ವಿಧಾನಸಭಾ ಸ್ಪೀಕರ್ ಲೋಕಸಭಾ ಸ್ಪೀಕರ್ ಅಧೀನವೇ?


ಇವತ್ತಿನ ದಿವಸ ಒಂದು ವಿಚಿತ್ರ ಎನ್ನಿಸೋ ಘಟನೆ ನಮ್ಮ ನಾಡಲ್ಲಿ ನಡೆಯಿತು. ಭಾರತೀಯ ಜನತಾ ಪಕ್ಷದ ಕೆಲವು ಶಾಸಕರು ರಾಜೀನಾಮೆಯನ್ನು ಸಲ್ಲಿಸಿದ್ದನ್ನು ಸ್ವೀಕರಿಸಿದ ಸ್ಪೀಕರ್ ಶ್ರೀ ಬೋಪಯ್ಯನವರು ಈ ವಿಷಯವಾಗಿ ಲೋಕಸಭೆಯ ಸ್ಪೀಕರ್ ಆದ ಗೌರವಾನ್ವಿತರಾದ ಶ್ರೀಮತಿ ಮೀರಾಕುಮಾರ್ ಅವರಿಗೆ ಪತ್ರ ಕಳಿಸಿ ಅವರ ಉತ್ತರಕ್ಕಾಗಿ ಕಾದಿರುವುದಾಗಿ ತಿಳಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದನ್ನು ನೋಡಿದರೆ ಮಹಾರಾಣಿಯೆದುರು ಮಂಡಿಯೂರಿ ಆದೇಶಕ್ಕೆ ಕಾದ ಸಾಮಂತರಾಜರ ನೆನಪಾಗುತ್ತದೆ!! 

ಸಾಮಂತ ದೊರೆಯೇ ಸ್ಪೀಕರ್?!

ಇದೊಳ್ಳೇ ಕಥೆಯಾಯ್ತಲ್ಲಾ ಗುರೂ! ಭಾರತೀಯ ಸಂವಿಧಾನವೇ ಸರಿಯಾದ ಒಕ್ಕೂಟ ವ್ಯವಸ್ಥೆಯತ್ತ ಸಾಗಬೇಕಾಗಿದೆ ಎಂದು ಜನ ಮಾತಾಡುತ್ತಿದ್ದಾಗ, ರಾಜಕೀಯ ಪಕ್ಷಗಳು ನಿಧಾನವಾಗಾದರೋ ದನಿ ಎತ್ತುತ್ತಿರುವಾಗ... ಈ ಆಶಯಕ್ಕೆ ವಿರುದ್ಧವಾಗಿ ಸಾಮಂತರಂತೆ ನಮ್ಮ ಸ್ಪೀಕರ್ ಯಾಕೆ ನಡೆದುಕೊಳ್ಳುತ್ತಿದ್ದಾರೆ ಎನ್ನಿಸುತ್ತಿದೆ. ರಾಜ್ಯಸಭೆಯಾಗಲೀ, ಲೋಕಸಭೆಯಾಗಲೀ, ವಿಧಾನಸಭೆಯಾಗಲೀ... ಈ ಸಭಾಧ್ಯಕ್ಷ ಸ್ಥಾನ ಎನ್ನುವುದು ಒಂದು ಲೆಕ್ಕದಲ್ಲಿ ಸ್ವತಂತ್ರ್ಯಪೂರ್ಣ ಗೌರವದ ಹುದ್ದೆ! ಇದರಲ್ಲಿ ಕುಳಿತವರ ಹೊಣೆಗಾರಿಕೆಗಳು ಮತ್ತು ಇದಕ್ಕಿರುವ ಗೌರವಗಳು ಅಪಾರ. ಇಂಥಾ ಹುದ್ದೆಯಲ್ಲಿ ಕುಳಿತ ವ್ಯಕ್ತಿಗೆ ಸಂವಿಧಾನವೇ ಅರ್ಥವಾದಂತಿಲ್ಲ! ರಾಜ್ಯದ ಯಾವುದೋ ಶಾಸಕ ರಾಜಿನಾಮೆ ನೀಡಿದರೆ ಲೋಕಸಭೆಯ ಸ್ಪೀಕರ್ ಏನು ಮಾಡಲಾಗದು ಎನ್ನುವ ಪರಿಜ್ಞಾನವೇ ಇಲ್ಲದವರಂತೆ ಲೋಕಸಭೆಯ ಸ್ಪೀಕರ್‌ಗೆ ಇವರು ಪತ್ರ ಕಳಿಸಿರುವುದು ನಿಜಕ್ಕೂ ಅಚ್ಚರಿಯ ವಿಷಾದ!! ಗೌರವಾನ್ವಿತ ಸ್ಪೀಕರ್ ಅವರಿಗೆ ತಮ್ಮ ಸ್ಥಾನದ ವ್ಯಾಪ್ತಿ, ಶಕ್ತಿ, ಗೌರವಗಳ ಬಗ್ಗೆ ಅರಿವೇ ಇಲ್ಲದಂತೆ ಇದು ಕಾಣುತ್ತಿದೆ. ಇವರು ದೆಹಲಿ ಸಾಮಂತರಂತೆ ನಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಿಸುತ್ತದೆ. ಬಹುಶಃ ರಾಷ್ಟೀಯ ಪಕ್ಷಗಳ ವ್ಯವಸ್ಥೆಯಲ್ಲಿ ಬಹಳ ಕೇಳಿಬರುವ, ಆ ಪಕ್ಷದ ಎಲ್ಲರನ್ನೂ ಹಿಡಿತದಲ್ಲಿಟ್ಟುಕೊಂಡು ಹೇಳಿದಂತೆ ಕೇಳಿಸಿಕೊಳ್ಳುವ ಪದ "ದೆಹಲಿ ಹೈಕಮಾಂಡ್" ಎನ್ನುವುದು. ಶ್ರೀಯುತರ ಅರಿವಿನಲ್ಲಿ ರಾಜ್ಯಗಳು ದೆಹಲಿಯ ಅಧೀನ, ರಾಜ್ಯಸರ್ಕಾರಗಳು ಕೇಂದ್ರಸರ್ಕಾರದ ಅಧೀನ, ಶಾಸಕರು ಸಂಸದರ ಅಧೀನ ಮತ್ತು ವಿಧಾನಸಭೆಯ ಸ್ಪೀಕರ್ ಲೋಕಸಭೆಯ ಅಧೀನ ಎಂದಿರಬೇಕು!! ಒಟ್ಟಲ್ಲಿ ಇವತ್ತಿನ ಪ್ರಹಸನ ನಮ್ಮ ರಾಜಕಾರಣಿಗಳು, ರಾಜಕೀಯ ಪಕ್ಷಗಳು "ದೆಹಲಿ" "ಹೈಕಮಾಂಡ್" "ಗುಲಾಮಗಿರಿ" ಇವುಗಳಿಗೆ ಒಗ್ಗಿಹೋಗಿವೆಯೇನೋ ಎನ್ನುವ ಅನುಮಾನಕ್ಕೆ ಕಾರಣವಾಗಿದೆ!

2 ಅನಿಸಿಕೆಗಳು:

ಸಂವಿಧಾನಾಸ್ತ್ರ ಅಂತಾರೆ...

ಇದೊಂದು'ಬಾರತೀಯ'ಜನತಾ ಪಕುಶದ ನಾಟಕ.

ಸ್ಪೀಕರ್ ಇದೆಲ್ಲ ಸುಮ್ಮನೆ ಕಾಲಹರಣಕ್ಕೆ ಮಾಡ್ತಾ ಇರೋದು.

ಕರ್ನಾಟಕದ್ದೇ ಜನತಾ ಪಕ್ಸ ಅದೇನ್ ಕಿಸಿಯುತ್ತೋ ನೋಡುಮ!

cmariejoseph.blogspot.com ಅಂತಾರೆ...

ಈ ಸುದ್ದಿಯ ಒನ್ ಇಂಡಿಯಾ ತರ್ಜುಮೆಯನ್ನು ನೋಡಿ ನೀವು ಈ ಲೇಖನ ಸಿದ್ಧಪಡಿಸಿದ್ದೀರಿ. ಹಾಗೆಯೇ ನೀವೊಮ್ಮೆ ಈ ಕುರಿತ ಪ್ರಜಾವಾಣಿಯ ಇಂದಿನ ಸುದ್ದಿಯನ್ನೂ ನೋಡಬೇಕಿತ್ತು. ರಾಜೀನಾಮೆ ಪ್ರಹಸನ ಕುರಿತಂತೆ ಬೋಪಯ್ಯನವರಿಗೆ ಸುಪ್ರೀಂ ಕೋರ್ಟು ಒಮ್ಮೆ ಮಂಗಳಾರತಿ ಎತ್ತಿದ್ದಾಗಿದೆ. ಮತ್ತೊಮ್ಮ ಹಾಗಾಗುವುದು ಬೇಡವೆಂದು ಇವರು ಲೋಕಸಭೆಯ ಸ್ಪೀಕರ್ ಸಚಿವಾಲಯದ ಅಭಿಪ್ರಾಯ ಕೇಳಿದ್ದಾರೆ. ಮತ್ತೊಂದು ರಾಜ್ಯದ ಸ್ಪೀಕರನ್ನು ಕೇಳುವುದಕ್ಕಿಂತ ಇದು ಸಮಂಜಸವಾಗಿದೆ. ನೀವು ಯಾವುದಕ್ಕೂ ಈ http://www.prajavani.net/article/%E0%B2%B8%E0%B3%8D%E0%B2%AA%E0%B3%80%E0%B2%95%E0%B2%B0%E0%B3%8D%E2%80%8C%E0%B2%97%E0%B3%86-%E0%B2%B2%E0%B3%8B%E0%B2%95%E0%B2%B8%E0%B2%AD%E0%B3%86-%E0%B2%B8%E0%B2%9A%E0%B2%BF%E0%B2%B5%E0%B2%BE%E0%B2%B2%E0%B2%AF%E0%B2%A6-%E0%B2%B9%E0%B2%BF%E0%B2%A4%E0%B2%A8%E0%B3%81%E0%B2%A1%E0%B2%BF ಓದಿರಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails