(ಫೋಟೋ ಕೃಪೆ: ಉದಯವಾಣಿ ಈ ಪತ್ರಿಕೆ) |
"ಹಿಂದೀ ಭಾರತದ ರಾಷ್ಟ್ರಭಾಷೆ, ಇದು ರಾಷ್ಟ್ರೀಯ ಭಾವನಾತ್ಮಕ ಭಾಷೆ, ದೇಶದ ಸಂಸ್ಕೃತಿಯ ಹಿರಿಮೆ ಮತ್ತು ಸಾಮಾಜಿಕ ಬಾಂಧವ್ಯ ಉಳಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ" ಎಂದೆಲ್ಲಾ ಸುಳ್ಳಾಡಿಯಾದರೂ ಸರಿ ಹಿಂದೀಯನ್ನು ಹರಡಬೇಕೆನ್ನೋ ಹಂತಕ್ಕೆ ಭಾರತದ ಕೇಂದ್ರಸರ್ಕಾರದ ಅಧಿಕಾರಿಗಳು ತಲುಪಿದ್ದಾರೆಂಬ ಅನುಮಾನಕ್ಕೆ ಕಾರಣವಾಗುವಂತೆ... ಮಂಗಳೂರಿನಲ್ಲಿ ಟೋಲಿಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಆಶ್ರಯದಲ್ಲಿ ನಡೆದ ೨೦೧೩ರ ಹಿಂದೀ ದಿವಸ್ ಕಾರ್ಯಕ್ರಮದಲ್ಲಿ ಶ್ರೀ ಅಮರ್‌ಲಾಲ್ ದೌಲ್ತಾನಿ ಎಂಬ ಕಾರ್ಪೋರೇಶನ್ ಬ್ಯಾಂಕಿನ ದೊಡ್ಡ ಅಧಿಕಾರಿಯೊಬ್ಬರು ಮಾತಾಡಿದ್ದಾರೆ.
ಸುಳ್ಳಿನ ಸರಮಾಲೆ!
ಹೀಗೆ ಹಿಂದೀ ದಿವಸ್ ಎನ್ನುವ ಆಚರಣೆಗೂ, ಬ್ಯಾಂಕುಗಳೆಂಬ ಹಣಕಾಸು ವಹಿವಾಟಿನ
ಉದ್ದೇಶದ ಸಂಸ್ಥೆಗಳಿಗೂ ಏನು ಸಂಬಂಧವೆನ್ನುವ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಬ್ಯಾಂಕುಗಳು
ರಾಷ್ಟ್ರೀಕರಣವಾದ ಮೇಲೆ ಅವು ಕೇಂದ್ರಸರ್ಕಾರಿ ಉದ್ದಿಮೆಗಳಾದ ನಂತರ, ಅಲ್ಲಿಯೂ ಭಾರತದ
ಭಾಷಾನೀತಿಯನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತದೆ, ರಾಜ್‌ಭಾಷಾ ಇಲಾಖೆ. ಅಂತೆಯೇ
ನಿಮ್ಮ ಗ್ರಾಹಕರನ್ನು ಹಿಂದೀಯಲ್ಲಿ ವ್ಯವಹರಿಸಲು ಉತ್ತೇಜಿಸಿ ಎನ್ನುತ್ತಾ ಹಿಂದೀ ಪ್ರಚಾರ ಮಾಡುವ
ಬ್ಯಾಂಕಿಗೆ ಪ್ರಶಸ್ತಿಯನ್ನು ಕೊಡುತ್ತದೆ. ಹೀಗೆಲ್ಲಾ ಮಾಡೋದಕ್ಕೆ ಮುಖ್ಯ ಕಾರಣ ಭಾರತೀಯರೆಲ್ಲಾ, ಅವರು ಯಾವುದೇ ಭಾಷೆಯವರಾದರೂ ಒಂದಲ್ಲಾ ಒಂದು ದಿವಸ, ಯಾವುದಾದರೂ ಬ್ಯಾಂಕಿಗೆ, ಯಾವುದಾದರೂ ಕೆಲಸಕ್ಕೆ ಬರಲೇಬೇಕು. ಆಗಾದರೂ ಅವರಿಗೆ ಹಿಂದೀಯನ್ನು ಕಲಿಸೋಣ ಎನ್ನುವ ದೂರದ ದುರಾಲೋಚನೆಯೇ ಎನ್ನಿಸುತ್ತದೆ. ಇಲ್ಲದಿದ್ದರೆ
ಎಲ್ಲಾ ಬ್ಯಾಂಕುಗಳಲ್ಲಿ ದಿನಕ್ಕೊಂದು ಪದ ಎಂದು, ಒಂದು ಹಿಂದೀ ಪದವನ್ನು ಕಲಿಸುವಂತೆ ಬೋರ್ಡಿನ
ಮೇಲೆ ಬರೆದು ಎಲ್ಲರಿಗೂ ಕಾಣುವಂತೆ ಹಾಕುವುದಾದರೂ ಏಕೆ? ಒಟ್ಟಲ್ಲಿ ಹೀಗೆ ಜನರ
ಅನಿವಾರ್ಯತೆಯನ್ನು ತನ್ನ ಹಿಂದೀ ಹೇರಿಕೆಯ ಉದ್ದೇಶಕ್ಕೆ ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿರುವ
ಭಾರತ ಸರ್ಕಾರದವರು ನಾಳೆ ಮಸಣದಲ್ಲಿ ಸಂಸ್ಕಾರ ಮಾಡುವ ಅರ್ಜಿಯನ್ನು ಹಿಂದೀಯಲ್ಲೇ ತುಂಬಬೇಕು ಎಂದು
ಮಾಡಿದರೂ ಮಾಡಬಹುದು. ಏಕೆಂದರೆ ಹುಟ್ಟಿದವರೆಲ್ಲಾ ಸಾಯಲೇಬೇಕು. ಅವರ ಹೆಣಕ್ಕೆ ಸಂಸ್ಕಾರವಾಗಲೇ
ಬೇಕಲ್ಲವೇ!? ಆಗ ಎಲ್ಲಾ ಭಾರತೀಯರಿಗೂ ಹಿಂದೀ ಕಲಿಸಿಬಿಡಬಹುದಲ್ಲಾ!?
ಒಟ್ಟಾರೆಯಾಗಿ ಭಾರತದ ಹುಳುಕಿನ ತಾರತಮ್ಯದ ಈ ಭಾಷಾನೀತಿ ಬದಲಾಗಬೇಕೆಂದು
ಬಯಸುವವರು ಇನ್ನಾದರೂ ದನಿ ಎತ್ತಬೇಕಾಗಿದೆ. ನೀವೂ ನಮ್ಮೊಡನೆ ದನಿಗೂಡಿಸುವುದಿದ್ದಲ್ಲಿ
ಸಮಾನತೆಯ ಭಾಷಾನೀತಿಯನ್ನು ಒತ್ತಾಯಿಸುವ ಈ ಪಿಟಿಷನ್ನಿಗೆ ಸಹಿ ಮಾಡಿರಿ! ಹಿಂದೀ ಹೇರಿಕೆಯ
ವಿರುದ್ಧ ದನಿ ಎತ್ತಿರಿ!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!