ಡಬ್ಬಿಂಗ್ ಬೇಡ ಎಂಬ ವಾದ ಹೀಗೆ ಹರಿದು ಬಂತು!

(ಫೋಟೋ ಕೃಪೆ: ಸುವರ್ಣ ಟಿವಿ)

ಡಬ್ಬಿಂಗ್ ಪರ ಮತ್ತು ವಿರೋಧವಾಗಿ ಇದುವರೆಗೆ ಬೇರೆ ಬೇರೆ ಸ್ತರಗಳಲ್ಲಿ ವಾದಗಳು ನಡೆದಿವೆ. ಒಂದೆಡೆ ತರ್ಕಬದ್ಧವಾಗಿ ವಾದ ನಡೆಯುತ್ತಿದ್ದರೆ ಇಂತಹ ವಾದಕ್ಕೆ ತಕ್ಕ ಉತ್ತರಗಳನ್ನು ಕೂಡಾ ನೀಡಲಾಯಿತು. ಈ ವಾದಸರಣಿ ಹರಿದು ಬಂದ ಬಗೆಯನ್ನು    ನೋಡಲು ಕುತೂಹಲಕಾರಿಯಾಗಿದೆ.

ಆರಂಭ!

ಈ ಬಗ್ಗೆ ಬಳಗದ ಮೊದಲ ಬರಹ ಪ್ರಕಟವಾಗಿದ್ದು ೨೦೦೭ರ ಆಗಸ್ಟ್ ೪ನೇ ತಾರೀಕಿನಂದು. ಇದಕ್ಕೂ ಮೊದಲೂ ಕೂಡಾ ಕೆಲವರು ತಮ್ಮ ಬ್ಲಾಗುಗಳಲ್ಲೂ ಬರೆದುಕೊಂಡಿದ್ದರು. ಹೀಗೆ ಬರೆದುಕೊಳ್ಳಲು ಸಾಧ್ಯವಾಗಿದ್ದು ಕೂಡಾ ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಿಕ್ಕ ತಂತ್ರಜ್ಞಾನದ ಸಹಕಾರದಿಂದಲೇ... ಹೀಗೆ ಸಣ್ಣದನಿಯಾಗಿ ಶುರುವಾದ ಅನಿಸಿಕೆಗಳು ಮುಂದೆ ಹಲವಾರು ಬಾರಿ ಆಗಾಗ ಪ್ರಕಟವಾಗುತ್ತಲೇ ಬಂದಿವೆ. ಇದನ್ನು ಮೊದಲು ಡಬ್ಬಿಂಗ್ ವಿರೋಧಿಗಳು ಗುರುತಿಸಿ ಪ್ರತಿಕ್ರಿಯೆ ನೀಡುವ ಹಂತಕ್ಕೆ ಬಂದದ್ದು ಇತ್ತೀಚಿಗೇನೇ... ಡಬ್ಬಿಂಗ್ ಪರವಾಗಿ ಮಾತಾಡಿದವರೆಲ್ಲಾ ಮೂಲತಃ ಪ್ರಸ್ತಾಪಿಸಿದ್ದು ಮೂರು ವಿಷಯಗಳನ್ನು.

ಡಬ್ಬಿಂಗ್ ಬೇಕೆನ್ನಲು ಮೂರು ಕಾರಣಗಳು

ಮೊದಲಿಗೆ ಕನ್ನಡಿಗರಿಗೆ ತಾಯ್ನುಡಿಯಲ್ಲೇ ಮನರಂಜನೆ, ಜ್ಞಾನ ವಿಜ್ಞಾನದ ಕಲಿಕೆಗೆ ಅವಕಾಶ ಇರಬೇಕು ಮತ್ತು ನಾಡಿನ ಮೂಲೆಮೂಲೆಗಳಲ್ಲಿರುವ ಬರೀ ಕನ್ನಡವನ್ನಷ್ಟೇ ಬಲ್ಲ ದೊಡ್ಡ ಸಂಖ್ಯೆಯ ಜನರಿಗೆ ಇವೆಲ್ಲವೂ ಕನ್ನಡದಲ್ಲೇ ಪಡೆದುಕೊಳ್ಳುವ ಅವಕಾಶ ಇರಬೇಕೆನ್ನುವುದು. ಎರಡನೆಯದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಶೇಧವೆನ್ನುವ ಅಸಂವಿಧಾನಿಕ ಮತ್ತು ದಬ್ಬಾಳಿಕೆಯ ನಡೆಯ ಮೂಲಕ ಜನರ  ಆಯ್ಕೆಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ ಎನ್ನುವುದು ಮತ್ತು ಮೂರನೆಯದಾಗಿ ಕನ್ನಡನಾಡಿನಲ್ಲಿ ಕನ್ನಡಿಗರು ಕನ್ನಡದಿಂದ ದೂರ ಸರಿಯುವ ವ್ಯವಸ್ಥೆ ಇಂದು ಡಬ್ಬಿಂಗ್ ಇಲ್ಲದಿರುವ ಕಾರಣದಿಂದಾಗಿ ಉಂಟಾಗಿದ್ದು ಇದು ನಿವಾರಣೆಯಾಗಿ ಕನ್ನಡಿಗರು ಕನ್ನಡವನ್ನು ಉಳಿಸಿಕೊಳ್ಳಲು ಇದು ಸಹಕಾರಿ ಎನ್ನುವುದು. ಈ ಅನಿಸಿಕೆಗಳಿಗೆ ಪೂರಕವಾಗಿ ಹತ್ತಾರು ಉದಾಹರಣೆಗಳನ್ನು ನೀಡಲಾಯಿತು, ಹತ್ತಾರು ಗಣ್ಯರ ಜೊತೆ ಚರ್ಚೆ ನಡೆಸಬೇಕಾಯ್ತು. ಈ ಚರ್ಚೆಯ ದಾರಿ ಬಲು ಸೋಜಿಗದ್ದು. ಡಬ್ಬಿಂಗ್ ನಿಶೇಧದ ಪರವಾದವರ ವಾದ ಸರಣಿಯು ಕಾಲದಿಂದ ಕಾಲಕ್ಕೆ ಹೊಸ ಹೊಸ ಅಸ್ತ್ರಗಳನ್ನೆತ್ತಿಕೊಂಡು ಪ್ರಯೋಗಿಸುವುದೂ, ಅದಕ್ಕೆ ತಕ್ಕ ಉತ್ತರ ಇತ್ತ ಕಡೆಯಿಂದ ಹೋಗುವುದೂ ನಡೆದಿತ್ತು.

ಡಬ್ಬಿಂಗ್ ಬೇಡೆಂಬ ಶಸ್ತ್ರಾಸ್ತ್ರ ಪ್ರಯೋಗ!

"ಡಬ್ಬಿಂಗ್ ತರಬೇಕು ಎನ್ನುವುದು ಹಿರಿಯರ ಆಶಯಕ್ಕೆ ವಿರುದ್ಧವಾದದ್ದು! ಅರವತ್ತರ ದಶಕದಲ್ಲೇ ಡಾ. ರಾಜ್, ಅನಕೃ ಮೊದಲಾದವರು ಡಬ್ಬಿಂಗ್ ಬೇಡ ಎಂದಿದ್ರು... ಅವರ ಮಾತನ್ನು ಧಿಕ್ಕರಿಸಬಾರದು" ಎನ್ನುವ ಮಾತುಗಳಿಗೆ ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಎಳವೆಯ ದಿನಗಳಲ್ಲಿದ್ದ ಪರಿಸ್ಥಿತಿಗೂ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾ ಮಾಡೋ, ತನ್ನದೇ ನಾಡಿನಲ್ಲೇ ಉದ್ದಿಮೆ ಕಟ್ಟಿಕೊಂಡಿರೋ ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಗೂ ಇರುವ ವ್ಯತ್ಯಾಸಗಳ ಬಗ್ಗೆ ತಿಳಿಸಿಕೊಡಬೇಕಾಯ್ತು. ಅಂದು ಅಸ್ತಿತ್ವದಲ್ಲೇ ಇರದಿದ್ದ ಟಿವಿ ಉದ್ಯಮ, ಜಾಹೀರಾತು ಉದ್ಯಮ, ಅನಿಮೇಶನ್ ಮತ್ತು ಜ್ಞಾನ ವಿಜ್ಞಾನದ ವಾಹಿನಿಗಳ ಬಗ್ಗೆ ತಿಳಿಸಬೇಕಾಯ್ತು.

ಕನ್ನಡ ಚಿತ್ರೋದ್ಯಮ ಇಲ್ಲವಾಗುತ್ತದೆ ಎಂಬ ಭೀತಿ ಹರಡುವಿಕೆ!

ಚಿತ್ರೋದ್ಯಮ ನಂಬಿಕೊಂಡ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ, ಕನ್ನಡ ಚಿತ್ರರಂಗವೇ ಇಲ್ಲವಾಗುತ್ತದೆ ಎನ್ನುವ ವಾದ ನಂತರದ್ದು... ಸ್ಪರ್ಧೆಯ ಭಯದಿಂದ ಇಂತಹ ಮಾತುಗಳು ಹುಟ್ಟುತ್ತವೆಂದೂ, ಡಬ್ಬಿಂಗ್ ಬಂದೊಡನೇ ಚಿತ್ರ ತಯಾರಿಕೆ ನಿಂತುಹೋಗುತ್ತದೆ ಎನ್ನುವುದನ್ನು ನಂಬಲಾಗದೆಂದೂ, ಹಿಂದೆ ಕಾಯಿನ್ ಬೂತ್ ಫೋನುಗಳನ್ನು ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಮೊಬೈಲ್ ಫೋನ್ ಬಂದಾಗ ಹೇಗೆ ಸ್ಪರ್ಧೆಯನ್ನು ಎದುರಿಸಬೇಕಾಯ್ತು ಎನ್ನುವುದನ್ನೂ ತಿಳಿಸಬೇಕಾಯ್ತು. ಕೊನೆಗೆ ಇದು ಹೊಟ್ಟೆಪಾಡಿನ ಸಮಸ್ಯೆಯಲ್ಲಾ... ಕನ್ನಡ ಭಾಷೆಯ ಉಳಿವಿನ ಪ್ರಶ್ನೆ, ಸೃಜನಶೀಲತೆಯು ಅಳಿಯುವ ಪ್ರಶ್ನೆ ಎನ್ನುವ ಅಸ್ತ್ರ ಬತ್ತಳಿಕೆಯಿಂದ ಹೊರಬಂತು.

ಸೃಜನಶೀಲತೆ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆ

ಚಿತ್ರೋದ್ಯಮದ ಗಣ್ಯ ನಿರ್ದೇಶಕರುಗಳಲ್ಲಿ ಕೆಲವರು, ಡಬ್ಬಿಂಗ್ ಬಂದರೆ ಸೃಜನಶೀಲತೆ ಅಳಿದುಹೋಗುತ್ತದೆಯೆಂದೂ, ಭಾಷೆ ಕಳೆದುಹೋಗುತ್ತದೆಯೆಂದೂ, ಸಂಸ್ಕೃತಿ ಪಲ್ಲಟವಾಗುತ್ತದೆಯೆಂದೂ ವಾದ ಮುಂದಿಟ್ಟರು. ಜನರಿಗೆ ಒಳಿತನ್ನು ಒಪ್ಪುವ ತಿರಸ್ಕರಿಸುವ ಅವಕಾಶವನ್ನೇ ನಿರಾಕರಿಸಿ, ನಾವ್ಯಾರೋ ಬುದ್ಧಿವಂತರು ನಿಮ್ಮ ಪರವಾಗಿ ತೀರ್ಮಾನಿಸುತ್ತೇವೆ ಎನ್ನುವ ಬೌದ್ಧಿಕ ಅಹಂಕಾರ ಸರಿಯಲ್ಲವೆಂದೂ, ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಹಾಳಾಗಿ ಹೋದ ಭಾಷೆ, ಜನಾಂಗದ ಉದಾಹರಣೆ ತೋರಿಸಿ ಎಂದೂ ಕೇಳಲಾಯ್ತು. ಇದಕ್ಕೆ ತಮಿಳುನಾಡಿನಲ್ಲಿ ಇಂದು ಸೆಂದಮಿಳ್ ಓದುವವರಿಲ್ಲ ಎಂದರು. "ಸರಿ, ಕನ್ನಡದಲ್ಲಿ ಡಬ್ಬಿಂಗ್ ಇಲ್ಲಾ... ಇಲ್ಲೆಷ್ಟು ಜನರಿಗೆ ಹಳೆಗನ್ನಡ ಓದಲು ಬರುತ್ತದೆ" ಎಂದರೆ ಉತ್ತರವಿರದಾಯ್ತು. ಸೃಜನಶೀಲತೆ ಅಳಿದುಹೋಗುತ್ತದೆ ಎನ್ನುವ ಮಾತಿಗೆ ಕನ್ನಡದ ಇಂದಿನ ಸೃಜನಶೀಲ ನಿರ್ದೇಶಕರು, ನಿರ್ಮಾಪಕರು ಡಬ್ಬಿಂಗ್ ಬಂದೊಡನೆ ಚಿತ್ರ ತಯಾರಿಸಲು ಆಗುವುದಿಲ್ಲ ಮತ್ತು ಕನ್ನಡ ಜನತೆ ಅಂಥಾ ಒಳ್ಳೆ ಯತ್ನಗಳನ್ನು ಬೆಂಬಲಿಸುವುದಿಲ್ಲಾ ಎನ್ನಲಾಗದು ಎಂದು ಹೇಳಬೇಕಾಯ್ತು.

ಜನಾಭಿಪ್ರಾಯಗಳು!

ಇವೆಲ್ಲಾ ನಡೆಯುತ್ತಿರುವಾಗಲೇ ದಟ್ಸ್ ಕನ್ನಡ, ಸಂಪಾದಕೀಯ ಮೊದಲಾದ ಮಿಂಬಲೆತಾಣಗಳಲ್ಲಿ "ಡಬ್ಬಿಂಗ್ ಬೇಕೆ? ಬೇಡವೇ?" ಚರ್ಚೆ ಆರಂಭವಾಗಿ, ಮತದಾನಗಳು ನಡೆದು ಡಬ್ಬಿಂಗ್ ಬೇಕೆನ್ನುವವರ ಸಂಖ್ಯೆ ಬೇಡೆಂದವರಿಗಿಂತಾ ಹೆಚ್ಚಾಗಿ... ಮೊದಲು "ಡಬ್ಬಿಂಗ್  ವಿರುದ್ಧ ಈ ತಾಣಕ್ಕೆ ಹೋಗಿ ಮತ ಹಾಕಿ" ಅಂದವರೇ "ಇದು ಮತದಾನದ ಮೂಲಕ  ತೀರ್ಮಾನವಾಗುವ ಮಾತಲ್ಲಾ" ಎನ್ನುವವರೆಗೆ ಬೆಳೆದವು. ಇದೇ ಸಂದರ್ಭದಲ್ಲಿ "ಸತ್ಯಮೇವ ಜಯತೇ" ಕನ್ನಡದಲ್ಲಿ ಡಬ್ ಆಗುವುದೆಂಬ ಸುದ್ದಿ! ಸುವರ್ಣ ವಾಹಿನಿಯ ಈ ಪ್ರಯತ್ನವನ್ನು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ತಡೆದೆವು ಎಂಬ ಬೆಳವಣಿಗೆಗಳು... ತಾಯ್ನುಡಿಯಲ್ಲಿ ಜ್ಞಾನ ವಿಜ್ಞಾನ ಮನರಂಜನೆಗಳನ್ನು ಪಡೆದುಕೊಳ್ಳಬಯಸಿದ ಸಾವಿರಾರು ಕನ್ನಡಿಗರಿಂದ "ಮಿಂಬಲೆ ಮನವಿ" ಸಲ್ಲಿಕೆ... ಅಂತರ್ಜಾಲದಲ್ಲಿ ಡಬ್ ಆದ ಅವತರಣಿಕೆ ಪ್ರಸಾರ, ಮೂರೇ ದಿನದಲ್ಲಿ ೩೦,೦೦೦ಕ್ಕೂ ಹೆಚ್ಚು ಜನರಿಂದ ವೀಕ್ಷಣೆ, ಟಿವಿಗಳಲ್ಲಿ ಡಬ್ಬಿಂಗ್ ಚರ್ಚೆಗಳು ಆರಂಭವಾದವು. ಇದೇ ಸಂದರ್ಭದಲ್ಲಿ ಅಂತರ್ಜಾಲ ತಾಣದಿಂದ ಕನ್ನಡದ ಅವತರಣಿಕೆಯನ್ನು ತೆಗೆದುಹಾಕಿದ ಘಟನೆಗಳೂ ನಡೆದವು. ಬಾಯಲ್ಲಿ ಮಾತ್ರಾ "ಇಲ್ಲಿ ಡಬ್ಬಿಂಗ್ ನಿಶೇಧವಿಲ್ಲಾ... ಇದು ಸಾಮಾಜಿಕ ಕಟ್ಟುಪಾಡು" ಎನ್ನುತ್ತಲೇ ಡಬ್ ಆದ ಕಾರ್ಯಕ್ರಮಗಳನ್ನು ತಡೆಯುವ, ತೆಗೆದುಹಾಕಿಸುವ ಜನರ ಸೋಗಲಾಡಿತನಗಳು ಬಯಲಾದವು.

ಹತಾಶೆಯ ಹೀನಾಸ್ತ್ರಗಳು

ಚರ್ಚೆಗಳಲ್ಲಿ ನಂತರ ಶುರುವಾದದ್ದೊಂಥರಾ ಹೀನಾಸ್ತ್ರ ಪ್ರಯೋಗಗಳು! ಡಬ್ಬಿಂಗ್ ಬೇಕೆನ್ನುತ್ತಿರುವವರು ಕೇವಲ ಐಟಿ ಬಿಟಿ ಮಂದಿ, ಇವರು ನೂರಕ್ಕಿಂತಾ ಕಮ್ಮಿ ಜನಾ, ಡಬ್ಬಿಂಗ್ ಬೇಕೆನ್ನುವವರು ನಾಡಿನ ದಲಿತರ ವಿರೋಧಿಗಳು, ಪುರೋಹಿತಶಾಹಿ ಮನಸ್ಸಿನವರು, ರೈತರ ವಿರೋಧಿಗಳು...ಹೀಗೆ ನಾನಾ ಪಟ್ಟಕಟ್ಟುವ ಪ್ರಯತ್ನಗಳಾದವು. ಈ ಸಂದರ್ಭದಲ್ಲೇ ನಡೆದ "ವಿಚಾರ ಸಂಕಿರಣ"ದಲ್ಲಿ ದಲಿತ ಮುಖಂಡರೂ, ರೈತ ಮುಖಂಡರೂ, ಕನ್ನಡಪರ ಸಂಘಟನೆಗಳ ಮುಖಂಡರೂ, ಪತ್ರಕರ್ತರೂ, ಅಲ್ಪಸಂಖ್ಯಾತ ಮುಖಂಡರೂ ಪಾಲ್ಗೊಂಡು "ಇದು ಕೆಲವರ ಕೂಗಲ್ಲಾ, ನಾಡಿನ ಜನರ ಕೂಗು" ಎಂದು ಸಾರಬೇಕಾಯ್ತು. ಇದೇ ವೇಳೆಗೆ ಚಿತ್ರರಂಗದ, ಸಾಹಿತ್ಯ ವಲಯದ, ಚಿಂತಕರ ವಲಯದ ಕೆಲಜನರು ಡಬ್ಬಿಂಗ್ ಬರುವುದು ತಪ್ಪಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆಗಳನ್ನು ನೀಡಿದರು. ಇದಕ್ಕೆ ಪ್ರತಿಯಾಗಿ ಕೇಳಿ ಬಂದದ್ದೇ ಚಿತ್ರೋದ್ಯಮದ ಗೌರವಾನ್ವಿತ ಗಣ್ಯರ ಅಪ್ಪಟ ಬೆದರಿಕೆಯ ಮಾತುಗಳು!! ಡಬ್ಬಿಂಗ್ ಬೇಕೆನ್ನೋರು ಉಳಿಯೋದಿಲ್ಲಾ, ಡಬ್ಬಿಂಗ್ ತಡೀದೆ ಬಿಡಲ್ಲಾ, ಡಬ್ಬಿಂಗ್ ಬೇಕೆನ್ನೋರುನ್ನಾ ಜನರು ಉಳಿಸೋದಿಲ್ಲಾ ಅನ್ನೋ ಮಾತುಗಳು... ಡಬ್ಬಿಂಗ್ ಬೇಕೆನ್ನೋರು ನಾಡದ್ರೋಹಿಗಳು, ಇವರಿಗೆ ಹೊಡಿಮಗಾ ಹೊಡಿಮಗಾ ಅನ್ನಬೇಕಾಗುತ್ತೆ ಅನ್ನೋ ಥರದ ಮಾತುಗಳು ಕೇಳಿಬಂದವು. ಡಬ್ಬಿಂಗ್ ಬೇಕೆನ್ನೋರು ಕನ್ನಡ ಸಿನಿಮಾನೇ ನೋಡಲ್ಲಾ ಎನ್ನುವ ಆರೋಪಗಳು, ಇವರು ಅಮೇರಿಕಾ ಏಜೆಂಟರು, ಡಬ್ಬಿಂಗ್ ಪರ ವಾಹಿನಿಗಳ, ಡಬ್ಬಿಂಗ್ ಪರ ನಿರ್ಮಾಪಕರ ಏಜೆಂಟರು, ಅಮೀರ್‌ಖಾನ್‌ರ ಏಜೆಂಟರು... ಎಂಬ ಆರೋಪಗಳು ಶುರುವಾದವು.

ಮತ್ತಷ್ಟು ಸೋಜಿಗದ ಮಾತುಗಳು!

ಮತ್ತೊಂದೆಡೆ ಸತ್ಯಮೇವ ಜಯತೇ ಕಾರ್ಯಕ್ರಮ ಕಳಪೆಯೆನ್ನುವ, ಅದು ಸೋಗಿನದ್ದು ಎನ್ನುವ, ಅಮೀರ್‌ಖಾನ್ ಬರೆದ ಪತ್ರದ ಸಹಿಯೇ ಬೋಗಸ್ ಎನ್ನುವ ಅಸಂಬದ್ಧವಾದ ಹತಾಶೆಯ ಮಾತುಗಳು ಮೂಡಿ ಬಂದದ್ದು ಸೋಜಿಗದ ವಿಷಯ! ಕನ್ನಡದ ಕಾರ್ಯಕ್ರಮಗಳೇ ಇಲ್ಲವಾ, ಅವುನ್ನೇ ನೋಡಿ.. ಬದುಕು ಜಟಕಾ ಬಂಡಿ ನೋಡಿ... ಕಥೆಯಲ್ಲಾ ಇದು ಜೀವನಾ ನೋಡಿ... ನಮ್ಮವರ ಕಾರ್ಯಕ್ರಮಗಳು ಪ್ರಾಮಾಣಿಕವಾದವು, ಅವರದ್ದು ಕೀಳು ಎಂಬಂತಹ ಮಾತುಗಳ ಮೂಲಕ "ನಾವು ಕೊಡೋದನ್ನು ನೋಡಿಕೊಂಡು ತೆಪ್ಪಗಿರಿ" ಎನ್ನುವ ದನಿಯ ಮಾತುಗಳು ಕೇಳಿಬಂದವು.

ಇವಕ್ಕೆ ವ್ಯತಿರಿಕ್ತವಾಗಿ ಇಲ್ಲೂ ನಡುನಡುವೆ ರವಿಚಂದ್ರನ್‌ರವರ ಸವಾಲು/ ಸ್ಪರ್ಧೆ ಎದುರಿಸುವ ಮಾತುಗಳು, ಅಂಬರೀಶ್‌ರವರ ಎದುರಾಳಿಗಳನ್ನು ಗೌರವದಿಂದಲೇ ನೋಡುವ ಮಾತುಗಳೂ ಕತ್ತಲೆಯಲ್ಲಿನ ಮಿಂಚುಗಳಂತೆ ಬೆಳಗಿದ್ದು ನಿಜಾ! ಕೆಲ ಪತ್ರಿಕೆಗಳ ಸಂಪಾದಕರುಗಳು ಮಿಂಬಲೆಯಲ್ಲಿ ಆರೋಗ್ಯಕರವಾದ ಚರ್ಚೆಗಳನ್ನು ನಡೆಸಿದ್ದು ಕೂಡಾ ಮೆಚ್ಚುವಂತಹುದ್ದೇ! ಹೀಗೆ ಇಂದು ದಿನಪತ್ರಿಕೆಗಳಲ್ಲಿ, ಸಿನಿಮಾ ಸಂಚಿಕೆಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವಿಷಯ ಡಬ್ಬಿಂಗ್ ಆಗಿದ್ದು... ಮುಂದಿನ ದಿನಗಳಲ್ಲಿ ಸಾರಾಸಗಟು ನಿಶೇಧವೆನ್ನುವುದನ್ನು ಅಪ್ರಜಾಸತ್ತಾತ್ಮಕವೆಂದು ಪರಿಗಣಿಸುವ ಎಲ್ಲಾ ನಾಡಪರರೂ ಈ ಬಗ್ಗೆ ದನಿಯೆತ್ತಬೇಕಾಗಿದೆ. ಇಷ್ಟಕ್ಕೂ ಯಾರಿಗಾದರೂ ಕೂಡಾ... ಇನ್ನೆಷ್ಟು ದಿನಗಳ ಕಾಲ ಕನ್ನಡದ ಜನರನ್ನು ಬೆದರಿಕೆ ಮತ್ತು ಹುಸಿವಾದಗಳನ್ನು ಬಳಸಿ, ಅಸಂವಿಧಾನಾತ್ಮಕವಾದ ನಿಶೇಧ ಹೇರಿ, ಭಾಷೆ ಸಂಸ್ಕೃತಿ ಅಳಿದುಹೋಗುತ್ತದೆ ಎನ್ನುವ ಗುಮ್ಮ ತೋರಿಸಿ... ವಂಚಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯಾ?!

4 ಅನಿಸಿಕೆಗಳು:

Poorvi ಅಂತಾರೆ...

ಒಂದು ಕಡೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸಗಳಲ್ಲಿ ಮೀಸಲಾತಿ ಬೇಕು ಅಂತ ಹೋರಾಟ ಮಾಡ್ತೀರ. ಚಿತ್ರ ರಂಗದ ವಿಷಯ ಬಂದಾಗ, ಯಾವುದೇ ಮೀಸಲಾತಿ, ಅಡಚಣೆ ಬೇಡ, ಡಬ್ಬಿಂಗ್ ಗೆ ಅವಕಾಶ ಕೊಡಿ, ಇದರಿಂದ ಪೈಪೋಟಿ ಹೆಚ್ಚಾಗುತ್ತೆ ಮತ್ತು ನಮ್ಮ ಚಿತ್ರ ರಂಗ ಇನ್ನು ಹೆಚ್ಚು ಒಳ್ಳೆ ಚಿತ್ರಗಳನ್ನ ಮಾಡ್ತಾರೆ ಅಂತೀರಾ. ಎರಡೂ ವಿಷಯದಲ್ಲೂ ಹಲವು ಸಮಾನತೆಗಳಿವೆ. ಇದರಲ್ಲಿ ದ್ವಂದ್ವ ನೀತಿ ಇದೆ ಅನಿಸುವುದಿಲ್ಲವೇ?

ಆನಂದ್ ಅಂತಾರೆ...

ಪೂರ್ವಿಯವರಿಗೆ ನಮಸ್ಕಾರ,
ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸಗಳಲ್ಲಿ ಮೀಸಲಾತಿ ಕೊಡಿ ಎನ್ನುವ ಹೋರಾಟದ, ಕನ್ನಡನಾಡಿನ ರೇಡಿಯೋಗಳಲ್ಲಿ ಕನ್ನಡದ ಹಾಡುಗಳೇ ಕೇಳಿಬರಲಿ ಎನ್ನುವ ಹೋರಾಟದ, ಕನ್ನಡದಲ್ಲೇ ಕನ್ನಡಿಗರ ಮನರಂಜನೆ ಇರಲಿ ಎನ್ನುವ ಹೋರಾಟದ... ಈ ಎಲ್ಲದರ ಹಿಂದಿರುವುದು ಕನ್ನಡ - ಕನ್ನಡಿಗ - ಕರ್ನಾಟಕಗಳ ಬಗೆಗಿನ ಕಾಳಜಿಯೇ.
ವಿರೋಧವಿರುವುದು ಯಾವುದೇ ಜನಪ್ರತಿನಿಧಿ ಸಭೆಗಳಿಂದಲ್ಲದೇ, ಕೆಲವು ಉದ್ದಿಮೆಯ ಮಂದಿ ಇಡೀ ನಾಡಿನ ಜನರು ಇಂಥದ್ದನ್ನು ನೋಡಬಾರದು ಎನ್ನುವ ಅಂದರೆ ಸಾರಾಸಗಟಾಗಿ ಡಬ್ಬಿಂಗ್ ನಿಶೇಧ ಮಾಡುವ ಮನಸ್ಥಿತಿಯನ್ನು. ಇಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಯಾವುದೇ ಪ್ರೊಟೆಕ್ಷನಿಸ್ಮ್ ಕೊಡಬಾರದು ಎನ್ನುವ ನಿಲುವಿಲ್ಲ. ಬೇಕಾದಷ್ಟು ಸಬ್ಸಿಡಿ, ತೆರಿಗೆ ವಿನಾಯ್ತಿ ಮೊದಲಾದವುಗಳನ್ನು ಸರ್ಕಾರ ನೀಡುತ್ತಿರುವುದು ಸಾಲದೇ? ನಮಗೆ ಸ್ಪರ್ಧೆಯೇ ಬೇಡ ಎನ್ನುವ ಕಾರಣದಿಂದ ಡಬ್ಬಿಂಗ್ ನಿಶೇಧ ಇರಬೇಕು ಎನ್ನುವವರಿಗೆ ನೀವಂದಂತೆ ಸ್ಪರ್ಧೆಗೆ ತೆರೆದುಕೊಳ್ಳಿ, ಒಳ್ಳೆ ಸಿನಿಮಾ ಮಾಡಿ, ಚೆನ್ನಾಗಿದ್ದರೆ ಜನ ಗೆಲ್ಲಿಸುತ್ತಾರೆ ಎನ್ನಲಾಗಿದೆಯೇ ಹೊರತು ಇವರ ಸಿನಿಮಾಗಳ ಗುಣಮಟ್ಟ ಹೆಚ್ಚಲು ಡಬ್ಬಿಂಗ್ ಬಿಡಬೇಕು ಎನ್ನುತ್ತಿಲ್ಲ. ಡಬ್ಬಿಂಗ್ ಸಿನಿಮಾಗಳನ್ನು ಸಾರಾಸಗಟಾಗಿ ಬ್ಯಾನ್ ಮಾಡಿರುವುದರಿಂದಾಗಿ ಕನ್ನಡ ಜನಾಂಗ ಹೇಗೆ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ನಮ್ಮ ಕಾಳಜಿ. ಕನ್ನಡಿಗರ ಕೆಲಸ ಮತ್ತು ಡಬ್ಬಿಂಗ್ ಎರಡನ್ನೂ ಒಂದೆಂದು ನೋಡುವುದು ಸರಿಯೇ ಯೋಚಿಸಿರಿ...
ಈಗಲೂ ಡಬ್ಬಿಂಗ್ ನಿಶೇಧವೆನ್ನುವುದು ಸಂವಿಧಾನಬದ್ಧವಾಗಿದ್ದರೆ, ಸರ್ಕಾರ ಯಾವುದೇ ಕಾನೂನು ಕಾಯ್ದೆ ಮಾಡಬಹುದಾಗಿದ್ದರೆ ಅದನ್ನು ಬೇಕೆನ್ನುವವರು ಒತ್ತಾಯಿಸಲಿ. ಅದು ಬಿಟ್ಟು ಯಾರಿಗೂ ಡಬ್ಬಿಂಗ್ ಮಾಡಲು ಬಿಡಲ್ಲಾ, ನೋಡಲು ಬಿಡಲ್ಲಾ ಎಂದರೆ ಒಪ್ಪಲಾಗುವುದೇ ಯೋಚಿಸಿರಿ.

Style On Streets ಅಂತಾರೆ...

Nice article..:-)

Kousthubha ಅಂತಾರೆ...

ಯೋಚಿಸಲೇ ಬೇಕಾದ ವಿಚಾರಗಳು ... ಉತ್ತಮ ಬರಹ ಸರ್...
ಕೌಸ್ತುಭ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails