ಬರೀ ಅಭಿಮಾನ ಅಲ್ಲ! ಉದ್ದಿಮೆಯೂ ಹೌದು!!
ಕನ್ನಡ ಚಿತ್ರಗಳನ್ನು ಹೊರದೇಶದಲ್ಲಿ ಪ್ರದರ್ಶನ ಮಾಡೋದು ಯಾಕೆ? ಅನ್ನೋ ಪ್ರಶ್ನೆಗೆ ಉತ್ತರ, ಅದು ಅಭಿಮಾನಕ್ಕಾಗಿ ಮಾತ್ರಾ ಅಲ್ಲ ಲಾಭದಾಯಕ ಉದ್ದಿಮೆಗಾಗಿ ಅನ್ನೋದಾಗಬೇಕು. ಹಾಗೆ ಆಗಬೇಕಂದ್ರೆ ಹೊರದೇಶದ ಕನ್ನಡಿಗರಿಗೆ ಕನ್ನಡ ಸಿನಿಮಾ ನೋಡಲಿಕ್ಕೆ ಅವಕಾಶ ಮಾಡಿಕೊಡೋದು ಮಾತ್ರಾ ಸಾಕಾಗಲ್ಲ, ಅವರಿಗೆ ಕನ್ನಡ ಚಿತ್ರಗಳ, ಚಿತ್ರಗೀತೆಗಳ ಗುಂಗು ಹಿಡುಸ್ಬೇಕು. ಅಭಿಮಾನಕ್ಕಾಗಿ ಕನ್ನಡ ಸಿನಿಮಾ ನೋಡಿ ಅನ್ನೋ ತಂತ್ರ ಸವಕಲು, ನಿಮ್ಮ ಮನರಂಜನೆಗಾಗಿ ಅತ್ಯುತ್ತಮವಾದದ್ದನ್ನು ನಿಮ್ಮವರೇ ಮಾಡಿದ್ದಾರೆ, ನೋಡಿ ಅನ್ನೋ ಹಂತಕ್ಕೆ ಕರೆದೊಯ್ಯಬೇಕು. ಕನ್ನಡ ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತು ಕಾಯೋಹಾಗೆ ಮಾಡಲು ನಾವು ಯಶಸ್ವಿಯಾದ್ರೆ ಈ ಉದ್ದಿಮೆ ಖಂಡಿತಾ ಲಾಭದಾಯಕವಾಗುತ್ತೆ ಗುರು.
ಬರೀ ಹಂಚಿಕೆ ಅಲ್ಲ ಮಾರುಕಟ್ಟೆ ನಿರ್ಮಾಣ
"ಕನ್ನಡದೋರು ಇಷ್ಟು ಲಕ್ಷ ಜನ್ರು ಈ ದೇಶದಲ್ಲಿದೀರಿ, ಬನ್ನಿ ನಿಮಗೆ ಕನ್ನಡ ಸಿನಿಮಾ ನೋಡಕ್ಕೆ ಅವಕಾಶ ಮಾಡಿಕೊಡ್ತೀವಿ ಅನ್ನೋದು ಅಷ್ಟು ಪರಿಣಾಮಕಾರಿ ಮಾರುಕಟ್ಟೆ ತಂತ್ರವಾಗೋಲ್ಲ. ಯಾಕಂದ್ರೆ ಕನ್ನಡಿಗರಲ್ಲಿ ವಿದೇಶಕ್ಕೆ ಹೋಗಿದ್ದೂ ನಾವು ಕನ್ನಡಿಗರಾಗಿದ್ದೀವಿ, ಕನ್ನಡತನವೇ ನಮ್ಮ ಗುರುತು, ನಮ್ಮ ನೆಲದ ಸಂಸ್ಕೃತಿ, ಭಾಷೆ ಇವುಗಳನ್ನೆಲ್ಲಾ ಉಳಿಸಿಕೊಳ್ಳೋದೇ ಸರಿಯಾಗಿರೋದು ಅನ್ನೋ ಮನೋಭಾವ ಇಲ್ಲದೇ ಹೋದ್ರೆ... ನಾವು ಸಿನಿಮಾನ ಬಿಟ್ಟಿ ತೋರುಸ್ತೀವಿ ಅಂದ್ರೂ ಜನನ್ನ ಸೆಳ್ಯಕ್ ಆಗಲ್ಲ. ಹಾಗಾದ್ರೆ ಏನ್ ಮಾಡಬೇಕು ಅಂದ್ರೆ ಸಖತ್ ಮಾರುಕಟ್ಟೆ ತಂತ್ರಗಳನ್ನು ಬಳುಸ್ಬೇಕು. ನಮ್ಮ ಸಿನಿಮಾ ತಾರೆಗಳನ್ನು ಕರ್ಕೊಂಡು ಹೋಗಿ ಆಕರ್ಷಕವಾದ ಕಾರ್ಯಕ್ರಮಗಳನ್ನು ನಡೆಸಿ, ಸಿನಿಮಾ ಹಾಡು ಬಿಡುಗಡೆ, ಸಿನಿಮಾ ಬಿಡುಗಡೆ ಅಂತ ಬಣ್ಣಬಣ್ಣದ ಕಾರ್ಯಕ್ರಮ ಮಾಡೋದ್ರು ಮೂಲಕ ಮಾರುಕಟ್ಟೆ ಕಟ್ಕೋಬೇಕು. ಕನ್ನಡ ಸಿನಿಮಾ ಬರೀ ಕನ್ನಡದೋರಿಗೆ ಮಾತ್ರಾ ಅಲ್ಲ, ಬೇರೆಯೋರೂ ಅದಕ್ಕೆ ಗ್ರಾಹಕರಾಗಬೇಕು ಅನ್ನೋ ಗುರಿ ಇಟ್ಕೊಂಡು ಡಬ್ಬಿಂಗು, ಸಬ್ ಟೈಟಲ್ಲು ಅದೂ ಇದೂ ಅಂತ ಇರೋಬರೋ ಎಲ್ಲಾ ತಂತ್ರಜ್ಞಾನಾನೂ ಬಳುಸ್ಕೋಬೇಕು. ಆ ಮೂಲಕ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಕಟ್ಕೊಬೇಕು.... " ಅನ್ನೋದನ್ನೆಲ್ಲಾ ಖಚಿತವಾಗಿ ಈ ಉತ್ಸಾಹಿ ಉದ್ದಿಮೆದಾರರು ನೆನಪಿಟ್ಟುಕೊಂಡೇ ಈ ಹೊಸ ಸಾಹಸಕ್ಕೆ ಕೈ ಹಾಕಿರ್ತಾರೆ ಗುರು. ವಿದೇಶದಲ್ಲಿರೋ ಕನ್ನಡಿಗ್ರೂ ಇವರ ಕೈ ಹಿಡೀಬೇಕು, ಕನ್ನಡ ಚಿತ್ರರಂಗ ಕೂಡಾ ಮಾರುಕಟ್ಟೆ ಬೇಡಿಕೇನ ಪೂರೈಸಕ್ಕೆ ಅಗತ್ಯವಿರೋ ಗುಣಮಟ್ಟಾನ ತಮ್ಮ ಕೈವಶ ಮಾಡ್ಕೋಬೇಕು... ನಮ್ಮ ಸಿನಿಮಾ ನೋಡೋದು ಮನಸ್ಸಿಗೆ ಖುಷಿ ಕೊಡೋದ್ರು ಜೊತೆಗೆ ಪ್ರಪಂಚದಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲದ ಹಾಗೆ ಸಿನಿಮಾ ಅನ್ನೋ ಕಲೇನ ಕರಗತ ಮಾಡ್ಕೊಂಡಿದೀವಿ ಅನ್ನೋ ಹೆಮ್ಮೆಗೆ ಕಾರಣವಾಗುವಂತಹ ದಿನಗಳು ಬರಬೇಕು ಗುರು!