RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

(ಫೋಟೊ: http://newshopper.sulekha.com/india-hindu-nationalism_photo_1064066.htm )

ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!

ಸಂಘದ ಹೊರಮುಖ!

ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ  ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ!

ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.
ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.
 (ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)
ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.
ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ "ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ?" ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ!


ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ‘ರಾಜ್ಯ’ವನ್ನು ಕೊಟ್ಟು ಎಲ್ಲವನ್ನೂ ಒಂದು ‘ಒಕ್ಕೂಟ’ವಾಗಿ ‘ಸಂಯುಕ್ತ’ಗೊಳಿಸಿತು. ಪ್ರತಿಭಾಷೆಯ ಗುಂಪು ‘ಒಂದು ಜನಾಂಗ’ವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿ‘ಸಮೃದ್ಧವಾಗಿ ಸ್ವಯಮಾಧಿಕಾರ’ವನ್ನು ಪಡೆದ ‘’ರಾಜ್ಯಗಳ ಒಕ್ಕೂಟ’ದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ‘ಸ್ವಯಮಾಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ‘ರಾಜ್ಯಗಳ’ ಅಸ್ತಿತ್ವವನ್ನೇ ಅಳಿಸಿಹಾಕಬೇಕು.

ಸಮಾಜಿಕ ಸಮಸ್ಯೆಯ ಸರಳೀಕರಣ!


ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:
ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ!

ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.
ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.
ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ?

ಆರೆಸ್ಸೆಸ್ ಮತ್ತು ಕರ್ನಾಟಕ 

ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!

ಸಂಘ ರಾಜಕೀಯಕ್ಕಿಳಿಯಲಿ!

ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ‘ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ’ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ‘ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್’ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ!

ಭಾರತವು ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಲಿ!

(ಫೋಟೋ: http://www.goodlightscraps.com/republic-day.php)
ನಾಳೆ ಭಾರತದ ೬೩ನೇ ಗಣರಾಜ್ಯದಿನೋತ್ಸವ. ೧೯೫೦ರ ಜನವರಿ ೨೬ರಂದು ಸಂವಿಧಾನವು ಜಾರಿಯಾದ ದಿನವನ್ನು ಹೀಗೆ ಪ್ರತಿವರ್ಷ ಗಣರಾಜ್ಯದಿನವನ್ನಾಗಿ ಆಚರಿಸಲಾಗುತ್ತದೆ. ಗುಲಾಮಗಿರಿಯ ನೂರಾರು ವರ್ಷಗಳ ನಂತರ ದೊರೆತ ಬಿಡುಗಡೆಯ ಸಂದರ್ಭದಲ್ಲಿ, ನಮ್ಮ ದೇಶದಲ್ಲಿ ಎಂತಹ ಆಡಳಿತ ವ್ಯವಸ್ಥೆಯಿರಬೇಕು ಎನ್ನುವುದನ್ನು ನಾವೇ ತೀರ್ಮಾನಿಸಿ, ರೂಪಿಸಿ, ಒಪ್ಪಿಕೊಂಡ ದಿನ ಇದು. ಈ ಸಂದರ್ಭದಲ್ಲಿ ದೆಹಲಿಯಂತೆಯೇ ದೇಶದ ಎಲ್ಲೆಡೆ ನಡೆಯುವ ಪೆರೇಡುಗಳ ನಡುವೆ ನಾವೇ ಒಪ್ಪಿಕೊಂಡಿರುವ ಈ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಆಲೋಚಿಸುವುದು ಸೂಕ್ತವಾಗಿದೆ.

ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಬೇಕು!

ಭಾರತ ಸಂವಿಧಾನದ ಮೊದಲಮಾತಿನಲ್ಲೇ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಲು ಬದ್ಧರಾಗುತ್ತೇವೆ ಎನ್ನುವರ್ಥದ ಸಾಲುಗಳಿವೆ. ಮುಂದೆ ಮೊದಲ ಭಾಗದಲ್ಲಿ UNION OF STATES, ಭಾರತವೊಂದು ರಾಜ್ಯಗಳ ಒಕ್ಕೂಟ ಎನ್ನಲಾಗಿದೆ. ನಾವು ಒಟ್ಟಾರೆಯಾಗಿ ಭಾರತದ ಸ್ವರೂಪವನ್ನು ನೋಡಿದರೆ ಇದರಲ್ಲಿ ರಾಜ್ಯಗಳು ಮತ್ತಷ್ಟು ಸ್ವಾಯತ್ತತೆಯನ್ನು ಹೊಂದಿರಬೇಕಾಗಿತ್ತೇನೋ ಅನ್ನಿಸದಿರದು. ಭಾರತದ ಸಂವಿಧಾನದಲ್ಲಿಯೇ ಆಡಳಿತಾತ್ಮಕವಾದ ವಿಷಯಗಳನ್ನು ಮೂರು ಪಟ್ಟಿ ಮಾಡಿ ರಾಜ್ಯಪಟ್ಟಿ, ಕೇಂದ್ರ ಪಟ್ಟಿ ಹಾಗೂ ಜಂಟಿ ಪಟ್ಟಿಗಳಾಗಿಸಲಾಗಿದೆ. ಇರುವ ೨೧೧ ಆಡಳಿತದ ವಿಷಯಗಳಲ್ಲಿ ಕೇವಲ ೬೬ ಮಾತ್ರಾ ರಾಜ್ಯಗಳ ಪಾಲಿಗಿವೆ. ಪ್ರಜಾಪ್ರಭುತ್ವದ ಅರ್ಥವೇ ಜನತೆ ತಮ್ಮನ್ನು ತಾವು ಆಳಿಕೊಳ್ಳುವುದು ಎಂದಾಗಿರುವಾಗ ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣವಾಗಬೇಕಾದ ಅಗತ್ಯವಿದೆ. ಕೇಂದ್ರಸರ್ಕಾರವು ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಮೊದಲಾದ ವಿಷಯಗಳಿಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕಾದ ಅಗತ್ಯವಿದೆ. ಇದಷ್ಟೇ ಅಲ್ಲದೆ ಈ ದಿಕ್ಕಿನಲ್ಲಿ ಮೊದಲಹೆಜ್ಜೆಯಾಗಿ, ಇಡೀ ಭಾರತದ ಏಕತೆಗೇ ಕಳಂಕಪ್ರಾಯವಾಗಿರುವ ಹುಳುಕಿನ ಭಾಷಾನೀತಿಯನ್ನು ಕೈಬಿಡಬೇಕಾಗಿದೆ. ನಿಜವಾದ ಸಮಾನ ಗೌರವದ, ಸಮಾನ ಅವಕಾಶದ ಸರಿಯಾದ ಒಕ್ಕೂಟವೊಂದು ರೂಪುಗೊಳ್ಳಬೇಕಾದೆ. ಅಂದರೆ ಒಕ್ಕೂಟ ವ್ಯವಸ್ಥೆಯಿಂದ ಒಪ್ಪುಕೂಟ ವ್ಯವಸ್ಥೆಯಾಗುವತ್ತ ಭಾರತ ಸಾಗಬೇಕಿದೆ.

ಅರವತ್ಮೂರು ವರ್ಷಗಳ ಹಿಂದೆ ರೂಪಿಸಿ ಜಾರಿಗೆ ತಂದ ಸಂವಿಧಾನ ಮತ್ತು ಭಾರತದ ವ್ಯವಸ್ಥೆಗಳು ಪರಾಮರ್ಶೆಗೆ ಒಳಗಾಗಬೇಕಾಗಿದೆ. ಮತ್ತಷ್ಟು ಸಭ್ಯ, ನಾಗರೀಕ, ಪ್ರಜಾಪ್ರಭುತ್ವಗಳ ಕಡೆಗೆ ಭಾರತ ನಡೆಯಲು ಹಾಗೂ ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು, ಸಾಗಬೇಕಾದ ದಾರಿಗಳ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ. ಭಾರತ ದೇಶವು,  ಒಂದು ಸರಿಯಾದ ಒಪ್ಪುಕೂಟವಾಗಲು ಇಂತಹದ್ದೊಂದು ನಡೆ ಅತ್ಯಗತ್ಯವಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಕರ್ನಾಟಕದ್ದೂ ತಂಡವಿರಲಿ!


ಇತ್ತೀಚಿಗೆ ಹೆಸರಾಂತ ಕ್ರಿಕೆಟ್ ಬಣ್ಣನೆಗಾರರಾದ ಶ್ರೀ ಹರ್ಷ ಬೋಗ್ಲೆಯವರು ಭಾರತೀಯ ಕ್ರಿಕೆಟನ್ನು ಬಲಪಡಿಸೋ ದಿಕ್ಕಿನಲ್ಲಿ ಏನೇನು ಮಾಡಬೇಕು ಅಂತಾ ಮಾತಾಡಿರೋ ಸುದ್ದಿ ಪ್ರಕಟವಾಗಿದೆ. ಬಲಶಾಲಿಯಾದ ರಾಷ್ಟ್ರೀಯ ತಂಡವೊಂದನ್ನು ಹುಟ್ಟುಹಾಕುವಲ್ಲಿ ಅನುಕೂಲವಾಗುವಂತೆ ರಣಜಿ ತಂಡಗಳನ್ನು ಮರುರೂಪಿಸಬೇಕು ಎಂದಿರುವ ಅವರ ಮಾತುಗಳು  ಒಂದಿಷ್ಟು ಬೇರೆಯೇ ಆಲೋಚನೆಗೆ ಹಚ್ಚುವಂತಿವೆ! ಅವರೇನೋ ಈಗಿರುವ ೨೭ ತಂಡಗಳನ್ನು ಹನ್ನೆರಡಕ್ಕೆ ಇಳಿಸುವ ಮೂಲಕ ಗುಣಮಟ್ಟ ಹೆಚ್ಚಿಸಬಹುದು ಎಂದಿದ್ದಾರೆ. ಆದರೆ...

ಭಾರತ ತಂಡ ವಿಶ್ವ ಕ್ರಿಕೆಟ್ಟಿನಲ್ಲಿ ದೊಡ್ಡ ಹೆಸರಾಗಿರುವುದು ತನ್ನ ಸಾಧನೆಗಿಂತಲೂ ಹೆಚ್ಚಾಗಿ ತಾನು ಹೊಂದಿರುವ ದೊಡ್ಡ ಸಂಖ್ಯೆಯ ಅಭಿಮಾನಿಗಳ ಕಾರಣದಿಂದ ಎಂದರೆ ತಪ್ಪಾಗಲಾರದು. ತೀರಾ ಇತ್ತೀಚಿನವರೆಗೆ ಅಷ್ಟೇನೂ ಯಶಸ್ಸು ಕಂಡಿಲ್ಲದ ತಂಡಗಳಲ್ಲಿ ಭಾರತವೂ ಒಂದು (೪೬೨-ಟೆಸ್ಟ್, ೧೧೨-ಗೆಲುವು, ೧೪೬-ಸೋಲು). ಮೊದಲೆಲ್ಲಾ ಹೊರದೇಶಗಳಿಗೆ ಹೋದರೂ, ಅವೇ ಇಲ್ಲಿಗೆ ಬಂದರೂ ಸರಣಿ ಸೋಲು ಕಟ್ಟಿಟ್ಟ ಬುತ್ತಿಯಾಗಿದ್ದ ಭಾರತ ಕ್ರಿಕೆಟ್‍ನಲ್ಲಿ ನಿಧಾನವಾಗಿ ಅಲ್ಲೊಂದು ಇಲ್ಲೊಂದು ಗೆಲುವು ಶುರುವಾಗಿ, ಆಮೇಲೆ ತವರಿನಲ್ಲಿ ಸರಣಿ ಗೆಲುವು ಕಂಡು... ಅಪರೂಪಕ್ಕೆ ವಿದೇಶದಲ್ಲಿ ಗೆಲುವು ಎನ್ನುವ ಹಂತ ತಲುಪಿದ್ದೇವೆ ಎನ್ನುವ ಮಾತಿನಲ್ಲಿ ದಿಟವಿದ್ದಂತಿದೆ. ಇತ್ತೀಚಿಗೆ ಇಂಗ್ಲೇಂಡ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಹೀನಾಯವಾಗಿ ಸೋತಿರುವ ಸಂದರ್ಭದಲ್ಲಿ ಯಾಕೆ ಹೀಗಾಯ್ತು ಎನ್ನುವ ಪ್ರಶ್ನೆಗಳು, ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನಗಳೂ ನಡೆದಿರುವುದನ್ನು ಕಾಣಬಹುದಾಗಿದೆ. ಇಂತಹುದೇ ಪ್ರಯತ್ನವನ್ನು ಶ್ರೀ ಹರ್ಷ ಬೋಗ್ಲೆಯವರ ಲೇಖನವೂ ಮಾಡಿದೆ.  ಭಾರತೀಯ ಕ್ರಿಕೆಟ್ಟಿನ ಗುಣಮಟ್ಟ ಹೆಚ್ಚಿಸಲು ಈಗಿನ ರಣಜಿ ಕ್ರಿಕೆಟ್ ತಂಡಗಳ ಸಂಖ್ಯೆಯನ್ನು ಕಡಿತಗೊಳಿಸಿ ಹೆಚ್ಚೆಚ್ಚು ಸ್ಪರ್ಧಾತ್ಮಕವಾಗಿ ಆಡಿಸಬೇಕು. ತಂಡದಲ್ಲಿ ಕಡಿಮೆ ಸ್ಥಾನಗಳಿರುತ್ತವೆಯಾದ್ದರಿಂದ ಸ್ಪರ್ಧೆ ಹೆಚ್ಚಿ ಗುಣಮಟ್ಟದ ಆಟಗಾರರನ್ನು ಹುಟ್ಟುಹಾಕಲು, ಅಂತಹವರನ್ನು ತರಬೇತು ನೀಡಲು, ಅನುಭವ ದೊರಕಿಸಿಕೊಡಲು ಅನುಕೂಲವಾಗಲಿದೆ ಎಂಬ ಅನಿಸಿಕೆ ಅವರದ್ದು. ಆದರೆ ನಮ್ಮನ್ನು ಕಾಡೋ ಪ್ರಶ್ನೆಗಳು ಬೇರೇನೇ ಇವೆ. ಅದಕ್ಕೆ ಮೊದಲು ಕ್ರಿಕೆಟ್ ಆಡೋ ದೇಶಗಳ ಬಗೆಗಿನ ಸಣ್ಣ ಮಾಹಿತಿಯನ್ನು ನೋಡೋಣ.

ಕ್ರಿಕೆಟ್ ಆಡೋ ದೇಶಗಳು!

ಕ್ರಿಕೆಟ್ ಆಡುವ ಹದಿನಾರು ಪ್ರಮುಖ  ದೇಶಗಳ ಜನಸಂಖ್ಯೆಯ ಪಟ್ಟಿಯನ್ನು ನೋಡಿ. ಕ್ರಿಕೆಟ್ ತಂಡವೊಂದು ಬಲಿಷ್ಟವಾಗಿರುವುದಕ್ಕೂ, ಆ ದೇಶದ ಜನಸಂಖ್ಯೆಗೂ ಯಾವ ಸಂಬಂಧವೂ ಇಲ್ಲಾ ಎನ್ನಬಹುದು. ಹದಿನಾರರಲ್ಲಿ ಹದಿಮೂರು ದೇಶಗಳ ಜನಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತಲೂ (೫.೨ ಕೋಟಿಗಳಿಗಿಂತಾ) ಕಡಿಮೆ ಇದೆ. ಮೂರು ದೇಶಗಳು ಅಂದ್ರೆ ಪಾಕಿಸ್ತಾನ್, ಬಾಂಗ್ಲಾ ಮತ್ತು ಭಾರತಗಳು ಮಾತ್ರಾ ಹತ್ತುಕೋಟಿಗಿಂತಾ ಹೆಚ್ಚಿನ ಜನಸಂಖ್ಯೆ ಹೊಂದಿವೆ. ಭಾರತದ ಜನಸಂಖ್ಯೆ ನೂರಿಪ್ಪತ್ತು ಕೋಟಿಯಿದ್ದು ಉಳಿದ ಎಲ್ಲಾ ಕ್ರಿಕೆಟ್ ಆಡೋ ದೇಶಗಳ ಒಟ್ಟು ಜನಸಂಖ್ಯೆಯ ಎರಡರಷ್ಟಿದೆ. ನಕ್ಷೆಯಲ್ಲಿ   ಕಾಣದಂತಿರುವ ಸ್ಕಾಟ್‍ಲ್ಯಾಂಡ್,ಐರ್‍ಲ್ಯಾಂಡ್, ನ್ಯೂಜಿಲ್ಯಾಂಡ್‍ಗಳಲ್ಲಿನ ಜನಸಂಖ್ಯೆ ಸುಮಾರು ಐವತ್ತು ಲಕ್ಷದ ಆಸುಪಾಸಿದೆ. ಇನ್ನು ವೆಸ್ಟ್ ಇಂಡೀಸ್ ಎನ್ನುವುದಂತೂ ಸಣ್ಣಸಣ್ಣ ದ್ವೀಪರಾಷ್ಟ್ರಗಳ ಒಕ್ಕೂಟವಾಗಿದ್ದು ಒಟ್ಟು ಜನಸಂಖ್ಯೆ ಕೇವಲ ೩೩ ಲಕ್ಷಗಳಷ್ಟಿದೆ. ಹೀಗಿರುವಾಗ ಇಂತಹವುಗಳ ನಡುವೆ ಭಾರತವೇ "ಗುಂಪಿಗೆ ಸೇರದ ಪದ"ದಂತೆ ಕಾಣುತ್ತದೆ.

ಕರ್ನಾಟಕದ್ದೂ ಅಂತರರಾಷ್ಟ್ರೀಯ ತಂಡವಿರಲಿ!

ಯಾಕೆ ಭಾರತದ್ದು ಒಂದೇ ತಂಡವಿರಬೇಕು? ಭಾರತದಿಂದ ಒಂದಕ್ಕಿಂತಾ ಹೆಚ್ಚು ತಂಡಗಳು ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಡುವುದು ಸರಿಯೆನ್ನಿಸದೇ? ಕರ್ನಾಟಕದ ತಂಡ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಂದು ತಂಡವಾಗಿ ಪಾಲ್ಗೊಳ್ಳುವುದು ಸರಿಯಾದುದಲ್ಲವೇ?  ಕ್ರಿಕೆಟ್ ಆಡುತ್ತಿರುವ ದೇಶಗಳ ಸಾಮಾನ್ಯ ಜನಸಂಖ್ಯೆಯನ್ನು ಗಮನಿಸಿದರೆ ಕರ್ನಾಟಕದಿಂದ ತಂಡ ಕಳಿಸೋದು ಸೂಕ್ತ ಎನ್ನಿಸುತ್ತದೆ. ತಂಡವೊಂದರಲ್ಲಿ ಇಂತಿಷ್ಟೇ ಜನರಿರಬೇಕೆನ್ನುವಾಗ ಇರುವ ೧೬ ಸ್ಥಾನಕ್ಕಾಗಿ ಈಗಿದೆ ಎನ್ನಲಾಗುವ ವಲಯವಾರು ಪ್ರಾತಿನಿಧ್ಯ, ಆಯ್ಕೆ ಸಮಿತಿ ಸದಸ್ಯರ ಪಕ್ಷಪಾತ ಮೊದಲಾದ ದೂರುಗಳಿಲ್ಲವಾಗುತ್ತದೆ.  ಜೊತೆಯಲ್ಲಿ ತಂಡದೊಳಗಿನ ಸಾಮರಸ್ಯ ಹೆಚ್ಚುವುದೂ ಇದರಿಂದಾಗುವ ಮಹತ್ವದ ಲಾಭವಾಗಿರುತ್ತದೆ. ಯಾಕೆಂದರೆ ಇಂದಿನ ಭಾರತ ತಂಡ ಒಂದು ತಂಡವಾಗಿ ಆಡುವುದು ಯಾವುದಾದರೂ ಸರಣಿಗೆ ತಂಡ ಆಯ್ಕೆಯಾದ ಮೇಲೆ ನಡೆಸಲಾಗುವ ಶಿಬಿರಗಳು ಮತ್ತು ಅಭ್ಯಾಸ ಪಂದ್ಯಗಳಲ್ಲಿ ಮಾತ್ರಾ! ಅಂದರೆ ಸಚಿನ್ ಮತ್ತು ದ್ರಾವಿಡ್ ಒಟ್ಟಾಗಿ ತಂಡವಾಗಿ ಆಡುವುದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಅವುಗಳ ಸಿದ್ಧತಾ ಪಂದ್ಯಗಳಲ್ಲಿ ಮತ್ತು ತರಬೇತಿ ಶಿಬಿರಗಳಲ್ಲಿ ಮಾತ್ರವೇ ಆಗಿದೆ. ಇದೇ ಮಾತು ರಾಜ್ಯ ತಂಡಕ್ಕೆ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ಯುವಪ್ರತಿಭೆ ಅಭಿಮನ್ಯುಗೆ ಅವಕಾಶ ಇಲ್ಲ ಅನ್ನೋ ದೂರು ಕರ್ನಾಟಕದಿಂದಾಗಲೀ, ಕರ್ನಾಟಕ ತಂಡದ ಏಳೇಳು ಆಟಗಾರರು ಆಯ್ಕೆಯಾಗಿದ್ದಾರೆ ಅನ್ನೋ ದೂರು ಉಳಿದವರಿಂದಾಗಲೀ ಇಲ್ಲವಾಗುತ್ತಲ್ವಾ ಗುರೂ!
ಇನ್ನು ಭಾರತ ಕ್ರಿಕೆಟ್ ತಂಡವೆನ್ನುವುದು ವಾಸ್ತವವಾಗಿ ಭಾರತ ರಾಷ್ಟ್ರೀಯ ತಂಡವಾಗಿರದೆ ಬಿಸಿಸಿಐ ಸಂಸ್ಥೆಯ ತಂಡವಾಗಿದೆ. ಬಿಸಿಸಿಐ ಸಂಸ್ಥೆಯು ಐಸಿಸಿ ಎನ್ನುವ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಸ್ಥೆಯಾಗುವುದಾದಲ್ಲಿ ಕೆಎಸ್‍ಸಿಏ ಕೂಡಾ ಆಗಬಹುದು! ಇಂತಹ ಏರ್ಪಾಟು ಈಗಾಗಲೇ ಇಂಗ್ಲೇಂಡಿನಲ್ಲಿದೆ.

ಕೊನೆಹನಿ: ಒಂದು ದೇಶದಿಂದ ಒಂದೇ ತಂಡ ಇರಬೇಕು, ಇಲ್ದಿದ್ರೆ ದೇಶ ಒಡ್ದೋಗುತ್ತೆ, ಒಗ್ಗಟ್ಟಿರಲ್ಲ ಅನ್ನೋ ಭಾವನೆ ಖಂಡಿತಾ ಬೇಕಿಲ್ಲ. ಯಾಕಂದ್ರೆ ಯುನೈಟಡ್ ಕಿಂಗ್‍ಡಮ್ ಅನ್ನೋ ರಾಜಕೀಯವಾಗಿ ಒಂದಾಗಿರೋ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯಿದ್ದು ಅಲ್ಲಿಂದಲೇ ಇಂಗ್ಲೇಂಡು, ಸ್ಕಾಟ್‍ಲ್ಯಾಂಡು, ಐರ‍್ ಲ್ಯಾಂಡುಗಳ ತಂಡಗಳು ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಇವೆ!! ಇನ್ನು ಭಾರತದಿಂದ ಅನೇಕ ತಂಡಗಳಿರುವಾಗ ನಮ್ಮದೇ ಒಂದು ತಂಡ ಗೆಲ್ಲೋ ಸಾಧ್ಯತೆ ಹೆಚ್ಚಾಗೋದ್ರಿಂದ ಭಾರತ ಗೆಲ್ಲುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗುತ್ತದೆಯಲ್ವಾ ಗುರೂ!

ದೋಸೆಮನೆಗೆ ಹೋಗಿದ್ದೀರಾ?


ಬೆಂಗಳೂರಿನಲ್ಲಿ ವಿಶ್ವೇಶ್ವರಪುರಂ ತಿಂಡಿ ತಿನಿಸಿಗೆ ಭಾಳಾ ಹೆಸರುವಾಸಿ ಗುರೂ! ಅಲ್ಲಿ ವಿ.ಬಿ ಬೇಕರಿ, ತಿಂಡಿ ಬೀದಿ, ಅವರೆಕಾಳು ಪರಿಶೆ.ಮಾಡ್ರನ್, ಕಾಮತ್, ಜನತಾ ಹೋಟಲ್ಲುಗಳಿವೆ. ಆಹಾ... ನೆನೆದರೆ ಬಾಯಲ್ಲಿ ನೀರೂರುವುದು! ಇದೀಗ ಕೆಲದಿನಗಳಿಂದ ಆ ಬಡಾವಣೇಲಿ ಮತ್ತೊಂದು ಹೋಟೆಲ್ ಜನರನ್ನು ಹೆಚ್ಚು ಹೆಚ್ಚು ಸೆಳೀತಾ ಇದೆ. ಅದೇ ದೋಸೆ ಮನೆ. ಮೂರು ಮಹಡಿಯ ಹೋಟೆಲ್ಲಿನಲ್ಲಿ ನೆಲಅಂತಸ್ತಿನಲ್ಲಿ ದರ್ಶಿನಿ, ಮೊದಲಲ್ಲಿ ತಿಂಡಿ, ಎರದನೆಯದರಲ್ಲಿ ಮತ್ತು ಮೂರನೆಯದರಲ್ಲಿ ಊಟ ಸಿಗುತ್ತದೆ. ಹೊಸತನದಿಂದ ಕಂಗೊಳಿಸುತ್ತಿರುವ ಈ ಹೋಟೆಲ್ಲಿಗೆ ಹೋಗಿದ್ದೀರಾ ಗುರೂ?


ದೋಸೆಮನೆಯಲ್ಲಿ ದೋಸೆ ಇದೆ!


ವಿ ವಿ ಪುರಂನ, ಈ ದೋಸೆಮನೆ ಹೋಟೆಲ್‍ನಲ್ಲಿ ನೂರಾರು ಬಗೆಯ ದೋಸೆಗಳು ಸಿಗುತ್ತವೆ. ಬಾಯಿರುಚಿ ಒಬ್ಬೊಬ್ಬರದು ಒಂದೊಂದು ರೀತಿ ನಿಜಾ. ಆದರೆ ಈ ಹೋಟೆಲ್ಲಿನಲ್ಲಿ ಕನ್ನಡಕ್ಕೆ ಕೊಟ್ಟಿರೋ ಸ್ಥಾನ ಮಾತ್ರಾ ಕನ್ನಡಿಗರೆಲ್ಲರನ್ನೂ ಮೆಚ್ಚಿಸುವಂತಿದೆ. ಇಲ್ಲಿ ಕನ್ನಡದ ಮೆನುವಿದೆ. ಈ ಹೋಟೆಲ್ಲಿನ ಹೊರಗೆ ಮತ್ತು ಒಳಗೆ ಇರೋ ಬೋರ್ಡುಗಳಲ್ಲಿ ಕನ್ನಡಕ್ಕೆ ದೊಡ್ಡಸ್ಥಾನವಿದೆ. ಇಲ್ಲಿ ದೋಸೆ ಇದೆ ದೋಸಾ ಇಲ್ಲಾ. ಇಲ್ಲಿ ವಡೆ ಇದೆ ವಡಾ ಇಲ್ಲಾ. ಅಚ್ಚ ಕನ್ನಡದ ವಾತಾವರಣವಿರೋ ಈ ಹೋಟೆಲ್ಲಿಗೆ ಹೋದರೆ ಬರೀ ಹೊಟ್ಟೆ ತುಂಬುಸ್ಕೊಳ್ಳೋದಲ್ಲದೆ ಕನ್ನಡದ ವಾತಾವರಣವನ್ನು ಕಂಡು ಕಣ್ಣು, ಮನಸ್ಸು ಎರಡನ್ನೂ ತುಂಬ್ಕೋಬೌದು..ಗುರೂ!

ಕೊನೆಹನಿ: ಈ ಹೋಟೆಲ್ಲಿನವರದ್ದೊಂದು ಅಂತರ್ಜಾಲ ತಾಣವಿದೆ. ಅದನ್ನು ತೆರೆದ ಕೂಡಲೇ ಆಹಾ ಅನ್ನಿಸುವಂತೆ ಕನ್ನಡ ಕಂಡರೂ ಒಳಗೆ ಹೋದಂತೆಲ್ಲಾ ಕೊಂಡಿಗಳೆಲ್ಲಾ ಇಂಗ್ಲೀಶಿನಲ್ಲೇ ತೆರೆದುಕೊಳ್ಳುತ್ತದೆ. ತಿಂಡಿಗಳ ಹೆಸರು ದೋಸಾ ಅಂತಾನೆ ಇದೆ. ಇರಲೀ ಬಿಡಿ, ಮುಂದಿನ ಸಲ ದೋಸೆಮನೆ ಹೋಟೆಲ್ಲಿಗೆ ಹೋದಾಗ ಹೊಟ್ಟೇ ತುಂಬಾ ದೋಸೆ ತಿಂದು ಅಂತರ್ಜಾಲ ತಾಣದಲ್ಲೂ ಕನ್ನಡ ತರುವ ಬಗ್ಗೆ ಸಲಹೆ ಕೊಟ್ಟು ಬರೋಣ! ಏನಂತೀರಾ ಗುರುಗಳೇ?

ಕನ್ನಡನಾಡಿನ ತೆರೆಗಳಲ್ಲಿ ಕನ್ನಡದ ಚಿತ್ರಗಳಿರಲಿ!


ಕನ್ನಡ ಚಿತ್ರರಂಗದಲ್ಲಿ ಆಗಾಗ ಇಂಥಾ ಸನ್ನಿವೇಶ ಹುಟ್ತಾನೆ ಇದೆ! ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಚಿತ್ರಮಂದಿರಗಳು ಸಿಗ್ತಿಲ್ಲಾ ಅನ್ನೋದು ನಿಜಕ್ಕೂ ನಾಡಿನ ಶೋಚನೀಯ ಸ್ಥಿತಿಯನ್ನು ತೋರುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಿನಿಮಾಗಳನ್ನು ಬಿಡುಗಡೆ ಮಾಡೋದು ವಾಡಿಕೆ. ನಮ್ಮ ರವಿಚಂದ್ರನ್ ಅವರ ಬಹುತೇಕ ಸೂಪರ್ ಹಿಟ್ ಚಿತ್ರಗಳು ತೆರೆ ಕಂಡಿದ್ದು ಇದೇ ದಿನ. ಪ್ರತಿಹಬ್ಬದ ಸಂದರ್ಭದಲ್ಲೂ ಹೆಚ್ಚಿಚ್ಚು ಸಿನಿಮಾಗಳು ಬಿಡುಗಡೆಯಾಗುವುದು ಒಂದು ಸಾಮಾನ್ಯ ರೂಢಿ. ಯಾಕೆಂದರೆ ಹಬ್ಬದ ರಜ ಮತ್ತು ಹಬ್ಬದ ಸಂತಸದಲ್ಲಿರುವ ಉಲ್ಲಾಸದ ಮನಸ್ಸುಗಳು ಜನರನ್ನು ಚಿತ್ರಮಂದಿರಕ್ಕೆ ಕರೆತಂದುಬಿಡುವ ಸಾಧ್ಯತೆಗಳು ಆಗ ಉಳಿದೆಲ್ಲಾ ದಿನಗಳಿಗಿಂತಾ ಹೆಚ್ಚು. ಹಾಗಾಗೇ ಹಬ್ಬ ಬಂದಾಗ ಸಿನಿಮಾಗಳಿಗೆ ಬಿಡುಗಡೆಯ ಸುಗ್ಗಿ! ಆದರೆ ಇತ್ತೀಚಿಗೆ ನಮ್ಮ ನಾಡಿನಲ್ಲಿ ಹಬ್ಬದ ಸಂದರ್ಭದಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯನ್ನೇ ಕಾಣದ ಹೀನಾಯ ಪರಿಸ್ಥಿತಿ ಬಂದೊದಗಿದೆ. ಕಳೆದ ದೀಪಾವಳಿಯ ಸಂದರ್ಭದಲ್ಲಂತೂ ಒಂದೂ ಚಿತ್ರ ಬಿಡುಗಡೆಯಾಗಲಿಲ್ಲ. ಕಾರಣ "ಆ ಸಮಯದಲ್ಲಿ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ, ಅವುಗಳ ಪೈಪೋಟಿ ಎದುರಿಸಲಾಗಲ್ಲಾ.. ಹಾಗಾಗಿ ಕನ್ನಡ ಚಿತ್ರ ಈ ಬಾರಿ ಇಲ್ಲ…" ಎನ್ನುವ ಮಾತುಗಳು ಕೇಳಿಬಂದವು. ಈ ಬಾರಿ ಸಂಕ್ರಾಂತಿಯ ಸಮಯದಲ್ಲೂ ಇಂಥದ್ದೇ ಮತ್ತೊಂದು ಸನ್ನಿವೇಶ ಎದುರಾಗಿದೆ. ಈ ಬಾರಿ ಬಿಡುಗಡೆಗೆ ಕಾದಿರೋ ಕನ್ನಡ ಚಿತ್ರಗಳಿಗೆ ಚಿತ್ರಮಂದಿರವಿಲ್ಲಂತೆ! ಇದೆಂಥಾ ದುರಂತಾ ನೋಡಿ. ನಮ್ಮ ನಾಡಲ್ಲೇ ನಮಗೆ ಹಬ್ಬದ ಸಂದರ್ಭದಲ್ಲಿ ಕನ್ನಡದ ಹೊಸಚಿತ್ರಗಳಿಗೆ ಸಾಕಷ್ಟು ಚಿತ್ರಮಂದಿರಗಳಿಲ್ಲವಂತೆ! ಯಾರು ಹೊಣೆ ಇದಕ್ಕೇ? ಪರಭಾಷಾ ಚಿತ್ರಗಳನ್ನು ತೆಗೆಯೋರಾ? ಅವರ ಕೆಲಸ ಅವರು ಮಾಡ್ತಿದಾರೆ, ನಿಜವಾಗ್ಲೂ ಸರಿಯಿಲ್ಲದೇ ಇರೋರು ನಮ್ಮವರೇ! ನಮ್ಮ ಕನ್ನಡ ಚಿತ್ರರಂಗದ ಬೃಹಸ್ಪತಿಗಳೇ!!

ಪರಭಾಷಾ ಚಿತ್ರಗಳನ್ನು ತಡೆಯೋಕಾಗಲ್ವಾ?

ಇವತ್ತಿನ ದಿನ, ಪರಭಾಷಾ ಚಿತ್ರಗಳ ಬಿಡುಗಡೆಯನ್ನು ತಡೆಯೋಕೆ ಕಾನೂನಿನ ರೀತ್ಯಾ ಆಗಲ್ಲ. ಹೀಗೆ ತಡೆಯಬಲ್ಲವರು ವಾಣಿಜ್ಯ ಮಂಡಲಿಯೋರು, ಸರ್ಕಾರದವರು ಮತ್ತು ಜನರು! ಇದುವರೆಗೂ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಪರಭಾಷಾ ಚಿತ್ರಗಳ ಬಿಡುಗಡೆಯನ್ನು ತಡೆಯೋಕೆ ಅಂತಾ ಮಾಡಿಕೊಂಡಿದ್ದ, ಏಳು ವಾರಗಳ ಅಂತರದ ಬಿಡುಗಡೆ ಹಾಗೂ ಇಂತಿಷ್ಟೇ ಪ್ರಿಂಟುಗಳ ಬಿಡುಗಡೆ ಎಂಬ ಕಟ್ಟಳೆಗಳನ್ನು ಒಳಗೊಂಡಿರೋ “ಜಂಟಲ್‍ಮನ್ ಅಗ್ರಿಮೆಂಟ್” ಎನ್ನೋ ಕೆಲಸಕ್ಕೆ ಬಾರದ ನಿಯಮದಿಂದ ಈ ಕೆಲಸ ಸಾಧ್ಯವೇ ಇಲ್ಲವಾಗಿದೆ. ಇದಕ್ಕೆ ಈ ಹಿಂದೆಯೂ ನಿಯಮ ಮೀರಿ ಬಿಡುಗಡೆಯಾದ ಪರಭಾಷಾ ಚಿತ್ರಗಳೇ ಸಾಕ್ಷಿ. ಅಷ್ಟಕ್ಕೂ ಮೀರಿ ವಾಣಿಜ್ಯ ಮಂಡಳಿಯೋರು ರಾವಣನ್ ಸಿನಿಮಾ ಬಿಡುಗಡೆ ತಡೆಗೆ ಯತ್ನಿಸಿದಾಗ, ಇವರ ಒತ್ತಡಕ್ಕೆ ಮಣಿದ ರಿಲಯನ್ಸ್ ಚಿತ್ರ ತಕ್ಷಣಕ್ಕೆ ಬಿಡುಗಡೆ ಮಾಡಿದ್ದನ್ನು ಹಿಂತೆಗೆದುಕೊಂಡರೂ ಬೆನ್ನಲ್ಲೇ “ಕಾಂಪಿಟೇಶನ್ ಕೌನ್ಸಲ್ ಆಫ್ ಇಂಡಿಯಾ” (ಸಿಸಿಐ)ಕ್ಕೆ ದೂರು ನೀಡಿತು. ಆ ಸಂಸ್ಥೆಯೋರು ಈಗ ವಾಣಿಜ್ಯ ಮಂಡಳಿಗೇ ದಂಡ ಹಾಕಿರೋ ಸುದ್ದಿಯಿದೆ. ಹಾಗಾಗಿ ಮಂಡಳಿಗೆ, ತನ್ನ ಯಾವುದೇ ನಿಯಮಾನ ತೋರಿಸಿ ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ! ಇನ್ನುಳಿದಂತೆ  ಜನತೆ ಪರಭಾಷಾ ಚಿತ್ರಗಳತ್ತ ಮನಸ್ಸು ಮಾಡದೆ ಕನ್ನಡ ಸಿನಿಮಾ ನೋಡಬೇಕು! ಇದೂ ಕೂಡಾ ಆಗದ ಹೋಗದ ಮಾತು. ಯಾರನ್ನೂ ಇಂಥದ್ದನ್ನು ನೋಡಬೇಡಿ ಎಂದು ಯಾರೂ ತಡೆಯಲಾಗದು. ಹಾಗಾದರೆ ಸರ್ಕಾರ ಈ ಬಗ್ಗೆ ರಂಗಕ್ಕಿಳಿಯಬಹುದೇ? ಹೌದೂ! ಕರ್ನಾಟಕ ಸರ್ಕಾರ ಇಂಥದ್ದೊಂದು ದಿಟ್ಟಕ್ರಮಕ್ಕೆ ಮುಂದಾಗಬಹುದು.

ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಘೋಷಣೆ!

ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಘೋಷಣೆಯಲ್ಲಿ ಜಗತ್ತಿನ ಪ್ರತಿಯೊಂದು ಭಾಷಿಕ ಜನಾಂಗಕ್ಕೂ ಇರುವ ಹಕ್ಕುಗಳ ಬಗ್ಗೆ ಮಾತಾಡಲಾಗಿದೆ. ಭಾಷಿಕ ಸಮುದಾಯಗಳು ಅವು ಯಾವುದೇ ದೇಶದಲ್ಲಿರಲಿ, ಯಾವುದೇ ರಾಜಕೀಯ ಪರಿಸ್ಥಿತಿಯಲ್ಲಿರಲಿ, ಆಯಾ ದೇಶದಲ್ಲಿ ಎಂಥದ್ದೇ ಕಾನೂನಿರಲಿ... ಅವುಗಳ ಭಾಷಿಕ ಹಕ್ಕುಗಳಿಗೆ ಧಕ್ಕೆ ತರುವಂತಿಲ್ಲ ಎನ್ನುವ ಈ ಘೋಷಣೆಯಲ್ಲಿ ಒಂದು ಭಾಷಿಕ ಜನಾಂಗದ ನಾಡಲ್ಲಿ ಪರಭಾಷೆಯ ಮನರಂಜನೆಗಳು ಯಾವ ಪ್ರಮಾಣದಲ್ಲಿರಬಹುದು ಎನ್ನುವುದನ್ನು ತೀರ್ಮಾನಿಸುವುದು ಆಯಾ ಭಾಷಿಕರಿಗೆ ಇರುವ ಹಕ್ಕೆಂದು ಹೇಳಲಾಗಿದೆ.

Article 45
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life)
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರವೇ ಪರಭಾಷಾ ಚಿತ್ರಗಳ ಕಡಿವಾಣಕ್ಕೆ ಮುಂದಾಗಬೇಕಾಗಿದೆ. ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಹಾಕೋಕೆ ಅವಕ್ಕೆ ಹೆಚ್ಚಿನ ತೆರಿಗೆ ಹಾಕೋ, ಇಂತಿಷ್ಟೇ ಟಾಕೀಸು ಅನ್ನೋ ನಿಯಾಮಾನ ಸರ್ಕಾರ ಮಾಡಬೇಕಾಗುತ್ತೆ. ಯಾಕಂದರೆ ಇಲ್ಲೂ ಮಾತು ‘ಸರಿಯಿಲ್ಲದ ಒಕ್ಕೂಟ ವ್ಯವಸ್ಥೆ’ಯ ಬುಡಕ್ಕೇ ಬರುತ್ತೆ. ಕನ್ನಡ ಸಿನಿಮಾಗಳಿಗೆ ಪ್ರೈಮರಿ ಮಾರುಕಟ್ಟೆ ಕರ್ನಾಟಕ, ಆದರೆ ಇದು ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ/ ಸೆಕಂಡರಿ ಮಾರುಕಟ್ಟೆ. ಇಂಥಾ ಸನ್ನಿವೇಶದಲ್ಲಿ ನಮ್ಮ ಮಾರುಕಟ್ಟೆ ಕಾಪಾಡಿಕೊಳ್ಳೋ ಹಕ್ಕು ನಮಗಿರಲೇಬೇಕಲ್ಲವೇ? "ಹಾಗೆ ಮಾಡಕ್ಕಾಗಲ್ಲಾ, ಇದು ಭಾರತ, ಇಲ್ಲಿ ಎಲ್ಲಾ ಭಾಷೆಯೋರೂ ಒಂದೇ, ದೇಶವೆಲ್ಲಾ ಒಂದೇ ನಿಯಮಾ, ಭಾರತ ದೇಶದಲ್ಲಿ ಯಾರಿಗಾದರೂ ಎಲ್ಲಾದರೂ ಹೋಗಿ ವ್ಯಾಪಾರ ಮಾಡೋ ಹಕ್ಕು ಭಾರತದ ಪ್ರಜೆಗಳಿಗಿದೆ" ಅಂತಂದುಕೊಂಡು ಹೋದರೆ ನಾಳೆ ನಮ್ಮ ಉಳಿವಿಗೇ ಗ್ಯಾರಂಟಿಯಿಲ್ಲ! ಸರ್ಕಾರ ವಿಶ್ವಸಂಸ್ಥೆಯ ಭಾಷಾಹಕ್ಕುಗಳತ್ತ ಸ್ವಲ್ಪ ಕಣ್ಣು ಹಾಯಿಸಿ ಕನ್ನಡವನ್ನು ಉಳಿಸಲು ಮುಂದಾಗಬೇಕು. ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಮೊದಲ ಆದ್ಯತೆಯನ್ನು ನೀಡುವುದನ್ನು ಕಾನೂನು ಬದ್ಧಗೊಳಿಸಲೇಬೇಕು!

ಇದೆಲ್ಲಾ ಆಗುತ್ತಾ? ಅಂದ್ರೆ ಆಗುತ್ತೆ ಆದ್ರೆ ಅದುಕ್ಕೆ ಇಚ್ಛಾಶಕ್ತಿ ಬೇಕು...ಅಷ್ಟೇ! ಈಗ ನೋಡಿ ಒಂದು ಜನಾಂಗದ ಭಾಷಾಹಕ್ಕಿಗೆ ಧಕ್ಕೆಯಾಗೋದಾದ್ರೆ ಯಾವುದಕ್ಕೆ ಪ್ರಾಮುಖ್ಯತೆ ಸಿಗಬೇಕು ಅಂತಾ ವಿಶ್ವಸಂಸ್ಥೆ ಹೇಳಾಗಿದೆಯಲ್ಲಾ...ಒಟ್ನಲ್ಲಿ ಕೇಳೋಕೆ ಮನಸ್ಸು ಬೇಕು ಅಷ್ಟೆ!

ಕನ್ನಡ ಜನರ ಉಳಿವು ಮತ್ತು ಡಬ್ಬಿಂಗ್!

ಈ ನಿಲುವು ತೆಗೆದುಕೊಂಡರೆ ಕನ್ನಡದ ಜನರು ಉಳಿದ ಭಾಷೆಯ ಚಿತ್ರಗಳನ್ನು ಹೇಗೆ ನೋಡೋದು ಎನ್ನುವ ಪ್ರಶ್ನೆಗೆ ಉತ್ತರ... ಡಬ್ಬಿಂಗ್ ಮೂಲಕ ಎನ್ನಬಹುದು. (ಭಾಷೆಯನ್ನು ಉಳಿಸಿಕೊಳ್ಳೋಕೆ ಇದನ್ನೂ ಒಂದು ಸಾಧನವೆಂದೇ ವಿಶ್ವಸಂಸ್ಥೆ ಪರಿಗಣಿಸುತ್ತಿದೆ.) ಕರ್ನಾಟಕದಲ್ಲಿ ಪ್ರದರ್ಶನವಾಗೋ ಎಲ್ಲಾ ಕನ್ನಡದಲ್ಲಿರಬೇಕಾದ್ದು ಕನ್ನಡದವರ ಹಕ್ಕು. ಹಾಗಾಗಿ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಬೇಕು. "ಅಲ್ರೀ, ಈಗ ಒರಿಜಿನಲ್ ಬಂದ್ರೇ ನಮ್ಮ ಚಿತ್ರಕ್ಕೆ ಟಾಕೀಸ್ ಸಿಗಲ್ಲಾ, ಇನ್ನು ಡಬ್ಬಿಂಗ್ ಬರಕ್ ಬಿಟ್ರೆ ನಮ್ ಗತಿ ಏನು?" ಅನ್ನೋ ಪ್ರಶ್ನೆ ಚಿತ್ರರಂಗದೋರಲ್ಲಿ ಹುಟ್ಟಬಹುದು. ಮೊದಲು ಕನ್ನಡದೋರು ಕನ್ನಡದಲ್ಲಿ ಮನರಂಜನೆಯನ್ನು ಪಡ್ಕೊಳ್ಳೋ ವ್ಯವಸ್ಥೆ ಗಟ್ಟಿಯಾಗಲಿ. ಕನ್ನಡ ಮೊದಲು ಉಳಿದರೆ ಕನ್ನಡ ಚಿತ್ರರಂಗದೋರು ಕೂಡಾ ಉಳಿಯೋದು ಅಲ್ವಾ! ಹಾಗಾಗಿ ಚಿತ್ರರಂಗದೋರಿಗೆ "ಚೆನ್ನಾಗಿರೋ ಸಿನಿಮಾ ತೆಗೀರಿ, ಜನಾ ನೋಡ್ತಾರೆ. ಇಡೀ ಕನ್ನಡನಾಡಿನ ಜನರನ್ನು ಡಬ್ಬಿಂಗ್ ಮೂಲಕ ಕನ್ನಡ ಭಾಷೆಯ ಚಿತ್ರಗಳತ್ತ ಸೆಳೆದಾದ ಮೇಲೆ ನಿಮ್ಮ ಚಿತ್ರಗಳಿಂದ ಅವರನ್ನು ಸೆಳೀರಿ" ಅನ್ನದೇ ವಿಧಿಯಿಲ್ಲ.

ಕನ್ನಡಕ್ಕೆ ಡಬ್ಬಿಂಗ್ ಬೇಡಾ, ಬೇಡಾ ಅಂತಂದು ಅಂದೂ... ಈಗ ಕನ್ನಡದ ಜನರೇ ಪರಭಾಷಾ ಚಿತ್ರಗಳನ್ನು ಆಯಾಯಾ ಭಾಷೆಗಳಲ್ಲೇ ನೋಡಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ ನಿಧಾನವಾಗಿ ಕನ್ನಡ ಚಿತ್ರಗಳಿಂದ ಅವರು ದೂರಾಗ್ತಿದಾರೆ. ಬರೀ ಇಷ್ಟೇ ಆಗಿದ್ದಿದ್ರೆ ಸಹಿಸಬೋದಿತ್ತು.. ಇದರ ಪರಿಣಾಮವಾಗಿ ಮನರಂಜನಾ ಕ್ಷೇತ್ರದಿಂದ ಕನ್ನಡ ಅಳಿದುಹೋಗುವ ಅಪಾಯ ಇದೆ. ಲಾಭವೊಂದನ್ನೇ ಗುರಿಯಾಗಿಸಿಕೊಂಡೋರು ಪರಭಾಷಾ ಚಿತ್ರಗಳ ವಿತರಣೇಲೆ ತೇಲಾಡ್ತಿರೋದು ಒಂದು ಕಡೆಯಾದ್ರೆ, ಡಬ್ಬಿಂಗ್ ವಿರೋಧ ಮಾಡ್ತಾನೇ "ರಿಮೇಕ್ ಒಂದು ಕಷ್ಟದ ಕಲೆ, ಅದನ್ನು ಮಾಡೋಕೂ ತಾಕತ್ತು ಬೇಕು" ಅನ್ನೋ ನಿರ್ದೇಶಕರಂಥಾ ಜನ ಇನ್ನೊಂದು ಕಡೆ, ಪರಭಾಷೆಯಲ್ಲಿ ಚಿತ್ರ ಬಿಡುಗಡೆಯಾಗೋದುನ್ನೇ ಕಾಯ್ಕೊಂಡು ಓಡೋಗಿ ರಿಮೇಕ್ ಹಕ್ಕು ಪಡ್ಕೊಂಡು ಬರೋ ನಿರ್ಮಾಪಕರು ಮೂರನೇ ಕಡೆ... ಡಬ್ಬಿಂಗ್ ಬಂದ್ರೆ ಸಂಸ್ಕೃತಿ ಹಾಳು, ಭಾಷೆ ಹಾಳು ಅಂತನ್ನೋರು ಮತ್ತೊಂದು ಕಡೆ... ಎಲ್ಲಾ ಒಟ್ಟೊಟ್ಗೆ ನಾಡುನ್ನ ಮಕಾಡೆ ಮಲಗುಸ್ತಾ ಇರೋದ್ ಹೆಂಗೆ ನೋಡ್ಕೊಂಡಿರೋದು ಗುರೂ? ಕನ್ನಡ ಚಿತ್ರಗಳು ನಿಧಾನವಾಗಿ ಶಾಶ್ವತವಾಗಿ ಮರೆಯಾಗಲು ಕಾರಣವಾಗುತ್ತಿರುವ ಮತ್ತೆಂದೂ ಏಳಲಾಗದ ಇಂತಹ ಸಾವಿಗಿಂತ ಡಬ್ಬಿಂಗ್ ತರುವ ಸಣ್ಣ ಜರ್ಕ್ ವಾಸಿ ಅನ್ಸಲ್ವಾ!

ನಮ್ಮ ಚಿತ್ರರಂಗದೋರು "ಇಲ್ಲಪ್ಪಾ... ನಮಗೆ ಸ್ಪರ್ಧೆ ಬೇಡಾ, ನಮಗೆ ಬರೀ ಸಬ್ಸಿಡಿ ಬೇಕು, ನಮ್ಮ ಚಿತ್ರಗಳಿಗೆ ಜನರು ಬರಲೀ ಅಂತಾ ತೆರಿಗೆ ವಿನಾಯ್ತಿ ಕೊಡಬೇಕು" ಅಂತಾ ಸದಾ ಸರ್ಕಾರದ ಮುಂದೆ ಕೈಯ್ಯೊಡ್ಡಿ ನಿಲ್ಲದೆ ಒಳ್ಳೊಳ್ಳೆ ಚಿತ್ರ ತೆಗೆದು, ಸ್ಪರ್ಧೆ ಎದುರಿಸಿ ಗೆದ್ದು ತೋರುಸ್ತೀವಿ ಅನ್ನೋ ಸ್ವಾಭಿಮಾನಿಗಳಾಗಬೇಕು. ಇಂಥಾ ಕೆಚ್ಚೆದೆಯ ಕನ್ನಡದೋರುನ್ನ ನಮ್ಮೋರು,. ನಿಜವಾದ ಕನ್ನಡಿಗರು ಅನ್ನಬಹುದು... ಅದು ಬಿಟ್ಟು ಪರಭಾಷೆ ಚಿತ್ರಾ ಪರಭಾಷೇಲೇ ನೋಡಿ, ಯಾಕಂದ್ರೆ ಅದು ಕನ್ನಡದಲ್ಲಿ ಡಬ್ ಆಗ್ಬುಟ್ರೆ ನಮ್ ಸಿನಿಮಾ ನೋಡೋರಿರಲ್ಲಾ, ಕನ್ನಡ ಸಿನಿಮಾ ತೆಗ್ಯೋರಿರಲ್ಲಾ ಅನ್ನೋ ಹೇಡಿತನದಿಂದಾ ನಾಳೆ ಕನ್ನಡನೆಲದಿಂದ ಕನ್ನಡಾನೇ ಅಳಿದುಹೋಗೋದನ್ನು ನೋಡ್ಕೊಂಡು ಸಹಿಸೋದು ಹೇಗೆ ಗುರೂ!

ಕೊನೆಹನಿ:  ತಮಾಶೆ ಅಂದ್ರೆ ಕಳೆದ ದೀಪಾವಳಿ ಸಮಯದಲ್ಲಿ ಕನ್ನಡದ ಚಿತ್ರರಂಗದವರು ಚಿತ್ರ ಬಿಡುಗಡೆ ಮಾಡೊಕೆ ಬೆದರಿದ್ದು ವೇಲಾಯುದಂ, ಏಳುಂ ಅರಿವುಮ್ ಮತ್ತು ರಾ ಒನ್ ಚಿತ್ರಗಳ ಅಬ್ಬರಕ್ಕೆ ಬೆದರಿ. ಆದರೆ ಈ ಮೂರರಲ್ಲಿ ಒಂದೂ ಕೂಡಾ ನಮ್ಮಲ್ಲಿ ಗೆಲ್ಲಲಿಲ್ಲ. ಅಂದ್ರೇನರ್ಥ? ನಮ್ಮವರೇ ಸ್ಪರ್ಧೆಗೆ ಮುಂಚೆ ಸೋತು ಶರಣಾದರು ಅಂತಲ್ಲವೇ?

ಹಿಸ್ಟರಿಯ ಮಿಸ್ಟರಿಯೂ ಕನ್ನಡದಲ್ಲಿ ಸಿಗಲಿ!

ಇತ್ತೀಚಿಗೆ ಹಿಸ್ಟರಿ ಚಾನಲ್‍ನ ಫೇಸ್‍ಬುಕ್ಕಿನಲ್ಲೊಂದು ಶುಭಾಶಯ ಸಂದೇಶ ಹಾಕಲಾಗಿತ್ತು. ಈ ಸಂದೇಶವನ್ನು ತಮಿಳು, ತೆಲುಗು, ಬೆಂಗಾಲಿ, ಮರಾಠಿ ಹಾಗೂ ಹಿಂದೀಯಂತಹ ಕೆಲವು ಭಾರತೀಯ ಭಾಷೆಗಳಲ್ಲಿ ಹಾಕಿದ್ದರು. ಈ ಸಂದರ್ಭದಲ್ಲಿ ಬರೆಯಲಾದ ಒಂದು ಕಮೆಂಟ್ "ಕನ್ನಡದಲ್ಲಿ ಹಿಸ್ಟರಿ ಚಾನೆಲ್ ಯಾವಾಗ ಪ್ರಾರಂಭವಾಗಲಿದೆ? ಆದಷ್ಟು ಬೇಗನೆ ಶುರು ಮಾಡಿರಿ" ಎನ್ನುವ ಅರ್ಥದಲ್ಲಿತ್ತು. ಅದಕ್ಕೆ ಚಾನಲ್ಲಿನವರು ಕೊಟ್ಟ ಉತ್ತರ ದಂಗುಬಡಿಸುವಂತಿತ್ತು! ಅದ್ಯಾರೋ ಪುಣ್ಯಾತ್ಮರು "ಕನ್ನಡನಾಡಿನಲ್ಲಿ ಡಬ್ಬಿಂಗ್ ನಿಶೇಧವಿದೆ, ಹಾಗಾಗಿ ಇಲ್ಲಿ ಹಿಸ್ಟರಿ ಚಾನಲ್ ಶುರುಮಾಡಲಾಗುವುದಿಲ್ಲ" ಎನ್ನುವ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎನ್ನಿಸುತ್ತೆ! ಹಾಗಾಗಿ ಅದೇ ಉತ್ತರವನ್ನು ಚಾನಲ್ಲಿನವರು ಫೇಸ್‍ಬುಕ್ಕಿನಲ್ಲೂ ಬರೆದುಬಿಟ್ಟರು.

ಕಾನೂನು ಮತ್ತು ಕಟ್ಟುಪಾಡು!

ಕನ್ನಡ ಚಿತ್ರರಂಗದಲ್ಲಿದ್ದ ಡಬ್ಬಿಂಗ್ ನಿಶೇಧವೆನ್ನುವ ಪಿಡುಗು ಮುಂದೆ ದೂರದರ್ಶನಕ್ಕೂ ಕಾಲಿಟ್ಟದ್ದು ಇತಿಹಾಸ. ಹಿಂದೆ ಹಿರಿಯರು ಯಾವುದೋ ಸಂದರ್ಭದಲ್ಲಿ ಕೈಗೊಂಡಿದ್ದ ನಿಲುವನ್ನೇ ಮುಂದು ಮಾಡಿಕೊಂಡು, ಇಂದಿಗೂ ಚಿತ್ರೋದ್ಯಮದ ಕೆಲವು ಪಟ್ಟಭದ್ರರು "ಡಬ್ಬಿಂಗ್ ಬೇಡ" ಎಂದು "ಕನ್ನಡದಲ್ಲೇ ಮನರಂಜನೆ" ಪಡೆದುಕೊಳ್ಳುವ ತಮ್ಮ ಸಹಜವಾದ ಹಕ್ಕನ್ನು ಕನ್ನಡಿಗರಿಗೆ ನಿರಾಕರಿಸುತ್ತಾ ಬಂದಿದ್ದಾರೆ.
ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಜನ ಜಾಗೃತಿಯಾಗುತ್ತಿರುವುದನ್ನೂ, ಹಲವರು ಡಬ್ಬಿಂಗ್ ಆದ ಚಿತ್ರಗಳ ನಿಶೇಧ ತೆರವು ಮಾಡಿಸಲು ಕೋರ್ಟಿನ ಮೊರೆಹೋಗಲು ಸಿದ್ಧತೆ ನಡೆಸುತ್ತಿರುವ ಸುದ್ದಿ ಕೇಳಿಬರುತ್ತಿರುವುದರಿಂದಲೂ ಬಹುಷಃ ವಿಚಲಿತರಾದಂತೆ ಕಾಣುತ್ತಿದೆ. ಹಾಗಾಗೇ.. ಹಿಂದೆಲ್ಲಾ ಕಾನೂನು ಎಂದು ಕೇಳಿಬರುತ್ತಿದ್ದ ಆಕ್ಷೇಪಗಳು ಇದೀಗ ಕಟ್ಟುಪಾಡು ಎಂದು ಕೇಳಿಬರುತ್ತಿದೆ. ಕಾನೂನು ಮಾಡುವುದು ಜನರಿಂದ ಆಯ್ಕೆಯಾದ ಶಾಸನ ಸಭೆ... ಅದೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಮಾತ್ರಾ! ಅಂತಹ ಯಾವ ಕಾನೂನೂ ಇಂದು ಡಬ್ಬಿಂಗಿನ ವಿರುದ್ಧವಾಗಿ ಇಲ್ಲ!! ಇನ್ನು ಸಮಾಜ ಮಾಡಿಕೊಂಡಿರುವ ಕಟ್ಟುಪಾಡು ಎನ್ನುವುದಕ್ಕೆ ಅರ್ಥವೇನು? ಯಾರು ಕನ್ನಡ ಸಮಾಜವೆಂದರೆ? ಸಮಾಜದ ಕಟ್ಟುಪಾಡು ಯಾವ ರೀತಿಯಲ್ಲಿರುತ್ತದೆ? ಇಂದಿಗೂ ಕನ್ನಡ ಸಮಾಜ ಡಬ್ಬಿಂಗ್ ನಿಶೇಧದ ಅಂತಹ ಕಟ್ಟುಪಾಡನ್ನು ಒಪ್ಪಿಕೊಂಡೇ ಇದೆಯೋ ಇಲ್ಲವೋ ತಿಳಿಯುವುದು ಹೇಗೆ?...

ಕಟ್ಟುಪಾಡಿನ ಪರೀಕ್ಷೆ ಆಗಿಯೇ ಬಿಡಲಿ!

ಇಂತಹ ಪ್ರಶ್ನೆಗಳಿಗೆ ಗೊಂದಲವಿಲ್ಲದ ಉತ್ತರ ಸಿಗುವುದು ಕಷ್ಟ. ಹಾಗಾಗಿ ಕನ್ನಡ ಸಮಾಜ ಡಬ್ಬಿಂಗ್ ಕಟ್ಟುಪಾಡನ್ನು ಒಪ್ಪಿದ್ದರೆ ಅಂತಹ ಚಿತ್ರಗಳನ್ನು ನೋಡದೇ ಇರುವ ಮೂಲಕ, ಗಲ್ಲಾಪೆಟ್ಟಿಗೆಯಲ್ಲಿ ಸೋಲಿಸುವ ಮೂಲಕ ಉತ್ತರ ನೀಡುತ್ತಾರೆ. ಇಂತಹ ಅವಕಾಶವನ್ನೇ ನಿರಾಕರಿಸುವಂತಹ ವ್ಯವಸ್ಥೆ ನಮ್ಮಲ್ಲಿರುವುದು ಸರಿಯಲ್ಲ. ಹಿಸ್ಟರಿ ಚಾನೆಲ್ ಕನ್ನಡದಲ್ಲಿ ಬಾರದೆ ಇರುವುದರಿಂದಾಗಿ ಅದೆಷ್ಟೋ ಆಸಕ್ತರಿಗೆ ಹಕ್ಕಿನ ನಿರಾಕರಣೆಯಾಗುತ್ತಿರುವಂತೆಯೇ, ಕನ್ನಡ ಸಿನಿಮಾರಂಗದಲ್ಲಿ ಡಬ್ಬಿಂಗ್ ಇಲ್ಲದಿರುವುದರಿಂದ ತಾಯ್ನುಡಿಯಲ್ಲಿನ ನಮ್ಮ ಮನರಂಜನೆಯನ್ನು ನಿರಾಕರಿಸಲಾಗುತ್ತಿದೆ ಎನ್ನುವುದೂ ಸತ್ಯವಾಗಿದೆ. ಇಂತಹ ನಿರಾಕರಣೆ ನಡೆಯುತ್ತಿರುವುದು ದಬ್ಬಾಳಿಕೆಯಿಂದಲೇ ಎನ್ನುವುದನ್ನೂ ನಾವು ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಅದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ "ಝಾನ್ಸಿ ರಾಣಿ ಲಕ್ಷ್ಮಿಬಾಯಿ" ಸೀರಿಯಲ್ ವಿಷಯವಾಗಿ ಜ಼ೀ ಕನ್ನಡ ವಾಹಿಯ ಕಚೇರಿಯ ಮೇಲೆ ನಡೆದ ದಾಳಿ. ಚಿತ್ರರಂಗದ ಗಣ್ಯರೆನ್ನಿಸಿಕೊಂಡ ಕೆಲವರು ಬೀದಿಗಿಳಿಯುವ, ಯಾವ ಹಂತಕ್ಕಾದರೂ ಹೋರಾಟ ಮಾಡುವಂತಹ ವೀರಾವೇಶದ ಬೆದರಿಕೆಯ ಮಾತುಗಳು!! ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೀಗೆ ನಾಗರೀಕರ ಹಕ್ಕುಗಳ ದಮನ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದು ಎಷ್ಟು ಸತ್ಯವೋ ಮುಂದಿನ ದಿನಗಳಲ್ಲಿ ಡಬ್ಬಿಂಗ್ ಬರುವುದನ್ನು ತಡೆಯುವುದೂ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದೂ ಅಷ್ಟೇ ಸತ್ಯಾ! ಕನ್ನಡ ಸಮಾಜಕ್ಕೆ ಡಬ್ಬಿಂಗ್ ಬೇಕೋ ಬೇಡವೋ ಎನ್ನುವುದು ಗಲ್ಲಾಪೆಟ್ಟಿಗೆಗಳು ತೀರ್ಮಾನಿಸಲಿ! ಇದು ಪ್ರಜಾಸತ್ತೆಯಲ್ಲಿ ನಂಬಿಕೆಯಿರುವವರು ಒಪ್ಪುವ ಮಾತಲ್ಲವಾ ಗುರೂ?

ಕೊನೆಹನಿ: ಹಿಸ್ಟರಿ ಚಾನಲ್ಲಿನವರಿಗೆ ಕನ್ನಡದಲ್ಲಿ ವಾಹಿನಿ ಆರಂಭಿಸಲು ರಾಶಿ ರಾಶಿ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ "ಕನ್ನಡದಲ್ಲೂ ವಾಹಿನಿ ಆರಂಭಿಸುವುದನ್ನು ಪರಿಗಣಿಸುತ್ತೇವೆ ಮತ್ತು ಬೆಳವಣಿಗೆಗಳನ್ನು ಹಂಚಿಕೊಳ್ಳುತ್ತೇವೆ" ಎಂಬ ಉತ್ತರ ಅವರ ಗೋಡೆಯಲ್ಲಿ ಹಂಚಿಕೊಂಡಿದ್ದಾರೆ!

"Hindi is foreign" ಎಂದ ಗುಜರಾತ್ ಉಚ್ಚನ್ಯಾಯಾಲಯ!

ಗುಜರಾತಿನ ಉಚ್ಚನ್ಯಾಯಾಲಯ ಕೇಂದ್ರಸರ್ಕಾರದ ಭಾಷಾನೀತಿಯ ಹುಳುಕನ್ನು ಎತ್ತಿ ತೋರಿಸಿ ಗುಜರಾತಿಗಳಿಗೆ ಹಿಂದೀ ಪರಕೀಯ ಭಾಷೆ ಎಂದಿರೋ ಸುದ್ದಿ ಪತ್ರಿಕೆಗಳಲ್ಲಿ (ಟೈಮ್ಸ್ ಆಫ್ ಇಂಡಿಯಾ - ಅಹ್ಮದಾಬಾದ್ - ೨೪.೧೨.೨೦೧೧) ಪ್ರಕಟವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಛೀಮಾರಿ!


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುಜರಾತಿನಲ್ಲಿ ೨೦೦೬ರಲ್ಲಿ, ಅಲ್ಲಿನ  ರಾಷ್ಟ್ರೀಯ ಹೆದ್ದಾರಿ(೮ಡಿ)ಯನ್ನು ದೊಡ್ಡದು ಮಾಡುವ ಸಲುವಾಗಿ, ಅದು ಹಾದು ಹೋಗುವ ದಾರಿಬದಿಯ ಹಳ್ಳಿಗರಿಗೆ ಭೂಮಿ ವಶಪಡಿಕೊಳ್ಳುವ ನೋಟೀಸೊಂದನ್ನು ನೀಡಿತ್ತು. ಜುನಾಗಢದ ಸರಘ್‍ವಾಡಾ ಹಳ್ಳಿಯ ಜನರು ಪ್ರಾಧಿಕಾರದ ನೋಟೀಸು ಹಿಂದೀಯಲ್ಲಿತ್ತು, ಅದು ನಮಗೆ ಅರ್ಥವಾಗಿಲ್ಲ, ಹಾಗಾಗಿ ಭೂಸ್ವಾಧೀನದ ಆ ನೋಟೀಸು ಸಿಂಧುವಲ್ಲ ಎಂದು ವಾದಿಸಿ ನ್ಯಾಯಲಯದ ಮೊರೆ ಹೋಗಿದ್ದರು.

ಈ ಮೊಕದ್ದಮೆಯನ್ನು ವಿಚಾರಣೆ ಮಾಡಿದ ಗುಜರಾತ್ ಹೈಕೋರ್ಟು, ಮಹತ್ವದ ತೀರ್ಪನ್ನು ನೀಡಿ ಗುಜರಾತಿ ನುಡಿಯಲ್ಲಿರದ ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೋಟೀಸು ಅಸಿಂಧು ಎಂದು ಹೇಳಿತು. ಹೀಗೆ ಹೇಳುವ ಸಂದರ್ಭದಲ್ಲಿ ಗುಜರಾತಿಗಳು ಕಲಿಕೆಯಲ್ಲೂ, ಮಾತಿನಲ್ಲೂ, ಬಳಕೆಯಲ್ಲೂ ಗುಜರಾತಿಯನ್ನೇ ಬಳಸುತ್ತಿದ್ದಾರೆ. ಈ ಪರಿಸರದಲ್ಲಿ ಹಿಂದೀ ಭಾಷೆ ಇಲ್ಲಾ. ಹಾಗಾಗಿ ಹಿಂದೀ ಇಲ್ಲಿನವರಿಗೆ ಪರಕೀಯ ಭಾಷೆಯೇ... ಎಂದು ಹೇಳಿತು.

ತಮಾಶೆ ಅಂದ್ರೆ ಹಿಂದೀ ಮತ್ತು ಗುಜರಾತಿಗಳ ಲಿಪಿಗಳು ಹೆಚ್ಚು ಕಮ್ಮಿ ಒಂದೇ ಹೋಲಿಕೆ ಹೊಂದಿವೆ. ಹೀಗಿರುವಾಗ ಗುಜರಾತಿಗಳಿಗೇ ಹಿಂದೀ ಪರಕೀಯ ಅಂದ್ರೆ, ಕನ್ನಡಿಗರಿಗೆ ಹಿಂದೀ ಏನಾಗಬೇಕು ಹೇಳಿ. ಪತ್ರಿಕೇಲಿ "ಹಿಂದೀ ಫಾರಿನ್" ಅಂದ ತಕ್ಷಣ, ಭಾರತ ದೇಶವೇ ಒಡೆದು ಹೋಯಿತು ಅನ್ನೋ ಹಾಗೆ ಗಾಬರಿಯಾದವರಿಗೇನೂ ಕೊರತೆಯಿಲ್ಲ! ನಮ್ಮದಲ್ಲದ್ದೆಲ್ಲಾ ನಮಗೆ ಪರಕೀಯವೇ ಅಲ್ವಾ ಗುರೂ!

ನಮ್ಮೂರಲ್ಲಿ ಹೆಂಗಿದೆ ಪರಿಸ್ಥಿತಿ?

ಈ ಸುದ್ದಿ ಓದಿದಾಗ ಕರ್ನಾಟಕದಲ್ಲಿ ಹೇಗಿದೆ ಪರಿಸ್ಥಿತಿ ಅಂತಾ ಯೋಚನೆ ಮಾಡೋ ಹಾಗಾಗಿದೆ ಗುರೂ! ನೈರುತ್ಯ ರೈಲ್ವೇ ಇಲಾಖೆಯವರು ಜನರಿಗೆ ಬೇಕಿರೋ ಮಾಹಿತಿಗಳನ್ನೆಲ್ಲಾ ಹಾಕೋದೇ ಹಿಂದೀಲಿ ಅನ್ನೋಕೆ ಕೆಳಗಿನ ಜಾಹೀರಾತುಗಳೇ ಸಾಕ್ಷಿ.

(ಪ್ರಜಾವಾಣಿಯಲ್ಲಿ ದಿನಾಂಕ ೨೪.೧೨.೨೦೧೧ರಂದು ಪ್ರಕಟವಾದದ್ದು)

(ವಿಜಯ ಕರ್ನಾಟಕದಲ್ಲಿ ದಿನಾಂಕ ೦೯.೦೯.೨೦೧೦ರಂದು ಪ್ರಕಟವಾದದ್ದು)
ಇನ್ನು ಕನ್ನಡನಾಡಿನ ನಮ್ಮದೇ ಸಂಸ್ಥೆಗಳ ಅಂತರ್ಜಾಲ ತಾಣಗಳ ಬಗ್ಗೆ ಏನೂ ಅಂತಾ ಹೇಳೋದು? ನೋಡಿ.. .ನಮ್ಮ ಬೆಂಗಳೂರಿನ ಮೆಟ್ರೋ ರೈಲು ನಿಗಮದ ಈ ತಾಣವನ್ನು.

(ನಮ್ಮ ಮೆಟ್ರೋದ ಅಂತರ್ಜಾಲ ತಾಣ)

ನಮ್ಮದೇ ರಾಜ್ಯಸರ್ಕಾರದ ಅಂತರ್ಜಾಲ ತಾಣಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಅನ್ನೋದಕ್ಕೆ ಇನ್ನೊಂದು ತಾಣವನ್ನು ನೋಡಿಬಿಡೋಣ.

(www.kar.nic.inನ ಮುಖಪುಟ)
ಅಲ್ಲಾ... ನಮ್ಮದಲ್ಲದ್ದೆಲ್ಲಾ ನಮಗೆ ಪರಕೀಯ ಮತ್ತು ಜನರನ್ನು ಮುಟ್ಟೋಕೆ ನಮ್ಮ ನುಡಿಯೇ ಆಗಬೇಕು ಎನ್ನೋ ಸರಳ ಸತ್ಯಾನಾ ಕೋರ್ಟು ಹೇಳಬೇಕಾ? ನಮ್ಮ ನಾಡಲ್ಲಿ ಇವೆಲ್ಲಾ ಸರಿಹೋಗೋಕೆ ಕನ್ನಡಿಗರು ಯಾವ ಯಾವ ಕೋರ್ಟಿಗೆ ಹೋಗಬೇಕು? ಎಷ್ಟೆಷ್ಟು ಕೇಸು ಬಡಿದಾಡಬೇಕು? ಅಂತಾ ಸ್ವಲ್ಪ ಯೋಚಿಸಬೇಕಾಗಿದೆ ಗುರೂ!

ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್‍ತಾನೇ ಬೇಡಾ ಅಂತಾನೇ?


ಕರ್ನಾಟಕ ಕಂಡ ಅಪರೂಪದ ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮಿನ್‍ಮಟ್ಟು ಅವರದ್ದು ದೊಡ್ಡಹೆಸರು. ತೀಕ್ಷ್ಣವೂ ವಸ್ತುನಿಷ್ಠವೂ ಆದ ಬರಹಗಳಿಂದಲೂ, ಆಳವಾದ ಒಳನೋಟದಿಂದಲೂ ಪತ್ರಿಕಾ ವಲಯದಲ್ಲಿ ಹೆಸರುವಾಸಿಯಾಗಿರುವ ಇವರು ಪ್ರತಿವಾರ ಪ್ರಜಾವಾಣಿಯಲ್ಲಿ ಅನಾವರಣವೆನ್ನುವ ಅಂಕಣವನ್ನು ಬರೆಯುತ್ತಿದ್ದಾರೆ. ಡಿಸೆಂಬರ್ ೧೯ನೇ ತಾರೀಕಿನಂದು ಅನಾವರಣದಲ್ಲಿ "ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ" ಎನ್ನುವ ಒಂದು ಬರಹ ಪ್ರಕಟವಾಗಿತ್ತು. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಲಿದ್ದ ಸಂದರ್ಭಗಳ ಬಗ್ಗೆ, ಅವು ಏಕೆ ಯಶಸ್ವಿಯಾಗಲಿಲ್ಲ ಎನ್ನುವ ಬಗ್ಗೆ ದಿನೇಶ್ ಅವರು ಬರೆದಿರುವ ಈ ಲೇಖನ ಬಹಳ ಚೆನ್ನಾಗಿದ್ದು, ಒಂದು ಹಂತದವರೆಗೆ ವಸ್ತುನಿಷ್ಠವಾಗಿದೆ ಎನ್ನಿಸಿತು. ದೇವರಾಜ ಅರಸರಿಂದ ಆರಂಭವಾದ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನಗಳ ವಿವರಣೆ ನೀಡಿದ ದಿನೇಶ್ ಅವರು ಒಂದು ಹಂತದಲ್ಲಿ ಹೀಗೆಂದು ಬರೆದಿದ್ದಾರೆ...

ಸಿದ್ಧರಾಮಯ್ಯನವರು "ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಅದಕ್ಕೆ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ" ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಮೊಳೆ ಬಿದ್ದದ್ದೇ ಆಗ."
ಮುಂದುವರೆದು...

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು. ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ`ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ. ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು. ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ. ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.
ಮೊದಲ ಓದಿಗೆ ದಿನೇಶ್ ಅವರ ಮಾತುಗಳು ದಿಟವಾಗಿಯೇ ತೋರುತ್ತದೆ. ಬಹಳಷ್ಟು ಸರಿಯಾಗಿಯೇ ಬರೆದಿದ್ದಾರೆ. ಎಲ್ಲಾ ಬರೆದ ಮೇಲೆ ಕೊನೆಗೆ ಒತ್ತುಕೊಟ್ಟಿರುವ ವಿಷಯ ಮಾತ್ರಾ ತಪ್ಪು ಸಂದೇಶ ಹೊಂದಿದೆ. ಆ ಬರಹದ ಕೊನೆಯ ವಾಕ್ಯವನ್ನೊಮ್ಮೆ ಓದಿನೋಡಿ. ಅದರ ಸಾರವಾದ "ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದರೆ ಅದರಿಂದ ರಾಜ್ಯಕ್ಕೆ ನೆಮ್ಮದಿ ಎನ್ನುವುದಾಗಲೀ, ವಿಫಲರಾದರೆ ಜನತೆಗೆ ನೆಮ್ಮದಿ ಎನ್ನುವುದಾಗಲೀ" ಆತುರದ ನಿಲುವಿನಂತೆ ತೋರುತ್ತದೆ.

ಯಡ್ಯೂರಪ್ಪನವರ ಪ್ರಾದೇಶಿಕ ಪಕ್ಷ ನಾಡಿಗೆ ನಿರುಪಯುಕ್ತ

ಯಡ್ಯೂರಪ್ಪನವರು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದರೂ, ವಿಫಲರಾದರೂ ನಾಡಿನ ಜನರಿಗೆ ನಷ್ಟವೇ ಆಗಲಿದೆ. ಇಲ್ಲಿನವರೆಗೆ ಕರ್ನಾಟಕದಲ್ಲಿದ್ದ ಪ್ರಾದೇಶಿಕ ಪಕ್ಷಗಳ ಗತಿಯೇ ಇದಕ್ಕೂ ಆಗಲಿದೆ. ಯಾಕೆಂದರೆ ಇದುವರೆವಿಗೂ ಹಾಗೆ ಪಕ್ಷ ಕಟ್ಟಿದವರು ಕನ್ನಡ - ಕನ್ನಡಿಗ - ಕರ್ನಾಟಕ ಕೇಂದ್ರಿತ ರಾಜಕಾರಣದ ಸಿದ್ಧಾಂತವನ್ನು ಹೊಂದಿರಲಿಲ್ಲ ಮತ್ತು ಯಡ್ಯೂರಪ್ಪನವರದ್ದೂ ಅಂತಹ ಸಿದ್ಧಾಂತವಲ್ಲ. ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿನ ಬಗ್ಗೆ ನೋಡಿದರೆ ಅದು ಅರಿವಾಗುತ್ತದೆ. ಶಿವಸೇನೆ - ಮರಾಠಿ ಕೇಂದ್ರಿತ, ತೆಲುಗುದೇಶಂ - ತೆಲುಗರ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು, ದ್ರಾವಿಡ ಕಳಗಗಳು - ದ್ರಾವಿಡ ಸಿದ್ಧಾಂತ ಕೇಂದ್ರಿತ... ಹೀಗೆ ಆಯಾ ಪ್ರದೇಶದ ಜನಹಿತದ ಪರಮ ಉದ್ದೇಶವನ್ನು ಘೋಷಿಸಿ, ಸಿದ್ಧಾಂತವಾಗಿಸಿಕೊಂಡಿರುವ ಪಕ್ಷಗಳು ಯಶಸ್ವಿಯಾಗಿವೆ. ಆದರೆ ನಮ್ಮ ನಾಡಿನ ಪಕ್ಷಗಳಿಗೆ ಹಿಂದೂ ಇಂತಹ ಯಾವ ಸ್ಪಷ್ಟವಾದ ಸಿದ್ಧಾಂತಗಳೂ ಇರಲಿಲ್ಲ. ಇದ್ದ ರೈತಸಂಘದಂತಹವೂ ಕೂಡಾ ನಾಡಿನ ಎಲ್ಲಾ ವರ್ಗಗಳನ್ನೊಳಗೊಳ್ಳುವ ನಿಲುವನ್ನು ಜನರಿಗೆ ಮನವರಿಕೆ ಮಾಡಿಸಲು ಸಫಲವಾಗಿರಲಿಲ್ಲ ಎನ್ನಬಹುದು.

ಇನ್ನೊಂದೆಡೆ ಕರ್ನಾಟಕದಲ್ಲಿನ್ನೂ ಕನ್ನಡಿಗ ಐಡೆಂಟಿಟಿ ಜಾಗೃತಿಯೇ ಎಳವೆಯ ಹಂತದಲ್ಲಿದೆ. ನಾನೊಬ್ಬ ಕನ್ನಡಿಗ ಎನ್ನುವುದನ್ನೇ ಅರವತ್ತು ವರ್ಷಗಳಿಂದ ನಗಣ್ಯವಾಗಿಸಿಕೊಂಡು ಬಂದಿರುವ ಕರ್ನಾಟಕದಲ್ಲಿ, ನಮ್ಮವರ ಮೈಮರೆವಿನ ಕೊಳೆಯಿನ್ನೂ ತೊಳೆಯಲ್ಪಟ್ಟಿಲ್ಲದಿರುವಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಯಡ್ಯೂರಪ್ಪನವರು ಹೊಸ ಪಕ್ಷ ಕಟ್ಟಿದರೆ, ಅದು ಗೆದ್ದರೂ ಕೆಲವೇ ಸಮಯದಲ್ಲಿ ಮತ್ತೆ ಮೂಲಸಿದ್ಧಾಂತದ ಪಕ್ಷದೊಂದಿಗೆ ವಿಲೀನವಾಗದೆ ಇರುವುದಿಲ್ಲ. ಹಾಗಾಗುವುದಾದರೆ ನಾಳೆ, ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷದ ಹುಟ್ಟಿನ ಬಗ್ಗೆ ಮತ್ತಷ್ಟು ಅಪನಂಬಿಕೆ ಜನರಲ್ಲಿ ಹುಟ್ಟೀತಲ್ಲವೇ? ಇನ್ನು ಅವರ ಪ್ರಯತ್ನ ವಿಫಲವಾದರೆಂತೂ ಹೇಳುವಂತಿಲ್ಲ, ದಿನೇಶರ ಬರಹದ ತಲೆಬರಹ ನಾಳೆ ಕನ್ನಡಿಗರ ಮನದಲ್ಲಿ ಬದಲಾಗದ ನಂಬಿಕೆಯಾಗಿಬಿಡುವ ಅಪಾಯವಿದೆ.

ಪ್ರಾದೇಶಿಕ ಪಕ್ಷ ಬೇಕಿರುವುದು ಯಾರದ್ದೋ ತಾಕತ್ತಿನ ಪರೀಕ್ಷೆಗಲ್ಲ!

ಬರಹದ ಕೊನೆಯಲ್ಲಿ ಹೇಳಿದಂತೆ ಯಾರ್ಯಾರಿಗೋ ಅವರವರ ಯೋಗ್ಯತೆಗಳು, ಬಲಾಬಲಗಳು ಮನವರಿಕೆಯಾಗಬೇಕೆಂಬ ಕಾರಣದಿಂದಾಗಿ ಪ್ರಾದೇಶಿಕ ಪಕ್ಷಗಳು ಹುಟ್ಟುವುದೋ, ಸಾಯುವುದೋ ಆದಲ್ಲಿ ನಿಜಕ್ಕೂ ನಷ್ಟ ಅನುಭವಿಸುವವರು ನಾವೇ. ಕರ್ನಾಟಕದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಸಿದ್ಧಾಂತದ, ನಿಜವಾದ ಒಪ್ಪುಕೂಟದ ಪರವಾದ, ಸಮರ್ಥವಾದ ಪ್ರಾದೇಶಿಕ ಪಕ್ಷವೊಂದು ಹುಟ್ಟಲೇಬೇಕು. ಅದು ತನ್ನ ಸಿದ್ಧಾಂತಗಳ, ನಿಲುಮೆಗಳ ಕಾರಣದಿಂದಾಗಿ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲೂ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಬೇಕು, ಪ್ರೇರಣೆಯಾಗಬೇಕು. ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟವೊಂದು ಅಸ್ತಿತ್ವಕ್ಕೆ ಬಂದು ಸಂಸತ್ತಿನ ಅಧಿಕಾರ ಇವುಗಳ ಕೈಗೆ ಸಿಗಬೇಕು. ಅಂತಹ ಸರ್ಕಾರ ಮಾತ್ರವೇ ವೈವಿಧ್ಯತೆಗಳನ್ನು ಉಳಿಸಿಕೊಂಡೇ ಭಾರತದ ರಾಜ್ಯಗಳು ಸೌಹಾರ್ದತೆಯಿಂದ ಬಾಳುವಂತಾಗುವಂತಹ ನೀತಿ ನಿಲುವುಗಳನ್ನು ರೂಪಿಸಬಲ್ಲವು. ಗಡಿ ತಕರಾರಿರಲಿ, ನದಿ ನೀರು ಹಂಚಿಕೆಯ ರಾಷ್ಟ್ರೀಯ ನೀತಿಯಿರಲಿ, ರಾಜ್ಯಗಳಿಗೆ ಬೇಕಾದ ಸ್ವಾಯತ್ತತೆಯಿರಲಿ, ಈಗ ಕೇಂದ್ರಪಟ್ಟಿ ಮತ್ತು ಜಂಟಿಪಟ್ಟಿಯಲ್ಲಿರುವ.. ಕಲಿಕೆಯೂ ಸೇರಿದಂತೆ ಅನೇಕ ವಿಷಯಗಳಲ್ಲಿ ಹೆಚ್ಚಿನವನ್ನು ರಾಜ್ಯಪಟ್ಟಿಗೆ ತರುವುದಾಗಲೀ... ಅಷ್ಟೇಕೆ ಭಾರತ ನಿಜವಾದ ಒಪ್ಪುಕೂಟವಾಗಲಾಗಲೀ.. ಸಾಧ್ಯವಾಗುವುದು ಇಂತಹ ಸರ್ಕಾರದಿಂದಲೇ!

ಕೊನೆಹನಿ: "ಪ್ರಾದೇಶಿಕ ಪಕ್ಷಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ" ಎನ್ನುವಂತಹ ಮಾತುಗಳು ತೀವ್ರವಾದ ನಿರಾಶವಾದ ಅಥವಾ ಪ್ರಾದೇಶಿಕ ಪಕ್ಷಗಳೆಡೆಗಿನ ನಿಕೃಷ್ಟ ಭಾವನೆಯನ್ನು ತೋರುತ್ತಿದೆಯಾದರೂ ಅದನ್ನು ಆಕಸ್ಮಿಕವೆಂದೇ ತಿಳಿದು ಬಿಟ್ಟುಬಿಡೋಣ...
Related Posts with Thumbnails