ಸಮಾನ ಗೌರವದ ಒಕ್ಕೂಟ ವ್ಯವಸ್ಥೆ ಕಟ್ಟಬಲ್ಲ ಪಕ್ಷಗಳೇ ಇಂದಿನ ಅಗತ್ಯ!

ಲೋಕಸಭಾ ಚುನಾವಣೇಲಿ ಈ ಬಾರಿ ಕಾಂಗ್ರೆಸ್ಸಿನ ’ಕೈ’ ಮೇಲಾಗಿದೆ. ಕಾಂಗ್ರೆಸ್ ಜೊತೆಗೆ ಅನೇಕ ಪ್ರಾದೇಶಿಕ ಪಕ್ಷಗಳೂ ಮೇಲುಗೈ ಸಾಧಿಸಿವೆ. ಈ ಹೊತ್ನಲ್ಲೇ ಲೋಕಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಷಯಗಳಿಗೆ ಮಹತ್ವ ಕೊಟ್ಟು, ರಾಷ್ಟ್ರೀಯ ದೃಷ್ಟಿಕೋನ ಇಟ್ಕೊಂಡು ಇಡೀ ಭಾರತಾನ ಮುನ್ನಡ್ಸೋ ಶಕ್ತಿ ಪ್ರಾದೇಶಿಕ ಪಕ್ಷಗಳಿಗೆ ಇರಲ್ಲ, ಅದಕ್ಕೆ ರಾಷ್ಟ್ರೀಯ ಪಕ್ಷಗಳೇ ಲಾಯಕ್ಕು ಅಂತ ನಮ್ಮಲ್ಲಿ ತುಂಬಾ ಜನಕ್ಕೆ ಅನ್ಸಿರೋದ್ನ ನಾವು ನೋಡ್ತಿದೀವಿ. ಹಾಗಾದ್ರೆ ಕೇಂದ್ರಸರ್ಕಾರ ನಡ್ಸೋಕೆ ಪ್ರಾದೇಶಿಕ ಪಕ್ಷಗಳಿಗೆ ಅಸಾಧ್ಯವಾ? ನೋಡ್ಮಾ ಬಾ ಗುರು!

ಇಂದಿನ ರಾಜಕೀಯ ಪಕ್ಷಗಳು

ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನಕ್ಕೆ ಒಲವು ಯಾಕಪ್ಪಾ ಅಂದ್ರೆ ಇವುಕ್ಕೆ ಇಡೀ ಭಾರತದ ಹಿತದ ಬಗ್ಗೆ ಕಾಳಜಿ, ಇಡೀ ಭಾರತಾನ ಉದ್ಧಾರ ಮಾಡೋ ದೃಷ್ಟಿಕೋನ ಇರುತ್ತೆ. ಒಂದೇ ಪಕ್ಷ ರಾಜ್ಯ-ಕೇಂದ್ರಗಳಲ್ಲಿರೋದು ಆ ರಾಜ್ಯಕ್ಕೆ ಒಳ್ಳೇದು ಮಾಡುತ್ತೆ. ಅಧಿಕಾರಕ್ಕಾಗಿ ಕಚ್ಚಾಡೋ ಚಿಕ್ಕ ಪುಟ್ಟ ಪಕ್ಷಗಳ ಗುಂಪು ಅದಾಗಿರಲ್ಲ ಅನ್ನೋದು ಒಂದೆಡೆಯಾದರೆ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳು ಅಂತರ ರಾಜ್ಯ ಸಮಸ್ಯೆಗಳನ್ನು ಬಗೆಹರಿಸಲು ಅಶಕ್ತ. ಅವುಗಳಲ್ಲಿ ಹೈಕಮಾಂಡ್ ಸಂಸ್ಕೃತಿ ಇದೆ ಅನ್ನೋದು ಈ ಪಕ್ಷಗಳ ಮಿತಿಯಾಗಿದೆ. ಇನ್ನೊಂದೆಡೆ ಪ್ರಾದೇಶಿಕ ಪಕ್ಷಗಳ ಹೆಚ್ಚುಗಾರಿಕೆಯೆಂದರೆ ಇವು ರಾಜ್ಯದ ಹಿತಾಸಕ್ತಿ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ತವೆ, ನಾಡಿನ ಜನಗಳ ಹಕ್ಕುಗಳಿಗಾಗಿ ದನಿ ಎತ್ತುತ್ತವೆ, ಜೊತೆಗೇ ಹೈಕಮಾಂಡಿನ ಬಾಧೆ ಇವುಕ್ಕಿಲ್ಲ ಅನ್ನೋದಾಗಿದೆ. ಆದರೆ ಇಂದಿನ ದಿನ ಬಹಳಷ್ಟು ಪ್ರಾದೇಶಿಕ ಪಕ್ಷಗಳು ಸ್ವಾರ್ಥ ನಾಯಕತ್ವದಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡಿವೆ. ಅಧಿಕಾರಕ್ಕಾಗಿ ಸಮಯಸಾಧಕತನ ತೋರುಸ್ತಿವೆ ಅನ್ನಿಸುವ ಪಕ್ಷಗಳನ್ನು, ಅವುಗಳ ನಾಯಕರನ್ನೂ ಕಂಡಾಗ ಜನಕ್ಕೆ ಪ್ರಾದೇಶಿಕ ಪಕ್ಷ ಅನ್ನೋದು ಬ್ಲಾಕ್ ಮೇಲ್ ತಂತ್ರಗಾರಿಕೇಲಿ ತೊಡಗಿವೆ ಅನ್ನಿಸದೇ ಇರದು. ಹಾಗಾದರೆ ಭಾರತಕ್ಕೆ ಅಗತ್ಯವಾಗಿರೋದು ಎಂತಹ ಪಕ್ಷಗಳು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋದು ಹ್ಯಾಗೆ?

