ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್‍ತಾನೇ ಬೇಡಾ ಅಂತಾನೇ?


ಕರ್ನಾಟಕ ಕಂಡ ಅಪರೂಪದ ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮಿನ್‍ಮಟ್ಟು ಅವರದ್ದು ದೊಡ್ಡಹೆಸರು. ತೀಕ್ಷ್ಣವೂ ವಸ್ತುನಿಷ್ಠವೂ ಆದ ಬರಹಗಳಿಂದಲೂ, ಆಳವಾದ ಒಳನೋಟದಿಂದಲೂ ಪತ್ರಿಕಾ ವಲಯದಲ್ಲಿ ಹೆಸರುವಾಸಿಯಾಗಿರುವ ಇವರು ಪ್ರತಿವಾರ ಪ್ರಜಾವಾಣಿಯಲ್ಲಿ ಅನಾವರಣವೆನ್ನುವ ಅಂಕಣವನ್ನು ಬರೆಯುತ್ತಿದ್ದಾರೆ. ಡಿಸೆಂಬರ್ ೧೯ನೇ ತಾರೀಕಿನಂದು ಅನಾವರಣದಲ್ಲಿ "ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ" ಎನ್ನುವ ಒಂದು ಬರಹ ಪ್ರಕಟವಾಗಿತ್ತು. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಲಿದ್ದ ಸಂದರ್ಭಗಳ ಬಗ್ಗೆ, ಅವು ಏಕೆ ಯಶಸ್ವಿಯಾಗಲಿಲ್ಲ ಎನ್ನುವ ಬಗ್ಗೆ ದಿನೇಶ್ ಅವರು ಬರೆದಿರುವ ಈ ಲೇಖನ ಬಹಳ ಚೆನ್ನಾಗಿದ್ದು, ಒಂದು ಹಂತದವರೆಗೆ ವಸ್ತುನಿಷ್ಠವಾಗಿದೆ ಎನ್ನಿಸಿತು. ದೇವರಾಜ ಅರಸರಿಂದ ಆರಂಭವಾದ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನಗಳ ವಿವರಣೆ ನೀಡಿದ ದಿನೇಶ್ ಅವರು ಒಂದು ಹಂತದಲ್ಲಿ ಹೀಗೆಂದು ಬರೆದಿದ್ದಾರೆ...

ಸಿದ್ಧರಾಮಯ್ಯನವರು "ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಅದಕ್ಕೆ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ" ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಮೊಳೆ ಬಿದ್ದದ್ದೇ ಆಗ."
ಮುಂದುವರೆದು...

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು. ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ`ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ. ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು. ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ. ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.
ಮೊದಲ ಓದಿಗೆ ದಿನೇಶ್ ಅವರ ಮಾತುಗಳು ದಿಟವಾಗಿಯೇ ತೋರುತ್ತದೆ. ಬಹಳಷ್ಟು ಸರಿಯಾಗಿಯೇ ಬರೆದಿದ್ದಾರೆ. ಎಲ್ಲಾ ಬರೆದ ಮೇಲೆ ಕೊನೆಗೆ ಒತ್ತುಕೊಟ್ಟಿರುವ ವಿಷಯ ಮಾತ್ರಾ ತಪ್ಪು ಸಂದೇಶ ಹೊಂದಿದೆ. ಆ ಬರಹದ ಕೊನೆಯ ವಾಕ್ಯವನ್ನೊಮ್ಮೆ ಓದಿನೋಡಿ. ಅದರ ಸಾರವಾದ "ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದರೆ ಅದರಿಂದ ರಾಜ್ಯಕ್ಕೆ ನೆಮ್ಮದಿ ಎನ್ನುವುದಾಗಲೀ, ವಿಫಲರಾದರೆ ಜನತೆಗೆ ನೆಮ್ಮದಿ ಎನ್ನುವುದಾಗಲೀ" ಆತುರದ ನಿಲುವಿನಂತೆ ತೋರುತ್ತದೆ.

ಯಡ್ಯೂರಪ್ಪನವರ ಪ್ರಾದೇಶಿಕ ಪಕ್ಷ ನಾಡಿಗೆ ನಿರುಪಯುಕ್ತ

ಯಡ್ಯೂರಪ್ಪನವರು ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ವಿಯಾದರೂ, ವಿಫಲರಾದರೂ ನಾಡಿನ ಜನರಿಗೆ ನಷ್ಟವೇ ಆಗಲಿದೆ. ಇಲ್ಲಿನವರೆಗೆ ಕರ್ನಾಟಕದಲ್ಲಿದ್ದ ಪ್ರಾದೇಶಿಕ ಪಕ್ಷಗಳ ಗತಿಯೇ ಇದಕ್ಕೂ ಆಗಲಿದೆ. ಯಾಕೆಂದರೆ ಇದುವರೆವಿಗೂ ಹಾಗೆ ಪಕ್ಷ ಕಟ್ಟಿದವರು ಕನ್ನಡ - ಕನ್ನಡಿಗ - ಕರ್ನಾಟಕ ಕೇಂದ್ರಿತ ರಾಜಕಾರಣದ ಸಿದ್ಧಾಂತವನ್ನು ಹೊಂದಿರಲಿಲ್ಲ ಮತ್ತು ಯಡ್ಯೂರಪ್ಪನವರದ್ದೂ ಅಂತಹ ಸಿದ್ಧಾಂತವಲ್ಲ. ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿನ ಬಗ್ಗೆ ನೋಡಿದರೆ ಅದು ಅರಿವಾಗುತ್ತದೆ. ಶಿವಸೇನೆ - ಮರಾಠಿ ಕೇಂದ್ರಿತ, ತೆಲುಗುದೇಶಂ - ತೆಲುಗರ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು, ದ್ರಾವಿಡ ಕಳಗಗಳು - ದ್ರಾವಿಡ ಸಿದ್ಧಾಂತ ಕೇಂದ್ರಿತ... ಹೀಗೆ ಆಯಾ ಪ್ರದೇಶದ ಜನಹಿತದ ಪರಮ ಉದ್ದೇಶವನ್ನು ಘೋಷಿಸಿ, ಸಿದ್ಧಾಂತವಾಗಿಸಿಕೊಂಡಿರುವ ಪಕ್ಷಗಳು ಯಶಸ್ವಿಯಾಗಿವೆ. ಆದರೆ ನಮ್ಮ ನಾಡಿನ ಪಕ್ಷಗಳಿಗೆ ಹಿಂದೂ ಇಂತಹ ಯಾವ ಸ್ಪಷ್ಟವಾದ ಸಿದ್ಧಾಂತಗಳೂ ಇರಲಿಲ್ಲ. ಇದ್ದ ರೈತಸಂಘದಂತಹವೂ ಕೂಡಾ ನಾಡಿನ ಎಲ್ಲಾ ವರ್ಗಗಳನ್ನೊಳಗೊಳ್ಳುವ ನಿಲುವನ್ನು ಜನರಿಗೆ ಮನವರಿಕೆ ಮಾಡಿಸಲು ಸಫಲವಾಗಿರಲಿಲ್ಲ ಎನ್ನಬಹುದು.

ಇನ್ನೊಂದೆಡೆ ಕರ್ನಾಟಕದಲ್ಲಿನ್ನೂ ಕನ್ನಡಿಗ ಐಡೆಂಟಿಟಿ ಜಾಗೃತಿಯೇ ಎಳವೆಯ ಹಂತದಲ್ಲಿದೆ. ನಾನೊಬ್ಬ ಕನ್ನಡಿಗ ಎನ್ನುವುದನ್ನೇ ಅರವತ್ತು ವರ್ಷಗಳಿಂದ ನಗಣ್ಯವಾಗಿಸಿಕೊಂಡು ಬಂದಿರುವ ಕರ್ನಾಟಕದಲ್ಲಿ, ನಮ್ಮವರ ಮೈಮರೆವಿನ ಕೊಳೆಯಿನ್ನೂ ತೊಳೆಯಲ್ಪಟ್ಟಿಲ್ಲದಿರುವಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಯಡ್ಯೂರಪ್ಪನವರು ಹೊಸ ಪಕ್ಷ ಕಟ್ಟಿದರೆ, ಅದು ಗೆದ್ದರೂ ಕೆಲವೇ ಸಮಯದಲ್ಲಿ ಮತ್ತೆ ಮೂಲಸಿದ್ಧಾಂತದ ಪಕ್ಷದೊಂದಿಗೆ ವಿಲೀನವಾಗದೆ ಇರುವುದಿಲ್ಲ. ಹಾಗಾಗುವುದಾದರೆ ನಾಳೆ, ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷದ ಹುಟ್ಟಿನ ಬಗ್ಗೆ ಮತ್ತಷ್ಟು ಅಪನಂಬಿಕೆ ಜನರಲ್ಲಿ ಹುಟ್ಟೀತಲ್ಲವೇ? ಇನ್ನು ಅವರ ಪ್ರಯತ್ನ ವಿಫಲವಾದರೆಂತೂ ಹೇಳುವಂತಿಲ್ಲ, ದಿನೇಶರ ಬರಹದ ತಲೆಬರಹ ನಾಳೆ ಕನ್ನಡಿಗರ ಮನದಲ್ಲಿ ಬದಲಾಗದ ನಂಬಿಕೆಯಾಗಿಬಿಡುವ ಅಪಾಯವಿದೆ.

ಪ್ರಾದೇಶಿಕ ಪಕ್ಷ ಬೇಕಿರುವುದು ಯಾರದ್ದೋ ತಾಕತ್ತಿನ ಪರೀಕ್ಷೆಗಲ್ಲ!

ಬರಹದ ಕೊನೆಯಲ್ಲಿ ಹೇಳಿದಂತೆ ಯಾರ್ಯಾರಿಗೋ ಅವರವರ ಯೋಗ್ಯತೆಗಳು, ಬಲಾಬಲಗಳು ಮನವರಿಕೆಯಾಗಬೇಕೆಂಬ ಕಾರಣದಿಂದಾಗಿ ಪ್ರಾದೇಶಿಕ ಪಕ್ಷಗಳು ಹುಟ್ಟುವುದೋ, ಸಾಯುವುದೋ ಆದಲ್ಲಿ ನಿಜಕ್ಕೂ ನಷ್ಟ ಅನುಭವಿಸುವವರು ನಾವೇ. ಕರ್ನಾಟಕದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಸಿದ್ಧಾಂತದ, ನಿಜವಾದ ಒಪ್ಪುಕೂಟದ ಪರವಾದ, ಸಮರ್ಥವಾದ ಪ್ರಾದೇಶಿಕ ಪಕ್ಷವೊಂದು ಹುಟ್ಟಲೇಬೇಕು. ಅದು ತನ್ನ ಸಿದ್ಧಾಂತಗಳ, ನಿಲುಮೆಗಳ ಕಾರಣದಿಂದಾಗಿ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲೂ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಬೇಕು, ಪ್ರೇರಣೆಯಾಗಬೇಕು. ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟವೊಂದು ಅಸ್ತಿತ್ವಕ್ಕೆ ಬಂದು ಸಂಸತ್ತಿನ ಅಧಿಕಾರ ಇವುಗಳ ಕೈಗೆ ಸಿಗಬೇಕು. ಅಂತಹ ಸರ್ಕಾರ ಮಾತ್ರವೇ ವೈವಿಧ್ಯತೆಗಳನ್ನು ಉಳಿಸಿಕೊಂಡೇ ಭಾರತದ ರಾಜ್ಯಗಳು ಸೌಹಾರ್ದತೆಯಿಂದ ಬಾಳುವಂತಾಗುವಂತಹ ನೀತಿ ನಿಲುವುಗಳನ್ನು ರೂಪಿಸಬಲ್ಲವು. ಗಡಿ ತಕರಾರಿರಲಿ, ನದಿ ನೀರು ಹಂಚಿಕೆಯ ರಾಷ್ಟ್ರೀಯ ನೀತಿಯಿರಲಿ, ರಾಜ್ಯಗಳಿಗೆ ಬೇಕಾದ ಸ್ವಾಯತ್ತತೆಯಿರಲಿ, ಈಗ ಕೇಂದ್ರಪಟ್ಟಿ ಮತ್ತು ಜಂಟಿಪಟ್ಟಿಯಲ್ಲಿರುವ.. ಕಲಿಕೆಯೂ ಸೇರಿದಂತೆ ಅನೇಕ ವಿಷಯಗಳಲ್ಲಿ ಹೆಚ್ಚಿನವನ್ನು ರಾಜ್ಯಪಟ್ಟಿಗೆ ತರುವುದಾಗಲೀ... ಅಷ್ಟೇಕೆ ಭಾರತ ನಿಜವಾದ ಒಪ್ಪುಕೂಟವಾಗಲಾಗಲೀ.. ಸಾಧ್ಯವಾಗುವುದು ಇಂತಹ ಸರ್ಕಾರದಿಂದಲೇ!

ಕೊನೆಹನಿ: "ಪ್ರಾದೇಶಿಕ ಪಕ್ಷಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ" ಎನ್ನುವಂತಹ ಮಾತುಗಳು ತೀವ್ರವಾದ ನಿರಾಶವಾದ ಅಥವಾ ಪ್ರಾದೇಶಿಕ ಪಕ್ಷಗಳೆಡೆಗಿನ ನಿಕೃಷ್ಟ ಭಾವನೆಯನ್ನು ತೋರುತ್ತಿದೆಯಾದರೂ ಅದನ್ನು ಆಕಸ್ಮಿಕವೆಂದೇ ತಿಳಿದು ಬಿಟ್ಟುಬಿಡೋಣ...

1 ಅನಿಸಿಕೆ:

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಗುರು,
ಪ್ರಾದೇಶಿಕ ಬಳಗ ಬಂದರೆ (ಪಕ್ಷ) ಸಾಲದು. ಇಡೀ ರಾಜಕಾರಣವೇ ನಾಡು-ನುಡಿಬಕ್ಕುಡಿಗ ಆಗ್ಬೇಕು. ಮೇಟಿಬಕ್ಕುಡಿಗರು (ಕೇಂದ್ರವಾದಿಗಳ್) ಇರೋವರ್ಗೂ ನಾಡು ಕಟ್ಟೋ ಕೆಲಸ ಆಗದು. ಕನ್ನಡಿಗರಿಕೆ ತಮ್ಮ ನಾಡನ್ನ ಕಟ್ಟೋ ಈಳಿಗೆ (ಸ್ವತಂತ್ರ) ಇಲ್ಲ ಅಂದಮೇಲೆ ಕನ್ನಡಿಗರ ಏಳಿಗೆ ಆಗಲಾರದು. ಗೆಲ್ಲೋ ಬಳಗ, ಸೋಲೋ ಬಳಗ, ಆಳೋ ಬಳಗ, ವಿರೋದ ಬಳಗ ಎಲ್ಲವೂ ನಾಡು-ನುಡಿಬಕ್ಕುಡಿಗ ಆಗ್ಬೇಕು. ಮೇಟಿಬಕ್ಕುಡಿಗರು ಕನ್ನಡ ನಾಡಿನಲ್ಲಿ ಬುಡಮೇಲಾಗಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails