ಡಬ್ಬಿಂಗ್ ಬೇಡ ಎನ್ನಲು ಈ ಪರಿ ಪೊಳ್ಳುವಾದ ಬೇಕೇ?

"ದೃಶ್ಯ ಮಾಧ್ಯಮದ ಡಬ್ಬಿಂಗ್ ಕನ್ನಡಕ್ಕೆ ಮಾರಕವೋ ಪೂರಕವೋ" ಎಂಬ ಕಾರ್ಯಕ್ರಮ ನಡೆದ ಬಗ್ಗೆ ಏನ್‌ಗುರುವಿನಲ್ಲಿ ಬರೆದಿದ್ದೆವು. ಅದರಲ್ಲಿ ಡಬ್ಬಿಂಗ್ ವಿರೋಧಿಸಿ ಅಭಿಪ್ರಾಯ ಮಂಡಿಸಿದ್ದ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕವರೇಣ್ಯರು ಆಡಿದ ಮಾತುಗಳ ಬಗ್ಗೆ ಮಾತಾಡಿದ್ದೆವು. ನಿನ್ನೆಯ ದಿನದ (೦೭.೦೧.೨೦೧೩ರ) ಕನ್ನಡಪ್ರಭದಲ್ಲಿ ಇದೇ ಕಾರ್ಯಕ್ರಮದ ವರದಿಯಲ್ಲಿ ಮತ್ತಷ್ಟು ಕುತೂಹಲಕಾರಿ ವಿಷಯಗಳಿರುವುದನ್ನು ನಾವು ಗಮನಿಸಬಹುದಾಗಿದೆ!

ಅಪ್ಪಣೆ ಕೊಡೋ ದೊಣೆನಾಯಕರು!

ಹೌದೂ... ಚಿತ್ರರಂಗದ ಈ ದೊಣೇನಾಯಕರಿಗೆ ಪೋಗೋ, ಚಿಂಟು, ಡಿಸ್ಕವರಿ, ಅನಿಮಲ್ ಪ್ಲಾನೆಟ್ ಮೊದಲಾದ ವಾಹಿನಿಗಳು ಮತ್ತು ಅನಿಮೇಶನ್ ಆಧಾರಿತ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಡಬ್ ಮಾಡುವುದಕ್ಕೆ ಅಡ್ಡಿಯಿಲ್ಲವಂತೆ! ಆದರೆ ಚಿತ್ರಗಳನ್ನು ಡಬ್ ಮಾಡುವುದಕ್ಕೆ ಮಾತ್ರಾ ಆಕ್ಷೇಪವಂತೆ!! ಇಷ್ಟಕ್ಕೂ ಡಬ್ಬಿಂಗ್ ಬೇಕು ಎನ್ನುವವರು ಪೋಸ್ಟ್‌ಸಿಂಕ್ರನೈಸಿಂಗ್ ಉಪಕರಣಗಳನ್ನು ನೀಡುವಂತೆ ಥಿಯೇಟರ್‌ನವರನ್ನು ಒತ್ತಾಯಿಸಬೇಕಂತೆ! ಅಂದರೆ ಜನರು ಇಂಥದ್ದನ್ನು ನೋಡಬೇಕು, ಇಂಥದ್ದನ್ನು ನೋಡಬಾರದು, ಇಂಥದ್ದನ್ನು ಕೇಳಬೇಕು, ಇಂಥದ್ದನ್ನು ಕೇಳಬಾರದು ಎಂದು ತೀರ್ಮಾನಿಸುವ ಅಧಿಕಾರವನ್ನು ಇವರಿಗೆ ಅದ್ಯಾರು ಕೊಟ್ಟರೋ ಏನೋ? ಹಿಂದೀ ಸಂಭಾಷಣೆಯು ಕನ್ನಡಕ್ಕೆ ಡಬ್ ಆದಾಗ ತುಟಿ ಚಲನೆ ಹೊಂದುವುದಿಲ್ಲಾ ಎನ್ನುವ ಇವರುಗಳು "ತುಟಿಚಲನೆ ಸರಿ ಇಲ್ಲದಿರುವುದು ಜನರಿಗೆ ಒಪ್ಪಿಗೆಯಾಗದಿದ್ದಲ್ಲಿ ಅಂತಹ ಸಿನಿಮಾಗಳನ್ನು ಒಪ್ಪುವ, ಒಪ್ಪದಿರುವ ಹಕ್ಕನ್ನು ಹೊಂದಿರುತ್ತಾರೆ" ಎನ್ನುವುದನ್ನು ಅದ್ಯಾಕೆ ಮರೆಮಾಚುತ್ತಾರೋ ಗೊತ್ತಿಲ್ಲಾ! ಇಷ್ಟಕ್ಕೂ ಕನ್ನಡ ಸಿನಿಮಾಗಳಲ್ಲಿ ನಟಿಸುವ ಕನ್ನಡಬಾರದ ನಟನಟಿಯರು ಶೂಟಿಂಗ್ ನಡೆಸುವಾಗ ಹೇಗೆ ಸಂಭಾಷಣೆ ಹೇಳುತ್ತಾರೆ ಎನ್ನುವುದನ್ನು ಇವರುಗಳೇ ಹೇಳಲಿ! (ಈ ಪರಭಾಷಾ ನಟರುಗಳು ಎ.ಬಿ.ಸಿ.ಡಿ.... ಅಂತಾನೋ ಮತ್ತೇನೋ ಹೇಳುತ್ತಾ ಶೂಟಿಂಗ್ ಮಾಡಿದ ಉದಾಹರಣೆಗಳೂ ಇವೆಯಂತೆ!). ಯಾಕೆ ಇವರುಗಳು ಹೀಗೆ ಜನರ ಪರವಾಗಿ ತೀರ್ಮಾನ ತೆಗೆದುಕೊಳ್ಳುತ್ತಾ ದೊಣೇನಾಯಕರಾಗುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ!

ವಾದ ಮಾಡಲು ಸುಳ್ಳು ಮಾಹಿತಿ!

ಇನ್ನು ಡಬ್ಬಿಂಗ್ ಬೇಡ ಎನ್ನಲು "ಇಡೀ ಕನ್ನಡ ಭಾಷೆ, ನುಡಿ ಹಾಗೂ ಜನಾಂಗಗಳೇ ಅಪಾಯದಲ್ಲಿವೆ, ಡಬ್ಬಿಂಗ್ ಭೂತ ಬಂದರೆ ಇವೆಲ್ಲಾ ಸರ್ವನಾಶವಾಗುತ್ತದೆ" ಎಂದು ನಾಡನ್ನು ನಂಬಿಸಲು ಅನೇಕ ಅಂಕಿಅಂಶಗಳನ್ನು ನೀಡಲು ಪ್ರಯತ್ನಿಸಿದ್ದಾರೆ. ಈ ಮಾಹಿತಿಗಳಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂದು ನೋಡಬೇಕಾಗಿದೆ. ಕರ್ನಾಟಕದ ಒಟ್ಟು ಜನಸಂಖ್ಯೆ ೨೦೧೧ರ ಜನಗಣತಿಯಂತೆ ಸುಮಾರು ಆರು ಕೋಟಿ ಹನ್ನೊಂದು ಲಕ್ಷದಷ್ಟಿದೆ. ೨೦೦೧ರ ಭಾಷಿಕ ಜನಾಂಗದ ಮಾಹಿತಿಯಂತೆ ಕರ್ನಾಟಕದಲ್ಲಿ ಕನ್ನಡಿಗರ ಒಟ್ಟು ಪ್ರಮಾಣ ನೂರಕ್ಕೆ ೬೬ರಷ್ಟು. ಇದು ಬರೀ ಕನ್ನಡವನ್ನು ತಾಯ್ನುಡಿಯಾಗಿ ಹೊಂದಿರುವವರ ಸಂಖ್ಯೆ! ಇನ್ನು ತುಳು, ಕೊಡವ, ತೆಲುಗು, ತಮಿಳು, ಉರ್ದು ಮೊದಲಾದವುಗಳನ್ನು ತಾಯ್ನುಡಿಯೆಂದು ಜನಗಣತಿಯಲ್ಲಿ ಬರೆಸಿದ ಅದೆಷ್ಟೋ ಲಕ್ಷ ಕನ್ನಡಿಗರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಕರ್ನಾಟಕದಲ್ಲಿ ಇಂದು ಕನ್ನಡಿಗರ ಸಂಖ್ಯೆ ನೂರಕ್ಕೆ ೮೫ಕ್ಕಿಂತ ಹೆಚ್ಚಿದೆ ಅನ್ನಿಸೋಲ್ವಾ ಗುರೂ! ಹೋಗಲಿ ದಾಖಲಾತಿಗಳಂತೆ ನೋಡಿದರೂ ಕನ್ನಡಿಗರ ಸಂಖ್ಯೆ ನೂರಕ್ಕೆ ೭೦ರಷ್ಟಿದೆ. ಇಷ್ಟಕ್ಕೂ ಯಾವ ಹತ್ತೊಂಬತ್ತು ಜಿಲ್ಲೆಗಳಲ್ಲಿ ಪರಭಾಷಿಕರು ಬಹುಸಂಖ್ಯಾತರು ಎನ್ನುವುದನ್ನು ಇವರು ತಿಳಿಸಬಲ್ಲರೇ? ಯಾವ ಅಂಕಿಅಂಶದ ಆಧಾರದ ಮೇಲೆ ಇವರು ಹೇಳುತ್ತಿದ್ದಾರೆ? ನಿಜಕ್ಕೂ ಈ ಸುದ್ದಿಯ ಮಾಹಿತಿ ಮೂಲದ ಬಗ್ಗೆ ಕುತೂಹಲ ಉಂಟಾಗುತ್ತದೆ!!

ಇವರು ಹೇಳಿದ್ದೇ ನಿಜವಾದರೆ...

ಇವರು ಹೇಳಿದ್ದು ನಿಜವೆಂದೇ ಒಪ್ಪುವುದಾದರೆ ಕರ್ನಾಟಕದಲ್ಲಿ ಡಬ್ಬಿಂಗ್ ಬರುವುದರಿಂದ ಏನಾಗುತ್ತದೆ? ಪರಭಾಷಿಕರು ಕೂಡಾ ಕನ್ನಡದಲ್ಲಿ ನೋಡ್ತಾರೆ ಎನ್ನುವುದನ್ನು ಇವರಂತೂ ಒಪ್ಪುವುದಿಲ್ಲಾ! ಆದರೆ ಕಡೇಪಕ್ಷ ಕನ್ನಡಿಗರು ಪರಭಾಷೆಯನ್ನು ಕಲಿಯಬೇಕಾದ ಅನಿವಾರ್ಯತೆಯನ್ನು ಡಬ್ಬಿಂಗ್ ತಪ್ಪಿಸುವುದಿಲ್ಲವೇ? ನೀವುಗಳು "ಕನ್ನಡಿಗರು ಬೇರೆ ಭಾಷೆ ಕಲಿಯೋದನ್ನು  ತಪ್ಪಿಸುತ್ತಿದ್ದೀರಿ" ಎಂದು ಸುಲಭವಾಗಿ ಈ ಜನ ಆರೋಪಿಸುತ್ತಾರೆ. ಆದರೆ ಇಲ್ಲಿ ಯಾರು ತಾನೇ ಬೇರೆ ಭಾಷೆ ಕಲಿಯಬೇಡಿ ಎನ್ನುತ್ತಿದ್ದಾರೆ? ಒಂದೊಳ್ಳೆ ಬೇರೆ ಭಾಷೆಯ ಸಿನಿಮಾ ನೋಡಿ ಅರ್ಥಮಾಡಿಕೊಳ್ಳಬೇಕೆಂದರೆ ಪರಭಾಷೆ ಕಲಿಯಲೇಬೇಕೆನ್ನುವ ಅನಿವಾರ್ಯತೆಯನ್ನು ಹುಟ್ಟುಹಾಕಿರುವುದು ಯಾರು? ಇದಕ್ಕೆ ಕಾರಣ ಕನ್ನಡದಲ್ಲಿ ಡಬ್ಬಿಂಗ್ ಇಲ್ಲದಿರುವುದೇ ಅಲ್ಲವೇ? ಇವರಂದದ್ದು ನಿಜವೇ ಆಗಿದ್ದಲ್ಲಿ, ತಮ್ಮದೇ ನೆಲದಲ್ಲಿ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಕನ್ನಡ ಉಳಿಸಿಕೊಳ್ಳಲು ಡಬ್ಬಿಂಗ್ ಪೂರಕವೇ ಅಲ್ಲವೇ? ಇಲ್ಲಾ ಕನ್ನಡಿಗರು ಡಬ್ಬಿಂಗ್ ನೋಡಲ್ಲಾ ಅನ್ನೋದಾದರೆ ಅದನ್ನು ತೀರ್ಮಾನಿಸಬೇಕಿರೋದು ಯಾರು? ಜನರು ಮಾರುಕಟ್ಟೆಯಲ್ಲಿ ಡಬ್ ಆದ ಸಿನಿಮಾಗಳನ್ನು ನೋಡಿ ಗೆಲ್ಲಿಸುವ ಮೂಲಕ ಅಥವಾ ನೋಡದೆ ಸೋಲಿಸುವ ಮೂಲಕ ತೀರ್ಮಾನಿಸಬೇಕಲ್ಲವೇ? ಒಟ್ಟಾರೆ ಡಬ್ಬಿಂಗ್ ಬೇಡವೆನ್ನುವ ಇವರ ವಾದ ಪೊಳ್ಳೋ, ಗಟ್ಟಿಯೋ ಎನ್ನುವುದನ್ನು ಜನರು ಅರಿಯಲಾರರೇ?!

4 ಅನಿಸಿಕೆಗಳು:

ಲಾಜಿಕ ಅಂತಾರೆ...

ಒಳ್ಳೇದು ಬಿಡಿ.

ಕನ್ನಡ ಸಿನಿಮ ನೋಡೋದು ಬಿಡೋಣ. ಕನ್ನಡ ಪುಸ್ತಕ ಓದೋಣ.

Unknown ಅಂತಾರೆ...

ಅಲ್ಲ ರೀ ಡಬ್ಬಿಂಗ್ ಬೇಡ ಬೇಡ ಅಂತಾನೆ ನಮ್ಮ ಕನ್ನಡ ಹೀಗೆ ತನ್ನ ಕನ್ನಡತನ ಕಳೆದು ಕೊಂಡಿದೆ...
ಬರಿ ೭೫ ಸಾವಿರ ಜನ ಕೆಲಸ ಕಳೆದು ಕೊಳ್ಳುತ್ತಾರೆ ಎಂದು ತಿಳಿದಿರುವುದು ಮುರ್ಕತನ... ಡಬ್ಬಿಂಗ್ ಜೊತೆಗೆ ನಮ್ಮ ಚಿತ್ರಗಳು ಬಂದರೆ ಅದು ಇಲ್ಲ ಇದು ಎಂದು ಹೇಗೋ ಕನ್ನಡ ಚಿತ್ರಗಳು ಬೆಳಕಿಗೆ ಬರುತ್ತದೆ... ನಮ್ಮ ಕನ್ನಡಿಗರು ಈಗಾಗಲೇ ಬೇರೆ ಭಾಷೆಯ ಚಿತ್ರಗಳತ್ತ ಮುಖ ಮಾಡಿದ್ದರೆ... ನಮ್ಮ ಕನ್ನಡಿಗರು ಒಂದು ಚಿತ್ರವನ್ನ ಬೇರೆಬಾಷೆಯಲ್ಲಿ ಚಿತ್ರ ನೋಡಿ ಮತ್ತೆ ಕನ್ನಡದಲ್ಲಿ ಹೇಗೆ ನೋಡುತ್ತಾರೆ... ಬೇರೆ ಬಾಷೆಯವರು ಬೇರೆ ಬಾಷೆಯಲ್ಲಿ ಚಿತ್ರಗಳನ್ನ ರಿಲೀಸ್ ಮಾಡುವ ಬದಲಿಗೆ ಕನ್ನಡಕ್ಕೆ ಅನುವಾದ ಮಾಡಿ ರಿಲೀಸ್ ಮಾಡಿದರೆ ಒಳ್ಳೆಯದು... ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕನ್ನಡಿಗರ ಸಂಖ್ಯೆ ಜೊತೆಗೆ ಕನ್ನಡ ಮಾತನ್ನಾಡುವ ಕನ್ನಡಿಗರು ಕಡಿಮೆ ಆಗುವುದರಲ್ಲಿ ಸಂದೇಹವೇ ಇಲ್ಲ... ಇನ್ನಾದರೂ ಬೇರೆ ಭಾಷೆ ಚಿತ್ರಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶ ಮಾಡಿ ಕೊಡಿ... ಇಲ್ಲವಾದರೆ ಕನ್ನಡವನ್ನು ಮರೆತು ಬಿಡಿ...

ಇಂತಿ ನಿಮ್ಮ ಕನ್ನಡಿಗ
ಮಧು
೯೩೪೨೮೪೬೭೩೮
9342846738

sukauni ಅಂತಾರೆ...

namage dubbing beku kanri

michael ಅಂತಾರೆ...

ಇತರ ಭಾಷೆಗಳಿಗಿರದ ನಿರ್ಭಂಧ ಕನ್ನಡಕ್ಕೆ ಮಾತ್ರ ಏಕೆ? ಯಾವುದೇ ಒಂದು ಚಿತ್ರ/ವಿಷಯ ತನ್ನ ತಾಯ್ನುಡಿಯಲ್ಲಿ ಅರ್ತೈಸುವಷ್ಟು ಬೇರಾವುದೇ ಭಾಷೆಯಲ್ಲಿ ಅರ್ಥೈಸಲಾಗದು. ಇದು ದಬ್ಬಾಳಿಕೆಯಲ್ಲದೆ ಮತ್ತೇನಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails