ಈ ವರದಿಯನ್ನು ಸಿದ್ಧಪಡಿಸುವ ಮುನ್ನ ಏನೆಲ್ಲಾ ಅಳೆಯಲಾಯಿತು ಎಂದು ನೋಡೋಣ. ವರದಿಯ ಯಾವ ಶಿಫಾರಸ್ಸನ್ನು ಒಪ್ಪಲಾಯಿತು, ಯಾವುದನ್ನು ಒಪ್ಪಲಾಗಿಲ್ಲ ಎಂಬುದರ ಬಗ್ಗೆಯೂ ಮುಂದೆ ಮಾತಾಡೋಣ.
ಏನೇನು ಅಳೆದರು?
ಈ ಇಲಾಖೆಗಳಿಗೆ ಸೇರಿದ ಕಚೇರಿಗಳಲ್ಲಿ ಹಲವನ್ನು ಭೇಟಿ ಮಾಡಿದ ಈ ಸಂಸತ್ ಸಮಿತಿಯು ಪ್ರತಿಯೊಂದು ಇಲಾಖೆಯಲ್ಲೂ ಕೆಳಕಂಡ ವಿಷಯಗಳ ಬಗ್ಗೆ ಸಮೀಕ್ಷೆ ನಡೆಸಿತು.
- ಇಲಾಖೆಯಲ್ಲಿರುವ ಒಟ್ಟು ಉದ್ಯೋಗಿಗಳಲ್ಲಿ ಎಷ್ಟು ಜನಕ್ಕೆ ಹಿಂದೀ ಬರುತ್ತದೆ? ಎಷ್ಟು ಜನಕ್ಕೆ ಹಿಂದೀ ಕಲಿಸಬೇಕಿದೆ?
- ಪ್ರತಿಯೊಂದು ಇಲಾಖೆಯಲ್ಲೂ ಎಷ್ಟೆಷ್ಟು ಜನ ಉದ್ಯೋಗಿಗಳು ಹಿಂದೀ ಭಾಷೆಯಲ್ಲಿ ಕೆಲಸ ಮಾಡುತ್ತಾರೆ? ಅಂದರೆ ೧೦೦%, ೭೫%, ೫೦%, ೨೫% ಮತ್ತು ಹಿಂದಿಯನ್ನು ಬಳಸುವುದೇ ಇಲ್ಲ ಎನ್ನುವಂತಹ ಉದ್ಯೋಗಿಗಳ ಪ್ರಮಾಣ.
- ಇಲಾಖೆಯ ಕಾರ್ಯಗಳಲ್ಲಿ ಹಿಂದಿಯಲ್ಲಿ ಎಷ್ಟು ಪ್ರತಿಶತ ದಾಖಲೆಗಳನ್ನು ನೀಡಲಾಗುತ್ತಿದೆ?
- ಹಿಂದಿಯಲ್ಲಿ ಬಂದ ಪತ್ರಗಳಿಗೆ ಹಿಂದಿಯಲ್ಲೇ ಉತ್ತರಿಸಬೇಕು ಎನ್ನುವ ನಿಯಮದ ಉಲ್ಲಂಘನೆಯ ಪ್ರಮಾಣವೆಷ್ಟು?
- ಇಲಾಖೆಯ ಕಡತಗಳು, ಕಡತಗಳ ತಲೆಬರಹಗಳು, ಇಂಗ್ಲೀಷಿನಲ್ಲಿ ಎಷ್ಟು, ಹಿಂದಿಯಲ್ಲಿ ಎಷ್ಟು, ಎರಡೂ ಭಾಷೇಲಿ ಎಷ್ಟಿವೆ?
- ಎಷ್ಟು ತರಬೇತಿ ಕಾರ್ಯಕ್ರಮಗಳನ್ನು ಹಿಂದಿಯಲ್ಲಿ ನಡೆಸಲಾಗುತ್ತಿದೆ? ಎಷ್ಟು ಬೇರೆ ಭಾಷೆಯಲ್ಲಿ ನಡೆದಿವೆ?
- ಹಿಂದೀ ಟೈಪಿಸ್ಟುಗಳು, ಸ್ಟೆನೋಗಳು ಇದ್ದಾರೆ? ಹಿಂದೀ ಉದ್ಯೋಗಗಳು ಎಷ್ಟಿವೆ? ಎಷ್ಟು ತುಂಬಿವೆ?
- ಎಷ್ಟು ಆದೇಶಗಳನ್ನು, ಅಧಿನಿಯಮಗಳನ್ನು ಹಿಂದಿಯಲ್ಲಿ ಹೊರಡಿಸಲಾಗಿದೆ? ಇಂಗ್ಲೀಷಲ್ಲಿ ಎಷ್ಟು? ಎರಡೂ ಭಾಷೆಯಲ್ಲಿ ಎಷ್ಟು?
- ಎಷ್ಟು ಪ್ರತಿಶತ ಹಣವನ್ನು ಹಿಂದೀ ಭಾಷೆಯ ಪುಸ್ತಕಗಳನ್ನು ಕೊಳ್ಳಲು ಖರ್ಚುಮಾಡಲಾಗುತ್ತಿದೆ? ಇಲಾಖೆಯಲ್ಲಿರುವ ಒಟ್ಟು ಅರ್ಜಿ ನಮೂನೆಗಳಲ್ಲಿ ಎಷ್ಟನ್ನು ಇಂಗ್ಲೀಷಿನಲ್ಲಿ ಅಚ್ಚು ಹಾಕಿಸಲಾಗಿದೆ?
- ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿಯ ಆಯ್ಕೆಯಿಲ್ಲದೆ ನಡೆಸಿದ ಪರೀಕ್ಷೆಗಳ ಪ್ರಮಾಣವೆಷ್ಟು? ಹಿಂದೀ ಸಲಹಾಕಾರ ಸಮಿತಿಯನ್ನು ರಚಿಸಲಾಗಿದೆಯೇ? ಇಲ್ಲವೇ?
- ಅಧಿಕೃತ ಭಾಷಾ ನೀತಿಯ ಜಾರಿ ಸಮಿತಿಯನ್ನು ರಚಿಸಲಾದೆಯೇ? ಅದು ವರ್ಷವೊಂದರಲ್ಲಿ ಎಷ್ಟು ಸಭೆಗಳನ್ನು ನಡೆಸಿದೆ?
- ಹಿಂದಿನ ವರ್ಷದಲ್ಲಿ ಎಷ್ಟು ಹಿಂದೀ ಕಲಿಕಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತು?
- ಕಳೆದ ವರ್ಷದ ಇಲಾಖೆಯ ಪರೀಕ್ಷಣಾ ವರದಿಗಳಲ್ಲಿ ಎಷ್ಟನ್ನು ಹಿಂದಿಯಲ್ಲಿ ತಯಾರಿಸಲಾಗಿದೆ? ಹಿಂದೀ ವಿಭಾಗವಲ್ಲದೆ ಒಟ್ಟು ಎಷ್ಟು ವಿಭಾಗಗಳು ಸಂಪೂರ್ಣವಾಗಿ ಹಿಂದೀ ಭಾಷೆಯಲ್ಲಿ ಕೆಲಸ ಮಾಡುತ್ತಿವೆ?
- ಹಿಂದೀ ಸಪ್ತಾಹವನ್ನು ಆಚರಿಸಿದ ನಂತರ ಕಚೇರಿಯಲ್ಲಿ ಹಿಂದೀ ಬಳಕೆಯ ಪ್ರಮಾಣದಲ್ಲಿ ಎಷ್ಟು ಪ್ರತಿಶತ ಹೆಚ್ಚಿದೆ?
ಹಿಂದಿಯೊಂದೇ ಇದ್ದರೆ ಸಡಗರ! ಇಲ್ಲದಿದ್ದರೆ ಕಳವಳ!
ಹೀಗೆ ನಾನಾ ದೇಶದ ನಾನಾ ಮೂಲೆಗಳಲ್ಲಿ ಕೆಲಸ ಮಾಡುತ್ತಿರುವ ಕೇಂದ್ರಸರ್ಕಾರಿ ಇಲಾಖೆಗಳಲ್ಲಿ ಹಿಂದೀ ಭಾಷೆಯ ಬಳಕೆಯನ್ನು ಅಳೆದ ಸಂಸತ್ ಸಮಿತಿ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದೆ.
ಹಿಂದಿಯನ್ನು ತಿಳಿಯದೇ ಇರುವ ನೌಕರರನ್ನು ಹೊಂದಿರುವ ಕೇಂದ್ರಸರ್ಕಾರಿ ಇಲಾಖೆಗಳಲ್ಲಿ ಮೊದಲ ಸ್ಥಾನ ಗೃಹಖಾತೆಯದ್ದು. ಇದರ ಜೊತೆಯಲ್ಲಿ ರಕ್ಷಣಾ ಇಲಾಖೆ, ಕಲ್ಲಿದ್ದಲು ಮತ್ತು ಗಣಿ, ರಾಸಾಯನಿಕ ಮತ್ತು ಗೊಬ್ಬರ, ಗ್ರಾಮೀಣ ಅಭಿವೃದ್ಧಿ, ವಿದ್ಯುತ್ ಮತ್ತು ಉಕ್ಕು ಸಚಿವಾಲಯಗಳ ಇಲಾಖೆಗಳಲ್ಲಿ ನೂರಕ್ಕೆ ಮೂವತ್ತಕ್ಕಿಂತಲೂ ಹೆಚ್ಚು ಜನಕ್ಕೆ ಹಿಂದೀ ಬರುತ್ತಿಲ್ಲ ಎನ್ನುವುದು ಗಂಭೀರವಾದ ಆತಂಕದ ವಿಷಯ. ಒಂದು ವರ್ಷದೊಳಗೆ ಇವರಿಗೆಲ್ಲಾ ತರಬೇತಿ ನೀಡಬೇಕು.
ಕೇವಲ ಹನ್ನೊಂದು ಇಲಾಖೆಗಳು ಮಾತ್ರವೇ ನೂರಕ್ಕೆ ಐವತ್ತಕ್ಕಿಂತ ಹೆಚ್ಚು ಹಿಂದಿಯಲ್ಲಿ ವಹಿವಾಟು ನಡೆಸುತ್ತಿವೆ.
ಹಿಂದಿಯ ಪತ್ರಕ್ಕೆ ಹಿಂದಿಯಲ್ಲೇ ಉತ್ತರವೆನ್ನುವ ಕಾಯ್ದೆಯನ್ನು ಕೆಲವೆಡೆ (ಯುವಜನ ಮತ್ತು ಕ್ರೀಡಾಇಲಾಖೆ) ೭೩% ವರೆಗೂ ಉಲ್ಲಂಘಿಸಲಾಗಿದೆ. ಆಡಳಿತ ಭಾಷಾ ಇಲಾಖೆಯ ಕಾರ್ಯದರ್ಶಿಗಳು ಉಳಿದ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಬೇಕು.
ಮಾನವ ಸಂಪನ್ಮೂಲ ಇಲಾಖೆ, ಸಂಸ್ಕೃತಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ ಮತ್ತು ಗ್ರಾಹಕ ವಹಿವಾಟು, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಗಳು ಇತರೆ ಭಾಷೆಗಳಲ್ಲಿ ಹೊರತಂದಿರುವ ಪ್ರಕಾಶನಗಳ ಸಂಖ್ಯೆಯು ಹಿಂದೀ ಭಾಷೆಯ ಪುಸ್ತಕಗಳ ಸಂಖ್ಯೆಗಿಂತಾ ಕಡಿಮೆಯಿದೆ. ೧೯೯೨ರ ಸರ್ಕಾರಿ ಆದೇಶದ ಪ್ರಕಾರ ಹಿಂದೀ ಭಾಷೆಯ ಪ್ರಕಾಶನಗಳಿಗಿಂತ ಇನ್ನುಳಿದ ಯಾವ ಭಾಷೆಯ ಪ್ರಕಾಶನವೂ ಹೆಚ್ಚಿರಬಾರದು.
ಹೀಗೆ ನಾನಾ ವಿಷಯಗಳತ್ತ ಬೊಟ್ಟು ಮಾಡಿರುವ ಸಂಸತ್ ಸಮಿತಿಯು, ಕೇಂದ್ರಸರ್ಕಾರದ ಎಲ್ಲಾ ಇಲಾಖೆಗಳೂ ಹಿಂದಿಯಲ್ಲಿ ಮಾತ್ರವೇ ವ್ಯವಹರಿಸಬೇಕೆಂಬ ಆಶಯ ತೋರಿಸುತ್ತಾ ಅದನ್ನು ಸಾಧ್ಯವಾಗಿಸಲು ಏನೆಲ್ಲಾ ಮಾಡಬೇಕೆಂಬ ಶಿಫಾರಸ್ಸುಗಳನ್ನು ನೀಡಿದೆ. ಈ ಸಮಿತಿಯು ಭಾರತದಲ್ಲಿನ ಕಲಿಕಾ ವ್ಯವಸ್ಥೆಯ ಬಗ್ಗೆ ನೀಡಿರುವ ಸಲಹೆ ಸೂಚನೆಗಳ ಬಗ್ಗೆ ಮುಂದಿನ ಬಾರಿ ನೋಡೋಣ.
(ಮುಂದುವರೆಯುವುದು)
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!