ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ನಿಮ್ಮ ಮುಂದಿಡುತ್ತಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ-- ಸಂಪಾದಕ, ಏನ್ ಗುರು |
ಇಲ್ಲಿಯವರೆಗೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ - ೧: ಒಳ್ಳೆಯ ಕನ್ನಡವೆಂದರೆ ಸಂಸ್ಕೃತಮಯವಾದದ್ದು ಎಂಬ ಬರೆಯದ ಕಟ್ಟಳೆ
ಕನ್ನಡದಲ್ಲಿ ಹೆಚ್ಚು ಸಂಸ್ಕೃತ ಪದಗಳನ್ನು ಬಳಸದಿದ್ದರೆ ಅದು ಒಳ್ಳೆಯ ಕನ್ನಡವಲ್ಲವೆಂಬ ಬರೆಯದ ಕಟ್ಟಳೆಯಿಂದ ಇವತ್ತಿನ ದಿವಸ ಏನೇನು ತೊಂದರೆಗಳಾಗುತ್ತಿವೆಯೆಂದು ನೋಡೋಣ. ಈ ತೊಂದರೆಗಳು ಹೀಗೆಯೇ ಮುಂದುವರೆದರೆ ಕನ್ನಡಿಗರಲ್ಲಿ ಈಗಾಗಲೇ ಕಡಿಮೆಯಿರುವ ಒಗ್ಗಟ್ಟು, ಕಲಿಕೆ ಮತ್ತು ದುಡಿಮೆಗಳು ಪೂರ್ತಿಯಾಗಿ ಅಳಿಸಿಹೋಗುವುದರಿಂದ ಈ ತೊಂದರೆಗಳು ಯಾವುವೆಂದು ತಿಳಿದುಕೊಳ್ಳುವುದು, ಮತ್ತು ಇವುಗಳನ್ನು ಇಲ್ಲವಾಗಿಸುವುದು ಬಹಳ ಮುಖ್ಯ.
ನುಡಿಯೆಂಬುದಕ್ಕೆ ಹೊರಮಾತು ಮತ್ತು ಒಳಮಾತುಗಳೆಂಬ ಎರಡು ಉಪಯೋಗಗಳಿರುತ್ತವೆ. ಹೊರಮಾತೆಂದರೆ ಇಬ್ಬರು ಇಲ್ಲವೇ ಹೆಚ್ಚು ಜನರು ಸೇರಿದಾಗ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು. ಒಳಮಾತೆಂದರೆ ವ್ಯಕ್ತಿಯೊಬ್ಬನ ಚಿಂತನೆ ಮತ್ತು ಮಾತಿನ ನಡುವಿನ ಸೇತುವೆ. ತಿಳುವಳಿಕಸ್ತರ ನುಡಿ ಹಾಗೂ ಬರಹಗಳು ಸಂಸ್ಕೃತದಿಂದ ಅತಿ ಹೆಚ್ಚು ಎರವಲು ಪದಗಳನ್ನು ಪಡೆದುಕೊಂಡು ಕನ್ನಡಿಗರಿಂದಲೇ ಬಹುದೂರ ಹೊರಟುಹೋಗಿರುವುದರಿಂದ ಕನ್ನಡಿಗರೆಲ್ಲರ ಹೊರಮಾತು ಮತ್ತು ಒಳಮಾತುಗಳೆರಡಕ್ಕೂ ಕುತ್ತು ಬಂದಿದೆ. ಎಂದರೆ ಸಾಮಾಜಿಕ ತೊಂದರೆಗಳು ಮತ್ತು ವೈಯಕ್ತಿಕ ತೊಂದರೆಗಳು - ಎಂಬ ಎರಡು ರೀತಿಯ ತೊಂದರೆಗಳು ಕೂಡ ಹುಟ್ಟಿಕೊಂಡಿವೆ. ಆದರೆ ಈ ತೊಂದರೆಗಳನ್ನು ಚೆನ್ನಾಗಿ ಅರಿತುಕೊಳ್ಳಲು ಇವುಗಳನ್ನು ಮಾತಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಬರಹಕ್ಕೆ ಸಂಬಂಧಿಸಿದ ತೊಂದರೆಗಳು ಎಂದು ಬೇರ್ಪಡಿಸಿಕೊಳ್ಳುವುದೇ ಒಳ್ಳೆಯದೆಂದು ನಮ್ಮ ಅನಿಸಿಕೆಯಾಗಿದೆ. ಇದು ಹೀಗೇಕೆಂದರೆ ಸಂಸ್ಕೃತದ ಪ್ರಭಾವದಿಂದ ಮಾತು ಮತ್ತು ಬರಹಗಳೆರಡೂ ಹಾದಿ ತಪ್ಪಿರುವುದರಿಂದ ಇವುಗಳಲ್ಲಿ ಸಾಮಾಜಿಕ ಮತ್ತು ವೈಯಕ್ತಿಕ ತೊಂದರೆಗಳೆರಡರ ಗುರುತುಗಳೂ ಸುಲಭವಾಗಿ ಸಿಗುತ್ತವೆ.
ಮಾತಿಗೆ ಸಂಬಂಧಿಸಿದ ತೊಂದರೆಗಳು
ಇವತ್ತಿನ ದಿವಸ ಹೆಚ್ಚು ಸಂಸ್ಕೃತವನ್ನು ಬಳಸಿ ಮಾತನಾಡುವವರ ನುಡಿಗಷ್ಟೇ ಅಲ್ಲ, ಅವರಿಗೇ ಹೆಚ್ಚಿನ ಗೌರವವಿದೆ. ಹಿಂದೆ ಸಂಸ್ಕೃತದ ಪದಗಳನ್ನು ಉಪಯೋಗಿಸಿ ತಿಳುವಳಿಕಸ್ತರು ಮಾತನಾಡುತ್ತಿದ್ದರೆ ಅವರ ಮಾತಿನಲ್ಲಿ ಧರ್ಮ ಇಲ್ಲವೇ ಮೋಕ್ಶಗಳ ವಿಷಯಗಳಿರುತ್ತಿದ್ದವೆಂದು ಅವರಿಗೆ ಗೌರವವನ್ನು ತೋರಿಸುವುದು ಸರಿಯಾಗಿತ್ತೆಂದು ಒಪ್ಪಿಕೊಂಡರೂ ಇವತ್ತಿನ ದಿವಸ ಬರೀ ಸಂಸ್ಕೃತದ ಪದಗಳನ್ನು ಉಪಯೋಗಿಸುವವರೇ ಗೌರವಕ್ಕೆ ಪಾತ್ರರಾಗುತ್ತಾರೆ. ಇವತ್ತಿನ ದಿವಸ "ಕನ್ನಡಿ" ಎನ್ನುವ ಬದಲು "ದರ್ಪಣ" ಎನ್ನುವವರಿಗೆ ಹೆಚ್ಚಿನ ಗೌರವವಿದೆ. ಇವೆರಡು ಪದಗಳಲ್ಲಿ ಯಾವುದೇ ಹೆಚ್ಚು-ಕಡಿಮೆಯಿಲ್ಲದಿದ್ದರೂ ಇವುಗಳಲ್ಲಿ ಮೊದಲನೆಯದನ್ನು ಆಡಿದವನಿಗಿಂತ ಎರಡನೆಯದನ್ನು ಆಡಿದವನು ಹೆಚ್ಚು ಬುದ್ಧಿವಂತನೆನಿಸಿಕೊಳ್ಳುತ್ತಾನೆ. ಇದರಿಂದ ಜನರಲ್ಲಿ ಬರೀ ಸಂಸ್ಕೃತದ ಪದಗಳ ಬಳಕೆಯ ಆಧಾರದ ಮೇಲೆ "ಮೇಲು"-"ಕೀಳು" ಎಂಬ ಒಡಕುಂಟಾಗಿದೆ. ಅಷ್ಟೇ ಅಲ್ಲದೆ, ಪದಗಳು ಮತ್ತು ಬರಹಗಳು ಗುರುತಿಸುವ ತತ್ವಗಳಿಗೆ ನಮ್ಮಲ್ಲಿರಬೇಕಾದ ಗೌರವವು ಮತ್ತೆಲ್ಲಿಗೋ ಹೊರಟುಹೋಗಿದೆ. ಹಾಗೆಯೇ ಧರ್ಮ-ಮೋಕ್ಷಗಳ ವಿಷಯವು ಕೂಡ ಜನರಲ್ಲಿ ಹರಡಬೇಕಾದಷ್ಟು ಹರಡದೆ ಇರುವುದಕ್ಕೂ ಜನಪ್ರಿಯವಾದ ಕನ್ನಡದಲ್ಲಿ ಅವುಗಳನ್ನು ಜನರ ಮುಂದೆ ಇಡದೆ ಇರುವುದೇ ಒಂದು ಕಾರಣವಾಗಿಹೋಗಿದೆ.
ಅಲ್ಲದೆ, ಸಾಮಾನ್ಯ ಜನರಿಗೆ ತಮ್ಮ ನುಡಿಯೇ ಕೀಳೆಂದು ಅನಿಸಿಬಿಟ್ಟಿದೆ. ಅದರಲ್ಲಿರುವ ಪದಗಳನ್ನು ಒಂದೊಂದಾಗಿ ತೆಗೆದುಹಾಗಿ ಅವುಗಳ ಬದಲಾಗಿ ಸಂಸ್ಕೃತದ ಪದಗಳನ್ನು ಆಡದಿದ್ದರೆ ತಮ್ಮ ನುಡಿಯು ಎಂದಿಗೂ ಕೀಳಾಗಿಯೇ ಉಳಿಯುತ್ತದೆಯೆಂಬ ಹೆದರಿಕೆ ಸಾಮಾನ್ಯಜನರಿಗೆ ಬಂದುಬಿಟ್ಟಿದೆ. ಇದನ್ನು ಮಾಡುವ ಪ್ರಯತ್ನ ಪಟ್ಟರೂ ಸಂಸ್ಕೃತದ ಪದಗಳನ್ನು "ಚೆನ್ನಾಗಿ" - ಎಂದರೆ ಸಂಸ್ಕೃತದಲ್ಲಿ ಉಲಿಯುವಂತೆ - ಉಲಿಯಲಾಗದೆ ಹೋಗುತ್ತಾರೆ, ಅದಕ್ಕಾಗಿ ಮತ್ತೊಮ್ಮೆ ಬೈಸಿಕೊಳ್ಳುತ್ತಾರೆ. ಇವೆಲ್ಲದರಿಂದ ಸಾಮಾನ್ಯ ಕನ್ನಡಿಗರಿಗೆ ತಮಗೆ ಮಾತನಾಡುವಂತಹ ಸಾಮಾನ್ಯ ಕೆಲಸವೇ ಸರಿಯಾಗಿ ಬರುವುದಿಲ್ಲವೇನೋ ಎಂಬ ಕೀಳರಿಮೆ ಬಂದುಬಿಟ್ಟಿದೆ. ಮತ್ತೊಂದೇನೆಂದರೆ ಕನ್ನಡಿಗರಿಗೆ ತಮಗಾಗುವ ಅನುಭವಗಳನ್ನೂ ತಮ್ಮ ಅನಿಸಿಕೆ ಮತ್ತು ಚಿಂತನೆಗಳನ್ನು ಕನ್ನಡದ ಪದಗಳಲ್ಲಿ ತಿಳಿಸುವ ಯೋಗ್ಯತೆಯಿದ್ದರೂ ಅವುಗಳನ್ನು ತಿಳಿಸಲು ಸಂಸ್ಕೃತದ ಪದಗಳನ್ನು ಉಪಯೋಗಿಸದಿದ್ದರೆ ತಮ್ಮ ಅನಿಸಿಕೆ-ಅನುಭವ-ಚಿಂತನೆಗಳೇ ಕೀಳೆಂದೂ ತಮ್ಮ ನುಡಿಯೇ ಕೀಳೆಂದೂ ಕೊನೆಗೆ ತಾವೇ ಕೀಳೆಂದೂ ಯಾರಾದರೂ ಬೈದಾರು ಎಂಬ ಹೆದರಿಕೆ ಹುಟ್ಟಿಕೊಂಡುಬಿಟ್ಟಿದೆ. ಇದರಿಂದ ಕನ್ನಡಿಗರಿಗಿರುವ ಸಹಜವಾದ ತಿಳುವಳಿಕೆಯು ಬೆಳಕಿಗೆ ಬರದೆ ಹೋಗಿದೆ.
ಬರಹಕ್ಕೆ ಸಂಬಂಧಿಸಿದ ತೊಂದರೆಗಳು
ಕನ್ನಡದ ಬರಹದಲ್ಲಂತೂ ಸಂಸ್ಕೃತದ ಬಳಕೆ ತಿಳುವಳಿಕಸ್ತರ ಆಡುಗನ್ನಡಕ್ಕಿಂತ ಬಹಳ ಹೆಚ್ಚಾಗಿಯೇ ಇದೆ. ಇದರಿಂದ ಸಾಮಾನ್ಯ ಜನರಿಗೆ ಬರೆದಿದ್ದೆಲ್ಲವೂ ದೂರವನಿಸಿಬಿಟ್ಟಿದೆ. "ಮನೆ ಸಾಲ" ಎನ್ನುವ ಬದಲು "ಗೃಹಋಣ"ವೆಂದು ಬರೆದಿದ್ದರೆ ಅದು ಏನೆಂದೇ ಅವರಿಗೆ ತಿಳಿಯುವುದಿಲ್ಲ. ತಮಗೆ ಎಷ್ಟೇ ತಿಳುವಳಿಕೆ, ಕಲೆಗಳಿದ್ದರೂ ಅವುಗಳನ್ನು ಬರಹದಲ್ಲಿ ದಾಖಲಿಸುವುದು ಒಂದು ಬ್ರಹ್ಮವಿದ್ಯೆಯೇ ಎನಿಸಿಬಿಟ್ಟಿದೆ. ಬರಹವೆನ್ನುವುದು ಕೆಲವರಿಗೆ ಮಾತ್ರವೇ ಮೀಸಲು ಎಂದು ಸಾಮಾನ್ಯ ಜನರಿಗೆ ಅನಿಸಿಬಿಟ್ಟಿದೆ. ಇದರಿಂದ ಬರಹವೆನ್ನುವುದು ಕನ್ನಡಿಗರಲ್ಲಿ ಹೆಚ್ಚು ಚಾಲ್ತಿಯಲ್ಲೇ ಇಲ್ಲ. ಇದು ನಮ್ಮ ಏಳ್ಗೆ ಎಷ್ಟಾಗಿದೆಯೆನ್ನುವುದರ ನೇರವಾದ ಗುರುತಾಗಿದೆ.
ಹಿಂದೆ ಬರಹವೆನ್ನುವುದು ನಿಜಕ್ಕೂ ಕೆಲವರ ಸೊತ್ತೇ ಆಗಿತ್ತು. ಆದರೆ ಈಗ ಎಲ್ಲರಿಗೂ ಬರಹವೆನ್ನುವುದು ಬರಲೇಬೇಕಿದೆ. ಬರಹವಿಲ್ಲದೆ ಯಾವುದೇ ಹೆಚ್ಚಿನ ಕೆಲಸಗಳು ಮನುಷ್ಯನ ಕೈಯಲ್ಲಿ ಆಗುವುದಿಲ್ಲ. ಬರಹ ಬಾರದವನು ತನ್ನ ಬಾಳಿನಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲವೆಂಬ ಪರಿಸ್ಥಿತಿ ಇವತ್ತಿನ ದಿವಸ ಇದೆ. ಹೀಗಿರುವಾಗ ಕನ್ನಡಿಗರು ಬರೆಯುವುದೇ ಕಡಿಮೆಯಾಗಿರುವುದು ಒಂದು ದೊಡ್ಡ ತೊಂದರೆ. ಬರಹದ ಕನ್ನಡವು ಸಂಸ್ಕೃತದ ಕಾರಣದಿಂದ ಎಲ್ಲರ ಕನ್ನಡಕ್ಕಿಂತ ಬಹಳ ದೂರ ಹೊರಟುಹೋಗಿರುವುದರಿಂದ ಕನ್ನಡವನ್ನು ಕಲಿಯುವುದು ಮತ್ತು ಕಲಿಸುವುದು ಬಹಳ ಕಷ್ಟದ ವಿಷಯಗಳಾಗಿಹೋಗಿವೆ. ಜನರಿಗೆ ವಿಷಯಗಳನ್ನು ಹೇಳಿಕೊಡುವುದೇ ಕಲಿಕೆಯ ಗುರಿ; ಆದರೆ ವಿಷಯಗಳನ್ನು ಕಲಿಯುವ ಮುನ್ನ ಹೊಸದೊಂದು ಭಾಷೆಯ ಪದಗಳನ್ನು ಕಲಿಯಬೇಕು, ಇಲ್ಲವೇ ಉರು ಹೊಡೆಯಬೇಕು ಎಂದಾಗಿರುವುದರಿಂದ ಕಲಿಕೆ-ಕಲಿಯುವಿಕೆಗಳಲ್ಲಿ ಬಹಳ ಸಮಯ ಮತ್ತು ಬೆವರಿಳಿಕೆ ದಂಡವಾಗುತ್ತದೆ. ಇಲ್ಲೂ ಕೂಡ ಎಷ್ಟೇ ಪ್ರಯತ್ನಿಸಿದರೂ ಬರೆದಂತೆ ಉಲಿಯುವುದಂತೂ ಅಸಾಧ್ಯವೆಂಬಂತೆ ಆಗಿಹೋಗಿದೆ. ಇದೇಕೆಂದರೆ ಸಂಸ್ಕೃತದ ಪದಗಳಲ್ಲಿ ಕನ್ನಡದ ನಾಲಿಗೆಯ ಮೆಲೆ ಹೊರಳದಂತಹ ಬಹಳ ಉಲಿಗಳು ಇರುವುದರಿಂದ (ಉದಾಹರಣೆಗೆ ಮಹಾಪ್ರಾಣಗಳು, ಋ, ಮುಂತಾದುವು).
ಜ್ಞಾನ-ವಿಜ್ಞಾನಗಳ ಬರಹಗಳನ್ನು ಬರೆಯುವವರಿಗೆ ಮತ್ತು ಹೊಸದನ್ನು ಕಂಡುಹಿಡಿಯುವವರಿಗೆ ವಿಷಯಕ್ಕಿಂತ ಅವುಗಳನ್ನು ಗುರುತಿಸುವ ಸಂಸ್ಕೃತದ ಪದಗಳನ್ನು ಹುಡುಕುವುದರಲ್ಲೇ ಸಮಯ ಹಾಳಾಗುತ್ತದೆ. ಕನ್ನಡಿಗರಿಗೆ ಎಷ್ಟು ಪ್ರಯತ್ನ ಪಟ್ಟರೂ ಬೇಕಾದಷ್ಟು ಸಂಸ್ಕೃತದ ಪದಗಳನ್ನು ಹುಟ್ಟಿಸಲು ಆಗುವುದೇ ಇಲ್ಲ, ಏಕೆಂದರೆ ಅದು ಮೊದಲನೆಯಾದಾಗಿ ನಮ್ಮ ನುಡಿಯೇ ಅಲ್ಲ. ಆದರೂ ಸಂಸ್ಕೃತದ ಪದಗಳನ್ನು ಹುಟ್ಟಿಸುವುದೇ "ಶ್ರೇಷ್ಠ" ಎಂದು ಕೊಂಡು ಸಂಸ್ಕೃತದ ಪದಗಳನ್ನು ಹುಡುಕುವುದರಲ್ಲಿ ಸಮಯ ದಂಡ ಮಾಡುತ್ತಾರೆ. ಬಹಳ ಸುಲಭವಾಗಿ ಹುಟ್ಟಿಸಬಹುದಾದ ಕನ್ನಡದ ಪದಗಳು ಅವರಿಗೆ "ಕೀಳು" ಎನಿಸಿಬಿಡುತ್ತದೆ. ಇಷ್ಟೆಲ್ಲ ಕಷ್ಟ ಪಟ್ಟು ಸಂಸ್ಕೃತದ ಪದಗಳನ್ನು ಹುಟ್ಟಿಸಿ ಬರೆದರೂ ಅದು ಸಾಮಾನ್ಯ ಜನರಿಗೆ ತಲುಪುವುದೇ ಇಲ್ಲ, ಏಕೆಂದರೆ ಅವರಿಗಂತೂ ಸಂಸ್ಕೃತದ ಅರಿವು ಇನ್ನೂ ಕಡಿಮೆಯಿರುತ್ತದೆ.
ಮತ್ತೂ ಒಂದೇನೆಂದರೆ ಕನ್ನಡದ ಬರಹಗಳಲ್ಲಿ ಸಂಸ್ಕೃತದ ಪ್ರಭಾವದಿಂದ ಎಲ್ಲರಿಗೂ ತಿಳಿಯಬೇಕಾದ ವಿದ್ಯೆಗಳ ಕಡೆಗಣಿಕೆ ನಡೆಯುತ್ತಿದೆ. ಹಿಂದೆ ಸಂಸ್ಕೃತದಲ್ಲಿ ಎಲ್ಲರಿಗೂ ತಿಳಿಯದಿದ್ದರೂ ನಡೆಯುತ್ತದೆ ಎಂಬ ವಿಷಯಗಳೇ ಇದ್ದುದರಿಂದ (ಮತ್ತು ಈಗಲೂ ಅವೇ ಇರುವುದರಿಂದ) ಅಭ್ಯಾಸಬಲದಿಂದ ಅದೇ ವಿಷಯಗಳ ಬಗ್ಗೆಯೇ ಕನ್ನಡದಲ್ಲೂ ಹೆಚ್ಚು ಬರಹಗಳನ್ನು ಬರೆಯಲಾಗುತ್ತದೆ. ಹೀಗಾಗಿ ಧರ್ಮ-ಮೋಕ್ಶಗಳ ಬಗೆಗಿನ ಸಾಹಿತ್ಯವೇ ಕನ್ನಡದಲ್ಲಿ ಹೆಚ್ಚಾಗಿಹೋಗಿದೆ. ಎಲ್ಲರಿಗೂ ಬೇಕಾದ ಅರ್ಥ-ಕಾಮಗಳ ಸಾಹಿತ್ಯವು ಬಹಳ ಕಡಿಮೆಯಾಗಿಹೋಗಿದೆ. ಈ ಕಾರಣದಿಂದಲೂ ಕೂಡ ಕನ್ನಡದ ಬರಹವು ಜನಪ್ರಿಯವಾಗದೆ ಹೋಗಿದೆ.
ತೊಂದರೆಗಳ ಬುಗ್ಗೆಯಾಗಿರುವ ಸಂಸ್ಕೃತದ ಒಲವು
ಒಟ್ಟಿನಲ್ಲಿ ಸಂಸ್ಕೃತವನ್ನು ಇಷ್ಟರ ಮಟ್ಟಿಗೆ ನಮ್ಮ ತಲೆಯಮೇಲೆ ಕೂಡಿಸಿಕೊಂಡಿರುವುದರಿಂದ ಕನ್ನಡಿಗರು ಕನ್ನಡದ ನಿಜವಾದ ಸ್ವರೂಪದ ಬಗ್ಗೆ ಕತ್ತಲಲ್ಲೇ ಉಳಿದುಬಿಟ್ಟಿದ್ದಾರೆ, ಮತ್ತು ಮುಂದೆಯೂ ಉಳಿದುಕೊಳ್ಳುವ ಸಾಧ್ಯತೆಯಿದೆ. ಇದರಿಂದಲೇ ಬಹುಪಾಲು ಕನ್ನಡಿಗರು ತಮ್ಮ ಎದೆಯೊಳಗಿಂದ ಬರುವ ನುಡಿಯನ್ನು ಕೀಳೆಂದು ತಿಳಿದುಕೊಂಡಿರುವುದು. ಇದರಿಂದಲೇ ಕನ್ನಡವು ಸಂಸ್ಕೃತದಷ್ಟು ಆರ್ಪಿಲ್ಲದ ನುಡಿಯೆಂದು ತೋರುವುದು. ಇದರಿಂದಲೇ ಕನ್ನಡಕ್ಕೆ ಶಕ್ತಿಯಿಲ್ಲವೆಂದು ತೋರುವುದು. ಸಂಸ್ಕೃತಮಯವಾದ ಕನ್ನಡವೇ "ಒಳ್ಳೆಯ", "ಸರಿಯಾದ", "ಸ್ಪಷ್ಟವಾದ", "ಮೇಲ್ಮೆಯ" ಕನ್ನಡವೆಂದು ತಿಳುವಳಿಕಸ್ತರು ತಿಳಿದಿರುವುದರಿಂದಲೇ ನಿಜವಾದ ಕನ್ನಡದ ಸೊಲ್ಲರಿಮೆಗಳನ್ನು ಯಾರೂ ಬರೆಯಲು ಹೋಗಿಲ್ಲ. ಹೀಗಿರುವುದರಿಂದಲೇ ಜನರು ಹೊಸ ಪದಗಳನ್ನು ಹುಟ್ಟಿಸಲು ಹೊರಡುವಾಗ ಕನ್ನಡದಿಂದ ದೂರ ಹೋಗಿ ಸಂಸ್ಕೃತದ ಮೊರೆಹೋಗುವುದು, ಅದರಲ್ಲಿ ಪದಗಳನ್ನು ಹುಟ್ಟಿಸಲು ಇನ್ನೂ ಕಷ್ಟವಾಗಿ ಪದಗಳನ್ನು ಹುಟ್ಟಿಸುವ ಶಕ್ತಿಯನ್ನೇ (ಮತ್ತು ಆ ಮೂಲಕ ಯಾವುದೇ ವಿಷಯದ ಬಗ್ಗೆ ಆಳವಾಗಿ ಚಿಂತಿಸುವ ಶಕ್ತಿಯನ್ನೇ) ಕಳೆದುಕೊಂಡಿರುವುದು. ಕನ್ನಡಕ್ಕೆ ಯಾವ ಸಂಸ್ಕೃತದಿಂದ ಶಕ್ತಿ ಬರುತ್ತಿದೆಯೆಂದು ಜನರು ತಪ್ಪಾಗಿ ತಿಳಿದು ಮೋಸಹೋಗಿರುವರೋ ಆ ಸಂಸ್ಕೃತವು ಅವರಿಂದ ಬಹಳ ದೂರವಿರುವುದರಿಂದ ಕನ್ನಡವೇ ಜನರಿಗೆ ದೂರವಾಗಿಹೋಗಿದೆ. ಕನ್ನಡಿಗರ ಕಲಿಕೆ ಕನ್ನಡದಿಂದಾಗಬೇಕು ತಾನೆ? ಆ ಕನ್ನಡವೇ ಇವರಿಗೆ ತಮ್ಮದಲ್ಲದ ನುಡಿಯಂತಿದ್ದರೆ (ಅದು ಸಂಸ್ಕೃತಮಯವಾದ ಕನ್ನಡವಾಗಿರುವುದರಿಂದ) ಕಲಿಕೆ ಎಷ್ಟು ಕಷ್ಟವಾಗುತ್ತದೆಯೆಂದು ನೀವೇ ಊಹಿಸಿಕೊಳ್ಳಿ. ಹೀಗಿರುವುದರಿಂದ ಕನ್ನಡಿಗರು ಕಲಿಕೆಯಲ್ಲಿ ಹಿಂದೆಬಿದ್ದಿದ್ದಾರೆ. ಒಗ್ಗೂಡಿಸುವ ನುಡಿಯೇ ಕೀಳೆಂಬ ಮನಸ್ಥಿತಿಯು ಮೂಡಿ ಕನ್ನಡಕ್ಕೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಶಕ್ತಿಯೂ ಹೊರಟುಹೋಗಿದೆ. "ಮೇಲು" ಮತ್ತು "ಕೀಳು" ಕನ್ನಡಗಳನ್ನು ಆಡುವವರ ನಡುವೆಯಂತೂ ಒಂದು ದೊಡ್ಡ ಕಂದರವೇ ಇದೆ. ಹೀಗೆ ಬಗೆಬಗೆಯಾಗಿ ಒಗ್ಗಟ್ಟನ್ನು ಕಳೆದುಕೊಂಡಿರುವ ಕನ್ನಡಜನಾಂಗವು ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡು ಸೊರಗುತ್ತಿದೆ.
ನಾಳೆ: ಕನ್ನಡ ಮತ್ತು ಕನ್ನಡಿಗರ ಏಳಿಗೆ -೩: ಬದಲಾಗಿರುವ ಸಾಮಾಜಿಕ ನೆಲೆ, ಕುಗ್ಗಿರುವ ಸಂಸ್ಕೃತದ ಬೇಕಾಗುವಿಕೆ, ಹಿಗ್ಗಿರುವ ಕನ್ನಡದ ಬೇಕಾಗುವಿಕೆ.
3 ಅನಿಸಿಕೆಗಳು:
ಕೀಳರಿಮೆಯ ಆಳದಲ್ಲಿ ನ೦ದಾದೀಪವಾಗಿದೆ ನಿಮ್ಮ ಬರಹ.
ಕನ್ನಡವು ದ್ರಾವಿಡ ಭಾಷೆ, ಸ೦ಸ್ಕೃತದಿ೦ದ ಬೇರೆಯಾದ ಭಾಷೆ ಎ೦ಬ ಸತ್ಯವನ್ನು ಅರಿತುಕೊಳ್ಳುವುದಕ್ಕೇ ಕೀಳರಿಮೆ ಇದೆ. ಇದು ಹೋದರೆ ಸಾಕಶ್ಟು ಕೆಲಸಗಳಾಗುತ್ತವೆ.
ಇ೦ತಹ ಅಮೂಲ್ಯವಾದ ಬರಹವನ್ನು ಎಲ್ಲ ಕನ್ನಡಿಗರೂ ಓದುವಹಾಗೆ ಆಗಬೇಕು. ವಿ.ಕ ದಲ್ಲಿ ಬ೦ದರೆ ಹೇಗೆ?
ಒಳ್ಳೆಯ ಬರಹ.....ಜೊತೆಗೆ ಕನ್ನಡಿರು ಕನ್ನಡದ ಬಗ್ಗೆ ಆಳವಾಗಿ ಅರಿಯಲು,ಬೇರೆ ನುಡಿಯ ಬಗ್ಗೆ ತಿಳಿಯಲು ಶಂಕರ ಬಟ್ಟರ ಎಲ್ಲಾ ಹೊತ್ತಿಗೆಗಳನ್ನು ಓದಿದರೆ ಕೀಳರಿಮೆ ಕಿರಿದಾಗಿ ತನ್ನತನ ಹೆಚ್ಚುತ್ತದೆ. ಸಕ್ಕದಿಂದ ನಮ್ಮಲ್ಲೆ ಬಂದಿರುವ ಕನ್ನಡ ಕೀಲೆಂಬ ಹುಸಿ ಅಳಸಿ ಕೊಳ್ಳಲು ನೆರವಾಗುತ್ತದೆ.
ಸ್ವಾಮಿ
ಚನ್ನಾಗಿದೆ ಸರಣಿ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!