ದೋಸೆಮನೆಗೆ ಹೋಗಿದ್ದೀರಾ?


ಬೆಂಗಳೂರಿನಲ್ಲಿ ವಿಶ್ವೇಶ್ವರಪುರಂ ತಿಂಡಿ ತಿನಿಸಿಗೆ ಭಾಳಾ ಹೆಸರುವಾಸಿ ಗುರೂ! ಅಲ್ಲಿ ವಿ.ಬಿ ಬೇಕರಿ, ತಿಂಡಿ ಬೀದಿ, ಅವರೆಕಾಳು ಪರಿಶೆ.ಮಾಡ್ರನ್, ಕಾಮತ್, ಜನತಾ ಹೋಟಲ್ಲುಗಳಿವೆ. ಆಹಾ... ನೆನೆದರೆ ಬಾಯಲ್ಲಿ ನೀರೂರುವುದು! ಇದೀಗ ಕೆಲದಿನಗಳಿಂದ ಆ ಬಡಾವಣೇಲಿ ಮತ್ತೊಂದು ಹೋಟೆಲ್ ಜನರನ್ನು ಹೆಚ್ಚು ಹೆಚ್ಚು ಸೆಳೀತಾ ಇದೆ. ಅದೇ ದೋಸೆ ಮನೆ. ಮೂರು ಮಹಡಿಯ ಹೋಟೆಲ್ಲಿನಲ್ಲಿ ನೆಲಅಂತಸ್ತಿನಲ್ಲಿ ದರ್ಶಿನಿ, ಮೊದಲಲ್ಲಿ ತಿಂಡಿ, ಎರದನೆಯದರಲ್ಲಿ ಮತ್ತು ಮೂರನೆಯದರಲ್ಲಿ ಊಟ ಸಿಗುತ್ತದೆ. ಹೊಸತನದಿಂದ ಕಂಗೊಳಿಸುತ್ತಿರುವ ಈ ಹೋಟೆಲ್ಲಿಗೆ ಹೋಗಿದ್ದೀರಾ ಗುರೂ?


ದೋಸೆಮನೆಯಲ್ಲಿ ದೋಸೆ ಇದೆ!


ವಿ ವಿ ಪುರಂನ, ಈ ದೋಸೆಮನೆ ಹೋಟೆಲ್‍ನಲ್ಲಿ ನೂರಾರು ಬಗೆಯ ದೋಸೆಗಳು ಸಿಗುತ್ತವೆ. ಬಾಯಿರುಚಿ ಒಬ್ಬೊಬ್ಬರದು ಒಂದೊಂದು ರೀತಿ ನಿಜಾ. ಆದರೆ ಈ ಹೋಟೆಲ್ಲಿನಲ್ಲಿ ಕನ್ನಡಕ್ಕೆ ಕೊಟ್ಟಿರೋ ಸ್ಥಾನ ಮಾತ್ರಾ ಕನ್ನಡಿಗರೆಲ್ಲರನ್ನೂ ಮೆಚ್ಚಿಸುವಂತಿದೆ. ಇಲ್ಲಿ ಕನ್ನಡದ ಮೆನುವಿದೆ. ಈ ಹೋಟೆಲ್ಲಿನ ಹೊರಗೆ ಮತ್ತು ಒಳಗೆ ಇರೋ ಬೋರ್ಡುಗಳಲ್ಲಿ ಕನ್ನಡಕ್ಕೆ ದೊಡ್ಡಸ್ಥಾನವಿದೆ. ಇಲ್ಲಿ ದೋಸೆ ಇದೆ ದೋಸಾ ಇಲ್ಲಾ. ಇಲ್ಲಿ ವಡೆ ಇದೆ ವಡಾ ಇಲ್ಲಾ. ಅಚ್ಚ ಕನ್ನಡದ ವಾತಾವರಣವಿರೋ ಈ ಹೋಟೆಲ್ಲಿಗೆ ಹೋದರೆ ಬರೀ ಹೊಟ್ಟೆ ತುಂಬುಸ್ಕೊಳ್ಳೋದಲ್ಲದೆ ಕನ್ನಡದ ವಾತಾವರಣವನ್ನು ಕಂಡು ಕಣ್ಣು, ಮನಸ್ಸು ಎರಡನ್ನೂ ತುಂಬ್ಕೋಬೌದು..ಗುರೂ!

ಕೊನೆಹನಿ: ಈ ಹೋಟೆಲ್ಲಿನವರದ್ದೊಂದು ಅಂತರ್ಜಾಲ ತಾಣವಿದೆ. ಅದನ್ನು ತೆರೆದ ಕೂಡಲೇ ಆಹಾ ಅನ್ನಿಸುವಂತೆ ಕನ್ನಡ ಕಂಡರೂ ಒಳಗೆ ಹೋದಂತೆಲ್ಲಾ ಕೊಂಡಿಗಳೆಲ್ಲಾ ಇಂಗ್ಲೀಶಿನಲ್ಲೇ ತೆರೆದುಕೊಳ್ಳುತ್ತದೆ. ತಿಂಡಿಗಳ ಹೆಸರು ದೋಸಾ ಅಂತಾನೆ ಇದೆ. ಇರಲೀ ಬಿಡಿ, ಮುಂದಿನ ಸಲ ದೋಸೆಮನೆ ಹೋಟೆಲ್ಲಿಗೆ ಹೋದಾಗ ಹೊಟ್ಟೇ ತುಂಬಾ ದೋಸೆ ತಿಂದು ಅಂತರ್ಜಾಲ ತಾಣದಲ್ಲೂ ಕನ್ನಡ ತರುವ ಬಗ್ಗೆ ಸಲಹೆ ಕೊಟ್ಟು ಬರೋಣ! ಏನಂತೀರಾ ಗುರುಗಳೇ?

3 ಅನಿಸಿಕೆಗಳು:

maaysa ಅಂತಾರೆ...

http://vbdosemane.com/

link-u

Anonymous ಅಂತಾರೆ...

super!

- vallish

Anonymous ಅಂತಾರೆ...

dose ......
was not good

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails