ಹಿಂದೀ ದಿವಸದ ಸಂದರ್ಭದಲ್ಲಿ ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ಮಾಡಿದ ಭಾಷಣದ ಕನ್ನಡದ ಅನುವಾದ ಇಲ್ಲಿದೆ ನೋಡಿ:
ಗೃಹಮಂತ್ರಿ ಶ್ರೀ ಸುಶೀಲ್ ಕುಮಾರ್ ಶಿಂಧೆಯವರೇ,
ಗೃಹ ರಾಜ್ಯಮಂತ್ರಿ ಶ್ರೀ ಜಿತೇಂದ್ರ ಸಿಂಹರವರೇ,
ಆಡಳಿತ ಭಾಷಾ ವಿಭಾಗದ ಸಚಿವರಾದ ಶ್ರೀ ಶರದ್ ಗುಪ್ತಾರವರೇ,
ಗಡಿ ಭದ್ರತಾ ಸಚಿವರಾದ ಶ್ರೀ ಏ ಕೆ ಮಂಗೋತ್ರಾರವರೇ,
ಅಕ್ಕತಂಗಿಯರೇ, ಅಣ್ಣ ತಮ್ಮಂದಿರೇ...
ಹಿಂದೀ ದಿವಸದ ಈ ಶುಭಸಂದರ್ಭದಲ್ಲಿ ತಮಗೆಲ್ಲಾ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.
ಭಾರತದ ಇತಿಹಾಸದಲ್ಲಿ ಇಂದಿನ ದಿವಸ ಅತ್ಯಂತ ಹೆಮ್ಮೆಯದ್ದಾಗಿದೆ. ನಮ್ಮ ಸಂವಿಧಾನದಲ್ಲಿ ಹಿಂದೀ ಭಾಷೆಗೆ ೧೯೪೯ರ ಇದೇ ದಿನ ಆಡಳಿತ ಭಾಷೆಯ ಸ್ಥಾನಮಾನ ಸಿಕ್ಕಿತು. ಭಾರತದಲ್ಲಿ ಅನೇಕ ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ವೈಶಿಷ್ಟ್ಯವಾಗಿದೆ ಮತ್ತು ಹಿಂದೀ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿದೆ. ಗುರುದೇವ ರವೀಂದ್ರನಾಥ ಟ್ಯಾಗೂರರು ಹೀಗೆ ಹೇಳಿದ್ದಾರೆ: "ಭಾರತೀಯ ಭಾಷೆಗಳು ನದಿಗಳು ಮತ್ತು ಹಿಂದೀ ಮಹಾನದಿ".
ಪ್ರಜಾಪ್ರಭುತ್ವದಲ್ಲಿ ಭಾಷೆಗಳಿಗೆ ಮಹತ್ವದ ಪಾತ್ರವಿದೆ, ಏಕೆಂದರೆ ಇದು ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಹಾಗಾಗಿ ನಮ್ಮ ಸಂವಿಧಾನದಲ್ಲಿ ಕೇಂದ್ರಸರ್ಕಾರದ ಕೆಲಸಕಾರ್ಯಗಳಿಗೆ ಹಿಂದೀಯನ್ನು ಆಡಳಿತ ಭಾಷೆಯಾಗಿ ಮಾಡಲಾಗಿದೆ ಮತ್ತು ಪ್ರಾದೇಶಿಕ ಭಾಷೆಗಳನ್ನು ರಾಜ್ಯಗಳಿಗಾಗಿ ಸ್ವೀಕರಿಸಲಾಗಿದೆ. ಭಾಷೆಯಿಂದ ಜನಸಾಮಾನ್ಯರು ಮತ್ತು ಶಾಸನದ ನಡುವೆ ಸಹಯೋಗ ಮತ್ತು ಹೊಣೆಗಾರಿಕೆಯ ಸಂಬಂಧ ಸ್ಥಾಪನೆಯಾಗುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಶಕ್ತಿಯುತ ಮತ್ತು ಪ್ರಗತಿಶೀಲವಾಗಿಸಲು ನಾವು ಬಯಸುವುದೇ ಆದಲ್ಲಿ ನಾವು ಕೇಂದ್ರದ ಆಡಳಿತದಲ್ಲಿ ಹಿಂದೀಯನ್ನೂ ರಾಜ್ಯಗಳ ಆಡಳಿತದಲ್ಲಿ ರಾಜ್ಯಗಳ ಭಾಷೆಯನ್ನೂ ಬಳಸತಕ್ಕದ್ದು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹೀಗೆ ಹೇಳಿದ್ದರು: "ನಾವೇನಾದರೂ ಹಿಂದೂಸ್ತಾನವನ್ನು ಒಂದು ರಾಷ್ಟ್ರ ಮಾಡುವುದೇ ಆದಲ್ಲಿ ರಾಷ್ಟ್ರಭಾಷೆ ಹಿಂದೀಯೇ ಆಗಬಲ್ಲದು". ಸ್ವಾತಂತ್ರ ಬಂದು ಅರವತ್ತೈದು ವರ್ಷಗಳಾದ ಈ ಸಂದರ್ಭದಲ್ಲಿ ಮಹಾತ್ಮಗಾಂಧಿಯವರ ಈ ಮಾತುಗಳು ಸತ್ಯವೆಂದು ಸಾಬೀತಾಗುತ್ತಿದೆ. ಇಡೀ ಭಾರತದಲ್ಲಿ ಸಂಪರ್ಕಭಾಷೆಯಾಗಿ ಹಿಂದೀ ಭಾಷೆಯ ಬಳಕೆಯು ಯಶಸ್ವಿಯಾಗಿ ನಡೆದಿದೆ. ಹಾಗಾಗಿ ಸರ್ಕಾರದ ಕೆಲಸ ಕಾರ್ಯಗಳಲ್ಲಿಯೂ ಆಡಳಿತ ಭಾಷೆಯಾದ ಹಿಂದೀ ಭಾಷೆಗೆ ಮಹತ್ವ ನೀಡಬೇಕಾದ್ದು ಅತ್ಯಂತ ಅಗತ್ಯದ್ದಾಗಿದೆ. ಆಡಳಿತ ಭಾಷೆಯಾದ ಹಿಂದೀ ಮತ್ತು ಪ್ರಾದೇಶಿಕ ಭಾಷೆಗಳ ಪಾತ್ರ ಬಹಳ ಮುಖ್ಯವಾಗಿದ್ದು ಸರ್ಕಾರಗಳ ಜನಪರ ಯೋಜನೆಗಳನ್ನು ಹಳ್ಳಿ ಹಳ್ಳಿಗಳ ರೈತಾಪಿ ಜನರಿಗೂ ಯಶಸ್ವಿಯಾಗಿ ತಲುಪಿಸಲು ಸಾಧ್ಯ.
ಭಾರತ ಸರ್ಕಾರದ ಮೂಲಕ ಸರ್ವಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ, ರಾಷ್ಟ್ರೀಯ ಸ್ವಾಸ್ಥ್ಯ ಮಿಷನ್‌ನಂತಹ ನಾನಾ ಅಗ್ರ ಯೋಜನೆಗಳನ್ನು ನಡೆಸಲಾಗುತ್ತಿದೆ. ಇವೆಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಭಾಷೆಯ ಮಹತ್ವ ದೊಡ್ಡದಿದೆ.
ಹಿಂದೀ ಈಗ ಒಂದು ಅಂತರರಾಷ್ಟ್ರೀಯ ಭಾಷೆಯಾಗಿಯೂ ಹೊಮ್ಮಿ ಬಂದಿದೆ. ಈ ಹೊತ್ತಿನಲ್ಲಿ ವಿಶ್ವದ ನೂರೈವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಿಂದೀಯನ್ನು ಕಲಿಸಲಾಗುತ್ತಿದೆ. ವಿಶ್ವಸಂಸ್ಥೆಯ ಯುನೆಸ್ಕೋದ ಏಳು ಭಾಷೆಗಳಲ್ಲಿ ಹಿಂದೀಯನ್ನೂ ಒಂದೆಂದು ಗುರುತಿಸಲಾಗಿದೆ. (ಸಾತ್ ಅಂತಾ ಇದೆ). ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ದೂರದರ್ಶನ ವಾಹಿನಿಗಳಲ್ಲಿ ಹಿಂದೀ ಮತ್ತಿತರ ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನೂ ನೀಡುವುದು ಶುರುವಾಗಿದೆ.
ಇದೀಗ ವ್ಯಾಪರ ಕ್ಷೇತ್ರದಲ್ಲೂ ಹಿಂದೀ ಮಹತ್ವವಾದ ಕಾಣಿಕೆಯನ್ನು ಸಲ್ಲಿಸುತ್ತಿದೆ. ವಿದೇಶಿ ಸಂಸ್ಥೆಗಳು ಭಾರತದಲ್ಲಿ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಹಿಂದೀಯ ಜೊತೆಯಲ್ಲಿ ಅನೇಕ ಪ್ರಾದೇಶಿಕ ಭಾಷೆಗಳನ್ನೂ ಬಳಸಲು ಶುರು ಮಾಡಿವೆ.
ಹಿಂದೀ ಬಳಕೆಯನ್ನು ಹೆಚ್ಚಿಸಲು ಸರ್ಕಾರವೂ ಕೂಡಾ ಬಹಳಷ್ತು ಪ್ರೋತ್ಸಾಹವನ್ನು ನೀಡುತ್ತಿದೆ. ಈ ಪ್ರಯತ್ನಗಳೀಂದಾಗಿ ಹಿಂದೀಯ ಬಳಕೆ ಹೆಚ್ಚುತ್ತಿದೆ. ನಮ್ಮ ಸಂಕಲ್ಪವೇನೆಂದರೆ ಹಿಂದೀಯ ಜೊತೆಜೊತೆಯಲ್ಲೇ ಎಲ್ಲಾ ಪ್ರಾದೇಶಿಕ ಭಾಷೆಗಳೂ ಬೆಳಯುವಂತಾಗಬೇಕು ಮತ್ತು ನಾವು ಇದಕ್ಕಾಗಿ ಪ್ರಯತ್ನಪಡುತ್ತೇವೆ.
ಬರುವ ಸೆಪ್ಟೆಂಬರ್ ೨೨~೨೪ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ವಿಶ್ವ ಹಿಂದೀ ಸಮ್ಮೇಳನವು ಹಿಂದೀ ಭಾಷೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆ ಮಾಡಲು ಸಹಕಾರಿಯಾಗಲಿದೆ. ಈ ವಿಶ್ವ ಹಿಂದೀ ಸಮ್ಮೇಳನದಲ್ಲಿ ಪಾಲ್ಗೊಳ್ಲಲಿರುವ ಎಲ್ಲಾ ವಿದ್ವಾಂಸರು ಮತ್ತು ಹಿಂದೀ ವಿಶ್ವಾಸಿಗಳಲ್ಲಿ ನಿಷ್ಟೆ ಮತ್ತು ಸಮರ್ಪಣಾ ಭಾವನೆಯಿಂದ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಆಗ್ರಹಪೂರ್ವಕವಾಗಿ ಮನವಿಮಾಡುತ್ತೇನೆ.
ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಹಿಂದೀ ಬಳಸುತ್ತಿರುವುದಕ್ಕಾಗಿ ಪುರಸ್ಕೃತರಾದ ಎಲ್ಲಾ ವ್ಯಕ್ತಿಗಳಿಗೂ ಮತ್ತು ಸಂಸ್ಥೆಗಳಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ಲ್ರಮದಲ್ಲಿ ನೀಡಲಾಗುತ್ತಿರುವ ಇಂದಿರಾಗಾಂಧಿ ರಾಜ್‌ಭಾಷಾ ಶೀಲ್ಡ್ ಮತ್ತು ಶ್ರೇಷ್ಟ್ ಕಾರ್ಯ ಪುರಸ್ಕಾರಗಳು ಎಲ್ಲರಿಗೂ ಪ್ರೇರಣೇ ನೀಡಲಿ.
ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ನಾನು ಆಡಳಿತ ಭಾಷಾ ವಿಭಾಗ(ರಾಜ್‌ಭಾಷಾ ವಿಭಾಗ್)ಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಆಡಳಿತ ಭಾಷೆಯಾದ ಹಿಂದೀಯ ಪ್ರಸಾರ್ ಅಮ್ತ್ತು ಪ್ರಚಾರಕ್ಕಾಗಿ ಶ್ರಮಿಸಿದವರ ಕೊಡುಗೆಯನ್ನು ಪ್ರಶಂಸಿಸುತ್ತೇನೆ.
ಜಯ್ ಹಿಂದ್
2 ಅನಿಸಿಕೆಗಳು:
- ಭಾರತದ ರಾಷ್ಟ್ರಪತಿಗಳು ಇಂತಹ ಮಾತನಾಡುತ್ತಿರುವುದು ಸರಿಯಲ್ಲ. ಒಂದು ಕಡೆ ಭಾರತವು ಹಲವು ನುಡಿಗಳ ದೇಶ ಅಂತಾರೆ ಇನ್ನೊಂದು ಕಡೆ ಹಿಂದಿಗೆ ಹೆಚ್ಚುಗಾರಿಕೆ ಕೊಡ್ತಾರೆ.
- "ಆಡಳಿತದಲ್ಲಿ ಹಿಂದಿಯನ್ನು ಬೆಳೆಸಬೇಕಾಗಿದ್ದು (ಬಢಾವಾ ದೇನಾ) ಬಹಳ ಅಗತ್ಯವಾಗಿದೆ." - ಜನರನ್ನು ತಲುಪಲು ಅವರದೇ ನುಡಿ ಇರುವಾಗ ’ಹಿಂದಿ’ ಯಾಕೇ ?!
- ಹಿಂದಿಯೇತರ ನುಡಿಗಳು "ಸ್ಥಾನೀಯ" ಅಂದರೆ ಹಿಂದಿಯೂ "ಸ್ಥಾನೀಯ"ವಲ್ಲವೇ ? ಹಾಗೇ ನೋಡಿದರೆ, ಉತ್ತರ’ಪ್ರದೇಶ’, ಮಧ್ಯ’ಪ್ರದೇಶ’ದಂತ ’ಪ್ರದೇಶ’ಗಳಲ್ಲಿ ಮಾತನಾಡುವ ’ಹಿಂದಿ’ಯೇ ಹೆಚ್ಚು ’ಪ್ರಾದೇಶಿಕ’
- "ಭಾರತದ ಇತರ ನುಡಿಗಳು ನದಿಯಾದರೆ, ಹಿಂದಿ ಭಾರತದ ಮಹಾನದಿ" - ಈ ಮಹಾನದಿ ನಮ್ಮ ನಾಡಿನಲ್ಲಿ ಹರಿದು, ನಮ್ಮ ನದಿಗಳನ್ನು ಕೊಚ್ಚಿಕೊಂಡು ಹೋಗುವುದು ಬೇಡ.
... ಭಾರತ ಒಂದು ರಾಷ್ಟ್ರವಾಗಿರುವಾಗ ಅದರ 'ರಾಷ್ಟ್ರಪತಿ' ಒಂದೇ ನುಡಿಯನ್ನು ಬೆಳೆಸುತ್ತಿರುವವರಿಗೆ ಬಿರುದು/ಸಮ್ಮಾನಗಳನ್ನು ಕೊಡಬೇಕೇ ? (ಉತ್ತರಪ್ರದೇಶದ ಮುಖ್ಯಮಂತ್ರಿ ಸಾಕಲ್ಲವೇ?)
ಒಂದು ದೇಶಕ್ಕೆ ಒಂದೇ ಭಾಷೆಯನ್ನು ಬಲಾತ್ಕಾರದಿಂದ ಅಳವಡಿಸುವ ಮೂಲಕ ಐಕ್ಯತೆ ಸಾಧಿಸುವುದು ಕನಸಿನ ಮಾತು! ಒಂದೇ ಭಾಷೆಯನ್ನು ಹೊಂದಿದ್ದ ಆಂಧ್ರ ಯಾಕೆ ಎರಡು ಹೋಳಾಯಿತು? ಸಮಾನತೆ ಇಲ್ಲದಿದ್ದರೆ ಯಾವುದಾದರೂ ಸರಿ, ಅದು ಹೋಳಾಗಲೇಬೇಕು.
-arjun
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!