ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು |
ಇಲ್ಲಿಯವರೆಗೆ:
- ಕನ್ನಡ ಮತ್ತು ಕನ್ನಡಿಗರ ಏಳಿಗೆ - ೧: ಒಳ್ಳೆಯ ಕನ್ನಡವೆಂದರೆ ಸಂಸ್ಕೃತಮಯವಾದದ್ದು ಎಂಬ ಬರೆಯದ ಕಟ್ಟಳೆ
- ಕನ್ನಡ ಮತ್ತು ಕನ್ನಡಿಗರ ಏಳಿಗೆ - ೨: ಸಂಸ್ಕೃತಮಯವಾದದ್ದೇ ಒಳ್ಳೆಯ ಕನ್ನಡ ಎಂದಾಗಿರುವುದರಿಂದ ತೊಂದರೆಗಳು
ಕಲಿಕೆ ಮತ್ತು ಕಸುಬುಗಳಲ್ಲಿ ಆಗಿರುವ ಬದಲಾವಣೆಗಳು
೧
ಅಂದು - ಎಂದರೆ ಯಾವಾಗ ಸಂಸ್ಕೃತವು ಕರ್ನಾಟಕಕ್ಕೆ ಮೊದಲು ದಾಪುಗಾಲಿಟ್ಟಿತೋ ಆಗ - ಕನ್ನಡಿಗರ ಸಾಮಾಜಿಕ ಸ್ಥಿತಿ ಇವಾಗಿನದಕ್ಕಿಂತ ಬಹಳ ಬೇರೆಯಾಗಿತ್ತು. ಆಗ ಬೆರಳೆಣಿಕೆಯ ಕನ್ನಡಿಗರಿಗೆ ಮಾತ್ರವೇ ಓದು-ಬರಹಗಳು ಬೇಕಾಗಿದ್ದವು. ಕನ್ನಡಿಗರೆಲ್ಲರಿಗೂ ಓದು-ಬರಹಗಳು ಬರುವುದಿರಲಿ, ಬರಬೇಕೆಂಬ ಚಿಂತನೆಯೇ ಸಮಾಜದಲ್ಲಿ ಇರಲಿಲ್ಲ. ಕನ್ನಡ ನುಡಿಯನ್ನಾಡುವವರು ಅಲ್ಲಲ್ಲಿ ತಮ್ಮತಮ್ಮ ಕೆಲಸಗಳನ್ನು ಮಾಡಿಕೊಂಡು ಬಾಳುತ್ತಿದ್ದರು. ಎಲ್ಲಾ ಕಸುಬಿನವರೂ ಒಟ್ಟಗೆ ಕುಳಿತು ಯಾವ ಒಂದು ವಿಷಯವನ್ನೂ ಕಲಿಯಬೇಕಿರಲಿಲ್ಲ. ಆಯಾ ಕಸುಬಿನವರು ಆಯಾ ಕಸುಬುಗಳನ್ನು ತಮ್ಮ ಹೆತ್ತವರು ಮತ್ತು ನೆಂಟರಿಂದ ಕಲಿತುಬಿಡುತ್ತಿದ್ದರು.೨
ಇಂದು - ಈಗ ಕನ್ನಡಿಗರೆಲ್ಲರಿಗೂ ಓದು ಬರಹಗಳು ಬೇಕೇಬೇಕೆಂಬ ಸ್ಥಿತಿಯಿದೆ. ಓದು ಬರಹ ಬರದಿದ್ದರೆ ಇವತ್ತಿನ ದಿವಸ ಬದುಕಿ ಬಾಳುವುದೇ ಕಷ್ಟವಾಗಿಹೋಗಿದೆ, ಏಕೆಂದರೆ ಚೆನ್ನಾಗಿ ಕಲಿತವರ ಕಡೆಗೆ ಅನ್ನವು ಹರಿದುಹೋಗುತ್ತಿದ್ದು ಕಲಿಯದವರಿಗೆ ಅನ್ನವು ಕಡಿಮೆಯಾಗುತ್ತಿದೆ. ಇವತ್ತಿನ ದಿವಸ ಕನ್ನಡಿಗರಿಗೆಲ್ಲ ಓದು-ಬರಹಗಳು ಬರಬೇಕೆಂಬ ಚಿಂತನೆ ಸಮಾಜದಲ್ಲಿ ಇದೆ. ಎಲ್ಲಾ ಕಸುಬಿನವರೂ ಕೆಲಿಯಬೇಕಾದ ಗಣಿತ, ಮೂಲಭೂತ ವಿಜ್ಞಾನ, ಸಮಾಜವಿಜ್ಞಾನ ಮುಂತಾದವುಗಳಿವೆ. ಕುಲಕಸುಬುಗಳು ಇವತ್ತು ಹೆಚ್ಚು-ಕಡಿಮೆ ಬೆಲೆ ಕಳೆದುಕೊಂಡಿವೆ. ಇವತ್ತಿನ ದಿವಸದ ಕಸುಬುಗಳೇ ಬೇರೆ, ಹಿಂದಿದ್ದ ಕಸುಬುಗಳೇ ಬೇರೆ. ಆ ಕಸುಬುಗಳನ್ನೇ ಕಲಿತು ಮುಂದುವರೆಯುವುದಕ್ಕೆ ಈ ಹೊಸ ಪ್ರಪಂಚದಲ್ಲಿ ಆಗುವುದಿಲ್ಲ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಅಂದು - ಆ ಕಸುಬುಗಳಿಗೆ ಬೇರೊಂದು ಕಸುಬಿನವರು ತಮ್ಮದೇ ಆದ ತಿಳುವಳಿಕೆಯನ್ನು ತರುವುದು ಎಂದಿಗೂ ಸಾಧ್ಯವಿರಲಿಲ್ಲ.೩
ಇಂದು - ಇವತ್ತಿನ ದಿವಸ ಎಂಜಿನಿಯರುಗಳು ಡಾಕ್ಟರಿಗೆ ತಮ್ಮ ತಿಳುವಳಿಕೆಯನ್ನು ನೀಡಿ ಅವರ ಕೆಲಸವನ್ನು ಸುಲಭ ಮಾಡುವುದನ್ನು ಕಾಣುತ್ತೇವೆ. ಆದರೆ ಹಿಂದೆ ಇದು ಸಾಧ್ಯವೇ ಇರಲಿಲ್ಲ. ಬೇರೆಬೇರೆ ಕಸುಬಿನವರ ನಡುವೆ ಈ ರೀತಿಯ ಮಾತುಕತೆಯೇ ಆಗುತ್ತಿರಲಿಲ್ಲ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಅಂದು - ಹಾಗೆಯೇ ಎಲ್ಲಾ ಕಸುಬಿನವರೂ ಕೂತು ಎಲ್ಲರಿಗೂ ಸಮನಾದ ಕಾಳಜಿಗಳ ಬಗ್ಗೆಯೂ ಹೆಚ್ಚು ಚಿಂತಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಯಾವ ಒಂದು ಕಸುಬಿನವರೂ ಕೂಡ ತಮ್ಮ ಕಸುಬಿನಿಂದ ತಾವು ಗಳಿಸಿದ ತಿಳುವಳಿಕೆಯನ್ನು ಬರಹದಲ್ಲಿ ದಾಖಲಿಸುವುದಾಗಲಿ ಶಾಲೆಗಳಲ್ಲಿ ಕಲಿಸುವುದಾಗಲಿ ಮಾಡುತ್ತಿರಲಿಲ್ಲ. ಹಾಗೆ ಮಾಡಬೇಕೆನ್ನುವ ತಿಳುವಳಿಕೆಯೂ ಅವರಿಗಿರಲಿಲ್ಲ. ಹಾಗೆ ಮಾಡುವುದರಿಂದ ತಮ್ಮ ಕಸುಬಿನವರೇ ಕೆಲಸದಲ್ಲಿ ಕೈಚಳಕವನ್ನು ಹೆಚ್ಚಿಸಿಕೊಳ್ಳಬಹುದೆಂದೂ ಅವರು ಅರಿತಿರಲಿಲ್ಲ. ಅಷ್ಟೇ ಅಲ್ಲದೆ, ಆಗಿನ ಕಸುಬುಗಳಲ್ಲಿ ಇವತ್ತಿನಂತೆ ದೊಡ್ಡ ದೊಡ್ಡ ಹೊತ್ತಗೆಗಳಲ್ಲಿ ಬರಿದಿಡುವಷ್ಟು ವಿಷಯವೂ ಇರುತ್ತಿರಲಿಲ್ಲ, ಬಹಳ ಸುಲಭವಾಗಿರುತ್ತಿದ್ದವು. ಆಗ ಜನರು ಲೌಕಿಕ ವಿಷಯಗಳಲ್ಲಿ ಇವತ್ತಿನಷ್ಟು ನಿಪುಣತೆಯನ್ನು ಪಡೆದುಕೊಳ್ಳಲು ಹವಣಿಸುತ್ತಿರಲಿಲ್ಲ. ತಮ್ಮ ಕಸುಬಿನಲ್ಲೇ ಹೆಚ್ಚು ಹೆಚ್ಚು ಹಣ ಗಳಿಸಿಕೊಳ್ಳುವ ವಿದ್ಯೆಗಳು ಇವಾಗಿನಷ್ಟು ಕಷ್ಟದ ವಿದ್ಯೆಗಳಾಗಿರಲಿಲ್ಲ.೪
ಇಂದು - ಇಂದು ಎಲ್ಲಾ ಕಸುಬಿನವರಿಗೂ ಸಮನಾದ ಕಾಳಜಿಗಳ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿಯಿದೆ. ನಾಡಿನ ಸಮಸ್ಯೆಗಳು, ಬೇರೆಬೇರೆ ರೋಗಗಳು, ಆಡಳಿತ, ಮುಂತಾದವುಗಳು ಇದಕ್ಕೆ ಉದಾಹರಣೆಗಳು. ಇವತ್ತಿನ ಕಸುಬುಗಳು ಬರಹವಿಲ್ಲದೆ, ಅವುಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಮೀಸಲಾದ ವಿಭಾಗಗಳಿಲ್ಲದೆ ಉದ್ಧಾರವಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಕಸುಬಿನವರಿಗೂ ತಮ್ಮದೇ ಆದ ಸಾಹಿತ್ಯದ ಪರಂಪರೆಯಿದೆ, ಬರಹದ ಪರಂಪರೆಯಿದೆ, ತಮ್ಮದೇ ಆದ ವಿಶ್ವವಿದ್ಯಾಲಯಗಳ ವಿಭಾಗಗಳಿವೆ. ಇವತ್ತಿನ ಕಸುಬುಗಳಿಗೆ ಜ್ಞಾನ-ವಿಜ್ಞಾನಗಳ ಬಹಳ ಆಳವಾದ ಅಧ್ಯಯನ ಬೇಕಿದೆ. ಜನರಿಗೆ ಈಗ ಲೌಕಿಕ ವಿಷಯಗಳಲ್ಲಿ ನಿಪುಣತೆಯು ಬೇಕೆಂಬ ಹಂಬಲವಿದೆ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಅಂದು - ಮತ್ತೂ ಏನೆಂದರೆ ಆಗ ಕನ್ನಡದ ಮಕ್ಕಳಿಗೆಲ್ಲ ಸೇರಿ ಒಂದೇ ಕಲಿಕೆಯ ಏರ್ಪಾಡೆಂಬುದೂ ಇರಲಿಲ್ಲ. ಅದು ಯಾರಿಗೂ ಬೇಕಾಗಿಲ್ಲವೆಂದು ಜನರ ಅನಿಸಿಕೆಯಾಗಿದ್ದಹಾಗೆ ಕಾಣುತ್ತದೆ. ಕಲಿಕೆಯಿಂದ ಏನೂ ಉಪಯೋಗವಿಲ್ಲವೆಂದು ಜನರ ಅನಿಸಿಕೆಯಾಗಿತ್ತು (ಈ ಅನಿಸಿಕೆಯು ಹಳ್ಳಿಗಳಲ್ಲಿ ಇವತ್ತಿಗೂ ಕೆಲವರಿಗಿದೆ).೫
ಇಂದು - ಇಂದು ಕನ್ನಡದ ಮಕ್ಕಳೆಲ್ಲ ಸೇರಿ ಒಂದೇ ಕಲಿಕೆಯ ಏರ್ಪಾಡಿನಲ್ಲಿ ಕಲಿಯಬೇಕೆಂಬುದಿದೆ. ಜನರಿಗೆ ಕಲಿಕೆಯೇ ಬೇಕಿಲ್ಲವೆಂಬ ಅನಿಸಿಕೆ ಹೆಚ್ಚಾಗಿ ಇವತ್ತು ಉಳಿದಿಲ್ಲ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಅಂದು - ಆಗ ಮನಸ್ಸು ಮಾಡಿದರೆ ಯಾರು ಬೇಕಾದರೂ ಯಾವ ಕಸುಬನ್ನು ಬೇಕಾದರೂ ಸುಲಭವಾಗಿ ಕಲಿಯಬಹುದಾಗಿತ್ತು. ಆದರೆ ಹಾಗೆ ಮಾಡದೆ ಇದ್ದದ್ದು ಆ (ಬೇರೆ) ಕಸುಬನ್ನು ಕಲಿಯುವುದು ಕಷ್ಟವೆಂದಲ್ಲ, ಆ (ಬೇರೆ) ಕಸುಬು ತಮ್ಮ ಹಿಂದಿನವರು ಮಾಡಿಕೊಂಡು ಬಂದಿದ್ದ ಕಸುಬಲ್ಲವೆಂದು ಮಾತ್ರವಾಗಿತ್ತು. ಅಲ್ಲದೆ, ಬೇರೆಯವರು ಸುಲಭವಾಗಿ ಕಲಿಯಬಹುದಾದ ತಮ್ಮ ಕಸುಬನ್ನು ಎಲ್ಲರೂ ಕಲಿತರೆ ಅದರಿಂದ ತಮ್ಮ ಅನ್ನಕ್ಕೇ ಕುತ್ತುಬಂದೀತೆಂದು ತಮ್ಮ ಕಸುಬುಗಳ ಗುಟ್ಟನ್ನು ಒಂದುಚೂರೂ ಹೊರಗೆ ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ತಿಳುವಳಿಕೆಯನ್ನು ಕನ್ನಡಿಗರೆಲ್ಲ ಹಂಚಿಕೊಳ್ಳುವುದು ಎಂಬುದೇ ಆಗಿನ್ನೂ ಹುಟ್ಟಿರಲಿಲ್ಲ.
