ಡಬ್ಬಿಂಗ್ ವಿರೋಧಿ ವಾದಗಳ ಪೊಳ್ಳುತನ!


ಕರ್ನಾಟಕ ಕೈಗಾರಿಕೆ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಿನ್ನೆ "ಡಬ್ಬಿಂಗ್ ಕನ್ನಡಕ್ಕೆ ಪೂರಕವೋ ಮಾತಕವೋ" ಕುರಿತ ಸಂವಾದವೊಂದನ್ನು ಏರ್ಪಡಿಸಿತ್ತೆಂದೂ ಅದರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಇಬ್ಬರು ಗಣ್ಯರು ಮಾತನ್ನಾಡಿದ್ದನ್ನು ಇಂದಿನ (೦೭.೦೧.೨೦೧೩) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ನಿಜಕ್ಕೂ ಡಬ್ಬಿಂಗ್ ವಿರೋಧಿಸುವ ಒಂದು ಲಾಬಿ, ಇಡೀ ಸಮಾಜವನ್ನು ಸ್ವಾರ್ಥಕ್ಕೆ ತಪ್ಪುದಾರಿಗೆ ಎಳೆಯುತ್ತಿದೆಯೇನೋ ಎನ್ನುವಂತೆ ಇವರ ಮಾತುಗಳಿವೆ!

ಕರುಳಿಗೇ ಕೈಯಿಕ್ಕೋರು...

ಯಾವ ಕಾರಣಕ್ಕೆ ಡಬ್ಬಿಂಗ್ ಬೇಡ ಎಂದು ವಾದ ಮಂಡಿಸುವಾಗ ಇವರು ತೀರಾ ಕನ್ನಡಿಗರ ಕರುಳಬಳ್ಳಿಗೇ ಕೈಯಿಕ್ಕಿದ್ದಾರೆ. ‘ಕನ್ನಡ ತಾಯಿಯನ್ನು ಒಂದು ಉತ್ಪಾದನಾ ವಸ್ತುವಾಗಿ ಕಾಣುಲಾಗುತ್ತಿದೆ’ ಎನ್ನುವ ಮಾತುಗಳನ್ನು ಕೇಳಿದಾಗ ಚಿತ್ರರಂಗದವರು ಮಾಡುತ್ತಿರುವುದೂ ಅದನ್ನೇ ಅಲ್ಲವೇ ಅನ್ನಿಸುತ್ತದೆ. ಪಕ್ಕಾ ಭಾವನಾತ್ಮಕವಾಗಿರುವ ಇವರ ಹೇಳಿಕೆ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಡಬ್ಬಿಂಗ್ ಬರುವುದನ್ನು ತಳುಕು ಹಾಕುವಲ್ಲಿಗೆ ಬಂದು ನಿಂತಿದೆ. ಈ ಮಾತನ್ನೇ ನೋಡಿದರೆ ಕನ್ನಡ ಶಾಲೆಗಳನ್ನು ಮುಚ್ಚುವುದು ಎಷ್ಟರಮಟ್ಟಿಗೆ ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಒಯ್ಯುತ್ತದೆಯೋ... ಡಬ್ಬಿಂಗ್ ಇಲ್ಲದೆ ಪರಭಾಷಾ ಕಾರ್ಯಕ್ರಮಗಳನ್ನು ಪರಭಾಷೆಗಳಲ್ಲೇ ನೋಡಬೇಕಾದ ಅನಿವಾರ್ಯತೆ ಹುಟ್ಟುಹಾಕುತ್ತಿರುವುದೂ ಕೂಡಾ ಅಷ್ಟೇ ದೂರಕ್ಕೆ ಒಯ್ಯುತ್ತಿರುವುದು ಕಾಣುತ್ತದೆ. ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಮೇಲೆ ಭಾರಿ ಹೊಡೆತ ಬೀಳಲಿದೆ ಎನ್ನುವ ಇವರು ಹೇಗೆ ಬೀಳುತ್ತದೆ ಎನ್ನುವುದನ್ನೂ ವಿವರಿಸಬೇಕಿತ್ತು! ಚಿತ್ರರಂಗವೊಂದು ಸಂಸ್ಕೃತಿಗೆ ಕನ್ನಡಿಯಾಗಬಲ್ಲದೇ ಹೊರತು ಅದೇ ಒಂದು ನಾಡಿನ ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದನ್ನು ನಂಬಲಿಕ್ಕಾಗದು. ಹಾಗಿದ್ದಿದ್ದರೆ ಬರೀ ಇಂಥದ್ದೇ ಸಿನಿಮಾಗಳನ್ನು ತೆಗೆದು ಕನ್ನಡನಾಡಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿಬಿಡುವ ಕಾಂಟ್ರಾಕ್ಟನ್ನು ಚಿತ್ರರಂಗಕ್ಕೆ ಕೊಟ್ಟುಬಿಡಬಹುದಿತ್ತು!

