ಚಲನಚಿತ್ರ ವಿತರಕರ ಸಂಘದ ಆದ್ಯತೆ ಕನ್ನಡ ಚಿತ್ರಗಳಾಗಲಿ!


ಏಪ್ರಿಲ್ 2ನೇ ತಾರೀಖು ಬೆಂಗಳೂರಲ್ಲಿ ಅಖಿಲ ಕರ್ನಾಟಕ ಚಲನಚಿತ್ರ ವಿತರಕರ ಸಂಘದ ಉದ್ಘಾಟನೆ ಆಯ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯಾತೀಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದರು ಅಂತ ಏಪ್ರಿಲ್ 3ರ ವಿಜಯ ಕರ್ನಾಟಕದ ಒಂದು ವರದಿ ಹೇಳುತ್ತೆ. ಈ ಕಾರ್ಯಕ್ರಮದಲ್ಲಿ ಒಂದು ವಿಚಿತ್ರವಾದ ವಿಷಯ ಬೇರೇ ಚರ್ಚೆ ಆಯ್ತಂತೆ.

ವಿತರಕ ಸಂಘದ ಆದ್ಯತೆ ಏನು?

ಈ ಸಂಘದ ಜನ ಕನ್ನಡ ಚಿತ್ರಗಳ ವಿತರಣೆಯಲ್ಲಿ ಎದುರಾಗೋ ತೊಡಕುಗಳನ್ನು ಬಗೆಹರಿಸಿಕೊಳ್ಳೋದು ಹೇಗೆ? ಕನ್ನಡ ಸಿನಿಮಾಗಳ ಮಾರುಕಟ್ಟೇನಾ ಭದ್ರ ಮಾಡ್ಕೊಳ್ಳೋದು ಹೇಗೆ? ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳೋದು ಹೇಗೆ? ತಮ್ಮ ವಿತರಣಾ ಜಾಲಾನಾ ಹೆಚ್ಚಿಸಿಕೊಳ್ಳೋದು ಹೇಗೆ? ಸಿನಿಮಾದ ಯಶಸ್ಸಿಗಾಗಿ ಪ್ರಚಾರದ ಯಾವ ಹೊಸತಂತ್ರಗಳನ್ನು ಬಳಸಿಕೊಳ್ಳಬೇಕು? ಲಾಭ ಹಂಚಿಕೆ ಹೇಗೆ? ಕನ್ನಡಚಿತ್ರಗಳು ಪರಭಾಷಾ ಚಿತ್ರಗಳ ಪೈಪೋಟಿಯನ್ನು ಎದುರಿಸೋ ಹಾಗೇ ಮಾಡೋದು ಹೇಗೆ? ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡುದ್ರಾ ಅಂದ್ರೆ ನಿರಾಸೆ ಆಗುತ್ತೆ ಗುರೂ! ಅಲ್ಲಿರೋರಲ್ಲಿ ಒಗ್ಗಟ್ಟಾಗಿ ಗೆಲುವಿನತ್ತಾ ಸಾಗೋ ಮನಸ್ಥಿತಿ ಇತ್ತಾ ಅನ್ನೋದೆ ದೊಡ್ಡ ಪ್ರಶ್ನೆ. ಯಾಕಂದ್ರೆ ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಜೊತೇಲ್ ಸೇರಸ್ಕೊಂಡು ಮಾತಾಡಿದ್ ಏನು ಗೊತ್ತಾ?

ಪರಭಾಷಾ ಚಿತ್ರದ ವಿತರಣೆ ಹಕ್ಕಿಗಾಗಿ ಭಿಕ್ಷೆ!

ಕರ್ನಾಟಕದಲ್ಲಿ ಇಲ್ಲೀ ತನಕ ತೆಲುಗು ಚಿತ್ರಗಳ ಪ್ರದರ್ಶನದ ಹಕ್ಕು ಕರ್ನಾಟಕದ ಯಾವುದೋ ಒಬ್ಬ ವಿತರಕನಿಗೇ ಸಿಕ್ತಾ ಇತ್ತು. ಈಗೀಗ ಬಳ್ಳಾರಿ-ರಾಯಚೂರು ಜಿಲ್ಲೆಗಳಲ್ಲಿ ತೆಲುಗು ಸಿನೆಮಾಗಳ ವಿತರಣೆ ಹಕ್ಕನ್ನು ಆಂಧ್ರದವರೇ ಇಟ್ಕೊಂತಾ ಇದಾರೆ. ಇದುನ್ನ ಹಿಂದಿನ ಹಾಗೇ ಕರ್ನಾಟಕದವರಿಗೇ ಕೊಡಿಸಬೇಕು, ಅದಕ್ಕೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತಂತೆ. ವಿತರಕರ ಸಂಘದೋರಿಗೆ ದಕ್ಷಿಣ ಭಾರತ ವಾಣಿಜ್ಯ ಮಂಡಳಿಯ ಕಲ್ಯಾಣ್ ಅನ್ನೋರು, ತೆಲುಗು ಸಿನಿಮಾ ವಿತರಣಾ ಹಕ್ಕುನ್ನ ಕನ್ನಡದೋರಿಗೇ ಕೊಡ್ಸಕ್ ಪ್ರಯತ್ನಾ ಮಾಡ್ತೀವಿ ಅಂತಾ ಭರವಸೆ ಬೇರೇ ಕೊಟ್ರಂತೆ. ಈ ಸುದ್ದಿ ಕೇಳಿ ನಗಬೇಕೋ ಅಳಬೇಕೋ ಗೊತ್ತಾಗದೆ ಕನ್ನಡ ಚಲನಚಿತ್ರರಂಗದ ಹಿತೈಶಿಗಳು ತಬ್ಬಿಬ್ಬಾಗಿದಾರಂತೆ! ಇದ್ನ ನೋಡುದ್ರೆ ಕರ್ನಾಟಕದ ಚಲನಚಿತ್ರ ವಿತರಕರು ತೀರಾ ದಯನೀಯ ಸ್ಥಿತೀಲಿ ಇದಾರೆ ಅಂತ ಜನುಕ್ ಅನ್ಸುದ್ರೆ ಆಶ್ಚರ್ಯ ಏನಿಲ್ಲಾ ಗುರೂ!

ಎರೆಹುಳುವಿನಾಸೆ ಬಿಡಬೇಕು!

ಕರ್ನಾಟಕದ ಮೂಲ ಮಾರುಕಟ್ಟೆ ಕನ್ನಡ ಸಿನಿಮಾಗಳದ್ದು. ಈ ಮಾರುಕಟ್ಟೇನ ಕನ್ನಡ ಸಿನಿಮಾ ಸರಿಯಾಗಿ ಬಳಸಿಕೊಳ್ಳದಿದ್ರೆ ಮಣ್ಣುಮುಕ್ಕಬೇಕಾಗುತ್ತೆ. ಕರ್ನಾಟಕವು ತಮಿಳು, ತೆಲುಗು, ಹಿಂದಿ ಮೊದಲಾದ ಚಿತ್ರೋದ್ಯಮಗಳಿಗೆ ಮೂಲಮಾರುಕಟ್ಟೆ ಅಲ್ಲ. ಕರ್ನಾಟಕವೇನಿದ್ರೂ ಬೋನಸ್ ಮಾರುಕಟ್ಟೆ. ಹೀಗಾಗಿ ಇಲ್ಲಿ ಮಾರುಕಟ್ಟೆ ಕಟ್ಟಿಕೊಳ್ಳಕ್ಕೆ ಆ ಚಿತ್ರಗಳೋರು ನಾನಾತಂತ್ರಗಳನ್ನು ಬಳಸೋದು ಸಹಜ. ಒಂದು ಹತ್ತಿಪ್ಪತ್ತು ವರ್ಷ ಹೀಗೆ ಮಾಡಿದ್ರೆ ಸಾಕು, ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗುತ್ತೆ ಅನ್ನೋದು ಈ ತಂತ್ರದ ಭಾಗ. ಹೀಗೆ ಆಗೋದ್ರಿಂದ ಕನ್ನಡ ಚಿತ್ರಗಳ ಮೇಲೆ ದೊಡ್ಡ ಹೊಡೆತ ಬೀಳುತ್ತೆ ಅಂತಾ ವಿತರಕರ ಸಂಘದೋರಿಗೇನು ಗೊತ್ತಿಲ್ವಾ? ಆದ್ರೆ ಇವತ್ತು ಸಿಗ್ತಾ ಇರೋ ಪುಡಿಗಾಸಿನ ಆಸೆಗೆ ನಮ್ಮ ಕರ್ನಾಟಕದ ಚಿತ್ರ ವಿತರಕರು ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೊ ಕೆಲಸ ಮಾಡ್ತಾ ಇದ್ದಾರಾ? ಅನ್ನೋ ಪ್ರಶ್ನೆ ಕಾಡುತ್ತೆ. ಎರೆಹುಳುವಿಗೆ ಆಸೆ ಪಟ್ಟು ಜೀವ ಕಳ್ಕೊಳ್ಳೋ ಪರಿಸ್ಥಿತಿ ಕನ್ನಡ ಚಿತ್ರರಂಗದ್ದಾದೀತು ಅನ್ನೋ ಅರಿವು ವಿತರಕರ ಸಂಘಕ್ಕೆ ಇಲ್ಲದಿದ್ರೇನಂತೆ? ಕಡೇ ಪಕ್ಷ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾದ್ರೂ ಇರಬೇಕಲ್ವಾ ಗುರೂ?

1 ಅನಿಸಿಕೆ:

ವಸಂತ ಅಂತಾರೆ...

ಇನ್ನೂ ವಾಣಿಜ್ಯ ಮಂಡಲಿ ಅಧ್ಯಕ್ಷರು ಮಾತಾಡಿ ಎಲ್ಲ ವಿತರಕರು ಒಟ್ಟಾಗಿ ನಿಂತ್ರೆ ತೆಲುಗು ಚಿತ್ರಗಳ ಹಕ್ಕು ಕನ್ನಡಿಗರಿಗೇ ಸಿಕ್ಕೇ ಸಿಗುತ್ತೆ ಅಂತಲೂ, ಮಲ್ಟಿಪ್ಲೆಕ್ಸ್-ಗಳಲ್ಲಿ ಚಿತ್ರ ವಿತರಣೆ ಮಾಡುವಾಗ ಕನ್ನಡ ಚಿತ್ರಗಳಿಗೂ ಅವಕಾಶ ಕಲ್ಪಿಸಿಕೊಡಿ ಅಂತಲೂ, ವಾಣಿಜ್ಯ ಮಂಡಳಿ ಜೊತೆ ಸಂಘರ್ಷಕ್ಕೆ ಎಡೆ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸುವಂತೆಯೂ ಕೋರಿಕೊಂಡ್ರಂತೆ. ಅಲ್ಲಾ ಗುರು, ವಾಣಿಜ್ಯ ಮಂಡಳಿ ಈ ರೀತಿ ದಯನೀಯವಾಗಿ ಬೇಡಿಕೊಳ್ಳೊದು ನೋಡಿದ್ರೆ, ವಾಣಿಜ್ಯ ಮಂಡಳಿ ಅನ್ನೋದು ಇರೋದು ಬರೀ ಹೆಸರಿಗಷ್ಟೇನಾ? ಅದು ಬರೀ ಕಾಗದದ ಹುಲಿನಾ? ಕರ್ನಾಟಕದಲ್ಲಿ ನೀವು ತೆಲುಗುನಾರಾ ಹಾಕೋಳ್ಳಿ, ಹಿಂದಿನಾರಾ ಹಾಕೊಳ್ಳಿ, ಜೊತೆಗೆ ಅಲ್ಪ ಸ್ವಲ್ಪ ಕನ್ನಡ ಚಿತ್ರಗಳ ವಿತರಣೆ ಮೇಲೂ ದಯೆ ತೋರಿ ಪುಣ್ಯ ಕಟ್ಕೊಳ್ಳಿ ಅನ್ನೋ ರೀತಿಯ ಇವರ ಮನವಿ ನೋಡಿದ್ರೆ, ಇವರ ಕೈಲಿ ನಿಜವಾಗ್ಲೂ ಕನ್ನಡ ಚಿತ್ರರಂಗದ ಹಿತ ಕಾಯಲು ಆಗುತ್ತಾ ? ಕನ್ನಡ ಚಿತ್ರರಂಗದ ಹಿತ ಕಾಯಲು ಆಗಲ್ಲ ಅಂದ್ರೆ ಇಂತಹ ವಾಣಿಜ್ಯ ಮಂಡಳಿ ಇದ್ರೇನು ಬಿಟ್ರೇನು ? ಇದು ಹೀಗೇ ಮುಂದುವರಿದರೆ ನಾಳೆ ಕರ್ನಾಟಕದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡ್ಕೊಡಿ ಅಂತ ಜನ ಬೀದಿಗಿಳಿದು ಪ್ರತಿಭಟನೆ ಕಾಲ ಬಂದ್ರೂ ಬಂದೀತು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails