮದವು. ಇದೇಕೆಂದರೆ ಮುಂದುವರೆದ ಜನಾಂಗಗಳಿಗೆ ತಮ್ಮ ಮಕ್ಕಳು ತಮ್ಮ ನುಡಿಯಲ್ಲೇ ಕಲಿತು ಅದನ್ನು ಇನ್ನು ಹೆಚ್ಚು ಬೆಳೆಸಲಿ, ಅದರಿಂದ ಪಡೆಯುವುದೆಲ್ಲವನ್ನೂ ಪಡೆಯಲಿ ಎಂಬ ಆಸೆಯಿರುತ್ತದೆ. ಆದರೆ ಮುಂದುವರೆಯದ ಜನಾಂಗಗಳಿಗೆ ಅನ್ನವೆಂಬುದೇ ಇಂಗ್ಲೀಷಿನಿಂದ ಸಿಕ್ಕುವುದು ಎಂಬ ತಪ್ಪು ತಿಳುವಳಿಕೆಯಿರುತ್ತದೆ.
ಕನ್ನಡವು ಇಂಗ್ಲೀಷಿನ ಸ್ಥಾನವನ್ನು ಕಿತ್ತುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ"ಯನ್ನು ಕನ್ನಡಿಗರು ಇಟ್ಟುಕೊಳ್ಳಬೇಕು!

ಸಾರಾಂಶವಾಗಿ ಹೇಳುವುದಾದರೆ ಇಂಗ್ಲೀಷಿನಿಂದ ಕಲಿಯಬೇಕಾದ್ದನ್ನು ಕಲಿಯುವುದು ಇವತ್ತು ಅನಿವಾರ್ಯ. ಆದರೆ ಇಂಗ್ಲೀಷಿನಿಂದಲೇ ಕನ್ನಡಿಗರೆಲ್ಲರ ಏಳಿಗೆಯಾಗುತ್ತದೆ, ಏಳಿಗೆಯ ಹಂಚಿಕೆಯಾಗುತ್ತದೆ ಎಂಬ ಹುಚ್ಚು ಅನಿಸಿಕೆಯನ್ನು ಕನ್ನಡಿಗರು ಕೈಬಿಡಬೇಕು. ಬಲು ಎತ್ತರದಿಂದ ಹರಿದುಕೊಂಡುಬಂದಿರುವ ಹೊಳೆಯನ್ನು ಹೇಗೆ ನಿಲ್ಲಿಸಲಾಗುವುದಿಲ್ಲವೋ ಹಾಗೆ ಸಾವಿರಾರು ವರ್ಷಗಳಿಂದ ಬಾಳಿಕೊಂಡು ಬಂದಿರುವ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷನ್ನು ಅದರ ಬದಲಾಗಿ ಕರ್ನಾಟಕದಲ್ಲೆಲ್ಲ ಬಳಸಲಾಗುವುದಿಲ್ಲ. ಆದ್ದರಿಂದ ಏಳಿಗೆಯ ಹಂಚಿಕೆ ಮತ್ತು ಜ್ಞಾನ-ವಿಜ್ಞಾನಗಳಿಗೆ ಕನ್ನಡಿಗರು ಕೊಡಬೇಕಾದ ಮುಂದಿನ ಕೊಡುಗೆಗಳನ್ನೆಲ್ಲ ಮನಸ್ಸಿನಲ್ಲಿಟ್ಟು ಕನ್ನಡಕ್ಕೆ ಕನ್ನಡಿಗರಲ್ಲಿರುವ ಮೊದಲ ಸ್ಥಾನವನ್ನು ಗಮನಿಸಬೇಕು. ನಿಧಾನವಾಗಿ ಕನ್ನಡವನ್ನು ಕಲಿಕೆಯಲ್ಲಿ ಎಲ್ಲೆಲ್ಲೂ ಬಳಸುವಂತೆ ಮಾಡಬೇಕು. ಹಾಗೆಯೇ ಇವತ್ತಿನ ದಿವಸ ಗ್ರಾಹಕ ಸೇವೆ, ಸರ್ಕಾರದ ಲೆಕ್ಕಪತ್ರಗಳು, ಬೀದಿಗಳಲ್ಲಿ ಬರೆದಿರುವುದೆಲ್ಲ ಇಂಗ್ಲೀಷುಮಯವಾಗಿರುವುದು ಹೋಗಿ ಎಲ್ಲವೂ ಕನ್ನಡಮಯವಾಗಬೇಕು. ಕನ್ನಡಕ್ಕೆ ಇಲ್ಲೆಲ್ಲೂ ನಿಲ್ಲಲು ಕಾಲಿಲ್ಲವೆಂದೇನಿಲ್ಲ.

ಇವತ್ತು ಉನ್ನತಶಿಕ್ಷಣವೊಂದನ್ನು ಬಿಟ್ಟು ಮಿಕ್ಕ ಇನ್ನೆಲ್ಲೆಲ್ಲಿ ಇಂಗ್ಲೀಷಿನ ಬಳಕೆಯಾಗುತ್ತಿದೆಯೋ ಅಲ್ಲೆಲ್ಲ ಕನ್ನಡವು ಇಂಗ್ಲೀಷಿನ ಬದಲಾಗಿ ಬರುವಂತಾಗಿಸುವುದು ಬಹಳ ಸುಲಭ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಜನರು ಕೆಲಸ ಮಾಡಬೇಕು. ಕೊನೆಗೆ ಉನ್ನತಶಿಕ್ಷಣವೂ ಕನ್ನಡದಲ್ಲಿ ದಕ್ಕುವುದಿಲ್ಲ ಎಂಬ ಪರಿಸ್ಥಿತಿಯನ್ನು ನಿಧಾನವಾಗಿ ತೆಗೆದುಹಾಕಬೇಕು.

ಇವತ್ತು "ಹುಚ್ಚು" ಎನಿಸಿದರೂ ಕನ್ನಡವು ಒಂದು ದಿನ ಇಂಗ್ಲೀಷಿನ ಪಾತ್ರವನ್ನು ಜಗತ್ತಿನಲ್ಲೆಲ್ಲ ವಹಿಸಬೇಕೆಂಬ ಕನಸನ್ನು ಕನ್ನಡಿಗರು ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಅರ್ಹತೆಗಳೂ ಕನ್ನಡಕ್ಕಿದೆ. ಪ್ರಶ್ನೆ ಇಲ್ಲಿ ಬರುವುದು "ಕನ್ನಡಿಗರಿಗೆ ಆ ಅರ್ಹತೆ, ಯೋಗ್ಯತೆಗಳು ಇವೆಯೆ?" ಎಂಬುದು. ಆ ಅರ್ಹತೆ, ಯೋಗ್ಯತೆಗಳನ್ನು ಕನ್ನಡಿಗರು ಬರಿಸಿಕೊಳ್ಳಬೇಕು. ಅದಕ್ಕೆ ಇಂಗ್ಲೀಷನ್ನು ಉಪಯೋಗಿಸಿದರೂ ಚಿಂತೆಯಿಲ್ಲ.

ಮುಂದಿನ ಬರಹ: ಈ ಸರಣಿಯ ಕಡೆಯ ಬರಹ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೬: ಕನ್ನಡದ ನಿಜವಾದ ಸೊಲ್ಲರಿಮೆಯು ಹುಟ್ಟಿ ಜನಪ್ರಿಯವಾಗಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಸೊಲ್ಲರಿಮೆ (ವ್ಯಾಕರಣ) ಎಂದರೇನು?

ಸೊಲ್ಲರಿಮೆಯೆಂದರೆ ಮಾತಿನ ಕಟ್ಟಳೆ. (ಅಂದಹಾಗೆ ಸೊಲ್ಲು ಎಂದರೆ ಮಾತು. ಅರಿಮೆ ಎಂದರೆ ಅರಿವಿನ ಒಂದು ಬಗೆ -- ಎಷ್ಟು ಸುಲಭ!).

ಒಂದೇ ನುಡಿಯನ್ನಾಡುವ ಪ್ರತಿಯೊಬ್ಬರೂ ಮಾತನಾಡುವಾಗ ತಮಗೆ ಗೊತ್ತಿಲ್ಲದೆಯೇ ಕೆಲವು ಕಟ್ಟಳೆಗಳನ್ನು ಒಪ್ಪಿನಡೆದಿರುತ್ತಾರೆ. ಬೇರೆಬೇರೆ ನುಡಿಗಳಲ್ಲಿ ಈ ಕಟ್ಟಳೆಗಳು ಬೇರೆಬೇರೆಯಾಗಿರಲು ಸಾಧ್ಯವಿದೆ. ಉದಾಹರಣೆಗೆ ಕನ್ನಡದಲ್ಲಿ "ಮೂರು ಕರಿ ಕುರಿ ಮೇಯ್ತಿತ್ತು" ಎನ್ನುವಾಗ ಯಾವ ಸೊಲ್ಲರಿಮೆಯ ಕಟ್ಟಳೆಯನ್ನೂ ಮುರಿದಂತಲ್ಲ. ಆದರೆ ಇಂಗ್ಲೀಷಿನಲ್ಲಿ "three black sheep was grazing" ಎಂದರೆ ತಪ್ಪಾಗುತ್ತದೆ. ಸಂಸ್ಕೃತ ಹಾಗೂ ಹಿಂದಿಗಳಲ್ಲೂ ಹೀಗೆ ಹೇಳಿದರೆ ತಪ್ಪಾಗುತ್ತದೆ.

ಸಾಮಾನ್ಯವಾಗಿ ಒಂದೇ ನುಡಿಯನ್ನು ತುಸು ಬೇರೆಬೇರೆ ಬಗೆಗಳಲ್ಲಿ ಆಡಲ್ಪಡುವ ಒಳನುಡಿಗಳು (dialects) ಇರುತ್ತವೆ. ಒಂದು ಒಳನುಡಿಯವರ ಮಾತು ಇನ್ನೊಂದು ಒಳನುಡಿಯವರಿಗೆ ಅರ್ಥವಾಗುತ್ತದೆ, ಆದರೆ ಒಂದರೊಳಗೆ ಇನ್ನೊಂದರವರು ಆಡುವಂತೆ ಸಾಮಾನ್ಯವಾಗಿ ಮಾತನಾಡುವುದಿಲ್ಲ. ಹೀಗಿರುವಾಗ ಬೇರೆಬೇರೆ ಒಳನುಡಿಯವರ ನಡುವೆ ಸಂಪರ್ಕ ಇದ್ದೇ ಇರುವುದರಿಂದ (ಮತ್ತು ಇರುವುದು ಒಗ್ಗಟ್ಟು ಮತ್ತು ಅದರ ಮೂಲಕ ಏಳಿಗೆಗೆ ಬೇಕಾಗಿಯೂ ಇರುವುದರಿಂದ) ಎಲ್ಲರಿಗೂ ಒಪ್ಪುವ "ಮಾತಿನ ಕಟ್ಟಳೆಗಳು" ಹುಟ್ಟಿಕೊಂಡಿರುತ್ತವೆ. ಇವುಗಳನ್ನೇ ಆ "ಎಲ್ಲರ ನುಡಿ"ಯ ಸೊಲ್ಲರಿಮೆಯೆನ್ನುವುದು.

ಗಮನಿಸಿ: ಈ ಬರಹದ ಮಟ್ಟಿಗೆ "ಸೊಲ್ಲರಿಮೆ" ಎಂದರೆ "ಸೊಲ್ಲರಿಮೆಯ ಹೊತ್ತಗೆ" ಎಂಬ ಅರ್ಥದಲ್ಲೂ ಬಳಸಿದ್ದೇವೆ. ಎಲ್ಲಿ ಯಾವ ಅರ್ಥವು ಹೊಂದುತ್ತದೆಯೋ ಅದನ್ನೇ ಓದುಗರು ತೆಗೆದುಕೊಳ್ಳಬೇಕು.

ಸೊಲ್ಲರಿಮೆಯನ್ನು ಕಲಿಯುವುದರಿಂದ ಏನು ಪ್ರಯೋಜನ?

ಯಾವುದೇ ನುಡಿಯ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಟ್ಟಿರಲಿ ಇಟ್ಟಿಲ್ಲದಿರಲಿ ಆ ಕಟ್ಟಳೆಗಳಂತೂ ಇದ್ದೇ ಇರುತ್ತವೆ. ಜನರಿಗೆ ತಾವಾಡುವ ಮಾತಿನ ಕಟ್ಟಳೆಗಳು ಇಂಥವು ಎಂದು (ಒಬ್ಬ ಸೊಲ್ಲರಿಗನಿಗೆ ತಿಳಿದಂತೆ) ತಿಳಿದಿರಲಿ ತಿಳಿದಿಲ್ಲದಿರಲಿ, ಅವರು ಮಾತನಾಡುವಾಗ ಆ ಕಟ್ಟಳೆಗಳನ್ನು ಒಪ್ಪಿಯೇ ನಡೆಯುತ್ತಾರೆ. "ಕನ್ನಡದಲ್ಲಿ ಎಷ್ಟು ರೀತಿಯ ಜೋಡಿಪದಗಳಿವೆ?" ಎನ್ನುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ ಆವೆಲ್ಲ ಬಗೆಯ ಜೋಡಿಪದಗಳನ್ನೂ ಜನರು ಆಡುತ್ತಲೇ ಇರುತ್ತಾರೆ.

ಆದರೂ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ಬರೆದಿಡುವುದರಿಂದ ಮತ್ತು "ನಮ್ಮ ನುಡಿಯಲ್ಲಿ ಇಂತಹ ಕಟ್ಟಳೆಗಳಿವೆ" ಎಂದು ಹೇಳಿಕೊಡುವುದರಿಂದ/ಕಲಿಯುವುದರಿಂದ ಬಹಳ ಉಪಯೋಗವಿದೆ. ನುಡಿಯನ್ನು ಕಲಿಯುವವರಿಗೆ ಇದರಿಂದ ಬಹಳ ನೆರವಾಗುತ್ತದೆ. ಬರಹವು ಎಂತಹ ಕಟ್ಟಳೆಗಳನ್ನು ಪಾಲಿಸಬೇಕು ಎಂದು ತಿಳಿಸಿಕೊಡುವಲ್ಲಿ ನೆರವಾಗುತ್ತದೆ. ಬರಹವನ್ನು ಬರೆಯುವಾಗ ಮಾತನಾಡುವಾಗಿದ್ದಂತೆ ಮುಂದೆ ಯಾರೋ ಒಬ್ಬರಿದ್ದು ಅವರೊಡನೆ ಕೊಟ್ಟು-ತೊಗೊಳ್ಳುವಿಕೆ ನಡೆಯಬೇಕು ಎಂಬುದೇನೂ ಇಲ್ಲದಿರುವುದರಿಂದ ಬರಹಕ್ಕಂತೂ ಈ ಕಟ್ಟಳೆಗಳ ಅರಿವಿರುವುದು ಬಹಳ ಮುಖ್ಯ. ಅವುಗಳ ಅರಿವಿಲ್ಲದಿದ್ದರೆ ಬರೆದ ಒಂದೇ ಸೊಲ್ಲನ್ನು ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ. ಮಕ್ಕಳಿಗೆ ನುಡಿಯನ್ನು ಕಲಿಸಲು ಕೂಡ ಬಹಳ ನೆರವಾಗುತ್ತದೆ. ಹೊಸ ಪದಗಳನ್ನು ಹುಟ್ಟಿಸುವ ಕೆಲಸಕ್ಕೂ ಬಹಳ ನೆರವಾಗುತ್ತದೆ. ಈಗಾಗಲೇ ಇರುವ ಪದಗಳನ್ನು ಅರ್ಥಮಾಡಿಕೊಂಡಾಗ ತಾನೇ ಹೊಸ ಪದಗಳನ್ನು ಹುಟ್ಟಿಸಲಾಗುವುದು? ಆದ್ದರಿಂದ.

ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳು

ಕನ್ನಡದ ಸೊಲ್ಲರಿಮೆ ಎಂಥದ್ದು ಎಂದು ತಿಳಿದುಕೊಳ್ಳುವಲ್ಲಿ ಹಿಂದಿನ ಸೊಲ್ಲರಿಗರು (grammarians) ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಆದ್ದರಿಂದ ಕನ್ನಡದ ಸೊಲ್ಲರಿಮೆಯನ್ನು ಹೊತ್ತಗೆಗಳಲ್ಲಿ ದಾಖಲಿಸುವಾಗ ಅದೇ ತಪ್ಪುಗಳು ಉಳಿದುಕೊಂಡುಬಿಟ್ಟಿವೆ. ಈ ಕೊರತೆಗಳಿಗೆಲ್ಲ ಕಾರಣವೇನೆಂದರೆ ಹಿಂದಿನವರು ಕನ್ನಡದ ಸೊಲ್ಲರಿಮೆಯನ್ನು ಸಂಸ್ಕೃತದ ವ್ಯಾಕರಣದ ಆಧಾರದ ಮೇಲೆ ಕಟ್ಟಿದ್ದು. ಹೀಗೇಕೆ ಆಧಾರವಾಗಿಟ್ಟುಕೊಂಡಿದ್ದರು ಎಂದು ಹಿಂದೆಯೇ ನಾವು ತಿಳಿಸಿಕೊಟ್ಟಿರುವುದರಿಂದ ಮತ್ತೊಮ್ಮೆ ಅದನ್ನೇ ಹೇಳುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಆಧಾರವಾಗಿ ಇಟ್ಟುಕೊಂಡಿದ್ದರಿಂದ ಕನ್ನಡದ ಸೇರಿಕೆಯ ನಿಯಮಗಳು, ಪದವರ್ಗಗಳು, ಪದಗಳ ಒಳರಚನೆ, ಸಮಾಸಗಳು, ಲಿಂಗಗಳು, ವಚನಗಳು, ವಿಭಕ್ತಿಗಳು, ಸರ್ವನಾಮಗಳು ಮತ್ತು ಎಣಿಕೆಯ ಪದಗಳು, ಕ್ರಿಯಾರೂಪಗಳು -- ಮುಂತಾದ ಹೆಚ್ಚುಕಡಿಮೆ ಪ್ರತಿಯೊಂದು ಸೊಲ್ಲರಿಮೆಯಂಶವನ್ನು ತಿಳಿಸಿಕೊಡುವುದರಲ್ಲೂ ಬಹಳ ತಪ್ಪುಗಳು ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಸೇರಿಕೊಂಡುಬಿಟ್ಟಿವೆ. ಈ ತಪ್ಪುಗಳು ಯಾವುಯಾವವು ಎಂದು ತಿಳಿದುಕೊಳ್ಳಲು ಡಾ|| ಡಿ. ಎನ್. ಶಂಕರಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಎಂಬ ಹೊತ್ತಗೆಯನ್ನು ಓದಿರಿ. ಈ ತಪ್ಪುಗಳೆಲ್ಲ ಎಷ್ಟಿವೆಯೆಂದರೆ ಈಗಿರುವ ಸೊಲ್ಲರಿಮೆಯ ಹೊತ್ತಗೆಗಳನ್ನು ನಿಜವಾದ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳೆಂದು ಕರೆಯುವುದೇ ತಪ್ಪೆನಿಸುತ್ತದೆ.

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಿಲ್ಲದಿರುವುದರಿಂದ ತೊಂದರೆಗಳು

ಕನ್ನಡದ ನಿಜವಾದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ಕೊರತೆಗಳಿಂದ/ತಪ್ಪುಗಳಿಂದ ಆಗುತ್ತಿರುವ ತೊಂದರೆಗಳಲ್ಲಿ ಕೆಲವು ಹೀಗಿವೆ:
  1. ಕನ್ನಡಕ್ಕೆ ಸಂಸ್ಕೃತವೇ ಮೂಲವೆಂಬ ಸುಳ್ಳು ಇನ್ನಷ್ಟು ಹರಡುತ್ತಿದೆ ("ನೋಡಿ, ಕನ್ನಡದ ಸೊಲ್ಲರಿಮೆಯ ಪುಸ್ತಕದಲ್ಲೇ ಇದೆ!"). ಈ ಸುಳ್ಳು ಹರಡುವುದರಿಂದ ಕನ್ನಡಿಗರ ನಡುವೆ ಒಗ್ಗಟ್ಟು ಹೇಗೆ ಕುಸಿಯುತ್ತಿದೆಯೆಂದು ಕೂಡ ನಾವು ಈಗಾಗಲೇ ವಾದಿಸಿದ್ದೇವೆ.
  2. ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿ ಅವೈಜ್ಞಾನಿಕತೆಯು ತಾಂಡವಾಡುತ್ತಿರುವುದರಿಂದ ಕೆಲವು ಕನ್ನಡಿಗರಿಗೆ ಕನ್ನಡವೇ ಅವೈಜ್ಞಾನಿಕ ಭಾಷೆ ಎಂಬ ಕೀಳರಿಮೆ ಬಂದುಬಿಟ್ಟಿದೆ. ಇದರಿಂದ ಕನ್ನಡದಿಂದಲೇ ಅವರು ದೂರ ಹೊರಟುಹೋಗುತ್ತಿದ್ದಾರೆ. ಆದರೆ ನಿಜಕ್ಕೂ ನೋಡಿದರೆ ಭಾಷೆಗಳು ವೈಜ್ಞಾನಿಕ ಇಲ್ಲವೇ ಅವೈಜ್ಞಾನಿಕವಾಗಿರುವುದಿಲ್ಲ (ಸೊಲ್ಲರಿಮೆಗಳು ಇರಬಹುದಷ್ಟೆ). ಆದ್ದರಿಂದ ಸರಿಯಾದ, ವೈಜ್ಞಾನಿಕವಾದ ಕನ್ನಡದ ಸೊಲ್ಲರಿಮೆಯು ಬೆಳಕಿಗೆ ಬರಬೇಕಿದೆ.
  3. ಕನ್ನಡದ ಸೊಲ್ಲರಿಮೆಯನ್ನು ಬಳಸಿಕೊಂಡು ಕನ್ನಡವನ್ನು ಸರಿಯಾಗಿ ಕಲಿಸುವುದಕ್ಕೇ ಆಗದೆ ಹೋಗಿರುವುದರಿಂದ ಕನ್ನಡಿಗರಿಗೇ ಕನ್ನಡವು "ಕಷ್ಟವಾದ ಭಾಷೆ" ಎನಿಸಿಬಿಟ್ಟಿದೆ. ಆದರೆ ಹೀಗಿಲ್ಲ. ಕನ್ನಡವು ಕನ್ನಡಿಗರ ಏಳಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿದೆ ಎಂದು ಈಗಾಗಲೇ ನಾವು ವಾದಿಸಿದ್ದೇವೆ. ಮುಂದೆಯೂ ಈ ವಿಷಯವಾಗಿ ಹೇಳುವುದಿದೆ. ಕನ್ನಡವನ್ನು ಕಲಿಸುವ ಏರ್ಪಾಟಿನಲ್ಲೇ ತಪ್ಪುಗಳು ತುಂಬಿಕೊಂಡಿರುವುದು ಈ ಏಳಿಗೆಗೆ ಪೂರಕವಾದ್ದಲ್ಲ.
  4. ಕನ್ನಡಿಗರ ನಾಲಿಗೆಯು ಉಲಿಯುವ ಮತ್ತು ಉಲಿಯದ ಅಕ್ಷರಗಳು ಯಾವುವು ಎನ್ನುವುದನ್ನೇ ನಾವು ಸರಿಯಾಗಿ ಕಲಿಯದೆ ಹೋಗಿದ್ದೇವೆ. ಇದರಿಂದಲೇ ಕನ್ನಡದ ಅಕ್ಷರಮಾಲೆಯಲ್ಲಿ ನಾವು ಎಂದಿಗೂ ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿಕೊಂಡಿರುವುದು!
  5. ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಬಹಳ ಕಷ್ಟವಾಗುತ್ತಿದೆ. ಇದರಿಂದ ಕನ್ನಡದಲ್ಲಿ ಜ್ಞಾನ-ವಿಜ್ಞಾನಗಳ ಕಲಿಕೆ-ಕಲಿಸುವಿಕೆಗಳು ನಡೆಯಬೇಕಾದಷ್ಟು ಚೆನ್ನಾಗಿ ನಡೆಯುತ್ತಿಲ್ಲ, ಜನಪ್ರಿಯವೂ ಆಗುತ್ತಿಲ್ಲ.
  6. ಕನ್ನಡದ ಬರಹವು ಈಗಿರುವ ಕನ್ನಡದ್ದಲ್ಲವೇ ಅಲ್ಲ ಎನ್ನಬಹುದಾದ ಸೊಲ್ಲರಿಮೆಯನ್ನು ಆಧರಿಸಿರುವುದೆ ಆಗಿರುವುದರಿಂದ ಕನ್ನಡದ ಬರಹವು ಕನ್ನಡಿಗರಿಂದ ಬಹಳ ದೂರ ಹೊರಟುಹೋಗಿದೆ. ಆದ್ದರಿಂದ ಕನ್ನಡದಲ್ಲಿರುವ ಬೇರೆಬೇರೆ ದಾಖಲೆಗಳು ಮತ್ತು ಸರ್ಕಾರದ ಪತ್ರವ್ಯವಹಾರವೆಲ್ಲ ಕನ್ನಡಿಗರಿಗೇ ಅರ್ಥ ಮಾಡಿಕೊಳ್ಳದಷ್ಟು ಕಷ್ಟವಾಗಿಹೋಗಿದೆ.
  7. ಕನ್ನಡದ ಸೊಲ್ಲರಿಮೆಯ ಕಲಿಕೆ ಬಹಳ ಅವೈಜ್ಞಾನಿಕವಾಗಿ ಹೋಗುತ್ತಿದ್ದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ಸೊಲ್ಲರಿಮೆಯಿಂದಲೇ ದೂರ ಹೊರಟುಹೋಗುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡವನ್ನು ಆಳವಾಗಿ ಅರ್ಥಮಾಡಿಕೊಂಡಿರುವವರು ಯಾರೂ ಇಲ್ಲವೇ ಇಲ್ಲವೆಂಬ ಪರಿಸ್ಥಿತಿ ಬಂದುಬಿಡುತ್ತದೆ. ಹೀಗಾದರೆ ಕನ್ನಡವು ಎಂದಿಗೂ ಕನ್ನಡಿಗರ ಜೀವನದಲ್ಲಿ ಪಡೆದುಕೊಳ್ಳಬೇಕಾದ ಮೇಲಿನ ಸ್ಥಾನವನ್ನು ಪಡೆದುಕೊಳ್ಳುವುದೇ ಇಲ್ಲ; ಆ ಮೂಲಕ ಕನ್ನಡಿಗರ ಏಳಿಗೆಯು ಎಂದಿಗೂ ಆಗುವುದಿಲ್ಲ.
  8. ಬೇರೆಬೇರೆ ಜಾಗಗಳ ಮತ್ತು ಜಾತಿಗಳ ಕನ್ನಡಿಗರನ್ನೆಲ್ಲ ಒಗ್ಗೂಡಿಸುವುದೇ ಕನ್ನಡ. ಆ ಕನ್ನಡವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದದ್ದು ಈ ನಾಡನ್ನು ನಡೆಸುವ ಜವಾಬ್ದಾರಿಯಿರುವವರ ಮೊದಲ ಅರ್ತವ್ಯ. ತಪ್ಪು ಸೊಲ್ಲರಿಮೆಗಳಿಂದ ಆ ಕನ್ನಡದ ಸ್ವರೂಪವೇನೆಂದು ತಿಳಿಯದೆ ಹೋಗಿರುವುದರಿಂದ ಕನ್ನಡಿಗರಲ್ಲಿ ಒಗ್ಗಟ್ಟು ಕಡಿಮೆಯಾಗುತ್ತಿದೆ.
ವೈಜ್ಞಾನಿಕವಾಗಿ ಚಿಂತಿಸುವ ಯುವಕರಿಂದಲೇ ಕನ್ನಡದ ಸೊಲ್ಲರಿಮೆಯ ರಿಪೇರಿ ಸಾಧ್ಯ

ಕನ್ನಡದ ಸೊಲ್ಲರಿಮೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ಚೆನ್ನಾಗಿ ಅಧ್ಯಯನ ಮಾಡಿರುವವರಲ್ಲಿ ಸುಮಾರು ವರ್ಷ ಮೈಸೂರಿನಲ್ಲಿದ್ದು ಈಗ ಹೆಗ್ಗೋಡಿನಲ್ಲಿ ವಾಸವಾಗಿರುವ ಡಾ|| ಡಿ. ಎನ್. ಶಂಕರಭಟ್ಟರ ಹೆಸರು ಮೊದಲು ಬರುತ್ತದೆ. ಇವರು ಈಗಾಗಲೇ ತಮ್ಮ ಅನೇಕ ಹೊತ್ತಗೆಗಳಲ್ಲಿ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳಲ್ಲಿರುವ ತೊಂದರೆಗಳನ್ನು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಕನ್ನಡದ ನಿಜವಾದ ಸೊಲ್ಲರಿಮೆಯೆಂಥದ್ದೆಂದು ತಿಳಿಸಿಕೊಡಲೂ ಪ್ರಯತ್ನಿಸಿದ್ದಾರೆ. ಬಹಳ ವೈಜ್ಞಾನಿಕವಾಗಿ ಕನ್ನಡವನ್ನು ಅರಿತುಕೊಂಡಿರುವ ಸೊಲ್ಲರಿಗರ ಪಟ್ಟಿಯಲ್ಲಿ ಭಟ್ಟರ ಹೆಸರು ಮೊದಲು ಬರುತ್ತದೆ ಎಂದರೆ ತಪ್ಪಾಗಲಾರದು. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಅಧ್ಯಯನ ನಡೆಯುವಾಗ ಡಾ|| ಡಿ. ಎನ್. ಶಂಕರಭಟ್ಟರ ತತ್ವಗಳ ಅಧ್ಯಯನ ನಡೆಯಬೇಕಿದೆ. ಅವುಗಳ ಆಧಾರದ ಮೇಲೆ ಕನ್ನಡದ ನಿಜವಾದ ಸೊಲ್ಲರಿಮೆಗಳು ಹುಟ್ಟಿಬರಬೇಕಿವೆ, ಜನಪ್ರಿಯವಾಗಬೇಕಿವೆ.

ಹಿಂದಿನಿಂದ ಹೇಳಿಕೊಂಡು ಬಂದಿರುವ ತಪ್ಪೇ ಇವತ್ತಿಗೂ ಸರಿಯೆಂದು ತಿಳಿಯುವವರು ಎಲ್ಲಿಯವರೆಗೆ ಕನ್ನಡಿಗರ ಕಲಿಕೆಯನ್ನು ಹತೋಟಿಯಲ್ಲಿಟ್ಟುಕೊಂಡಿರುವರೋ ಅಲ್ಲಿಯವರೆಗೆ ಕನ್ನಡದ ನಿಜವಾದ ಸೊಲ್ಲರಿಮೆಯು ಜನಪ್ರಿಯವಾಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ವೈಜ್ಞಾನಿಕವಾಗಿ ಚಿಂತಿಸುವ ಯುವ ಕನ್ನಡಿಗರು ಡಾ|| ಡಿ. ಎನ್. ಶಂಕರಭಟ್ಟರ ಹೊತ್ತಗೆಗಳನ್ನು ಓದಬೇಕಿದೆ. ಕನ್ನಡಿಗರ ಏಳಿಗೆಯು ಹಿಂದಿನವರ ತಪ್ಪುಗಳನ್ನು ಮುಂದುವರೆಸುವುದರಿಂದ ಆಗುವುದಿಲ್ಲ. ಇಂದು ವೈಜ್ಞಾನಿಕವಾಗಿ ಚಿಂತಿಸುವ ಯುವಕರು ತೆಗೆದುಕೊಳ್ಳುವ ಸರಿಯಾದ ತೀರ್ಮಾನಗಳಿಂದಲೇ ಸಾಧ್ಯ. ತಪ್ಪುಗಳನ್ನು ಎಲ್ಲ ಜನಾಂಗಗಳೂ ಮಾಡುತ್ತವೆ. ಆದರೆ ಆ ತಪ್ಪುಗಳನ್ನು ತಿದ್ದುಕೊಂಡು ಮುಂದುವರೆಯುವ ಜನಾಂಗಗಳು ಮಾತ್ರ ಏಳಿಗೆಯಾಗುವುದು. ಕನ್ನಡಜನಾಂಗವು ಅಂತಹ ಒಂದು ಜನಾಂಗವಾಗಬೇಕಿದೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೫: ಪದಗಳಲ್ಲಿ ಏಳಿಗೆ ಮತ್ತು ಅದರ ಹರವುಗಳೆರಡೂ ಅಡಗಿವೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಒಂದು ಜನಾಂಗದ ಏಳಿಗೆಗೂ ಪದಗಳಿಗೂ ನಂಟು

ಯಾವುದೇ ಒಂದು ಜನಾಂಗದ ಏಳಿಗೆಯ ಸ್ಥಿತಿಯನ್ನು ಆ ಜನಾಂಗದವರ ನಾಲಿಗೆಯ ಮೇಲೆ ಏನೆಲ್ಲ ಪದಗಳು ಓಡಾಡುತ್ತವೆ ಎನ್ನುವುದರಿಂದ ಅಳೆಯಬಹುದು. ಆ ಜನಾಂಗದಲ್ಲಿ ಏಳಿಗೆಯು ಎಷ್ಟು ಸಮವಾಗಿ ಎಲ್ಲರಿಗೂ ಹರಡಿದೆಯೆನ್ನುವುದನ್ನು ಹೆಚ್ಚು ಏಳಿಗೆಹೊಂದಿದವರು ಬಳಸುವ ಪದಗಳನ್ನು ತೀರ ಏಳಿಗೆ ಹೊಂದದವರಿಗೆ ಅರ್ಥಮಾಡಿಸಲು ಎಷ್ಟು ಹೊತ್ತು ಬೇಕಾಗುತ್ತದೆ ಎನ್ನುವುದರಿಂದ ಅಳೆಯಬಹುದು. ಇವೆರಡು ಅಳತೆಗೋಲುಗಳಿಂದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಒಂದು ಜನಾಂಗದವರು ಎಷ್ಟು ಗಿಟ್ಟಿಸಿಕೊಂಡಿದ್ದಾರೆ, ಮತ್ತು ಅವುಗಳಲ್ಲಿ ಏಳ್ಗೆಯೆಂಬುದು ಎಷ್ಟು ಸಮವಾಗಿ ಇಡೀ ಜನಾಂಗದಲ್ಲಿ ಹರಡಿದೆ ಎಂದು ಸುಲಭವಾಗಿ ತಿಳಿದುಬಿಡುತ್ತದೆ.

ಹೆಚ್ಚು ಏಳಿಗೆಹೊಂದಿದವರ ಆಡುನುಡಿಯು ಕಡಿಮೆ ಏಳಿಗೆಹೊಂದಿದವರ ನುಡಿಯೇ ಆಗಿರದೆ ಹೋದರೆ ಇಲ್ಲವೇ ಹೊರನುಡಿಗಳ ಪದಗಳಿಂದ ತುಂಬಿದ್ದರೆ (ಉದಾಹರಣೆಗೆ ಕರ್ನಾಟಕದಲ್ಲಿ ಇಂಗ್ಲೀಷಾಗಿದ್ದರೆ ಇಲ್ಲವೇ ಸಂಸ್ಕೃತವಾಗಿದ್ದರೆ ಇಲ್ಲವೇ ಅವುಗಳ ಪದಗಳಿಂದ ತುಂಬಿದ್ದರೆ) ಅದನ್ನು ಕಡಿಮೆ ಏಳಿಗೆ ಹೊಂದಿದವರಿಗೆ ಹೇಳಿಕೊಡಲು ತೀರ ಕಷ್ಟವಾಗುತ್ತದೆ. ಆಗ ಏಳಿಗೆಯೆನ್ನುವುದು ಕೆಲವರ ಸೊತ್ತು ಮಾತ್ರ ಆಗುತ್ತದೆ. ಆದ್ದರಿಂದ ಏಳಿಗೆಹೊಂದಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಜನಾಂಗವೂ ತನ್ನ ನುಡಿಯನ್ನೇ ಎಲ್ಲಾ ಕಸುಬುಗಳಲ್ಲೂ ಬಳಸಲು ಹಂಬಲಿಸಬೇಕು, ಮತ್ತು ಆ ನುಡಿಗೆ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವಾಗ ಅವುಗಳು ಆದಷ್ಟೂ ಹೆಚ್ಚು ಜನರಿಗೆ ತಿಳಿಯುವಂತಿರಬೇಕು. ಯಾರಿಗೇ ಆಗಲಿ, ತಮಗೆ ಈಗಾಗಲೇ ತಿಳಿದಿರುವುದನ್ನು ಬಳಸಿಕೊಂಡು ಹೊಸತನ್ನು ಕಲಿತರೆ ಏಳಿಗೆಯ ಹಂಚಿಕೆ ಸುಲಭವಾಗುತ್ತದೆ. ತಮಗೆ ಈಗಾಗಲೇ ತಿಳಿದಿರುವುದನ್ನೆಲ್ಲ ತೊರೆದು ಹೊಸತನ್ನು ಕಲಿಯಬೇಕಾದರೆ ಏಳಿಗೆಯ ಹಂಚಿಕೆ ಕಷ್ಟವಾಗುತ್ತದೆ. ಆದ್ದರಿಂದ ಕನ್ನಡಿಗರ ಏಳಿಗೆ ಮತ್ತು ಏಳಿಗೆಯ ಹಂಚಿಕೆಯು ಚೆನ್ನಾಗಿ ಆಗಬೇಕೆಂಬುದಾದರೆ ಅದು ಎಲ್ಲರ ಕನ್ನಡದಲ್ಲೇ ಸಾಧ್ಯ.

ಹಾಗೆಯೇ ಹೊಸ ಹೊಸ ಪದಗಳನ್ನು ಸೇರಿಸಿಕೊಳ್ಳುತ್ತ ಹೋಗುವುದು ಬಹಳ ಮುಖ್ಯವಾದದ್ದು ಕೂಡ. ಹೊಸ ಪದಗಳಿಲ್ಲದೆ ಹೊಸತೆಂಬುದಿರುವುದಿಲ್ಲ. ಹೊಸಹೊಸದನ್ನು ಒಂದು ಜನಾಂಗದವರು ಅರಿತುಕೊಳ್ಳುತ್ತ ಹೋಗಬೇಕಾದರೆ ಅದಕ್ಕೆ ಹೊಸ ಪದಗಳಿಲ್ಲದೆ ಆಗುವುದಿಲ್ಲ. ಒಂದು ಜನಾಂಗದ ಏಳಿಗೆಯು ಎಷ್ಟು ಬೇಗಬೇಗನೆ ಆಗುತ್ತಿದೆಯೆಂಬುದರ ಗುರುತು ಒಂದು ವರ್ಷಕ್ಕೆ ಅದರ ಆಡುನುಡಿಗೆ ಎಷ್ಟು ಹೊಸ ಪದಗಳು ಸೇರಿಕೊಂಡಿವೆ, ಮತ್ತು ಆ ಹೊಸ ಪದಗಳು ಎಷ್ಟು ಎಲ್ಲೆಲ್ಲೂ ಹರಡಿವೆ ಎಂಬುದಾಗಿದೆ. ಆದ್ದರಿಂದ ಕನ್ನಡಿಗರ ಆಡುನುಡಿಗೆ ಹೊಸ ಹೊಸ ಪದಗಳು ಸೇರಿಕೊಳ್ಳುತ್ತ ಹೋಗಬೇಕು. ಪದಗಳು ಸೇರುವುದು ನಿಂತರೆ ಕನ್ನಡಿಗರ ಏಳಿಗೆ ನಿಂತಂತೆ. ಒಂದು ವರ್ಷದಲ್ಲಿ ಈ ಪದಗಳಲ್ಲಿ ಎಷ್ಟನ್ನು ಇಡೀ ಪ್ರಪಂಚದವರೆಲ್ಲ ಬಳಸಲು ಶುರುಮಾಡುತ್ತಾರೆ ಎನ್ನುವುದು ಆ ಜನಾಂಗದವರು ಪ್ರಪಂಚದ ಇತರ ಜನಾಂಗದವರಿಗಿಂತ ಎಷ್ಟು ಹೆಚ್ಚು ಆಯಾ ಕ್ಷೇತ್ರಗಳಲ್ಲಿ ಏಳಿಗೆ ಹೊಂದಿದ್ದಾರೆ ಎನ್ನುವುದರ ಗುರುತು. ಆದ್ದರಿಂದ ಕನ್ನಡಿಗರು ಹೊಸತನ್ನು ಕಂಡುಹಿಡಿದು ಆ ಕಂಡುಹಿಡಿಯುವಿಕೆಯಲ್ಲಿ ಕನ್ನಡವನ್ನೇ ಬಳಸಿ, ಕಂಡುಹಿಡಿದದ್ದಕ್ಕೆ ಕನ್ನಡದ ಹೆಸರನ್ನೇ ಇಟ್ಟು ಪ್ರಪಂಚದವರೆಲ್ಲ ಅದನ್ನು ಬಳಸುವಂತೆ ಮಾಡುವುದು ಕನ್ನಡಿಗರು ಪ್ರಪಂಚದ ಬೇರೆ ಜನಾಂಗದವರಿಗಿಂತ ಎಷ್ಟು ಏಳಿಗೆಹೊಂದಿದ್ದಾರೆ ಎನ್ನುವುದರ ಗುರುತು.

"ಕನ್ನಡದ ಪದಗಳು" ಎಂದರೆ ಯಾವುವು?

ಎಲ್ಲಾದರೂ ಎಂತಾದರೂ ಇರುವ (ಇಲ್ಲವೇ ಇದ್ದ) ಕನ್ನಡಿಗರು ಆಡುನುಡಿಯಲ್ಲಿ ಈಗ ಬಳಸುತ್ತಿರುವ (ಇಲ್ಲವೇ ಹಿಂದೆ ಬಳಸುತ್ತಿದ್ದ) ಪದಗಳೆಲ್ಲ ಕನ್ನಡದ ಪದಗಳು. ಇವುಗಳನ್ನೆಲ್ಲ ಕನ್ನಡದ ನಿಘಂಟುಗಳಿಗೆ ಸೇರಿಸತಕ್ಕದ್ದು. ಆಡುನುಡಿಯ ಮೂಲಕ ಕನ್ನಡದ ನಿಘಂಟುಗಳಿಗೆ ಪದಗಳು ನೇರವಾಗಿ ಸೇರಬಹುದು. ಆಡುನುಡಿಯಲ್ಲಿ ಪದಗಳನ್ನು ಕನ್ನಡಿಗರು ಹೇಗೆ ಉಲಿಯುವರೋ ಹಾಗೇ ಅವುಗಳನ್ನು ನಿಘಂಟಿಗೆ ಸೇರಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ (ಇಲ್ಲವೇ ಬಳಸಿಲ್ಲದ), ಬರೀ ಬರಹಗಳಲ್ಲಿ ಬಳಸುತ್ತಿರುವ (ಇಲ್ಲವೇ ಬಳಸುತ್ತಿದ್ದ) ಪದಗಳು ಕನ್ನಡದ ಪದಗಳಲ್ಲ. ಕನ್ನಡದ ನಿಘಂಟುಗಳಲ್ಲಿ ಈಗಾಗಲೇ ಇರುವ ಇಂತಹ ಪದಗಳಿಂದ ಕನ್ನಡಿಗರಿಗೆ ಹೆಚ್ಚು ಉಪಯೋಗವಿಲ್ಲ. ಪದಗಳನ್ನು ಆಡುನುಡಿಯಲ್ಲಿ ಹಿಂದೆ ಬಳಸುತ್ತಿದ್ದರೋ ಇಲ್ಲವೋ ಎಂಬ ಪ್ರಶ್ನೆಯನ್ನು ಉತ್ತರಿಸಲು ಆಗದಿದ್ದಲ್ಲಿ ಅಂತಹ ಪದಗಳನ್ನು ಮತ್ತೊಮ್ಮೆ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತಕ್ಕದ್ದು.

ಆಡುನುಡಿಯಲ್ಲಿ ಬಳಸದ ಪದಗಳನ್ನು ಬರಹದ ಮೂಲಕ ನೇರವಾಗಿ ಕನ್ನಡದ ನಿಘಂಟುಗಳಿಗೆ ಸೇರಿಸಿದ ಮಾತ್ರಕ್ಕೆ ಅವುಗಳನ್ನು ಕನ್ನಡಿಗರೆಲ್ಲ (ಇಲ್ಲವೇ ಆಯಾ ಕಸುಬಿನ ಕನ್ನಡಿಗರೆಲ್ಲ) ಆಡುತ್ತಾರೆ ಎಂದೇನಿಲ್ಲ. ಆಡಲೇಬೇಕು ಎಂಬುದಂತೂ ಮೊದಲೇ ಇಲ್ಲ. ಆಡದೆಹೋದರೆ ಜನರೇ ಕೀಳೆಂಬುದಂತೂ ಎಂದೆಂದಿಗೂ ಇಲ್ಲ. ಬರಹದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದು ಆ ಪದಗಳನ್ನು ಇಡೀ ಕನ್ನಡಜನಾಂಗಕ್ಕೆ (ಇಲ್ಲವೇ ಆಯಾ ಕಸುಬಿನ ಕನ್ನಡಿಗರಿಗೆ) ಆಡಲು ಇಲ್ಲವೇ ಬಿಡಲು ತೀರ್ಪಿಗೆ ಒಪ್ಪಿಸತದಂತೆ ಮಾತ್ರ. ನಿಘಂಟುಗಳಿಗೆ ನೇರವಾಗಿ ಬರಹದಿಂದ ಪದಗಳನ್ನು ಸೇರಿಸುವವರು ಆ ಮೂಲಕ ತಾವು ಸೇರಿಸಿದ ಪದಗಳಿಗೆ ಇಡೀ ಕನ್ನಡಜನಾಂಗದವರ (ಇಲ್ಲವೇ ಆಯಾ ಕಸುಬಿನ ಕನ್ನಡಿಗರ) ಒಪ್ಪಿಗೆಯನ್ನು ಬೇಡುತ್ತಾರಷ್ಟೆ. ಆ ಒಪ್ಪಿಗೆ ಕೊಡುವುದು ಬಿಡುವುದು ಜನರಿಗೆ ಬಿಟ್ಟಿದ್ದು.

ಹೀಗೆ ಪ್ರಾಯೋಗಿಕವಾಗಿ ಕನ್ನಡದ ಬರಹಕ್ಕೆ ಇಲ್ಲವೇ ನಿಘಂಟುಗಳಿಗೆ ಸೇರಿಸಿದ ಪದಗಳು ಸಾಕಷ್ಟು ಕಾಲ ಕನ್ನಡಿಗರ ನಾಲಿಗೆಯ ಮೇಲೆ ನಲಿದಮೇಲೆ ಆ ಪದಗಳು ಯಾವ ಹೊಸ ರೂಪವನ್ನು ಪಡೆಯುತ್ತವೋ (ಇಲ್ಲವೇ ಹಾಗೇ ಉಳಿದಿರುತ್ತವೋ) ಅವುಗಳಿಗೆ ಮಾತ್ರ ಕನ್ನಡದ ಪದಗಳೆನಿಸಿಕೊಳ್ಳುವ ಯೋಗ್ಯತೆಯಿರುವುದು.

ಬರಹದಲ್ಲಿ ಜನರು ಆಡದಿರುವುದನ್ನೆಲ್ಲ ಬರೆಯಬಹುದಾದ್ದರಿಂದ ಬರಹದ ಆಧಾರದ ಮೇಲೆ ಯಾವುದು ಕನ್ನಡದ ಪದವೆಂದು ತೀರ್ಮಾನಿಸಲಾಗುವುದಿಲ್ಲ. ಬರಹದಲ್ಲಿ ಏನನ್ನು ಬೇಕಾದರೂ ಬರೆಯುವುದಕ್ಕೆ ಯಾವ ಅಡೆತಡೆಗಳೂ ಇರುವುದಿಲ್ಲ. ಜನರು ಆ ಪದಗಳನ್ನು ಆಡಬೇಕೆಂಬ ಕಟ್ಟಳೆಯಿಲ್ಲದೆ ಹೋದರೆ ನಿಘಂಟಿಗೆ ಏನನ್ನು ಸೇರಿಸಬೇಕು, ಏನನ್ನು ಸೇರಿಸಬಾರದು ಎನ್ನುವುದನ್ನು ತೀರ್ಮಾನಿಸಲಾಗುವುದಿಲ್ಲ. ಈ ಕಟ್ಟಳೆಯಿಲ್ಲದಿದ್ದರೆ ಜನರಿಗೆ ಇಷ್ಟಬಂದ ಪದ ಮತ್ತು ಪದವಲ್ಲದ್ದನ್ನೆಲ್ಲ ಆ ನುಡಿಯ ಲಿಪಿಯಲ್ಲಿ ಬರೆದು ನಿಘಂಟಿಗೆ ಸೇರಿಸಿಬಿಡಬಹುದು! ಬೆರಳೆಣಿಕೆಯ ಜನರು ಇಲ್ಲವೇ ಒಬ್ಬರೇ ಒಬ್ಬರು ಬೇಕಾದ ಅಕ್ಷರಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಪದಗಳನ್ನು ಸೇರಿಸಿಕೊಳ್ಳಬಹುದು, ಬೇಕಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಹುಟ್ಟಿಸಿಕೊಳ್ಳಬಹುದು. ಆದರೆ ಒಂದು ಜನಾಂಗದ ಒಪ್ಪಿಗೆಯಿಲ್ಲದೆ ಅವುಗಳಾವುವೂ ಆ ಜನಾಂಗದ ನುಡಿಗೆ ಸೇರಿದವೆಂದು ಹೇಳಲು ಬರುವುದಿಲ್ಲ. ಇಂತಹ ಪದಗಳನ್ನೆಲ್ಲ ಉಳ್ಳ ನಿಘಂಟುಗಳನ್ನು ಪ್ರಯೋಗದ ನಿಘಂಟುಗಳೆಂದು ಕರೆಯಬಹುದಷ್ಟೆ.

ಎಂತಹ ಹೊಸ ಪದಗಳನ್ನು ಜನರು ಒಪ್ಪುತ್ತಾರೆ?

ಕನ್ನಡಿಗರು ಏಳಿಗೆ ಹೊಂದಬೇಕಾದರೆ ಕನ್ನಡಿಗರ ಬಾಯಲ್ಲಿ ಹೊಸ ಹೊಸ ಪದಗಳು ಹುಟ್ಟುತ್ತಲೇ ಇರಬೇಕೆಂಬುದನ್ನು ಮೇಲೆ ಆಗಲೇ ನೋಡಿದ್ದೇವೆ. ಆದ್ದರಿಂದ ಹೊಸ ಹೊಸ ಪದಗಳನ್ನು ಹುಟ್ಟಿಸದೆ ಏಳಿಗೆಯಿಲ್ಲ. ಆ ಹೊಸ ಪದಗಳನ್ನು ಹುಟ್ಟಿಸುವವರು ಕನ್ನಡದಿಂದಷ್ಟೇ ಅಲ್ಲ, ಬೇರೆ ನುಡಿಗಳಿಂದಲೂ ಪ್ರೇರಣೆಯನ್ನು ಪಡೆದುಕೊಂಡು ಹುಟ್ಟಿಸಬಹುದು. ಆದರೆ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ ಎಂದು ತಿಳಿದಿದ್ದರೆ ಪದಗಳನ್ನು ಹುಟ್ಟಿಸುವವರ ಕೆಲಸವೂ ಸಾರ್ಥಕವಾದಂತೆ, ಆ ಮೂಲಕ ಏಳಿಗೆಗೆ ನಾಂದಿಯನ್ನೂ ಹಾಡಿದಂತಾಗುತ್ತದೆ. ಆದ್ದರಿಂದ ಎಂತಹ ಪದಗಳನ್ನು ಜನರು ಒಪ್ಪುತ್ತಾರೆ, ಎಂಥವನ್ನು ಒಪ್ಪುವುದಿಲ್ಲವೆಂದು ಸ್ವಲ್ಪ ನೋಡೋಣ. ಇದು ಮುಖ್ಯವೇಕೆಂದರೆ ಕನ್ನಡದ ಜನರು ಒಪ್ಪಿದ್ದೇ ಕನ್ನಡದ ಪದ. ಮತ್ತೊಂದಲ್ಲ. ಕೆಲವರು ಸಂಸ್ಕೃತದಲ್ಲಿ ಹುಟ್ಟಿಸಿದ ಪದಗಳನ್ನೆಲ್ಲ ಜನರು ಒಪ್ಪುತ್ತಾರೆ (ಇಲ್ಲವೇ ಒಪ್ಪುವುದು ಅವರ ಕರ್ತವ್ಯ) ಎಂದು ತಿಳಿದಿರುತ್ತಾರೆ. ಇದಂತೂ ತಿಳುವಳಿಕೆಯಿಲ್ಲದ್ದು ಎಂದು ಈ ಬರಹದ ಸರಣಿಯಲ್ಲಿ ನಿಮಗೆ ಅರ್ಥವಾಗಿರಲೇಬೇಕೆಂದುಕೊಂಡಿದ್ದೇವೆ.

ಇಲ್ಲಿ "ಹೀಗೆ ಮಾಡಿದರೆ ಜನರು ಖಂಡಿತ ಒಪ್ಪುತ್ತಾರೆ" ಎಂದು ಹೇಳುವ ಯೋಗ್ಯತೆ ನಮಗಿಲ್ಲ. ಆದರೆ ಜನರ ಒಲವುಗಳೆಂಥವೆಂದು ನಾವು ಹುಡುಕುವ ಪ್ರಯತ್ನವನ್ನು ಮಾಡಿದ್ದೇವೆ, ಅಷ್ಟೆ.

ಮೊದಲನೆಯದಾಗಿ ಈಗಾಗಲೇ ತಾವು ಬಳಸುತ್ತಿರುವ ಪದಗಳಿಗೆ ಬದಲಾಗಿ ಸೂಚಿಸುವ ಪದಗಳನ್ನು ಜನರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಮತ್ತು ಜನರಿಗೆ ಈಗಾಗಲೇ ಗೊತ್ತಿರುವುದರಿಂದ ಆ ಪದಗಳು ಕನ್ನಡದ ಪದಗಳೇ. ಆ ಪದಗಳು ಕನ್ನಡದ ಮೂಲದವೇ ಆಗಿರಲಿ, ದ್ರಾವಿಡಮೂಲದವೇ ಆಗಿರಲಿ, ಸಂಸ್ಕೃತಮೂಲದವೇ, ಇಂಗ್ಲೀಷ್ ಮೂಲದವೇ, ಇಲ್ಲವೇ ಮತ್ತೊಂದು ಮೂಲದವೇ ಆಗಿರಲಿ ಈ ಮಾತು ನಿಜ. ಜನರಿಗೆ ಬೇಕಾದದ್ದು ವಸ್ತುಗಳಿಗೆ ಮತ್ತು ಎಣಿಕೆಗಳಿಗೆ ಒಂದು ಹೆಸರು ಮಾತ್ರ. ಅದನ್ನೇ ಪದವೆನ್ನುವುದು. ಆ ಪದವು ಯಾವ ನುಡಿಯ ಮೂಲದ್ದು ಎನ್ನುವುದು ನುಡಿಯರಿಗರ ತಲೆಯನೋವೇ ಹೊರತು ಜನರದಲ್ಲ. ಆ ಹಳೆಯ ಪದಗಳಲ್ಲಿ "ಇಂಥದ್ದು ಸರಿಯಿಲ್ಲ, ಅಂಥದ್ದು ಸರಿಯಿಲ್ಲ" ಎಂಬ ಅಭಿಪ್ರಾಯವು ಕೆಲವರಿಗೆ ಇದ್ದರೂ ಅದೆಲ್ಲ ಜನರಿಗೆ ಬೇಕಿಲ್ಲ. ಒಪ್ಪುವ ಜನರದೇ ಕೊನೆಯ ತೀರ್ಪಾದ್ದರಿಂದ ಆ ಪದಗಳಿಗೆ "ಎಲ್ಲವೂ ಸರಿಯಿದೆ" ಎಂದೇ ಒಪ್ಪಿಕೊಳ್ಳಬೇಕು! ಜನರಿಗೆ ಅಭ್ಯಾಸಬಲದಿಂದ ಈಗಾಗಲೇ ಇರುವ ಪದಗಳೇ ಹೆಚ್ಚು ಬಾಯಿಗೆ ಬರುತ್ತವೆ. ಸಂಸ್ಕೃತಮೂಲದ ಒಂದು ಪದವು ಕನ್ನಡಿಗರ ಬಾಯಲ್ಲಿ 500BC ನಿಂದ ಓಡಾಡುತ್ತಿದ್ದರೆ ಅದನ್ನು 2008AD ನಲ್ಲಿ ಬದಲಾಯಿಸುವ ಆಸೆಯನ್ನೇ ಇಟ್ಟುಕೊಳ್ಳಬಾರದು. ಆ ಹಳೆಯ ಪದವು ಕನ್ನಡಿಗರ ನಾಲಿಗೆಯೆಂಬ ಪರೀಕ್ಷೆಯಲ್ಲಿ ಪಾಸಾಗಿಲ್ಲವೆ? ಅಷ್ಟೇ ಸಾಕು ಅವುಗಳನ್ನು ಕನ್ನಡದ ಪದಗಳೆಂದು ಕರೆಯಲು! ಹಾಗೆಯೇ 500BC ನಿಂದ ಓಡಾಡುತ್ತಿರುವ ಒಂದು ಅಚ್ಚಕನ್ನಡದ ಪದವನ್ನು ಕೂಡ ಮತ್ತೊಂದು ಕನ್ನಡದ ಪದದಿಂದ 2008AD ನಲ್ಲಿ ಬದಲಾಯಿಸುವುದೂ ಕಷ್ಟ. ಜನರು ಅಭ್ಯಾಸಬಲದಿಂದ ಬೇಡವೆನ್ನುತ್ತಾರೆ. ಆದ್ದರಿಂದ ಮೊದಲನೆಯದಾಗಿ ಈಗಾಗಲೇ ಕನ್ನಡದಲ್ಲಿರುವ ಪದಗಳನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. ಆದರೆ ಹಾಗೆ ಬದಲಾಯಿಸಲು ಹೊರಡುವುದರಿಂದ ಕನ್ನಡಕ್ಕೆ ಹೆಚ್ಚು ಪದಗಳು ಸೇರಿದರೆ ಅದರಿಂದ ಕನ್ನಡದಲ್ಲಿ ಪದಗಳನ್ನು ಹುಟ್ಟಿಸುವುದು ಹೇಗೆಂದು ಜನರಿಗೆ ಅರ್ಥವಾಗುವುದರಿಂದ ಹುಟ್ಟಿಸುವವರಿಗೆ ಅದು ಒಳ್ಳೆಯದೇ. ಆದರೆ ಅವುಗಳನ್ನು ಜನರು ಒಪ್ಪಲಿಲ್ಲವೆಂದು ಬೇಜಾರು ಮಾಡಿಕೊಳ್ಳಬಾರದಷ್ಟೆ!

ಇನ್ನು ಜನರು ಈಗಾಗಲೇ ಬಳಸದ ಪದಗಳು. ಈಗಾಗಲೇ ಬಳಸದ ಪದಗಳು ಯಾವ ವಸ್ತು ಇಲ್ಲವೇ ಎಣಿಕೆಯನ್ನು ಸೂಚಿಸುತ್ತವೋ ಆ ವಸ್ತುಗಳು ಇಲ್ಲವೇ ಎಣಿಕೆಗಳನ್ನು ಅವರು ಕಂಡೇ ಇರಲಿಲ್ಲ, ಇಲ್ಲವೇ ಕಂಡಿದ್ದರೂ ಅದಕ್ಕೆ ಒಂದು ಪದವನ್ನು ತಾವೇ ಕೊಟ್ಟುಕೊಂಡಿಲ್ಲ ಇಲ್ಲವೇ ಇನ್ನೊಬ್ಬರಿಂದ ಕೇಳಿ ತಿಳಿದುಕೊಂಡಿಲ್ಲವೆಂದರ್ಥ. ಇಂತಹ ವಸ್ತುಗಳಿಗೆ ಇಲ್ಲವೇ ಎಣಿಕೆಗಳಿಗೆ ಪದಗಳನ್ನು ಕೊಡುವುದು ತುಸು ಸುಲಭ. ಈ ಗುಂಪಿನ ಪದಗಳಿಗೆ ಕನ್ನಡಿಗರ ಒಲವು ಹೀಗಿದೆ (ಇದು ಪೂರ್ಣ ಪಟ್ಟಿಯಲ್ಲ):
  • ಕನ್ನಡದಲ್ಲಿ ಈಗಾಗಲೇ ಜನರಿಗೆ ತಿಳಿದಿರುವ ಪದಗಳನ್ನು ಬಳಸಿ ಕಟ್ಟಿದ ಪದಗಳು ಬಹಳ ಸುಲಭವಾಗಿ ಒಪ್ಪಲ್ಪಡುತ್ತವೆ, ಎಕೆಂದರೆ ಅವುಗಳನ್ನು ಉಲಿಯುವುದೂ ಸುಲಭ ಮತ್ತು ಹೊಸ ಪದದ ಅರ್ಥವನ್ನು ಕೂಡ ಅವು "ಹೆಚ್ಚು" ಗುರುತಿಸುತ್ತವೆ.
  • ಪದಗಳು ಚಿಕ್ಕದಾಗಿರಬೇಕೆಂಬುದು ಕೂಡ ಒಂದು ಕಟ್ಟಳೆ. ತುಂಬ ದೊಡ್ಡದಾದಷ್ಟೂ ಅವುಗಳನ್ನು ಉಲಿಯುವುದು ಕಷ್ಟ. ಕನ್ನಡದವೇ ಆಗಿದ್ದರೂ ದೊಡ್ಡ ಪದಗಳನ್ನು ಜನರು ತೊರೆದು ಚಿಕ್ಕದಾದ ಬೇರೆಯ ನುಡಿಯ ಪದವನ್ನಾದರೂ ಆಡುತ್ತಾರೆ.
  • ಹಳಗನ್ನಡದ ಪದಗಳನ್ನು ನೇರವಾಗಿ ಇಲ್ಲವೇ ಅವುಗಳನ್ನು ಬಳಸಿ ಕಟ್ಟಿದ ಪದಗಳನ್ನು ಕೂಡ ಜನರು ಸುಲಭವಾಗಿ ಒಪ್ಪುತ್ತಾರೆ, ಎಕೆಂದರೆ ಆ ಪದಗಳಲ್ಲಿ ಈಗಿನ ಕನ್ನಡದ ಪದಗಳದೇ ಸೊಗಡಿರುತ್ತದೆ, ಮತ್ತು ಅವುಗಳನ್ನು ಉಲಿಯುವುದೂ ಸುಲಭ.
  • ಈಗಾಗಲೇ ತಿಳಿದಿರುವ ಪದಗಳಂತೆಯೇ ಕೇಳಿಸುವ ಪದಗಳನ್ನು ಜನರು ಒಪ್ಪುವ ಸಾಧ್ಯತೆ ಹೆಚ್ಚು. ಇದೇಕೆಂದರೆ ಒಂದೇ ಬಗೆಯಲ್ಲಿ ಕೇಳಿಸುವ ಪದಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ
  • ಹೊಸ ಪದಗಳ ಅರ್ಥವನ್ನು ಅವರು ಸುಲಭವಾಗಿ ಗುರುತಿಸಲಾದರೆ ಅದನ್ನು ಒಪ್ಪುವ ಸಾಧ್ಯತೆ ಹೆಚ್ಚು. ಇದಕ್ಕೂ ನೆನಪಿಟ್ಟುಕೊಳ್ಳುವುದು ಸುಲಭವೆನ್ನುವುದೇ ಕಾರಣ.
  • ತಂತಮ್ಮ ಕಸುಬುಗಳಲ್ಲಿ ಹೆಸರುವಾಸಿಯಾದ ನುಡಿಗಳ ಪದಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ, ಅವುಗಳಂತೆ ಕೇಳಿಸುವ ಪದಗಳನ್ನೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.
ಹೀಗೆ ಒಂದು ಹೊಸ ಪದವನ್ನು ಜನರು ಒಪ್ಪುವಂತೆ ಮಾಡುವುದು (ಮತ್ತು ಆ ಮೂಲಕ ಕನ್ನಡಕ್ಕೆ ಸೇರಿಸುವುದು) ಸುಲಭದ ಕೆಲಸವಲ್ಲ. ಹಾಗೆಯೇ ಅಷ್ಟು ಕಷ್ಟದ ಕೆಲಸವೂ ಅಲ್ಲ. ಯಾವ ಬಗೆಯ ಪದಗಳನ್ನು ಕನ್ನಡಿಗರು ಒಪ್ಪುತ್ತಾರೆ ಎನ್ನುವ ವಿಷಯದಲ್ಲಿ ನಾವು ಬಹಳ ಮೇಲೆಮೇಲೆ ಇಲ್ಲಿ ತಿಳಿಸಿಕೊಟ್ಟಿದ್ದೇವೆ. ಈ ವಿಷಯದಲ್ಲಿ ಇನ್ನೂ ಹೆಚ್ಚು ಸಂಶೋಧನೆಯಾಗಬೇಕು. ಕನ್ನಡಿಗರಾದ ನಾವು ಈ ಮೂಲಕ ನಮ್ಮನ್ನೇ ಅರ್ಥಮಾಡಿಕೊಳ್ಳಬೇಕು, ಹೊಸ ಹೊಸ ಪದಗಳನ್ನು ನಮ್ಮ ನುಡಿಗೆ ಸೇರಿಸಿಕೊಳ್ಳುತ್ತ ಹೋಗಬೇಕು, ಮತ್ತು ಆ ಮೂಲಕ ಏಳಿಗೆ ಹೊಂದಬೇಕು. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೪: ಬರೆಯುವುದರ ಗುರಿಯನ್ನು ತಿಳಿದಾಗ ಸಂಸ್ಕೃತದ ಬಳಕೆ ಕಡಿಮೆಯಾಗಲೇಬೇಕು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಕನ್ನಡಿಗರಿಗೆ ಸಂಸ್ಕೃತವು ಪರಿಚಯವಾದದ್ದು ಗ್ರಾಂಥಿಕ ಭಾಷೆಯಾಗಿ

ಸಂಸ್ಕೃತವು ಹಿಂದೆ ಎಂದು ಎಲ್ಲಿ ಯಾವ ಜನರ ಆಡುನುಡಿಯಾಗಿತ್ತೆಂಬುದರ ವಿಷಯದಲ್ಲಿ ತಿಳುವಳಿಕಸ್ತರಲ್ಲಿ ಒಮ್ಮತವಿಲ್ಲ. ಆದರೆ ಸಂಸ್ಕೃತವು ಇಂದಿನ ಬಿಹಾರ ರಾಜ್ಯದಲ್ಲಿ ಸುಮಾರು 500BC ವರೆಗಾಗಲೇ ಆಡುನುಡಿಯಾಗಿ ಉಳಿದಿರಲಿಲ್ಲವೆಂದು ಹೇಳಲು ಗೌತಮ ಬುದ್ಧನು "ಎಲ್ಲರ ನುಡಿ"ಯಾಗಿದ್ದ ಪಾಳಿಯಲ್ಲಿ ತನ್ನ ಸಿದ್ಧಾಂತವನ್ನು ಹರಡಿದ್ದೇ ಆಧಾರವಾಗಿದೆ. ಇನ್ನು ಕರ್ನಾಟಕದ ಮಟ್ಟಿಗಂತೂ ದ್ರಾವಿಡನುಡಿಯು ಸುಮಾರು 1500BC ಯಿಂದಲೇ ಚಾಲ್ತಿಯಿತ್ತೆಂಬುದು ನುಡಿಯರಿಗರ ಮತವಾಗಿದೆ. ಹೀಗಿರುವುದರಿಂದ ಕರ್ನಾಟಕದ ಗೊತ್ತಿರುವ 3,500 ವರ್ಷಗಳ ಹಳಮೆಯಲ್ಲಿ ಕರ್ನಾಟಕದಲ್ಲಿ ಎಲ್ಲೂ ಸಂಸ್ಕೃತವು ಯಾರ ಆಡುನುಡಿಯೂ ಆಗಿರಲಿಲ್ಲವೆಂದು ತೀರ್ಮಾನಿಸಬಹುದು.

ಹಲ್ಮಿಡಿ ಶಾಸನದ ಕಾಲವನ್ನು (450 AD) ಕನ್ನಡದ ಬರಹದ ಹುಟ್ಟೆಂದು ಏಣಿಸಿದರೆ ಕನ್ನಡದ ಬರಹವು ಹುಟ್ಟಿದಾಗಲೇ ಸಂಸ್ಕೃತವು ಆಡುನುಡಿಯಾಗಿರಲಿಲ್ಲ, ಬರಿಯ ಗ್ರಾಂಥಿಕ ಭಾಷೆಯಾಗಿತ್ತು. ಇವತ್ತಿನ ಬಿಹಾರ ರಾಜ್ಯದಲ್ಲಿ ಆಡುನುಡಿಯಾಗಿ ಸಂಸ್ಕೃತವು ಸತ್ತು ಹಲ್ಮಿಡಿ ಶಾಸನದ ಕಾಲದಲ್ಲೇ ಕಡಿಮೆಯೆಂದರೆ 950 ವರ್ಷಗಳಾಗಿದ್ದವು. ಕರ್ನಾಟಕದಲ್ಲಂತೂ ಹಲ್ಮಿಡಿ ಶಾಸನದ 1950ವರ್ಷಗಳ ಹಿಂದಿನ ಹಳಮೆಯಲ್ಲೆಲ್ಲೂ ಸಂಸ್ಕೃತವು ಆಡುನುಡಿಯಾಗಿರಲಿಲ್ಲವೆಂದು ತೀರ್ಮಾನಿಸಬಹುದು.

ಹಾಗೆಂದ ಮಾತ್ರಕ್ಕೆ ಸಂಸ್ಕೃತದಲ್ಲಿ ವೇದ-ಉಪನಿಷತ್ತುಗಳ ಕಲಿಕೆ-ಕಲಿಸುವಿಕೆಗಳು ನಡೆಯುತ್ತಿರಲಿಲ್ಲವೆಂದೇನು ನಾವು ಹೇಳುತ್ತಿಲ್ಲ. ಕರ್ನಾಟಕದಲ್ಲೂ ಅವು ನಡೆಯುತ್ತಿದ್ದವೆಂದು ನಂಬಲು ಆಧಾರಗಳಿವೆ. ಆದರೆ ವೇದ-ಉಪನಿಷತ್ತುಗಳ ಕಲಿಕೆ-ಕಲಿಸುವಿಕೆಗಳು ಇದ್ದ ಮಾತ್ರಕ್ಕೆ ಸಂಸ್ಕೃತವನ್ನು ಆಡುನುಡಿಯೆನ್ನಲಾಗುವುದಿಲ್ಲ. ಕರ್ನಾಟಕದ ಆಗಿನ ಬ್ರಾಹ್ಮಣರು ಸಂಸ್ಕೃತದಲ್ಲಿ ತಮ್ಮ ಕಲಿಕೆ-ಕಲಿಸುವಿಕೆಗಳನ್ನು ನಡೆಸಿದ್ದರೂ ಬೇರೆಲ್ಲ ಕೆಲಸಗಳಿಗೆ ಸಂಸ್ಕೃತವನ್ನು ಬಳಸುತ್ತಿರಲಿಲ್ಲ.

ಒಟ್ಟಿನಲ್ಲಿ ಕನ್ನಡದಲ್ಲಿ ಬರಹವು ಹುಟ್ಟಿದಾಗಲೇ ಸಂಸ್ಕೃತವನ್ನು ಕನ್ನಡಿಗರು ಒಂದು ಆಡುನುಡಿಯಾಗಿ ಕಾಣದೆ ಬರಿಯ ಗ್ರಾಂಥಿಕ ಭಾಷೆಯಾಗಿ ಮಾತ್ರ ಕಾಣುತ್ತಿದ್ದರು ಎನ್ನುವುದು ಸ್ಪಷ್ಟ. ಸಂಸ್ಕೃತವು ಗ್ರಾಂಥಿಕ ಭಾಷೆಯಾಗಿ ಉಳಿದುಕೊಂಡಿದ್ದಕ್ಕೆ ಕಾರಣ ಅದರಲ್ಲಿದ ಅಪಾರವಾದ ಜ್ಞಾನದ ಭಂಡಾರವೇ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಇಂತಹ ಯಾರೂ ಮಾತನಾಡದ, ಬರಿಯ ಬರಹದಲ್ಲಿ ಮಾತ್ರ ಉಳಿದುಕೊಕೊಂಡಿರುವ ಒಂದು ನುಡಿಯು ತಿಳುವಳಿಕಸ್ತ ಕನ್ನಡಿಗರಿಗೆ ಪ್ರೇರಣೆಯಾಗಿತ್ತು. ಈ ಪ್ರೇರಣೆಯಿಂದ ಒಂದು ದೊಡ್ಡ ತಪ್ಪು ಕನ್ನಡದಲ್ಲಿ ಈ ತಿಳುವಳಿಕಸ್ತರಿಂದ ಅವರ ಅರಿವಿಲ್ಲದೆಯೇ ನಡೆದುಹೋಯಿತು. ಅದೇನೆಂದು ಮುಂದೆ ನೋಡೋಣ.

ಗ್ರಾಂಥಿಕ ಭಾಷೆಗಳಿಗೂ ಆಡುನುಡಿಗಳಿಗೂ ಇರುವ ಮುಖ್ಯವಾದ ವ್ಯತ್ಯಾಸ

ಗ್ರಾಂಥಿಕ ಭಾಷೆಗಳಲ್ಲಿ ಬರೆದದ್ದನ್ನು ಇಂಥದ್ದೊಂದು ಜನಾಂಗದವರ ನಾಲಿಗೆಗೆ ಯಾವುದೇ ತೊಡಕಿಲ್ಲದೆ ಉಲಿಯಲು ಆಗಬೇಕು ಎಂಬುದೇ ಇರುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗ್ರಾಂಥಿಕ ಭಾಷೆಗಳನ್ನು ಉಲಿಯುವವರೇ ಇಲ್ಲದಿರುವುದರಿಂದ ಉಲಿಯಲಾಗದ್ದನ್ನೆಲ್ಲ ಆ ಭಾಷೆಯಲ್ಲಿ ಬರೆದರೂ ತೊಂದರೆಯಿಲ್ಲ. ಗ್ರಾಂಥಿಕ ಭಾಷೆಗಳಲ್ಲಿ ಬರೆಯುವುದರ ಉದ್ದೇಶ ಅದನ್ನು ಇಂಥದ್ದೊಂದು ಜನಾಂಗವು ಉಲಿಯಲಿ ಎಂಬುದಾಗಿರುವುದೇ ಇಲ್ಲ. ಯಾರಿಗೂ ಉಲಿಯಲಾಗದಿದ್ದರೂ ಸರಿ, ಗ್ರಾಂಥಿಕ ಭಾಷೆಗಳಲ್ಲಿ ಬೇಕಾದ್ದನ್ನು ಬರೆದುಕೊಂಡು ಹೋಗಬಹುದು. ಆದರೆ ಗ್ರಾಂಥಿಕ ಭಾಷೆಗಳಿಗೂ ಇಂಥದ್ದೆಂಬ ಸೊಲ್ಲರಿಮೆಯು ಇದ್ದೇ ಇರುತ್ತದೆ. ಈ ಸೊಲ್ಲರಿಮೆಯು ಗಣಿತದ ಸೂತ್ರಗಳಿದ್ದಂತೆ. ಈ ಗಣಿತದ ಸೂತ್ರಗಳನ್ನು ಮೀರದಿದ್ದರೆ ಸಾಕು, ಬರೆದಿದ್ದೆಲ್ಲ "ಸರಿ"ಯೆಂದೇ ಎಣಿಸಲಾಗುವುದು. ಹೀಗೆ ಯಾವ ಪದವು ಸರಿ, ಯಾವ ಪದವು ಸರಿಯಲ್ಲ ಎನ್ನುವುದಕ್ಕೆ ಗ್ರಾಂಥಿಕ ಭಾಷೆಗಳಿಗೆ ಅವುಗಳ ಸೊಲ್ಲರಿಮೆಗಳದೇ ಕೊನೆಯ ತೀರ್ಪು, ಯಾವುದೇ ಜನಾಂಗದ್ದಲ್ಲ.

ಆದರೆ ಆಡುನುಡಿಗಳು ಹಾಗಲ್ಲ. ಇವುಗಳನ್ನು ಜನರು "ಆಡು"ವುದರಿಂದಲೇ ಇವುಗಳನ್ನು ಆಡುನುಡಿಯೆಂದು ಕರೆಯುವುದು. ಜನರ ಆಡುನುಡಿಗೆ ಯಾವುದಾದರೂ ಹೊಸದೊಂದು ಪದವು ಸೇರಬೇಕಾದರೆ ಅವುಗಳನ್ನು ಇಂಥದ್ದೆಂಬ ಒಂದು ಜನಾಂಗವು ಪ್ರಯೋಗಿಸಿ, "ಸೈ!" ಎಂದು ಒಪ್ಪಿಕೊಳ್ಳಬೇಕು. ಹಾಗೆ ಒಪ್ಪಿಕೊಳ್ಳಬೇಕಾದರೆ ಆ ಪದಗಳು ಈ ಜನಾಂಗದವರ ನಾಲಿಗೆಗಳಿಗೆ ಯಾವುದೇ ತೊಡಕಿಲ್ಲದೆ ಉಲಿಯಲಾಗಬೇಕು. ಉಲಿಯಲು ತೊಡಕಾದರೆ ಆ ಪದವನ್ನು ಈ ಜನಾಂಗದವರು ಇಲ್ಲವೇ ಬೇಡ, "ಪೋ!" ಎಂದು ಹಿಂತಿರುಗಿಸಿ ಕಳುಹಿಸಬಹುದು, ಇಲ್ಲವೇ ಅದಕ್ಕೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡು ಉಲಿಯುವಂತಾಗಿಸಿಕೊಂಡು ತಮ್ಮ ಆಡುನುಡಿಗೆ ಸೇರಿಸಿಕೊಳ್ಳಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಡುನುಡಿಗಳಿಗೆ ಉಲಿಯುವ ಇಂಥದ್ದೆಂಬ ಜನಾಂಗವು ಇರುವುದರಿಂದ ಉಲಿಯಲಾರದ್ದು ಯಾವುದೂ ಇವುಗಳಲ್ಲಿ ಇರುವುದೇ ಇಲ್ಲ. ಉಲಿಯಲಾರದನ್ನು ಇವುಗಳ ಮೇಲೆ ಹೇರಲಾಗುವುದಿಲ್ಲ. ಹೀಗಿರುವುದರಿಂದ ಆಡುನುಡಿಗಳಲ್ಲಿ ಯಾವ ಪದವು "ಸರಿ", ಯಾವುದುದು "ತಪ್ಪು" ಎನ್ನುವುದನ್ನು ತೀರ್ಮಾನಿಸುವುದು ಆ ಆಡುನುಡಿಯನ್ನಾಡುವ ಜನಾಂಗವೇ.

ಆ ವ್ಯತ್ಯಾಸವನ್ನು ಅರಿಯದವರಿಂದ ಕನ್ನಡಕ್ಕಾದ ತೊಂದರೆ

ಇನ್ನು ಸಂಸ್ಕೃತ-ಕನ್ನಡಗಳ ವಿಷಯಕ್ಕೆ ಹಿಂತಿರುಗೋಣ. ಬಹಳ ಹಿಂದೆ ಬರಿಯ ಗ್ರಾಂಥಿಕ ಭಾಷೆಯಾಗಿದ್ದ ಸಂಸ್ಕೃತದಿಂದ ಪ್ರೇರಣೆ ಪಡೆದ ಕನ್ನಡದ ತಿಳುವಳಿಕಸ್ತರಿಗೆ ಈಗ ಮೇಲಿನ ಎರಡು ಪ್ಯಾರಾಗಳಲ್ಲಿ ನಾವು ತಿಳಿಸಿಕೊಟ್ಟಿರುವ ಗ್ರಾಂಥಿಕ ಭಾಷೆಗಳಿಗೂ ಆಡುನುಡಿಗಳಿಗೂ ಇರುವ ವ್ಯತ್ಯಾಸವನ್ನು ಅರಿತಿರಲಿಲ್ಲವೆನ್ನಬಹುದು. ಹೀಗಿರುವುದರಿಂದ ಆ ತಿಳುವಳಿಕಸ್ತರು ಕನ್ನಡದಲ್ಲಿ ಬರೆಯಲು ಹೊರಟಾಗ ಗ್ರಾಂಥಿಕ ಭಾಷೆಯ ನಿಯಮಗಳನ್ನೇ ತಮ್ಮ ಬರಹಗಳಿಗೆ ಹಚ್ಚಿಕೊಂಡುಬಿಟ್ಟರು. ಎಂದರೆ - ತಾವು ಬರೆದ ಕನ್ನಡದ ಬರಹಗಳನ್ನು "ಆಡುವ" ಒಂದು ಜನಾಂಗವಿದೆಯೆನ್ನುವುದನ್ನೇ ಮರೆತುಬಿಟ್ಟರು. ತಾವು ಬರೆದದ್ದನ್ನೆಲ್ಲ ಪ್ರಯೋಗ ಮಾಡಿ "ಸೈ!" ಎನ್ನುವ ಇಲ್ಲವೇ "ಪೋ!" ಎನ್ನುವ ಕೋಟಿಗಟ್ಟಲೆ ನಾಲಿಗೆಗಳಿವೆಯೆನ್ನುವುದನ್ನೇ ಮರೆತುಬಿಟ್ಟರು.

ತಾವು ಬರೆದದ್ದು ಹುಲುಜನರಿಗೆ ತಲುಪಬೇಕೆಂಬ ಮಹದಾಸೆಯನ್ನೂ ಅವರು ಇಟ್ಟುಕೊಂಡಿರಲಿಲ್ಲವೇನೋ (ಆಗ ಮುದ್ರಣವೆನ್ನುವುದೂ ಇರಲಿಲ್ಲ). ಇಷ್ಟಲ್ಲದೆ ತಿಳುವಳಿಕಸ್ತರಿಗೂ ಹುಲುಜನರಿಗೂ ನಡುವೆ ಆ ವರೆಗಾಗಲೇ ಒಂದು ಕಂದರವು ಏರ್ಪಟ್ಟಿದ್ದರಿಂದ ತಾವು ಬರೆದ ವಿಷಯಗಳನ್ನು ಅರಿತುಕೊಳ್ಳುವ ಯೋಗ್ಯತೆಯೇ ಹುಲುಜನರಿಗೆ ಇಲ್ಲವೆಂದೂ ಅವರು (ಸರಿಯಾಗಿ) ಎಣಿಸಿರಬಹುದು. ಹಾಗೆ ಎಣಿಸಿಲ್ಲದಿದ್ದರೂ ಆ ಯೋಗ್ಯತೆಯು ಹುಲುಜನರಿಗೆ ಬರಬೇಕಾದರೆ ತಮ್ಮ ಬರಹವು ಯಾವ ರೀತಿ ಇರಬೇಕೆಂದು (ಬುದ್ಧನು ಪಾಳಿಯಲ್ಲಿ ಹೇಳಿಕೊಡಲು ತೀರ್ಮಾನಿಸಿದಂತೆ) ವೈಜ್ಞಾನಿಕವಾಗಿ ತೀರ್ಮಾನಿಸಿಲ್ಲದಿರುವುದಂತೂ ಖಂಡಿತ.

ಅಲ್ಲದೆ, ಬುದ್ಧನು ಜನರ "ಮೈಮೇಲೆ ಬಿದ್ದು" ತಿಳಿಹೇಳಲು ಹೊರಟಂತೆ ಕನ್ನಡದ ಈ ಮೊದಮೊದಲ ತಿಳುವಳಿಕಸ್ತರು ಹೋಗಲಿಲ್ಲವೆನ್ನುವುದೂ ಸ್ಪಷ್ಟವಾಗಿದೆ (ಈ ಕೆಲಸವನ್ನು ಮಾಡಿದ ಕನ್ನಡದ ಮೊಟ್ಟಮೊದಲಿಗನೆಂದರೆ 12ನೇ ಶತಮಾನದ ಬಸವಣ್ಣನವರು ಎನ್ನಬಹುದು. ಹೀಗೆ ಹುಲುಜನರ ಬಗೆಗಿನ ಕಾಳಜಿಯು ಬಸವಣ್ಣನವರಿಗೆ ಇದ್ದುದರಿಂದಲೇ ವಚನಸಾಹಿತ್ಯವು ಆಡುನುಡಿಗೆ ಬಹಳ ಹತ್ತಿರವಾಗಿರುವುದು). ಒಟ್ಟಿನಲ್ಲಿ ಕನ್ನಡದ ಬರಹವು ಹುಟ್ಟಿದಾಗಲೇ ಅದಕ್ಕೂ 99% ಕನ್ನಡಿಗರಿಗೂ ಯಾವುದೇ ನಂಟಿರಲಿಲ್ಲ, ಆ ನಂಟು ಮುಂದೆ ಬರುತ್ತದೆಯೆಂಬ ಮುನ್ನೋಟವಂತೂ ಮೊದಲೇ ಅವರಿಗಿರಲಿಲ್ಲ, ಆ ನಂಟು ಬರದೆ ಹೋದರೆ ಕನ್ನಡಿಗರಿಗೆ ಏಳಿಗೆಯಿಲ್ಲವೆಂಬ ವಿಷಯವೂ ಅವರಿಗೆ ತಿಳಿದಿರಲಿಲ್ಲ. ಹೀಗೆ ಸಂಸ್ಕೃತದಿಂದ ಪ್ರೇರಣೆ ಪಡೆದ ಕನ್ನಡದ ತಿಳುವಳಿಕಸ್ತರು ಕನ್ನಡದ ಬರಹವನ್ನು ಕನ್ನಡಿಗರಿಗೇ ನಂಟಿಲ್ಲದಂತೆ ಬೆಳೆಸಿದರು. ಇದು ಆ ತಿಳುವಳಿಕಸ್ತರ ಅರಿವಿಲ್ಲದೆ ಅವರ ಕೈಯಿಂದಲೇ ಕನ್ನಡ-ಕನ್ನಡಿಗ-ಕರ್ನಾಟಕಗಳಿಗಾದ ಒಂದು ದೊಡ್ಡ ದುರಂತವು. ಇದೇ ತಪ್ಪು ಇಂದಿಗೂ ಮುಂದುವರೆಯುತ್ತಿದೆ.

ಮುಂದಾಗಬೇಕಾದುದು

ಇಲ್ಲಿಯವರೆಗೆ ಕನ್ನಡದ ಬರಹಕ್ಕೆ ಯಾವ ರೀತಿಯ ತೊಂದರೆಯಿದೆಯೆಂದು ತೋರಿಸಿದ್ದಾಯಿತು. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯುವಂತೆ ಬರೆಯಬೇಕೆಂದು ತಿಳುವಳಿಕಸ್ತರು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡಿಗನೂ ತಿಳಿಯಬೇಕಾದ ವಿಷಯಗಳು ಬಹಳ ಇವೆಯೆಂದೂ ಅರಿತುಕೊಳ್ಳಬೇಕು. ವಿಜ್ಞಾನ - ಗಣಿತ - ಮುಂತಾದವುಗಳು ಪ್ರತಿಯೊಬ್ಬ ಕನ್ನಡಿಗನಿಗೂ ತಿಳಿಯಬೇಕಾದವುಗಳೇ. ಹಾಗೆಯೇ ಸರ್ಕಾರದ ಮತ್ತು ಖಾಸಗಿ ಕಂಪನಿಗಳ ಸುತ್ತೋಲೆಗಳು, ಪತ್ರಿಕೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಳಸಲಾಗುವ ಸೂಚನೆಗಳು - ಇವೆಲ್ಲವೂ ಎಲ್ಲರಿಗೂ ತಿಳಿಯುವಂತಹ ಕನ್ನಡದಲ್ಲಿರಬೇಕು. ಜನರಿಗೆ ತಿಳಿಯಬೇಕಾದದ್ದೇ ಬರಹದ ಮುಖ್ಯವಾದ ಉಪಯೋಗವೆಂದು ಮರೆಯಬಾರದು. ಸಂಸ್ಕೃತದಲ್ಲಿ ಬರೆಯುವುದಕ್ಕೂ ಕನ್ನಡದಲ್ಲಿ ಬರೆಯುವುದಕ್ಕೂ ಇರುವ ಈ ಹೆಚ್ಚು-ಕಡಿಮೆಯನ್ನು ಜನರು ಚೆನ್ನಾಗಿ ಅರಿತುಕೊಳ್ಳಬೇಕು. ಒಟ್ಟಿನಲ್ಲಿ ಬರೆಯುವುದರ ಗುರಿಯೇನೆಂದು ತಿಳಿದುಕೊಂಡರೆ ಅತಿಯಾಗಿ ಸಂಸ್ಕೃತದ ಪದಗಳನ್ನು ಬಳಸಿ ಕನ್ನಡದಲ್ಲಿ ಬರೆಯುವುದು ಪೆದ್ದತನವೇ ಎಂದು ತಿಳುವಳಿಕಸ್ತರಿಗೆ ಅರಿವಾಗದೆ ಹೋಗುವುದಿಲ್ಲವೆಂದು ನಮ್ಮ ಅನಿಸಿಕೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೩: ಬದಲಾಗಿರುವ ಸಾಮಾಜಿಕ ನೆಲೆ, ಕುಗ್ಗಿರುವ ಸಂಸ್ಕೃತದ ಬೇಕಾಗುವಿಕೆ, ಹಿಗ್ಗಿರುವ ಕನ್ನಡದ ಬೇಕಾಗುವಿಕೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ:
ಕನ್ನಡದಲ್ಲಿ ಸಂಸ್ಕೃತದ ಪದಗಳನ್ನು ಹೆಚ್ಚು ಹೆಚ್ಚು ಬಳಸುವುದು "ಒಳ್ಳೆಯ ಕನ್ನಡ"ವೆಂಬ ತಪ್ಪು ತಿಳುವಳಿಕೆಯು ಕನ್ನಡಿಗರಿಗೆ ಇದೆಯೆಂದೂ, ಅದು ಅಡಿಪಾಯವಿಲ್ಲದ ಕಟ್ಟಡವೆಂದೂ, ಅದರಿಂದ ಆಗುತ್ತಿರುವ ತೊಂದರೆಗಳೇನೆಂದೂ ಇಲ್ಲಿಯವರೆಗೆ ತೋರಿಸಿದ್ದಾಯಿತು. ಈಗ ಸಂಸ್ಕೃತವನ್ನು ಮೊಟ್ಟಮೊದಲಿಗೆ ಕನ್ನಡಿಗರು ಗೌರವದಿಂದ ಕಾಣಲು ಶುರುಮಾಡಿದ ದಿನಗಳಿಗೂ ಇವತ್ತಿಗೂ ಯಾವ ಯಾವ ಸಾಮಾಜಿಕ ಬದಲಾವಣೆಗಳಾಗಿವೆ, ಆ ಬದಲಾವಣೆಗಳಿಂದ ಹೇಗೆ ಸಂಸ್ಕೃತದ ಬೇಕಾಗುವಿಕೆ ಕುಗ್ಗಿದೆ, ಮತ್ತು ಹೇಗೆ ಎಲ್ಲರ ಕನ್ನಡದ ಬೇಕಾಗುವಿಕೆ ಹೆಚ್ಚಿದೆಯೆಂದು ನೋಡೋಣ. ಬದಲಾಗಿರುವ ಸಾಮಾಜಿಕ ನೆಲೆಯನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದಲೇ ಕನ್ನಡವು ಸಂಸ್ಕೃತಮಯವಾಗದಿದ್ದರೆ ಅದು "ಅಭಿವೃದ್ಧಿ ಹೊಂದದೆ ಹೋಗುತ್ತದೆ" ಎಂಬ ಹೆದರಿಕೆಯು ಕೆಲವರಿಗೆ ಇರುವುದು. ಬದಲಾಗಿರುವ ಸಾಮಾಜಿಕ ನೆಲೆಯನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದಲೇ ಬರಹದ ಕನ್ನಡವು ಸಂಸ್ಕೃತಮಯವಾಗಿರುವುದು. ಈ ವಿಷಯವನ್ನು ಸರಿಯಾಗಿ ಅರಿತುಕೊಂಡರೆ ಜ್ಞಾನ-ವಿಜ್ಞಾನಗಳ ಕಲಿಕೆ ಮತ್ತು ಕಲಿಸುವಿಕೆಗೆ ಎಲ್ಲರಿಗೂ ಈಗಾಗಲೇ ತಿಳಿದಿರುವ ಕನ್ನಡವೇ ಸರಿಯಾದದ್ದೆಂದು ತಿಳಿಯಾಗುತ್ತದೆ. ಆದ್ದರಿಂದ ಆ ಬದಲಾವಣೆಗಳು ಎಂಥವು, ಅವುಗಳಿಂದ ಸಂಸ್ಕೃತಮಯವಾದ ನುಡಿಯು ಈಗ ನಮ್ಮ ಸಮಾಜಕ್ಕೆ ಹೇಗೆ ಸರಿಹೊಂದುವುದಿಲ್ಲ ಎಂದು ನೋಡೋಣ. ನಾವು ಇಲ್ಲಿ ಆ ಬದಲಾವಣೆಗಳನ್ನು ದಾಖಲಿಸುವಾಗ ಅವುಗಳ ಸಂಖ್ಯೆ ೯ ಎಂಬಂತೆ ಮೂಡಿಬಂದಿದ್ದರೂ ಸಂಖ್ಯೆಗೆ ಹೆಚ್ಚಿನ ಬೆಲೆಯನ್ನೇನು ಕೊಡುವ ಅವಶ್ಯಕತೆಯಿಲ್ಲ. ನಿಜಕ್ಕೂ ನೋಡಿದರೆ ಬದಲಾವಣೆಯು ಎಷ್ಟಾಗಿದೆಯೆಂದರೆ ಬರೀ ಒಂಬತ್ತೇ ಬದಲಾಣೆಗಳಾಗಿವೆ ಎಂದು ಹೇಳಲು ಬರುವುದಿಲ್ಲ.

ಕಲಿಕೆ ಮತ್ತು ಕಸುಬುಗಳಲ್ಲಿ ಆಗಿರುವ ಬದಲಾವಣೆಗಳು



ಅಂದು - ಎಂದರೆ ಯಾವಾಗ ಸಂಸ್ಕೃತವು ಕರ್ನಾಟಕಕ್ಕೆ ಮೊದಲು ದಾಪುಗಾಲಿಟ್ಟಿತೋ ಆಗ - ಕನ್ನಡಿಗರ ಸಾಮಾಜಿಕ ಸ್ಥಿತಿ ಇವಾಗಿನದಕ್ಕಿಂತ ಬಹಳ ಬೇರೆಯಾಗಿತ್ತು. ಆಗ ಬೆರಳೆಣಿಕೆಯ ಕನ್ನಡಿಗರಿಗೆ ಮಾತ್ರವೇ ಓದು-ಬರಹಗಳು ಬೇಕಾಗಿದ್ದವು. ಕನ್ನಡಿಗರೆಲ್ಲರಿಗೂ ಓದು-ಬರಹಗಳು ಬರುವುದಿರಲಿ, ಬರಬೇಕೆಂಬ ಚಿಂತನೆಯೇ ಸಮಾಜದಲ್ಲಿ ಇರಲಿಲ್ಲ. ಕನ್ನಡ ನುಡಿಯನ್ನಾಡುವವರು ಅಲ್ಲಲ್ಲಿ ತಮ್ಮತಮ್ಮ ಕೆಲಸಗಳನ್ನು ಮಾಡಿಕೊಂಡು ಬಾಳುತ್ತಿದ್ದರು. ಎಲ್ಲಾ ಕಸುಬಿನವರೂ ಒಟ್ಟಗೆ ಕುಳಿತು ಯಾವ ಒಂದು ವಿಷಯವನ್ನೂ ಕಲಿಯಬೇಕಿರಲಿಲ್ಲ. ಆಯಾ ಕಸುಬಿನವರು ಆಯಾ ಕಸುಬುಗಳನ್ನು ತಮ್ಮ ಹೆತ್ತವರು ಮತ್ತು ನೆಂಟರಿಂದ ಕಲಿತುಬಿಡುತ್ತಿದ್ದರು.

ಇಂದು - ಈಗ ಕನ್ನಡಿಗರೆಲ್ಲರಿಗೂ ಓದು ಬರಹಗಳು ಬೇಕೇಬೇಕೆಂಬ ಸ್ಥಿತಿಯಿದೆ. ಓದು ಬರಹ ಬರದಿದ್ದರೆ ಇವತ್ತಿನ ದಿವಸ ಬದುಕಿ ಬಾಳುವುದೇ ಕಷ್ಟವಾಗಿಹೋಗಿದೆ, ಏಕೆಂದರೆ ಚೆನ್ನಾಗಿ ಕಲಿತವರ ಕಡೆಗೆ ಅನ್ನವು ಹರಿದುಹೋಗುತ್ತಿದ್ದು ಕಲಿಯದವರಿಗೆ ಅನ್ನವು ಕಡಿಮೆಯಾಗುತ್ತಿದೆ. ಇವತ್ತಿನ ದಿವಸ ಕನ್ನಡಿಗರಿಗೆಲ್ಲ ಓದು-ಬರಹಗಳು ಬರಬೇಕೆಂಬ ಚಿಂತನೆ ಸಮಾಜದಲ್ಲಿ ಇದೆ. ಎಲ್ಲಾ ಕಸುಬಿನವರೂ ಕೆಲಿಯಬೇಕಾದ ಗಣಿತ, ಮೂಲಭೂತ ವಿಜ್ಞಾನ, ಸಮಾಜವಿಜ್ಞಾನ ಮುಂತಾದವುಗಳಿವೆ. ಕುಲಕಸುಬುಗಳು ಇವತ್ತು ಹೆಚ್ಚು-ಕಡಿಮೆ ಬೆಲೆ ಕಳೆದುಕೊಂಡಿವೆ. ಇವತ್ತಿನ ದಿವಸದ ಕಸುಬುಗಳೇ ಬೇರೆ, ಹಿಂದಿದ್ದ ಕಸುಬುಗಳೇ ಬೇರೆ. ಆ ಕಸುಬುಗಳನ್ನೇ ಕಲಿತು ಮುಂದುವರೆಯುವುದಕ್ಕೆ ಈ ಹೊಸ ಪ್ರಪಂಚದಲ್ಲಿ ಆಗುವುದಿಲ್ಲ.

ಆದ್ದರಿಂದ -
ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಆ ಕಸುಬುಗಳಿಗೆ ಬೇರೊಂದು ಕಸುಬಿನವರು ತಮ್ಮದೇ ಆದ ತಿಳುವಳಿಕೆಯನ್ನು ತರುವುದು ಎಂದಿಗೂ ಸಾಧ್ಯವಿರಲಿಲ್ಲ.

ಇಂದು - ಇವತ್ತಿನ ದಿವಸ ಎಂಜಿನಿಯರುಗಳು ಡಾಕ್ಟರಿಗೆ ತಮ್ಮ ತಿಳುವಳಿಕೆಯನ್ನು ನೀಡಿ ಅವರ ಕೆಲಸವನ್ನು ಸುಲಭ ಮಾಡುವುದನ್ನು ಕಾಣುತ್ತೇವೆ. ಆದರೆ ಹಿಂದೆ ಇದು ಸಾಧ್ಯವೇ ಇರಲಿಲ್ಲ. ಬೇರೆಬೇರೆ ಕಸುಬಿನವರ ನಡುವೆ ಈ ರೀತಿಯ ಮಾತುಕತೆಯೇ ಆಗುತ್ತಿರಲಿಲ್ಲ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಹಾಗೆಯೇ ಎಲ್ಲಾ ಕಸುಬಿನವರೂ ಕೂತು ಎಲ್ಲರಿಗೂ ಸಮನಾದ ಕಾಳಜಿಗಳ ಬಗ್ಗೆಯೂ ಹೆಚ್ಚು ಚಿಂತಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಯಾವ ಒಂದು ಕಸುಬಿನವರೂ ಕೂಡ ತಮ್ಮ ಕಸುಬಿನಿಂದ ತಾವು ಗಳಿಸಿದ ತಿಳುವಳಿಕೆಯನ್ನು ಬರಹದಲ್ಲಿ ದಾಖಲಿಸುವುದಾಗಲಿ ಶಾಲೆಗಳಲ್ಲಿ ಕಲಿಸುವುದಾಗಲಿ ಮಾಡುತ್ತಿರಲಿಲ್ಲ. ಹಾಗೆ ಮಾಡಬೇಕೆನ್ನುವ ತಿಳುವಳಿಕೆಯೂ ಅವರಿಗಿರಲಿಲ್ಲ. ಹಾಗೆ ಮಾಡುವುದರಿಂದ ತಮ್ಮ ಕಸುಬಿನವರೇ ಕೆಲಸದಲ್ಲಿ ಕೈಚಳಕವನ್ನು ಹೆಚ್ಚಿಸಿಕೊಳ್ಳಬಹುದೆಂದೂ ಅವರು ಅರಿತಿರಲಿಲ್ಲ. ಅಷ್ಟೇ ಅಲ್ಲದೆ, ಆಗಿನ ಕಸುಬುಗಳಲ್ಲಿ ಇವತ್ತಿನಂತೆ ದೊಡ್ಡ ದೊಡ್ಡ ಹೊತ್ತಗೆಗಳಲ್ಲಿ ಬರಿದಿಡುವಷ್ಟು ವಿಷಯವೂ ಇರುತ್ತಿರಲಿಲ್ಲ, ಬಹಳ ಸುಲಭವಾಗಿರುತ್ತಿದ್ದವು. ಆಗ ಜನರು ಲೌಕಿಕ ವಿಷಯಗಳಲ್ಲಿ ಇವತ್ತಿನಷ್ಟು ನಿಪುಣತೆಯನ್ನು ಪಡೆದುಕೊಳ್ಳಲು ಹವಣಿಸುತ್ತಿರಲಿಲ್ಲ. ತಮ್ಮ ಕಸುಬಿನಲ್ಲೇ ಹೆಚ್ಚು ಹೆಚ್ಚು ಹಣ ಗಳಿಸಿಕೊಳ್ಳುವ ವಿದ್ಯೆಗಳು ಇವಾಗಿನಷ್ಟು ಕಷ್ಟದ ವಿದ್ಯೆಗಳಾಗಿರಲಿಲ್ಲ.

ಇಂದು - ಇಂದು ಎಲ್ಲಾ ಕಸುಬಿನವರಿಗೂ ಸಮನಾದ ಕಾಳಜಿಗಳ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿಯಿದೆ. ನಾಡಿನ ಸಮಸ್ಯೆಗಳು, ಬೇರೆಬೇರೆ ರೋಗಗಳು, ಆಡಳಿತ, ಮುಂತಾದವುಗಳು ಇದಕ್ಕೆ ಉದಾಹರಣೆಗಳು. ಇವತ್ತಿನ ಕಸುಬುಗಳು ಬರಹವಿಲ್ಲದೆ, ಅವುಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಮೀಸಲಾದ ವಿಭಾಗಗಳಿಲ್ಲದೆ ಉದ್ಧಾರವಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಕಸುಬಿನವರಿಗೂ ತಮ್ಮದೇ ಆದ ಸಾಹಿತ್ಯದ ಪರಂಪರೆಯಿದೆ, ಬರಹದ ಪರಂಪರೆಯಿದೆ, ತಮ್ಮದೇ ಆದ ವಿಶ್ವವಿದ್ಯಾಲಯಗಳ ವಿಭಾಗಗಳಿವೆ. ಇವತ್ತಿನ ಕಸುಬುಗಳಿಗೆ ಜ್ಞಾನ-ವಿಜ್ಞಾನಗಳ ಬಹಳ ಆಳವಾದ ಅಧ್ಯಯನ ಬೇಕಿದೆ. ಜನರಿಗೆ ಈಗ ಲೌಕಿಕ ವಿಷಯಗಳಲ್ಲಿ ನಿಪುಣತೆಯು ಬೇಕೆಂಬ ಹಂಬಲವಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಮತ್ತೂ ಏನೆಂದರೆ ಆಗ ಕನ್ನಡದ ಮಕ್ಕಳಿಗೆಲ್ಲ ಸೇರಿ ಒಂದೇ ಕಲಿಕೆಯ ಏರ್ಪಾಡೆಂಬುದೂ ಇರಲಿಲ್ಲ. ಅದು ಯಾರಿಗೂ ಬೇಕಾಗಿಲ್ಲವೆಂದು ಜನರ ಅನಿಸಿಕೆಯಾಗಿದ್ದಹಾಗೆ ಕಾಣುತ್ತದೆ. ಕಲಿಕೆಯಿಂದ ಏನೂ ಉಪಯೋಗವಿಲ್ಲವೆಂದು ಜನರ ಅನಿಸಿಕೆಯಾಗಿತ್ತು (ಈ ಅನಿಸಿಕೆಯು ಹಳ್ಳಿಗಳಲ್ಲಿ ಇವತ್ತಿಗೂ ಕೆಲವರಿಗಿದೆ).

ಇಂದು - ಇಂದು ಕನ್ನಡದ ಮಕ್ಕಳೆಲ್ಲ ಸೇರಿ ಒಂದೇ ಕಲಿಕೆಯ ಏರ್ಪಾಡಿನಲ್ಲಿ ಕಲಿಯಬೇಕೆಂಬುದಿದೆ. ಜನರಿಗೆ ಕಲಿಕೆಯೇ ಬೇಕಿಲ್ಲವೆಂಬ ಅನಿಸಿಕೆ ಹೆಚ್ಚಾಗಿ ಇವತ್ತು ಉಳಿದಿಲ್ಲ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಅಂದು - ಆಗ ಮನಸ್ಸು ಮಾಡಿದರೆ ಯಾರು ಬೇಕಾದರೂ ಯಾವ ಕಸುಬನ್ನು ಬೇಕಾದರೂ ಸುಲಭವಾಗಿ ಕಲಿಯಬಹುದಾಗಿತ್ತು. ಆದರೆ ಹಾಗೆ ಮಾಡದೆ ಇದ್ದದ್ದು ಆ (ಬೇರೆ) ಕಸುಬನ್ನು ಕಲಿಯುವುದು ಕಷ್ಟವೆಂದಲ್ಲ, ಆ (ಬೇರೆ) ಕಸುಬು ತಮ್ಮ ಹಿಂದಿನವರು ಮಾಡಿಕೊಂಡು ಬಂದಿದ್ದ ಕಸುಬಲ್ಲವೆಂದು ಮಾತ್ರವಾಗಿತ್ತು. ಅಲ್ಲದೆ, ಬೇರೆಯವರು ಸುಲಭವಾಗಿ ಕಲಿಯಬಹುದಾದ ತಮ್ಮ ಕಸುಬನ್ನು ಎಲ್ಲರೂ ಕಲಿತರೆ ಅದರಿಂದ ತಮ್ಮ ಅನ್ನಕ್ಕೇ ಕುತ್ತುಬಂದೀತೆಂದು ತಮ್ಮ ಕಸುಬುಗಳ ಗುಟ್ಟನ್ನು ಒಂದುಚೂರೂ ಹೊರಗೆ ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ತಿಳುವಳಿಕೆಯನ್ನು ಕನ್ನಡಿಗರೆಲ್ಲ ಹಂಚಿಕೊಳ್ಳುವುದು ಎಂಬುದೇ ಆಗಿನ್ನೂ ಹುಟ್ಟಿರಲಿಲ್ಲ.

ಇಂದು - ಈಗ ಕಸುಬುಗಳನ್ನು ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದು ಎಂಬ ಸ್ಥಿತಿಯಿಲ್ಲ. ಅವುಗಳಲ್ಲಿ ಬಹಳ ನಿಪುಣತೆಯಿದ್ದರೆ ಮಾತ್ರ ಆ ಕಸುಬುಗಳನ್ನು ಮಾಡಿಕೊಂಡಿರಲಾಗುವುದು. ಆದ್ದರಿಂದ ಈಗ ಜನರು ಬೇರೆ ಕಸುಬುಗಳಿಗೆ ಹೋಗದಿರುವುದು ಆ ಕಸುಬಿಗೆ ಬೇಕಾದ್ದನ್ನು ಕಲಿಯುವುದು ಕಷ್ಟವಾಗಿರುವುದರಿಂದ. ಕಲಿಯುವುದು ಕಷ್ಟವಾಗಿರುವುದು ಆ ಕಸುಬಿನ ಗುಟ್ಟು ರಟ್ಟಾಗಿಲ್ಲವೆಂದಲ್ಲ, ರಟ್ಟಾಗಿರುವ ಗುಟ್ಟೇ ಕಲಿಯಲು ಕಷ್ಟ, ಅದರ ಬದಲು ತಮ್ಮ ಕಸುಬನ್ನೇ ಮುಂದುವರೆಸಿಕೊಂಡು ಹೋಗುವುದು ವಾಸಿ ಎನ್ನುವ ಕಾರಣದಿಂದ. ಆದ್ದರಿಂದ ಒಂದು ಕಸುಬಿನವರು ಇನ್ನೊಂದು ಕಸುಬಿನವರಿಗೆ ತಮ್ಮ ವಿದ್ಯೆಯನ್ನು ಹೇಳಿಕೊಡಲು ಹಿಂಜರಿಯುವುದಿಲ್ಲ. ಈಗ ಹಾಗೆ ಹೇಳಿಕೊಳ್ಳುವುದರಿಂದ ಎರಡು ಪಾರ್ಟಿಗಳೂ ಲಾಭಗಳಿಸುತ್ತವೆ ಎಂಬ ಅನಿಸಿಕೆ ಜನರಲ್ಲಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಆಡಳಿತದ ಏರ್ಪಾಡಿನಲ್ಲಿ ಆಗಿರುವ ಬದಲಾವಣೆಗಳು


ಅಂದು - ಆಗಿನ ಕಾಲದಲ್ಲಿ ಆಡಳಿತವೆನ್ನುವುದು ಅರಸರ ಕೈಯಲ್ಲಿರುತ್ತಿತ್ತು. ಅರಸನ ಕೆಲಸವು ನಾಡಿಗರನ್ನು ಹೊರಗಿನವರಿಂದ ಕಾಪಾಡುವುದು, ಒಳಜಗಳಗಳಲ್ಲಿ ತೀರ್ಪುಕೊಡುವುದು - ಇವುಗಳಷ್ಟೇ ಆಗಿದ್ದವು. ಆಗ ಕಲಿಕೆಯೆನ್ನುವುದು ಆಡಳಿತದ ಒಂದು ಭಾಗವಾಗಿರಲಿಲ್ಲ. ಜನರು ಕಾಲಕಾಲಕ್ಕೆ ತಮ್ಮ ಗಳಿಕೆಗೆ ತಕ್ಕಂತೆ ತೆರಿಗೆಯನ್ನು ಅರಸನಿಗೆ ಕಟ್ಟುತ್ತಿದ್ದರು. ಅರಸನಿಗೂ ಪ್ರಜೆಗಳ ಆರ್ಥಿಕ ಏಳಿಗೆಗೂ ಇನ್ನಾವ ಹೆಚ್ಚಿನ ನಂಟೂ ಇರಲಿಲ್ಲ. ಪ್ರಜೆಗಳಿಗೆ ಕಲಿಕೆಯನ್ನು ಕೊಡುವುದು ಅರಸನ ಜವಾಬ್ದಾರಿಯಾಗಿರಲಿಲ್ಲ. ಪ್ರಜೆಗಳಿಗೆ ತನ್ನ ಯೋಜನೆಗಳನ್ನೆಲ್ಲ ತಿಳಿಸುವುದು ಬೇಕಾಗಿರಲಿಲ್ಲ.

ಇಂದು - ಆದರೆ ಈಗ ಹಾಗಲ್ಲ. ಈಗ ಕರ್ನಾಟಕದಲ್ಲಿ ಒಂದು ಪ್ರಜಾಪ್ರಭುತ್ವವಿದೆ. ಕರ್ನಾಟಕದ ಸರಕಾರಕ್ಕೆ ಕನ್ನಡಿಗರ ಕಲಿಕೆಯ ಜವಾಬ್ದಾರಿಯೆನ್ನುವುದು ಇದೆ. ಜಗಳಗಳಲ್ಲಿ ತೀರ್ಪುಕೊಡುವ ಕೆಲಸವೂ ಇವತ್ತಿನ ದಿನ ಬರಹವಿಲ್ಲದೆ ಆಗುವುದಿಲ್ಲ. ಇವತ್ತಿನ ದಿವಸ ಕರ್ನಾಟಕ ಸರ್ಕಾರಕ್ಕೆ ಬರೀ ಜನರಿಂದ ತೆರಿಗೆಯನ್ನು ವಸೂಲಿ ಮಾಡುವುದೆಂಬ ಒಂದೇ ಕೆಲಸವಿಲ್ಲ. ಸರ್ಕಾರದ ಮೆಲೆ ಜನರ ಆರ್ಥಿಕ ಬೆಳವಣಿಗೆಯ ಹೊಣೆಯೂ ಇದೆ. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹುಟ್ಟಿಹಾಕುವ ಹೊಣೆ ಸರ್ಕಾರಕ್ಕಿದೆ. ಜನರೊಡನೆ ಸರ್ಕಾರವು ಹಿಂದೆಗಿಂತ ಬಹಳ ಜಾಸ್ತಿ ವ್ಯವಹರಿಸಬೇಕಾಗಿದೆ. ತನ್ನ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕಾಗಿದೆ. ಏನೇನು ಯೋಜನೆಗಳನ್ನು ಮಾಡಬೇಕೆಂಬುದನ್ನೂ ಜನರಿಂದಲೇ ತಿಳಿದುಕೊಳ್ಳಬೇಕಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.

ಜನರ ಹಂಬಲಿಕೆಗಳಲ್ಲಿ ಆಗಿರುವ ಬದಲಾವಣೆಗಳು


ಅಂದು - ಆಗ ಬೆರಳೆಣಿಕೆಯ ಕೆಲವರು ಮೋಕ್ಷದ ಕಡೆಗೆ ವಾಲಿಕೊಂಡು ಮೋಕ್ಷವನ್ನು ಸಾಧಿಸಲು ಬೇಕಾದ ವಿದ್ಯೆಯ ಕಡಲೇ ಆಗಿದ್ದ ಸಂಸ್ಕೃತದ ಪರಿಚಯವು ಅವರಿಗೆ ಆಗಿರಬೇಕು. ಅವರಿಗೆ ಮೋಕ್ಷಕ್ಕಿಂತ ಹೆಚ್ಚಿನ ಪುರುಷಾರ್ಥವೇ ಇಲ್ಲವೆನಿಸಿರಬೇಕು. ಹಾಗೆನಿಸಿ ಇವರುಗಳು ಸಂಸ್ಕೃತವನ್ನು ಚೆನ್ನಾಗಿ ಕಲಿತರು ಎನ್ನಬಹುದು. ಮೋಕ್ಷವನ್ನು ಗುರಿಯಾಗಿಟ್ಟುಕೊಂಡ ಇವರುಗಳು ಧರ್ಮದಿಂದ ನಡೆಯುತ್ತಿದ್ದರು ಎನ್ನಬಹುದು. ಇವೆಲ್ಲ ಕಾರಣಗಳಿಂದ ಇವರನ್ನು ಸಮಾಜವು ಗೌರವಿಸಲಾರಂಭಿಸಿತು ಎನ್ನಬಹುದು. ಒಟ್ಟಿನಲ್ಲಿ ಸಂಸ್ಕೃತವನ್ನು ಕಲಿತಿದ್ದ ಇವರಿಗೆ ಸಮಾಜವು ಒಂದು ಮೇಲಿನ ಸ್ಥಾನವನ್ನು ಕೊಟ್ಟು ಗೌರವಿಸಿತು. ಅರಸರು ಕೂಡ ಇವರನ್ನು ಗೌರವಿಸಿ ಇವರನ್ನು ಗುರುಗಳಾಗಿ ಕಾಣುತ್ತಿದ್ದರು.

ಇಂದು - ಈಗ ಮೋಕ್ಷದ ಕಡೆಗೆ ವಾಲಿಕೊಂಡು ಮೋಕ್ಷವನ್ನು ಸಾಧಿಸಲು ಹೊರಡುವವರ ಸಂಖ್ಯೆ ಹೆಚ್ಚಾಗಿದೆ (ಜನಸಂಖ್ಯೆಯೇ ಹೆಚ್ಚಾಗಿದೆ). ಇವರುಗಳೂ ಮೋಕ್ಷದ ವಿದ್ಯೆಯನ್ನು ಕಲಿಯಬೇಕಿದೆ, ಇವರೂ ಧರ್ಮದಿಂದ ನಡೆಯಲು ಆಸೆಪಡುತ್ತಾರೆ. ಇವರಿಗೆ ಸಮಾಜವು ಯಾವುದೇ ಮೇಲಿನ ಸ್ಥಾನವು ಕೊಡಲಿ ಎಂಬ ಆಸೆಯಿಲ್ಲದಿದ್ದರೂ, ಇವರನ್ನು ಗುರುಗಳೆಂದು ಜನರು ಕರೆಯದಿದ್ದರೂ ಇವರಿಗೆ ಅಧ್ಯಾತ್ಮದ ಒಲವಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.


ಅಂದು - ಬೆರಳೆಣಿಕೆಯ ತಿಳುವಳಿಕಸ್ತರಲ್ಲದೆ ಆಗ ಬರಹವೆಂಬುದು ಹೇಗಿರುತ್ತದೆಯೆಂದೇ ಇತರರು ನೋಡಿರಲಿಲ್ಲವಾದ್ದರಿಂದ ಇವರೇ ಕನ್ನಡಕ್ಕೆ ಬರಹವೆಂಬುದನ್ನು ತಂದರು. ಹಾಗೆ ತರುವಾಗ ಸಂಸ್ಕೃತದ ಮೇಲಿನ ತಮ್ಮ ಅಭಿಮಾನದಿಂದ ಆ ಬರಹವನ್ನು ಸಂಸ್ಕೃತದ ಪದಗಳಿಂದ ತುಂಬಿಸಿದರು, ಆ ಬರಹದಲ್ಲೂ ಕನ್ನಡದ ನಾಲಿಗೆಯು ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿದರು ಎಂದು ಹಿಂದೆಯೇ ನಾವು ಹೇಳಿದ್ದೇವೆ. ಆದರೆ ಇವರಿಗೆ ಲೌಕಿಕ ವಿಷಯಗಳೇ ಬೇಡವಾಗಿದ್ದುದರಿಂದ ಇವರ ಬರಹಗಳಲ್ಲಿ ಮತ್ತು ಇವರ ಮಾತುಗಳಲ್ಲಿ ಸಂಸ್ಕೃತದ ಪದಗಳನ್ನು ಉಪಯೋಗಿಸಿ ಧರ್ಮ-ಅಧ್ಯಾತ್ಮದ ವಿಷಯಗಳು ಮಾತ್ರ ಇರುತ್ತಿದ್ದವು. ಕನ್ನಡದಲ್ಲಿ ಮೊದಮೊದಲು ಬರಹಗಳು ಬಂದಾಗ ಧರ್ಮ-ಅಧ್ಯಾತ್ಮಗಳೇ ಅವುಗಳ ವಿಷಯವಾಗಿದ್ದವು ಎಂಬುದನ್ನು ಹಳಮೆಯರಿಗರು ತಿಳಿದೇ ಇದ್ದಾರೆ. ಇವರು ಬರೆದಿದ್ದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದವರೆಲ್ಲ ಇವರಂತೆಯೇ ಮೋಕ್ಷವನ್ನು ಗುರಿಯಾಗಿಸಿಕೊಂಡ ಬೆರಳೆಣಿಕೆಯವರು ಮಾತ್ರವಾಗಿರುತ್ತಿದ್ದರು. ಕನ್ನಡದ ಬರಹದ ಪರಂಪರೆಯು ಬೆರಳೆಣಿಕೆಯವರಿಗೆ ಮಾತ್ರ ಬೇಕಾಗಿದ್ದ ಧರ್ಮ-ಅಧ್ಯಾತ್ಮಗಳ ಬರಹದ ಪರಂಪರೆಯಾಗಿ ಮಾತ್ರ ಉಳಿದುಬಿಟ್ಟಿತು, ಎಲ್ಲರಿಗೂ ಅದು ಹರಡಲೇ ಇಲ್ಲ ಎನ್ನುವುದನ್ನು ಈ ಮೂಲಕ ಕಾಣಬಹುದು. ಇವರು ಲೌಕಿಕವಾಗಿ ಮಾಡುತ್ತಿದ್ದುದು ಹೆಚ್ಚೆಂದರೆ ಅರಸರು ಹೇಳಿದಾಗ ಆಡಳಿತಕ್ಕೆ ಬೇಕಾದ ಸುತ್ತೋಲೆಗಳು, ಅಪ್ಪಣೆಗಳು, ಕಲ್ಲುಬರಹಗಳು, ತಾಮ್ರಬರಹಗಳು ಮುಂತಾದವುಗಳನ್ನು ಬರೆದುಕೊಡುತ್ತಿದ್ದುದು ಮಾತ್ರ, ಮತ್ತು ತಮ್ಮ ಶಿಷ್ಯರಿಗೆ ಪಾಠ ಹೇಳುವುದು ಮಾತ್ರ. ಶಾಸನಗಳು ಕೆಲವೊಮ್ಮೆ ಕನ್ನಡದ ಆಗಿನ ಬರಹದಲ್ಲಿದ್ದರೂ ಸಂಸ್ಕೃತದ ಶ್ಲೋಕಗಳೇ ಆಗಿರುತ್ತಿದ್ದವು ಎಂದು ಗಮನಿಸಿ. ಒಟ್ಟಿನಲ್ಲಿ ಇವರುಗಳು ಬರೆದಿದ್ದು ಸಮಾಜದ ಮುಂದೆ ಬಂದಾಗಲೂ ಅದನ್ನು ಜನರು ಓದಿ ತಿಳಿದುಕೊಳ್ಳಬೇಕೆಂಬುದೇನು ಇರಲಿಲ್ಲ, ಎಕೆಂದರೆ ಬರಹವೆಂಬುದೇ ಜನರಿಗೆ ಆಗ ಬರುತ್ತಿರಲಿಲ್ಲ. ಹೀಗೆ ಬರಹವೆಂಬುದು ಜನರಿಗೆ ತಿಳಿಯದೆ ಹೋದರೂ ಪರವಾಗಿಲ್ಲವೆಂಬ ಪರಂಪರೆಯು ಕನ್ನಡದ ಬರಹಕ್ಕೆ ಅಂಟಿಕೊಂಡಿತು.

ಇಂದು - ಇಂದು ಬರಹವು ಎಲ್ಲರಿಗೂ ಬೇಕಾಗಿದೆಯೆಂದು ಮೇಲೇ ಹೇಳಾಯಿತು. ಆದ್ದರಿಂದ ನಾಲಿಗೆಯಲ್ಲಿ ಉಲಿಯದನ್ನೆಲ್ಲ ಸೇರಿಸಿಕೊಳ್ಳುವುದು ಇವತ್ತಿನ ದಿವಸ ಪೆದ್ದತನವೇ ಆದೀತು. ಆಡುನುಡಿಯಲ್ಲಿ ಇರುವ ಪದಗಳನ್ನು ಬಿಟ್ಟು ಸಂಸ್ಕೃತದ ಪದಗಳನ್ನು ತಂದು ಸೇರಿಸಿಕೊಳ್ಳುವುದು ಇನ್ನೂ ದೊಡ್ಡ ಪೆದ್ದತನವೇ ಆದೀತು. ಇವತ್ತಿನ ದಿವಸ ಬರಹ ಬರೆಯುವವರಿಗೆಲ್ಲ ಲೌಕಿಕ ವಿಷಯಗಳೇ ಹೆಚ್ಚಾಗಿ ಬೇಕಾಗಿದೆ. ಇವತ್ತಿನ ಬರಹಗಳ ವಿಷಯ ಹೆಚ್ಚಾಗಿ ಅರ್ಥ-ಕಾಮಗಳೇ ಆಗಿದೆ. ಧರ್ಮ-ಮೋಕ್ಷಗಳ ವಿಷಯಗಳು ಈಗ ಜನರಿಗೆ ಹೆಚ್ಚು ಬೇಕಗಿಲ್ಲ. ನಮ್ಮ ಆರ್ಥಿಕ ಸ್ಥಿತಿ ಇವತ್ತಿನ ದಿವಸ ಬಹಳ ಕೀಳುಮಟ್ಟದ್ದಾಗಿರುವುದರಿಂದ ಮೊದಲು ಹೊಟ್ಟೆಗೆ ಅನ್ನವನ್ನು ತಂದುಕೊಳ್ಳುವುದೇ ಜನರ ಮುಂದಿರುವ ಮೊದಲ ಸವಾಲಾಗಿದೆ. ಇವತ್ತಿನ ದಿವಸ ಸರಕಾರವು ಹೊರಡಿಸುವ ಅಪ್ಪಣೆ, ಜಾಹೀರಾತು, ಟೆಂಡರುಗಳು ಮುಂತಾದವೆಲ್ಲ (ಆವತ್ತಿನ ಶಾಸನಗಳಿದ್ದಂತೆ) ಅರ್ಥವಾಗದಿದ್ದರೂ ಪರವಾಗಿಲ್ಲವೆಂಬ ಪರಿಸ್ಥಿತಿಯಿಲ್ಲ. ಅದು ಇವತ್ತಿನ ದಿವಸ ಅರ್ಥವಾಗಲೇಬೆಕು. ಬರಹವೆಂಬುದು ಜನರಿಗೆ ತಿಳಿಯದೆ ಹೋದರೂ ಪರವಾಗಿಲ್ಲವೆಂಬ ಪರಂಪರೆಯು ಇವತ್ತಿನ ದಿವಸ ಮುರಿದುಹೋಗಲೇಬೇಕು. ಬರಹವೆಂಬುದು ಜನರಿಗೆ ಅರ್ಥವಾಗುವುದೇ ಅದರ ಬಹಳ ಮುಖ್ಯವಾದ ಕೆಲಸವಾಗಿಹೋಗಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.


ಅಂದು - ಅಂದು ನಮ್ಮಲ್ಲಿ ಅರ್ಥ-ಕಾಮಗಳಿಗೆ ಕೊರತೆ ಇವತ್ತಿನಷ್ಟು ಇಲ್ಲದಿದ್ದುದರಿಂದ ಧರ್ಮ-ಮೋಕ್ಷಗಳ ವಿದ್ಯೆಯೇ ಜನರಿಗೆ ಹೆಚ್ಚಾಗಿ ಬೇಕಾಗಿತ್ತು. ಧರ್ಮ-ಮೋಕ್ಷಗಳ ವಿಷಯದಲ್ಲಿ ಹೊಸಹೊಸದನ್ನು ಕಂಡುಹಿಡಿಯುವುದು ಇಲ್ಲವೇ ಜನರೇ ಆ ವಿದ್ಯೆಗಳನ್ನು ಮತ್ತಷ್ಟು ಹೆಚ್ಚಿಸುವುದು ಎಂಬುದೇನೂ ಇರುವುದಿಲ್ಲ. ಹಿಂದೆ ಒಂದಾನೊಂದು ಕಾಲದಲ್ಲಿ ಬರೆದಿಟ್ಟಿರುವ ವೇದ-ಉಪನಿಷತ್ತುಗಳೇ ಮೊದಲಾದವುಗಳಿಗೆ ಸೇರಿಸಬೇಕಾದ್ದೇನೂ ಇಲ್ಲ. ಅವುಗಳಲ್ಲಿರುವ ವಿದ್ಯೆಗಳಿಗೆ ಯಾವುದೇ ರೀತಿಯ ಕೊರತೆಗಳಿವೆಯೆಂದು ಕೂಡ ಹೇಳಲು ಬರುವುದಿಲ್ಲ. ಅವುಗಳು ಸದಾ "ಪೂರ್ಣ"ವಾಗಿವೆ. ಅದ್ದರಿಂದ ಜನರು ಈ ವಿದ್ಯೆಗಳಿಗೆ ಕೊಡುಗೆ ನೀಡಬೇಕು ಎನ್ನುವುದೆನೂ ಇರಲಿಲ್ಲ. ಸಾಮಾನ್ಯ ಜನರಿಂದ ಶಾಲೆಗಳೇ ಪಾಠ ಕಲಿಯಬೇಕು ಎನ್ನುವುದಿರಲಿಲ್ಲ. ಆದ್ದರಿಂದ ಜನರ ನುಡಿ ಮುಖ್ಯವೇ ಆಗಿರಲಿಲ್ಲ.

ಇಂದು - ಇಂದು ಅರ್ಥ-ಕಾಮಗಳೇ ಧರ್ಮ-ಮೋಕ್ಷಗಳಿಗಿಂತ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡಿವೆ. ಏಕೆಂದರೆ ಅರ್ಥ-ಕಾಮಗಳಲ್ಲಿ ನಾವು ಹಿಂದೆ ಬಿದ್ದಿರುವುದರಿಂದ. ಧರ್ಮ-ಮೋಕ್ಷಗಳ ವಿದ್ಯೆಗೂ ಅರ್ಥ-ಕಾಮಗಳ ವಿದ್ಯೆಗೂ ಇರುವ ವ್ಯತ್ಯಾಸವೇನೆಂದರೆ ಅರ್ಥ-ಕಾಮಗಳ ವಿದ್ಯೆಗಳು ಎಂದಿಗೂ "ಪೂರ್ಣ"ವಾಗಿರುವುದಿಲ್ಲ. ಇವುಗಳಿಗೆ ಪ್ರತಿದಿನವೂ ಹೊಸಹೊಸ ದಿಟಗಳನ್ನು ಸೇರಿಸಬೇಕಾಗಿದೆ. ಇವುಗಳಲ್ಲಿ ಆಗಾಗಗ್ಗೆ ಸಾಮಾನ್ಯ ಜನರೇ ಕೊಡುಗೆಗಳನ್ನು ನೀಡಬೇಕಾಗಿದೆ. ಜನರಿಂದ ಶಾಲೆಗಳೇ ಪಾಠ ಕಲಿಯಬೇಕೆಂಬುದು ಈಗಿದೆ. ಆದ್ದರಿಂದ ಜನರ ನುಡಿ ಇಂದು ಬಹಳ ಮುಖ್ಯವಾಗಿದೆ.

ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಈ ಮೇಲಿನ ಬದಲಾವಣೆಗಳನ್ನು ಕಣ್ಣುಬಿಟ್ಟು ನೋಡಿದಾಗ "ಎಲ್ಲರ ಕನ್ನಡವು" ಕಡೆಗಣಿಸಲ್ಪಟ್ಟರೆ ಕನ್ನಡಿಗರ ಏಳಿಗೆ ಎಂದೆಂದಿಗೂ ಆಗುವುದಿಲ್ಲವೆಂಬ ಅರಿವು ಯಾರಿಗೇ ಆದರೂ ಆಗದೆ ಹೋಗುವುದಿಲ್ಲವೆಂಬುದು ನಮ್ಮ ನಂಬಿಕೆಯಾಗಿದೆ. ಈ ಬರಹವನ್ನು ತೆರೆದ ಮನಸ್ಸಿನಿಂದ ಓದಿದವರಿಗೆ ಸಂಸ್ಕೃತದ ಬಗೆಗಿನ ಕುರುಡು ಅಭಿಮಾನವೂ ಹೋಗುವುದೆಂದು ಕೂಡ ನಮ್ಮ ನಂಬಿಕೆಯಾಗಿದೆ.

ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೪: ಬರೆಯುವುದರ ಗುರಿಯನ್ನು ತಿಳಿದಾಗ ಸಂಸ್ಕೃತದ ಬಳಕೆ ಕಡಿಮೆಯಾಗಲೇಬೇಕು

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೨: ಸಂಸ್ಕೃತಮಯವಾದದ್ದೇ ಒಳ್ಳೆಯ ಕನ್ನಡ ಎಂದಾಗಿರುವುದರಿಂದ ತೊಂದರೆಗಳು

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಇಲ್ಲಿಯವರೆಗೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ - ೧: ಒಳ್ಳೆಯ ಕನ್ನಡವೆಂದರೆ ಸಂಸ್ಕೃತಮಯವಾದದ್ದು ಎಂಬ ಬರೆಯದ ಕಟ್ಟಳೆ

ಕನ್ನಡದಲ್ಲಿ ಹೆಚ್ಚು ಸಂಸ್ಕೃತ ಪದಗಳನ್ನು ಬಳಸದಿದ್ದರೆ ಅದು ಒಳ್ಳೆಯ ಕನ್ನಡವಲ್ಲವೆಂಬ ಬರೆಯದ ಕಟ್ಟಳೆಯಿಂದ ಇವತ್ತಿನ ದಿವಸ ಏನೇನು ತೊಂದರೆಗಳಾಗುತ್ತಿವೆಯೆಂದು ನೋಡೋಣ. ಈ ತೊಂದರೆಗಳು ಹೀಗೆಯೇ ಮುಂದುವರೆದರೆ ಕನ್ನಡಿಗರಲ್ಲಿ ಈಗಾಗಲೇ ಕಡಿಮೆಯಿರುವ ಒಗ್ಗಟ್ಟು, ಕಲಿಕೆ ಮತ್ತು ದುಡಿಮೆಗಳು ಪೂರ್ತಿಯಾಗಿ ಅಳಿಸಿಹೋಗುವುದರಿಂದ ಈ ತೊಂದರೆಗಳು ಯಾವುವೆಂದು ತಿಳಿದುಕೊಳ್ಳುವುದು, ಮತ್ತು ಇವುಗಳನ್ನು ಇಲ್ಲವಾಗಿಸುವುದು ಬಹಳ ಮುಖ್ಯ.

ನುಡಿಯೆಂಬುದಕ್ಕೆ ಹೊರಮಾತು ಮತ್ತು ಒಳಮಾತುಗಳೆಂಬ ಎರಡು ಉಪಯೋಗಗಳಿರುತ್ತವೆ. ಹೊರಮಾತೆಂದರೆ ಇಬ್ಬರು ಇಲ್ಲವೇ ಹೆಚ್ಚು ಜನರು ಸೇರಿದಾಗ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು. ಒಳಮಾತೆಂದರೆ ವ್ಯಕ್ತಿಯೊಬ್ಬನ ಚಿಂತನೆ ಮತ್ತು ಮಾತಿನ ನಡುವಿನ ಸೇತುವೆ. ತಿಳುವಳಿಕಸ್ತರ ನುಡಿ ಹಾಗೂ ಬರಹಗಳು ಸಂಸ್ಕೃತದಿಂದ ಅತಿ ಹೆಚ್ಚು ಎರವಲು ಪದಗಳನ್ನು ಪಡೆದುಕೊಂಡು ಕನ್ನಡಿಗರಿಂದಲೇ ಬಹುದೂರ ಹೊರಟುಹೋಗಿರುವುದರಿಂದ ಕನ್ನಡಿಗರೆಲ್ಲರ ಹೊರಮಾತು ಮತ್ತು ಒಳಮಾತುಗಳೆರಡಕ್ಕೂ ಕುತ್ತು ಬಂದಿದೆ. ಎಂದರೆ ಸಾಮಾಜಿಕ ತೊಂದರೆಗಳು ಮತ್ತು ವೈಯಕ್ತಿಕ ತೊಂದರೆಗಳು - ಎಂಬ ಎರಡು ರೀತಿಯ ತೊಂದರೆಗಳು ಕೂಡ ಹುಟ್ಟಿಕೊಂಡಿವೆ. ಆದರೆ ಈ ತೊಂದರೆಗಳನ್ನು ಚೆನ್ನಾಗಿ ಅರಿತುಕೊಳ್ಳಲು ಇವುಗಳನ್ನು ಮಾತಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಬರಹಕ್ಕೆ ಸಂಬಂಧಿಸಿದ ತೊಂದರೆಗಳು ಎಂದು ಬೇರ್ಪಡಿಸಿಕೊಳ್ಳುವುದೇ ಒಳ್ಳೆಯದೆಂದು ನಮ್ಮ ಅನಿಸಿಕೆಯಾಗಿದೆ. ಇದು ಹೀಗೇಕೆಂದರೆ ಸಂಸ್ಕೃತದ ಪ್ರಭಾವದಿಂದ ಮಾತು ಮತ್ತು ಬರಹಗಳೆರಡೂ ಹಾದಿ ತಪ್ಪಿರುವುದರಿಂದ ಇವುಗಳಲ್ಲಿ ಸಾಮಾಜಿಕ ಮತ್ತು ವೈಯಕ್ತಿಕ ತೊಂದರೆಗಳೆರಡರ ಗುರುತುಗಳೂ ಸುಲಭವಾಗಿ ಸಿಗುತ್ತವೆ.

ಮಾತಿಗೆ ಸಂಬಂಧಿಸಿದ ತೊಂದರೆಗಳು

ಇವತ್ತಿನ ದಿವಸ ಹೆಚ್ಚು ಸಂಸ್ಕೃತವನ್ನು ಬಳಸಿ ಮಾತನಾಡುವವರ ನುಡಿಗಷ್ಟೇ ಅಲ್ಲ, ಅವರಿಗೇ ಹೆಚ್ಚಿನ ಗೌರವವಿದೆ. ಹಿಂದೆ ಸಂಸ್ಕೃತದ ಪದಗಳನ್ನು ಉಪಯೋಗಿಸಿ ತಿಳುವಳಿಕಸ್ತರು ಮಾತನಾಡುತ್ತಿದ್ದರೆ ಅವರ ಮಾತಿನಲ್ಲಿ ಧರ್ಮ ಇಲ್ಲವೇ ಮೋಕ್ಶಗಳ ವಿಷಯಗಳಿರುತ್ತಿದ್ದವೆಂದು ಅವರಿಗೆ ಗೌರವವನ್ನು ತೋರಿಸುವುದು ಸರಿಯಾಗಿತ್ತೆಂದು ಒಪ್ಪಿಕೊಂಡರೂ ಇವತ್ತಿನ ದಿವಸ ಬರೀ ಸಂಸ್ಕೃತದ ಪದಗಳನ್ನು ಉಪಯೋಗಿಸುವವರೇ ಗೌರವಕ್ಕೆ ಪಾತ್ರರಾಗುತ್ತಾರೆ. ಇವತ್ತಿನ ದಿವಸ "ಕನ್ನಡಿ" ಎನ್ನುವ ಬದಲು "ದರ್ಪಣ" ಎನ್ನುವವರಿಗೆ ಹೆಚ್ಚಿನ ಗೌರವವಿದೆ. ಇವೆರಡು ಪದಗಳಲ್ಲಿ ಯಾವುದೇ ಹೆಚ್ಚು-ಕಡಿಮೆಯಿಲ್ಲದಿದ್ದರೂ ಇವುಗಳಲ್ಲಿ ಮೊದಲನೆಯದನ್ನು ಆಡಿದವನಿಗಿಂತ ಎರಡನೆಯದನ್ನು ಆಡಿದವನು ಹೆಚ್ಚು ಬುದ್ಧಿವಂತನೆನಿಸಿಕೊಳ್ಳುತ್ತಾನೆ. ಇದರಿಂದ ಜನರಲ್ಲಿ ಬರೀ ಸಂಸ್ಕೃತದ ಪದಗಳ ಬಳಕೆಯ ಆಧಾರದ ಮೇಲೆ "ಮೇಲು"-"ಕೀಳು" ಎಂಬ ಒಡಕುಂಟಾಗಿದೆ. ಅಷ್ಟೇ ಅಲ್ಲದೆ, ಪದಗಳು ಮತ್ತು ಬರಹಗಳು ಗುರುತಿಸುವ ತತ್ವಗಳಿಗೆ ನಮ್ಮಲ್ಲಿರಬೇಕಾದ ಗೌರವವು ಮತ್ತೆಲ್ಲಿಗೋ ಹೊರಟುಹೋಗಿದೆ. ಹಾಗೆಯೇ ಧರ್ಮ-ಮೋಕ್ಷಗಳ ವಿಷಯವು ಕೂಡ ಜನರಲ್ಲಿ ಹರಡಬೇಕಾದಷ್ಟು ಹರಡದೆ ಇರುವುದಕ್ಕೂ ಜನಪ್ರಿಯವಾದ ಕನ್ನಡದಲ್ಲಿ ಅವುಗಳನ್ನು ಜನರ ಮುಂದೆ ಇಡದೆ ಇರುವುದೇ ಒಂದು ಕಾರಣವಾಗಿಹೋಗಿದೆ.

ಅಲ್ಲದೆ, ಸಾಮಾನ್ಯ ಜನರಿಗೆ ತಮ್ಮ ನುಡಿಯೇ ಕೀಳೆಂದು ಅನಿಸಿಬಿಟ್ಟಿದೆ. ಅದರಲ್ಲಿರುವ ಪದಗಳನ್ನು ಒಂದೊಂದಾಗಿ ತೆಗೆದುಹಾಗಿ ಅವುಗಳ ಬದಲಾಗಿ ಸಂಸ್ಕೃತದ ಪದಗಳನ್ನು ಆಡದಿದ್ದರೆ ತಮ್ಮ ನುಡಿಯು ಎಂದಿಗೂ ಕೀಳಾಗಿಯೇ ಉಳಿಯುತ್ತದೆಯೆಂಬ ಹೆದರಿಕೆ ಸಾಮಾನ್ಯಜನರಿಗೆ ಬಂದುಬಿಟ್ಟಿದೆ. ಇದನ್ನು ಮಾಡುವ ಪ್ರಯತ್ನ ಪಟ್ಟರೂ ಸಂಸ್ಕೃತದ ಪದಗಳನ್ನು "ಚೆನ್ನಾಗಿ" - ಎಂದರೆ ಸಂಸ್ಕೃತದಲ್ಲಿ ಉಲಿಯುವಂತೆ - ಉಲಿಯಲಾಗದೆ ಹೋಗುತ್ತಾರೆ, ಅದಕ್ಕಾಗಿ ಮತ್ತೊಮ್ಮೆ ಬೈಸಿಕೊಳ್ಳುತ್ತಾರೆ. ಇವೆಲ್ಲದರಿಂದ ಸಾಮಾನ್ಯ ಕನ್ನಡಿಗರಿಗೆ ತಮಗೆ ಮಾತನಾಡುವಂತಹ ಸಾಮಾನ್ಯ ಕೆಲಸವೇ ಸರಿಯಾಗಿ ಬರುವುದಿಲ್ಲವೇನೋ ಎಂಬ ಕೀಳರಿಮೆ ಬಂದುಬಿಟ್ಟಿದೆ. ಮತ್ತೊಂದೇನೆಂದರೆ ಕನ್ನಡಿಗರಿಗೆ ತಮಗಾಗುವ ಅನುಭವಗಳನ್ನೂ ತಮ್ಮ ಅನಿಸಿಕೆ ಮತ್ತು ಚಿಂತನೆಗಳನ್ನು ಕನ್ನಡದ ಪದಗಳಲ್ಲಿ ತಿಳಿಸುವ ಯೋಗ್ಯತೆಯಿದ್ದರೂ ಅವುಗಳನ್ನು ತಿಳಿಸಲು ಸಂಸ್ಕೃತದ ಪದಗಳನ್ನು ಉಪಯೋಗಿಸದಿದ್ದರೆ ತಮ್ಮ ಅನಿಸಿಕೆ-ಅನುಭವ-ಚಿಂತನೆಗಳೇ ಕೀಳೆಂದೂ ತಮ್ಮ ನುಡಿಯೇ ಕೀಳೆಂದೂ ಕೊನೆಗೆ ತಾವೇ ಕೀಳೆಂದೂ ಯಾರಾದರೂ ಬೈದಾರು ಎಂಬ ಹೆದರಿಕೆ ಹುಟ್ಟಿಕೊಂಡುಬಿಟ್ಟಿದೆ. ಇದರಿಂದ ಕನ್ನಡಿಗರಿಗಿರುವ ಸಹಜವಾದ ತಿಳುವಳಿಕೆಯು ಬೆಳಕಿಗೆ ಬರದೆ ಹೋಗಿದೆ.

ಬರಹಕ್ಕೆ ಸಂಬಂಧಿಸಿದ ತೊಂದರೆಗಳು

ಕನ್ನಡದ ಬರಹದಲ್ಲಂತೂ ಸಂಸ್ಕೃತದ ಬಳಕೆ ತಿಳುವಳಿಕಸ್ತರ ಆಡುಗನ್ನಡಕ್ಕಿಂತ ಬಹಳ ಹೆಚ್ಚಾಗಿಯೇ ಇದೆ. ಇದರಿಂದ ಸಾಮಾನ್ಯ ಜನರಿಗೆ ಬರೆದಿದ್ದೆಲ್ಲವೂ ದೂರವನಿಸಿಬಿಟ್ಟಿದೆ. "ಮನೆ ಸಾಲ" ಎನ್ನುವ ಬದಲು "ಗೃಹಋಣ"ವೆಂದು ಬರೆದಿದ್ದರೆ ಅದು ಏನೆಂದೇ ಅವರಿಗೆ ತಿಳಿಯುವುದಿಲ್ಲ. ತಮಗೆ ಎಷ್ಟೇ ತಿಳುವಳಿಕೆ, ಕಲೆಗಳಿದ್ದರೂ ಅವುಗಳನ್ನು ಬರಹದಲ್ಲಿ ದಾಖಲಿಸುವುದು ಒಂದು ಬ್ರಹ್ಮವಿದ್ಯೆಯೇ ಎನಿಸಿಬಿಟ್ಟಿದೆ. ಬರಹವೆನ್ನುವುದು ಕೆಲವರಿಗೆ ಮಾತ್ರವೇ ಮೀಸಲು ಎಂದು ಸಾಮಾನ್ಯ ಜನರಿಗೆ ಅನಿಸಿಬಿಟ್ಟಿದೆ. ಇದರಿಂದ ಬರಹವೆನ್ನುವುದು ಕನ್ನಡಿಗರಲ್ಲಿ ಹೆಚ್ಚು ಚಾಲ್ತಿಯಲ್ಲೇ ಇಲ್ಲ. ಇದು ನಮ್ಮ ಏಳ್ಗೆ ಎಷ್ಟಾಗಿದೆಯೆನ್ನುವುದರ ನೇರವಾದ ಗುರುತಾಗಿದೆ.

ಹಿಂದೆ ಬರಹವೆನ್ನುವುದು ನಿಜಕ್ಕೂ ಕೆಲವರ ಸೊತ್ತೇ ಆಗಿತ್ತು. ಆದರೆ ಈಗ ಎಲ್ಲರಿಗೂ ಬರಹವೆನ್ನುವುದು ಬರಲೇಬೇಕಿದೆ. ಬರಹವಿಲ್ಲದೆ ಯಾವುದೇ ಹೆಚ್ಚಿನ ಕೆಲಸಗಳು ಮನುಷ್ಯನ ಕೈಯಲ್ಲಿ ಆಗುವುದಿಲ್ಲ. ಬರಹ ಬಾರದವನು ತನ್ನ ಬಾಳಿನಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲವೆಂಬ ಪರಿಸ್ಥಿತಿ ಇವತ್ತಿನ ದಿವಸ ಇದೆ. ಹೀಗಿರುವಾಗ ಕನ್ನಡಿಗರು ಬರೆಯುವುದೇ ಕಡಿಮೆಯಾಗಿರುವುದು ಒಂದು ದೊಡ್ಡ ತೊಂದರೆ. ಬರಹದ ಕನ್ನಡವು ಸಂಸ್ಕೃತದ ಕಾರಣದಿಂದ ಎಲ್ಲರ ಕನ್ನಡಕ್ಕಿಂತ ಬಹಳ ದೂರ ಹೊರಟುಹೋಗಿರುವುದರಿಂದ ಕನ್ನಡವನ್ನು ಕಲಿಯುವುದು ಮತ್ತು ಕಲಿಸುವುದು ಬಹಳ ಕಷ್ಟದ ವಿಷಯಗಳಾಗಿಹೋಗಿವೆ. ಜನರಿಗೆ ವಿಷಯಗಳನ್ನು ಹೇಳಿಕೊಡುವುದೇ ಕಲಿಕೆಯ ಗುರಿ; ಆದರೆ ವಿಷಯಗಳನ್ನು ಕಲಿಯುವ ಮುನ್ನ ಹೊಸದೊಂದು ಭಾಷೆಯ ಪದಗಳನ್ನು ಕಲಿಯಬೇಕು, ಇಲ್ಲವೇ ಉರು ಹೊಡೆಯಬೇಕು ಎಂದಾಗಿರುವುದರಿಂದ ಕಲಿಕೆ-ಕಲಿಯುವಿಕೆಗಳಲ್ಲಿ ಬಹಳ ಸಮಯ ಮತ್ತು ಬೆವರಿಳಿಕೆ ದಂಡವಾಗುತ್ತದೆ. ಇಲ್ಲೂ ಕೂಡ ಎಷ್ಟೇ ಪ್ರಯತ್ನಿಸಿದರೂ ಬರೆದಂತೆ ಉಲಿಯುವುದಂತೂ ಅಸಾಧ್ಯವೆಂಬಂತೆ ಆಗಿಹೋಗಿದೆ. ಇದೇಕೆಂದರೆ ಸಂಸ್ಕೃತದ ಪದಗಳಲ್ಲಿ ಕನ್ನಡದ ನಾಲಿಗೆಯ ಮೆಲೆ ಹೊರಳದಂತಹ ಬಹಳ ಉಲಿಗಳು ಇರುವುದರಿಂದ (ಉದಾಹರಣೆಗೆ ಮಹಾಪ್ರಾಣಗಳು, ಋ, ಮುಂತಾದುವು).

ಜ್ಞಾನ-ವಿಜ್ಞಾನಗಳ ಬರಹಗಳನ್ನು ಬರೆಯುವವರಿಗೆ ಮತ್ತು ಹೊಸದನ್ನು ಕಂಡುಹಿಡಿಯುವವರಿಗೆ ವಿಷಯಕ್ಕಿಂತ ಅವುಗಳನ್ನು ಗುರುತಿಸುವ ಸಂಸ್ಕೃತದ ಪದಗಳನ್ನು ಹುಡುಕುವುದರಲ್ಲೇ ಸಮಯ ಹಾಳಾಗುತ್ತದೆ. ಕನ್ನಡಿಗರಿಗೆ ಎಷ್ಟು ಪ್ರಯತ್ನ ಪಟ್ಟರೂ ಬೇಕಾದಷ್ಟು ಸಂಸ್ಕೃತದ ಪದಗಳನ್ನು ಹುಟ್ಟಿಸಲು ಆಗುವುದೇ ಇಲ್ಲ, ಏಕೆಂದರೆ ಅದು ಮೊದಲನೆಯಾದಾಗಿ ನಮ್ಮ ನುಡಿಯೇ ಅಲ್ಲ. ಆದರೂ ಸಂಸ್ಕೃತದ ಪದಗಳನ್ನು ಹುಟ್ಟಿಸುವುದೇ "ಶ್ರೇಷ್ಠ" ಎಂದು ಕೊಂಡು ಸಂಸ್ಕೃತದ ಪದಗಳನ್ನು ಹುಡುಕುವುದರಲ್ಲಿ ಸಮಯ ದಂಡ ಮಾಡುತ್ತಾರೆ. ಬಹಳ ಸುಲಭವಾಗಿ ಹುಟ್ಟಿಸಬಹುದಾದ ಕನ್ನಡದ ಪದಗಳು ಅವರಿಗೆ "ಕೀಳು" ಎನಿಸಿಬಿಡುತ್ತದೆ. ಇಷ್ಟೆಲ್ಲ ಕಷ್ಟ ಪಟ್ಟು ಸಂಸ್ಕೃತದ ಪದಗಳನ್ನು ಹುಟ್ಟಿಸಿ ಬರೆದರೂ ಅದು ಸಾಮಾನ್ಯ ಜನರಿಗೆ ತಲುಪುವುದೇ ಇಲ್ಲ, ಏಕೆಂದರೆ ಅವರಿಗಂತೂ ಸಂಸ್ಕೃತದ ಅರಿವು ಇನ್ನೂ ಕಡಿಮೆಯಿರುತ್ತದೆ.

ಮತ್ತೂ ಒಂದೇನೆಂದರೆ ಕನ್ನಡದ ಬರಹಗಳಲ್ಲಿ ಸಂಸ್ಕೃತದ ಪ್ರಭಾವದಿಂದ ಎಲ್ಲರಿಗೂ ತಿಳಿಯಬೇಕಾದ ವಿದ್ಯೆಗಳ ಕಡೆಗಣಿಕೆ ನಡೆಯುತ್ತಿದೆ. ಹಿಂದೆ ಸಂಸ್ಕೃತದಲ್ಲಿ ಎಲ್ಲರಿಗೂ ತಿಳಿಯದಿದ್ದರೂ ನಡೆಯುತ್ತದೆ ಎಂಬ ವಿಷಯಗಳೇ ಇದ್ದುದರಿಂದ (ಮತ್ತು ಈಗಲೂ ಅವೇ ಇರುವುದರಿಂದ) ಅಭ್ಯಾಸಬಲದಿಂದ ಅದೇ ವಿಷಯಗಳ ಬಗ್ಗೆಯೇ ಕನ್ನಡದಲ್ಲೂ ಹೆಚ್ಚು ಬರಹಗಳನ್ನು ಬರೆಯಲಾಗುತ್ತದೆ. ಹೀಗಾಗಿ ಧರ್ಮ-ಮೋಕ್ಶಗಳ ಬಗೆಗಿನ ಸಾಹಿತ್ಯವೇ ಕನ್ನಡದಲ್ಲಿ ಹೆಚ್ಚಾಗಿಹೋಗಿದೆ. ಎಲ್ಲರಿಗೂ ಬೇಕಾದ ಅರ್ಥ-ಕಾಮಗಳ ಸಾಹಿತ್ಯವು ಬಹಳ ಕಡಿಮೆಯಾಗಿಹೋಗಿದೆ. ಈ ಕಾರಣದಿಂದಲೂ ಕೂಡ ಕನ್ನಡದ ಬರಹವು ಜನಪ್ರಿಯವಾಗದೆ ಹೋಗಿದೆ.

ತೊಂದರೆಗಳ ಬುಗ್ಗೆಯಾಗಿರುವ ಸಂಸ್ಕೃತದ ಒಲವು

ಒಟ್ಟಿನಲ್ಲಿ ಸಂಸ್ಕೃತವನ್ನು ಇಷ್ಟರ ಮಟ್ಟಿಗೆ ನಮ್ಮ ತಲೆಯಮೇಲೆ ಕೂಡಿಸಿಕೊಂಡಿರುವುದರಿಂದ ಕನ್ನಡಿಗರು ಕನ್ನಡದ ನಿಜವಾದ ಸ್ವರೂಪದ ಬಗ್ಗೆ ಕತ್ತಲಲ್ಲೇ ಉಳಿದುಬಿಟ್ಟಿದ್ದಾರೆ, ಮತ್ತು ಮುಂದೆಯೂ ಉಳಿದುಕೊಳ್ಳುವ ಸಾಧ್ಯತೆಯಿದೆ. ಇದರಿಂದಲೇ ಬಹುಪಾಲು ಕನ್ನಡಿಗರು ತಮ್ಮ ಎದೆಯೊಳಗಿಂದ ಬರುವ ನುಡಿಯನ್ನು ಕೀಳೆಂದು ತಿಳಿದುಕೊಂಡಿರುವುದು. ಇದರಿಂದಲೇ ಕನ್ನಡವು ಸಂಸ್ಕೃತದಷ್ಟು ಆರ್ಪಿಲ್ಲದ ನುಡಿಯೆಂದು ತೋರುವುದು. ಇದರಿಂದಲೇ ಕನ್ನಡಕ್ಕೆ ಶಕ್ತಿಯಿಲ್ಲವೆಂದು ತೋರುವುದು. ಸಂಸ್ಕೃತಮಯವಾದ ಕನ್ನಡವೇ "ಒಳ್ಳೆಯ", "ಸರಿಯಾದ", "ಸ್ಪಷ್ಟವಾದ", "ಮೇಲ್ಮೆಯ" ಕನ್ನಡವೆಂದು ತಿಳುವಳಿಕಸ್ತರು ತಿಳಿದಿರುವುದರಿಂದಲೇ ನಿಜವಾದ ಕನ್ನಡದ ಸೊಲ್ಲರಿಮೆಗಳನ್ನು ಯಾರೂ ಬರೆಯಲು ಹೋಗಿಲ್ಲ. ಹೀಗಿರುವುದರಿಂದಲೇ ಜನರು ಹೊಸ ಪದಗಳನ್ನು ಹುಟ್ಟಿಸಲು ಹೊರಡುವಾಗ ಕನ್ನಡದಿಂದ ದೂರ ಹೋಗಿ ಸಂಸ್ಕೃತದ ಮೊರೆಹೋಗುವುದು, ಅದರಲ್ಲಿ ಪದಗಳನ್ನು ಹುಟ್ಟಿಸಲು ಇನ್ನೂ ಕಷ್ಟವಾಗಿ ಪದಗಳನ್ನು ಹುಟ್ಟಿಸುವ ಶಕ್ತಿಯನ್ನೇ (ಮತ್ತು ಆ ಮೂಲಕ ಯಾವುದೇ ವಿಷಯದ ಬಗ್ಗೆ ಆಳವಾಗಿ ಚಿಂತಿಸುವ ಶಕ್ತಿಯನ್ನೇ) ಕಳೆದುಕೊಂಡಿರುವುದು. ಕನ್ನಡಕ್ಕೆ ಯಾವ ಸಂಸ್ಕೃತದಿಂದ ಶಕ್ತಿ ಬರುತ್ತಿದೆಯೆಂದು ಜನರು ತಪ್ಪಾಗಿ ತಿಳಿದು ಮೋಸಹೋಗಿರುವರೋ ಆ ಸಂಸ್ಕೃತವು ಅವರಿಂದ ಬಹಳ ದೂರವಿರುವುದರಿಂದ ಕನ್ನಡವೇ ಜನರಿಗೆ ದೂರವಾಗಿಹೋಗಿದೆ. ಕನ್ನಡಿಗರ ಕಲಿಕೆ ಕನ್ನಡದಿಂದಾಗಬೇಕು ತಾನೆ? ಆ ಕನ್ನಡವೇ ಇವರಿಗೆ ತಮ್ಮದಲ್ಲದ ನುಡಿಯಂತಿದ್ದರೆ (ಅದು ಸಂಸ್ಕೃತಮಯವಾದ ಕನ್ನಡವಾಗಿರುವುದರಿಂದ) ಕಲಿಕೆ ಎಷ್ಟು ಕಷ್ಟವಾಗುತ್ತದೆಯೆಂದು ನೀವೇ ಊಹಿಸಿಕೊಳ್ಳಿ. ಹೀಗಿರುವುದರಿಂದ ಕನ್ನಡಿಗರು ಕಲಿಕೆಯಲ್ಲಿ ಹಿಂದೆಬಿದ್ದಿದ್ದಾರೆ. ಒಗ್ಗೂಡಿಸುವ ನುಡಿಯೇ ಕೀಳೆಂಬ ಮನಸ್ಥಿತಿಯು ಮೂಡಿ ಕನ್ನಡಕ್ಕೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಶಕ್ತಿಯೂ ಹೊರಟುಹೋಗಿದೆ. "ಮೇಲು" ಮತ್ತು "ಕೀಳು" ಕನ್ನಡಗಳನ್ನು ಆಡುವವರ ನಡುವೆಯಂತೂ ಒಂದು ದೊಡ್ಡ ಕಂದರವೇ ಇದೆ. ಹೀಗೆ ಬಗೆಬಗೆಯಾಗಿ ಒಗ್ಗಟ್ಟನ್ನು ಕಳೆದುಕೊಂಡಿರುವ ಕನ್ನಡಜನಾಂಗವು ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡು ಸೊರಗುತ್ತಿದೆ.

ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೩: ಬದಲಾಗಿರುವ ಸಾಮಾಜಿಕ ನೆಲೆ, ಕುಗ್ಗಿರುವ ಸಂಸ್ಕೃತದ ಬೇಕಾಗುವಿಕೆ, ಹಿಗ್ಗಿರುವ ಕನ್ನಡದ ಬೇಕಾಗುವಿಕೆ.

ಕನ್ನಡ ಮತ್ತು ಕನ್ನಡಿಗರ ಏಳಿಗೆ - ೧: ಒಳ್ಳೆಯ ಕನ್ನಡವೆಂದರೆ ಸಂಸ್ಕೃತಮಯವಾದದ್ದು ಎಂಬ ಬರೆಯದ ಕಟ್ಟಳೆ

ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು

ಕನ್ನಡಿಗರಲ್ಲಿ ಸಂಸ್ಕೃತಮಯವಾಗಿರುವ ಮಾತು "ಒಳ್ಳೆಯ-ಕನ್ನಡ"ವೆಂದು ಬರೆಯದ ಕಟ್ಟಳೆಯೊಂದು ಚಾಲ್ತಿಯಲ್ಲಿದೆ. ಒಳ್ಳೆಯ ಕನ್ನಡದ ಬರಹವೆಂದರೆ ಅದು ಬಹಳ ಸಂಸ್ಕೃತದ ಪದಗಳಿರುವ ಬರಹವೇ ಎಂದು ಕೂಡ ಏರ್ಪಟ್ಟಿದೆ. ಹೆಚ್ಚು ಸಂಸ್ಕೃತದ ಪದಗಳಿರದ ಹಾಗೂ ಸಂಸ್ಕೃತದಲ್ಲಿ ಉಲಿಯುವಂತೆ ಉಲಿಯದವರಿಗೆ ಕನ್ನಡವೇ ಸರಿಯಾಗಿ ಬರುವುದಿಲ್ಲವೆಂದು ಬೈಯಲಾಗುತ್ತದೆ, ಅವರ "ಭಾಷೆ ಅಭಿವೃದ್ಧಿಹೊಂದಬೇಕು" ಎಂದೂ ಹೇಳಲಾಗುತ್ತದೆ. ಆದರೆ ನಿಜಕ್ಕೂ ನೋಡಿದರೆ ಸಂಸ್ಕೃತದಿಂದ ಬಹಳ ಕಡಿಮೆ ಪ್ರಭಾವಿತವಾಗಿರುವ ಒಂದು ನುಡಿಯನ್ನೇ ಹೆಚ್ಚಾಗಿ ಕನ್ನಡಿಗರು ಆಡುವುದು. ಅದೇ ನಿಜವಾದ ಕನ್ನಡ. ಅದರಲ್ಲಿ ಒಳ್ಳೆತನದ ಎಳ್ಳಷ್ಟೂ ಕೊರತೆಯಿಲ್ಲ. ಅದು ಯಾವುದೇ ರೀತಿಯ ಅಭಿವೃದ್ಧಿಯನ್ನು ಕೂಡ ಹೊಂದಬೇಕಿಲ್ಲ.

ಮೊಟ್ಟಮೊದಲು ಕನ್ನಡಿಗರಿಗೆ ಜ್ಞಾನ-ವಿಜ್ಞಾನಗಳನ್ನು ಕೊಟ್ಟ ಸಂಸ್ಕೃತವು

ಮೊದಮೊದಲು ಕನ್ನಡಿಗರು ಏನಾದರೂ ಕಲಿಯಬೇಕು ಎಂದು ಆಸೆಪಟ್ಟಿದ್ದರೆ ಆ ಆಸೆಯು ಅವರಿಗೆ ಸಂಸ್ಕೃತದಿಂದಲೇ ಈಡೇರುತ್ತಿತ್ತು ಎಂದು ಊಹೆಯ ಮೇಲೆ ಹೇಳಬಹುದು. ಏನನ್ನಾದರೂ ಕಲಿಯಬೇಕಿದ್ದರೆ ಅದು ಸಂಸ್ಕೃತವನ್ನು ಬಲ್ಲವರಿಂದಲೇ ಕಲಿಯಬೇಕಿತ್ತು, ಏನನ್ನಾದರೂ ಓದಬೇಕೆಂದು ಕೈಹಾಕಿದರೆ ಅದು ಸಂಸ್ಕೃತದ ಗ್ರಂಥಗಳೇ ಆಗಿರುತ್ತಿದ್ದವು. ಕನ್ನಡದಲ್ಲಿ ಓದುವುದಕ್ಕೆ, ಕಲಿಯುವುದಕ್ಕೆ ಆಗ ಏನೂ ಇದ್ದಿಲ್ಲವೆಂದು ಕಾಣಿಸುತ್ತದೆ. ಆದ್ದರಿಂದ ಈ ಕನ್ನಡಿಗರು ಸಂಸ್ಕೃತವನ್ನು ಕಲಿತು, ಸಂಸ್ಕೃತದ ಒಳ್ಳೊಳ್ಳೆಯ ಆಧ್ಯಾತ್ಮಿಕ ಗ್ರಂಥಗಳನ್ನು ಮತ್ತು ಇತರ ಕೃತಿಗಳನ್ನು ಕಷ್ಟ ಪಟ್ಟು ಓದಿ ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಅರಿವಿನ ಬಾಯಾರಿಕೆಯೇ ಅಂಥದ್ದು. ಇವರ ಜ್ಞಾನದ ದಣಿವಾರಿಸಿದ್ದ ಸಂಸ್ಕೃತದಿಂದ ಬಹಳ ಪ್ರೇರಣೆಯನ್ನು ಪಡೆದು ತಮ್ಮ ಬರಹ ಮತ್ತು ನುಡಿಗಳಲ್ಲಿ ಸಹಜವಾಗಿ ಹೆಚ್ಚು ಹೆಚ್ಚು ಸಂಸ್ಕೃತದ ಪದಗಳನ್ನು ಬಳಸತೊಡಗಿದರು. ಕನ್ನಡಿಗರಿಗೆ ಅಧ್ಯಾತ್ಮವೇ ಮೊದಲಾದ ವಿಷಯಗಳ ಮತ್ತು ಬೇರೆಬೇರೆ ಶಾಸ್ತ್ರಗಳ ಅರಿವನ್ನು ಮೊಟ್ಟಮೊದಲಿಗೆ ಸಂಸ್ಕೃತವೇ ನೀಡಿದೆಯೆಂದು ಹೇಳಬಹುದು. ಸಂಸ್ಕೃತದಿಂದ ನಮಗೆ ಸಿಕ್ಕಿರುವ ಈ ಕೊಡುಗೆಗೆ ಕನ್ನಡಿಗರು ಸಂಸ್ಕೃತವನ್ನು ಗೌರವಿಸತಕ್ಕದ್ದೇ. ಆದರೆ ಆ ಗೌರವದಿಂದ ನಮ್ಮ ನುಡಿಯ ಬಗ್ಗೆಗೇ ಅಗೌರವವು ಹುಟ್ಟಿಕೊಂಡಿರುವುದು ಸರಿಯಿಲ್ಲ. ಆ ಗೌರವದಿಂದ ಕನ್ನಡವೇ ಕೀಳೆಂದು ಏರ್ಪಟ್ಟಿರುವುದು ಸರಿಯಲ್ಲ. ಕನ್ನಡಿಗರನ್ನೂ ಸೇರಿದಂತೆ ಪ್ರಪಂಚದಲ್ಲೆಲ್ಲ ಈಗಿನ ನುಡಿಯರಿಗರಿಗೆ (ಭಾಷಾವಿಜ್ಞಾನಿಗಳಿಗೆ) ಕನ್ನಡ-ಸಂಸ್ಕೃತಗಳು ಬೇರೆಬೇರೆ ನುಡಿಕುಟುಂಬಗಳಿಗೆ ಸೇರಿವೆಯೆಂದೂ ಕನ್ನಡವು ಸಂಸ್ಕೃತದಿಂದಲ್ಲ, ದ್ರಾವಿಡನುಡಿಯಿಂದ ಹುಟ್ಟಿಬಂದಿದೆಯೆಂದೂ ಗೊತ್ತಿದೆ. ಸಂಸ್ಕೃತ ಕನ್ನಡದ ತಾಯಿಯಲ್ಲವೆಂದು ನುಡಿಯರಿಗರಿಗೆ ಮನದಟ್ಟಾಗಿದೆ. ಆದರೆ ನುಡಿಯರಿಗರ ಈ ಅರಿವು ನಮ್ಮ ತಿಳುವಳಿಕಸ್ತರ ತಲೆಗೆ ಇಳಿದಿಲ್ಲ, ಇಳಿಸಿಕೊಂಡಿಲ್ಲ.

ಸಂಸ್ಕೃತದ ಸೋಂಕಿಲ್ಲದ ಕನ್ನಡವು ಬೆಳವಣಿಗೆಹೊಂದದ್ದೆಂದು ಏರ್ಪಟ್ಟದ್ದು

ಒಟ್ಟಿನಲ್ಲಿ ಹಿಂದೆ ನುಡಿಯೊಂದನ್ನು ಈಗಿನಷ್ಟು ವೈಜ್ಞಾನಿಕವಾಗಿ ವಿಶ್ಲೇಷಿಸುವ ನುಡಿಯರಿಮೆಯೇ (ಭಾಷಾವಿಜ್ಞಾನವೇ) ಹುಟ್ಟಿರಲಿಲ್ಲವಾದ್ದರಿಂದ ಹಿಂದಿನ ತಿಳುವಳಿಕಸ್ತರು ಸಂಸ್ಕೃತಕ್ಕೂ ಕನ್ನಡಕ್ಕೂ ಇರುವ ವ್ಯತ್ಯಾಸವನ್ನು ಕಾಣದೆ ಹೋದರು. ಕನ್ನಡವು ಸಂಸ್ಕೃತದಿಂದ ಹುಟ್ಟಿದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನೇನು ಅವರು ಕೇಳಲು ಹೋಗಲಿಲ್ಲ. ಅದು ಅವರಿಗೆ ಬೇಕಾಗಿಯೂ ಇರಲಿಲ್ಲ. ಸಂಸ್ಕೃತದಿಂದ ಅವರಿಗೆ ಜ್ಞಾನವು ಸಿಕ್ಕುತ್ತಿದ್ದರಿಂದ ಈ ಪ್ರಶ್ನೆಯು ಅವರಿಗೆ ಮುಖ್ಯವೆನಿಸಿರಲಾರದು. ಆದ್ದರಿಂದ ಯಾರುಯಾರಿಗೆ ಯಾವಯಾವ ಸಂಸ್ಕೃತದ ಪದ ಮತ್ತು ಸೊಲ್ಲರಿಮೆಯ ಅಂಶಗಳು ಇಷ್ಟವಾಯಿತೋ ಅದನ್ನು ಅವರು ತಂತಮ್ಮ ಬರಹ ಮತ್ತು ನುಡಿಗಳಿಗೆ ಸೇರಿಸಿಕೊಳ್ಳುತ್ತ ಹೋದರು. ಆಗಲೂ ಅವರ ಬರಹಕ್ಕೆ ಎಷ್ಟು ಸಂಸ್ಕೃತದ ಪದಗಳು ಮತ್ತು ಸೊಲ್ಲರಿಮೆಯಂಶಗಳು ಸೇರಿದವೋ ಅಷ್ಟು ಅವರ ನುಡಿಗೆ ಸೇರಲಿಲ್ಲ. ಆಗ ಬರಹವೆಂಬುದು ಬೆರಳೆಣಿಕೆಯ ಜನರನ್ನು ಮಾತ್ರ ತಲುಪುತ್ತಿದ್ದರಿಂದ ಬರಹದಲ್ಲಿ ಬೇಕಾದ್ದನ್ನು ಮಾಡಿಕೊಳ್ಳುವುದು ಸುಲಭವಾಗಿತ್ತು, ಆದರೆ ಮಾತೆಂಬುದನ್ನು ಎಲ್ಲರೂ ಆಡುತ್ತಿದ್ದರಿಂದ ಯಾವುದನ್ನು ಆಡಬೇಕು, ಯಾವುದನ್ನು ಆಡಬಾರದು ಎಂದು ಜನರೇ ಸೇರಿ ತೀರ್ಮಾನಿಸಿದರು. ಮತ್ತೂ ಏನೆಂದರೆ ಆಗ ಬರಹಗಳನ್ನು ಇಡೀ ಕನ್ನಡಜನಾಂಗಕ್ಕೆಲ್ಲ ಉದ್ದೇಶಿಸಿ ಬರೆಯುತ್ತಿರಲಿಲ್ಲ. ಕನ್ನಡಿಗರಲ್ಲಿ ಆಗ ಅಕ್ಷರಸ್ತರ ಸಂಖ್ಯೆ ಬಹಳ ಕಡಿಮೆಯಿದ್ದುದರಿಂದ ಬರಹಗಳನ್ನು ಆಗ ಬರೆಯುತ್ತಿದ್ದುದು ಕೇವಲ ಬೆರಳೆಣಿಕೆಯಷ್ಟು ಜನರಿಗೋಸ್ಕರ ಮಾತ್ರ. ಹೀಗೆ ಕಾಲಕಳೆದಂತೆ ಬರಹದ ಕನ್ನಡವು ಸಂಸ್ಕೃತಮಯವಾಗುತ್ತ ಹೋಗಿ ಆಡುಗನ್ನಡದಿಂದ ಬಹಳ ಬೇರೆಯೇ ಆಗಿಹೋಯಿತು. ಅಲ್ಲದೆ, ಕನ್ನಡದ ತಿಳುವಳಿಕಸ್ತರ ಸಂಸ್ಕೃತದ ಮೇಲಿನ ಅಭಿಮಾನದಿಂದ ಆಡುನುಡಿಯು ಬರಹದಿಂದ ಬದಲಾಗಬೇಕೆಂಬ ತಲೆಕೆಳುಗು ನಿಯಮವೊಂದು ಜಾರಿಗೆ ಬಂತು. ’ಕನ್ನಡ’ವೆಂಬ ಪದವು ಕಾಲಕಳೆದಂತೆ ಕೋಟಿಗಟ್ಟಲೆ ಕನ್ನಡಿಗರ ನುಡಿಯನ್ನು ಸೂಚಿಸದೆ ಬೆರಳೆಣಿಕೆಯ ಬರಹಗಾರರ ನುಡಿಯನ್ನು ಸೂಚಿಸಲು ಶುರುವಾಯಿತು. ಆ ನುಡಿಯಲ್ಲಿ ಬರಹಗಾರರ ಸಂಸ್ಕೃತದ ಒಲವಿನಿಂದ ಸಂಸ್ಕೃತದ ಪದಗಳು ಹೆಚ್ಚುಹೆಚ್ಚು ತುಂಬಿಕೊಂಡುಬಿಟ್ಟವು. ಇವರುಗಳೇ ಸಮಾಜದಲ್ಲಿ ಮೇಲಿನ ಸ್ಥಾನಗಳಲ್ಲಿದ್ದುದರಿಂದ ಇವರು ಹೇಳಿದ್ದೇ "ಒಳ್ಳೆಯ-ಕನ್ನಡ"ವೆಂದೂ, ಇವರಂತೆ ತಿಳಿವಳಿಕಸ್ತರಾಗಿರದವರ ಸಂಸ್ಕೃತದ ಸೋಂಕಿಲ್ಲದ ಕನ್ನಡವು ಬೆಳವಣಿಗೆಹೊಂದದ್ದೆಂದು ಏರ್ಪಟ್ಟಿತು. ಹಾಗೆಯೇ ಸಂಸ್ಕೃತವೇ ಕನ್ನಡದ ತಾಯಿಯೆಂದೂ ಒಂದು ಆಧಾರವಿಲ್ಲದ ಸುಳ್ಳು ಜನರಲ್ಲಿ ಹರಡಿತು.

ನಿಧಾನವಾಗಿ ಹೆಚ್ಚು ಹೆಚ್ಚು ಸಂಸ್ಕೃತವನ್ನು ಬಳಸಿ ಮಾತನಾಡದಿದ್ದರೆ ಇಲ್ಲವೇ ಬರೆಯದಿದ್ದರೆ ಅದು "ಸ್ಪಷ್ಟ"ವಲ್ಲವೆಂದೂ "ಸರಿ"ಯಲ್ಲವೆಂದೂ "ಶಿಷ್ಟ"ವಲ್ಲವೆಂದು ಕೂಡ ಏರ್ಪಟ್ಟಿತು. "ಒಳ್ಳೆಯ ಕನ್ನಡ" ಎಂದರೆ ಅದು ಸಂಸ್ಕೃತವೇ ಎಂಬಂತೆ ಬರಹ ಮತ್ತು ನುಡಿಗಳನ್ನು ಮತ್ತಷ್ಟು ಮಗದಷ್ಟು ಸಂಸ್ಕೃತಕ್ಕೆ ಹೋಲುವಂತೆ ಮಾಡಿಕೊಳ್ಳುವುದೇ ಕನ್ನಡದ "ಅಭಿವೃದ್ಧಿ" ಎಂದೂ ಏರ್ಪಟ್ಟಿತು. (ಇವತ್ತಿನ ದಿನವೂ ಕನ್ನಡಕ್ಕೆ ಅಭಿವೃದ್ಧಿಯಾಗಬೇಕಿದೆ ಎಂದು ಮಾತನಾಡುವವರಿದ್ದಾರೆ. ಹಾಗೆಂದರೆ ಅವರ ಪ್ರಕಾರ ಅದು ಸಂಸ್ಕೃತದಂತಾಗುವುದು ಎಂದೇ.) ಹಾಗೆಯೇ ಕನ್ನಡದ ಸೊಲ್ಲರಿಮೆಯು ಸಂಸ್ಕೃತಮಯವಾದ ಕನ್ನಡದ್ದಾದ ದಿನದಿಂದ ಜನರಿಗೆ ಕನ್ನಡವು ಸಂಸ್ಕೃತದಿಂದಲೇ ಹುಟ್ಟಿರಬೇಕೆಂಬ ತಪ್ಪು ತಿಳುವಳಿಕೆ ತಲೆಯಲ್ಲಿ ಬೇರೂರಿಬಿಟ್ಟಿತು. ಆ ತಪ್ಪು ತಿಳುವಳಿಕೆಯನ್ನು ಎಲ್ಲೆಲ್ಲೂ ಒಂದೇ ಸಮನೆ ಹರಡುವುದಕ್ಕೆ ಈ ಸೊಲ್ಲರಿಮೆಯೇ ಒಂದು ಸಾಧನವಾಗಿಹೋಯಿತು. ಕನ್ನಡವು ಸಂಸ್ಕೃತವನ್ನು ಹೋಲುವಂತೆ ಮಾಡುವುದು ಕನ್ನಡಕ್ಕೆ ಸೇವೆಯೆಂದೇ ಕನ್ನಡದ ತಿಳುವಳಿಕಸ್ತರು ತಿಳಿದುಕೊಂಡರು, ಆದರೆ ಅದು ಸೇವೆಯಾಗಲಿಲ್ಲ, ನಿಜಕ್ಕೂ ಕನ್ನಡದ ಮಟ್ಟಿಗೆ ಅದು ನಂಜಾಯಿತು. ಕನ್ನಡಕ್ಕೆ ಈ ನಂಜುಣಿಸುವ ಕೆಲಸವು ಇಂದಿಗೂ ಕನ್ನಡದ ತಿಳುವಳಿಕಸ್ತರಿಂದ ನಡೆಯುತ್ತಿದೆ, ಮತ್ತು ಇಂದಿಗೂ ಇವರು ಕನ್ನಡಕ್ಕೆ ಅದು ತಮ್ಮ ಸೇವೆಯೆಂದೇ ಮನಸಾರೆ ತಿಳಿದಿದ್ದಾರೆ. ಒಮ್ಮೆ ಕನ್ನಡದ ಹುಟ್ಟಿನ ಬಗೆಗಿನ ನಿಜಾಂಶವು ಇವರಿಗೆ ಮನದಟ್ಟಾದರೆ, ಮತ್ತು ಕನ್ನಡಿಗರ ಏಳಿಗೆ "ಎಲ್ಲರ ಕನ್ನಡ"ದಿಂದಲೇ ಸಾಧ್ಯವೆಂದು ಅರಿವಾದರೆ ತಾವು ಮಾಡುತ್ತಿರುವುದು ಸೇವೆಯಲ್ಲವೆಂದು ಅರಿವಾಗುತ್ತದೆ ಎಂಬ ಭರವಸೆ ನಮಗಿದೆ, ಏಕೆಂದರೆ ಇವರ ಮನಸ್ಸಿನಲ್ಲಿ ಕನ್ನಡಕ್ಕೆ ನಂಜುಣಿಸಬೇಕೆಂಬ ಅನಿಸಿಕೆಯೇನಿಲ್ಲ. ಇವರಿಗೂ ಕನ್ನಡಿಗರ ಏಳಿಗೆಯೇ ಬೇಕಾಗಿದೆ.

ಕನ್ನಡವು ಸಂಸ್ಕೃತದಿಂದ ಹುಟ್ಟಿದ ನುಡಿಯೆಂಬ ತಪ್ಪು ಪ್ರಚಾರವು
ಕನ್ನಡವು ಸಂಸ್ಕೃತದಿಂದ ಹುಟ್ಟಿಬಂದಿದೆಯೆಂಬ ತಪ್ಪು ತಿಳುವಳಿಕೆಯು ಇನ್ನೂ ಚಾಲ್ತಿಯಲ್ಲಿರುವುದಕ್ಕೆ ಮತ್ತೊಂದು ಕಾರಣವಿದೆ. ಅದೇನೆಂದರೆ ಕೆಲವರು ಕನ್ನಡದ ಹುಟ್ಟಿನ ಬಗೆಗಿನ ಸತ್ಯವು ತಿಳುವಳಿಕಸ್ತರಿಗೆ ತಲುಪದಿರುವಂತೆ ಮಾಡಲು ಬಹಳ ಪ್ರಯತ್ನ ಮಾಡುತ್ತಿರುವುದು. ಇವರಿಗೆ ಭಾರತದಲ್ಲಿರುವ ನುಡಿಗಳ ವಿವಿಧತೆಯು ಒಂದು ತಲೆನೋವಾಗಿಬಿಟ್ಟಿದೆ! ನುಡಿಗಳು ಭಾರತೀಯರನ್ನು ಅಲ್ಲಲ್ಲಿ ಒಗ್ಗೂಡಿಸುವ ಸಾಧನಗಳೆಂದು ಅರಿಯದೆ ಭಾರತವನ್ನು ಒಡೆಯುವಂಥವು ಎಂದು ತಪ್ಪಾಗಿಯೂ ಇವರು ತಿಳಿದಿರುತ್ತಾರೆ. ಆದ್ದರಿಂದ ಇವರು ಭಾರತದ ನುಡಿಗಳೆಲ್ಲ ಸಂಸ್ಕೃತವೆಂಬ ಒಂದೇ ತಾಯಿಯ ಮಕ್ಕಳೆಂದು ತಮಗೆ ತಾವೇ ಯಾವ ನುಡಿಯರಿಮೆಯ ಆಧಾರವೂ ಇಲ್ಲದೆ ಬರಿಯ ಕುರುಡು ಅಭಿಮಾನದಿಂದ ಬೋಧಿಸಿಕೊಂಡಿರುತ್ತಾರೆ (ಕೆಲವರು ಸಂಸ್ಕೃತದ ಈ "ತಾಯ್ತನ"ವನ್ನು ಪ್ರಪಂಚದ ನುಡಿಗಳಿಗೆಲ್ಲ ಎರವಲಾಗಿ ಕೊಟ್ಟಿರುವುದೂ ಉಂಟು, ಸಂಸ್ಕೃತಕ್ಕೆ ಅಂತಹ "ಜಗನ್ಮಾತೆ"ತನವು ಇಲ್ಲವೆಂದು ನುಡಿಯರಿಗರು ತೋರಿಸಿಕೊಟ್ಟಿರುವುದೂ ಉಂಟು!). ಕನ್ನಡದ ಹುಟ್ಟಿನ ಬಗೆಗಿನ ದಿಟವೇನಾದರೂ ಬಯಲಾದರೆ ಅದು ಭಾರತೀಯರಲ್ಲಿ ಆರ್ಯ-ದ್ರಾವಿಡರೆಂಬ ಒಡಕುಂಟುಮಾಡುತ್ತದೆಯೆಂಬ ಅಂಜಿಕೆಯು ಕೂಡ ಇವರಿಗಿದೆ. ನಿಜಕ್ಕೂ ನೋಡಿದರೆ ಈ ಅಂಜಿಕೆಗೆ ಅರ್ಥವೇ ಇಲ್ಲ. ಅನೇಕ ನುಡಿಯರಿಗರೇ ಹೇಳುವಂತೆ ಕನ್ನಡ-ಸಂಸ್ಕೃತಗಳು ಬೇರೆಬೇರೆ ನುಡಿಕುಟುಂಬಗಳಿಗೆ ಸೇರಿರುವುದರ ಆಧಾರದ ಮೇಲೆ ಭಾರತದ ಜನಾಂಗಗಳ ಬಗ್ಗೆ ಯಾವ ತೀರ್ಮಾನಕ್ಕೂ ಬರಲಾಗುವುದಿಲ್ಲ. ಎಂದರೆ ಕೇವಲ ನುಡಿಗಳ ಆಧಾರದ ಮೇಲೆ ಜನಾಂಗಗಳಿಗೆ ಸಂಬಂಧಪಟ್ಟ ತೀರ್ಮಾನಗಳನ್ನು ಮಾಡಲು ಬರುವುದಿಲ್ಲ. ಆದರೆ ಈ ಸೂಕ್ಷ್ಮವು ಇವರಿಗೆ ತಿಳಿಯದೆ ಹೋಗಿರುವುದರಿಂದ ಕನ್ನಡವು ಸಂಸ್ಕೃತದಿಂದಲೇ ಹುಟ್ಟಿರುವ ನುಡಿಯೆಂದೂ ಸಂಸ್ಕೃತವು ದೈವಭಾಷೆಯೆಂದೂ ಸುಳ್ಳು ಪ್ರಚಾರವನ್ನು ಜೋರಾಗಿ ಮಾಡುತ್ತಾರೆ, ಅದನ್ನೇ ಸರಿಯೆಂದು ಸಂಸ್ಕೃತಕ್ಕೆ ಕೈಮುಗಿದು ಕನ್ನಡಿಗರು ತಲೆತೂಗಿಸುತ್ತಾರೆ.

ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೨: ಈ ಬರೆಯದ ಕಟ್ಟಳೆಯಿಂದ ತೊಂದರೆಗಳು

ಬೆಂಗಳೂರು ಕನ್ನಡಿಗರದ್ದಲ್ಲ ಅಂತಾ ಸಾರಕ್ಕೆ ಮುಂದಾಗಿರೋ ಹಬ್ಬ!



"ಬೆಂಗಳೂರು ಕನ್ನಡಿಗರದ್ದಲ್ಲ. ಇದು ಕಾಸ್ಮೋಪಾಲಿಟಿನ್ ಸಿಟಿ. ಇಲ್ಲಿ ಬೇರೆ ಬೇರೆ ಭಾಷೆಯೋರೇ ಇರೋದು... ಇದಕ್ಕೆ ತನ್ನದೇ ಆದ ಸಂಸ್ಕೃತಿ ಅನ್ನೋದೇನೂ ಇದ್ದಂಗಿಲ್ಲ... ಬೆಂಗಳೂರಿನ ಸಂಸ್ಕೃತಿ ಅನ್ನೋದು ಚೌ ಚೌ ಸಂಸ್ಕೃತಿ... ಇಲ್ಲಿ ಬಹುಭಾಷೆಗಳಿದ್ದು ಕನ್ನಡ ಸತ್ತು ಹೋಗಿದೆ... ಇಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು... ಬೆಂಗಳೂರು ಕನ್ನಡಿಗರಿಗೆ ಸೇರಿದ್ದಲ್ಲಾ... ಇಡೀ ಭಾರತದ್ದು... ಆದ್ದರಿಂದ ಇದ್ನ ಕೇಂದ್ರಾಡಳಿತ ಪ್ರದೇಶ ಮಾಡಿ" ಅಂತ ಬೊಗೊಳೋ ಮನೆಹಾಳು ಮುಖಕ್ಕೆ ಮೇಕಪ್ ಹಚ್ಚಿ, ರಂಗಪ್ರವೇಶ ಮಾಡ್ಸುದ್ರೆ ಆ ಪ್ರಹಸನದ ಹೆಸರನ್ನ ಬೆಂಗಳೂರು ಹಬ್ಬ ಅನ್ನಬಹುದು ಜನಾ ಬೀದಿಬೀದಿಲಿ ಮಾತಾಡ್ತಾ ಇದಾರೆ ಗುರು!
ಬೆಂಗಳೂರು ಹಬ್ಬ ಅನ್ನೋ ವಿಶ್ವಭ್ರಾತ್ವತ್ವ!
ಬೆಂಗಳೂರು ಹಬ್ಬ ಅಂದ್ರೆ ಬೆಂಗಳೂರಿನ ಸಂಸ್ಕೃತಿ, ಕನ್ನಡಿಗರ ಕಲೆಗಳನ್ನು ಪ್ರದರ್ಶಿಸಿ, ಇಲ್ಲಿನ ಕಲಾವಿದರಿಗೆ ವೇದಿಕೆ ಒದಗಿಸಿ ಕೊಡೋ, ಅಂತಹ ಕಾರ್ಯಕ್ರಮಗಳ ಮೂಲಕ ಜಗತ್ತಿನ ಜನರನ್ನು ಸೆಳೆಯೋ ಪ್ರವಾಸೋದ್ಯಮಕ್ಕೆ ಪೂರಕವಾಗಿರೋ ಹಬ್ಬ ಅಂತ ಯಾರಾದ್ರೂ ಅಂದ್ಕೊಂಡ್ರೆ ಅದು ದೊಡ್ಡ ಮುಠ್ಠಾಳತನ ಆಗುತ್ತೆ. ಇದು ಬೆಂಗಳೂರಿನ ಜನರಿಗೆ ಪ್ರಪಂಚದ ಬೇರೆ ಬೇರೆ ಪ್ರದೇಶದ ಕಲೆಗಳನ್ನು ತೋರಿಸೋ ಉಲ್ಟಾ ಹಬ್ಬ. ಇವರು ನಡೆಸೋ ಕಾರ್ಯಕ್ರಮಗಳ ಬಗ್ಗೆ ನಾಡಿನ ಕಲಾವಿದರುಗಳು ಅಸಹನೆ ತೋರುಸ್ತಾನೆ ಇದಾರೆ... ಕಳೆದ ವರ್ಷ ಪ್ರವೀಣ್ ಗೋಡ್ಖಿಂಡಿಯವರು ದನಿ ಎತ್ತುದ್ರು... ಈ ಬಾರಿ ಅಶ್ವತ್ ಅವರ ಮುಂದಾಳ್ತನದಲ್ಲಿ ಹಲವಾರು ಕಲಾವಿದರು ಪ್ರತಿಭಟಿಸಿದ್ದಾರೆ. ಒಟ್ನಲ್ಲಿ ಈ ಕಾರ್ಯಕ್ರಮ ಕನ್ನಡತನಾನ ಸದಾ ಕಡೆಗಣುಸ್ತಾನೆ ಬಂದಿರೋದಂತು ಎಷ್ಟು ಸತ್ಯಾ ಅನ್ನಕ್ಕೆ ಬೆಂಗಳೂರು ಹಬ್ಬದ ಕಾರ್ಯಕ್ರಮಗಳ ಪಟ್ಟಿ ನೋಡುದ್ರೆ ಸಾಕು. ಇದರಲ್ಲಿ ಕನ್ನಡದ ಸಂಸ್ಕೃತಿ ಸಾರೋ, ಕನ್ನಡಿಗ ಕಲಾವಿದರು ನಡೆಸಿಕೊಡೊ ಕಾರ್ಯಕ್ರಮಗಳು, ಕನ್ನಡದ ಕಾರ್ಯಕ್ರಮಗಳು ಭಾಳಾ ಕಮ್ಮಿ ಅನ್ನೋದ್ನ ಕಂಡು ಇದ್ಯಾಕ್ರಿ ಹೀಗೆ ಅಂತೇನಾದ್ರೂ ಕೇಳುದ್ರೆ ನೀವು ಸಂಕುಚಿತ ಬುದ್ದಿಯೋರು, ಬೆಂಗಳೂರು ಉದ್ಧಾರ ಆಗಬೇಕೂ ಅಂದ್ರೆ ಇಂತಾ ಕಾರ್ಯಕ್ರಮಗಳೇ ಇರಬೇಕು... ಕನ್ನಡ ಕನ್ನಡಿಗ ಅನ್ನೋ ಸಂಕುಚಿತಯಿಂದ ಬೆಂಗಳೂರಿನ ಹೆಸರು ಕೆಡುತ್ತೆ, ಕನ್ನಡಿಗರ ಇಮೇಜ್ ಕೆಡುತ್ತೆ...ಈ ಹಬ್ಬ ವಿಶ್ವ ಭ್ರಾತ್ವತ್ವ ಸಾರೋದಕ್ಕೆ ಬೇಕಿರೋದು ಅಂತಾ ಬಾಯಿ ಮುಚ್ಚಿಸಕ್ಕೆ ಮುಂದಾಗ್ತಾರೆ.
ಸ್ವತಂತ್ರಕ್ಕೂ ಮಿತಿ ಇಲ್ವಾ?
ಇವ್ರು ಖಾಸಗಿಯವರು, ಯಾವ ಕಾರ್ಯಕ್ರಮಾ ಬೇಕಾದ್ರೂ ಮಾಡ್ಕೊಬಹುದು, ಇದು ಅವರ ಸಾಂವಿಧಾನಿಕ ಹಕ್ಕು ಅನ್ನೋರಿಗೇನೂ ಕೊರತೆ ಇಲ್ಲ. ಸ್ವತಂತ್ರ ಇದೆ ಅಂತಾ ನಾಡಿನ ಬಗ್ಗೆ ಇಡೀ ಪ್ರಪಂಚಕ್ಕೆ ತಪ್ಪು ತಪ್ಪು ಸಂದೇಶ ರವಾನಿಸೋ ಮನೆಹಾಳು ಕೆಲಸ ಮಾಡೋ ಅಷ್ಟು ಸ್ವಾತಂತ್ರ ಇರಬಹುದಾ ಗುರು? ಇವರ ಈ ಘನಂದಾರಿ ಕೆಲಸಕ್ಕೆ ಬೆಂಗಳೂರು ಹಬ್ಬಾ ಅನ್ನೋ ಹೆಸರನ್ನು ಇಡಬೇಡಿ ಅಂತ ಹೇಳಬೇಕಾಗಿದ್ದ ಸರ್ಕಾರಾನೆ ಜನರ ತೆರಿಗೆ ದುಡ್ಡನ್ನು ಬೊಕ್ಕಸದಿಂದ ಮೊಗೆಮೊಗೆದು ಕೊಡ್ತಿರೋದನ್ನು ಊರ ತಾಯಿ ಅಣ್ಣಮ್ಮ ಮೆಚ್ಚತಾಳಾ... ಗುರು?

ನಮ್ಮೂರಾಗಿನ ಕೆಲಸ ನಮಗಾ ಅಲ್ಲೇನು?

ಮಹಾರಾಷ್ಟ್ರದಾಗ ಮರಾಠಾ ಮಂದಿಗಾ ಕೆಲಸಾ ಕೊಡ್ಬೇಕನ್ನೋ ಹೊಸ ಕಾಯ್ದೆ ಮಾಡ್ತೀವಿ ಅಂತ ಅಲ್ಲಿನ ಸರ್ಕಾರ ಅನ್ನೂದ್ರಾಗೇ ಬಾಜೂಕಿನ ಒರಿಸ್ಸಾದ ಪಾಳಿ ಚಾಲೂ ಆಯ್ತು ನೋಡ್ರಲಾ ಗುರುಗೋಳಾ... ಒರಿಸ್ಸಾದಾಗ್ ಇನ್ನ ಮ್ಯಾಲೆ ಶುರು ಆಗು ಎಲ್ಲಾ ಹೊಸಾ ಉದ್ಯಮದಾಗೂ ಅಲ್ಲಿನ ಸ್ಥಳೀಯರಿಗ ಅಂದ್ರ ಒರಿಯಾ ಮಂದಿಗೆ ಕೆಲಸದಾಗ್ ಮೀಸಲಾತಿ ಕೊಡಬೇಕು ಅಂತ ಅಲ್ಲಿನ ಸರ್ಕಾರ ಆಜ್ಞೆ ಮಾಡೇತಂತ. ಖರೇನು, ತಡದ್ ಮಳಿ ಜಡದ್ ಬಂತು ಅನ್ನು ಹಂಗಾ ಅಗದಿ ಚಲೋ ಹೆಜ್ಜಿ ಇದು.

ಇದು ಎಂತಾ ವಿಪರ್ಯಾಸ!

ಖರೆ ಹೇಳ್ಬೇಕು ಅಂದ್ರ ಒರಿಸ್ಸಾದಾಗ್ ಶುರು ಆಗು ಉದ್ಯಮದಾಗ್ ಒರಿಯಾ ಮಂದಿಗ್ ಕೆಲಸಕ್ಕೆ ತಗೋಬೇಕು ಅಂತ ಅಲ್ಲಿನ ಸರ್ಕಾರ ಕಾನೂನು ಮಾಡು ಹಂಗ ಆಗಿರು ಪರಿಸ್ಥಿತಿ ಭಾಳ ಚಿಂತಿ ಮಾಡೂ ವಿಷ್ಯ ಅಲ್ಲೇನು? ನೀವಾ ಹೇಳ್ರಲಾ.. ಒಂದು ನಾಡಿನ ಮಂದಿ ಎಲ್ಲಾ ಕೂಡಿ ಒಂದು ಸರ್ಕಾರ ಅಂತ ಆರಸಿ ಕಳಸುದ್ ಎದಕ್ಕ? ಅಲ್ಲಿ ಮಂದಿಗೆ ನೌಕರಿ ಸಿಗಲಿ, ಆ ರಾಜ್ಯದ ಮಕ್ಕಳ ಜೀವನಾ ಚಲೋತಂಗ್ ನಡಿಲಿ, ಆ ರಾಜ್ಯ ಉದ್ಧಾರ ಆಗಲಿ ಅಂತಲ್ಲೇನು? ಆ ರಾಜ್ಯದಾಗ್ ಹುಟ್ಗೊಳ್ಳೋ ನೌಕರೀಗೊಳು ಅಲ್ಲಿ ಮಂದಿಗ ಸಿಕ್ರೆ ತಾನೇ ಅವರು ಉದ್ಧಾರ ಆಗುದು? ಆದ್ರಾ ಎಂತಾ ಕೆಟ್ಟ ಪರಿಸ್ಥಿತಿ ನೋಡ್ರಿ ನಮದು, ನಮ್ಮ ನಮ್ಮ ನೆಲದಾಗ್ ಹುಟ್ಕೊಳೋ ಕೆಲಸದ ಅವಕಾಶ ನಮ್ಮ ಮಂದಿಗಾ ಕೊಡಸ್ರಲಾ... ಅಂತ ದುಂಬಾಲು ಬೀಳು ಪರಿಸ್ಥಿತಿ ಭಾರತದಾಗಿನ ಭಾಳ ರಾಜ್ಯಗಳಾಗ ಐತ್ರೀಪಾ... ಕರ್ನಾಟಕಾನು ಅಂತಾ ಒಂದ್ ರಾಜ್ಯ ಅಂತ ಸ್ಪೇಶಲ್ ಆಗಿ ಏನ್ ಹೇಳಬೇಕಾಗಿಲ್ರಿ.

ಮುಂದಾರಾ ಏನಾಗಬೇಕೈತಿ?

ಈ ಪರಿಸ್ಥಿತಿ ಒತ್ತಟ್ಟಿಗಿರಲಿ, ಕರ್ನಾಟಕದಾಗ್ ಏನೇನ್ ಆಗೇತಿ ಹಿಂದೆ, ಮುಂದೇನ್ ಆಗಬೇಕು ಅಂತ ತುಸಾ ನೋಡುಣ್ ಬರ್ರೀ. ಇವತ್ತೇನ್ ಆಗಬೇಕಾಗೇತಿ? ಕರ್ನಾಟಕದಾಗಿನ ಕೆಲ್ಸದಾಗ್ ಕನ್ನಡಿಗರಿಗೆ ಆದ್ಯತೆ ಕೊಡಬೇಕು ಅನ್ನು ಸರೋಜಿನಿ ಮಹಿಷಿ ವರದಿ ಬಂದು ಬಾಳ್ ಅಂದ್ರ ಬಾಳ್ ವರ್ಷಾನೇ ಆತ್ರಿ. ಎಲ್ಲ ಕಡೀಗೂ ಇಂತಿಷ್ಟು ಕೆಲ್ಸಾ ಕನ್ನಡ ಮಂದಿಗ ಕೊಡಬೇಕು ಅಂತ ಆ ವರದಿನಾಗ್ ಹೇಳಿದ್ರು ರೀ. ಆ ವರದಿ, ಇವತ್ತಿಗಾಗಲೇ ಬಾಳ್ ಹಳೇದ್ ಆಗೇತಿ. ಇವತ್ತು ಅಗದಿ ಅರ್ಜಂಟ್ ಆಗಿ ಆಗಬೇಕಾಗಿರು ಕೆಲ್ಸ ಅಂದ್ರ ಒಂದು ಹೊಸ ಸಮೀಕ್ಷೆ ಮಾಡಿ, ಇವತ್ತಿನ ಜಾಗತೀಕರಣದ ವ್ಯವಸ್ಥೆಯಾಗ್ ಎಲ್ಲೆಲ್ಲಿ ಏನಾಗಾತೇತಿ, ಪ್ರಪಂಚದ ಬೆಳವಣಗಿ ಹೆಂಗ್ ಹೊಂಟೇತಿ, ಅಲ್ಲಿ ಕನ್ನಡಿಗ ಸ್ಪರ್ಧಾ ಮಾಡಬೇಕು ಅಂದ್ರ ಏನೇನ್ ಆಗಬೇಕು, ಅವನಿಗೆ ಕೆಲಸ ಸಿಗಬೇಕು ಅಂದ್ರ ಕಾನೂನು ಸೇರಿದಂತೆ ಯಾವ ಯಾವ ರೀತಿ ವ್ಯವಸ್ಥೆಲೀ ಬದಲಾವಣೆ ತರಬೇಕಾಗೇತಿ, ಅದರಾಗ ನಮ್ಮ ಸರ್ಕಾರ, ಉದ್ಯಮಿಗಳು, ಶಿಕ್ಷಣ ತಜ್ಞರ ಪಾತ್ರ ಏನು ಅನ್ನು ಬಗ್ಗ ಚರ್ಚೆ ಆಗಬೇಕು. ಹೊಸ ಹೊಸ ಉದ್ಯಮಗಳು ಬಂದಾಗ್ ಅವರಿಗೆ ಎಲ್ಲ ಅನುಕೂಲಾ ಮಾಡುಕಿನ್ನ ಮೊದಲು ನಮ್ಮ ಮಂದಿಗ ಕೆಲ್ಸ ಸಿಗತೇತಿ ಅನ್ನು ಖಾತ್ರಿ ತಗೋಬೇಕು. ಇದೆಲ್ಲ ವಿಷ್ಯದ ಬಗ್ಗೆ ತಜ್ಞರ ನೇಮಕಾ ಮಾಡಿ ಒಂದು ಹೊಸ ವರದಿ ಮಾಡಿ, ಅದರ ಜಾರಿ ಬಗ್ಗೆ ಸರ್ಕಾರ ತಲಿ ಕೆಡಸ್ಕೊಬೇಕಾಗೆತಿ. ಇಲ್ಲಾ ಅಂದ್ರ ನಾವು ಹಿಂಗೆ ಬಾಯ್ ಬಡಕೊಂತ್ ಕೂಡುದ್ ಆಗತೇತಿ. ಏನಂತೀರ್ರೀ ಗುರುಗಳಾ?

ಸರಿಯಾದ ವ್ಯವಸ್ಥೆಯೊಂದೇ ಕಾಪಾಡಬಲ್ಲದು!

ಮುಂಬೈನ ತಾಜ್ ಹೋಟೆಲ್, ಓಬೆರಾಯ್ ಹೋಟೆಲ್, ನಾರಿಮನ್ ಹೌಸ್ ಮುಂತಾದ ಕಡೆ ರಕ್ಕಸರು ನಡೆಸಿದ ದಾಳಿ ಇಡೀ ಭಾರತದ ಜನರಲ್ಲಿ ತಲ್ಲಣ ಹುಟ್ಟುಹಾಕಿದೆ. ಈ ಘಟನೇನ ಬೇರಾಗಿಸಿಕೊಂಡು ಅನೇಕ ವಿಚಾರಲಹರಿಗಳು ಹರಿದಾಡ್ತಾ ಇದ್ದು ಜನರ ಮನಸ್ಸು ದುರ್ಬಲವಾಗಿದ್ದಾಗ ಹಲವು ರೀತಿಯಲ್ಲಿ ಗೊಂದಲ ಹುಟ್ಟುಹಾಕ್ತಿರೋದು ಕೂಡಾ ನಿಜಾ ಗುರು!

ರಾಷ್ಟೀಯ ಏಕತೆಯ ತಪ್ಪು ಪ್ರಚಾರ!

ಸಾವಿನ ಮನೆಯಲ್ಲಿ ಗಳ ಹಿಡಿಯೋ ಪ್ರವೃತ್ತಿಗೆ ಕೆಲ "ರಾಷ್ಟ್ರೀಯ" ಮಾಧ್ಯಮಗಳೂ ಇಳಿದು ಇವತ್ತು ಭಯೋತ್ಪಾದನೆ ತಡೆಯಲು ಭಾರತೀಯರೆಲ್ಲಾ ಒಂದಾಗಬೇಕು ಅನ್ನೋ ಕರೆ ಕೊಡೋ ನೆಪದಲ್ಲಿ ಒಕ್ಕೂಟ ಧರ್ಮದ ಸಿದ್ಧಾಂತವನ್ನೇ ಟೀಕಿಸುವ ಕೀಳಾಟಕ್ಕೆ ಇಳಿದಿವೆ. ಇವತ್ತು ಮುಂಬೈಯಲ್ಲಿ ಹೋರಾಡಿದ ಸೈನಿಕರಲ್ಲಿ ಮರಾಠಿಗಳೇ ಇರಲಿಲ್ಲವೆಂತಲೂ, ಹೊರನಾಡಿಗರಿಂದಲೇ ಮುಂಬೈ ಉಳಿಯಿತೆಂತಲೂ ಪ್ರಚಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರವೂ ಸೇರಿದಂತೆ ಎಲ್ಲ ರಾಜ್ಯಗಳ ರಕ್ಷಣಾ ಹೊಣೆಯನ್ನು ಕೇಂದ್ರಸರ್ಕಾರ ಹೊರುವುದಕ್ಕೂ ಮಹಾರಾಷ್ಟ್ರಕ್ಕೆ ಅನಿಯಂತ್ರಿತ ವಲಸೆ ಬೇಡ ಅನ್ನುವುದಕ್ಕೂ ಏನು ಸಂಬಂಧವೋ ತಿಳಿಯದು. ರಾಜ್ ಠಾಕ್ರೆ ಮರಾಠಿಗರ ಸಮಸ್ಯೆಗಳ ಬಗ್ಗೆ ಮಾತಾಡೋದೆ ಕ್ಷುಲ್ಲಕ ಅನ್ನೋ ಧಾಟೀಲಿ ಇವರು ಮಾತಾಡ್ತಿದಾರೆ. ವಾಸ್ತವವೆಂದರೆ ರಾಜ್ಯಗಳ ಸ್ವಾಯತ್ತತೆ ರಾಷ್ಟ್ರೀಯ ಏಕತೆಗೆ ಪೂರಕವೇ ಹೊರತು ಮಾರಕವಲ್ಲ ಅಂತ ಅರಿಯಬೇಕಾಗಿದೆ ಗುರು!

ಪೊಳ್ಳು ನಾಡಪ್ರೇಮದ ಹುಚ್ಚೆಬ್ಬಿಸೋರು!

ಜನರ ಮಿಡಿವ ಮನಸ್ಸನ್ನೇ ಬಂಡವಾಳವಾಗಿಸಿಕೊಳ್ಳೋ ಕೆಲ ಮಾಧ್ಯಮಗಳೋರು ಜನರಿಗೆ ನೀವೆಲ್ಲಾ ಕ್ಯಾಂಡಲ್ ಹಚ್ಚಿ, ಸಂತಾಪ ಸೂಚಿಸೋಕ್ಕೆ ಚಿಕ್ಕೋಲೆಗಳನ್ನು (SMS) ಕಳಿಸಿ ಅಂತೆಲ್ಲಾ ಮರುಳು ಮಾಡಿ ವ್ಯಾಪಾರಕ್ಕಿಳಿದಿದ್ದಾರೆ. ನಾವು ನಿಜವಾಗ್ಲೂ ಅರಿಯ ಬೇಕಿರೋದು ಏನಪ್ಪಾ ಅಂದ್ರೆ ಇಷ್ಟೇಯೇನು ದೇಶಪ್ರೇಮ ಅಂದ್ರೆ ? ಕ್ರಿಕೆಟ್ಟಲ್ಲಿ ಗೆದ್ದಾಗ ಮುಖದ ಮೇಲೆ ಬಾವುಟ ಬರ್ಕೊಳ್ಳೋದು, ನಾಡಹಬ್ಬ ಬಂತಂದ್ರೆ ನಮ್ಮ ನಮ್ಮ ಗಾಡಿಗಳಿಗೆ ಬಾವುಟ ಕಟ್ಕೊಂಡು ಊರತುಂಬಾ ಅಲೆಯೋದು ಇಷ್ಟಕ್ಕೇ ಸೀಮಿತಾನಾ ನಮ್ಮ ನಾಡಪ್ರೇಮ? ಅನ್ನೋ ಪ್ರಶ್ನೆ ಕೇಳ್ಕೊಬೇಕಿದೆ. ಇದನ್ನೆಲ್ಲಾ ಮಾಡಲೇಬಾರದು ಅನ್ನುತ್ತಿಲ್ಲಾ, ಆದ್ರೆ ನಾಗರೀಕರಾಗಿ ನಮ್ಮ ನಾಡಪ್ರೇಮ ಅನ್ನೋದು ಹೀಗೆ ಒಂದೊಂದು ದಿನಕ್ಕೆ, ಒಂದೆರಡು ವಾರಗಳಿಗೆ ಮಾತ್ರಾ ಸೀಮಿತವಾಗಿದ್ರೆ ನಾಡು ಉದ್ಧಾರ ಆಗುತ್ತಾ ಅನ್ನೋದನ್ನು ಯೋಚಿಸಬೇಕಾಗಿದೆ. ದಿನಾ ಬೀದಿಯಲ್ಲಿ ಹೋಗುವಾಗ ಸಂಚಾರಿ ನಿಯಮವನ್ನು ಪಾಲಿಸಿ ಟ್ರಾಫಿಕ್ ದೀಪಗಳಿಗೆ ಗೌರವ ಕೊಡ್ತೀವಿ ಅನ್ನೋದ್ರಿಂದ ಹಿಡಿದು ನಮ್ಮ ಕೆಲಸ ಆಗಬೇಕು ಅಂತ ಲಂಚ ಕೊಡದೆ, ಲಂಚ ತೊಗೊಳ್ದೆ ನಮ್ಮ ಕೆಲಸ ಮಾಡ್ತೀವಿ ಅನ್ನೋ ತನಕ ಈ ನಾಡಪ್ರೇಮ ನಮ್ಮಲ್ಲಿ ಜಾಗೃತವಾಗಿರಬೇಕಲ್ವಾ ಗುರು? ಈ ಜಾಗೃತಿ ಒಂದು ದಿನದ್ದಲ್ಲ... ಪ್ರತಿದಿನಾ ಇರಬೇಕಾದ್ದು.

ಸರಿಯಾದ ವ್ಯವಸ್ಥೆ ಮಾತ್ರಾ ನಮ್ಮನ್ನು ಕಾಪಾಡಬಲ್ಲದು!

ಹೊರನಾಡಿನಿಂದ ಈ ಭಯೋತ್ಪಾದಕ ಕೃತ್ಯ ನಡೆದಿದ್ರೆ ಅದನ್ನು ಎದುರಿಸಲು ಬೇಕಿರೋದು ಗಟ್ಟಿಯಾದ ವಿದೇಶಾಂಗ ನೀತಿ. ಎಲ್ಲಿಯವರೆಗೆ ಸಹಿಸ್ತೀವಿ? ಎಂತಹ ಕಠಿಣ ಕ್ರಮಕ್ಕೆ ಮುಂದಾಗ್ತೀವಿ? ಹೇಗೆ ಜಾಗತಿಕ ಸಮುದಾಯದ ಸಹಕಾರ ತೊಗೋತೀವಿ? ಅನ್ನೋದೆಲ್ಲಾ ಸಹಜವಾಗೇ ಇಂತಹ ವಿದೇಶಾಂಗ ನೀತಿಯ ಅಂಗವಾಗಿರುತ್ತೆ. ಭಯೋತ್ಪಾದಕರು ನಾಡಿನ ಒಳಗಿನವರಾದ್ರೆ ಅಂತಹವರ ಹುಟ್ಟಡಗಿಸೋದು ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಅಂತಹವರ ಹಿಂದೆ ಎಂತಹ ಬೆಂಬಲ ನೀಡುವ ಶಕ್ತಿಯೇ ಇದರೂ ಅದನ್ನು ಬಗ್ಗು ಬಡಿಯಬೇಕಾಗಿದೆ. ಇಂತಹ ದಿಟ್ಟಕ್ರಮ ಕೈಗೊಳ್ಳಬೇಕು ಅಂದ್ರೆ ನಮ್ಮ ನ್ಯಾಯಾಲಯಗಳು ಬೇಗನೆ ಕಠಿಣವಾದ ತೀರ್ಪು ನೀಡಬೇಕಾದ ಅಗತ್ಯವಿದೆ. ನಮ್ಮ ಪೊಲೀಸ್ ಜಾಲವನ್ನು ಬಲಗೊಳಿಸಬೇಕಿದೆ. ನಮ್ಮ ನಾಗರೀಕರ ಚಲನವಲನಗಳ ಬಗ್ಗೆ ಕಣ್ಣಿಡುವಂತಹ ಗುಪ್ತಚರ ಇಲಾಖೆ ಬಲಗೊಳ್ಳಬೇಕಾಗಿದೆ. ಭ್ರಷ್ಟತೆಯ ಗೆದ್ದಲು ಹತ್ತಿರೋ ವ್ಯವಸ್ಥೆ ನಮ್ಮದಾಗಿದ್ದರೆ ಈ ಸವಾಲನ್ನು ಎದುರಿಸಲು ಸಾಧ್ಯವೇ ಇಲ್ಲ. ರಾಜಕೀಯ ಕೈವಾಡವಿಲ್ಲದ, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿರುವ ಪೊಲೀಸ್ ವ್ಯವಸ್ಥೆ - ಅತ್ಯುತ್ತಮ ಆಧುನಿಕ ಶಸ್ತ್ರಾಸ್ತ್ರಗಳು, ವಿಶ್ವದರ್ಜೆಯ ತರಬೇತಿ ಪಡೆದ ಸಿಬ್ಬಂದಿ, ಅತ್ಯಂತ ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಬಲ್ಲ ಗುಪ್ತಚರ ದಳ, ಇದಕ್ಕೆಲ್ಲಾ ಕಲಶವಿಟ್ಟಂತೆ ಸಕಾಲದಲ್ಲಿ ಸೂಕ್ತವಾದ ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ದಕ್ಷ ನಾಯಕತ್ವ - ಇಂತಹ ವ್ಯವಸ್ಥೆ ಕಟ್ಟಿದಾಗ "ನಿಮ್ಮ ಪಕ್ಕದಲ್ಲಿ ಬಾಂಬ್ ಇರಬಹುದು, ಅನುಮಾನ ಬಂದರೆ ಪೊಲೀಸರಿಗೆ ತಿಳಿಸಿ" ಅನ್ನೋ ಜಾಹಿರಾತು ಹಾಕೋ ಪರಿಸ್ಥಿತೀನೆ ಬರಲ್ಲ. ಅದರ ಬದಲು ಹಾಗೆ ನಮ್ಮ ಪಕ್ಕದಲ್ಲಿ ಬಾಂಬ್ ಇಡುವುದನ್ನೇ ಅಸಾಧ್ಯವಾಗಿಸಲಾಗುತ್ತದೆ. ಇಂತಹ ವ್ಯವಸ್ಥೆಯ ಬಗ್ಗೆ, ಅದರಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕಾಗಿದೆ.

ಶಂಕರಭಟ್ಟರ ಹೊಸ ಹೊತ್ತಿಗೆ ಮಾರುಕಟ್ಟೆಗೆ!

ಕನ್ನಡ ನುಡಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭಾಷಾ ವಿಜ್ಞಾನಿ ಶ್ರೀ ಶಂಕರ ಭಟ್ ಅವರ, ನಾಡಿನ ಜನರಲ್ಲಿ ಬಹಳ ಕುತೂಹಲ ಮೂಡಿಸಿದ್ದ ಹೊಸ ಹೊತ್ತಿಗೆ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಇದೀಗ ಮಾರುಕಟ್ಟೆಗೆ ಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಈ ಸಂದರ್ಭದಲ್ಲೇ ಭಟ್ಟರ ಹೊಸ ಪುಸ್ತಕ ಬಿಡುಗಡೆಯಾಗಿರುವುದು ನಮ್ಮ ನುಡಿ ಎತ್ತ ಕಡೆಗೆ ಸಾಗಬೇಕೆಂಬ ದಾರಿತೋರುಕವಾಗಿದೆ.
ಕನ್ನಡದ್ದೇ ಹೊಸಪದಗಳನ್ನು ಹುಟ್ಟಿಸುವ ಬಗೆ!
ಈ ಹೊತ್ತಿಗೆ ಭಟ್ಟರೇ ಹೇಳುವಂತೆ ಇಂಗ್ಲಿಷ್ ಭಾಷೆಯ ಪದಗಳನ್ನು ಬಲ್ಲ ಕನ್ನಡಿಗರು, ಅದಕ್ಕೆ ಸಮಾನವಾದ ಕನ್ನಡದ್ದೇ ಆದ ಪದಗಳನ್ನು ಹುಡುಕಲು ಸಹಕಾರಿಯಾಗಿದೆ. ಇದರ ಮೊದಲಲ್ಲೇ ಕನ್ನಡದ ಪದಗಳನ್ನು ಕಟ್ಟುವ ಬಗೆಯನ್ನು ವಿವರಿಸಲಾಗಿದೆ. ಕನ್ನಡದ ನಾಮಪದ (ಹೆಸರುಪದ), ಕ್ರಿಯಾಪದ(ಎಸಗುಪದ), ಗುಣವಾಚಕ (ಪರಿಚೆಪದ), ಪ್ರತ್ಯಯ (ಒಟ್ಟು)ಗಳನ್ನು ಬಳಸಲು ಕನ್ನಡದಲ್ಲೇ ಇರುವ ರೀತಿ ನೀತಿಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ. ಇಂದಿನ ದಿನ ಕನ್ನಡದ ಅನೇಕ ಪಂಡಿತರೂ, ಬರಹಗಾರರೂ ಸಾಕಷ್ಟು ಪದಗಳನ್ನು ಹುಟ್ಟು ಹಾಕಿದ್ದು ಅವು ಕನ್ನಡದ್ದೂ ಆಗಿಲ್ಲದೆ, ಸಂಸ್ಕೃತದ್ದೂ ಆಗಿಲ್ಲದೆ ತ್ರಿಶಂಕು ಪದಗಳಾಗಿವೆ. ಕನ್ನಡದ ಬರಹಗಳೆಲ್ಲಾ ಇಂತಹ ತ್ರಿಶಂಕು ಪದಗಳಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ಭಟ್ಟರು ಈ ಪದಕೋಶದ ಬಗ್ಗೆ ಬರೆಯುತ್ತಾ ಹೀಗೆನ್ನುತ್ತಾರೆ :

ಕನ್ನಡದವೆಂದು ಹೇಳಿಕೊಳ್ಳುತ್ತಿರುವ ಪಾರಿಬಾಶಿಕ ಪದಕೋಶವೊಂದನ್ನು ಬಿಡಿಸಿ ನೋಡಿದೆವಾದರೆ ಅದರಲ್ಲಿ ನೂರಕ್ಕೆ ಎಂಬತ್ತರಶ್ಟು (ಇಲ್ಲವೇ ಅದಕ್ಕಿಂತಲೂ ಹೆಚ್ಚು) ತ್ರಿಶಂಕು ಪದಗಳಿರುವುದನ್ನು ಕಾಣಬಹುದು. ಅವುಗಳಿಂದಾಗಿ ಇವತ್ತು ಕನ್ನಡದಲ್ಲಿ ಬರೆದ ವಿಜ್ನಾನದ ಬರಹಗಳನ್ನು ಅರ್‍ತ ಮಾಡಿಕೊಳ್ಳುವುದು ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವೆಂದೆನಿಸುತ್ತದೆ. ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ಈ ರೀತಿ ಸಂಸ್ಕ್ರುತದ ಮೊರೆಹೊಕ್ಕು ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ. ಸಂಸ್ಕ್ರುತ ಪದಗಳಿಗಿರುವ ಮರ್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ.
ಇವೆರಡೂ ತಪ್ಪು ಅನಿಸಿಕೆಗಳು. ಆದರೆ ಇವುಗಳಿಂದಾಗಿ ಇವತ್ತು ಕನ್ನಡದ ಮೇಲೆ ಸಂಸ್ಕ್ರುತದ ಹೊರೆ ಹೆಚ್ಚುತ್ತಿದ್ದು, ಕನ್ನಡ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ್‍ತವಾಗದ ಕಗ್ಗಂಟುಗಳಾಗುತ್ತಿವೆ. ಹೆಚ್ಚು ಹೆಚ್ಚು ತ್ರಿಶಂಕು ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಬರೇ ’ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ತಮ್ಮ ಮೂಲಗುರಿಯನ್ನು ತಲುಪುವುದೇ ಇಲ್ಲ.
ಒಂದು ಹೊಸ ಮನೆಗೆ, ಹೊಸ ಅಂಗಡಿಗೆ ಇಲ್ಲವೇ ಹೊಸ ಉತ್ಪಾದನೆಗೆ ಹೆಸರು ಕೊಡಬೇಕಾದಾಗ ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ ಎಂಬುದನ್ನು ಗಮನಿಸಿದೆವಾದರೆ ನಿಜಕ್ಕೂ ಕನ್ನಡಕ್ಕೆ ಎಂತಹ ಹೀನಾಯ ಸ್ತಿತಿ ಬಂದೊದಗಿದೆಯೆಂಬುದನ್ನು ಊಹಿಸಬಹುದು. ನಮಗೆ ಬೇಕಾಗಿಬರುವ ಎಂತಹ ಪದಗಳನ್ನು ಬೇಕಿದ್ದರೂ ಸಂಸ್ಕ್ರುತದ ಸಹಾಯವಿಲ್ಲದೆ ಕನ್ನಡದಲ್ಲೇನೆ ಉಂಟುಮಾಡಬಲ್ಲೆವು. ಅಂತಹ ಕಸುವು ಕನ್ನಡಕ್ಕಿದೆ. ಇದನ್ನು ತೋರಿಸಿಕೊಡುವುದಕ್ಕಾಗಿಯೇ ನಾನು ಈ ಪದಕೋಶವನ್ನು ತಯಾರಿಸಲು ಹೊರಟಿದ್ದೇನೆ.
ಶಂಕರ ಭಟ್ ಅವರ ಈ ಹೊಸ ಹೊತ್ತಿಗೆ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಇದು ಕನ್ನಡ ನುಡಿ ಸಾಗಬೇಕಾದ ದಾರಿಯನ್ನು ನಿಚ್ಚಳವಾಗಿ ತೋರುತ್ತಿದೆ. ಇಂತಹ ಹೊತ್ತಿಗೆ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಲಿ ಅನ್ನೋದು ನಮ್ಮಾಸೆ. ಬಾಶಾ ಪ್ರಕಾಶನದೋರು ಹೊರತಂದಿರೋ ಈ ಹೊತ್ತಿಗೆ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ದೊರೆಯುತ್ತಿದೆ ಗುರು!
Related Posts with Thumbnails