ಡಬ್ಬಿಂಗ್ ಪರರು ಕನ್ನಡ ದೂಶಿಸುವವರೆನ್ನುವ ಆರೋಪ!

ಇದುವರೆಗೆ ದಿನದಿಂದ ದಿನಕ್ಕೆ ಡಬ್ಬಿಂಗ್ ಬಂದರೆ ಬೀದಿಗೆ ಬೀಳುತ್ತಾರೆನ್ನುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನೀವು ಗಮನಿಸಿರಬಹುದು! ಮೊದಲೆಲ್ಲಾ ನಾಲ್ಕೈದು ಸಾವಿರ ಎನ್ನುತ್ತಿದ್ದವರು ಇದೀಗ ಎಪ್ಪತ್ತೈದು ಸಾವಿರದವರೆಗೆ ತಂದು ನಿಲ್ಲಿಸಿದ್ದಾರೆ! ಇನ್ನೇನು ಲಕ್ಷದ ಗಡಿ ಮುಟ್ಟೋ ತವಕದಲ್ಲಿದ್ದಾರೆ. ಇರಲಿ! ವಾಸ್ತವವಾಗಿ ಇವರ ಮಾತುಗಳನ್ನು ಕೇಳಿದರೆ ಡಬ್ಬಿಂಗ್ ಬರುವುದರಿಂದ ಇನ್ಮುಂದೆ ಕನ್ನಡದಲ್ಲಿ ಚಿತ್ರೋದ್ಯಮದ ಚಟುವಟಿಕೆಗಳೆಲ್ಲಾ ಸಂಪೂರ್ಣವಾಗಿ ನಿಂತುಹೋಗೇ ಬಿಡುತ್ತದೆನ್ನುವ ಅನಿಸಿಕೆ ಹರಿಯ ಬಿಡುತ್ತಿದ್ದಾರೆ ಎನ್ನಿಸಿಬಿಡುತ್ತದೆ! ಹೌದಾ? ಕನ್ನಡ ಚಿತ್ರರಂಗ ಮತ್ತು ದೂರದರ್ಶನಗಳಲ್ಲಿ ಮೂಲಚಿತ್ರ ತೆಗೆಯುವವರು ಮಾಯವಾಗಿಬಿಡುತ್ತಾರೆ ಎನ್ನುವ ಅನಿಸಿಕೆ ಸರಿಯೇ? ಜಗತ್ತಿನ ಯಾವುದೇ ಭಾಗವಾದರೂ ಭಾಷೆ ಅನ್ನ ಉದ್ಯೋಗ ಸಂಸ್ಕೃತಿಗಳು ಆರೋಗ್ಯದಿಂದರಬೇಕು ಎಂದು ಹೇಳಿ ಡಬ್ಬಿಂಗ್ ಬಂದರೆ ಇವೆಲ್ಲಾ ನಾಶವಾಗುತ್ತದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಇದೂ ಕೂಡಾ ಜನರಲ್ಲಿ ಭೀತಿ ಹುಟ್ಟಿಸಿ ಬೆಂಬಲ ಗಿಟ್ಟಿಸಿಕೊಳ್ಳುವ ತಂತ್ರವಾಗೇ ಜನಕ್ಕೆ ಕಂಡರೆ ಅಚ್ಚರಿಯೇನಿಲ್ಲಾ! ನಿಜವಾಗಿಯೂ ಕನ್ನಡ ಚಿತ್ರರಂಗ/ ದೃಶ್ಯ ಮಾಧ್ಯಮ ಡಬ್ಬಿಂಗನ್ನು ತಮ್ಮ ವೈಫಲ್ಯಕ್ಕೆ ನೆಪವಾಗಿಸಿಕೊಳ್ಳದೆ, ಸವಾಲಾಗಿ ಪರಿಗಣಿಸಿ ಉತ್ತಮ ಕಾರ್ಯಕ್ರಮಗಳನ್ನು ನೀಡಲಿ ಎನ್ನುವ ಅನಿಸಿಕೆಯನ್ನು ತಿರುಚಿ "ಡಬ್ಬಿಂಗ್ ಪರರು ಕನ್ನಡ ಕಾರ್ಯಕ್ರಮ ಕಳಪೆ ಎನ್ನುತ್ತಾರೆ" ಎಂದು ದೂಶಿಸುತ್ತಿದ್ದಾರೇನೋ ಎನ್ನಿಸುತ್ತದೆ.

ಜನರ ಬೇಕು ಬೇಡ ಇಲ್ಲಿ ಲೆಕ್ಕಕ್ಕೇ ಇಲ್ಲವೇ?

ಇಷ್ಟೆಲ್ಲಾ ವಾದಿಸುವ ಮಂದಿ, ಪ್ರಜಾಪ್ರಭುತ್ವದ ಪರವಾದಿಗಳು ಎನ್ನುವ ಮಂದಿ... ನಿಜಕ್ಕೂ ಸ್ವಲ್ಪ ತಾಳ್ಮೆಯಿಂದ ಯೋಚಿಸಿದರೆ ನಿಜವಾಗಲೂ ಜನರ ಆಯ್ಕೆ ಸ್ವಾತಂತ್ರವನ್ನು ತಾವು ಕಿತ್ತುಕೊಳ್ಳುವುದರ ಪರವಾಗಿ ಮಾತಾಡುತ್ತಿದ್ದೇವೆ ಎನ್ನುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಇಡೀ ಒಂದು ಜನಾಂಗದ ಆಯ್ಕೆ ಸ್ವಾತಂತ್ರವನ್ನು ತಮ್ಮ ನಯಗಾರಿಕೆಯ ಮಾತುಗಳಿಂದ ಕಿತ್ತುಕೊಳ್ಳುತ್ತಿರುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಡಬ್ಬಿಂಗಿನಿಂದಾಗಿ ಯಾವ ಭಾಷೆ, ಯಾವ ಸಂಸ್ಕೃತಿ ನಾಶವಾಗಿದೆ ಎನ್ನುವುದನ್ನು ಜನರು ಕಂಡುಕೊಳ್ಳಬಲ್ಲರು ಎನ್ನುವುದನ್ನು ಗಮನಿಸಿಕೊಳ್ಳಬಹುದಾಗಿದೆ. ಯಾವುದನ್ನು ಇಡೀ ಜನರು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ತೀರ್ಮಾನಿಸಬೇಕಾಗಿದೆಯೋ ಅದನ್ನು ನಿಶೇಧದ ಮೂಲಕ, ಯಾವುದಾದರೂ ದಾರಿಯ ಮೂಲಕ ತಡೆಯುವುದು ಮತ್ತು ತಡೆಯುವುದನ್ನು ಉತ್ತೇಜಿಸುವುದು, ಸಮರ್ಥಿಸುವುದು ಹೆಚ್ಚು ಕಾಲ ನಡೆಯದು ಮತ್ತು ಜನರ ಹಕ್ಕುಗಳನ್ನು ಸದಾಕಾಲ ದಮನ ಮಾಡುವುದು ಅಸಾಧ್ಯ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ!!

5 ಅನಿಸಿಕೆಗಳು:

Harsha G S ಅಂತಾರೆ...

cinema rangadavarige Kannada bhashe ondu marata vaasthu, ivarige bhasha gyana illa mathu samskruthi gyana anthu ilave illa..

Anand SR Yadwad ಅಂತಾರೆ...

ಇವರ ದ್ವಂದ್ವ ಅರ್ಥವಾಗುತ್ತಿಲ್ಲ. ಸಾಹಿತ್ಯ ಕ್ಷೇತ್ರಕ್ಕೆ ಒಂದು ನೀತಿ, ಸಿನಿಮಾ ರಂಗಕ್ಕೆ ಒಂದು ನೀತಿ. ಅನುವಾದ ಸಾಹಿತ್ಯವನ್ನು ಇವರು ಯಾಕೆ ವಿರೋಧಿಸುತ್ತಿಲ್ಲ?

Anonymous ಅಂತಾರೆ...

ಡಿಸ್ಕವರಿ ಕಾರ್ಯಕ್ರಮಗಳು, ಪೋಗೋ ಇತ್ಯಾದಿ ಮಕ್ಕಳ ಕಾರ್ಯಕ್ರಮಗಳು, ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ಡಬ್ಬಿ೦ಗ್ ಆಗಬೇಕು. ಆದರೆ ಡಬ್ಬಿ೦ಗ್ ಗೆ ಅವಕಾಶ ಕೊಟ್ಟ ತಕ್ಷಣ ಬರೀ ಹಿ೦ದಿ ತಮಿಳ್, ತೆಲುಗು ಚಿತ್ರಗಳು, ಧಾರವಾಹಿಗಳು ಆಮದಾಗುವುದನ್ನು ತಡೆಯುವುದು ಹೇಗೆ? ನಮಗೆ ಬೇಕಾದ್ದು ನಡೆಯದೇ ಧನ ಪಿಶಾಚಿ ಟೀವಿ ಪ್ರೋಡ್ಯೂಸರ್ ಗಳ ಮನೆ ಮ೦ದಿಯ ಮೇಲೆ ಸವಾರಿ ಮಾಡುವುದು ಖಚಿತ.

ನಾನು ಡಬ್ಬಿ೦ಗ್ ವಿರೋಧಿ ಅಲ್ಲ ಆದರೆ ನನ್ನ ಪ್ರಶ್ನೆಗೆ ಕಾನೂನು ವ್ಯಾಪ್ತಿಯಲ್ಲಿ ಹೇಗೆ ಉತ್ತರ ಕ೦ಡುಕೊಳ್ಳಬಹುದು?

ಗಿರೀಶ್ ಕಾರ್ಗದ್ದೆ ಅಂತಾರೆ...

Girish Kargadde ಡಬ್ಬಿಂಗ್ ಬಗೆಗಿನ ಊಹಾಪೋಹಗಳ ನಡುವೆ ಕಳೆದು ಹೋಗದಿರಲಿ ಈ ದಿಟಗಳು:ಡಬ್ಬಿಂಗ್ ಬಗೆಗಿನ ಊಹಾಪೋಹ ಬಿಡಿಸಿ ನೋಡುವ ಪ್ರಯತ್ನವನ್ನು ಮಾಡುತ್ತಾ ಡಬ್ಬಿಂಗಿನಿಂದ ಕೆಡುಕಿಗಿಂತ ಒಳಿತೇ ಹೆಚ್ಚು ಎಂಬುದನ್ನು ಈ ಬರಹದಲ್ಲಿ ತೋರಿಸಿಕೊಡಲಾಗಿದೆ http://girishkargadde.blogspot.in/2012/12/1.html

Aravind M.S ಅಂತಾರೆ...

ಡಬ್ಬಿಂಗ್ ಮಾಡುವಂಥಾ ಒಳ್ಳೆಯ ಚಿತ್ರಗಳು ಬೇರೆ ಭಾಷೆ ಚಿತ್ರದಲ್ಲಿರೋದೂ ಅಷ್ಟರಲ್ಲೇ ಇದೆ. ಎಲ್ಲಾವೂ ಹಾಡು ಕುಣಿತ ಮಚ್ಚು ಭರಿತವಾದೋವೆ. ಇನ್ನೂ ಅಲ್ಲಿರುವ ನೋಡಬಹುದಾದಂಥ ಚಿತ್ರಗಳು ಅಂತ ಏನಾದ್ರೂ ಇದ್ರೆ ಅವು ಹಾಲಿವುಡ್ ಸಿನಿಮಾಗಳನ್ನೇ ಡಬ್ ಮಾಡಿದಂಥಾದ್ದು.ಅದನ್ನ ನಾವು ಇಂಗ್ಲಿಷಿನಿಂದಲೇ ಡಬ್ ಮಾಡಬಹುದಲ್ಲ !

ಆದ್ದರಿಂದ ನಮ್ಮ ನೆರೆಯವರಿಂದ ಡಬ್ ಆಗೋ ಸಂಭವನೇ ಕಡಿಮೆ ! ಚಿಂತೆ ಅಗತ್ಯ ಇಲ್ಲ ಅನ್ನಿಸುತ್ತದೆ.

ನಾಗತಿಹಳ್ಳಿಯವರ ಕಾಳಜಿ ಇರೋದೂ ಇದರಲ್ಲೇನೇ ಅನ್ಸತ್ತೆ - ಸುಮ್ಮನೆ ಡಬ್ ಮಾಡೋದು ಒಂದು ಚಾಳಿನೇ ಆಗಬಹುದೋ ಏನೋ ಅಂತ ಇರಬಹುದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails