ಕನ್ನಡಿಗರಿಗೆ ಕಹಿಯಾದ ಆರ್‌ಬಿಐ ನ ಬಿಟ್ಟಿ ಸಲಹೆ ಮತ್ತು ಕಾಫಿ ಡೇ ಕಾಫಿ!


ಇತ್ತೀಚಿಗೆ ನಡೆದ ಎರಡು ಘಟನೆಗಳು ನಾಡಿನಲ್ಲಿ ಕನ್ನಡದ ಸ್ಥಾನಮಾನಕ್ಕೆ ಮತ್ತು ಈ ದೇಶದ ವ್ಯವಸ್ಥೆಗಳಿಗೆ ಕನ್ನಡಿಗರ ಬಗ್ಗೆ ಇರುವ ಉದಾಸೀನತೆಗೆ ಉದಾಹರಣೆಯಾಗಿವೆ.

ಕೆಫೆ ಕಾಫಿಡೇನಲ್ಲಿ ಕನ್ನಡ ಹಾಡು ಕೇಳುವಂತಿಲ್ಲ!

ಕೆಲವು ಕನ್ನಡಿಗರು ಇತ್ತೀಚಿಗೆ ಕೆಫ಼ೆ ಕಾಫಿಡೇ ಎನ್ನುವ ಸರಣಿಯಂಗಡಿಯ ಒಂದು ಮಳಿಗೆಗೆ ಹೋಗಿದ್ದರಂತೆ. ಅದೂ   ಅರಸೀಕೆರೆಯ ಒಂದು ಅಂಗಡಿಗೆ. ಅಲ್ಲಿಗೆ ಬಂದ ಗಿರಾಕಿಗಳನ್ನು ಮನರಂಜಿಸುವ ಉದ್ದೇಶದಿಂದ ಹಾಡುಗಳನ್ನು ಹಾಕಿದ್ದರಂತೆ. ಆ ಹಾಡುಗಳು ಹಿಂದೀ ಹಾಡುಗಳಾಗಿದ್ದವಂತೆ. ಸರಿ.. ಈ ಗ್ರಾಹಕರು ಕನ್ನಡ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡದ್ದಕ್ಕೆ ಮಳಿಗೆಯವರು ಹಾಗೆ ಹಾಕಲು ತಮಗೆ ಕೇಂದ್ರ ಕಚೇರಿಯಿಂದ ಅನುಮತಿಯಿಲ್ಲ ಎಂದು ಮಾರುತ್ತರ ನೀಡಿದರಂತೆ. ಇದರಿಂದ ಆಘಾತಗೊಂಡ ಇವರು ತಮ್ಮ ಅನುಭವವನ್ನು ಏನು ಗುರುವಿನೊಂದಿಗೆ ಹಂಚಿಕೊಂಡರು. ನಂತರ ಕಾಫಿ ಡೇ ಸಂಸ್ಥೆಗೆ ಕನ್ನಡದ ಹಾಡುಗಳನ್ನು ಹಾಕಲು ಕೇಳಿಕೊಂಡು ಪತ್ರ ಬರೆದಿದ್ದಾರೆ. ಇವರಷ್ಟೇ ಅಲ್ಲದೇ ಇವರೊಂದಿಗೆ ದನಿಗೂಡಿಸಿ ನೂರಾರು ಮಂದಿ ಕೆಫೆ ಕಾಫಿಡೇ ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕೆಫಿ ಕಾಫಿ ಡೇ ಸಂಸ್ಥೆಯ ಅಧಿಕಾರಿಗಳು ನೀಡಿರುವ ಉತ್ತರ ದಂಗು ಬಡಿಸುವಂತಿದೆ.

ನಮ್ಮ ಸಂಸ್ಥೆಯು ಭಾರತದಲ್ಲಿ ನಾನಾ ಕಡೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲೆಡೆ ಒಂದೇ ರೀತಿಯ ಒಳಾಂಗಣ ವಾತಾವರಣವನ್ನು ರೂಪಿಸಿಕೊಂಡಿದ್ದು, ಭಾರತದ ಎಲ್ಲಾ ೧೨೦ ಊರುಗಳಲ್ಲಿಯೂ ಹಿಂದೀ ಮತ್ತು ಇಂಗ್ಲೀಶ್ ಸಂಗೀತವನ್ನು ಮಾತ್ರಾ ಹಾಕುತ್ತೇವೆ ಮತ್ತು ಪ್ರಾದೇಶಿಕ ಭಾಷೆಗಳ ಸಂಗೀತವನ್ನು ಹಾಕುವುದಿಲ್ಲ..
ಎಂದು ಉತ್ತರಿಸಿದ್ದಾರೆ.

ಚೆಕ್ಕುಗಳನ್ನು ತುಂಬಲು ಹಿಂದೀ/ ಇಂಗ್ಲೀಶ್ ಪ್ರವೀಣರಾಗಬೇಕಂತೆ!

ಸಿಟಿಬ್ಯಾಂಕಿನಲ್ಲಿ ಹಿಂದೀ ಮತ್ತು ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಅಚ್ಚು ಹಾಕಿರುವುದರ ಬಗ್ಗೆ ಗ್ರಾಹಕರೊಬ್ಬರು ದೂರಿ, ಕನ್ನಡದಲ್ಲೂ ಚೆಕ್ಕುಗಳನ್ನು ಅಚ್ಚು ಹಾಕಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಬ್ಯಾಂಕಿನ ಅಧಿಕಾರಿಗಳು ಹೀಗೆ ಉತ್ತರ ನೀಡಿದ್ದಾರೆ.
ನಮಗೆ ರಿಜರ್ವ್ ಬ್ಯಾಂಕಿನಿಂದ ಬಂದಿರುವ ಜುಲೈ ೨೦೧೧ರ ಸೂಚನೆಯಂತೆ ಹಿಂದೀ/ ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಮುದ್ರಿಸಿದ್ದೇವೆ.
ಸರಿ, ಮತ್ತೊಬ್ಬ ಗ್ರಾಹಕರು ಭಾರತೀಯ ರಿಜರ್ವ್ ಬ್ಯಾಂಕಿಗೇ ಬರೆದು ಕೇಳಿದಾಗ ಅವರು ನೀಡಿದ ಉತ್ತರ ಹೀಗಿದೆ:

Key fields in a cheque are Name and Amount for which proficiency in English/ Hindi is required whereas for other fields such as date and account number which are numerical the same is not required The format of a cheque with payee’s name and amount is standard. Hence it is felt no need to print cheques in a trilingual format, unlike other printed material.
ಇದೇ ವಿಷಯವಾಗಿ ರಿಜರ್ವ್ ಬ್ಯಾಂಕಿನ ಒಂಬುಡ್ಸ್‍ಮೆನ್ ಅವರಿಗೆ ದೂರು ಸಲ್ಲಿಸಿದಾಗ ದೂರನ್ನು ತಿರಸ್ಕರಿಸಿ, ಬೇಕಾದರೆ ಯಾವುದಾದರೂ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಉತ್ತರಿಸಿದ್ದಾರೆ.

ಸಮಸ್ಯೆಯ ಮೂಲವಿರುವುದು ಸಂವಿಧಾನದಲ್ಲಿ

ಭಾರತದಲ್ಲಿ ಕನ್ನಡಿಗರು ಇರೋದು ಬರೀ ೫%. ಅಂದರೆ ಇಲ್ಲಿ ಭಾಷಿಕ ಅಲ್ಪಸಂಖ್ಯಾತರು. ಹಾಗಾಗಿ ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕಿಲ್ಲಾ ಎಂದು ಭಾರತದ ವ್ಯವಸ್ಥೆಗಳು ತೀರ್ಮಾನಿಸಿರುವಂತಿದೆ. ಇಲ್ಲಿ ಪ್ರಜಾಪ್ರಭುತ್ವ ಎಂದರೆ "ಬಹುಸಂಖ್ಯಾತರ ಹಿತ ಮಾತ್ರಾ" ಎನ್ನುವುದೇ ಆಗಿರುವುದನ್ನು ಇದು ಎತ್ತಿ ತೋರಿಸುತ್ತಿದೆ. ಇದಕ್ಕೆಲ್ಲಾ ಮೂಲಕಾರಣವೇ ಭಾರತದ ಹುಳುಕಿನ ಭಾಷಾನೀತಿ. ಈ ದೇಶದಲ್ಲಿ ಹಿಂದೀ/ ಇಂಗ್ಲೀಶ್ ಮಾತ್ರವೇ ಆಡಳಿತ ಭಾಷೆಗಳು. ರಾಜ್ಯಗಳಿಗೆ ತಮ್ಮ ಆಯ್ಕೆಯ ಭಾಷೆಯನ್ನು ರಾಜ್ಯದ ಆಡಳಿತ ಭಾಷೆ ಮಾಡಿಕೊಳ್ಳಬಹುದಾದ ಹಕ್ಕನ್ನು... ಪಾಪಾ... ಘನ ಭಾರತ ಸರ್ಕಾರ ಕರುಣೆಯಿಂದ ಬಿಟ್ಟು ಕೊಟ್ಟಿದೆ. ಇಂಥಾ ಹೊಲಸು ವ್ಯವಸ್ಥೆ ಬದಲಾಗದೇ ಹೋದರೆ ನಿಧಾನವಾಗಿ ಕನ್ನಡ ಕೆಲಸಕ್ಕೆ ಬಾರದ ಭಾಷೆಯಾಗಿಬಿಡಲಿದೆ ಅಷ್ಟೇ! ಕರ್ನಾಟಕ ಸರ್ಕಾರವೂ ಸೇರಿದಂತೆ ಎಲ್ಲಾ ರಾಜ್ಯಗಳ ಸಂಸದರೂ, ರಾಜ್ಯಸರ್ಕಾರಗಳೂ ಈ ನಿಟ್ಟಿನಲ್ಲಿ ದನಿಯೆತ್ತಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಭಾರತದ ಎಲ್ಲಾ ರಾಜ್ಯ ಭಾಷೆಗಳಿಗೂ ಆಡಳಿತ ಸ್ಥಾನ ಕೊಡಬೇಕೆಂದು ಒತ್ತಡ ತರಬೇಕಾಗಿದೆ. ಇದನ್ನೆಲ್ಲಾ ಕಂಡಾಗ ಕಡೇಪಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರವೆನ್ನುವ ಹಲ್ಲಿಲ್ಲದ ಹಾವು ಒಂಚೂರು ಭುಸುಗುಟ್ಟಾದರೂ ಭುಸುಗುಟ್ಟಬಾರದೇ ಎಂದನ್ನಿಸಿದರೆ ಅಚ್ಚರಿಯೇನಿಲ್ಲಾ ಗುರೂ!

ಕೊನೆಹನಿ: ಕೆಫೆ ಕಾಫಿ ಡೇ ಎನ್ನುವ ಕನ್ನಡಿಗರದ್ದೇ ಸಂಸ್ಥೆ ಕರ್ನಾಟಕದಲ್ಲೇ ಕನ್ನಡದಲ್ಲಿ ಹಾಡು ಹಾಕಲು ನಿರಾಕರಿಸುತ್ತಿದೆ. ಆದರೆ ಇದೇ ಸಂಸ್ಥೆ ಜ಼ೆಕೋಸ್ಲೋವಿಯಾದಲ್ಲಿ ಕೂಡಾ ಸರಣಿಮಳಿಗೆಗಳನ್ನು ಇತ್ತೀಚಿಗೆ ತೆರೆದು ನಡೆಸುತ್ತಿದೆ. ಅಲ್ಲಿ ಯಾವ ಭಾಷೆಯಲ್ಲಿ ಇದು ಸೇವೆ ನೀಡುತ್ತಿದೆ ಎನ್ನುವುದು ಕುತೂಹಲದ ವಿಷಯ. ಏಕೆಂದರೆ ಆ ದೇಶದ ಜನಸಂಖ್ಯೆ ನಮ್ಮ ಬೆಂಗಳೂರಿನಷ್ಟು ಮಾತ್ರಾ! ಅಂದರೆ ಬರೀ ಒಂದು ಕೋಟಿ ಜನರಿರುವ ದೇಶ ಅದು. ಇನ್ನು ಭಾರತದ ಅನೇಕ ಬ್ಯಾಂಕುಗಳು ಶ್ರೀಲಂಕಾದಂತಹ ದೇಶಗಳಲ್ಲಿ ಯಾವ ಭಾಷೆಯಲ್ಲಿ ಚೆಕ್ಕುಗಳನ್ನು ಅಚ್ಚು ಹಾಕಿಸುತ್ತವೆ ಎನ್ನುವುದು ಕುತೂಹಲದ ವಿಷಯವಾಗಿದೆ. ಕೆಲ ಲಕ್ಷಗಳಷ್ಟು ಜನಸಂಖ್ಯೆಯ ನಾಡುಗಳಲ್ಲಿ ಆಯಾ ಭಾಷೆಗಳಲ್ಲಿ ಸೇವೆ ನೀಡುವ ಇವುಗಳು, ಆರುಕೋಟಿ ಕನ್ನಡಿಗರಿಗಾಗಿ ಕನ್ನಡದಲ್ಲಿ ಗ್ರಾಹಕಸೇವೆಯನ್ನು ಕೊಡಲು ಯಾಕೆ ಹಿಂಜರಿಯುತ್ತವೆ ಎನ್ನುವುದು ಕಾಡುತ್ತಿಲ್ವಾ ಗುರೂ!?

2 ಅನಿಸಿಕೆಗಳು:

Anonymous ಅಂತಾರೆ...

Then stop visiting Cafe-coffee day and having an account in Citibank.

Don't you get coffee and bank services in other places?

Unknown ಅಂತಾರೆ...

ನಮಸ್ಕಾರ.
ನೀವು ಇಲ್ಲಿ ವಿಚಾರ ಮಾಡಿರುವ ವಿಷಯ ಬರಿ ಕೆಫೆ ಕಾಫಿ ಡೇಗೆ ಮಾತ್ರ ಸೀಮಿತವಾಗಿಲ್ಲ. ನಾನು ನಾಲ್ಕು ವರ್ಷ ಕೆಲಸದ ಕಾರಣ ಹೈದರಾಬಾದಿನಲ್ಲಿ ಇದ್ದೆ. ಅಲ್ಲಿಯ ಜನ ತಮ್ಮ ಭಾಷಬಿಮಾನ ಎಂದಿಗೂ ಬಿಟ್ಟಿಕೊಡುವುದಿಲ್ಲ. ಜೊತೆಗೆ ಅತಿ ಹೆಚ್ಚೆಗಿನ ಜನ ಸಂಖ್ಯೆ ಇರುವ ತಮಿಳರ ಬಗ್ಗೆ ಹೇಳುವುದೇ ಬೇಕಗಿಲ್ಲ. ನಮ್ಮಲ್ಲಿ ಅದು ಒಂದು ಹಾಸ್ಯವೇ ಆಗಿತ್ತು. ಅವರಿಗೆ ಬರಿ 'ಅಪ್ಪಡಿಯಾ' ಅಂತ ಕೇಳಿಸಿದರೆ ಸಾಕು, ಪೂರ್ತಿ ಚೆಡ್ಡಿ ದೋಸ್ತ್ಗಳಹಾಗೆ ಆಡುತ್ತರೆ.
ಸಮಸ್ಯೆ ಇರುವುದು ನಮ್ಮಲ್ಲೆ. ನಾವು ನಮ್ಮ ಭಾಷೆಯವರನ್ನು ನೋಡಿದರೆ ಎಷ್ಟು ಸಾರಿ ನಮಸ್ಕಾರ ಎಂದು ಸಂಭೋದಿಸುತ್ತೇವೆ? ಬರಿ ಹಾಯ್, ಹಲೋ ಎಂದು ಶುರು ಮಾಡುತ್ತೆವೆ. ಬದಲಾವಣೆ ನಮ್ಮಿದಲೇ ಶುರುವಗಬೆಕು. ಭಾಷೆಯ ಬಗ್ಗೆ ಅಭಿಮಾನ ಇರಬೆಕು. ಇದು ಕರ್ನಾಟಕ ಬಿಟ್ಟು ದೂರ ಹೋಗಿ ತಿಂಗಳುಗಟ್ಟಲೆ ಕನ್ನಡ ಮಾತನಡಲು ಸಿಗುವುದಿಲ್ಲವಲ್ಲ ಆವಾಗ ತಿಳಿಯುತ್ತದೆ. ಜೋತೆಗಿನವರು ಆಂಗ್ಲ, ಹಿಂದಿ ಬಿಟ್ಟು ಬಾರೆ ತಮ್ಮ ಭಾಷೆಯಲ್ಲಿ ಮಾತನಾಡಿದಾಗ ಮೈ ಹುರಿಯುತ್ತದೆ. ಅದಕ್ಕಾಗಿ ಬದಲಾವಣೆ ನಮ್ಮಿಂದಲೇ ಶುರುವಗಲಿ. ಮುಂದಿನ ಬಾರಿ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗ ಮೊದಲು ನಮಸ್ಕಾರ ಹೇಳಿ. ಬ್ಯಾಂಕು, ಕಛೇರಿಗಳಿಗೆ ಹೋದಾಗ ಕನ್ನಡದಲ್ಲಿ ಸಂಭೋದಿಸಿ. ನಿಮ್ಮ ಸ್ನೇಹಿತರು ರಸ್ತೆಯಲ್ಲಿ ಸಿಕ್ಕಾಗ 'ಹೇಯ್, ಲಾಂಗ್ ಟೈಮ್ ನೋ ಸೀ' ಬಿಟ್ಟು, ಏನ್ ಗುರು, ಕಾಫಿ ಆಯ್ತಾ? ಎಂದು ಕೇಳಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails