ಭಾರತವು ಜಗತ್ತಿಗೆ ಅಧ್ಯಾತ್ಮದ ಬೆಳಕನ್ನು ನೀಡಿದ ಹಿರಿಮೆ ಹೊಂದಿದೆ. ವೇದ ಪರಂಪರೆಯಲ್ಲಿ ಮೂಡಿಬಂದಿರುವ ಉಪನಿಶತ್ತುಗಳು, ಭಗವದ್ಗೀತೆಯಂತಹ ಮಹಾ ಕೃತಿಗಳೂ ಸೇರಿದಂತೆ ಭಾರತೀಯ ಅಧ್ಯಾತ್ಮವೆಲ್ಲಾ ಹೆಚ್ಚಿನದಾಗಿ ಸಂಸ್ಕೃತದಲ್ಲಿವೆ. ಹಾಗಾಗಿ ನಮ್ಮಲ್ಲಿ ಸಂಸ್ಕೃತ ಮಂತ್ರಗಳನ್ನು ಉಚ್ಚರಿಸಿ ದೇವರನ್ನು ಪೂಜಿಸುವ ಪದ್ದತಿಯಿದೆ. ಮಂತ್ರ, ಕೈಕರಣೆಗಳೇನೋ ಕಲಿತು ಪೂಜಿಸುವವರು ಬಹಳಷ್ಟು ಮಂದಿಯಿದ್ದರೂ ಆ ಮಂತ್ರಗಳ ಅರ್ಥ ತಿಳಿಸಿಕೊಡುವ ಪೂಜಾ ವಿಧಾನದ ಕಲಿಕೆ ಕಡಿಮೆ ಎನ್ನುವುದು ಕೆಲವರ ಅನಿಸಿಕೆ.
ವೇದ ಶಾಸ್ತ್ರ ಪುರಾಣಗಳನ್ನು ಸಾಮಾನ್ಯರಿಗೆ ಅರ್ಥ ಮಾಡಿಸುವಲ್ಲಿ ಕರ್ನಾಟಕದ ಹರಿದಾಸರುಗಳ ಪರಂಪರೆ ಮಹತ್ವದ ಪಾತ್ರ ವಹಿಸಿವೆ. ಅಂತೆಯೇ ವಚನಗಳೂ ಕೂಡಾ. ಹರಿದಾಸರುಗಳಲ್ಲಿ ಶ್ರೇಷ್ಠಾತಿಶ್ರೇಷ್ಠರೆನ್ನಿಸಿದ ಕನಕದಾಸ, ಪುರಂದರದಾಸ, ಜಗನ್ನಾಥದಾಸ, ವಿಜಯದಾಸರೇ ಮೊದಲಾದವರು ಕೀರ್ತನೆಗಳ ಮೂಲಕವೇ ಸರಳವಾಗಿ ಕನ್ನಡದಲ್ಲಿಯೇ ಭಗವಂತನ ಆರಾಧನೆ ಮಾಡುವ ಬಗೆ ತಿಳಿಸಿದರು.
ಇಂಥದೇ ಹರಿದಾಸ ಪರಂಪರೆಯ ಒಂದು ಕೊಂಡಿಯಾಗಿ ಶ್ರೀ ಖಗವರಧ್ವಜ ವಿಠಲದಾಸರು ಇಂದು ನಮ್ಮ ನಡುವೆಯಿದ್ದಾರೆ. ಇವರು ಅರ್ಥವಾಗದೆ ಮಾಡುವ ಪೂಜೆ ವ್ಯರ್ಥವೇ ಸರಿಯೆಂದು ದೇವರ ಪೂಜೆಯನ್ನು ಕನ್ನಡದಲ್ಲಿ ಧ್ವನಿತಟ್ಟೆಯ ರೂಪದಲ್ಲಿ ಹೊರತಂದಿದ್ದಾರೆ. ಈ ಸಿ.ಡಿಯಲ್ಲಿ ಪೂಜೆಯ ಮಂತ್ರಗಳಿಗೆ ಸರಳವಾದ ಅರ್ಥವನ್ನು ಕೊಟ್ಟಿದ್ದಾರೆ ಮತ್ತು ಕನ್ನಡದಲ್ಲೇ ಕೆಲವೆಡೆ ಪದ್ಯಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ದೇವರ ಪೂಜೆ ಸಾಧ್ಯ ಎಂಬುದನ್ನುಮನವರಿಕೆ ಮಾಡಿಕೊಡುವಲ್ಲಿ ಇದೊಂದು ಒಳ್ಳೆಯ ಯತ್ನವಾಗಿದೆ ಗುರೂ!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!