ಸರಿಯಾದ ಒಕ್ಕೂಟದಲ್ಲಿ...


ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ, ಕನ್ನಡಿಗರ ಏಳಿಗೆಯ ಕನಸು ಕಾಣುವ, ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ಪ್ರಾದೇಶಿಕ ಪಕ್ಷವೇ ಕರ್ನಾಟಕದ ಪಾಲಿಗೆ ಸರಿಯಾದ ರಾಜಕೀಯ ಪಕ್ಷ. ಇದೇ ನಮ್ಮ ನಾಡನ್ನು ದಿಲ್ಲಿಯಲ್ಲಿ ಯೋಗ್ಯವಾಗಿ ಪ್ರತಿನಿಧಿಸಬಲ್ಲ ಪಕ್ಷ. ಆದರೆ ಇಂತಹ ಪಕ್ಷಕ್ಕೆ ಇಡೀ ಭಾರತಾನ ಮುನ್ನಡ್ಸೋ ಸಾಮರ್ಥ್ಯ ಇರಲು ಸಾಧ್ಯವೇ? ಹಣಕಾಸು ನೀತಿ ಬಗ್ಗೆ, ರಕ್ಷಣೆಯ ಬಗ್ಗೆ, ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಇವುಗಳು ಇಡೀ ಭಾರತವನ್ನು ಒಳಗೊಳ್ಳುವಂಥಾ ದಾರಿತೋರುಕ ಸೂತ್ರ ನೀಡಲು/ ಹೊಂದಿರಲು ಸಾಧ್ಯವೇ? ಅನ್ನೋದೆ ಎಲ್ಲರ ಮುಂದಿರೋ ಪ್ರಶ್ನೆ. ಇದು ಸಾಧ್ಯ ಮತ್ತು ಇಂದು ಇವುಗಳಿಂದಲೇ ಮತ್ತಷ್ಟು ಪರಿಣಾಮಕಾರಿ ಪರಿಹಾರ/ ನೀತಿ ನಿಲುವು ಸಾಧ್ಯ ಅನ್ನೋದೇ ಈ ಪ್ರಶ್ನೆಗಳಿಗೆ ಉತ್ತರವಾಗಿದೆ. ತಾನು ಪ್ರತಿನಿಧಿಸೋ ನೆಲದ ಬಗ್ಗೆ ಸಹಜ ಕಾಳಜಿ ಹೊಂದಿರೋ ಅಂತಹ ಪಕ್ಷಗಳು ಪ್ರತಿ ರಾಜ್ಯದಲ್ಲೂ ಹುಟ್ಟಿಕೊಳ್ಳಬೇಕು. ಹಾಗಾದ್ರೆ ಅವು ಹೊಡೆದಾಡಿ ಸಾಯ್ತವೆ ಅಂದ್ಕೋಬೇಡಿ. ಇಂತಹ ಸನ್ನಿವೇಶದಲ್ಲಿಯೇ ಪ್ರತಿ ರಾಜ್ಯಕ್ಕೂ ಅನ್ವಯವಾಗುವಂತಹ ಸಮಾನ ಗೌರವದ ಒಂದೇ ಮಾನದಂಡದ ರೀತಿನೀತಿಗಳನ್ನು ಇವು ಒಗ್ಗೂಡಿ ರೂಪಿಸಿಕೊಳ್ಳಲೇ ಬೇಕಾಗುತ್ತದೆ. ಮತ್ತು ರೂಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ’ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಒಂದೇಪಕ್ಷ ಇರೋದು ಆ ರಾಜ್ಯಕ್ಕೆ ಒಳ್ಳೇದು, ಒಂದು ರಾಜ್ಯದ ಕೇಂದ್ರ ಮಂತ್ರಿ ತನ್ನ ರಾಜ್ಯಕ್ಕೆ ಹೆಚ್ಚು ಒಳ್ಳೇದು ಮಾಡ್ತಾನೆ’ ಅನ್ನೋ ಪಕ್ಷಪಾತ, ತಾರತಮ್ಯಗಳು ಅಳಿಯುತ್ತವೆ. ಇಂತಹ ಪಕ್ಷಗಳ ಒಂದು ಮೈತ್ರಿ ಭಾರತದಲ್ಲಿ ತಲೆಯೆತ್ತಬೇಕು. ಯಾವ ಪ್ರದೇಶಕ್ಕೂ ನಾವು ಭಾರತದಲ್ಲಿರೋದ್ರಿಂದ ಅನ್ಯಾಯವಾಗುತ್ತಿದೆ ಅನ್ನಿಸದೇ ಇರೋವಂತಹ ನೀತಿಗಳು ರೂಪುಗೊಳ್ಳಬೇಕಿವೆ. ಇಂತಹ ಮೈತ್ರಿ ಪಕ್ಷಗಳು ಇಡೀ ಭಾರತಕ್ಕೆ ಹೊಂದಿಕೆಯಾಗೋ ಆರ್ಥಿಕ ನೀತಿ, ರಕ್ಷಣಾ ನೀತಿ, ವಿದೇಶಾಂಗ ನೀತಿ, ಆಡಳಿತ ನೀತಿಗಳನ್ನು ರೂಪಿಸುತ್ತವೆ. ಯಾವ ಒಕ್ಕೂಟದಲ್ಲಿ ಸಂಖ್ಯಾಬಲದ ಮೇಲಾಟವಿರುವುದಿಲ್ಲವೋ, ಅತಿ ಚಿಕ್ಕ ರಾಜ್ಯಕ್ಕೂ ಅತಿ ದೊಡ್ಡ ರಾಜ್ಯಕ್ಕೂ ಸಮಾನವಾದ ಪ್ರಾತಿನಿಧ್ಯ, ಪ್ರಭಾವ ಇರಲು ಸಾಧ್ಯವೋ ಅಂತಹ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಬಲ್ಲ ಶಕ್ತಿ ಇಂತಹ ಮೈತ್ರಿಕೂಟಕ್ಕಿರಬೇಕಾಗಿದೆ.

ಕೊನೆಹನಿ : ಇಂತಹ ದೃಷ್ಟಿಕೋನವನ್ನೇ ಹೊಂದಿದ್ದು ಸಮಾನ ಗೌರವದ ಒಕ್ಕೂಟ ವ್ಯವಸ್ಥೆ ಕಟ್ಟಲು ಬದ್ಧವಾಗೋದಾದ್ರೆ ಇಂದಿನ ರಾಷ್ಟ್ರೀಯ ಪಕ್ಷಗಳೂ ನಾಡಿನ ಏಳಿಗೆಯನ್ನು ಸಾಧಿಸಬಲ್ಲವು ಅನ್ನೋದು ದಿಟವಾಗಿದೆ! ಕಾಂಗ್ರೆಸ್ಸು, ಬಿಜೆಪಿಗಳು ಈ ಬಗ್ಗೆ ತಮ್ಮ ನೀತಿ ನಿಲುವುಗಳನ್ನು ಸ್ವಲ್ಪ ಪರಾಮರ್ಷೆ ಮಾಡ್ಕೊಳ್ಳೋದು ಒಳ್ಳೇದು ಗುರು!

3 ಅನಿಸಿಕೆಗಳು:

Harsha ಅಂತಾರೆ...

ಸರಿಯಾಗಿ ಹೇಳ್ದೆ ಬಿಡು ಗುರು. ರಾಷ್ಟ್ರೀಯ ಕೆಲಸ ಮಾಡೋ ಪ್ರಾದೇಶಿಕ ಪಕ್ಷ ಬರಬೇಕು ಮತ್ತು ಪ್ರಾದೇಶಿಕ ಕೆಲಸ ಮಾಡೋ ರಾಷ್ಟ್ರೀಯ ಪಕ್ಷ ಬರಬೇಕು. ಒಟ್ಟಾರೆ ಜನರಿಗೆ ಒಳ್ಳೇದು ಮಾಡೋ ಪಕ್ಷ ಬರಬೇಕು, ಏನಂತಿರ ಗುರು?

Anonymous ಅಂತಾರೆ...

ಅರವತ್ತು ವರ್ಷದಿಂದ ನೋಡ್ತಾ ಇದೀನಿ ಪ್ರಾದೇಶಿಕ ಕೆಲಸ ಮಾಡೋ ರಾಷ್ಟ್ರ ಮಟ್ಟದ ಪಕ್ಷ ಇನ್ನೂ ಈವರೆಗೆ ಬಂದೆ ಇಲ್ಲ ಮುಂದೆ ಬರೋದೂ ಇಲ್ಲ. ಸುಮ್ಮನೆ ನಾವು ಕನಸು ಕಾಣ್ತಾ ಇರಬೇಕು ಅಷ್ಟೆ. ಬರಿ ಬೇರೆ ರಾಜ್ಯದೋರಿಗೆ ಮಣೆ ಹಾಕೋ ರಾಷ್ಟ್ರ ಮಟ್ಟದ ಪಕ್ಷಗಳನ್ನು ಮೊದಲು ಒದ್ದೋಡಿಸಿ ನಮ್ಮ ಕರ್ನಾಟಕ ಉಳಿಸೊ ಬೆಳೆಸೋ ಒಂದು ಒಳ್ಳೆ ಪಕ್ಷ ಕಟ್ಟೋಣ. ಅದು ಒಂದೆ ನಮಗಿರೋ ದಾರಿ.
- ಹಾಗಲವಾಡಿ ಜುಂಜಪ್ಪ

shivu.k ಅಂತಾರೆ...

ಸರ್,

ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ನೋಡಿ ನನಗೆ ಖುಷಿಯಾಯಿತು..ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ..

ಮತ್ತೆ ನಮ್ಮ ರಾಜ್ಯದ ಹಿತ ಕಾಪಾಡುವಲ್ಲಿ ನಮ್ಮದೇ ಒಂದು ಪ್ರಬಲ ಪ್ರಾದೇಶಿಕ ಪಕ್ಷ ರಾಜ್ಯದ ಅಭಿವೃದ್ದಿಗಾಗಿ ಹೋರಾಡಲು ಖಂಡಿತ ಬೇಕು...ಈಗ ಅದನ್ನು ಮಾತಾಡುತ್ತಿರುವ ಪಕ್ಷದವರು ಸ್ವಾರ್ಥಿಗಳು...ಯಾರು ಆ ನಿಟ್ಟಿನಲ್ಲಿ ಮುಂದೆ ಬರುತ್ತಾರೋ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails