ಕನ್ನಡದ ಮತಯಂತ್ರ: ಸರೀನಾ? ತಪ್ಪಾ?

ಇವತ್ತು (28.03.2010) ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೇಲಿ ಬಳಸಿದ ಮತಯಂತ್ರಗಳಲ್ಲಿ (ಫೋಟೋ ಕೃಪೆ: ಟೈಮ್ಸ್), ಕನ್ನಡವೊಂದರಲ್ಲೇ ಎಲ್ಲಾ ಅಭ್ಯರ್ಥಿಗಳ ಹೆಸರುಗಳು ಇದ್ದವು. ಈ ಮತಯಂತ್ರಗಳನ್ನು ನಿನ್ನೆ ದಿವಸ ಅಧಿಕಾರಿಗಳು ಸಂಬಂಧಪಟ್ಟೋರಿಗೆ ವಿವರಿಸುತ್ತಿದ್ದಾಗ, ಇದರ ಬಗ್ಗೆ ಮತ್ತು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿ, ಕಡತ, ತರಬೇತಿ ಶಿಬಿರಗಳು ಕನ್ನಡದಲ್ಲಿ ಮಾತ್ರ ಇದ್ದಿದ್ದರ ಬಗ್ಗೆ ಚುನಾವಣೆಗೆ ನಿಂತಿದ್ದ ಕೆಲ "ಸುಧಾರಣಾವಾದಿ" ಚಿಕ್ಕ ಪಕ್ಷಗಳು ತಮ್ಮ ವಿರೋಧ ವ್ಯಕ್ತಪಡಿಸಿರೋ ಸುದ್ದಿ ಇವತ್ತಿನ ಇಂಗ್ಲಿಷ್ ಪತ್ರಿಕೆಗಳಲ್ಲಿ ಬಂದಿದೆ. ಅಲ್ಲಾ ಗುರು, ಬೆಂಗಳೂರಿನ ಜನರ ಭಾಷೆಯನ್ನೇ ಕಲಿಯಲ್ಲ ಅನ್ನೋರು ಅದು ಹೇಗೆ ಆ ಜನರ ಸಮಸ್ಯೆಗಳನ್ನ ಅರ್ಥ ಮಾಡ್ಕೊತಾರೆ ? ಜನರ ಸಮಸ್ಯೆನೇ ಅರ್ಥ ಆಗದೇ ಅದು ಹೇಗೆ ಆಡಳಿತ ಸುಧಾರಿಸ್ತಾರೆ ಅನ್ನೋ ಪ್ರಶ್ನೆ ಏಳಲ್ವಾ ? ಆದರೂ ಇವರಿಗೆ ಇದು ತಪ್ಪು ಅಂತಾ ಯಾಕೆ ಅನ್ನುಸ್ತು? ಹೀಗೆ ಕನ್ನಡದಲ್ಲಿ ಮಾತ್ರಾ ಇರೋದನ್ನು ತಪ್ಪು ಅಂತಾ ಇವರುಗಳು ಯಾಕಂತಿದಾರೆ ಅಂತಾ ನೋಡೋಣ.

ಕನ್ನಡವೊಂದೇ ಯಾಕೆ ಅನ್ನೋರ ಮಾತು!
  • "ಬೆಂಗಳೂರು ಒಂದು ಕಾಸ್ಮೊಪಾಲಿಟಿನ್ ಸಮಾಜ, ಒಂದು ಬಹುಭಾಷಾ ನಗರ. ಇಲ್ಲಿ ಮತಯಂತ್ರ ಬರೀ ಕನ್ನಡದಲ್ಲಿದ್ರೆ ಕನ್ನಡೇತರರು ಬರೀ ಚಿಹ್ನೆ ನೋಡ್ಕೊಂಡು ಮತ ಹಾಕಬೇಕಾ?. ಈ ಊರಿನ ಅಭಿವೃದ್ಧಿಗೆ ಕನ್ನಡೇತರ ದುಡ್ಡು ಬೇಕು, ಆದ್ರೆ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಪಟ್ಟಿ ಯಾಕ್ ಕೊಡಲ್ಲ"
  • "ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವಲಸಿಗರಿದ್ದಾರೆ. ಅವರಿಗೆಲ್ಲ ಕನ್ನಡ ಬರೆಯಲು, ಓದಲು ಬರಲೇಬೇಕು ಅಂತೇನಿಲ್ಲ"
  • "ಕನ್ನಡೇತರರಿಗೆ ಕನ್ನಡ ಓದೋಕೆ ಬರಲಿ ಅಂತಾ ನಿರೀಕ್ಷೆ ಮಾಡೋದು ಸರಿಯಲ್ಲ"

ಯಾಕೆ ಕನ್ನಡ ಮಾತ್ರಾ ಇತ್ತು?
  • ರಾಜ್ಯ ಚುನಾವಣಾ ಅಯೋಗ ಹೇಳಿದ್ದು "ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯನ್ವಯ, ಕರ್ನಾಟಕದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರದಲ್ಲಿ ಕನ್ನಡವೊಂದಿದ್ದರೆ ಸಾಕು. ಅದರಂತೆಯೇ ಕನ್ನಡದಲ್ಲಿ ಹಾಕಿದ್ದೇವೆ."

ಯಾಕೆ ಕನ್ನಡ ಮಾತ್ರಾ ಸಾಕು?

ಕರ್ನಾಟಕ ಸರ್ಕಾರದ ಆಡಳಿತ ಭಾಷೆ ಕನ್ನಡ. ಈ ನಾಡಿನ ಬಹುಸಂಖ್ಯಾತರು ಕನ್ನಡಿಗರು. ಅವರಿಗಾಗಿ ಇರುವ ವ್ಯವಸ್ಥೆ ಕನ್ನಡದಲ್ಲಿರಲಿ, ಜನಕ್ಕೆ ಅನುಕೂಲ ಆಗಲೀ ಎಂದು ತಾನೇ? ಹಾಗಿದ್ದಾಗ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುತ್ತೀವಿ ಅಂತ ಬರೋ ಯಾರಿಗೆ ಆದ್ರೂ ಕನ್ನಡ ಬರಬೇಕು ಅನ್ನೋದು ಸಹಜವಾದ ನಿರೀಕ್ಷೆ ತಾನೇ? ಇವತ್ತು ಬೆಂಗಳೂರಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದ್ದರಿಂದ ಇಂಗ್ಲಿಷ್ ಬೇಕು ಅನ್ನುವ ಇವರ ಮಾತಿನರ್ಥ ವಲಸೆ ಬಂದ ಎಲ್ಲರಿಗೂ ಇಂಗ್ಲಿಷ್ ಬರುತ್ತೆ ಅಂತಾನಾ? ಹಾಗಿದ್ರೆ ಬಿಹಾರದಿಂದ ಬಡಗಿಯ ಕೆಲಸ ಮಾಡೋಕೆ ಬರೋರಿಗೂ, ತಮಿಳುನಾಡಿಂದ ಕೂಲಿ ಕೆಲಸ ಮಾಡೋಕ್ ಬರೋನಿಗೂ ಇಂಗ್ಲಿಷ್ ಬರುತ್ತಾ? ಅಥವಾ ಅವರಿಗೆ ಇಂಗ್ಲಿಷ್ ಬರಲ್ಲ, ಹೀಗಾಗಿ ಅವರಿಗೂ ಅನುಕೂಲ ಮಾಡ್ ಕೊಡೋಕೆ ಹಿಂದಿ, ತಮಿಳು, ತೆಲುಗು, ಮರಾಠಿ ಹೀಗೆ ಎಲ್ಲ ದೇಶದ ಎಲ್ಲಾ 22 ಭಾಷೆನೂ ಹಾಕಿ ಅಂತಾರಾ? ಹೋಗಲಿ, ಮತಯಂತ್ರಗಳಲ್ಲಿ ಗುರುತಿನ ಸಿಹ್ನೆ ಯಾಕಿರುತ್ತೆ? ಓದಕ್ಕೆ ಬರದವರಿಗೆ ಅಂತಲೇ ತಾನೇ? ಹೀಗಿದ್ದಾಗ ಈ ರೀತಿ ಒಂದು ನಾಡಿನ ಆಡಳಿತ ಭಾಷೆಯನ್ನೇ ಪ್ರಶ್ನೆ ಮಾಡೋರು, ಆ ನಾಡಿನ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸೋಕೆ ಅರ್ಹರಾ ಅನ್ನೋ ಮೂಲಭೂತ ಪ್ರಶ್ನೆ ಮೂಡಲ್ವಾ ಗುರು? ಇಷ್ಟಕ್ಕೂ ಕನ್ನಡನಾಡಿನ ಜನಪ್ರತಿನಿಧಿ ಆಗೋರಿಗೂ, ಆರಿಸೋರಿಗೂ ಕನ್ನಡ ಬರಬೇಕಾದ್ದು ಸರೀ ಅಲ್ವಾ ಗುರು?

ನಾಳೆ ಹೀಗೂ ಆಗಬಹುದು!

ಈ ರೀತಿ ಕನ್ನಡ ಕಲಿಯಲ್ಲ, ಕನ್ನಡ ತಿಳಿಯಲ್ಲ ಅನ್ನೋರು ನಾಳೆ ನಮ್ಮ ನಾಡಿನ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದ್ರೆ ಏನೇನ್ ಆಗಬಹುದು. ಸುಮ್ನೆ ತಮಾಷೆಗೆ ಅಂತ ಒಂದು ಚಿಕ್ಕ ಪಟ್ಟಿ:
  • ಕನ್ನಡ ಭಾವಗೀತೆ, ಜಾನಪದ ಇದೆಲ್ಲ ಇಲ್ಲಿರೋ ವಲಸಿಗರಿಗೆ ಅರ್ಥ ಆಗಲ್ಲ. ಹೀಗಾಗಿ, ಇವುಗಳ ಉಳಿವು ಬೆಳವಿಗಾಗಿ ಸರ್ಕಾರ ದುಡ್ಡು ಖರ್ಚು ಮಾಡೋದು ದೊಡ್ಡ ತಪ್ಪು, ಅದನ್ನ ಕೂಡಲೇ ನಿಲ್ಲಿಸಬೇಕು. ನಮ್ಮ ಕವಿಗಳು ಇವನ್ನು ಇಂಗ್ಲೀಷಿನಲ್ಲಿ ಬರೀಬೇಕು.
  • ಬೆಂಗಳೂರಿನ ರಸ್ತೆಗಳಿಗೆ, ಪಾರ್ಕುಗಳಿಗೆ "ಕೆಂಪೇಗೌಡ, ರಾಜ್‍ಕಮಾರ್, ವಿಶ್ವೇಶ್ವರಯ್ಯ, ಬೇಂದ್ರೆ, ಗೋಕಾಕ್, ಕುವೆಂಪು" ಅಂತೆಲ್ಲ ಹೆಸರಿಟ್ರೆ ಅದನ್ನ ಉಚ್ಚರಿಸೋದು ಕನ್ನಡೇತರರಿಗೆ ಕಷ್ಟ ಆಗುತ್ತೆ. ಹೀಗಾಗಿ ಅಂತ ಹೆಸರೆಲ್ಲ ಇನ್ ಮೇಲೆ ಇಡೋ ಹಾಗಿಲ್ಲ.
  • ಮಂತ್ರಿಗಳು, ಶಾಸಕರು ಕನ್ನಡದಲ್ಲಿ ಮಾತಾಡಿದ್ರೆ ಕನ್ನಡೇತರರಿಗೆ ಹೇಗೆ ಅರ್ಥ ಆಗುತ್ತೆ. ಇನ್ ಮೇಲೆ ಇಂಗ್ಲಿಷ್ ಬಾರದ ಮಂತ್ರಿಗಳು, ಶಾಸಕರು ಒಬ್ಬ ದುಭಾಷಿಯನ್ನು ಇಟ್ಟುಕೊಂಡೇ ತಮ್ಮ ಭಾಷಣ ಮಾಡಬೇಕು.
  • ಆಟೋ, ಬಸ್ಸುಗಳಲ್ಲಿ ಬರೀ ಕನ್ನಡ ಮಾತಾಡೋ ಸಿಬ್ಬಂದಿಯಿದ್ರೆ ಕನ್ನಡೇತರರಿಗೆ ಶಾನೆ ಕಷ್ಟ ಆಗುತ್ತೆ. ಆದ್ದರಿಂದ ಇನ್ ಮೇಲೆ ಇಂಗ್ಲಿಷ್ ಬರದೇ ಇವರಿಗೆಲ್ಲ ಲೈಸೆನ್ಸ್ ಕೊಡೋ ಹಾಗಿಲ್ಲ.
ಹೀಗೆ ಪಟ್ಟಿ ಮಾಡೋಕ್ ಹೊರಟ್ರೆ ಸಾವಿರ ಬರುತ್ತೆ. ಇವು ಭವಿಷ್ಯದಲ್ಲಿ ನಿಜವಾಗಬಾರದು ಅಂದ್ರೆ, ಆಯಾ ನಾಡಿನಲ್ಲಿ ಚುನಾವಣೆಗೆ ನಿಲ್ಲೋರು, ಅಲ್ಲಿನ ಸ್ಥಳೀಯ ಆಡಳಿತ ಭಾಷೆ ಬಲ್ಲವರಾಗಿರಬೇಕು ಅನ್ನೋ ಕಾನೂನು ಬರಬೇಕು. ಏನಂತೀರಾ ಗುರುಗಳೇ?

6 ಅನಿಸಿಕೆಗಳು:

ವಸಂತ ಅಂತಾರೆ...

ಯಾವ ದೇಶದಲ್ಲೇ ಆದ್ರೂ ವಲಸಿಗರಿಗಾಗಿ ಅಲ್ಲಿನ ಆಡಳಿತ ವ್ಯವಸ್ಥೆ ಕಟ್ಟೋ ಉದಾಹರಣೆ ಇದೆಯಾ ಗುರು? ಹಾಗಿದ್ದಾಗ, ಮಾತಿಗೊಮ್ಮೆ ಕನ್ನಡ ಹೇರಿಕೆಯಿಂದ ವಲಸಿಗರಿಗೆ ಅನಾನುಕೂಲ ಆಯ್ತು ಅಂತ ಬಾಯಿ ಬಡಿದುಕೊಳ್ಳೊ ಇಂಗ್ಲಿಷ್ ಮಾಧ್ಯಮಗಳಿರೋದು ವಲಸಿಗರ ಪರ ವಕಾಲತ್ತು ಮಾಡೋದಕ್ಕಾ? ಕರ್ನಾಟಕ ಮುನ್ಸಿಪಾಲ್ಟಿ ಕಾಯಿದೆಯಂತೆ, ಸ್ಥಳೀಯ ಸಂಸ್ಥೆಗಳಿಗೆ ನಡೆಯೋ ಚುನಾವಣೆಯಲ್ಲಿ ಕನ್ನಡವೊಂದಿದ್ದರೆ ಸಾಕು ಅನ್ನುವ ನಿಯಮದಂತೆ ರಾಜ್ಯ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಹಾಗಿದ್ದಾಗ ಕರ್ನಾಟಕದ ರಾಜಧಾನಿಯಲ್ಲೇ "ಕನ್ನಡ ಹೇರಿಕೆ" ಅನ್ನುವಂತಹ ಬರಹ ಬರೆಯುವ ಇಂಗ್ಲಿಷ್ ಮಾಧ್ಯಮಗಳದು ನಾಡ ವಿರೋಧಿ ನಡೆಯಲ್ಲವೇ? ಅಥವಾ, ಇನ್ನೂ ಮೇಲೆ ಇವರ ಅಪ್ಪಣೆಯಂತೆ ನಮ್ಮ ಸರ್ಕಾರ ಕಾಯ್ದೆ-ಕಾನೂನು ರೂಪಿಸಬೇಕಾ? ಇದು ಹೀಗೆ ಮುಂದುವರೆದರೆ, "ಜನರಿಂದ ಜನರಿಗಾಗಿ ನಾಡಿನ ಆಡಳಿತ" ಅನ್ನೋದನ್ನ ಬದಲಾಯಿಸಿ, "ಇಂಗ್ಲಿಷ್ ಮಾಧ್ಯಮದವರಿಂದ ವಲಸಿಗರಿಗಾಗಿ ನಾಡಿನ ಆಡಳಿತ" ಅನ್ನೋ ದಿನಗಳು ಬಂದಾವು !!

Anonymous ಅಂತಾರೆ...

“ಮತಯಂತ್ರಗಳಲ್ಲಿ ಚಿಹ್ನೆಗಳಿರೋದು ಓದು ಬರಹ ಬಾರದವರಿಗಾಗಿ” ಸಾಲು ಓದಿ ಖುಷಿಯಾಯಿತು. ಬಹಳ ಚೆನ್ನಾಗಿ ವಿವರಿಸಿದ್ದೀರ.

-ವಾಸು

Priyank ಅಂತಾರೆ...

ವಲಸಿಗರಿಗೆ ಅಂತ ಆಡಳಿತ ವ್ಯವಸ್ಥೆ ಕಟ್ಟೋದು ಎಂತಾ ದಡ್ಡತನದ ಕೆಲಸ ಅಂತ ಮೊನ್ನೆ ಕರ್ನಾಟೀಕ್-ನಲ್ಲಿ ಒಳ್ಳೆ ಲೇಖನ ಬಂದಿತ್ತು ಗುರು !
ಯಾರಿಗೆ ಅಂತ ವ್ಯವಸ್ಥೆ ಇರಬೇಕು? ವಲಸಿಗನ ಧರ್ಮ ಏನು? ಇದೆಲ್ಲಾ ಸರಿಯಾಗಿ ತಿಳ್ಕೊಳ್ದೇ, ಇಂಗ್ಲಿಷ್ ಪೇಪರ್ನೋರು ಅರ್ಧಂಬರ್ಧ ಅರ್ಥ ಮಾಡ್ಕೊಂಡು ಏನೇನೋ ಬರೀತಾರೆ.

Anonymous ಅಂತಾರೆ...

ಯಾವುದೊ ೨-೩ ವರ್ಷಕ್ಕೆ ಬರೋ ಒಂದು ಚುನಾವಣೇಲಿ ಮತ ಹಾಕಕ್ಕೆ ಬೇರೆ ಊರಿಂದ ಇಲ್ಲೇ ನೆಲಸೋಕ್ಕೆ ಬಂದಿರೋರಿಗೆ ಅನುಕೂಲ ಮಾಡೋಕ್ಕೆ ತೋರಿಸೋ ಆಸಕ್ತೀನ ಇಲ್ಲೇ ಕನ್ನಡ ನೆಲದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೇನೆ ಬರದೆ ಇರೋ ಜನರಿಗೆ ಔಷಧಿ, ಪಧಾರ್ಥ, ಎಲೆಕ್ಟ್ರೋನಿಕ್ ಹಾಗು ಹಲವು ಹತ್ತಾರು ಸಾಮಗ್ರಿಗಳನ್ನೆಲ್ಲಾ ಬರಿ ಇಂಗ್ಲಿಷ್ನಲ್ಲಿ ಇಲ್ಲ ಇನ್ಯಾವುದೋ ಭಾಷೇಲಿ ಹಾಕಿ ಮಾರ್ತಾರಲ್ಲ ಈದ್ ಸರೀನಾ. ಇದು ದಿನಾ ನಡೀತಾ ಇರೋದು. ಇದು ದಿನ ತೊಂದರೆ ಆಗ್ತಾ ಇರೋದು. ಇದರ ಬಗ್ಗೆ ಯಾಕೆ ಯಾರೂ ಮಾತಾಡ್ತಾ ಇಲ್ಲ?
ಎಲ್ಲಿ ಹೋದರು ಬಿಲ್ಲು, ಮೆನು ಎಲ್ಲ ಇಂಗ್ಲಿಷ್ನಲ್ಲೇ, ಇಲ್ಲಿ ಬರಿ ಕನ್ನಡ ಗೊತ್ತಿರೋರು ಏನು ಮಾಡ್ಬೇಕು. ಇಂಗ್ಲೀಶ್ ಮಾತಾಡೋರು ಏನು ಆಕಾಶದಿಂದ ಬಂದಿದ್ದಾರ? ಕನ್ನಡದವರು ದರ್ವೇಷಿಗಳ?. ಕನ್ನಡ ನಾಡಲ್ಲೇ ಕನ್ನಡದವರಿಗೆ ಕನ್ನಡದಲ್ಲಿ ಮಾಹಿತಿ ಸಿಕ್ತಾ ಇಲ್ಲ, ಅದನ್ನ ಮಾಡಬೇಕಾದು ಮೊದಲ ಕರ್ತವ್ಯ ತಾನೇ?

- ಹಾಗಲವಾಡಿ ಜುಂಜಪ್ಪ

Anonymous ಅಂತಾರೆ...

ಈ ಲೇಖನದ ಲಿಂಕ್ ಅನ್ನು ಇಂಗ್ಲಿಶ್ ಪೇಪರುಗಳಿಗೆ ಕಳಿಸಿ. ಅವರು ಓದಿ ಅರ್ಥ ಮಾಡಿಕೊಳ್ಳಲಿ.

-ಗುರು

ಮಾಯ್ಸ ಅಂತಾರೆ...

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಅಂದರೆ, ಅಭ್ಯರ್ಥಿಗಳ ಮಾಹಿತಿ ಕನ್ನಡದಲ್ಲೇ ಇರಬೇಕು ಎಂಬ ಕಾನೂನು ನಮ್ಮ ಹಿಂದಿನ ಸರಕಾರ ಮಾಡಿರುವುದು. ಕಾನೂನು ರೀತ್ಯಾ ಕನ್ನಡಕ್ಕೆ ಭದ್ರತೆಯ ವಿನಾ ಬೇರೆ ಮಾರ್ಗಗಳೆಲ್ಲ ಸುಗಮ ಹಾಗು ಸಮರ್ಪಕವಲ್ಲ.

ನೆರೆರಾಜ್ಯದಂತೆ ದ್ವಿಭಾಷಾಸೂತ್ರ, ಸಾರ್ವಜನಿಕ ಹಾಗು ವಾಣಿಜ್ಯಕ್ಕೆ ಕಡ್ಡಾಯ ಕನ್ನಡದ ಉಪಯೋಗವನ್ನು ಕಾನೂನು ಮಾಡಿದರೆ ಈ ಸಕಲ ಬಾಧೆಗಳು ಸುಲಭವಾಗೇ ನಿವಾರಣೆಯಾಗುವುವು.

ಕನ್ನಡ ಪರಅಭ್ಯರ್ಥಿಗಳು ಜಯಶಾಲಿಗಳಾದರೆ.. ಈ ಇಂಗ್ಲೀಶಪತ್ರಿಕೆಯವರಿಗೆ ತಕ್ಕ ಪಾಠ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails