"ಮಾಲ್ಗುಡಿ ಡೇಸ್" ಕನ್ನಡದಲ್ಲಿ ಬರಲಿ - ಮನವಿ ಸಲ್ಲಿಕೆ



ಇತ್ತೀಚಿಗೆ ಜನಶ್ರೀ ಸುದ್ದಿವಾಹಿನಿಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದ ಶ್ರೀ ಶಂಕರ್‌ನಾಗ್‌ರವರು ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿರುವ ಸುದ್ದಿಯನ್ನು ಜಾಹೀರಾತುಗಳ ಮೂಲಕ ಪ್ರಸಾರ ಮಾಡಲಾಯಿತು. ಈ ಧಾರಾವಾಹಿಯನ್ನು ಮೂಲದಲ್ಲಿ ಹಿಂದೀ/ ಇಂಗ್ಲೀಶ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ಈಗ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕನ್ನಡದ ಅಡಿಬರಹಗಳೊಂದಿಗೆ (SubTitle) ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬಹುತೇಕ ಕನ್ನಡದ ನಟರು, ತಾಂತ್ರಿಕ ವರ್ಗ ಹೊಂದಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲಾಗಿರುವ ಈ ಧಾರಾವಾಹಿಯನ್ನು ಕನ್ನಡಿಗರಿಗೆ ತಲುಪಿಸುವ ವಾಹಿನಿಯ ಪ್ರಯತ್ನವು ಅಭಿನಂದನಾರ್ಹವಾಗಿದೆ. “ಮಾಲ್ಗುಡಿ ಡೇಸ್” ಧಾರಾವಾಹಿಯನ್ನು ಅಡಿಬರಹಗಳೊಂದಿಗೆ ಹಿಂದಿಯಲ್ಲಿ ಪ್ರಸಾರ ಮಾಡುವ ಬದಲು ಕನ್ನಡದಲ್ಲಿ (ಡಬ್ ಮಾಡಿ) ಪ್ರಸಾರ ಮಾಡಬೇಕೆಂಬ ಪ್ರೇಕ್ಷಕರ ಅನಿಸಿಕೆಯನ್ನು ಜನಶ್ರೀಯವರಿಗೆ ತಲುಪಿಸಲು ಒಂದು ಮಿಂಬಲೆ ಮನವಿ (ಆನ್ಲೈನ್ ಪೆಟಿಷನ್)ಯನ್ನು ಆರಂಭಿಸಲಾಯಿತು.

ಮನವಿಯ ಸಾರ

ಶಂಕರ್‌ನಾಗ್‌ರವರ ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಯು ಕನ್ನಡದಲ್ಲಿಯೇ ಪ್ರಸಾರವಾಗಬೇಕೆಂದೂ, ಇದು ಕನ್ನಡದಲ್ಲಿಯೇ ಮನರಂಜನೆಯನ್ನು ಪಡೆದುಕೊಳ್ಳುವ ಕನ್ನಡಿಗರ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತಿರುವ ಕ್ರಮವಾಗಿದ್ದು, ಪರಭಾಷೆಯಲ್ಲಿ ತಯಾರಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಇತರೆ ಭಾರತೀಯ ಪ್ರಜೆಗಳಂತೆಯೇ, ನಮ್ಮ ತಾಯ್ನುಡಿಯಲ್ಲೇ ನೋಡುವ ಅವಕಾಶ ಮಾಡಿಕೊಡಬೇಕೆಂದೂ ಕೋರುತ್ತಾ ಮಾಲ್ಗುಡಿ ಡೇಸ್ ಕನ್ನಡದಲ್ಲೇ ಬರಬೇಕೆಂದು ಮನವಿ ನೀಡಲಾಯಿತು. ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯವರಿಗೆ ಮನವಿ ಮಾಡಲಾಯಿತು.

ಈ ಮನವಿಗೆ ಸಹಿ ಹಾಕುವ ಪ್ರಕ್ರಿಯೆಯನ್ನು http://www.change.org/petitions/janashree-news-telecast-kannada-version-of-malgudi-days ಮಿಂಬಲೆಯಲ್ಲಿ ಸೋಮವಾರ 11.06.2012ದಂದು ಶುರುಮಾಡಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು, ಕೇವಲ 72 ಗಂಟೆಗಳಲ್ಲೇ 830 ಜನರು ಸಹಿ ಹಾಕಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ಈಗಲೂ ನಡೆಯುತ್ತಿದ್ದು ಕನ್ನಡದಲ್ಲಿಯೇ “ಮಾಲ್ಗುಡಿ ಡೇಸ್” ಕಾರ್ಯಕ್ರಮವನ್ನು ನೋಡುವ ತೀವ್ರವಾದ ಹಂಬಲವು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಭಾರತದ ನಾನಾ ಊರುಗಳಲ್ಲಿರುವವರಷ್ಟೇ ಅಲ್ಲದೆ ವಿಶ್ವದ ಮೂಲೆಮೂಲೆಗಳ ಕನ್ನಡಿಗರು ಆನ್‌ಲೈನ್ ಪಿಟಿಷನ್ನಿಗೆ ಸಹಿ ಹಾಕುವ ಮೂಲಕ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾಹಿನಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಇಂದು ಅವರಿಗೆ 830 ಸಹಿಗಳ ಸದರಿ ಮನವಿಯನ್ನು ತಲುಪಿಸಿ, “ಮಾಲ್ಗುಡಿ ಡೇಸ್” ಧಾರಾವಾಹಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಸಾರ ಮಾಡಬೇಕೆಂದೂ ತನ್ಮೂಲಕ ಕನ್ನಡಿಗರಿಗೆ ಕಳೆದ ನಾಲ್ಕು-ಐದು ದಶಕಗಳಿಂದ ನಿರಾಕರಿಸಲಾಗಿರುವ “ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕ”ನ್ನು ದಕ್ಕಿಸಿಕೊಟ್ಟ ಐತಿಹಾಸಿಕ ಗೌರವಕ್ಕೆ ಪಾತ್ರರಾಗಬೇಕೆಂದು ಕೋರಲಾಯಿತು.

4 ಅನಿಸಿಕೆಗಳು:

vijayashankar metikurke ಅಂತಾರೆ...

ವಿಜಯಶಂಕರ ಮೇಟಿಕುರ್ಕೆ,

ಮಾಲ್ಗುಡಿ ಡೇಸ್ ಅನ್ನು ಕನ್ನಡದಲ್ಲೇ ಪ್ರಸಾರ ಮಾಡಿ ಎಂದು ಮನವಿ ಯನ್ನೂ ವಾಹಿನಿಯೊಂದಕ್ಕೆ ಕೊಟ್ಟಿರುವುದು ಸಂತಸದ ಸಂಗತಿ ಏನೋ ಸರಿ.ನಾನು ಅದಕ್ಕೆ ಸಹಿ ಮಾಡಿದ್ದೇನೆ. ಆದರೆ ಇಂತಹ ಹೀನಾಯ ಪರಿಸ್ಥಿತಿ ನಮಗೇಕೆ ಬಂದಿದೆ ಎಂದು ಯೋಚಿಸ ಬೇಕಾದ ಸ್ಥಿತಿ ನಮ್ಮ್ಮಲ್ಲಿದೆ. ಕನ್ನಡ ನಾಡಿನ ಒಂದು ಕನ್ನಡ ವಾಹಿನಿಗೆ ಧಾರವಾಹಿಯನ್ನು ಕನ್ನಡ ದಲ್ಲೇ ಪ್ರಸಾರ ಮಾಡಿ ಎಂದು ಕನ್ನಡಿಗರಾದ ನಾವು ಕೇಳಬೇಕಾದ ದಾರುಣ ಪರಿಸ್ಥಿತಿ, ಯಾರು ಇದಕ್ಕೆ ಕಾರಣ. ಯಾಕೆ ಕನ್ನಡಿಗರು ಹೀಗಾಗಿದ್ದಾರೆ ಬೇರೆ ಭಾಷೆ ಯಲ್ಲಿ ಪ್ರಸಾರ ಮಾಡೀರಿ ಜೋಕೆ ಎಂದು ಹೇಳಬೇಕಾದ ನಾವು ಭಿಕ್ಷೆ ಕೇಳುವ ಹಾಗಾಗಿದ್ದೇವಲ್ಲ. ಇದೆಂತಹ ದೈನೇಸಿ ಸ್ಥಿತಿ. ಇದಕ್ಕೆಲ್ಲ ಪರಿಣಾಮಕಾರಿ ಉತ್ತರ ಇಲ್ಲವೇ. ನಮಗೆ ಆ ಹಕ್ಕು ಇಲ್ಲವೇ. ನಾವೇಕೆ ನಮ್ಮ ನಾಡಿನಲ್ಲೇ ಎರಡನೇ ದರ್ಜೆಯ ಪ್ರಜೆಗಳಾಗಿದ್ದೇವೆ.

Anonymous ಅಂತಾರೆ...

Dubbing nisheda nijakku kaanunu bahiravaagiddare Idannu court alli Yake yaaru prashnisuthilla ....???

Roopesh ಅಂತಾರೆ...

If the Great Shankar Nag was there, he would have aired Malgudi Days in Kannada........ it would not have been difficult for him to do so.....!!!!
We need another Shankar Nag..... I had enough of existing stars.

Anonymous ಅಂತಾರೆ...

Malgudi days is originally in English. Is there a English version available?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails