ನಾಳೆ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಿಂದೊಂದು ಮೆರವಣಿಗೆ ಹೊರಡಲಿದೆ. ಇದು ಸ್ವಾತಂತ್ರ್ಯ ಉದ್ಯಾನದವರೆಗೂ ಸಾಗಲಿದ್ದು "ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ..." ಎಂಬ ಹಕ್ಕೊತ್ತಾಯವನ್ನು ಹೊತ್ತು ಸಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಏರ್ಪಡಿಸಿರುವ ಈ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದು ಕನ್ನಡಿಗರ ಬದುಕು ಹಸನುಗೊಳಿಸುವ ಸಲುವಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಹಕ್ಕೊತ್ತಾಯವಾಗಿದೆ.
ಈ ಹಕ್ಕೊತ್ತಾಯ ಅಸಹಜವೇನು?!
ನಮ್ಮ ನಾಡಲ್ಲಿರುವ ಸಂಪನ್ಮೂಲಗಳನ್ನು ಕಡಿಮೆ ಬೆಲೆಗೆ/ ಉಚಿತವಾಗಿ ಸರ್ಕಾರ ಕೊಡುವುದೇ ಇಲ್ಲಿನ ಜನರಿಗೆ ಕೆಲಸದ ಅವಕಾಶ ಸಿಗಬೇಕೆಂದು. ಆ ಮೂಲಕ ಜನರ ಬದುಕು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು. ಆದರೆ ಇಲ್ಲಿ ನಮ್ಮ ಜನ ಎಂದರೆ ಯಾರು ಎನ್ನುವುದರಲ್ಲೇ ಗೊಂದಲ ಹುಟ್ಟುಹಾಕಿದ ವ್ಯವಸ್ಥಿತ ಕ್ರಿಯೆ ನಡೆದಿದೆ. ಈ ಕಾರಣದಿಂದಾಗಿಯೇ ನಮ್ಮ ನಾಡಿಗೆ ಕೇಂದ್ರಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು ಬಂದಾಗ "ಓಹೋ ಆ ಸಂಸ್ಥೆ ಬಂತು... ಆಹಾ ಈ ಸಂಸ್ಥೆ ಬಂತು" ಎಂದು ಹಿಗ್ಗುವ ಹಾಗೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ! ಯಾಕೆಂದರೆ ಹೀಗೆ ಬರುವ ಉದ್ದಿಮೆಗಳು ಉದ್ದಿಮೆಯ ಜೊತೆಯಲ್ಲಿ ಸಾವಿರಾರು ಹೊರನಾಡಿನವರನ್ನು ನಮ್ಮ ನಾಡಿಗೆ ವಲಸೆ ಮಾಡಿಸಿದೆ. ನಮ್ಮ ಜನರ ಕೆಲಸದ ಅವಕಾಶಗಳನ್ನು ಕಳೆದು ಹಾಕುವುದರ ಜೊತೆಯಲ್ಲೇ ನಮ್ಮೂರಿನ ಜನಲಕ್ಷಣವನ್ನು ಇದು ಬದಲಿಸಿಹಾಕಿದೆ. ಭಾರತದ ಸಂವಿಧಾನದ ರೀತ್ಯಾ "ಕರ್ನಾಟಕದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು" ಎಂಬ ಈ ಹಕ್ಕೊತ್ತಾಯ ಅಸಂವಿಧಾನಿಕವಾದುದೂ, ರಾಷ್ಟ್ರೀಯವಾದಿಗಳ ರೀತ್ಯಾ ಇದು ಸಂಕುಚಿತ ಬುದ್ಧಿಯದ್ದೂ ಆಗಿ ಕಾಣಬಹುದು. ಆದರೆ ನ್ಯಾಯದ ದೃಷ್ಟಿಯಲ್ಲಿ ಅತ್ಯಂತ ಸಹಜವೂ, ಸರಿಯೂ ಆದುದಾಗಿದೆ. ಇಷ್ಟಕ್ಕೂ ನಮ್ಮೂರಿನ ಜನರಿಗೆ ಕೆಲಸ ಒದಗಿಸದ, ನಮ್ಮ ಜನರ ಬದುಕನ್ನು ಹಸನು ಮಾಡುವ ಉದ್ದೇಶವಿರದ ಯಾವುದೇ ಉದ್ದಿಮೆಯಾದರೂ ನಮ್ಮ ನಾಡಿಗೆ ಏಕೆ ಬೇಕು ಎಂಬುದು ಸರಳವಾದ ನೇರತರ್ಕವಾಗಿದೆ!
ಸರೋಜಿನಿ ಮಹಿಷಿ ವರದಿ ಮತ್ತು ಕೆಲಸದಲ್ಲಿ ಮೀಸಲು!
ಡಾ. ಸರೋಜಿನಿ ಮಹಿಷಿಯವರ ಮುಂದಾಳ್ತನದಲ್ಲಿ ಸ್ಥಳೀಯರಿಗೆ ಕೆಲಸದಲ್ಲಿ ಮೀಸಲಾತಿ ನೀಡುವ ಬಗ್ಗೆ ಒಂದು ಅಧ್ಯಯನ ನಡೆಸಿ ವರದಿಯನ್ನು ಕರ್ನಾಟಕ ರಾಜ್ಯಸರ್ಕಾರದ ವತಿಯಿಂದ ತರಿಸಿಕೊಳ್ಳಲಾಗಿತ್ತು. ವರದಿಯಲ್ಲಿ ಅಂದಿನ ಕಾಲಕ್ಕೆ ಹೊಂದುವಂತೆ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮೀಸಲು ಇರಬೇಕು ಎಂದೂ ಬರೆಯಲಾಗಿತ್ತು. ಈ ವರದಿ ಸಲ್ಲಿಕೆಯಾಗಿ ೨೮ ವರ್ಷಗಳೇ ಆದವು. ಇದುವರೆಗಿನ ಯಾವುದೇ ಸರ್ಕಾರಕ್ಕೂ ಈ ವರದಿಯನ್ನು ಜಾರಿಮಾಡಲು ಸಾಧ್ಯವಾಗಿಲ್ಲ. ಒಂದು ಜನಪರವಾದ ವರದಿಯನ್ನು ಇದುವರೆವಿಗೂ ಜಾರಿ ಮಾಡಲಾಗದಿರುವುದಕ್ಕೆ ರಾಜಕೀಯ ಇಚ್ಚಾಶಕ್ತಿ ಮತ್ತು ಚಾಣಾಕ್ಷತನದ ಕೊರತೆ ಕಾರಣವೆನ್ನದೇ ವಿಧಿಯಿಲ್ಲಾ! "ಕರ್ನಾಟಕ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲಿ" ಎನ್ನುವುದು ಸರಿಯಾದ ಹಕ್ಕೊತ್ತಾಯವೇ ಆಗಿದೆ. ಇಲ್ಲವೇ ಸರ್ಕಾರಕ್ಕೆ ಈ ವರದಿಯನ್ನು ಜಾರಿ ಮಾಡಲು ತಾಂತ್ರಿಕವಾದ ಅಡ್ಡಿಗಳಿದ್ದರೆ ವರದಿಯನ್ನು ತಿರಸ್ಕರಿಸಲಿ.. ಇನ್ನು ಈ ವರದಿ ಇಂದಿನ ದಿನಕ್ಕೆ ಹೊಂದುವಂತಿಲ್ಲಾ ಎನ್ನುವುದಾದರೆ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ ಸಂವಿಧಾನದ ರೀತಿಯೇ ಸ್ಥಳೀಯರಿಗೆ ಕೆಲಸ ಕೊಡಿಸಿಕೊಡಬಲ್ಲ ನೀತಿಗಳನ್ನು ರೂಪಿಸಲು ಬೇಕಾದ ಸಲಹೆಗಳನ್ನು ಪಡೆದುಕೊಳ್ಳಲಿ. ಒಟ್ಟಿನಲ್ಲಿ ಆದಷ್ಟು ಬೇಗನೆ ಸರಿಯಾದ ತೀರ್ಮಾನ ಕೈಗೊಳ್ಳಲಿ. ಈ ಆಶಯದೊಡನೆ ನಾಳೆ ನಡೆಯಲಿರುವ ಮೆರವಣಿಗೆ ಯಶಸ್ವಿಯಾಗಲಿ. ಯಾರ ಬಗ್ಗೆಯೇ ಆಗಲಿ ನಿಜವಾದ ಕಾಳಜಿಯಿದ್ದರೆ ಅಂಥವರ ಆರ್ಥಿಕ ಸಬಲತೆಗಾಗಿ ದುಡಿಯುವುದು ಸೂಕ್ತವಾಗುತ್ತದೆ. ನಾಳಿನ ಪ್ರತಿಭಟನಾ ಕಾರ್ಯಕ್ರಮ ಕನ್ನಡಿಗರ ನಿಜವಾದ ಏಳಿಗೆಗೆ ಕಾರಣವಾಗಬಲ್ಲುದಾದ, ಅನಿಯಂತ್ರಿತ ವಲಸೆ ತಡೆ- ಬಡತನ ನಿರ್ಮೂಲನೆ - ಆರ್ಥಿಕ ಏಳಿಗೆಗಳಿಗೆ ಕಾರಣವಾಗಬಲ್ಲ ಮಹತ್ವದ ಕಾರ್ಯಕ್ರಮವಾಗಿದೆ. ಈ ಹೋರಾಟ ಗೆಲ್ಲಲಿ!
ಕೊನೆಹನಿ: ಜಪಾನಿನಲ್ಲಿನ ಕೆಲಸಗಳನ್ನು ಜಪಾನಿಯರಿಗೇ ಕೊಡಿ ಎನ್ನುವುದು, ಇಂಗ್ಲೇಂಡಿನಲ್ಲಿರುವ ಕಾರುಗಳ ನೇಮ್‌ಪ್ಲೇಟುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಬಿಡಿ ಎನ್ನುವುದು, ಜರ್ಮನಿಯಲ್ಲಿ ಎಲ್ಲಾ ಗ್ರಾಹಕಸೇವೆಗಳನ್ನು ಜರ್ಮನ್ ನುಡಿಯಲ್ಲಿ ಕೊಡಿ ಎನ್ನುವುದು ಅಸಹಜವಾಗುವುದಾದರೆ ಕನ್ನಡನಾಡಿನ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಕೆಲಸಗಳನ್ನು ಕೊಡಿ ಎನ್ನುವುದು ಕೂಡಾ ಅಸಹಜ ಎನ್ನಬಹುದು!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!