ಕನ್ನಡ ನುಡಿ ಮತ್ತು ಬರಹಗಳ ನಿಜವಾದ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ಇತ್ತೀಚೆಗೆ ಜನರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡುತ್ತಿದೆ. ಈ ಅರಿವು ಹಳೆಯ ಶಾಲೆಯ ಅವೈಜ್ಞಾನಿಕತೆಯೆಂಬ ಕೊಳೆಯನ್ನು ತೊಳೆದು ವೈಜ್ಞಾನಿಕತೆಯ ಭದ್ರವಾದ ತಳಹದಿಯ ಮೇಲೆ ನಿಂತ ಒಂದು ಹೊಸ-ಶಾಲೆಯನ್ನು ಕಟ್ಟಲು ಅಣಿಮಾಡಿಕೊಡುತ್ತಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕನ್ನಡದ ಯುವಕ-ಯುವತಿಯರು ಈ ಹೊಸ ಶಾಲೆಯ ತತ್ವಗಳಿಂದ ಪ್ರೇರಿತರಾಗಿ ಕನ್ನಡಿಗರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೆಂಬ ಏಳ್ಗೆಯ ಮೂರು ಕಂಬಗಳನ್ನು ಮತ್ತೆ ಅಲ್ಲಾಡದಂತೆ ನಿಲ್ಲಿಸಲು ಹೊರಟಿದ್ದಾರೆ. ಈ ಶಾಲೆಯ ಪರಿಚಯವನ್ನು ಮಾಡಿಕೊಡುವ ಒಂದು ಬರಹಗಳ ಸರಣಿಯನ್ನು ಬನವಾಸಿ ಬಳಗವು ಕಳೆದ ಹದಿನೈದು ದಿನಗಳಿಂದ ಇಡುತ್ತ ಬಂದಿದೆ. ಈ ಕಡೆಯ ಬರಹದಲ್ಲಿ ಸರಣಿಯ ಸಾರಾಂಶವನ್ನು ಕೊಟ್ಟಿದೆ. ಓದಿ, ನಿಮ್ಮ ಗೆಳೆಯರಿಂದಲೂ ಓದಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ / ಕೆಲಸಗಳನ್ನು ಮಾಡಲು ಆಸೆಯಿರುವವರು ನಮಗೊಮ್ಮೆ ಮಿಂಚಿಸಿ. -- ಸಂಪಾದಕ, ಏನ್ ಗುರು |
ಯಾವುದೇ ಒಂದು ಜನಾಂಗದ ಏಳಿಗೆಯಲ್ಲಿ ಅದರ ಜನರ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳು ಬಹಳ ಮುಖ್ಯವಾದ ಪಾತ್ರವನ್ನು ಹೊತ್ತಿರುತ್ತವೆ. ಆದ್ದರಿಂದ ಇವುಗಳನ್ನು ಏಳಿಗೆಯ ಮೂರು ಕಂಬಗಳೆಂದು ಕರೆಯಬಹುದು. ಇವುಗಳನ್ನು ಭದ್ರವಾಗಿ ನಿಲ್ಲಿಸದೆ ಹೋದರೆ ಯಾವ ಜನಾಂಗವೂ ಏಳಿಗೆಹೊಂದಲು ಸಾಧ್ಯವಿಲ್ಲ. ಇವುಗಳನ್ನು ನಿಲ್ಲಿಸದೆ ಹೋದ ಜನಾಂಗಗಳು ಇತಿಹಾಸದಲ್ಲಿ ಕುಸಿದುಬಿದ್ದಿವೆ. ಇವತ್ತಿನ ದಿವಸ ಕನ್ನಡಿಗರು ಕಲಿಕೆ, ದುಡಿಮೆ ಮತ್ತು ಒಗ್ಗಟ್ಟು - ಈ ಮೂರರಲ್ಲೂ ಬಹಳ ಹಿಂದಿದ್ದಾರೆ. ಈ ಮೂರು ಕಂಬಗಳನ್ನು ಕನ್ನಡದಿಂದಲೇ ಕಟ್ಟಲಾಗುವುದು. ಕನ್ನಡಿಗರೆಲ್ಲರ ಕಲಿಕೆಯನ್ನು ಕನ್ನಡವಲ್ಲದ ಬೇರೆಯೊಂದು ನುಡಿಯಲ್ಲಿ ಸಾಧಿಸಲಾಗುವುದಿಲ್ಲ. ಕನ್ನಡಿಗರೆಲ್ಲರ ದುಡಿಮೆಯ ನುಡಿಯೂ ಕನ್ನಡವಲ್ಲದೆ ಬೇರೊಂದು ನುಡಿಯಾಗಲಾರದು. ಕನ್ನಡಿಗರೆಲ್ಲರನ್ನೂ ಒಗ್ಗೂಡಿಸುವುದು ಕನ್ನಡವೊಂದೇ.
ಕನ್ನಡಕ್ಕೆ ಇಷ್ಟೆಲ್ಲ ಮಹತ್ವವಿರುವುದರಿಂದ ಅದರ ಸ್ವರೂಪವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ಎಂತಹ ನಂಟಿದೆಯೆಂಬುದರ ಬಗ್ಗೆ ಕನ್ನಡಿಗರಲ್ಲೇ ಸಾಕಷ್ಟು ತಪ್ಪು ತಿಳುವಳಿಕೆಯಿದೆ. ಕನ್ನಡವು ಸಂಸ್ಕೃತದಿಂದ ಹುಟ್ಟಿಬಂದ ನುಡಿಯೆಂಬ ತಪ್ಪು ತಿಳುವಳಿಕೆಯಿದೆ. ಸಾಮಾನ್ಯವಾಗಿ ಜನರು ಆಡುವ ಕನ್ನಡವು ಕೀಳುಮಟ್ಟದ್ದೆಂದೂ ಸಂಸ್ಕೃತದ ಪದಗಳಿಂದ ತುಂಬಿದ್ದರೆ ಮಾತ್ರ ಅದು ಒಳ್ಳೆಯ ಕನ್ನಡವೆಂದೂ ಜನರಲ್ಲಿ ತಪ್ಪು ತಿಳುವಳಿಕೆಯಿದೆ.
ಇದರಿಂದ ಕನ್ನಡಿಗರಲ್ಲಿ ಮೇಲು-ಕೀಳು ಮನೋಭಾವನೆಯೇ ಮೊದಲಾದ ತೊಂದರೆಗಳು ಹುಟ್ಟಿಕೊಂಡುಬಿಟ್ಟಿವೆ. ಆದ್ದರಿಂದ ಎಲ್ಲಾದರೂ ಎಂತಾದರೂ ಇರುವ ಕನ್ನಡಿಗರು ಇವತ್ತಿನ ದಿವಸ ಆಡುತ್ತಿರುವ ನುಡಿಯೇ ಕನ್ನಡವೆಂದು ಕಾಣಬೇಕಾದ್ದು ನುಡಿಯರಿಮೆಯ ನಿಟ್ಟಿನಿಂದಲೂ ಕನ್ನಡಿಗರಲ್ಲಿರುವ ಸಾಮಾಜಿಕ ತೊಂದರೆಗಳ ಹೋಗಲಾಡಿಸುವಿಕೆಯ ನಿಟ್ಟಿನಿಂದಲೂ ಬಹಳ ಮುಖ್ಯ. ಈ ಮೂಲಕ ಕನ್ನಡಿಗರ ಕಲಿಕೆ ಮತ್ತು ದುಡಿಮೆಗಳು ಹೆಚ್ಚುತ್ತವೆ, ಮತ್ತು ಕನ್ನಡಿಗರ ಒಗ್ಗಟ್ಟೂ ಹೆಚ್ಚುತ್ತದೆ.
ಹಿಂದೆ ಸಂಸ್ಕೃತದ ಪದಗಳನ್ನು ಎಡೆತಡೆಗಳಿಲ್ಲದೆ ಕನ್ನಡದ ಬರಹಗಳಿಗೆ ಮತ್ತು ತಿಳುವಳಿಕಸ್ತರ ಆಡುನುಡಿಗೆ ಸೇರಿಸಿಕೊಂಡ ಕಾಲಕ್ಕೂ ಈಗಿನ ಕಾಲಕ್ಕೂ ಅನೇಕ ಸಾಮಾಜಿಕ ಬದಲಾವಣೆಗಳಾಗಿವೆ. ಉದಾಹರಣೆಗಾಗಿ ಅಂದು ಓದು-ಬರಹಗಳು ನಾಡಿಗರಿಗೆಲ್ಲ ಬರಬೇಕೆಂಬುದೇ ಇರಲಿಲ್ಲ. ಬೆರಳೆಣಿಕೆಯ ಕೆಲವರಿಗೆ ಓದು-ಬರಹ ಬಂದಿದ್ದರೆ ಸಾಕಾಗಿತ್ತು. ಆದರೆ ಈಗ ಹಾಗಿಲ್ಲ. ಇವತ್ತಿನ ದಿವಸ ಜುಟ್ಟಿಗೆ ಮಲ್ಲಿಗೆ ಹೂವಿಗಿಂತ ಹೊಟ್ಟೆಗೆ ಹಿಟ್ಟಿನ ಮಹತ್ವ ಹೆಚ್ಚಿದೆ. ಇವತ್ತಿನ ದಿವಸ ಧರ್ಮ-ಮೋಕ್ಷಗಳಿಗಿಂತ ಅರ್ಥ-ಕಾಮಗಳ ವಿದ್ಯೆಗಳ ಬೇಕಾಗುವಿಕೆ ಹೆಚ್ಚಿದೆ. ಆದ್ದರಿಂದ ಈಗ "ಎಲ್ಲರ ಕನ್ನಡ"ಕ್ಕೆ ಸಂಸ್ಕೃತಮಯವಾದ ಕನ್ನಡಕ್ಕಿಂತ ಬಹಳ ಹೆಚ್ಚಿನ ಮಹತ್ವವಿದೆ.
ಹಿಂದೆ ಬರಹದ ಉದ್ದೇಶವೇ ಬೇರೆಯಿತ್ತು. ಬರೆದಿದ್ದನ್ನು ಇಡೀ ಕನ್ನಡಜನಾಂಗವೇ ಓದಲಿ ಎಂಬ ಉದ್ದೇಶವೇ ಬರಹಕ್ಕಿರಲಿಲ್ಲ. ಆದರೆ ಈಗ ಇಡೀ ನಾಡೇ ಓದಬೇಕಾದಂಥದ್ದೆಲ್ಲ ಬರಹದ ರೂಪದಲ್ಲಿ ಬರುತ್ತಿದೆ. ಮುಂದೆ ಹೋಗುತ್ತ ಇಂಥವು ಇನ್ನೂ ಹೆಚ್ಚುತ್ತವೆ, ಹೆಚ್ಚಬೇಕು. ಆದ್ದರಿಂದ ಸಂಸ್ಕೃತವೆಂಬ ಗ್ರಾಂಥಿಕ ಭಾಷೆಯಿಂದ ಪ್ರೇರಣೆಯನ್ನು ಪಡೆದು ಜನರಿಗೆ ಉಲಿಯಲಾರದ್ದನ್ನೆಲ್ಲ, ಅರ್ಥವಾಗದ್ದನ್ನೆಲ್ಲ ಸಂಸ್ಕೃತದ ಪದಗಳೆಂಬ ಕಾರಣಕ್ಕೆ ಬರಹಕ್ಕೆ ಸೇರಿಸಿಕೊಂಡರೆ ಬದಲಾದ ಬರಹದ ಉದ್ದೇಶವು ಈಡೇರಿದಂತಾಗುವುದಿಲ್ಲ. ಅದರ ಬದಲಾಗಿ ಜನರಿಗೆ ಉಲಿಯಲಾಗುವ ಮತ್ತು ಸುಲಭವಾಗಿ ಅರ್ಥವಾಗುವ ಕನ್ನಡದ ಪದಗಳನ್ನು ಬಳಸುವುದೇ ಜಾಣತನ.
ಯಾವುದೇ ಜನಾಂಗದವರ ನಾಲಿಗೆಯಲ್ಲಿ ಓಡಾಡುವ ಪದಗಳು ಅವರ ಏಳಿಗೆ ಮತ್ತು ಏಳಿಗೆಯ ಹರವು - ಎಂಬಿವೆರಡರ ಗುರುತು. ಕನ್ನಡದ ಪದಗಳೆಂದರೆ ಯಾವುವು ಎಂಬ ವಿಷಯದಲ್ಲಿ ಅನೇಕರಿಗೆ ಗೊಂದಲವಿದೆ. ಆ ಗೊಂದಲದ ನಿವಾರಣೆಯನ್ನು ನಾವು ಈ ಸರಣಿಯಲ್ಲಿ ಮಾಡಿಸಿರುತ್ತೇವೆ. ಮುಖ್ಯವಾಗಿ ಹಿಂದಿನವರಿಗೂ ನಮಗೂ ಈ ವಿಷಯವಾಗಿ ಇರುವ ವ್ಯತ್ಯಾಸವೇನೆಂದರೆ ಹಿಂದಿನವರು ಕನ್ನಡದಲ್ಲಿ ಹುಟ್ಟಿಸಿದ ಹೊಸ ಪದಗಳು ಕನ್ನಡಿಗರಿಗೆ ಉಲಿಯಲಾಗಬೇಕು, ಅವರು ಉಲಿಯಬೇಕು ಎಂಬುದನ್ನೇ ಮರೆತಿರುವುದು, ಮತ್ತು ನಾವದನ್ನು ನೆನಪಿನಲ್ಲಿಟ್ಟುಕೊಂಡಿರುವುದೇ ಆಗಿದೆ. ಎಂದರೆ - ಕನ್ನಡಿಗರು ಹಿಂದೆ ಉಲಿದಿದ್ದು, ಇಂದು ಉಲಿಯುತ್ತಿರುವುದು ಮತ್ತು ಮುಂದೆ ಉಲಿಯುವುದು - ಇವುಗಳನ್ನೇ ಕನ್ನಡದ ಪದಗಳೆನ್ನಲಾಗುವುದು. ಈ ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗದ ಪದಗಳು ಕನ್ನಡದ ಪದಗಳೆಂದು ಎಣಿಸಲಾಗುವುದಿಲ್ಲ. ಉಲಿಕೆಯ ಪರೀಕ್ಷೆಯಲ್ಲಿ ಪಾಸಾಗುವ ಪದಗಳೆಂಥವು ಎಂದು ನಾವು ಈ ಸರಣಿಯಲ್ಲಿ ನಮ್ಮ ಕೈಲಾದಷ್ಟು ತೋರಿಸಿಕೊಟ್ಟಿದ್ದೇವೆ.
ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಸಂಸ್ಕೃತದ ಸೊಲ್ಲರಿಮೆಯ ಅಪಭ್ರಂಶವೆಂಬಂತೆ ಹಿಂದೆ ಸೊಲ್ಲರಿಗರು ತಪ್ಪಾಗಿ ಕಂಡಿದ್ದಾರೆ. ಇದರಿಂದ ಕನ್ನಡದ ನಿಜವಾದ ಸೊಲ್ಲರಿಮೆಗಳೇ ಹೊರಬಂದಿಲ್ಲವೆನ್ನುವ ಕಟು ಸತ್ಯವನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ. ಹೀಗಿರುವುದರಿಂದ ಕನ್ನಡವನ್ನು ಕಲಿಯುವುದು ಮತ್ತು ಕಲಿಸುವುದು ಮುಂತಾದ ಕಡೆ ಬಹಳ ತೊಡಕುಂಟಾಗಿವೆ. ಇದೇ ಮುಂತಾದ ಅನೇಕ ತೊಂದರೆಗಳನ್ನು ನಿಮ್ಮ ಮುಂದೆ ಈ ಸರಣಿಯಲ್ಲಿ ಇಟ್ಟಿದ್ದೇವೆ, ಮತ್ತು ಈ ತೊಂದರೆಗಳನ್ನೆಲ್ಲ ಹೋಗಲಾಡಿಸಬಲ್ಲ ಒಂದು ನಿಜವಾದ ಕನ್ನಡದ ಸೊಲ್ಲರಿಮೆಯ ಬೇಕಿರುವಿಕೆ ಎಷ್ಟಿದೆಯೆಂದು ವಾದಿಸಿದ್ದೇವೆ. ಈ ನಿಟ್ಟಿನಲ್ಲಿ ಡಾ|| ಡಿ. ಎನ್. ಶಂಕರಭಟ್ಟರ ಸಂಶೋಧನೆಗಳು ಮತ್ತು ಹೊತ್ತಗೆಗಳು ಎಷ್ಟು ವೈಜ್ಞಾನಿಕವಾಗಿವೆ, ಮತ್ತು ಈ ತೊಂದರೆಗಳನ್ನು ಹೋಗಲಾಡಿಸುವಲ್ಲಿ ಎಷ್ಟು ಮುಖ್ಯವಾದ ಪಾತ್ರವನ್ನು ಹೊತ್ತಿವೆಯೆಂದು ಕೂಡ ವಾದಿಸಿದ್ದೇವೆ.
ಇವತ್ತಿನ ದಿವಸ ಹೆಚ್ಚು ಹೆಚ್ಚು ಅರ್ಥ-ಕಾಮಗಳನ್ನು ಬಯಸುವವರಿಗೆ ಇಂಗ್ಲೀಷ್ ನುಡಿಯು ಬಹಳ ನೆರವು ನೀಡಿದೆ. ಆದರೆ ಕನ್ನಡಿಗರ ಏಳಿಗೆಯಲ್ಲಿ ಇಂಗ್ಲೀಷಿನ ನಿಜವಾದ ಪಾತ್ರವೇನು ಎಂಬ ವಿಷಯದಲ್ಲಿ ಜನರಿಗೆ ಬಹಳ ಗೊಂದಲವಿದೆ. ಆ ಗೊಂದಲವನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಿದ್ದೇವೆ. ಕನ್ನಡಿಗರೆಲ್ಲ ಇಂಗ್ಲೀಷಿನಿಂದ ಅರ್ಥ-ಕಾಮಗಳನ್ನು ಪಡೆದುಕೊಳ್ಳುತ್ತಾರೆ ಎಂಬ ತಪ್ಪು ತಿಳುವಳಿಕೆಯು ಹೋಗಬೇಕಿದೆ (ಇದೇ ತಪ್ಪನ್ನು ಇಂದು ಕೂಡ ಸಂಸ್ಕೃತದ ವಿಷಯದಲ್ಲಿ ಜನರು ಮಾಡುತ್ತಾರೆ). ಅದರ ಬದಲಾಗಿ ಇಂಗ್ಲೀಷಿನಿಂದ ಪಡೆಯಬೇಕಾದ್ದನ್ನು ಪಡೆದುಕೊಂಡು ಬಿಡಬೇಕಾದ್ದನ್ನು ಬಿಡುವ ಬುದ್ಧಿವಂತಿಕೆ ನಮಗೆ ಬರಬೇಕಿದೆ. ಇಂಗ್ಲೀಷು ಇವತ್ತಿನ ದಿವಸ ಪ್ರಪಂಚದಲ್ಲಿ ಪಡೆದುಕೊಂಡಿರುವ ಸ್ಥಾನವನ್ನು ಕನ್ನಡವು ಪಡೆದುಕೊಳ್ಳುವಂತೆ ಮಾಡುತ್ತೇವೆ ಎಂಬ "ಹುಚ್ಚು ಆಸೆ" ಕನ್ನಡಿಗರಲ್ಲಿ ಹುಟ್ಟಬೇಕಿದೆ. ಈ ಆಸೆಯು ಈಡೇರದಿದ್ದರೂ ಆ ನಿಟ್ಟಿನಲ್ಲಿ ಆಗುವ ಕೆಲಸದಿಂದ ನಾಡಿನ ಏಳಿಗೆಯಾಗುತ್ತದೆ. ಅಷ್ಟೇ ಅಲ್ಲದೆ, ಕನ್ನಡಕ್ಕೆ ಆ ಸ್ಥಾನವನ್ನು ಪಡೆದುಕೊಳ್ಳುವ ಯೋಗ್ಯತೆಯೆಲ್ಲ ಇದೆ. ಇಲ್ಲದಿರುವುದು ಕನ್ನಡಿಗರ ಯೋಗ್ಯತೆ ಮಾತ್ರ. ಆ ಯೋಗ್ಯತೆಯನ್ನು ಬರಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಿಗರು ಕೆಲಸ ಮಾಡಬೇಕಿದೆ.
5 ಅನಿಸಿಕೆಗಳು:
ಒಳ್ಳೆಯ ಅರಿಮೆ. ನನ್ನಿ. ಬಲು ಚೆನ್ನಾಗಿ ಅರುಹಿದ್ದೀರಿ.
ಎಲ್ಲ ಮುಂದುವರೆದ ಬುಡಕಟ್ಟುಗಳು ನೀವು ಹೇಳಿದಂತೆ ಇರದಿದ್ದರು ಹೆಚ್ಚು(೯೦%)ಮುಂದುವರೆದ ಬುಡಕಟ್ಟುಗಳಿಗೆ ತಮ್ಮ ನುಡಿಯ ತಲೆಮೆಯ ಬಗ್ಗೆ ಆಳವಾದ ಅರಿವಿದೆ.
ನಾವು ಇನ್ನು 'ಮುಂದುವರೆಯುತ್ತಿರುವು'ದರಿಂದ ನಮಗೆ ಕೀಳಿರಿಮೆ ವೊಕ್ಕರಿಸಿದೆ. ಒಂದು ವೇಳೆ ನಾವು ಇಂಗಳೀಸಿನಿಂದ ಏಳಿಗೆ ಹೊಂದಿದರೂ ಅದು ಸುಳ್ಳು/ತೋರಿಕೆಯ ಏಳಿಗೆಯಾಗಿ ಉಳಿಯುತ್ತವೆಯೇ ಹೊರತು ದಿಟವಾದ ಏಳಿಗೆಯಾಗುವುದಿಲ್ಲ.
-ಬರತ್
http://ybhava.blogspot.com
lekakaru helidanthey..idu ondu huchchu aasey.
-L shuru
ಒಂದು ಭಾಷೆಯಲ್ಲಿ ಪರಭಾಷೆಯ ಪದಗಳನ್ನು ಬಳಸಿದ ಮಾತ್ರಕ್ಕೆ ಭಾಷೆಯ ಅವನತಿ ಆಗುವದಿಲ್ಲ. ಇದರ ಉತ್ತಮ ಉದಾಹರಣೆ ಎಂದರೆ ಇಂಗ್ಲಿಶ್.
ಕನ್ನಡದಲ್ಲಿ ಸಹ ಅನೇಕ ಪರದೇಶೀ ಪದಗಳಿವೆ. ಅವು ಕನ್ನಡದ ಪದಗಳೇ ಆಗಿಬಿಟ್ಟಿವೆ. ಉದಾಹರಣೆಗೆ
ಕುದುರೆ ಇದು hytir ಅನ್ನುವ ಇಜಿಪ್ಶಿಯನ್ ಪದದಿಂದ ಬಂದಿದೆ. ಪೇಟೆ ಇದು ಫ್ರೆಂಚ್ ಮೂಲದ ಪದ. ಕಾಸು, ಕಂದೀಲು,ಹಸನು ಮೊದಲಾದ ಅನೇಕ ಕನ್ನಡದವೆಂದೇ ಕಾಣುವ ಪದಗಳು ಕನ್ನಡ ಪದಗಳಲ್ಲ!
ಈ ಮೇಲಿನ ಲೇಖನದಲ್ಲಿಯೇ ಎಷ್ಟು ಸಂಸ್ಕೃತ ಪದಗಳಿವೆ, ಲೆಕ್ಕ ಹಾಕುವಿರಾ?
ಸಂಸ್ಕೃತವನ್ನು ದ್ವೇಷಿಸುವದರಿಂದ ಏನನ್ನೂ ಸಾಧಿಸಲಾಗುವದಿಲ್ಲ.
ಸುನಾಥರೆ,
ನೀವು ಹೇಳುವುದು ಸರಿಯೇ. ಆದರೆ ನಾವು ಸಂಸ್ಕೃತವನ್ನು ದ್ವೇಷಿಸಿ ಎಂದು ಯಾರಿಗೂ ಹೇಳುತ್ತಲೂ ಇಲ್ಲ, ದ್ವೇಷಿಸುತ್ತಲೂ ಇಲ್ಲ. ಕನ್ನಡದಲ್ಲಿ ಸಂಸ್ಕೃತದ ಪದಗಳನ್ನೆಲ್ಲ ತೆಗೆದುಹಾಕಿ ಎಂದೂ ನಾವು ಹೇಳುತ್ತಿಲ್ಲ. ಪದಗಳ ಬಗ್ಗೆಯೇ ಈ ಸರಣಿಯಲ್ಲಿ ಒಂದು ಬರಹ ಬಂದಿದೆ, ಅದರಲ್ಲಿ ಎರವಲು ಪದಗಳ ಬಗ್ಗೆ ನೀವು ಹೇಳುತ್ತಿರುವುದಷ್ಟೇ ಅಲ್ಲ, ಇನ್ನೂ ಮುಖ್ಯವಾದ ಅನೇಕ ವಿಷಯಗಳನ್ನು ನಾವು ತಿಳಿಸಿಕೊಟ್ಟಿದ್ದೇವೆ. ಇಲ್ಲಿ ಕ್ಲಿಕ್ಕಿಸಿ.
ಸುಮ್ಮನೆ ಹಳೆಯವರ ಗುಂಗಿನಲ್ಲೇ "ಸಂಸ್ಕೃತವನ್ನು ದ್ವೇಷಿಸುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ" ಎನ್ನುವುದರ ಬದಲು ನಾವು ಬರೆದಿರುವುದನ್ನು ಓದಿ ಆಮೇಲೆ ನಿಮ್ಮ ಅನಿಸಿಕೆಯನ್ನು ತಿಳಿಸುವುದು ಒಳಿತು. ನಾವು ಹೇಳುತ್ತಿರುವುದು ಸಂಸ್ಕೃತವನ್ನು ಕಿತ್ತುಹಾಕಿ ಎನ್ನುವವರಿಂದಲೂ ದೂರವಿರುವ, ಸಂಸ್ಕೃತವನ್ನೇ ಕನ್ನಡವೆಂದುಕೊಂಡಿರುವವರಿಂದಲೂ ದೂರವಿರುವ ಒಂದಾನೊಂದು ನಡುದಾರಿಯೆಂದು ಬುದ್ಧಿವಂತರಿಗೆ ಅರ್ಥವಾಗದೆ ಹೋಗದು, ನಿಧಾನವಾಗಿ ಗಮನವಿಟ್ಟು ಓದಿ.
ಸಂಸ್ಕೃತಕ್ಕೆ ಕೊಡಬೇಕಾದ ಸ್ಥಾನವನ್ನು ನಾವು ಕೊಟ್ಟೇ ಇದ್ದೇವೆ. ಕೊಡಬಾರದ ಸ್ಥಾನವನ್ನು ಕೊಡಬೇಡಿ, ಆ ಮೂಲಕ ಕನ್ನಡದ ಸ್ವರೂಪವನ್ನೇ ತಿಳಿದುಕೊಳ್ಳದೆ ಹೋಗಬೇಡಿ, ಆ ಮೂಲಕ ಏಳಿಗೆಗೆ ಕಲ್ಲುಹಾಕಿಕೊಳ್ಳಬೇಡಿ ಎಂದಷ್ಟೇ ನಾವು ಬಿನ್ನವಿಸುತ್ತಿರುವುದು.
ಸುನಾತ ಬೊಗಳಿದೆಲ್ಲ ಸುಳ್ಳು
ಕುದುರೆ
http://dsal.uchicago.edu/cgi-bin/philologic/getobject.pl?c.0:1:1719.burrow
ಹಸನು
http://dsal.uchicago.edu/cgi-bin/philologic/getobject.pl?c.1:1:1323.burrow
ಎಲ್ಲ ಕನ್ನಡದ್ದೆ. ಬೇಕಾದರೆ Dravidian Etymology Dictionary ನೋಡಿ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!