ರೈಲ್ವೇ ಉದ್ಧಟತನಕ್ಕೆ ಭಾರತದ ಹುಳುಕಿನ ಭಾಷಾನೀತಿಯೇ ಕಾರಣ!


ನೈರುತ್ಯ ರೈಲ್ವೇ ವಲಯದ ಕೇಂದ್ರಕಚೇರಿ ಇರೋದು ನಮ್ಮ ಹುಬ್ಬಳ್ಳಿಯಲ್ಲಿ... ಈ ವಲಯದ ಹರವು ಇಡೀ ಕರ್ನಾಟಕದ ಎಲ್ಲಾ ರೈಲುಮಾರ್ಗಗಳನ್ನು ಒಳಗೊಳ್ಳುತ್ತದೆ. ಈ ಹಿಂದೆ ಕೇಂದ್ರ ರೈಲ್ವೆ ವಲಯದಲ್ಲಿದ್ದ ಹುಬ್ಬಳ್ಳಿ, ದಕ್ಷಿಣ ವಲಯದಲ್ಲಿದ್ದ ಬೆಂಗಳೂರು ಮತ್ತು ಮೈಸೂರುಗಳನ್ನು ಒಗ್ಗೂಡಿಸಿ ೨೦೦೩ರಲ್ಲಿ ಈ ನೈರುತ್ಯ ರೈಲ್ವೇ ವಲಯವನ್ನು ಹುಟ್ಟುಹಾಕಲಾಯಿತು. ಈ ವಲಯದಲ್ಲಿ ಇರುವ ಹೆಚ್ಚಿನ ಪ್ರದೇಶ ಕನ್ನಡನಾಡು. ಆದರೆ ಈ ವಿಭಾಗದಲ್ಲಿ ಕನ್ನಡದ ಬಳಕೆ ಇಲ್ಲವೇ ಇಲ್ಲಾ ಎನ್ನಬಹುದು. ರೈಲ್ವೇ ಟಿಕೆಟ್ಟುಗಳಲ್ಲಿ ಕನ್ನಡವೇ ಇರುವುದಿಲ್ಲಾ. ರೈಲ್ವೇ ಮುಂಗಡ ಕಾಯ್ದಿರುಸುವಿಕೆಯ ಪಟ್ಟಿಯನ್ನು ರೈಲಿನ ಬೋಗಿಗಳ ಮೇಲೆ ರೈಲು ಹೊರಡುವ ಅರ್ಧಗಂಟೆ ಮೊದಲು ಅಂಟಿಸುತ್ತಾರೆ. ಯಾವ ಬೋಗಿಯಲ್ಲಿ ನಮ್ಮ ಹೆಸರಿದೆ ಎಂದು ಹುಡುಕುವವರಿಗೆ ಕನ್ನಡವೊಂದೇ ಬರುತ್ತಿದ್ದರೆ ದೇವರೇ ಗತಿ. ಯಾಕೆಂದರೆ ಈ ಪಟ್ಟಿ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರಾ ಇರುತ್ತದೆ. ಇದು ರೈಲಿನ ಒಳಗಡೆಯಿರುವ ತುರ್ತು ನಿರ್ಗಮನದಲ್ಲೂ ಹಾಗೇ ಇರುತ್ತದೆ. ಯಾಕಪ್ಪಾ ಹೀಗೇ? ಕನ್ನಡದವರಿಗೆ ಕನ್ನಡದಲ್ಲಿ ಸೇವೆ ಯಾಕೆ ಕೊಡೋದಿಲ್ಲಾ ನೀವು? ಎಂದು ಗೆಳೆಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿರುವ  ಮಾಹಿತಿ ಕೋರಿಕೆ ಅರ್ಜಿಗೆ, ಇಲಾಖೆಯವರು ಕೊಟ್ಟಿರುವ ಉತ್ತರವನ್ನು ಇಲ್ಲಿ ನೋಡಿ:


ಯಾಕೆ ಕನ್ನಡದಲ್ಲಿ ಟಿಕೆಟ್ ಕೊಡಲಾಗದು ಎಂಬುದಕ್ಕೆ ನೈರುತ್ಯ ರೈಲ್ವೇ ಮಂದಿ ಹೇಳಿರುವುದು "ಕಾಯ್ದಿರಿಸದ ಚೀಟಿಗಳನ್ನು ಭಾರತದ ಯಾವುದೇ ನಿಲ್ದಾಣಕ್ಕೆ ಕೊಡಲಾಗುವುದರಿಂದ ಪ್ಯಾನ್ ಇಂಡಿಯನ್ ಭಾಷೆಗಳಾದ ಹಿಂದೀ/ ಇಂಗ್ಲೀಷುಗಳಲ್ಲಿ ಕೊಡಲಾಗುತ್ತದೆ" ಎಂದು. ಇದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರೈಲಿನಲ್ಲಿ ನೀವು ನಾಯಂಡಹಳ್ಳಿ ನಿಲ್ದಾಣದಲ್ಲಿ ರೈಲು ಹತ್ತಿ ಮಂಡ್ಯಕ್ಕೆ ಟಿಕೆಟ್ ಕೊಂಡುಕೊಂಡರೆ ಅದರಲ್ಲಿ ಕನ್ನಡದಲ್ಲಿ ಮಾಹಿತಿ ಕೊಡಲಾಗುವುದಿಲ್ಲಾ.. ಏಕೆಂದರೆ ನಾಯಂಡಹಳ್ಳಿಯಿಂದ ನೀವು ದೆಹಲಿಗೂ, ದಿಬ್ರೂಗಡಕ್ಕೂ, ಅಮೃತಸರಕ್ಕೂ, ಇಂದೂರಿಗೂ, ಕೊಲ್ಕತ್ತಾಗೂ ಕೂಡಾ ಟಿಕೆಟ್ ಕೊಳ್ಳಲು ಸಾಧ್ಯವಿದೆ... ಹಾಗಾಗಿ ಹಿಂದೀ/ ಇಂಗ್ಲೀಷಿನಲ್ಲಿ ಮಾತ್ರಾ ಟಿಕೆಟ್ ಕೊಡಲಾಗುತ್ತದೆ ಎಂದು. ಇದೊಂದು ಅವಿವೇಕದ ಪರಮಾವಧಿಯ ಸಮರ್ಥನೆ ಎನ್ನಿಸುವುದಿಲ್ಲವೇ?!

ಏನಿದು ಪ್ಯಾನ್ ಎಂದರೆ? ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಪ್ಯಾನ್ ಎಂದರೆ "ಸಂಪೂರ್ಣ, ಒಟ್ಟಾರೆ, ಎಲ್ಲವನ್ನೂ ಒಳಗೊಂಡ" ಎಂದು ಅರ್ಥ. ಇಲ್ಲಿ ಹಿಂದೀ/ ಇಂಗ್ಲೀಷು ಅದು ಹೇಗೆ ಎಲ್ಲಾ ಭಾರತೀಯರ ನುಡಿಯಾಗಿದೆ? ಸರಿಯಾದ ಏರ್ಪಾಡಿನಲ್ಲಿ ಕರ್ನಾಟಕದಿಂದ ಹೊರಡುವ ಎಲ್ಲಾ ರೈಲುಗಳಲ್ಲಿ ಟಿಕೆಟ್ಟು ಮತ್ತು ಸೂಚನೆಗಳು ಕನ್ನಡದಲ್ಲಿ ಇರಬೇಕಿತ್ತು. ರೈಲ್ವೇ ಹೇಳುತ್ತಿರುವ ನೆಪವಾದ ಭಾರತದ ಯಾವ ರೈಲ್ವೇ ನಿಲ್ದಾಣಕ್ಕೆ ಬೇಕಾದರೂ ಟಿಕೆಟ್ ಕೊಡಬೇಕಿದ್ದರೆ ಆ ನಿಲ್ದಾಣವಿರುವ ರಾಜ್ಯದ ನುಡಿ ಮತ್ತು ನಡುವಿನ ಅಧಿಕಾರಿಗಳ ಅನುಕೂಲಕ್ಕಾಗಿ ಇಂಗ್ಲೀಷಿನಲ್ಲಿ ಮಾಹಿತಿ ಇರಬೇಕಿತ್ತು. ಇದು ಸರಿಯಾದ ತ್ರಿಭಾಷಾಸೂತ್ರವಾದೀತು!

ನೈರುತ್ಯ ರೈಲ್ವೇ ಇಲಾಖೆಯವರು ಇದೀಗ ನೀಡಿರುವ ಉತ್ತರ ಕೈಲಾಗದವರು ನೀಡುವ ನೂರೆಂಟು ನೆಪದ ಹಾಗೆ ಕಾಣುತ್ತಿದೆ. ಇಂಥಾ ಉದ್ಧಟತನದ ಉತ್ತರಕ್ಕೆ ಕಾರಣವೇ ಭಾರತದ ಹುಳುಕಿನ ಭಾಷಾನೀತಿಯಾಗಿದೆ. ಸಂವಿಧಾನವೇ ಹಿಂದೀಯವರಿಗೆ "ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇಡಿಯಾಗಿ ನಿಮ್ಮದು, ಇದನ್ನು ನಿಮ್ಮನುಕೂಲಕ್ಕೆ ಬೇಕಾದಂತೆ ಆಳಿಕೊಳ್ಳಿ" ಎಂದು ಬರೆದುಕೊಟ್ಟಿರುವಂತೆ ರೂಪಿಸಲಾಗಿರುವ ಭಾಷಾನೀತಿಯ ಕಾರಣದಿಂದಲೇ ರೈಲ್ವೇಯವರಿಗೆ ಇಂಥಹ ಉದ್ಧಟತನದ ಉತ್ತರ ನೀಡಲು ಆಗುತ್ತಿರುವುದು. ಈ ನೀತಿ ಬದಲಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ ಹಿಂದೀಯೇತರ ಜನಗಳ ಮೇಲಿನ ಈ ದೌರ್ಜನ್ಯ ಹೀಗೇ ಮುಂದುವರೆಯುತ್ತದೆ. ಸಮಾನತೆಯ ಕೂಗಿಗೆ ನಿಮ್ಮ ದನಿಗೂಡಿಸಲು "ಭಾರತದ ಭಾಷಾನೀತಿ ಬದಲಾಗಬೇಕು" ಎನ್ನುವ ಈ ಪಿಟಿಷನ್ನಿಗೆ ಸಹಿ ಮಾಡಿರಿ.

2 ಅನಿಸಿಕೆಗಳು:

Avinash Kannammanavar ಅಂತಾರೆ...

ಇಂತಹ ಪ್ರಖರಣಗಳನ್ನ ಸೇರಿಸಿ ನೀವೇಕೆ ಕೋರ್ಟ್ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗುಜರಾಯಿಸಬಾರದು? ನಮ್ಮ ವಾದಕ್ಕೆ ಬಲವಾದ ಬೆಂಬಲಕ್ಕೆ ನಾವು "ರಸಗೊಬ್ಬರ" ಪಾಕೆಟ್ ಗಳಲ್ಲಿ ಇರುವ ವಿಷದ ಪ್ರಮಾಣ ಹಾಗು "ಹೇಗೆ ಉಪಯೋಗಿಸಿ" ವಿವರಣೆಗಳು ಕನ್ನಡದಲ್ಲಿ ಇರುವುದಿಲ್ಲವಾದ್ದರಿಂದ ಆಗುವ ಅನಾಹುತಗಳು (ನಮ್ಮ ಔಷದಿಗಳ ಮೇಲೆ ಕನ್ನದದಲ್ಲಿರದ ವಿವರಣೆಯನ್ನ ಸಹ ಉದಾಹರಣೆಯಾಗಿ ಉಪಯೋಗಿಸಿ ) . ಮತ್ತು ಹಿಂದಿ ಭಾಷೆ ಬರುವವರಿಗಷ್ಟೇ ಕೇಂದ್ರದ ಉದ್ಯೋಗಗಳು. ಇವೆಲ್ಲವೂ ಬಲವಾದ ಕಾರಣಗಳಾಗಿ ನಿಲ್ಲ ಬಹುದು ಅಲ್ಲವೇ ?

ಆನಂದ್ ಅಂತಾರೆ...

ಶ್ರೀ ಅವಿನಾಶ್ ಸಾರ್,
ನ್ಯಾಯಾಲಯಗಳು ತೀರ್ಪು ನೀಡುವುದು ಸಂವಿಧಾನವನ್ನು ಆಧರಿಸಿಯೇ! ಭಾರತ ಸಂವಿಧಾನದಲ್ಲಿ ಬರೆಯಲಾಗಿರುವುದನ್ನು ನ್ಯಾಯಾಲಯ ಎತ್ತಿ ಹಿಡಿಯಬಲ್ಲುದೇ ಹೊರತು ಮಾನವೀಯತೆ/ ಅಮಾನವೀಯತೆಯ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ! ಹಾಗಾಗಿ ಭಾರತ ಸಂವಿಧಾನದ ೩೪೩~೩೫೧ನೇ ವಿಧಿಯವರೆಗಿನ ಕಾಲಮ್ಮುಗಳಲ್ಲಿ ಹೇಳಿರುವುದಕ್ಕೆ ಆಧಾರವಾಗಿ ಕಾಯ್ದೆ ಕಾನೂನುಗಳು ರೂಪುಗೊಳ್ಳುತ್ತವೆ. ಅವುಗಳನ್ನು ಎತ್ತಿಹಿಡಿಯುವ ಕೆಲಸವನ್ನಷ್ಟೇ ನ್ಯಾಯಾಲಯ ಮಾಡುವುದು. ಆದರೆ ಕನ್ನಡದಲ್ಲಿ ಮಾಹಿತಿ ಕೊಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ಕಾಯ್ದೆ ಮಾಡಿದರೆ ಆಗ ಆ ಕಾಯ್ದೆಯ ರಕ್ಷಣೆಗೆ ನ್ಯಾಯಾಲಯದ ಮೊರೆ ಹೋಗಬಹುದು! ಉಳಿದಂತೆ ಈಗ ಹೋದರೆ ತಯಾರಕನಿಗೆ ತನ್ನಿಚ್ಛೆಯ ಭಾಷೆಯಲ್ಲಿ ಮುದ್ರಿಸುವ ಹಕ್ಕಿದೆ ಎನ್ನುತ್ತದೆ ಅಷ್ಟೇ!
ಅದಕ್ಕೆಂದೇ ನಾವು ಭಾರತದ ಹುಳುಕಿನ ಭಾಷಾನೀತಿ ಬದಲಾಗಬೇಕೆಂದು ಬಯಸುತ್ತಿರುವುದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails