ಹಿಂದಿ ಹೇರಿಕೆಗೊಂದು ಕಾರ್ಯಯೋಜನೆ!

ಭಾರತದ ಎಲ್ಲಾ ರಾಜ್ಯಗಳನ್ನು ಮೂರು ವಲಯ ಮಾಡಿ ಹಿಂದಿ ತಾಯ್ನುಡಿ ಇರೋ ರಾಜ್ಯಗಳು, ಹಿಂದಿಗೆ ಹತ್ತಿರದ ನುಡಿ ಇರೋ ವಲಯಗಳು ಮತ್ತು ಹಿಂದಿಗೆ ಸಂಬಂಧ ಇಲ್ಲದ ವಲಯಗಳು ಅಂತ ಮಾಡಿ, ಎಲ್ಲಾ ಕಡೆ ಘನ ಸಂವಿಧಾನದ ಆಶಯದಂತೆ ಹೇಗೆ ಹಿಂದಿಯೆನ್ನುವ ದೇವತೆಯನ್ನು ಪ್ರತಿಷ್ಠಾಪನೆ ಮಾಡೋದು ಅಂತ ವರ್ಷಾ ವರ್ಷಾ ಕಾರ್ಯ ಯೋಜನೆ ಮಾಡಿ, ಅದಕ್ಕೆ ಅಂತ ಒಂದು ಖಾತೆ ಮಾಡಿ, ಅದಕ್ಕೆ ಅಂತ ಕೋಟಿಗಟ್ಲೆ ತೆರಿಗೆ ಹಣವನ್ನು ಮೀಸಲು ಮಾಡಿ, ಹ್ಯಾಗೆ ಭಾರತೀಯರೆಲ್ಲ ಹಿಂದಿ ಕಲೀತಾ ಇದಾರೆ ಅನ್ನೋದನ್ನು ಹತ್ತಿರದಿಂದ ಪರಾಮರ್ಶೆ ಮಾಡ್ತಾ ಈ ದೇಶದ ಜನರೆಲ್ಲಾ ಎಷ್ಟ್ರು ಮಟ್ಟಿಗೆ ಹಿಂದುಸ್ಥಾನಿಗಳಾಗ್ತಾ ಇದಾರೆ ಅಂತ ಅಳೀತಾ ಇರ್ತಾರೆ ಅಂದ್ರೆ ಅಚ್ಚರಿ ಪಡಬೇಡಿ ಗುರುಗಳೇ! ಇವತ್ತು ಭಾರತ ಸರ್ಕಾರ ದೇಶದ ಬ್ಯಾಂಕುಗಳು ಹೆಂಗೆ ಕೆಲಸ ಮಾಡಬೇಕು? ಈ ವರ್ಷದಲ್ಲಿ ಏನೇನು ಗುರಿ ಸಾಧುಸ್ಬೇಕು ಅಂತ ಗುರಿ ಇಟ್ಕೊಂಡಿದಾರೆ ಅಂತ ನೋಡ್ಬುಟ್ರೆ ಜನ್ಮ ಸಾರ್ಥಕ ಆಗ್ಬುಡುತ್ತೆ ಗುರುಗಳೇ!!

ಭಾರತೀಯ ಬ್ಯಾಂಕುಗಳಿಗೆ ಈ ವರ್ಷಕ್ಕಿರೋ ಗುರಿ

ಈ ವರ್ಷ ಎಷ್ಟು ಬ್ರಾಂಚ್ ತೆಗೀಬೇಕು? ಎಷ್ಟು ಬಂಡವಾಳ ಸಂಗ್ರಹಿಸಬೇಕು? ಎಷ್ಟು ಸಾಲ ಕೊಡಬೇಕು? ಅನ್ನೋ ಗುರಿಗಳ ಬಗ್ಗೆ ಮಾತಾಡ್ತೀವಿ ಅಂದ್ಕೊಬೇಡಿ... ನೋಡಿ ಅವ್ರು ಸಾಧಿಸಬೇಕಾದ್ದು ಏನೇನು ಅಂತಾ...
ಬ್ಯಾಂಕುಗಳು ಡಿಮ್ಯಾಂಡ್ ಡ್ರಾಫ್ಟ್, ಪೇ ಆರ್ಡರುಗಳಿಗಾಗಿ ಹಿಂದಿಯಲ್ಲಿ ಅರ್ಜಿ ಸಲ್ಲಿಸಿದರೆ ಹಿಂದಿಯಲ್ಲೇ ತಯಾರು ಮಾಡಿಕೊಡಬೇಕು. ಇಂಗ್ಲಿಷಲ್ಲಿ ಬರೆದರೆ ಅಂತಹ ಗ್ರಾಹಕರ ಸಹಮತದೊಂದಿಗೆ ಹಿಂದಿಯಲ್ಲಿ ಮಾಡಿಕೊಡಬೇಕು.
ಬ್ಯಾಂಕಿನ ಎಲ್ಲ ದಾಖಲೆಗಳನ್ನು ಹಿಂದಿಯಲ್ಲಿ ತಯಾರು ಮಾಡಬೇಕು. ಎಲ್ಲ ತೆರನಾದ ಪಟ್ಟಿಗಳು, ರಿಟರ್ನ್ ಗಳು, ಫಿಕ್ಸಡ್ ಡಿಪಾಸಿಟ್ ರಸೀತಿಗಳು, ಚೆಕ್ ಪುಸ್ತಕಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು, ದಿನನಿತ್ಯದ ವಹಿವಾಟು ದಾಖಲಿಸುವ ಲೆಡ್ಜರ್ ಪುಸ್ತಕದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂಟ್ರಿಗಳು, ಮಸ್ಟರ್ರು, ರವಾನೆ ಪುಸ್ತಕ, ಪಾಸ್ ಪುಸ್ತಕ, ಲಾಗ್ ಪುಸ್ತಕದ ಎಂಟ್ರಿಗಳು, ಆದ್ಯತೆ ಪಟ್ಟಿಯ ಕೆಲಸಗಳು, ಭದ್ರತೆ ಮತ್ತು ಗ್ರಾಹಕ ಸೇವೆಗಳು, ಹೊಸ ಖಾತೆ ತೆರೆಯುವಾಗ, ಲಕೋಟೆಗಳ ಮೇಲೆ ವಿಳಾಸ ಬರೆಯುವಾಗ, ಬ್ಯಾಂಕಿನ ನೌಕರರ ಪ್ರವಾಸ ಭತ್ಯೆಗೆ ಸಂಬಂಧಿಸಿದ ದಾಖಲಾತಿಗಳು, ರಜೆ, ಭವಿಷ್ಯ ನಿಧಿ, ಮನೆ ಕಟ್ಟಲು ನೀಡುವ ಅನುದಾನ, ವೈದ್ಯಕೀಯ ಸೇವೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹಿಂದಿಯಲ್ಲಿರತಕ್ಕದ್ದು. ಇದಲ್ಲದೆ ಸಭೆಗಳ ಉದ್ದೇಶ ಹಾಗು ಸಭೆಯ ನಂತರದ ಸಾರಾಂಶದ ವರದಿಗಳು ಹಿಂದಿಯಲ್ಲಿರತಕ್ಕದ್ದು.....

ಹಿಂದುಸ್ತಾನವೋ ಹಿಂದಿ ಆಸ್ಥಾನವೋ?

ಇದು ಈ ವರ್ಷದ ಕೇಂದ್ರ ಸರ್ಕಾರದ "ಡಿಪಾರ್ಟ್’ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್"ಅವರು ಬ್ಯಾಂಕುಗಳಿಗಾಗಿ ಹಾಕಿಕೊಂಡಿರೋ ಗುರಿಗಳು. ಇನ್ನೂ ಏನೇನಲ್ಲಿ ಏನೇನು ಜಾರಿ ಮಾಡೋ ಯೋಜನೆ ಇದೆ ಅಂತ ಆ ಇಲಾಖೆಯ ಅಂತರ್ಜಾಲ ತಾಣದಲ್ಲಿ ವಿವರವಾಗಿ ಬರ್ದಿದಾರೆ, ಒಮ್ಮೆ ನೋಡಿ. ನಿಮ್ಮ ಕಣ್ಣಿಗೆ, ಮುಂದಿನ ದಿನಗಳಲ್ಲಿ ಈ ವರ್ಷ ಯಾರು ಯಾರ ಮನೆಗಳಲ್ಲಿ ಎಷ್ಟೆಷ್ಟು ಹಿಂದಿ ಪದ ಬಳಸಬೇಕು ಅನ್ನೋದೂ ಈ ಯೋಜನೆಯ ಅಂಗ ಆಗೋ ಸಾಧ್ಯತೆಗಳು ಕಾಣ್ತಿಲ್ವಾ ಗುರು?

3 ಅನಿಸಿಕೆಗಳು:

Anonymous ಅಂತಾರೆ...

ಭಾರತ ಸರ್ಕಾರವು ಹಿ೦ದಿ ಹೇರಿಕೆಯ ಪಟ್ಟಿ ಮಾಡಿ ಒಳ್ಳೆಯ ಕೆಲಸಾನೇ ಮಾಡಿದರೆ. ಹಿ೦ದಿ ಹೇರಿಕೆಯು ಎಲ್ಲೆಲ್ಲಿ ಕಾರ್ಯನಿರತವಾಗಲಿದೆ ಎ೦ದು ತಿಳಿದಮೇಲೆ ನಾವು ಅವರ೦ತೆ ಹಿ೦ದಿಯನ್ನು ಎಲ್ಲಿ ವಿರೋಧಿಸಬೇಕು ಅ೦ತ ಪಟ್ಟಿ ಮಾಡುವ ಅವಶ್ಯಕತೆ ಇಲ್ಲ.

ನಾವು....
ರಿಟರ್ನ್ ಫಾರ೦ಗಳು ಹಿ೦ದಿಯಲ್ಲಿ ಇದ್ದರೆ, ಅದನ್ನು ತಿರಸ್ಕರಿಸಿ, ಕನ್ನಡದಲ್ಲಿ ಮಾತ್ರ ಲಭ್ಯವಿರುವ ಫಾರ೦ಗಳಲ್ಲಿ
ಕನ್ನಡದಲ್ಲೇ ತು೦ಬೋಣ.. ಇಲ್ಲದಿದ್ದರೆ ತೆರಿಗೇನೂ ಇಲ್ಲ ಏನೂ ಇಲ್ಲ. ಹಾಗೇ ಕನ್ನಡದಲ್ಲೇ ಎಲ್ಲವನ್ನು ಎಲ್ಲಾ ಬ್ಯಾ೦ಕ್ ನ ವ್ಯವಹಾರ ನಡೆಸೋಣ. ಅವರ ಪಟ್ಟಿಯಲ್ಲಿರುವ ಯೋಜನೆಗಳನ್ನು ಅವರ ಮೇಲೇ ಹೇರುವ ಹಾಗೆ ಮಾಡೋಣ.

ನಾನೊಬ್ಬ ಲೆಕ್ಕಿಕ. ನಾನಾ ದೇಶದ ಖರೀದಿಪಟ್ಟಿ (ಇನ್ವಾಯ್ಸ್)ಗಳನ್ನು ಪಾವತಿಸುತ್ತೇನೆ. ಅವೆಲ್ಲ ಅವರವರ ಭಾಷೆಯಲ್ಲೇ ಬರುತ್ತದೆ. ಅವರ ಭಾಷೆ ಅವರಿಗೆ ಅನ್ನ ಕೊಡುತ್ತದೆ, ಆದ್ದರಿ೦ದ ಅವರು ಹಾಗೆ ಮಾಡುತ್ತಾರೆ. ನಾವೂ ಕೂಡ ಕನ್ನಡಕ್ಕಿರುವ ಆರ್ಥಿಕ ಬೆಲೆಯನ್ನು ಹೆಚ್ಚಿಸುವಲ್ಲಿ ಯೋಚಿಸೋಣ. ಜಾಗ್ರುತಿಯಿ೦ದಲೇ ಇವೆಲ್ಲ ಸಾಧ್ಯ.!!! ಇಲ್ಲಿನ ಉದ್ಯಮಿಗಳನ್ನು ಕೂಡ ಮುಟ್ಟಬೇಕು.

Anonymous ಅಂತಾರೆ...

ಮಾಡೋಕೆ ಸಾವಿರಾರು ಕೆಲಸ ಬಾಕಿ ಇದ್ರು, ಈ ಹಿಂದಿ ಹೇರಿಕೆ ಯಾಕೆ ಬೇಕು ಗುರು ಈ ಕೇಂದ್ರ ಸರ್ಕಾರಕ್ಕೆ. ಇದಕ್ಕೆ ವಿನಿಯೋಗ ಮಾಡೋ ಹಣವನ್ನಾ, ಅನಾಥ ಮಕ್ಕಳ ಅಭಿವ್ರುದ್ದಿಗೋ, ವಿದ್ಯಭ್ಯಸಕ್ಕೋ, ಅಥವಾ ದೇಶದ ಸಂರಕ್ಷಣೆಗೋ ವಿನಿಯೋಗ ಮಾಡಿದ್ರೆ ಇದರ ನಿಜವಾದ ಪ್ರಯೋಗ ಆಗೋದು ದೇಶದ ಎಲ್ಲ ಪ್ರಜೆಗಳಿಗೆ ತಾನೇ ಗುರು..... ಇವ್ರು ಯಾವಾಗ ತಿಳ್ಕೊತಾರೋ......
ಅದಕ್ಕೆ ಹೇಳಿರೋದು ನಮ್ಮ ಹಿರಿಯರು, "ಮೂರ್ಖರಿಗೆ (ಕೇಂದ್ರ ಸರ್ಕಾರಕ್ಕೆ) ನೂರ್ಕಾಲ ಬುದ್ಧಿ ಹೇಳಿದರೆ, ಗೋರ್ಕಲ್ಲಃ ಮೇಲೆ ಮಳೆ ಸುರಿದಂಗೆ - ಸರ್ವಜ್ಞ."

ಇವ್ರಿಗೆ ಬುದ್ದಿ ಹೇಳೋಕೆ ನಮ್ಮಿಂದಂತು ಆಗೋಲ್ಲ....... ಇನ್ನೊಬ್ಬ "ಸರ್ವಜ್ಞಮೂರ್ತಿ" ಹುಟ್ಟಿ ಬರೋಕೆ ಸಾದ್ಯನೇ ಇಲ್ಲ, ಪ್ರತಿಯೊಂದಕ್ಕೂ ಒಂದು ಕೊನೆ ಅಂತ ಇರುತ್ತೆ, ಇದಕ್ಕೆ ಕೊನೆ ಯಾವಾಗ ಅಂತ ನಾವೇ ತೀರ್ಮಾನ ಮಾಡ್ಬೇಕು.

Anonymous ಅಂತಾರೆ...

ಸೋವಿಯತ್ ಒಕ್ಕೂಟ ಏನಾಯ್ತು ಅಂತ ಎಲ್ಲಾರಿಗೂ ಗೊತ್ತಲ್ವ. ಅದೇ ಸ್ಥಿತಿ ಇಲ್ಲೂ ಬರುತ್ತೆ ಅಷ್ಟೆ :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails