![]() |
| (ಫೋಟೋ ಕೃಪೆ: ಗೂಗಲ್ ಅಂತರ್ಜಾಲ ತಾಣ) |
ಕರ್ನಾಟಕ ರಾಜ್ಯದ ಅತಿ ದೊಡ್ಡ ನೈಸರ್ಗಿಕ ಬಂದರಾದ ಮಲ್ಪೆ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇದು ಇಡೀ ಕರಾವಳಿಗೆ ಮೀನುಗಾರಿಕೆಯ ರಾಜಧಾನಿಯಿದ್ದಂತೆ! ಒಟ್ಟು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ, ಕಡಲನ್ನೇ ದೈವವೆಂದು ತಿಳಿದು, ಮೀನುಗಾರಿಕೆಯಿಂದಲೇ ಬದುಕುತ್ತಿರುವ ಸಾವಿರಾರು ಮೀನುಗಾರ ಕುಟುಂಬಗಳು ನಮ್ಮ ಕರಾವಳಿಯಲ್ಲಿವೆ. ಇತ್ತೀಚಿಗೆ ಇವರುಗಳು ಸೇರಿ ನಡೆಸಿದ ಪ್ರತಿಭಟನೆಯೊಂದರ ಬಗ್ಗೆ ವರದಿಗಳು (ಹಿಂದೂ, ದಟ್ಸ್ ಕನ್ನಡ, ಗಲ್ಫ಼್ ಕನ್ನಡಿಗ) ಪ್ರಕಟವಾಗಿದೆ. ಮೇಲ್ನೋಟಕ್ಕೆ ಇದು ಮೀನುಗಾರಿಕೆ ಸಮಸ್ಯೆಯ ಹಾಗೆ ಕಂಡರೂ ಒಳಸುಳಿ ಬೇರೆಯೇ ಇದೆ. ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಇದು ಎತ್ತುವ ಪ್ರಶ್ನೆಗಳು ಅನೇಕ!
ಕರಾವಳಿ ಮೀನುಗಾರಿಕೆಗೆ ಇರುವ ನಿಯಮ!
ನಮ್ಮ ಕರಾವಳಿಯಲ್ಲಿ ಒಂದು ವಿಶೇಷ ತಳಿಯ ಮೀನಿದೆ. ಇದರ ಹೆಸರು "ಕಟ್ಲ್ ಫಿಶ್" ಅಂದರೆ ಕಪ್ಪೆ ಬೊಂಡಾಸೆ ಮೀನು. ಈ ಮೀನು ಹಿಡಿಯಲು ಸಾಂಪ್ರದಾಯಿಕ ಶೈಲಿಯನ್ನು ಇಲ್ಲಿನ ಮೀನುಗಾರರು ಬಳಸುತ್ತಿದ್ದಾರಂತೆ. ಆದರೆ ಇತ್ತೀಚಿಗೆ ಕೆಲವರ್ಷಗಳಿಂದ ತಮಿಳುನಾಡಿನಿಂದ ವಲಸೆ ಬಂದಿರುವ ಮೀನುಗಾರರು ಸಿಡಿಮದ್ದು ಸಿಡಿಸಿ ಒಟ್ಟೊಟ್ಟಿಗೆ ರಾಶಿ ರಾಶಿ ಮೀನುಗಳನ್ನು ಹಿಡಿದು ಹಾಕುತ್ತಿದ್ದಾರೆ ಎನ್ನುವುದು ಸ್ಥಳೀಯ ಮೀನುಗಾರರ ದೂರು! ಈ ಜಾತಿಯ ಮೀನುಗಳು ಮರಿಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೂ ಈ ಮೀನು ಹಿಡಿಯುವುದಿಲ್ಲ. ಏಕೆಂದರೆ ಇದರಿಂದ ಇವುಗಳ ಸಂತತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಈ ಸಮಯದಲ್ಲಿ ಮೀನುಗಾರಿಕೆಯನ್ನು ಅದರಲ್ಲೂ ವಿಶೇಷವಾಗಿ ಯಾಂತ್ರಿಕ ದೋಣಿ ಬಳಕೆಯೂ ಸೇರಿದಂತೆ ಎಲ್ಲಾ ಅಸಂಪ್ರದಾಯಿಕ ವಿಧಾನವನ್ನು ನಿಶೇಧಿಸಲಾಗಿದೆ. ಈಗಾಗಲೇ ಉಡುಪಿ ಜಿಲ್ಲಾ ಆಡಳಿತ ಸಿಡಿಮದ್ದು ಬಳಸಿ ಮೀನು ಹಿಡಿಯುವುದನ್ನು ನಿಶೇಧಿಸಿದೆ. ಹೀಗಿದ್ದರೂ ಪರರಾಜ್ಯದ ಮೀನುಗಾರರುಗಳು ಕಾನೂನು ಮುರಿಯುವ ಮೂಲಕ ಆ ಬಗೆಯ ಮೀನುಗಳ ಸರ್ವನಾಶಕ್ಕೆ ಕಾರಣವಾಗಿದ್ದಾರೆ ಎನ್ನುವುದು ನಮ್ಮ ಬೆಸ್ತರ ಕಾಳಜಿಯಾಗಿದೆ. ಈ ಕಾರಣದಿಂದಾಗಿ ಕೆಲದಿನಗಳ ಹಿಂದೆ ಒಂದು ಬಂದ್ ಕೂಡಾ ನಡೆದಿದೆ. ಇದಕ್ಕೆಂದೇ ನಮ್ಮ ಕರಾವಳಿಯ ಬೆಸ್ತರು ಹೊರರಾಜ್ಯದ ಬೆಸ್ತರ ದೋಣಿಗಳು ನಮ್ಮ ರಾಜ್ಯದ ಕಡಲಗಡಿಗೆ ಬಾರದಂತೆಯೂ, ಹೊರರಾಜ್ಯದ ಮೀನುಗಾರರಿಗೆ ಕಡಿವಾಣ ಹಾಕುವಂತೆಯೂ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರವಾಗಿ ಶಾಸಕ ಶ್ರೀ ರಘುಪತಿಭಟ್ ಅವರು ಮಾತಾಡಿ "ಅನ್ಯರಾಜ್ಯದವರು ಇಲ್ಲಿಗೆ ಬಂದು ಮೀನುಗಾರಿಕೆ ನಡೆಸಬಾರದೆನ್ನುವ ಯಾವುದೇ ಕಾಯ್ದೆಯೂ ನಮ್ಮಲ್ಲಿಲ್ಲಾ, ಆದರೂ ಮುಖ್ಯಮಂತ್ರಿಗಳ ಬಳಿ ಹೇಳಿ ಮಸೂದೆ ಮಂಡಿಸುತ್ತೇನೆ" ಎಂದು ಸ್ವಲ್ಪ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರಂತೆ! ನಮ್ಮ ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲುಬೇಕಾದ ನೀತಿ ನಿಯಮಗಳನ್ನು ರೂಪಿಸಿಕೊಳ್ಳುವ ಹಕ್ಕು ನಮ್ಮ ರಾಜ್ಯಸರ್ಕಾರದ ಕೈಲಿರಬೇಕಾದ್ದು ನ್ಯಾಯವಲ್ಲವಾ ಗುರೂ!? ಹೊರನಾಡಿನ ಮೀನುಗಾರರು ನಮ್ಮ ಪ್ರದೇಶದೊಳಗೆ ಬರಬೇಕಾದರೆ ನಮ್ಮ ರಾಜ್ಯಸರ್ಕಾರದ ಅನುಮತಿ ಪಡೆದುಕೊಳ್ಳಬೇಕಲ್ಲವಾ? ಇವೆಲ್ಲವನ್ನೂ ಸರ್ಕಾರ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ

0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!