ಇಂದು - ಈಗ ಕಸುಬುಗಳನ್ನು ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದು ಎಂಬ ಸ್ಥಿತಿಯಿಲ್ಲ. ಅವುಗಳಲ್ಲಿ ಬಹಳ ನಿಪುಣತೆಯಿದ್ದರೆ ಮಾತ್ರ ಆ ಕಸುಬುಗಳನ್ನು ಮಾಡಿಕೊಂಡಿರಲಾಗುವುದು. ಆದ್ದರಿಂದ ಈಗ ಜನರು ಬೇರೆ ಕಸುಬುಗಳಿಗೆ ಹೋಗದಿರುವುದು ಆ ಕಸುಬಿಗೆ ಬೇಕಾದ್ದನ್ನು ಕಲಿಯುವುದು ಕಷ್ಟವಾಗಿರುವುದರಿಂದ. ಕಲಿಯುವುದು ಕಷ್ಟವಾಗಿರುವುದು ಆ ಕಸುಬಿನ ಗುಟ್ಟು ರಟ್ಟಾಗಿಲ್ಲವೆಂದಲ್ಲ, ರಟ್ಟಾಗಿರುವ ಗುಟ್ಟೇ ಕಲಿಯಲು ಕಷ್ಟ, ಅದರ ಬದಲು ತಮ್ಮ ಕಸುಬನ್ನೇ ಮುಂದುವರೆಸಿಕೊಂಡು ಹೋಗುವುದು ವಾಸಿ ಎನ್ನುವ ಕಾರಣದಿಂದ. ಆದ್ದರಿಂದ ಒಂದು ಕಸುಬಿನವರು ಇನ್ನೊಂದು ಕಸುಬಿನವರಿಗೆ ತಮ್ಮ ವಿದ್ಯೆಯನ್ನು ಹೇಳಿಕೊಡಲು ಹಿಂಜರಿಯುವುದಿಲ್ಲ. ಈಗ ಹಾಗೆ ಹೇಳಿಕೊಳ್ಳುವುದರಿಂದ ಎರಡು ಪಾರ್ಟಿಗಳೂ ಲಾಭಗಳಿಸುತ್ತವೆ ಎಂಬ ಅನಿಸಿಕೆ ಜನರಲ್ಲಿದೆ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಆಡಳಿತದ ಏರ್ಪಾಡಿನಲ್ಲಿ ಆಗಿರುವ ಬದಲಾವಣೆಗಳು
೬
ಅಂದು - ಆಗಿನ ಕಾಲದಲ್ಲಿ ಆಡಳಿತವೆನ್ನುವುದು ಅರಸರ ಕೈಯಲ್ಲಿರುತ್ತಿತ್ತು. ಅರಸನ ಕೆಲಸವು ನಾಡಿಗರನ್ನು ಹೊರಗಿನವರಿಂದ ಕಾಪಾಡುವುದು, ಒಳಜಗಳಗಳಲ್ಲಿ ತೀರ್ಪುಕೊಡುವುದು - ಇವುಗಳಷ್ಟೇ ಆಗಿದ್ದವು. ಆಗ ಕಲಿಕೆಯೆನ್ನುವುದು ಆಡಳಿತದ ಒಂದು ಭಾಗವಾಗಿರಲಿಲ್ಲ. ಜನರು ಕಾಲಕಾಲಕ್ಕೆ ತಮ್ಮ ಗಳಿಕೆಗೆ ತಕ್ಕಂತೆ ತೆರಿಗೆಯನ್ನು ಅರಸನಿಗೆ ಕಟ್ಟುತ್ತಿದ್ದರು. ಅರಸನಿಗೂ ಪ್ರಜೆಗಳ ಆರ್ಥಿಕ ಏಳಿಗೆಗೂ ಇನ್ನಾವ ಹೆಚ್ಚಿನ ನಂಟೂ ಇರಲಿಲ್ಲ. ಪ್ರಜೆಗಳಿಗೆ ಕಲಿಕೆಯನ್ನು ಕೊಡುವುದು ಅರಸನ ಜವಾಬ್ದಾರಿಯಾಗಿರಲಿಲ್ಲ. ಪ್ರಜೆಗಳಿಗೆ ತನ್ನ ಯೋಜನೆಗಳನ್ನೆಲ್ಲ ತಿಳಿಸುವುದು ಬೇಕಾಗಿರಲಿಲ್ಲ.
ಇಂದು - ಆದರೆ ಈಗ ಹಾಗಲ್ಲ. ಈಗ ಕರ್ನಾಟಕದಲ್ಲಿ ಒಂದು ಪ್ರಜಾಪ್ರಭುತ್ವವಿದೆ. ಕರ್ನಾಟಕದ ಸರಕಾರಕ್ಕೆ ಕನ್ನಡಿಗರ ಕಲಿಕೆಯ ಜವಾಬ್ದಾರಿಯೆನ್ನುವುದು ಇದೆ. ಜಗಳಗಳಲ್ಲಿ ತೀರ್ಪುಕೊಡುವ ಕೆಲಸವೂ ಇವತ್ತಿನ ದಿನ ಬರಹವಿಲ್ಲದೆ ಆಗುವುದಿಲ್ಲ. ಇವತ್ತಿನ ದಿವಸ ಕರ್ನಾಟಕ ಸರ್ಕಾರಕ್ಕೆ ಬರೀ ಜನರಿಂದ ತೆರಿಗೆಯನ್ನು ವಸೂಲಿ ಮಾಡುವುದೆಂಬ ಒಂದೇ ಕೆಲಸವಿಲ್ಲ. ಸರ್ಕಾರದ ಮೆಲೆ ಜನರ ಆರ್ಥಿಕ ಬೆಳವಣಿಗೆಯ ಹೊಣೆಯೂ ಇದೆ. ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹುಟ್ಟಿಹಾಕುವ ಹೊಣೆ ಸರ್ಕಾರಕ್ಕಿದೆ. ಜನರೊಡನೆ ಸರ್ಕಾರವು ಹಿಂದೆಗಿಂತ ಬಹಳ ಜಾಸ್ತಿ ವ್ಯವಹರಿಸಬೇಕಾಗಿದೆ. ತನ್ನ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕಾಗಿದೆ. ಏನೇನು ಯೋಜನೆಗಳನ್ನು ಮಾಡಬೇಕೆಂಬುದನ್ನೂ ಜನರಿಂದಲೇ ತಿಳಿದುಕೊಳ್ಳಬೇಕಿದೆ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಜನರ ಹಂಬಲಿಕೆಗಳಲ್ಲಿ ಆಗಿರುವ ಬದಲಾವಣೆಗಳು
೭
ಅಂದು - ಆಗ ಬೆರಳೆಣಿಕೆಯ ಕೆಲವರು ಮೋಕ್ಷದ ಕಡೆಗೆ ವಾಲಿಕೊಂಡು ಮೋಕ್ಷವನ್ನು ಸಾಧಿಸಲು ಬೇಕಾದ ವಿದ್ಯೆಯ ಕಡಲೇ ಆಗಿದ್ದ ಸಂಸ್ಕೃತದ ಪರಿಚಯವು ಅವರಿಗೆ ಆಗಿರಬೇಕು. ಅವರಿಗೆ ಮೋಕ್ಷಕ್ಕಿಂತ ಹೆಚ್ಚಿನ ಪುರುಷಾರ್ಥವೇ ಇಲ್ಲವೆನಿಸಿರಬೇಕು. ಹಾಗೆನಿಸಿ ಇವರುಗಳು ಸಂಸ್ಕೃತವನ್ನು ಚೆನ್ನಾಗಿ ಕಲಿತರು ಎನ್ನಬಹುದು. ಮೋಕ್ಷವನ್ನು ಗುರಿಯಾಗಿಟ್ಟುಕೊಂಡ ಇವರುಗಳು ಧರ್ಮದಿಂದ ನಡೆಯುತ್ತಿದ್ದರು ಎನ್ನಬಹುದು. ಇವೆಲ್ಲ ಕಾರಣಗಳಿಂದ ಇವರನ್ನು ಸಮಾಜವು ಗೌರವಿಸಲಾರಂಭಿಸಿತು ಎನ್ನಬಹುದು. ಒಟ್ಟಿನಲ್ಲಿ ಸಂಸ್ಕೃತವನ್ನು ಕಲಿತಿದ್ದ ಇವರಿಗೆ ಸಮಾಜವು ಒಂದು ಮೇಲಿನ ಸ್ಥಾನವನ್ನು ಕೊಟ್ಟು ಗೌರವಿಸಿತು. ಅರಸರು ಕೂಡ ಇವರನ್ನು ಗೌರವಿಸಿ ಇವರನ್ನು ಗುರುಗಳಾಗಿ ಕಾಣುತ್ತಿದ್ದರು.೮
ಇಂದು - ಈಗ ಮೋಕ್ಷದ ಕಡೆಗೆ ವಾಲಿಕೊಂಡು ಮೋಕ್ಷವನ್ನು ಸಾಧಿಸಲು ಹೊರಡುವವರ ಸಂಖ್ಯೆ ಹೆಚ್ಚಾಗಿದೆ (ಜನಸಂಖ್ಯೆಯೇ ಹೆಚ್ಚಾಗಿದೆ). ಇವರುಗಳೂ ಮೋಕ್ಷದ ವಿದ್ಯೆಯನ್ನು ಕಲಿಯಬೇಕಿದೆ, ಇವರೂ ಧರ್ಮದಿಂದ ನಡೆಯಲು ಆಸೆಪಡುತ್ತಾರೆ. ಇವರಿಗೆ ಸಮಾಜವು ಯಾವುದೇ ಮೇಲಿನ ಸ್ಥಾನವು ಕೊಡಲಿ ಎಂಬ ಆಸೆಯಿಲ್ಲದಿದ್ದರೂ, ಇವರನ್ನು ಗುರುಗಳೆಂದು ಜನರು ಕರೆಯದಿದ್ದರೂ ಇವರಿಗೆ ಅಧ್ಯಾತ್ಮದ ಒಲವಿದೆ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಅಂದು - ಬೆರಳೆಣಿಕೆಯ ತಿಳುವಳಿಕಸ್ತರಲ್ಲದೆ ಆಗ ಬರಹವೆಂಬುದು ಹೇಗಿರುತ್ತದೆಯೆಂದೇ ಇತರರು ನೋಡಿರಲಿಲ್ಲವಾದ್ದರಿಂದ ಇವರೇ ಕನ್ನಡಕ್ಕೆ ಬರಹವೆಂಬುದನ್ನು ತಂದರು. ಹಾಗೆ ತರುವಾಗ ಸಂಸ್ಕೃತದ ಮೇಲಿನ ತಮ್ಮ ಅಭಿಮಾನದಿಂದ ಆ ಬರಹವನ್ನು ಸಂಸ್ಕೃತದ ಪದಗಳಿಂದ ತುಂಬಿಸಿದರು, ಆ ಬರಹದಲ್ಲೂ ಕನ್ನಡದ ನಾಲಿಗೆಯು ಉಲಿಯದ ಅಕ್ಷರಗಳನ್ನೆಲ್ಲ ಸೇರಿಸಿದರು ಎಂದು ಹಿಂದೆಯೇ ನಾವು ಹೇಳಿದ್ದೇವೆ. ಆದರೆ ಇವರಿಗೆ ಲೌಕಿಕ ವಿಷಯಗಳೇ ಬೇಡವಾಗಿದ್ದುದರಿಂದ ಇವರ ಬರಹಗಳಲ್ಲಿ ಮತ್ತು ಇವರ ಮಾತುಗಳಲ್ಲಿ ಸಂಸ್ಕೃತದ ಪದಗಳನ್ನು ಉಪಯೋಗಿಸಿ ಧರ್ಮ-ಅಧ್ಯಾತ್ಮದ ವಿಷಯಗಳು ಮಾತ್ರ ಇರುತ್ತಿದ್ದವು. ಕನ್ನಡದಲ್ಲಿ ಮೊದಮೊದಲು ಬರಹಗಳು ಬಂದಾಗ ಧರ್ಮ-ಅಧ್ಯಾತ್ಮಗಳೇ ಅವುಗಳ ವಿಷಯವಾಗಿದ್ದವು ಎಂಬುದನ್ನು ಹಳಮೆಯರಿಗರು ತಿಳಿದೇ ಇದ್ದಾರೆ. ಇವರು ಬರೆದಿದ್ದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದವರೆಲ್ಲ ಇವರಂತೆಯೇ ಮೋಕ್ಷವನ್ನು ಗುರಿಯಾಗಿಸಿಕೊಂಡ ಬೆರಳೆಣಿಕೆಯವರು ಮಾತ್ರವಾಗಿರುತ್ತಿದ್ದರು. ಕನ್ನಡದ ಬರಹದ ಪರಂಪರೆಯು ಬೆರಳೆಣಿಕೆಯವರಿಗೆ ಮಾತ್ರ ಬೇಕಾಗಿದ್ದ ಧರ್ಮ-ಅಧ್ಯಾತ್ಮಗಳ ಬರಹದ ಪರಂಪರೆಯಾಗಿ ಮಾತ್ರ ಉಳಿದುಬಿಟ್ಟಿತು, ಎಲ್ಲರಿಗೂ ಅದು ಹರಡಲೇ ಇಲ್ಲ ಎನ್ನುವುದನ್ನು ಈ ಮೂಲಕ ಕಾಣಬಹುದು. ಇವರು ಲೌಕಿಕವಾಗಿ ಮಾಡುತ್ತಿದ್ದುದು ಹೆಚ್ಚೆಂದರೆ ಅರಸರು ಹೇಳಿದಾಗ ಆಡಳಿತಕ್ಕೆ ಬೇಕಾದ ಸುತ್ತೋಲೆಗಳು, ಅಪ್ಪಣೆಗಳು, ಕಲ್ಲುಬರಹಗಳು, ತಾಮ್ರಬರಹಗಳು ಮುಂತಾದವುಗಳನ್ನು ಬರೆದುಕೊಡುತ್ತಿದ್ದುದು ಮಾತ್ರ, ಮತ್ತು ತಮ್ಮ ಶಿಷ್ಯರಿಗೆ ಪಾಠ ಹೇಳುವುದು ಮಾತ್ರ. ಶಾಸನಗಳು ಕೆಲವೊಮ್ಮೆ ಕನ್ನಡದ ಆಗಿನ ಬರಹದಲ್ಲಿದ್ದರೂ ಸಂಸ್ಕೃತದ ಶ್ಲೋಕಗಳೇ ಆಗಿರುತ್ತಿದ್ದವು ಎಂದು ಗಮನಿಸಿ. ಒಟ್ಟಿನಲ್ಲಿ ಇವರುಗಳು ಬರೆದಿದ್ದು ಸಮಾಜದ ಮುಂದೆ ಬಂದಾಗಲೂ ಅದನ್ನು ಜನರು ಓದಿ ತಿಳಿದುಕೊಳ್ಳಬೇಕೆಂಬುದೇನು ಇರಲಿಲ್ಲ, ಎಕೆಂದರೆ ಬರಹವೆಂಬುದೇ ಜನರಿಗೆ ಆಗ ಬರುತ್ತಿರಲಿಲ್ಲ. ಹೀಗೆ ಬರಹವೆಂಬುದು ಜನರಿಗೆ ತಿಳಿಯದೆ ಹೋದರೂ ಪರವಾಗಿಲ್ಲವೆಂಬ ಪರಂಪರೆಯು ಕನ್ನಡದ ಬರಹಕ್ಕೆ ಅಂಟಿಕೊಂಡಿತು.೯
ಇಂದು - ಇಂದು ಬರಹವು ಎಲ್ಲರಿಗೂ ಬೇಕಾಗಿದೆಯೆಂದು ಮೇಲೇ ಹೇಳಾಯಿತು. ಆದ್ದರಿಂದ ನಾಲಿಗೆಯಲ್ಲಿ ಉಲಿಯದನ್ನೆಲ್ಲ ಸೇರಿಸಿಕೊಳ್ಳುವುದು ಇವತ್ತಿನ ದಿವಸ ಪೆದ್ದತನವೇ ಆದೀತು. ಆಡುನುಡಿಯಲ್ಲಿ ಇರುವ ಪದಗಳನ್ನು ಬಿಟ್ಟು ಸಂಸ್ಕೃತದ ಪದಗಳನ್ನು ತಂದು ಸೇರಿಸಿಕೊಳ್ಳುವುದು ಇನ್ನೂ ದೊಡ್ಡ ಪೆದ್ದತನವೇ ಆದೀತು. ಇವತ್ತಿನ ದಿವಸ ಬರಹ ಬರೆಯುವವರಿಗೆಲ್ಲ ಲೌಕಿಕ ವಿಷಯಗಳೇ ಹೆಚ್ಚಾಗಿ ಬೇಕಾಗಿದೆ. ಇವತ್ತಿನ ಬರಹಗಳ ವಿಷಯ ಹೆಚ್ಚಾಗಿ ಅರ್ಥ-ಕಾಮಗಳೇ ಆಗಿದೆ. ಧರ್ಮ-ಮೋಕ್ಷಗಳ ವಿಷಯಗಳು ಈಗ ಜನರಿಗೆ ಹೆಚ್ಚು ಬೇಕಗಿಲ್ಲ. ನಮ್ಮ ಆರ್ಥಿಕ ಸ್ಥಿತಿ ಇವತ್ತಿನ ದಿವಸ ಬಹಳ ಕೀಳುಮಟ್ಟದ್ದಾಗಿರುವುದರಿಂದ ಮೊದಲು ಹೊಟ್ಟೆಗೆ ಅನ್ನವನ್ನು ತಂದುಕೊಳ್ಳುವುದೇ ಜನರ ಮುಂದಿರುವ ಮೊದಲ ಸವಾಲಾಗಿದೆ. ಇವತ್ತಿನ ದಿವಸ ಸರಕಾರವು ಹೊರಡಿಸುವ ಅಪ್ಪಣೆ, ಜಾಹೀರಾತು, ಟೆಂಡರುಗಳು ಮುಂತಾದವೆಲ್ಲ (ಆವತ್ತಿನ ಶಾಸನಗಳಿದ್ದಂತೆ) ಅರ್ಥವಾಗದಿದ್ದರೂ ಪರವಾಗಿಲ್ಲವೆಂಬ ಪರಿಸ್ಥಿತಿಯಿಲ್ಲ. ಅದು ಇವತ್ತಿನ ದಿವಸ ಅರ್ಥವಾಗಲೇಬೆಕು. ಬರಹವೆಂಬುದು ಜನರಿಗೆ ತಿಳಿಯದೆ ಹೋದರೂ ಪರವಾಗಿಲ್ಲವೆಂಬ ಪರಂಪರೆಯು ಇವತ್ತಿನ ದಿವಸ ಮುರಿದುಹೋಗಲೇಬೇಕು. ಬರಹವೆಂಬುದು ಜನರಿಗೆ ಅರ್ಥವಾಗುವುದೇ ಅದರ ಬಹಳ ಮುಖ್ಯವಾದ ಕೆಲಸವಾಗಿಹೋಗಿದೆ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ಅಂದು - ಅಂದು ನಮ್ಮಲ್ಲಿ ಅರ್ಥ-ಕಾಮಗಳಿಗೆ ಕೊರತೆ ಇವತ್ತಿನಷ್ಟು ಇಲ್ಲದಿದ್ದುದರಿಂದ ಧರ್ಮ-ಮೋಕ್ಷಗಳ ವಿದ್ಯೆಯೇ ಜನರಿಗೆ ಹೆಚ್ಚಾಗಿ ಬೇಕಾಗಿತ್ತು. ಧರ್ಮ-ಮೋಕ್ಷಗಳ ವಿಷಯದಲ್ಲಿ ಹೊಸಹೊಸದನ್ನು ಕಂಡುಹಿಡಿಯುವುದು ಇಲ್ಲವೇ ಜನರೇ ಆ ವಿದ್ಯೆಗಳನ್ನು ಮತ್ತಷ್ಟು ಹೆಚ್ಚಿಸುವುದು ಎಂಬುದೇನೂ ಇರುವುದಿಲ್ಲ. ಹಿಂದೆ ಒಂದಾನೊಂದು ಕಾಲದಲ್ಲಿ ಬರೆದಿಟ್ಟಿರುವ ವೇದ-ಉಪನಿಷತ್ತುಗಳೇ ಮೊದಲಾದವುಗಳಿಗೆ ಸೇರಿಸಬೇಕಾದ್ದೇನೂ ಇಲ್ಲ. ಅವುಗಳಲ್ಲಿರುವ ವಿದ್ಯೆಗಳಿಗೆ ಯಾವುದೇ ರೀತಿಯ ಕೊರತೆಗಳಿವೆಯೆಂದು ಕೂಡ ಹೇಳಲು ಬರುವುದಿಲ್ಲ. ಅವುಗಳು ಸದಾ "ಪೂರ್ಣ"ವಾಗಿವೆ. ಅದ್ದರಿಂದ ಜನರು ಈ ವಿದ್ಯೆಗಳಿಗೆ ಕೊಡುಗೆ ನೀಡಬೇಕು ಎನ್ನುವುದೆನೂ ಇರಲಿಲ್ಲ. ಸಾಮಾನ್ಯ ಜನರಿಂದ ಶಾಲೆಗಳೇ ಪಾಠ ಕಲಿಯಬೇಕು ಎನ್ನುವುದಿರಲಿಲ್ಲ. ಆದ್ದರಿಂದ ಜನರ ನುಡಿ ಮುಖ್ಯವೇ ಆಗಿರಲಿಲ್ಲ.ಈ ಮೇಲಿನ ಬದಲಾವಣೆಗಳನ್ನು ಕಣ್ಣುಬಿಟ್ಟು ನೋಡಿದಾಗ "ಎಲ್ಲರ ಕನ್ನಡವು" ಕಡೆಗಣಿಸಲ್ಪಟ್ಟರೆ ಕನ್ನಡಿಗರ ಏಳಿಗೆ ಎಂದೆಂದಿಗೂ ಆಗುವುದಿಲ್ಲವೆಂಬ ಅರಿವು ಯಾರಿಗೇ ಆದರೂ ಆಗದೆ ಹೋಗುವುದಿಲ್ಲವೆಂಬುದು ನಮ್ಮ ನಂಬಿಕೆಯಾಗಿದೆ. ಈ ಬರಹವನ್ನು ತೆರೆದ ಮನಸ್ಸಿನಿಂದ ಓದಿದವರಿಗೆ ಸಂಸ್ಕೃತದ ಬಗೆಗಿನ ಕುರುಡು ಅಭಿಮಾನವೂ ಹೋಗುವುದೆಂದು ಕೂಡ ನಮ್ಮ ನಂಬಿಕೆಯಾಗಿದೆ.
ಇಂದು - ಇಂದು ಅರ್ಥ-ಕಾಮಗಳೇ ಧರ್ಮ-ಮೋಕ್ಷಗಳಿಗಿಂತ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡಿವೆ. ಏಕೆಂದರೆ ಅರ್ಥ-ಕಾಮಗಳಲ್ಲಿ ನಾವು ಹಿಂದೆ ಬಿದ್ದಿರುವುದರಿಂದ. ಧರ್ಮ-ಮೋಕ್ಷಗಳ ವಿದ್ಯೆಗೂ ಅರ್ಥ-ಕಾಮಗಳ ವಿದ್ಯೆಗೂ ಇರುವ ವ್ಯತ್ಯಾಸವೇನೆಂದರೆ ಅರ್ಥ-ಕಾಮಗಳ ವಿದ್ಯೆಗಳು ಎಂದಿಗೂ "ಪೂರ್ಣ"ವಾಗಿರುವುದಿಲ್ಲ. ಇವುಗಳಿಗೆ ಪ್ರತಿದಿನವೂ ಹೊಸಹೊಸ ದಿಟಗಳನ್ನು ಸೇರಿಸಬೇಕಾಗಿದೆ. ಇವುಗಳಲ್ಲಿ ಆಗಾಗಗ್ಗೆ ಸಾಮಾನ್ಯ ಜನರೇ ಕೊಡುಗೆಗಳನ್ನು ನೀಡಬೇಕಾಗಿದೆ. ಜನರಿಂದ ಶಾಲೆಗಳೇ ಪಾಠ ಕಲಿಯಬೇಕೆಂಬುದು ಈಗಿದೆ. ಆದ್ದರಿಂದ ಜನರ ನುಡಿ ಇಂದು ಬಹಳ ಮುಖ್ಯವಾಗಿದೆ.
ಆದ್ದರಿಂದ - ಸಂಸ್ಕೃತಮಯವಾದ ನುಡಿಗಿಂತ ಎಲ್ಲರ ಕನ್ನಡವೇ ಇವತ್ತಿನ ದಿವಸ ಮುಖ್ಯವಾಗಿರುವುದು.
ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೪: ಬರೆಯುವುದರ ಗುರಿಯನ್ನು ತಿಳಿದಾಗ ಸಂಸ್ಕೃತದ ಬಳಕೆ ಕಡಿಮೆಯಾಗಲೇಬೇಕು
11 ಅನಿಸಿಕೆಗಳು:
ಉದ್ದೇಶ ಏನೋ ಒಳ್ಳೇದೇ - ಆದ್ರೆ ’ಬೇಕಾಗುವಿಕೆ’ ಅಂತೆಲ್ಲ ಸುತ್ತಿ ಬಳಸಿ ಬರ್ಯೋ ಬದಲು - ಬಳಕೆ ಅಂತ ಬರೆದರೆ ಇನ್ನೂ ನೇರ ಅಲ್ವೇ? ಇಂಗ್ಲಿಷ್ ನಲ್ಲಿ ಯೋಚಿಸಿ, ಕನ್ನಡದಲ್ಲಿ ಬರೆಯೋಕೆ ಹೊರಟಿರೋ ಏನು?
ಹಂಸಾನಂದಿ ಅವರೆ,
ನೀವು "ಬೇಕಾಗುವಿಕೆ"ಯನ್ನು "ಬಳಕೆ" ಎಂದು ಅರ್ಥಮಾಡಿಕೊಂಡಿದ್ದರೆ ಅದು ತಪ್ಪು. ತಾಳ್ಮೆಯಿಂದ ಕುಳಿತು ಯೋಚಿಸಿ ನೋಡಿ: "ಬೇಕಾಗುವಿಕೆ"ಗೂ "ಬಳಕೆ"ಗೂ ಹೆಚ್ಚು-ಕಡಿಮೆಯಿದೆ. ತಿಳಿಯದಿದ್ದರೆ ಮತ್ತೊಂದು ಅನಿಸಿಕೆ ಬರೆಯಿರಿ, ಹೇಳುತ್ತೇವೆ.
"ಬೇಕಾಗುವಿಕೆ" ಅನ್ನೋದಕ್ಕೆ ಇನ್ನೂ ಚಿಕ್ಕ ಪದವನ್ನು ನೀವು ತೋರಿಸಿಕೊಟ್ಟಿದ್ದೇ ಆದರೆ ಅದನ್ನೇ ಹಾಕುವ. ತೊಂದರೆಯಿಲ್ಲ. ಪದ ತುಸು ದೊಡ್ಡದಾಯಿತೆಂಬುದು ನಿಜವಾದರೂ ಅದಕ್ಕೋಸ್ಕರ ಆ ಅರ್ಥವನ್ನೇ ಕೊಡದ ಇನ್ನೊಂದು ಪದವನ್ನು ಹಾಕುವುದು ಸರಿಯಲ್ಲ.
ಇನ್ನು ನಾವು ಇಂಗ್ಲೀಷಿನಲ್ಲಿ ಯೋಚಿಸಿ ಬರೆದಿದ್ದೇವಾ ಎಂದು ನೀವು ಕೇಳಿರುವುದಕ್ಕೆ ಉತ್ತರ - ಇಲ್ಲ. ನಾವು ಕನ್ನಡದಲ್ಲಿ ಯೋಚಿಸುವುದರಿಂದಲೇ ನಮ್ಮ ಬ್ಲಾಗಿನಲ್ಲಿ ಇಷ್ಟೆಲ್ಲ ವಿಷಯಗಳ ಬಗ್ಗೆ ನಾವು ಬರೆಯುವುದಕ್ಕೆ ಆಗುವುದು. ಕನ್ನಡದಲ್ಲಿ ಯೋಚಿಸುವುದರಿಂದಲೇ ನಮ್ಮ ಅನಿಸಿಕೆಗಳನ್ನು ಬರಹದಲ್ಲಿ ಎತ್ತುಚ್ಚೆಹುಯ್ದಂತೆ ಕನ್ನಡದಲ್ಲಿ ಬರೆದುಕೊಂಡುಹೋಗಲಾಗುವುದು. ಕನ್ನಡದಲ್ಲಿ ಯೋಚಿಸುವುದರಿಂದಲೇ ಕನ್ನಡದ ಬಗೆಗೆ ನಮಗೆ ಇಷ್ಟು ಕಾಳಜಿ. ಕನ್ನಡದಲ್ಲಿ ಯೋಚಿಸುವುದರಿಂದಲೇ ಕನ್ನಡದಲ್ಲಿ ಏನೇನು ತೊಂದರೆಗಳಿವೆ, ಏನೇನು ಬದಲಾವಣೆಗಳಾಗಬೇಕಿವೆ ಎಂದು ನಮಗೆ ತಿಳಿಯುವುದು.
ಹಂಸಾನಂದಿಯವರನಿಸಿಕೆಯಂತೆ ನನಗೂ ಅನ್ನಿಸಿತು. ಸಾಲುಗಳು ಇಂಗ್ಲಿಶಿನಿಂದ ನುಡಿಮಾರಿದಂತೆ ಕಂಡವು.
ಅರ್ಥಮಾಡಿಕೊಳ್ಳದೆ = ಅರಿಯದೇ, ತಿಳಿಯದೇ
ಸಂಸ್ಕೃತಮಯ = ಸಂಸ್ಕೃತ-ತುಂಬಿದ
ಕೊಡುವ ಅವಶ್ಯಕತೆಯಿಲ್ಲ = ಕೊಡಬೇಕಿಲ್ಲ, ಕೊಡುವ ಬೇಹವಿಲ್ಲ
ಉಪಯೋಗ = ಬಾಳಿಕೆ, ಬಳಕೆ
ಉಪಯೋಗಿಸು = ಬಳಸು
ಹೀಗೆ ಸಂಸ್ಕೃತದ ಮುಂತಾದ
ಇನ್ನೂ ಉರ್ದುವಿನ ಬದಲಾವಣೆ(ಮಾರ್ಪಾಟು), ಕಸಬು(ಕೆಲಸ/ಗೇಯ್ಮೆ) ಮುಂತಾದ
ಹಲವು ಹೊರನುಡಿಯ ಪದಗಳನ್ನು ಬಿಟ್ಟು ಅವುಗಳಿಗೆ ಕನ್ನಡದ್ದೇ ಪದಗಳನ್ನು ಬಳಸಬಹುದಿತ್ತು ಎಂದು ಅನ್ನಿಸಿತು.
ನಿಮ್ಮ ಬೆಂಬಲದ ಶಂಕರಬಟ್ಟರ ಹೊಸ ಪದನೆರಿಕೆಯಂತೆ
ಬೇಕಾಗುವಿಕೆ = ಬೇಹ
ಇನ್ನೂ ಕೆಲವು ಪದಗಳಿಗೆ ಆ ಪದನೆರಿಕೆಯನ್ನು ತಕ್ಕಪದಗಳಿವೆ.
ಒಳ್ಳೆಯ ಸಂಗತಿಯನ್ನು ಮುಂದಿಡುತ್ತಿರುವುದಕ್ಕೆ ನನ್ನಿ. ಬರಹದ ಸೊಲ್ಲರಿಮೆ ಮತ್ತು ಪದಬಳಕೆಯ ಬಗ್ಗೆಯ ಹೇಳಿಕೆಗೆ ಇರುಸುಮುರುಸು ಪಡಬೇಡಿರಿ.
ಒದವಿ ನೆನೆಯುತ್ತಾ
ಮಹೇಶ
ಮಹೇಶ ಅವರಿಗೆ ಧನ್ಯವಾದಗಳು.
ಕನ್ನಡದಿಂದ ಇರುವ ಸಂಸ್ಕೃತ ಪದಗಳನ್ನೆಲ್ಲ ತೆಗೆದುಹಾಕಬೇಕೆಂಬುದು ನಮ್ಮ ವಾದವಲ್ಲವೇ ಅಲ್ಲ. ಯಾವ ಪದಗಳನ್ನು ಕನ್ನಡದ ನಾಲಿಗೆಯು ಈಗಾಗಲೇ ಉಲಿಯುತ್ತಿದೆಯೋ ಅವುಗಳು ಎಲ್ಲಿಂದ ಬಂದಿದ್ದರೂ ಕನ್ನಡದ ಪದಗಳೇ.
ನಮ್ಮ ಬರಹಗಳನ್ನು ಒಮ್ಮೆ ತಾಳ್ಮೆಯಿಂದ ಓದಿ.
ಹೆಚ್ಚು ಉದ್ದುವಾಗಿಸುವುದಿಲ್ಲ
ಅವಶ್ಯಕತೆಯಿಲ್ಲ, ಅರ್ಥ ಇವು ಕನ್ನಡ ನಾಲಗೆಗೆ ಉಲಿಯಲು ತೊಡರಾದವು.
ಹಾಗೆಯೇ ಬೇಕಾಗುವಿಕೆ ಮುಂತಾದವನ್ನು ಹೆಚ್ಚು ಮಂದಿ ಬಳಸಿದಂತೆ ಕಾಣುವುದಿಲ್ಲ.
ಕನ್ನಡದಿಂದ ಯಾವ ಸಂಸ್ಕ್ರುತಪದಗಳನ್ನು ತೆಗೆಯಬೇಕು ತೆಗೆಯಬಾರದು ಎಂದು ತಿಳಿಸುವ ಅರಿಮೆಗಳನ್ನು ಗಮನಿಸಿಕೊಳ್ಳುವೆನು. ಬರಿಯ ಉಲಿಕೆಯೊಂದೇ ಅದಕ್ಕೆ ಸಲುವು ಎಂದರೆ ಅದು ತಕ್ಕುದ್ದಲ್ಲ.
ಇಮಗೆ ತೊಡಕಾಗಿದ್ದರೆ ಮನ್ನಿಸಿರಿ.
ಒದವಿ ನೆನೆಯುತ್ತಾ
ನನ್ನಿ
ಮಹೇಶ
ಈ ಮಹೇಶ ಮತ್ತು ಇನ್ನೂ ಕೆಲವರು ಸಂಪದದಲ್ಲಿ ತಮಿಳರ ತರ ಕೊಂಗಬುದ್ಧಿ ತೋರಿಸುತ್ತಿದ್ದಾರೆ. ಇವರಿಗೆ ಕನ್ನಡ ಅಂದ್ರೆ ಹಳೆಗನ್ನಡ ಅನ್ನೋ confusion ಇದೆ. ಕನ್ನಡಕ್ಕೆ ಬೇರೆ ಯಾವ ಭಾಷೆಯಿಂದಲೂ ಪದಗಳನ್ನು ತೆಗೆದುಕೊಳ್ಳಬಾರದು ಎಂಬ ಮೂಢತನ ಇದೆ. Just don't care about these fools.
ಮಹೇಶ ಅವರೆ,
"ಅವಶ್ಯಕತೆ" ಮತ್ತು "ಅರ್ಥ" ಗಳನ್ನು ಕನ್ನಡಿಗರು "ಅವಶ್ಕತೆ" ಮತ್ತು "ಅರ್ತ" ಎಂದು ಉಲಿಯುತ್ತಾರೆ. ಈ ಪದಗಳನ್ನು ಅರಿಯದ ಕನ್ನಡಿಗರು ಕಡಿಮೆಯಿದ್ದಾರೆ. ಇವುಗಳನ್ನು ಬರೆಯುವಾಗ ಸ್ಪೆಲಿಂಗಿನ ತೊಂದರೆ ಬರುತ್ತದೆಯೆನ್ನುವುದು ನಿಜವಾದರೂ ಇದನ್ನು ಜನರು ತಿಳಿದೇ ಇಲ್ಲವೆನ್ನುವುದು ಒಂದು ರೀತಿಯ ಕುರುಡಾದೀತು.
ಬೇಕಾಗುವಿಕೆ-ಯೆನ್ನುವುದನ್ನು ಹೆಚ್ಚು ಬಳಸುವುದಿಲ್ಲವೆನ್ನುವುದು ಸರಿ. ಆದರೆ ಅರ್ಥವಾಯಿತು ತಾನೆ? ಅಷ್ಟೇ ಸಾಕು.
ಕನ್ನಡದಲ್ಲಿ ಹೊಸ ಪದಗಳನ್ನು ಬಳಸುವುದರ ಬಗ್ಗೆ ಮುಂದೆ ಇದೇ ಸರಣಿಯಲ್ಲಿ ಬರಹವೊಂದು ಬರುತ್ತದೆ, ಓದಿ. ಅದರಲ್ಲಿ ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರವಿದೆ.
confusion = ಗೊಂದಲ
"Just don't care about these fools."
ಈ ಹೆಡ್ಡರನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿರಿ.( ಇದು ಹೊಸಗನ್ನಡದ ಸಾಲು )
:)
ಏನ್ಗುರು, ಅವರು ವಿಶಯಕ್ಕೆ ನಂಟಲ್ಲದಂತೆ ಹಳಿತದ ಸಾಲುಗಳನ್ನು ಹಾಕಿದ್ದಾರೆ. ಅದು ನಿಮ್ಮ ಅಂಕೆಗೆ ಬಿಟ್ಟಿದ್ದು. ನನ್ನ ಅನಿಸಿಕೆಗಳು ಹಿಡಿಸದೇ ಇದ್ದಲ್ಲಿ, ಅವನ್ನು ತೆಗೆದುಹಾಕುವ ಅನುವು ನಿಮಗೆ ಇದೆ.
ನಿಮ್ಮ ಪದಗಳ ಬಳಕೆಯ ಬರಹವನ್ನು ಕಾಯುತ್ತಿರುವೆನು.
ನಮ್ಮ ಅನಿಸಿಕೆಯನ್ನು ಇಡುವ ಅನುವು ಇಲ್ಲಿದೆ ಎಂದು ಅಂದುಕೊಂಡು ಅನಿಸಿಕೆಯನ್ನು ಬರೆದುದು. ಹೆಡ್ಡತನದ ಮಾತುಗಳಾಗಿದ್ದರೆ ದಯವಿಟ್ಟು ಏನೂ ಲೆಕ್ಕಿಸದೆ ಅಳಿಸಿ ಹಾಕಿರಿ.
ನನ್ನಿ.
ಏನಾದರೂ ಹೆಚ್ಚಿನ ವಿದ್ವತ್ತಿರುವ ವಿಷಯಗಳ ಬಗ್ಗೆ ಬರೆದರೆ ಸಾಕು, ಕೆಲವರಿಗೆ ಅದು ಇಂಗ್ಲೀಷಿನಿಂದ ಅನುವಾದಗೊಂಡಿರಬೇಕು ಎನಿಸುತ್ತದಲ್ಲ, ಇದೇತಕ್ಕೆ ಗುರು? ಇದು ಒಂದು ರೀತಿಯ ಕೀಳರಿಮೆನಾ?
ಅವಶ್ಯಕತೆಗೆ ಕನ್ನಡದಲ್ಲಿ ಹವಸ್ಸು ಅಂತ ಅನ್ನಬಹುದಲ್ಲವೇ?...
ನನಗೊಂದು ಶಂಕೆ ಹವಸ್ಸನ್ನೋ ಪದ ನಮ್ಮ ಅಜ್ಜಿ ಬಾಯಿಂದ ಕೇಳುತ್ತಿದ್ದೆ.. ಅದು ಖರೆ ಕನ್ನಡ ಪದ ಅನ್ನೋದು ಖಾತ್ರಿಯಾಗಬೇಕಿದೆ.
ಮಹೇಶ ನೀವಿದನ್ನ ತಿಳಿಸಬಹುದು ಅಂತ ತಿಳಿದೀನಿ.
ನಿಮ್ಮ,
ಗಿರೀಶ ರಾಜನಾಳ.
ಗಿರೀಶ ರಾಜನಾಳರೇ
ಒಂದೊಂದು ಒರೆಯ ಬಗ್ಗೆಯ ಮಾತುಕತೆಯನ್ನು ಸಂಪದದಲ್ಲಿ ನಡೆಸೋಣ. ಇಲ್ಲಿ ಅದಕ್ಕೆ ತಕ್ಕ ಇಕ್ಕೆ ಎಂದು ನನಗನ್ನಿಸುವುದಿಲ್ಲ
ಹವಸ್ಸು ಇದು ಅರಬ್ಬಿ ಪದವೆಂದು ವೆಂಕಟಸುಬ್ಬಯ್ಯನವರ ಪ್ರಿಸಂ ಪದನೆರಕೆ ಹೇಳುವುದು
೫. ಹವ್ಯಾಸ (ಅರ. ಹವಸ್) (ನಾ) ೧ ಹೆಬ್ಬಯಕೆ, ಉತ್ಕಟವಾದ ಅಪೇಕ್ಷೆ ೨ ಚಟ, ಗೀಳು ೩ ಉತ್ಸಾಹ, ಆಸಕ್ತಿ ೪ ಅಭ್ಯಾಸ, ರೂಢಿ
ಹವ್ಯಾಸ ಎಂಬ ಒರೆಯು ಹವಸ್ ಎಂಬ ಅರಬ್ಬಿ ಪದದಿಂದ ಬಂದಿದೆಯಂತೆ.
ಬೇಕು,ಬೇಡಿಕೆ,ಬೇಕಾದುದು,ಬೇಳು,ಬೇಹ ಇವೆಲ್ಲ ಅವಶ್ಯಕತೆಗೆ ಬಳಸಬಹುದೇನೋ!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!