’ಏರ್ ಟೆಲ್’ ಕರೆ ಮಾಡುತ್ತಿದೆ!

ಭಾರತಿ ಟೆಲ್ ಒಡೆತನದ ಏರ್ ಟೆಲ್ ಸಂಸ್ಥೆಯೋರು ಕನ್ನಡದಲ್ಲಿ ಮೊಬೈಲ್ ಫೋನುಗಳನ್ನು ನೋಕಿಯಾ ಸಹಯೋಗದೊಂದಿಗೆ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬಿಡೋ ಯೋಜನೆ ತರ್ತೀವಿ ಅಂತ ಘೋಷಿಸಿದ್ದಾರೆ ಗುರು! ಏರ್ ಟೆಲ್ ಸಂಸ್ಥೆ ಇದೀಗ ನೋಕಿಯ ಹಾಗೂ ಇಫ್ಕೋ ಕಂಪನಿಗಳ ಜೊತೆ ಸೇರಿ ಕರ್ನಾಟಕದ ಹಳ್ಳಿಗಾಡಿನ ಜನರನ್ನು ಸೆಳೆಯಲು ಕನ್ನಡ ಹ್ಯಾಂಡ್ ಸೆಟ್ ಗಳನ್ನೂ ಮಾರುಕಟ್ಟೆಗೆ ತರಲಿದೆ ಅನ್ನುವ ಸಕತ್ ಸುದ್ದಿ ಬಂದಿದೆ.

ಗ್ರಾಮೀಣ ಮೊಬೈಲ್ ಕ್ರಾಂತಿ

ಗ್ರಾಮೀಣ ಮೊಬೈಲ್ ಕ್ರಾಂತಿ ಅನ್ನೋ ಈ ಯೋಜನೆ ಬರೀ ಮೊಬೈಲ್ ಮಾರಾಟದ ಯೋಜನೆ ಅಷ್ಟೆ ಅಲ್ಲ ಗುರು, ಇದರಲ್ಲಿ ಹಳ್ಳಿಗಳಲ್ಲಿನ ಹೆಚ್ಚು ಜನ ಅವಲಂಬಿಸಿರೋ ವ್ಯವಸಾಯಕ್ಕೆ ಅನುಕೂಲ ಮಾಡಿ ಕೊಡುವ ಹಲವಾರು ಅಂಶಗಳನ್ನೂ ಸೇರಿಸಿದ್ದಾರೆ. ಪ್ರಮುಖವಾಗಿ ಪ್ರತಿ ದಿನವೂ ಇಫ್ಕೋ ಮೂಲಕ ಅಂದಿನ ಹವಾಮಾನ, ಬೇರೆ ಬೇರೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಹಾಗೂ ಇನ್ನಿತರ ಕೃಷಿ ಸಂಬಂಧಿ ಮಾಹಿತಿಯನ್ನು ರೈತರಿಗೆ ಕನ್ನಡದಲ್ಲಿ ರವಾನಿಸ್ತೀವಿ ಅಂತ ಹೇಳ್ತಿದಾರೆ.
ಮಾರುಕಟ್ಟೆ ಸಮೀಕ್ಷೆ
ಇವರು ಇಂಥಾ ಯೋಜನೆ ಮಾಡಕ್ಕೆ ಮೊದಲು ಬೇಕಾದಷ್ಟು ಸಮೀಕ್ಷೆ ಮಾಡಿ ಕಂಡುಕೊಂಡಿದ್ದೇನಪ್ಪಾ ಅಂದ್ರೆ ಇಡೀ ಮೊಬೈಲ್ ಬಳಕೆದಾರರು ಅಂದ್ರೆ ಇದುವರೆಗೂ ಅವರಿಗೆ ಇಂಗ್ಲಿಷ್ ಓದಕ್ಕಾದ್ರೂ ಗೊತ್ತಿರಬೇಕಾದ ಅಗತ್ಯ ಇತ್ತು. ಇದು ನಿಜವಾಗ್ಲೂ ನಾಡಿನ ಎಲ್ಲ ಜನ್ರನ್ನು ಮುಟ್ಟಕ್ಕೆ ಇರೋ ದೊಡ್ಡ ಆತಂಕ. ಹಾಗಾಗಿ ಜನರ ಮತ್ತು ಮೊಬೈಲ್ ನಡುವೆ ಇರೋ ಈ "ಇಂಗ್ಲಿಷ್ ಗೊತ್ತಿರಬೇಕು" ಅನ್ನೋ ಕೊರತೆನ ಇಲ್ಲವಾಗಿಸಿಬಿಟ್ರೆ ಇನ್ನೂ ಹೆಚ್ಚು ಹೆಚ್ಚು ಮಾರುಕಟ್ಟೆ ಗಳಿಸ್ಕೋಬಹುದು ಅಂತ ಅರ್ಥ ಮಾಡ್ಕೊಂಡ್ರು. ಅದರ ಪರಿಣಾಮವಾಗಿಯೇ ಇವತ್ತು ಜನ ಸಾಮಾನ್ಯರ ಭಾಷೇಲಿ ತಮ್ಮ ಉತ್ಪನ್ನಾನ ಬಿಡುಗಡೆ ಮೂಲಕ ಹೆಚ್ಚು ಹೆಚ್ಚು ಜನರನ್ನು ಸೆಳೆಯೋ ಯೋಜನೆ ಮಾಡಿದಾರೆ.
ಗ್ರಾಹಕ ಸೇವೆ ಮತ್ತು ಭಾಷಾ ಆಯಾಮ
ಗ್ರಾಹಕ ಸೇವೆಯಲ್ಲಿ, ಇಡೀ ಪ್ರಪಂಚವೇ ತಿಪ್ಪರಲಾಗ ಹಾಕುದ್ರೂ ಬದಲಾಯಿಸಲು ಆಗದ ಒಂದು ಪ್ರಮುಖ ಆಯಾಮ ಭಾಷೆಗಿದೆ. ಯಾಕಂದ್ರೆ ಭಾಷೆ ಬರೀ ಸಂವಹನ ಮಾಧ್ಯಮ ಅಲ್ಲ. ಅದು ಪ್ರತಿ ಸಮಾಜದ ಸಹಕಾರದ ಮಾಧ್ಯಮವಾಗಿದೆ. ಹಾಗಾಗೇ ಯಾವುದೇ ಸಂಸ್ಥೆಗೆ ಆಯಾ ನಾಡಿನ ಭಾಷೆಯಲ್ಲಿ ಸೇವೆ ಕೊಡೋದು ಮಾರುಕಟ್ಟೆ ಗೆಲ್ಲೋ ತಂತ್ರಾನೂ ಹೌದು ಮತ್ತು ಗ್ರಾಹಕರ ಹಕ್ಕೂ ಹೌದು. ಅಲ್ವಾ ಗುರು?

11 ಅನಿಸಿಕೆಗಳು:

Anonymous ಅಂತಾರೆ...

"ಸಂದೇಶ ಸ್ವೀಕೃತ" ಇದು ಅಪ್ಪಟ ಸಂಸ್ಕೃತ... :)

ಇದರಲ್ಲಿ ಏರ್‍ಟೆಲ್ ತಪ್ಪಿಲ್ಲ ಬಿಡಿ....

"ಮೆಸೇಜು ತಲುಪಿತು" ಅಂತ ಸಿಂಪಲ್ಲಾಗಿ ಕನ್ನಡದಲ್ಲಿ ಬರೆಯೋಕೇ ಏನೋ ರೋಗವೋ

ತುಸು ನೀವು ಇತ್ತ ಗಮನ ಹರಿಸಬೋದೇ( ನಿಮಗೆ ನಾನು ಹೇಳಿದ್ದು ಏನು ಅಂತ ತಿಳೀತಾ ಇದ್ದರೆ )

"ಗ್ರಾಹಕ ಸೇವೆ ಮತ್ತು ಭಾಷಾ ಆಯಾಮ" ಅಂದರೆ ಏನು ಅಂತ ನನಗೆ ಸತ್ಯವಾಗಲೂ ಅರ್ಥ ಆಗಲಿಲ್ಲ.!!

Anonymous ಅಂತಾರೆ...

ತಂತ್ರಜ್ಞಾನದ ಬಳಕೆ ದೇಶದ ಕಟ್ಟ ಕಡೆಯ ಪ್ರಜೆಯನ್ನು ಮುಟ್ಟಬೇಕು.
ತಂತ್ರಜ್ಞಾನದ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳು, ದೇಶದ ಕಟ್ಟ ಕಡೆಯ ಪ್ರಜೆಯನ್ನು ತಲುಪಿದಾಗಲೇ ಅವುಗಳನ್ನು ಯಶಸ್ವಿ ಎಂದೆನ್ನಬಹುದು ಹಾಗೂ ಹಾಗೆ ಯಶಸ್ವಿ ಆಗಲು ಆಯಾ ಉತ್ಪನ್ನಗಳು ಹಾಗೂ ಅವುಗಳ ಬಗೆಗಿನ ಮಾಹಿತಿ ಸ್ಥಳಿಯರ ಭಾಷೆಯಲ್ಲಿರೋದು ತುಂಬ ಮುಖ್ಯ. ಕರ್ನಾಟಕದಲ್ಲಿ ನಮ್ಮ ಜನರನ್ನು ಪರಿಣಾಮಕಾರಿಯಾಗಿ ತಲುಪಬೇಕು ಅಂದ್ರೆ ಆ ವಸ್ತುವಿನ ಬಗ್ಗೆ ಇರೋ ಮಾಹಿತಿಗಳು ಕನ್ನಡದಲ್ಲಿರಬೇಕು. ಅದೆಷ್ಟೊ ವಸ್ತುಗಳನ್ನು ಹೇಗೆ ಬಳಕೆ ಮಾಡಬೇಕು ಅಂತಾ ಬರೆಯೋ ಸೂಚನೆಗಳು ಭಾಳಾ ಮುಖ್ಯವಾಗುತ್ತೆ. ಹಾಗಾಗಿ ಎಲ್ಲಾ ಸೂಚನೆಗಳು ಕೂಡ ಕನ್ನಡದಲ್ಲೇ ಇರಬೇಕು. ಇದು ಆಯಾ ಉತ್ಪನ್ನಗಳ ಮಾರಾಟ ಮಾತ್ರಾ ಹೆಚ್ಚಿಸಲ್ಲ, ಬದಲಿಗೆ ಗ್ರಾಹಕರ ಹಕ್ಕನ್ನೂ ಗೌರವಿಸೋ ಹಾಗಾಗುತ್ತೆ. ಗ್ರಾಹಕರು ಹಣ ಕೊಟ್ಟು ಕೊಂಡ್ಕೊಳ್ಳೋ ವಸ್ತೂನ ಅವ್ರಿಗೆ ಬೇಕಾದ ರೀತೀಲಿ ಮಾತ್ರಾ ಅಲ್ದೆ ಅದನ್ನ ಅವರು ಬಳಸಕ್ಕೆ ಅನುಕೂಲ ಆಗೋ ತರದಲ್ಲಿ ಕೊಡುವುದು ವ್ಯಾಪಾರಕ್ಕೇ ಒಳ್ಳೇದು ಗುರು!

Anonymous ಅಂತಾರೆ...

ತಂತ್ರಜ್ಞಾನದ ಬಳಕೆಯಿಂದ ದೊರಕುವ ಇಂತ ಸಮರ್ಪಕ ಮಾಹಿತಿಯನ್ನು ಬಳಸಿಕೊಂಡು ನಮ್ಮ ರೈತರು ಕೃಷಿ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಿ, ಆರ್ಥಿಕವಾಗಿ ಸಬಲರಾಗಬಹುದು ಗುರು!

Narayan ಅಂತಾರೆ...

ಪ್ರತಿಯೊಂದು ಮೊಬೈಲಿಗೂ ಈ ವ್ಯವಸ್ಥೆ ಕೊಡಬಾರದೇ.. ಇದನ್ನು ನೋಕಿಯಾದವರು ಮಾಡಬೇಕು.. ಕೆಲವರು ಹೇಳುತ್ತಾರೆ, ನೋಕಿಯಾ 6030 ತಯಾರಿ ಸ್ಥಗಿತಗೊಳಿಸಲಾಗಿದೆಯೆಂದು...

ಕುಕೂಊ.. ಅಂತಾರೆ...

ಅಪರಿಚಿತರೆ (Anonymous)
"ಸಂದೇಶ ಸ್ವೀಕೃತ" ಇದು ಅಪ್ಪಟ ಸಂಸ್ಕೃತ... :)
ಇದರಲ್ಲಿ ಇರುವುದು ಅಪ್ಪಟ ಸಂಸ್ಕೃತ ನುಡಿ ಅಂತ ವಾದ ಮುಂದಿಟ್ಟಿದ್ದೀರಿ.
ಆಗಂತ ಹೇಳಿ ನೀವು ಅದಕ್ಕೆ ಪರಿಯಾಯವನ್ನೂ ತಿಳಿಸಿದ್ದಿರಿ.
ಆದರೆ ಆ ಪರಿಯಾಯ ಎಷ್ಟೊಂದು ಅಸಮಂಜಸವಾಗಿದೆ ನೋಡಿ.
"ಮೆಸೇಜ್ ತಲುಪಿತು" ಇದರಲ್ಲಿ ಮೆಸೇಜ್ ಅನ್ನುವುದು ಶುದ್ದ ಆಂಗ್ಲ ನುಡಿ. ಈಗಾದರೆ ಹೇಗೆ? ಇದು ಮುಂದುವರಿದರೆ ನಮ್ಮ ಕನ್ನಡದ ಗತಿ ಏನಾಗಬಹುದು? ಸಂಸ್ಕೃತ ಪದದಲ್ಲಿ ಕೊನೆಪಕ್ಷ ನಮ್ಮ ಜೀವನದ ಸೊಡರಾದರು ಇದೆ. ಈ ಹಾಳು ಆಂಗ್ಲ ನುಡಿಯಲ್ಲಿ ಏನಿದೆ? ಕೊಳೆತು ನಾರುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿ!!. ಇದಕ್ಕೆ ಅಂದಾನು ಕರಣೆ ಅನ್ನೋ ಬಹುದೋ ಮತ್ತೇನನ್ನಾದರು ಅನ್ನೊಬಹುದೋ? ಸಂಸ್ಕೃತ ದ್ವೇಷದಲ್ಲಿ ಆಂಗ್ಲಕ್ಕಂಟಿಕೊಳ್ಳೋದು ಯಾವ ನ್ಯಾಯ? ನಿಮ್ಮ ವಿವೇಚನೆಯನ್ನೋಮ್ಮೆ ಪರಮಾರ್ಶಿಸಿಕೊಳ್ಳಿ.

ಸ್ವಾಮಿ
ಪುಣೆ

Anonymous ಅಂತಾರೆ...

ಮೊದಲಿನ ಅನಾಮಿಕರು (Anonymous) ಬರೆದಿದ್ದು ತಮಾಷೆಗೋ ನಿಜಕ್ಕೂ ಹಾಗೇ ಅಪೇಕ್ಷಿಸುತ್ತಿದ್ದಾರೋ ಅರ್ಥವಾಗಲಿಲ್ಲ. ಸಂದೇಶ ಸ್ವೀಕೃತ ಎರಡೂ ಸಹ ಸಂಸ್ಕೃತ ಮೂಲ ಪದಗಳೇ ಹೊರತು ಕನ್ನಡದಲ್ಲಿ ಬಳಸಬಾರದು ಅಂತೇನಿಲ್ಲ. ಜೊತೆಗೆ ಮೆಸೇಜು ತಲುಪಿತು ಅನ್ನೋ ಕಂಗ್ಲಿಷ್‌ಗಿಂತ ಸಂಕನ್ನಡ ಉತ್ತಮ ಏನಂತೀಯಾ ಗುರು?

B.H.Ravindra Ph.D., ಅಂತಾರೆ...

Sandesha Sweekrutha gintha sandesha thalupithu sariyalve?

Anonymous ಅಂತಾರೆ...

ಇನ್ನೂ ಸರಳವಾಗಿ ಸುದ್ದಿ ಮುಟ್ಟಿತು ಅಥವಾ ತಲುಪಿತು ಅಂದ್ರೆ ಚೆನ್ನಾಗಿರುತ್ತೆ ಅಲ್ವಾ?????

ಆನಂದ್ ಅಂತಾರೆ...

Message recieved --> "ಚಿಕ್ಕೋಲೆ ಬಂದಿದೆ"
ಅಂತ ಕನ್ನಡದಲ್ಲೇ ಹೇಳಬಹುದು. ಕನ್ನಡಕ್ಕೆ ಒಂದು ಪದ ತರಬೇಕೂ ಅಂದರೆ ಸಂಸ್ಕೃತ ಅಥವಾ ಇಂಗ್ಲಿಷ್ ಹುಡುಕೋಕೆ ಮೊದಲು ಮುಂದಾಗೋದು ಎಷ್ಟು ಸರಿ?

Anonymous ಅಂತಾರೆ...

ಬಹಳ ಒಳ್ಳೆಯ ವಿಚಾರ. ಆದ್ರೆ ಮೊಬೈಲ್ ನಲ್ಲಿ ಕನ್ನಡ ಹೊಸತೇನಲ್ಲ. ನಾನು ಸುಮಾರು ೨ ವರುಷದ ಹಿಂದೆ ಬಳಸುತ್ತಿದ್ದ ಸ್ಯಾಮ್ಸಂಗ್ ರವರ c210 ಮಾದರಿಯಲ್ಲಿ ಕನ್ನಡ ಮೆನು ಲಭ್ಯವಿತ್ತು ಮತ್ತು ನಾನು ಅದನ್ನು ಬಳಸುತ್ತಿದ್ದೆ ಕೂಡಾ. ನೋಕಿಯಾದವರು ಇನ್ನೂ ಒಂದು ಹೆಜ್ಜೆ ಮುಂದುವರಿದಿದ್ದಾರೆ.. ಅವರು ಸಾಧಾರಣವಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೆಚ್ಚಿನ ಎಲ್ಲಾ ಮಾದರಿಗಳಿಗೆ ಭಾರತೀಯ ಭಾಷೆಗಳನ್ನು ಬಳಕೆ ಮಾಡುವ ಅನುಕೂಲ ಮಾಡಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಯಾರೂ ಇದನ್ನು ಬಳಸುತ್ತಿಲ್ಲ. ನನಲ್ಲ್ಲಿಈಗ ನೋಕಿಯ 2360 ಇದ್ದು ಕನ್ನಡ ಮೆನುವನೇ ಉಪಯೋಗಿಸುತ್ತಿದ್ದೇನೆ. ಇದರಲ್ಲಿ ಕನ್ನಡದಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆಯೂ ಇದೆ. ಸಂಖ್ಯೆ ಹಾಗೂ ಹೆಸರುಗಳನ್ನು ಕನ್ನಡದಲ್ಲಿ ನಮೂದಿಸಿ ಉಳಿಸಿಕೊಳ್ಳಬಹುದು. ಕೆಲವು ಆಯ್ಕೆಗಳಿಗೆ ಆಂಗ್ಲ ಪದ (ಮೆನು, ಅನ್ ಲಾಕ್ ಇತ್ಯಾದಿ) ಬಳಸಿರುವುದನ್ನು ಬಿಟ್ಟರೆ ಈ ಪ್ರಯತ್ನ ಶ್ಲಾಘನೀಯ. ಆದರೆ ಅದನ್ನು ನಾವೆಲ್ಲ ಬಳಸಿದರೆ ಮಾತ್ರ ಅವರ ಪ್ರಯತ್ನಕ್ಕೆ ಬೆಲೆ ಬರುವುದಲ್ಲವೇ?

ಕುಕೂಊ.. ಅಂತಾರೆ...

ತಿಮ್ಮಯ್ಯನವರ "ಚಿಕ್ಕೋಲೆ ಬಂದಿದೆ" ಕನ್ನಡ ನುಡಿ ಪರ್ಯಾಯ ಸೂಚನೆ ನನ್ನಿ. ನಿಜವಾಗಲು ಗುರು ಇದೇ ರೀತಿ ನಮ್ಮ ಕನ್ನಡ ಪದಗಳ ಪ್ರಯೋಗವಾಗಬೇಕು.
ತಿಮ್ಮಯನವರಿಗೆ ಅನಂತ ವಂದನೆಗಳು.

ಸ್ವಾಮಿ
ಪುಣೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails