(ಫೋಟೋ: http://www.goodlightscraps.com/republic-day.php) |
ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಬೇಕು!
ಭಾರತ ಸಂವಿಧಾನದ ಮೊದಲಮಾತಿನಲ್ಲೇ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಲು ಬದ್ಧರಾಗುತ್ತೇವೆ ಎನ್ನುವರ್ಥದ ಸಾಲುಗಳಿವೆ. ಮುಂದೆ ಮೊದಲ ಭಾಗದಲ್ಲಿ UNION OF STATES, ಭಾರತವೊಂದು ರಾಜ್ಯಗಳ ಒಕ್ಕೂಟ ಎನ್ನಲಾಗಿದೆ. ನಾವು ಒಟ್ಟಾರೆಯಾಗಿ ಭಾರತದ ಸ್ವರೂಪವನ್ನು ನೋಡಿದರೆ ಇದರಲ್ಲಿ ರಾಜ್ಯಗಳು ಮತ್ತಷ್ಟು ಸ್ವಾಯತ್ತತೆಯನ್ನು ಹೊಂದಿರಬೇಕಾಗಿತ್ತೇನೋ ಅನ್ನಿಸದಿರದು. ಭಾರತದ ಸಂವಿಧಾನದಲ್ಲಿಯೇ ಆಡಳಿತಾತ್ಮಕವಾದ ವಿಷಯಗಳನ್ನು ಮೂರು ಪಟ್ಟಿ ಮಾಡಿ ರಾಜ್ಯಪಟ್ಟಿ, ಕೇಂದ್ರ ಪಟ್ಟಿ ಹಾಗೂ ಜಂಟಿ ಪಟ್ಟಿಗಳಾಗಿಸಲಾಗಿದೆ. ಇರುವ ೨೧೧ ಆಡಳಿತದ ವಿಷಯಗಳಲ್ಲಿ ಕೇವಲ ೬೬ ಮಾತ್ರಾ ರಾಜ್ಯಗಳ ಪಾಲಿಗಿವೆ. ಪ್ರಜಾಪ್ರಭುತ್ವದ ಅರ್ಥವೇ ಜನತೆ ತಮ್ಮನ್ನು ತಾವು ಆಳಿಕೊಳ್ಳುವುದು ಎಂದಾಗಿರುವಾಗ ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣವಾಗಬೇಕಾದ ಅಗತ್ಯವಿದೆ. ಕೇಂದ್ರಸರ್ಕಾರವು ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಮೊದಲಾದ ವಿಷಯಗಳಿಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕಾದ ಅಗತ್ಯವಿದೆ. ಇದಷ್ಟೇ ಅಲ್ಲದೆ ಈ ದಿಕ್ಕಿನಲ್ಲಿ ಮೊದಲಹೆಜ್ಜೆಯಾಗಿ, ಇಡೀ ಭಾರತದ ಏಕತೆಗೇ ಕಳಂಕಪ್ರಾಯವಾಗಿರುವ ಹುಳುಕಿನ ಭಾಷಾನೀತಿಯನ್ನು ಕೈಬಿಡಬೇಕಾಗಿದೆ. ನಿಜವಾದ ಸಮಾನ ಗೌರವದ, ಸಮಾನ ಅವಕಾಶದ ಸರಿಯಾದ ಒಕ್ಕೂಟವೊಂದು ರೂಪುಗೊಳ್ಳಬೇಕಾದೆ. ಅಂದರೆ ಒಕ್ಕೂಟ ವ್ಯವಸ್ಥೆಯಿಂದ ಒಪ್ಪುಕೂಟ ವ್ಯವಸ್ಥೆಯಾಗುವತ್ತ ಭಾರತ ಸಾಗಬೇಕಿದೆ.
ಅರವತ್ಮೂರು ವರ್ಷಗಳ ಹಿಂದೆ ರೂಪಿಸಿ ಜಾರಿಗೆ ತಂದ ಸಂವಿಧಾನ ಮತ್ತು ಭಾರತದ ವ್ಯವಸ್ಥೆಗಳು ಪರಾಮರ್ಶೆಗೆ ಒಳಗಾಗಬೇಕಾಗಿದೆ. ಮತ್ತಷ್ಟು ಸಭ್ಯ, ನಾಗರೀಕ, ಪ್ರಜಾಪ್ರಭುತ್ವಗಳ ಕಡೆಗೆ ಭಾರತ ನಡೆಯಲು ಹಾಗೂ ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು, ಸಾಗಬೇಕಾದ ದಾರಿಗಳ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ. ಭಾರತ ದೇಶವು, ಒಂದು ಸರಿಯಾದ ಒಪ್ಪುಕೂಟವಾಗಲು ಇಂತಹದ್ದೊಂದು ನಡೆ ಅತ್ಯಗತ್ಯವಾಗಿದೆ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!