ಇಗೋ!! ಕನ್ನಡಿಗರ ಏಳಿಗೆಗೆ ಪೂರಕವಾದೊಂದು ಮಳಿಗೆ!

ಯಂತ್ರ ತಯಾರಿಕಾ ಕಾರ್ಖಾನೆಗಳ ಒಕ್ಕೂಟದವರು ಸೇರಿ ಹುಟ್ಟು ಹಾಕಿರೋ, ನಮ್ಮ ಕನ್ನಡ ನಾಡಿಗೆ ಹೆಮ್ಮೆ ತಂದು ಕೊಟ್ಟಿರೋ ಒಂದು ಅದ್ಭುತವಾದ ದೊಡ್ಡದಾದ ಪ್ರದರ್ಶನ ಮಳಿಗೆಯೊಂದು ಬೆಂಗಳೂರಿನಲ್ಲಿದೆ. ತುಮಕೂರಿಗೆ ಹೋಗೋ ದಾರೀಲಿ ಪೀಣ್ಯ ಕೈಗಾರಿಕಾ ವಲಯಕ್ಕೆ ಹತ್ತಿರದಲ್ಲಿ ಇರೋ ದಾಸನಪುರದ ಬಳಿ ಬಲಗಡೆ ಇರೋ "ಬೆಂಗಳೂರು ಅಂತರ ರಾಷ್ಟ್ರೀಯ ಪ್ರದರ್ಶನ ಸಂಕೀರ್ಣ" ಇಡೀ ಬೆಂಗಳೂರಿನ ಕೈಗಾರಿಕೆಗಳಿಗೆ ಅವಕಾಶಗಳ ಹೆಬ್ಬಾಗಿಲನ್ನು ತೆರೆದಿರೋದು ಸುಳ್ಳಲ್ಲ.

ಅತ್ಯುತ್ತಮವಾದ ಸೌಕರ್ಯಗಳನ್ನು ಹೊಂದಿರೋ ಈ ಸಂಕೀರ್ಣ ಸುಮಾರು 40 ಎಕರೆಯಷ್ಟು ದೊಡ್ಡದಾಗಿದೆ. ನೈಸ್ ರಸ್ತೆಯ ಬದಿಗೇ ಇರೋ ಈ ಸಂಕೀರ್ಣದಲ್ಲಿ ವಿಶ್ವದರ್ಜೆಯ ಪ್ರದರ್ಶನ ಮಳಿಗೆಗಳು, ವಿಚಾರ ಸಂಕಿರಣಗಳು ಮತ್ತು ತರಬೇತಿಗಾಗಿ ವಿಶಾಲವಾದ ಸಭಾಂಗಣಗಳಿದ್ದು ವಾಹನಗಳ ನಿಲುಗಡೆ ಸೌಕರ್ಯ, ಅತಿ ದೊಡ್ಡದಾದ ಆಹಾರ ಮಳಿಗೆಗಳು ಇಲ್ಲಿನ ಆಕರ್ಷಣೆಗಳಾಗಿವೆ.

ಕನ್ನಡಿಗರಿಗೆ ಕೆಲಸ!

ಇಲ್ಲಿ ಸದಾಕಾಲ ಅನೇಕ ರೀತಿಯ ಪ್ರದರ್ಶನಗಳು ನಡೆಯುತ್ತಲಿರುತ್ತವೆ. ಇತ್ತೀಚೆಗೆ ಇಲ್ಲಿ "ಬೆಂಗಳೂರು ಬಯೊ" ಪ್ರದರ್ಶನ ಏರ್ಪಾಡಾಗಿತ್ತು. ಆಗ ಅಲ್ಲಿಗೆ ಭೇಟಿ ನೀಡಿದ್ದ ಏನ್ಗುರು ತಂಡಕ್ಕೆ ಕನ್ನಡದ ಬಾವುಟ ಇದಿರುಗೊಂಡಿತು. ಅಲ್ಲಿನ ಭದ್ರತಾ ಸಿಬ್ಬಂದಿ, ಕ್ಯಾಂಟೀನ್, ವಾಹನ ನಿಲುಗಡೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಗಳೆಲ್ಲಾ ಹೆಚ್ಚಾಗಿ ಕನ್ನಡಿಗರು, ಅದರಲ್ಲೂ ಸ್ಥಳೀಯರೇ ಇರುವುದು ಕಂಡಿತು. ನಿಜಕ್ಕೂ ಇದು ಅಭಿನಂದನೆಗೆ ಅತ್ಯಂತ ಅರ್ಹವಾದ ವಿಷಯವಾಗಿದೆ.

ಸಾವಿರಾರು ಕುಟುಂಬಗಳಿಗೆ ಪರೋಕ್ಷವಾಗಿ ಕೆಲಸ!

ಆ ಸಂಕೀರ್ಣದ ಹೊರಗಡೆ ನೂರಾರು ಆಟೊರಿಕ್ಷಾಗಳು, ಟ್ಯಾಕ್ಸಿಗಳು ಇದ್ದುದನ್ನು ನೋಡಿ, ಈ ಪ್ರದರ್ಶನ ಸಂಕೀರ್ಣದಿಂದಾದ ಪೂರಕ ಉದ್ಯಮಗಳನ್ನು ಕಂಡಾಗ ಅದೆಷ್ಟು ಜನರ ಮನೆಯ ಒಲೆ ಉರಿಯಲು ಇದು ಸಹಾಯ ಮಾಡಿದೆ ಎಂದು ಸಂತಸವಾಯಿತು.

ಇಂಥಾ ಪ್ರದರ್ಶನ ಮಳಿಗೆಗಳು ಜಗತ್ತಿನ ನಾನಾ ಉತ್ಪಾದಕರನ್ನು ನಮ್ಮೂರಿಗೆ ಸೆಳೆಯೋದು ಖಂಡಿತಾ. ಅದ್ರಿಂದ ತುಂಬಾ ಉದ್ಯೋಗಗಳು ಹುಟ್ಕೊಳ್ಳೋದೂ ನಿಜಾ ಗುರು. ನಮ್ಮ ನಾಡು ಉದ್ಧಾರ ಆಗಬೇಕು ಅಂದ್ರೆ ಇಂಥಾ ವಿಶ್ವದರ್ಜೆಯ ಪ್ರದರ್ಶನ ಮಳಿಗೆಗಳು ನಮಗೆ ಬೇಕು. ಇಲ್ಲಿ ಪ್ರಪಂಚದ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರದರ್ಶನಗಳು ನಡೀತಾ ಇರಬೇಕು, ಆ ಮೂಲಕ ಕನ್ನಡಿಗರ ಇಡೀ ಏಳಿಗೆಯ ಹೆಬ್ಬಾಗಿಲು ತೆಕ್ಕೋಬೇಕು. ಈ ಪ್ರದರ್ಶನ ಕೇಂದ್ರಗಳ ಮೂಲಕ ನಮ್ಮ ನಾಡಿಗೆ ಉದ್ದಿಮೆಗಳು, ತಂತ್ರಜ್ಞಾನಗಳು, ಮಾರುಕಟ್ಟೆಗಳು ಒದಗಿ ಬರಬೇಕು. ಹ್ಞಾಂ, ಜೊತೆಗೆ ಈ ಜಾಗಗಳಲ್ಲಿ ಕನ್ನಡಕ್ಕೆ ಮೊದಲ ಪೂಜೆ ಸಲ್ಲುತ್ತಲೇ ಇರಬೇಕು. ಏನ್ ಗುರು?

1 ಅನಿಸಿಕೆ:

anisikegalu ಅಂತಾರೆ...

Only when there is a big exhibition the place at Penya will be busy. It will happen only few days in a year

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails