ಕರ್ನಾಟದಾಗ್ ಇದ್ ಮ್ಯಾಲೆ ಕನ್ನಡ ಕಲೀರಿ ಅಂದೋರ್ ಯಾರ್ ಗೊತ್ತೇನು?

"ಹೊರಗಿನ್ ರಾಜ್ಯದಿಂದ ಬಂದ ಮಂದಿ ಕನ್ನಡ ನೆಲದಾಗ್ ಬದುಕಬೇಕ್ ಅಂದ್ರ ಲಗೂನ ಕನ್ನಡ ಕಲೀರಿ"
ಈ ಮಾತ್ ಅಂದವ್ರು ಯಾರೋ ಕನ್ನಡ ಚಳವಳಿ ಮಂದಿ ಅಲ್ರಿ, ಬದಲಿಗೆ ನಮ್ಮ ಬೆಂಗಳೂರಾಗಿರೋ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಕೇರಳ ಮೂಲದ ಶ್ರೀ ಸಿರಿಯಾಕ್ ಜೋಸೆಫ್ ಅವರ ನೋಡ್ರಿ. ಮುಖ್ಯ ನ್ಯಾಯಮೂರ್ತಿಗಳು ಅವರ ಘನತೆಗ ತಕ್ಕಂತ ಛಲೋ ಮಾತ್ ಹೇಳ್ಯಾರ್ ಅನ್ನೋದು ಖೀರ್ ಕುಡ್ದಂಗ್ ಆಗೈತ್ ನೋಡ್ರಿ.

’ರೋಮ್’ನಾಗ ರೋಮನ್ ಆಗಿರು:

ಕನ್ನಡ ಬರೂಣಿಲ್ಲ ಅಂತಂದ ದಿಲ್ಲಿ ಮೂಲದ ಒಬ್ಬ ವಕೀಲಗ ಚಲೋತ್ನಾಗ ನೀರ್ ಇಳಸ್ಯಾರ್ ರೀ. ಅವಗ ನಮ್ಮ ನ್ಯಾಯ ಮೂರ್ತಿಗಳು " ಕರ್ನಾಟಕದಾಗ ವಾಸಿಸಬೇಕು ಅಂತ ಯಾರರ ಬರಲಿ, ಅವರು ಕನ್ನಡ ಕಲೀಲೇಬೇಕು. ಕರ್ನಾಟಕದಾಗ್ ಇರ್ತೇನಿ, ಆದ್ರ ಕನ್ನಡ ಮಾತ್ರ ಬ್ಯಾಡ ಅಂದ್ರ ಹ್ಯಾಂಗಪಾ ತಮ್ಮ " ಅಂತ ಕೇಳ್ಯಾರ್ ನೋಡ್ರಿ. ಬಾಳ ಖುಷಿ ಆಗಿದ್ದ ಯಾಕಂದ್ರ ನ್ಯಾಯಮೂರ್ತಿಗಳು ಮೂಲ ಕೇರಳದವರು. ಇಲ್ಲಿಗೆ ಬಂದ ಮ್ಯಾಲ ಇಲ್ಲಿ ಮಂದಿ ಭಾವನೆಗಳಿಗ ಬೆಲಿ ಕೊಟ್ಟು ತುಸಾ ಕನ್ನಡ ಕಲತೇನಿ ಅಂತ ಎದಿ ತಟ್ಟಿ ಹೇಳಕೊಂಡಾರ್ ನೋಡ್ರಿ. ರೋಮ್ ನಾಗ್ ರೋಮನ್ ಆಗಿರು ಅನ್ನು ಬೀಜ ಮಾತು ನಮ್ಮ ಸಾಹೇಬ್ರು ಎಷ್ಟು ಚಂದ ಅರ್ಥ ಮಾಡ್ಕೊಂಡು ತಮ್ಮ ಜೀವನದಾಗ್ ಅಳವಡಿಸಿ ಕೊಂಡಾರಲ್ಲಾ ಅಂತ ಅವರಿಗೆ ನಮ್ಮ ಮನಸ್ಸಿಲೆ ಅಭಿನಂದನೆ ಹೇಳೋಣು.

ಅಲ್ರಿ ಯಾರಾನಾ ಎದಕ ಕನ್ನಡ ಕಲಿಬೇಕು, ಅಂತ ದೊಡ್ಡ ಫಾಯ್ದೆ ಏನ್ ಐತಿ?

ಒಂದು ಪ್ರದೇಶದಾಗಿನ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಬೆಳವಣಿಗಿ, ಆಡಳಿತ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸುಧಾರಣಿ ಮತ್ತು ಒಗ್ಗಟ್ಟಿಗೆ ಅಲ್ಲಿನ ಭಾಷಿ ಮತ್ತ ಸಂಸ್ಕೃತಿ ಉತ್ತಮವಾದ ವಾಹಕ ಆಗೇತ್ರಿ . ಹಿಂಗಾಗಿ ವಲಸಿಗರು ತಾವು ನೆಲಸು ಪ್ರದೇಶದ ಭಾಷಿ ಮತ್ತು ಸಂಸ್ಕೃತಿಗೆ ಸಹಮತ ತೋರಸುದು ವಲಸಿಗನ ಕರ್ತವ್ಯ ಆಕ್ಕೈತಿ. ಆಯಾ ಪ್ರದೇಶದ ಏಳಿಗೆಗೆ ಬಹುಮುಖ್ಯವಾಗಿ ಬೇಕಾದ ಒಗ್ಗಟ್ಟನ್ನು ಒದಗಿಸತೆತಿ. ವಲಸಿ ಬಂದವನಿಗೆ ಇದು ಸ್ಥಳೀಯನ ಸ್ನೇಹದ ಜತೆಗೆ, ಅಲ್ಲಿರುವ ಅವಕಾಶ, ತನ್ನನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಸಾಣಿ ಹಿಡೀತೈತಿ. ತಾನು ಈ ಊರಾಗ ಒಬ್ಬಂಟಿಯಲ್ಲ, ಮಂದಿ ಕೂಡ ಒಬ್ಬ ಅನ್ನೂ ಹೆಮ್ಮಿ ಕೂಡಾ ಅವ ಬೆಳೀಲಿಕ್ಕೂ ಅನುಕೂಲ ಮಾಡಿಕೊಡ್ತೈತಿ. ಇದು ವಲಸಿಗನಿಗೂ ಚಲೋ, ನಮಗೂ ಚಲೋ.

ಕನ್ನಡ ಕಲಿತೆನಿ ಅನ್ನೋರಿಗೆ ಬೆಂಬಲ ಕೊಡಬೇಕ್ರಿಪಾ!

"ಏ ಇವನಾಪ್ನ ಇವನ ಬಾಯಾಗ ಕನ್ನಡ ಪೂರಾ ಕೊಲೆ ಆಗತೇತಿ", " ಅಣ್ಣ, ಹೋಗಲಿ ಬಿಡಪಾ, ಯಾಕ ಸುಳ್ಳ ತ್ರಾಸ್ ತಗೋತಿ, ನಾನೇ ನಿಮ್ ಭಾಷಾದಾಗ್ ಮಾತಾಡತೇನಿ" ಅಂತ ಅಂದು ಕನ್ನಡ ಮಾತಾಡಾಕ್ ಪ್ರಯತ್ನ ಮಾಡೋರ ಉತ್ಸಾಹಕ್ಕ ತಣ್ಣೀರು ಹಾಕಬ್ಯಾಡ್ರಿ. ಕನ್ನಡ ಕಲಿಯೋ ನಿರ್ಧಾರ ತಗೊಂಡು ಇಲ್ಲಿನ ಮುಖ್ಯವಾಹಿನಿಯಾಗ್ ಬೆರೆಯಾಕ್ ಒಲವು ತೋರುಸ್ತಿರೋ ವಲಸಿಗರಿಗೆ ಬೆನ್ನು ತಟ್ಟಿ "ಹೌದಲ್ಲೇ ಮಗನ " ಅಂತ ಹುರಿದುಂಬಿಸಬೇಕು ಗುರು!
ನೀವು ಕೆಲ್ಸ ಮಾಡು ಕಡೆ ಕನ್ನಡ ಕಲಿಸು ಅವಕಾಶ ಸಿಕ್ರ ತಪ್ಪದ ಅದರ ಉಪಯೋಗ ತಗೋರಿ. ಕನ್ನಡ ಬಾರದ ನಿಮ್ಮ ಸ್ನೇಹಿತರಿಗ ಕನ್ನಡ ಕಲಿಯುದ್ರಿಂದ ಆಗು ಫಾಯ್ದೆ ಬಗ್ಗ ತಿಳಿ ಹೇಳ್ರಿ ಗುರುಗಳಾ.

"ವೇಗ ನಿಯಂತ್ರಕ" ಏಳಿಗೇಗೆ ಬ್ರೇಕ್ ಹಾಕದಿರಲಿ!

ಕರ್ನಾಟಕದಲ್ಲಿರೋ ಸಮೂಹ ಸಾರಿಗೆ ವಾಹನಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ವೇಗ ನಿಯಂತ್ರಕಗಳನ್ನು ಅಳವಡಿಸೋದ್ನ ಕಡ್ಡಾಯ ಮಾಡಿ ಒಂದು ಆದೇಶ ಹೊರಡ್ಸಿರೋದ್ನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಇದೀಗ ರಾಜ್ಯ ಉಚ್ಛ ನ್ಯಾಯಾಲಯ ಹೊಸದಾಗಿ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿ, ಕೂಡಲೇ ಆ ಆದೇಶ ಜಾರಿಗೆ ತರುವಂತೆ ನಿರ್ದೇಶನ ನೀಡಿದೆ. ವೇಗ ನಿಯಂತ್ರಕ ಕಾಯ್ದೆಯನ್ನು ಜಾರಿಗೆ ತಂದ್ರೂ ನಾಡಿನ ಬೆಳವಣಿಗೆಗೆ ಇದರಿಂದ ಹೊಡೆತ ಬೀಳದ ಹಾಗೆ ಎಚ್ಚರಿಕೆಯಿಂದ ನಡೆದುಕೊಳ್ಳೋ ಜವಾಬ್ದಾರಿ ಈಗ ನಮ್ಮ ರಾಜ್ಯ ಸರ್ಕಾರದ ಮೇಲಿದೆ.

ವೇಗ ನಿಯಂತ್ರಣ - ಕೇಂದ್ರ ಸರ್ಕಾರದ ಮೋಟಾರು ಕಾಯ್ದೆ

ರಸ್ತೆ ಸುರಕ್ಷತೆ ಕಾಪಾಡಲು ಕೇಂದ್ರ ಮೋಟಾರು ವಾಹನ ನಿಯಮ (ಸಂಖ್ಯೆ 118) ರ ಪ್ರಕಾರ ದೇಶದ ಪ್ರತಿ ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ನೋಂದಣಿ ಹೊಂದುವ/ ಹೊಂದಿರುವ ಪ್ರತಿಯೊಂದು ಸಮೂಹ ಸಾರಿಗೆ ವಾಹನದಲ್ಲಿ ವೇಗ ನಿಯಂತ್ರಕವನ್ನು ಅಳವಡಿಸುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು:
Rule 118 makes it mandatory that the speed limit of motor vehicles is enforced manually by way of speed governors. It states that the State Government had to ensure that speed governors were installed in all commercial vehicles within its limits
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇಂತಹ ವೇಗಮಿತಿ ಅಗತ್ಯವಿದೆ ಅಂತನ್ನೋ ಕೇಂದ್ರದ ಯೋಚನೆ ಅಪಘಾತಗಳನ್ನು ತಡೆಯಲು ಸಫಲವಾಗಲಿದೆ. ಇಂಥಹ ಒಳ್ಳೇ ಉದ್ದೇಶದ ಯೋಜನೆ ಜಾರಿಗೆ ಬರೋದ್ರಿಂದ ನಮ್ಮ ಏಳಿಗೆಗೆ ಹೇಗೆ ಹೊಡೆತ ಬಿದ್ದೀತು ಅಂತೀರಾ? ಇರ್ಲಿ, ಮೊದಲು ಈ ಸ್ಪೀಡ್ ಗವರ್ನರ್ ಅಂದ್ರೇನು ಅಂತ ಒಸಿ ನೋಡ್ಮಾ.

ಏನಿದು ಸ್ಪೀಡ್-ಗೌರ್ನರ್ ಅಂದ್ರೆ?

ಈ ನಿಯಮವನ್ನು ಕಾರ್ಯರೂಪಕ್ಕೆ ತರಲು ಒಂದು ಹೊಸ ಬಗೆಯ ವಿದ್ಯುತ್-ಚಾಲಿತ ವೇಗ ನಿಯಂತ್ರಕವನ್ನು ಅಳವಡಿಸುವ ಯೋಚನೆ ಇದೆ. ಈ ಯಂತ್ರ ವಾಹನದ ವೇಗವನ್ನು ಒಂದು ನಿರ್ದಿಷ್ಟ ಮಿತಿಯನ್ನು ಮೀರಲು ಬಿಡಲ್ಲ. ಆ ಮಿತಿಯನ್ನು ಮೀರಲು ಪ್ರಯತ್ನ ಮಾಡಿದರೂ ಕೂಡ ಈ ಯಂತ್ರ ಇಂಜಿನ್‍ಗೆ ಇನ್ನು ಹೆಚ್ಚು ಇಂಧನ ಪೂರೈಕೆಯಾಗದಂತೆ ನೋಡಿಕೊಳ್ಳತ್ತೆ. ಇದರಿಂದ ವಾಹನ ಇನ್ನು ಹೆಚ್ಚು ವೇಗದಿಂದ ಚಲಿಸಲು ಅಸಾಧ್ಯವಾಗತ್ತೆ. ನಮ್ಮ ಈ ಸಂದರ್ಭದಲ್ಲಿ ಇಡಲಾಗಿರುವ ಈ ವೇಗದ ಮಿತಿ ಗಂಟೆಗೆ ೬೦ ಕಿ.ಮೀ ಆಗಿದೆ.

ಯಾಕೆ ಇದು ಕರ್ನಾಟಕದ ಏಳಿಗೆಗೆ ಹೊಡೆತ ಕೊಡುತ್ತೆ?

ಪಕ್ಕದ ತಮಿಳುನಾಡು ಸರ್ಕಾರ ಇಂಥಾ ಕಾಯ್ದೆ ಜಾರಿಗೆ ತರಕ್ಕೆ ಯಾವ ಕ್ರಮ ತೊಗೋತಿಲ್ಲಾ ಅಂತ ಅಲ್ಲಿ ನ್ಯಾಯಾಲಯದಲ್ಲಿ ದಾವೆ ನಡೀತಿದೆ. ಕರ್ನಾಟಕ ಬಿಟ್ಟು ಬೇರೆ ಅನೇಕ ರಾಜ್ಯಗಳಲ್ಲಿ ಇದು ಇನ್ನೂ ಯೋಜನೆಯ ಹಂತದಲ್ಲೇ ಇದೆ. ಇದರರ್ಥ ಕರ್ನಾಟಕದ ಗಾಡಿಗಳಿಗೆ ವೇಗ ನಿಯಂತ್ರಕ ಬೇಗ ಹಾಕಲಾಗುತ್ತೆ ಮತ್ತು ಬೇರೆ ರಾಜ್ಯಗಳಲ್ಲಿ ಇದು ಜಾರಿಯಾಗೋಕೆ ಸಾಕಷ್ಟು ಸಮಯದ ಅಂತರ ಉಂಟಾಗುತ್ತೆ. ಮೊದಲಿಗೆ ನಮ್ಮಲ್ಲಿ ಈ ಕಾಯ್ದೆ ಜಾರಿಗೆ ಬಂದು ಬೇರೆ ಕಡೆ ಬರೋದು ತಡ ಆದ್ರೆ ಏನಾಗುತ್ತಪ್ಪಾ ಅಂದ್ರೆ ಬರೀ ಕರ್ನಾಟಕದ ಗಾಡಿಗಳಿಗಲ್ಲ, ನಾಡಿನ ಏಳಿಗೆಗೇ ಇದು ಬ್ರೇಕ್ ಹಾಕಿಬಿಡುತ್ತೆ ಗುರು. ಹೇಗಂತೀರಾ? ಈ ಉದಾಹರಣೆಗಳನ್ನು ನೋಡಿ.

ಒಂದು ಸರಕು ಸಾಗಣೆ ವಾಹನ ’ವೇಗ ನಿಯಂತ್ರಕ’ ಇದ್ದಾಗ ಇಲ್ಲಿಂದ ದಿಲ್ಲಿಗೆ ಹೋಗಕ್ಕೆ ಒಂದು ವಾರ ತೆಗೆದುಕೊಳ್ಳುತ್ತೆ ಅಂತಲೂ ವೇಗ ನಿಯಂತ್ರಕ ಇಲ್ಲದ ಗಾಡಿ ನಾಕು ದಿನ ತೊಗೊಳ್ಳುತ್ತೆ ಅಂತಲೂ ಅಂದುಕೊಳ್ಳೋಣ. ಆಗ ಸಾಗಣೆ ಮಾಡುವವರು ಯಾವ ಗಾಡಿಯನ್ನು ಆರಿಸಿಕೊಳ್ತಾರೆ ಹೇಳಿ.

ಬೆಂಗಳೂರಿಂದ ಚೆನ್ನೈಗೆ ಹೋಗೋ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ವೇಗ ನಿಯಂತ್ರಕ ಹಾಕಿಸಿಕೊಂಡು ಎಂಟು ಗಂಟೆ ತೊಗೊಳ್ಳುತ್ತೆ, ಅದಿಲ್ಲದೇ ಇರೋ ತಮಿಳುನಾಡಿನ ಬಸ್ಸು ಬರೀ ಆರು ಗಂಟೆ ತೊಗೊಳ್ಳುತ್ತೆ ಅಂದರೆ ನಾವೂ ನೀವೂ ಯಾವ ಬಸ್ಸಲ್ಲಿ ಹೋಗ್ತೀವಿ? ಹೇಳಿ. ವೇಗ ನಿಯಂತ್ರಕಗಳಿರೋ ಕರ್ನಾಟಕದ ವಾಹನಗಳ ಬೇಡಿಕೆ ಬಿದ್ದು ಹೋಗುತ್ತೆ ಅಷ್ಟೆ. ಹೀಗಾಗೋದ್ರಿಂದ ಕರ್ನಾಟಕದಲ್ಲಿ ನೋಂದಣಿಯಾಗೋ ವಾಹನಗಳಿಗೆ ಬೇಡಿಕೆ ಇಳಿದು ನಮ್ಮ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತೆ.

ಎಲ್ಲ ಕಡೆ ಒಟ್ಗೆ ಜಾರಿಯಾಗ್ದಿದ್ರೆ ಕಾಯ್ದೆಯ ಉದ್ದೇಶವೇ ಈಡೇರೋಲ್ಲ!

ನಮ್ಮ ನಾಡಿನ ಲಾರಿಗಳೆಲ್ಲಾ ೬೦ ಕಿಮೀಗಿಂತ ಕಡಿಮೆ ವೇಗದಲ್ಲಿ ಚಲಿಸ್ತಿರಲಿ, ಆದರೆ ಅದೇ ರಸ್ತೆಯಲ್ಲಿ ಪಕ್ಕದಲ್ಲೇ ಚಲಿಸುತ್ತಿರೋ ಹೊರರಾಜ್ಯದ ಲಾರಿಗಳು ಇದಕ್ಕಿಂತ ವೇಗವಾಗಿ ಚಲಿಸಿದರೂ ಪರ್ವಾಗಿಲ್ಲ ಅನ್ನೋದು ಎಷ್ಟು ಸರಿ. ಇಷ್ಟರಮೇಲೆ ನಮ್ಮೂರ ಎಲ್ಲಾ ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಹಾಕಿದ್ವಿ ಅಂತಲೇ ಇಟ್ಕೊಳ್ಳಿ, ವೇಗ ನಿಯಂತ್ರಕಗಳಿಲ್ಲದ ಬೇರೆ ರಾಜ್ಯಗಳ ವಾಹನಗಳು ನಮ್ಮ ರಾಜ್ಯದ ಬೀದಿಗಳಲ್ಲಿ ಓಡಾಡ್ತಿದ್ರೆ ನಮ್ಮೂರಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಿದ ಹಾಗೆ ಆಗಲ್ಲ ಅಲ್ವೇ. ಹೀಗೆ ರಸ್ತೆ ಸುರಕ್ಷತೆ ಎನ್ನುವ ಮೂಲ ಉದ್ದೇಶವೇ ಈಡೇರಲ್ಲ ಅಲ್ವಾ ಗುರು? ಇಲ್ಲಾ ಮೊದಲು ಇಲ್ಲಿ ಜಾರಿ ಆಗ್ಲಿ, ಉಳಿದ ಕಡೆ ಇಂದಲ್ದಿದ್ರೆ ನಾಳೆ ಜಾರಿ ಆಗುತ್ತೆ ಅನ್ನೋದಾದ್ರೆ ಆ ನಾಳೆಗೂ ಇಂದಿಗೂ ನಡುವೆ ಇರೋ ಅಂತರದಿಂದಾಗಿ ಸಾರಿಗೆ ವಹಿವಾಟಿನಲ್ಲಿ ಆಗೋ ನಷ್ಟಕ್ಕೆ ಕನ್ನಡ ನಾಡೇ ಯಾಕೆ ಮೊದಲು ಬಲಿಯಾಗಬೇಕು.

ರಸ್ತೆ - ಸುರಕ್ಷತೆ ಬೇಕು ಅಂದ್ರೆ ವ್ಯವಸ್ಥೆ ಹೇಗಿರ್ಬೇಕು?

ನಿಜವಾಗ್ಲೂ ರಸ್ತೆ ಮೇಲೆ ಸುರಕ್ಷತೆ ಕಾಪಾಡ್ಬೇಕು, ಮತ್ತದಕ್ಕೆ ಈ ವೇಗ ನಿಯಂತ್ರಕ ಸಹಾಯ ಮಾಡ್ಬೇಕು ಅಂದ್ರೆ ಈ ನಿಯಮ ಎಲ್ಲ ರಾಜ್ಯಗಳಲ್ಲಿ ಒಮ್ಮೆಲೇ ಜಾರಿಗೆ ಬರಬೇಕು. ಇದಕ್ಕೆ ಬೇಕಾದ ಕ್ರಮಗಳನ್ನು ಎಲ್ಲ ರಾಜ್ಯಗಳೂ ಕೂತು ಚರ್ಚಿಸಿ ತೊಗೋಬೇಕು. ಅದೆಲ್ಲಾ ಆಗೋತಂಕಾ ನ್ಯಾಯಾಲಯದ ಆದೇಶಾನ ಜಾರಿ ಮಾಡ್ದೆ ಇರಕ್ ಆಗಲ್ಲಾ ಅಂದ್ರೆ ಆದೇಶಾನ ಜಾರಿಗೆ ತರುವುದರ ಜೊತೆಜೊತೆಯೇ ಕರ್ನಾಟಕ ರಾಜ್ಯ ಸರ್ಕಾರ ಇನ್ನು ಮುಂದೆ ವೇಗ ನಿಯಂತ್ರಣ ಇಲ್ಲದ ಯಾವುದೇ ರಾಜ್ಯಗಳ ವಾಹನವನ್ನೂ ಕರ್ನಾಟಕದಲ್ಲಿ ಓಡಾಡೋಕ್ಕೆ ಬಿಡಲ್ಲ ಅನ್ನೋ ಹೊಸ ಕಾಯ್ದೇನ ಮಾಡಿ ಅದನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆಂಧ್ರದ, ತಮಿಳುನಾಡು ಸೇರಿದಂತೆ ಎಲ್ಲ ಹೊರರಾಜ್ಯಗಳ ಬಸ್ಸುಗಳೂ, ಲಾರಿಗಳೂ ಸೇರಿದಂತೆ ಎಲ್ಲಾ ಸಮೂಹ ಸಾರಿಗೆ ವಾಹನಗಳು, ಆದೇಶದಲ್ಲಿ ಸೂಚಿಸಿರೋ ಮಿತಿಗೆ ವೇಗ ನಿಯಂತ್ರಣ ಹಾಕಿಸ್ಕೊಂಡು ಬಂದ್ರೆ ಮಾತ್ರಾ ಕನ್ನಡ ನಾಡನ್ನು ಪ್ರವೇಶ ಮಾಡಬಹುದು. ಇಲ್ದಿದ್ರೆ ಇವುಗಳಿಗೆ ಪ್ರವೇಶವಿಲ್ಲಾ ಅಂತ ಮಾಡುದ್ರೆ ಮಾತ್ರಾ ನಮ್ಮ ನಾಡಲ್ಲಿರೋ ಸಾರಿಗೆ ಸಂಸ್ಥೆಗಳು ಉಳಿದಾವು. ಇಲ್ಲಾಂದ್ರೆ ಬರೀ ಒಂದು ವರ್ಷದಲ್ಲಿ ಎಲ್ಲಾ ಕಣ್ಮುಚ್ಕೋಬೇಕಾದೀತು, ಅಲ್ವಾ ಗುರು?

'ಬಂಗಾರದ ಮನುಷ್ಯ'ನ ಬಂಗಾರದಂಥಾ ಹಾಡು

ಸಾವಿರಾರು ಜನರ ಜೀವನ ಶೈಲೀನೆ ಬದಲ್ಸೋ ಶಕ್ತಿ ಒಂದು ಸಿನಿಮಾ ಹಾಡಿಗೆ ಇರುತ್ತೆ ಅಂದ್ರೆ ಅಚ್ಚರಿ ಆಗುತ್ತಲ್ವಾ? ಸಾವಿರ ಮೈಲಿಯ ಪಯಣವೂ ಒಂದು ಹೆಜ್ಜೆಯಿಂದಲೇ ಆಗೋದು, ಪ್ರಯತ್ನ ಪಡಬೇಕು, ಎಂದೆಗುಂದಬಾರ್ದು ಅನ್ನೋ ಸಂದೇಶಗಳನ್ನೆಲ್ಲಾ ಅದೆಷ್ಟು ಚೆನ್ನಾಗಿ ಬಂಗಾರದ ಮನುಷ್ಯ ಚಿತ್ರದ ಈ ಹಾಡಲ್ಲಿ ಕೊಟ್ಟಿದಾರೆ ನೋಡಿ.

ಸಖತ್ ಸ್ಪೂರ್ತಿ ಕೊಡೋ ಈ ಹಾಡಲ್ಲಿರೋ ವಿಶೇಷನಾದ್ರೂ ಏನಂತೀರಾ? ಎಷ್ಟು ಸಾರ್ತಿ ಕೇಳುದ್ರೂ ಇಂಪಾಗಿರೋ ಸಂಗೀತ, ಮೈ ಮನಗಳಲ್ಲಿ ಅದಮ್ಯವಾದ ಕಸುವು ತುಂಬುವ ಸಾಹಿತ್ಯ, ಕಣ್ ತಣಿಸೋ ನೋಟ, ಮನ ತಟ್ಟೋ ಅಭಿನಯಾ... ಆಹಾ ಇನ್ನೊಂದಪಾ ನೋಡ್ಮಾ ಬನ್ನಿ.


ಈ ಸಿನಿಮಾನಾ, ಈ ಹಾಡನ್ನ ನೋಡ್ಕೊಂಡು ಎಷ್ಟೋ ಜನರು ತಮ್ಮ ಬದುಕಿನ ದೃಷ್ಟಿಕೋನವನ್ನೇ ಬದಲಿಸಿಕೊಂಡ್ರಂತೆ.

ಕನ್ನಡ ನಾಡು ಕಟ್ಟೋಕೆ ಹೊರಡೋ ಕಟ್ಟಾಳುಗಳಿಗೂ ಹೆಜ್ಜೆಗೊಂದು ಸವಾಲು ಎದ್ರಾಗಬೋದು. ಏನೆ ಬಂದ್ರೂ ಮುಂದಡಿಯಿಡ್ತೀವಿ ಅನ್ನೋ ಧೃಡಸಂಕಲ್ಪ ಇದ್ರೆ ಎದ್ರಾಗೋ ಬಂಡೆಗಳೂ ಪುಡಿಪುಡಿ..

ಇಂಥಾ ಹಾಡುಗಳು ಈಗ್ಲೂ ಪರಿಣಾಮಕಾರಿಯಾಗಿ ಪ್ರೇರಣೆ ನೀಡ್ತಿರೋದು ಅವುಗಳ ಸಾರ್ಥಕತೆಗೆ ಸಾಕ್ಷಿ.

ಬೆಂಗಳೂರಾಗ ಕನ್ನಡಾ ಮಂದಿ ಕಮ್ಮಿ ಅದಾರಂತಾ ಯಾ ಮಗಾ ಅಂತಾನಾ?

ಮೊನ್ನಿ ಟೈಮ್ಸ್ ಆಫ್ ಇಂಡಿಯಾದಾಗ್ ಬಂದಿರು ಸುದ್ದಿ ಪ್ರಕಾರ ಬೆಂಗಳೂರಾಗ ರೇಡಿಯೋ ಮಿರ್ಚಿ ಈಗಾ ನಂಬರ್ ಒನ್ ಆಗೈತಂತ್ರಿಪಾ. ಅಷ್ಟ ಅಲ್ರಿ, ಕನ್ನಡ ಹಾಡ ಹಾಕು ನಾಕು ಕೇಂದ್ರಗಳಾದ ರೇಡಿಯೋ ಮಿರ್ಚಿ, ಬಿಗ್ ಎಫ್.ಎಂ, ಎಸ್.ಎಫ್.ಎಂ ಮತ್ತು ವಿವಿಧ ಭಾರತಿಗಳನ್ನು ಬೆಂಗಳೂರಾಗಿನ್ 75% ಮಂದಿ ಕೇಳಲಿಕ್ ಹತ್ಯಾರಂತ. ನಿನ್ನಿ ಮೊನ್ನಿ ಮಟ " ಏ ಬಿಡೋಪಾ, ಬೆಂಗಳೂರನಾಗ್ ಕನ್ನಡ ಹಾಡಾ ಯಾವ್ ಮಂಗ್ಯಾ ನನ ಮಗಾ ಕೇಳತಾನ", "ಬೆಂಗಳೂರನಾಗ ಕನ್ನಡದಾಗ್ ಜಾಹಿರಾತು ಕೊಟ್ರ ವ್ಯಾಪಾರ ಆಗಂಗಿಲ್ಲ" ಅಂತಿದ್ರಲ್ಲ, ಅವರೆಲ್ಲಾರದು ಬಾಯಿ ಚಲೋತ್ನಾಗ ಬಂದ್ ಆಗೆತ್ರಿ ಮತ್ತಾ.

ಯವಾಗ ನೋಡಿದ್ರು ಬೆಂಗಳೂರಾಗ ಕನ್ನಡದೋರು ಭಾಳ ಕಮ್ಮಿ ಅದಾರ, ಇಲ್ಲೇನಿದ್ರು ಹೊರಗಿನ ಮಂದಿನಾ ಜಾಸ್ತಿ ಅದಾರ ಅನ್ನು ಪೊಳ್ಳು ವಾದ ಹೇಳ ಹೆಸರಿಲ್ಲದಂಗ್ ಹಳ್ಳ ಹಿಡದೇತ್ರಿ. ನೀವಾ ಹೇಳ್ರಲಾ, ಕನ್ನಡ ಮಂದಿ ರಗಡ್ ಇಲ್ಲ ಅಂದ್ರ ಬರೀ ಕನ್ನಡ ಹಾಡ ಹಾಕೂ ಸ್ಟೇಷನ್ನು ಹ್ಯಾಂಗ ನಂಬರ್ ಒನ್ ಆಗತೈತಿ?

ಐಟಿ ಬಿಟಿ ಅಂತ ಒಂದೀಟು ಹೊರಗಿನ ಮಂದಿ ಬಂದಾರ ಅಂದ ಕೂಡ್ಲೆ, ಬೆಂಗಳೂರಾಗ ಕನ್ನಡದೋರು ಇಲ್ಲೇ ಇಲ್ಲ, ಇನ್ನ ಮ್ಯಾಲೆ ಇಲ್ಲಿ ಬರೀ ಹಿಂದಿನಾ ನಡಿಯೋದ ಅಂತ ಅನ್ಕೊಂಡು ಅಡ್ಡಾಡಿದ ಮಂದಿ ಬಾಯಿಗ ಬೂಚ್ ಬಿದ್ದಂಗ್ ಖರೇನಾ ಆಗೈತಿ.

ರೊಕ್ಕ ಮಾಡ್ಬೇಕು ಅಂದ್ರ ಕನ್ನಡದಾಗ್ ಜಾಹೀರಾತು ಕೊಡ್ರಿ

ಅಷ್ಟ ಅಲ್ರೀ, ರೇಡಿಯೋ ಮಿರ್ಚಿ ಮಾರಾಟ ವಿಭಾಗದ ಮುಖ್ಯಸ್ಥ ನವೀನ ಚಂದ್ರ ಅವರ ಹೇಳಿರು ಮಾತ್ ನೋಡ್ರಿ. ಅವರಂತಾರಾ:
Advertisers need to break out of the common perception that Kannada is not hip. Kannada is very hot right now.Kannadigas have the highest purchasing power in Bangalore. If any advertiser wants to reach the best audience in Bangalore, they have to bet on Kannada. The fact that The Times of India has started its Kannada edition in addition to Vijay Karnataka demonstrates that kannada is the most important vehicle to reach Bangaloreans," adds Naveen Chandra, Radio Mirchi's national sales head.

ಇದರ ಅರ್ಥ ಬಾಳ ಸರಳ ಐತ್ರಿ. ಬೆಂಗಳೂರಿನ ಮಂದಿನ ಮುಟ್ಟಾಕ್ ಇರು ಒಂದಾ ಹಾದಿ ಅಂದ್ರ ಕನ್ನಡ. ಬೆಂಗಳೂರನಾಗ ಚಲೋತ್ನಾಗ್ ಯಾಪಾರ ವಹಿವಾಟು ಮಾಡ್ಬೇಕು ಅಂದ್ರ, ನಿಮ್ಮ ನಿಮ್ಮ ಉತ್ಪನ್ನಗೋಳ ಮಾರಾಟ ಹೆಚ್ಚಿಸಬೇಕ್ ಅಂದ್ರ ಒಂದಾ ಹಾದಿ. ಅದಾ ಕನ್ನಡದಾಗ್ ಜಾಹಿರಾತು ಕೊಡುದ್ರಿ.

ಆಮ್ಯಾಲ್ ಅದು ಬೇಕಾರ್ ವಿಮಾನ್ ನಿಲ್ದಾಣ ಇರಲಿ, ಬಸ್ ಸ್ಟಾಪ್ ಇರಲಿ, ಮಾಲ್ ಇರಲಿ, ಇಲ್ಲ ರೇಡಿಯೋ ಸ್ಟೇಷನ್ ಇರಲಿ ಕನ್ನಡದಾಗ ಜಾಹೀರಾತು ಕೊಡ್ರಿ, ನಿಮ್ಮ ವ್ಯಾಪಾರ ಏರಲಿಲ್ಲ ಅಂದ್ರ ನೋಡ್ರಿ, ನಮ್ ಉಳವಿ ಬಸವಣ್ಣನ ಮ್ಯಾಲ್ ಆಣಿ.

ಎಲ್ಲದರ ಅರ್ಥ ಒಂದಾ ರೀ, ಬೆಂಗಳೂರಿನಾಗಾರ ಆತು, ಕರ್ನಾಟಕದಾಗಿನ ಬ್ಯಾರೀ ಊರಾಗಾರಾ ಆತು, ಕನ್ನಡಿಗನೇ ಸಾರ್ವಭೌಮ ಅದಾನ ಅಂತ. ಹೌದಲ್ರಿ ಗುರುಗಳಾ?

ಹೆಚ್ಚಿನ ಓದಿಗೆ: KARNATIQUE: Kannadigas in Bengaluru - truths and hard truths

ಜಯ, ಏಯ್ ಕರ್ನಾಟಕ ತೊರೆಯೇ!

ಭಾರತೀಯ ಜನತಾ ಪಕ್ಷ ಮತ್ತು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂಗಳು ಕರ್ನಾಟಕದಲ್ಲಿ ಚುನಾವಣಾ ಹೊಂದಾಣಿಕೆ ಮಾಡ್ಕೊಳ್ಳೋ ಪ್ರಸ್ತಾಪವೊಂದನ್ನು ಜಯಲಲಿತಾ ಮುಂದಿಟ್ಟಿರೋ ಸಮಾಚಾರ ಕನ್ನಡಿಗರ ಕೂದಲು ನಿಮಿರಿಸಿದೆ ಗುರು.
ಸುದ್ದಿ ಏನಪ್ಪಾ ಅಂದರೆ ’ಕೋಲಾರ, ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ಹತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ವಾಸವಾಗಿರೋರಲ್ಲಿ ತಮಿಳು ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ ಮತ್ತು ಅವರ ಮತಗಳನ್ನೆಲ್ಲಾ ಏಐಡಿಎಂಕೆ ತನ್ನ ಮತಬ್ಯಾಂಕು, ಅಲ್ಲೆಲ್ಲಾ ಗೆದ್ದು ಭಾಜಪಾಗೆ ಬೆಂಬಲ ಕೊಡ್ತೀವಿ’ ಅಂತ ಅಮ್ಮ ಜಯಮ್ಮ ಅನ್ತಿರೋದೇ ಆಗಿದೆ. (ಫೋಟೋ ಕೃಪೆ : ದಿ ಹಿಂದೂ)
ಈ ಪ್ರಸ್ತಾಪವನ್ನು ಈಕೆ ಮುಂದಿಟ್ಟಿರೋದು ಭಾರತೀಯ ಜನತಾ ಪಕ್ಷದ ಗುಜರಾತಿ ಮುಖಂಡರಾದ ನರೇಂದ್ರ ಮೋದಿ ಅವರ ಬಳಿ. ಗುಜರಾತಿ ಅಸ್ಮಿತಾ ಅಂತ ಗುಜರಾತಲ್ಲಿ ಮೋದಿ ಒಳ್ಳೇ ಕೆಲಸ ಮಾಡಕ್ ಹೋಗೋದು ಎಷ್ಟು ಶ್ಲಾಘನೀಯವೋ, ಕರ್ನಾಟಕದ ವಿಷಯದಲ್ಲಿ ತಲೆ ಹಾಕುದ್ರೆ ಅದು ಅಷ್ಟೇ ಖಂಡನೀಯ. ಒಟ್ನಲ್ಲಿ ಈ ವಿಷ್ಯವಾಗಿ ಇಲ್ಲಿ ಕರ್ನಾಟಕದ ಭಾಜಪಾ ನಾಯಕರುಗಳ ಅಭಿಪ್ರಾಯಾನಾ ಕೇಳಿದ್ದೂ ಗೊತ್ತಿಲ್ಲ, ಇವರ ಮಾತಿಗೆ ಕವಡೆ ಕಿಮ್ಮತ್ತಾದ್ರೂ ಇದೆಯೋ ಇಲ್ವೋ ಅದೂ ಗೊತ್ತಿಲ್ಲ. ಇದು ಭಾರತ ದೇಶದ ಮಹಾನ್ ಫೆಡೆರಲ್ ವ್ಯವಸ್ಥೆ ಸಾಗ್ತಿರೋ ದಿಕ್ಕಿನೆಡೆ ಬೆಳಕು ಚೆಲ್ತಿರೋದು ಮಾತ್ರಾ ನಿಜ.

ಕರ್ನಾಟಕದಲ್ಲಿ ’ದ್ರಾಮುಕ’ಗಳಿಗೆ ಏನು ಕೆಲಸ?

ಕರ್ನಾಟಕದಲ್ಲಿರೋ ತಮಿಳ್ರನ್ನು ಕನ್ನಡಿಗರ ವಿರುದ್ಧವಾಗಿ ಎತ್ತಿಕಟ್ಟೋದನ್ನು ಬಿಟ್ಟರೆ, ಆ ಮೂಲಕ ನಾಡು ಒಡೆಯಲು ಪ್ರೇರಣೆ ನೀಡೋದ್ ಬಿಟ್ರೆ ನಿಜಕ್ಕೂ ಜಯಮ್ಮನ ಪಕ್ಷ ಏನು ತಾನೆ ಮಾಡಕ್ ಸಾಧ್ಯ? ಕರ್ನಾಟಕದಲ್ಲಿರೋ ತಮಿಳರನ್ನು ಒಗ್ಗೂಡಿಸಿ ಚುನಾವಣೆ ಎದುರುಸ್ತೀವಿ ಅಂತ ಒಂದು ಪಕ್ಷ ಹೇಳ್ಕೊಂಡು ನಮ್ಮೂರಲ್ಲಿ ರಾಜಕಾರಣ ಮಾಡ್ತೀನಿ ಅಂತ ಬರ್ತಿರೋದು ಒಂದು ನಾಡನ್ನು ಒಡೆಯಲು ನಡೆಸೋ ಸಂಚಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಆಗಲ್ವಾ? ಈ ದೇಶದ ಕಾನೂನಿನ ಪ್ರಕಾರ ಬಹುಶಃ ಅಲ್ಲ. ಇದು ನಿಜಕ್ಕೂ ತಮಾಶೆ ವಿಷ್ಯಾನೆ ಬಿಡಿ.

ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಗಳು ಕಾವೇರಿ ನೀರು ಹಂಚಿಕೆಯಲ್ಲಿ ತಳೆದ ನಿಲುವೇನು? ತಿರುವಳ್ಳುವರ್ ಪ್ರತಿಮೆ ವಿಚಾರದಲ್ಲಿ ನಿಲುವೇನು? ಡಾ.ರಾಜ್ ಅಪಹರಣವಾದಾಗ ಅವರುಗಳು ನಡೆದುಕೊಂಡ ಬಗೆ ಏನು? ಅನ್ನೋದೆಲ್ಲಾ ಜಗತ್ತಿಗೇ ಗೊತ್ತಿದೆ. ಹೀಗೆ ಹೆಜ್ಜೆ ಹೆಜ್ಜೆಗೂ ಕನ್ನಡಿಗರ ಅಭಿಪ್ರಾಯಕ್ಕೆ ವಿರುದ್ಧವಾದ ಮತ್ತು ಕರ್ನಾಟಕದ ಹಿತಕ್ಕೆ ವಿರುದ್ಧವಾಗೇ ನಡೆದುಕೊಳ್ತಿರೋ ಒಂದು ಪ್ರದೇಶದ ಪ್ರಮುಖ ರಾಜಕೀಯ ಪಕ್ಷದ ಈ ನಡೆ ನಮ್ಮ ನಾಡಿನ ಹಿತಕ್ಕೆ ಮಾರಕವಾಗಿದೆ ಅನ್ನೋದಂತೂ ಸತ್ಯ.

ರಾಜ್ಯದಲ್ಲಿ ಉಸಿರಾಡ್ತಿರೋ ರಾಷ್ಟ್ರೀಯ ಪಕ್ಷಗಳೆಂಬ ಬೆರ್ಚಪ್ಪಗಳು

ನಮ್ಮ ನಾಡಲ್ಲೇ ಇದ್ಕೊಂಡು, ನಮ್ಮ ನಾಡ್ನೇ ಒಡೆದು ಹಾಕಕ್ಕೆ ತುದಿಗಾಲಲ್ಲಿ ನಿಂತಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಈಗಾಗ್ಲೇ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಲು ಹೇಸದ ರಾಷ್ಟ್ರೀಯ ಪಕ್ಷಗಳು ಚುನಾವಣೆ ಹತ್ತಿರ ಬರ್ತಿದ್ದ ಹಾಗೇ ನಾಡು ನುಡಿಯ ಹಿತ ಕಾಪಾಡ್ತೀವಿ ಅಂತ ಕನ್ನಡಿಗರ ಕಿವಿ ಮೇಲೆ ಚೆಂಡ್ ಹೂವಲ್ಲ, ಇಡೀ ಲಾಲ್ ಬಾಗನ್ನೇ ಇಡಕ್ಕೆ ಹೊಂಟಿವೆ. ಈಗ ಜಯಲಲಿತಾ ಕೈ ಹಾಕಿರೋದು ಕೂಡಾ ಅಂತಹ ಒಂದು ರಾಷ್ಟ್ರೀಯ ಪಕ್ಷದ ಹೆಗಲಿಗೇ. ಕನ್ನಡ ನಾಡಲ್ಲಿ ಹೊಂದಾಣಿಕೆ ಮಾಡಿಕೊಳ್ಳೋ ಮಾತನ್ನು ಆ ಯಮ್ಮ ಆಡ್ತಿರೋದು ಗುಜರಾತಿನ ಮುಖ್ಯಮಂತ್ರಿ ಜೊತೆಗೆ. ಈ ಬೆಳವಣಿಗೆಗಳಲ್ಲಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ನಾಯಕ ಶಿರೋಮಣಿಗಳ ಅಭಿಪ್ರಾಯ ಕೇಳಿ ತೀರ್ಮಾನ ಮಾಡ್ತಾರಂತೆ. ಕೋಳೀನ್ ಕೇಳಿ ಯಾರಾನಾ ಮಸಾಲೆ ಅರದಿದ್ದುಂಟಾ? ಹೇಳಿ. ದಿಲ್ಲೀಲಿ ಅಧಿಕಾರದ ಚುಕ್ಕಾಣಿ ಹಿಡ್ಯಕ್ಕೆ ಆಗುತ್ತೆ ಅಂದ್ರೆ ಹತ್ತು ಸೀಟೇನು, ಇಡೀ ಕರ್ನಾಟಕವನ್ನೇ ಬೇಕಾದ್ರೂ ಬರೆದು ಕೊಟ್ಟಾರು. ಹಾಗೆ ಹೈಕಮಾಂಡ್ ಬರೆದು ಕೊಡ್ತಿದ್ರೆ ಹೊಲದ್ ಮಧ್ಯೆ ಕೈ ಅಗುಲುಸ್ಕೊಂಡ್ ನಿಂತಿರೋ ಬೆರ್ಚಪ್ಪಗಳ ಥರಾ ಕೆಕರು ಮಕರು ಮುಖ ನೋಡ್ಕೊಂಡಿರೋದ್ನ ಬಿಟ್ಟು ಇನ್ನೇನು ಮಾಡಕ್ಕಾದ್ರೂ ಈ ನಾಯಕರ ಕೈಲಿ ಆಗುತ್ತಾ ಅನ್ನೋದು ಕುತೂಹಲ ಹುಟ್ಸೋ ವಿಷ್ಯಾ ಗುರು.

ಮೇರಾ ಭಾರತ್ ಮಹಾನ್

ಇದು ಭಾರತ ದೇಶ. ಇಲ್ಲಿ ಪ್ರಜಾಪ್ರಭುತ್ವ ಇದೆ. ಯಾರು ಯಾವ ಪಾರ್ಟಿ ಬೇಕಾದ್ರೂ ಕಟ್ಟ ಬಹುದು. ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಮೇರಾ ಭಾರತ್ ಮಹಾನ್!
ತಮಿಳರ ಈ ಪಕ್ಷಕ್ಕೆ ಭಾರತೀಯ ಸಂವಿಧಾನದ ಪ್ರಕಾರ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲೋ ಅವಕಾಶ ಇದೆ. ಮೇರಾ ಭಾರತ್ ಮಹಾನ್!
ಕರ್ನಾಟಕದಲ್ಲೇ ’ಕಾವೇರಿ ನೀರು ತಮಿಳುನಾಡಿಗೆ ಬಿಡ್ತೀವಿ, ನಮಗೆ ಮತ ಕೊಡಿ’ ಅನ್ನಬಹುದು. ಮೇರಾ ಭಾರತ್ ಮಹಾನ್!
ಇಲ್ಲಿನ ತಮಿಳ್ ಮಕ್ಕಳಿಗೆ ’ನಿಮ್ಮ ತಾಯಿನುಡಿ ತಮಿಳು. ನಿಮ್ಮ ತಾಯ್ನಾಡು ತಮಿಳುನಾಡು. ತಮಿಳರ ರಕ್ಷಣೆಗಾಗಿ ನೀವೆಲ್ಲಾ ಇಲ್ಲಿ ನಮಗೆ ಮತ ಕೊಡಿ, ಆಗ ಕರ್ನಾಟಕದ ವಿಧಾನ ಸಭೆಯಲ್ಲೂ ತಮಿಳರ ಹಿತರಕ್ಷಣೆಗಾಗಿ ನಾವು ಕೂಗೆಬ್ಬಿಸಬಹುದು’ ಅನ್ನಬಹುದು. ಮೇರಾ ಭಾರತ್ ಮಹಾನ್!
ನೀವು ವಲಸೆ ಬಂದ ನಾಡಿನ ಸಂಸ್ಕೃತಿಗಳಿಗೆ ಧಕ್ಕೆಯಾಗದ ಹಾಗೆ ಅವರಲ್ಲಿ ಬೆರೆತು ಒಂದಾಗಿ ಅಂತಾ ಹೇಳೋ ಬದಲು ನೀವಿಲ್ಲಿ ಬಂದು ಸಾವಿರ ವರ್ಷ್ವೇ ಆಗಿದ್ರೂ ನಿಮ್ಮ ಮೈಯ್ಯಾಗಿನ ರಕ್ತ ತಮಿಳು ರಕ್ತ. ಕನ್ನಡಿಗರು ಕಾವೇರಿ ನೀರು ಬಿಡ್ತಿಲ್ಲ ಅಂದ್ರೆ ತಮಿಳು ಕುಲ ಅಳಿಸಕ್ಕೆ ಹೊರ್ಟಿದಾರೆ, ಅವರ ವಿರುದ್ಧ ಪ್ರತಿಭಟಿಸಿ’ ಅಂತ ಬೇಕಾದ್ರೂ ಅನ್ನಬಹುದು. ಮೇರಾ ಭಾರತ್ ಮಹಾನ್!
ಕರ್ನಾಟಕದಲ್ಲಿ ನಗರ ಪಾಲಿಕೆ ಚುಕ್ಕಾಣಿ ಹಿಡಿದೋರು ಮಹಾರಾಷ್ಟ್ರದ ಜೊತೆ ಸೇರ್ಕೋತೀವಿ ಅಂತ ಠರಾವ್ ಪಾಸ್ ಮಾಡಿದ ಹಾಗೆ ನಾಳೆ ’ಬೆಂಗಳೂರನ್ನು ಕೇಂದ್ರಾಡಳಿತಕ್ಕೋ, ತಮಿಳುನಾಡಿಗೋ ಸೇರ್ಸಿ’ ಅನ್ನಬಹುದು. ಮೇರಾ ಭಾರತ್ ಮಹಾನ್!
ಎಲ್ಲವೂ ಇಲ್ಲಿ ಸಮ್ಮತವೇ. ಇಷ್ಟೆಲ್ಲಾ ಅವಕಾಶ ಮಾಡಿಕೊಟ್ಟ ಮೇಲೂ ’ವೈವಿಧ್ಯತೆಯಲ್ಲಿ ಏಕತೆ’ ಅಂತಾನೂ ’ಆಯಾ ಪ್ರದೇಶದ ಅನನ್ಯತೆ, ಸಾರ್ವಭೌಮತೆಗಳನ್ನು ಕಾಪಾಡಿಕೊಳ್ಳುವುದೇ ಭಾರತ ದೇಶದ ಹಿರಿಮೆ’ ಅಂತಾನೂ ಪ್ರಪಂಚದ ತುಂಬೆಲ್ಲಾ ಡಾಣಾ ಡಂಗೂರ ಸಾರ್ಕೊಂಡ್ ಬರಬಹುದು. ಮೇರಾ ಭಾರತ್ ಮಹಾನ್!
ಇಂಥಾ ಬೆಳವಣಿಗೆಗಳ್ನ ಮೊಳೆಕೇಲೇ ಕನ್ನಡದ ಜನ ಮತ್ತು ಜನಪ್ರತಿನಿಧಿಗಳು ಚಿವುಟಿ ಹಾಕಿ, ಆ ಜಯಮ್ಮಂಗೆ ’ ಜಯಾ! ಏಯ್ ಕರ್ನಾಟಕ ತೊರೆಯೇ’ ಅನ್ನಬೇಕಾಗಿದೆ ಗುರು.

ಹೊರರಾಜ್ಯಗಳಲ್ಲೂ ಕೆಂಪು-ಹಳದಿ ಗಾಳಿಪಟ

"ಗಾಳಿಪಟ". ಇತ್ತೀಚೆಗೆ ಈ ಪದ ಯಾರಿಗ್ ಗೊತ್ತಿಲ್ಲ? ಮುಂಗಾರುಮಳೆ ಗಣೇಶ್ ಮತ್ತೆ ನಿರ್ದೇಶಕ ಯೋಗರಾಜ್ ಭಟ್ ಇವರಿಬ್ಬರ ಚಮತ್ಕಾರಾನ ಜನ ಮತ್ತೊಮ್ಮೆ ನಿರೀಕ್ಷಿಸಿ ಮೊನ್ನೆ ಈ ಚಿತ್ರ ಬಿಡುಗಡೆಯಾದ ದಿನ ಅದೇನು ನಾಮುಂದು ತಾಮುಂದು ಅಂತ ಚಿತ್ರಮಂದಿರಗಳಿಗೆ ನುಗ್ಗುದ್ರು ಗುರು!

ಈ ವರ್ಷ ಬಿಡುಗಡೆಯಾದ "ಪ್ರೀತಿ ಯಾಕೆ ಭೂಮಿ ಮೇಲಿದೆ?" ಒಟ್ಟು ತೊಂಬತ್ತೊಂಬತ್ತು ಪ್ರತಿ ಬಿಡುಗಡೆ ಆಗಿದ್ದರೆ "ಗಾಳಿಪಟ" ಎಪ್ಪತ್ತೈದು ಪ್ರತಿ ಬಿಡುಗಡೆ ಆಗ್ತಾ ಇದೆ. ಇದು ಹೈದರಾಬಾದ್, ಚೆನ್ನೈ, ಪುಣೆ, ಮುಂಬೈಗಳಲ್ಲೂ ಬಿಡುಗಡೆಯಾಗ್ತಿರೋ ಸುದ್ದಿ ಕನ್ನಡ ಚಲನ ಚಿತ್ರರಂಗದ ಮಾರುಕಟ್ಟೆ ಬೆಳೀತಿರೋ ಶುಭ ಸೂಚನೆಗಳಾಗಿವೆ. ಕನ್ನಡನಾಡಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಅಂತ ವಿತರಣೆಗೆ ತೊಗೊಳೋ ಚಿತ್ರರಂಗದ ಜನ ಹಾಗೇ ಹೊರರಾಜ್ಯದಲ್ಲೂ ಕನ್ನಡಕ್ಕೆ ಮಾರುಕಟ್ಟೆ ಇರುತ್ತೆ ಅಂತ ಇವತ್ತಾದರೂ ಮನವರಿಕೆ ಮಾಡಿಕೊಳ್ತಾ ಇರೋದು ಖುಷಿಯ ವಿಷಯ. ಒಟ್ನಲ್ಲಿ ಕನ್ನಡ ಮನರಂಜನಾ ಕ್ಷೇತ್ರವೆಂಬ ಗಾಳಿಪಟಾನೂ ಹೊಸ ಹೊಸ ಮಾರುಕಟ್ಟೇನ ಬೆಳುಸ್ಕೊಳ್ತಾ ಎಲ್ಲೆಯಿಲ್ಲದ ಅವಕಾಶಗಳ ಆಕಾಶದಲ್ಲಿ ಮತ್ತಷ್ಟು ಎತ್ತರಕ್ಕೇರಿಸಬೇಕು ಗುರು!



ಒಳ್ಳೇ ಫಸಲಾಗೋ ಮೊದಲು ಸುರಿಯೋ ಮಳೆಯಾಗಿ ಕಳೆದ ವರ್ಷ ಮುಂಗಾರುಮಳೆ ಸಖತ್ತಾಗ್ ಹೊಯ್ದಿದ್ದೇ ಹೊಯ್ದದ್ದು, ಹಳೆ ಕೊಳೆಯೆಲ್ಲ ತೊಳೆದುಹೋಗಿ ಝಗಝಗಸ್ತಾ ಇದೆಯೇನೋ ನಮ್ ಕನ್ನಡ ಚಿತ್ರರಂಗ ಅನ್ನೋ ಭರವಸೆಯ ಮಿಂಚುಗಳು ಮೂಡ್ತಾ ಇವೆ.

ದುನಿಯಾ ಮತ್ತು ಮುಂಗಾರುಮಳೆ ಕಳೆದ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರನ್ನು, ಹೊಸ ನಟರನ್ನು, ಹೊಸ ಸಾಹಿತ್ಯಕಾರರನ್ನು ಮಾತ್ರ ಪರಿಚಯ ಮಾಡಿಕೊಡ್ಲಿಲ್ಲ, ಇವು ಕನ್ನಡ ಚಿತ್ರರಂಗಕ್ಕಿರೋ ಬಹುದೊಡ್ದ ಮಾರುಕಟ್ಟೆಯ ಸಾಧ್ಯತೆಯನ್ನೂ ಅನಾವರಣ ಮಾಡಿದವು. ಉತ್ತಮ ಗುಣಮಟ್ಟದ ಸರಕನ್ನು ಉತ್ತಮವಾದ ಮಾರಾಟ ತಂತ್ರದ ಮೂಲಕ ಮಾರುಕಟ್ಟೆಗೆ ತಂದರೆ ಲಾಭಕರ ವಹಿವಾಟು ನಡೆಸೋಕ್ಕೂ ಸಾಧ್ಯ ಅನ್ನೋದನ್ನೂ ತೋರಿಸಿಕೊಡ್ತು. ಇಂದು ಕನ್ನಡ ಚಿತ್ರೋದ್ಯಮ ಒಳ ಮತ್ತು ಹೊರ ನಾಡುಗಳಲ್ಲಿ ನೂರಾರು ಕೋಟಿ ವಹಿವಾಟು ನಡೆಸಲು ಕಾರಣವಾಗಿದೆ.

ಸುಂದರವಾದ ವಿಷ್ಣುವರ್ಧನ್ ನಾಯಕನಾಗಿ, ಅತ್ಯುತ್ತಮವಾದ ನಿರೂಪಣೆ ಹೊಂದಿರೋ ಆಪ್ತಮಿತ್ರಕ್ಕಿಂತ ಹೆಚ್ಚಿನ ಮಾರುಕಟ್ಟೆಯನ್ನು ರಜನಿಕಾಂತರ ಚಂದ್ರಮುಖಿ ಹೇಗೆ ಪಡೆದುಕೊಳ್ಳಲು ಸಾಧ್ಯವಾಯಿತು? ಕನ್ನಡ ಚಿತ್ರರಂಗಕ್ಕೇ ಅಂತಹ ವಿಸ್ತಾರವಾದ ಮಾರುಕಟ್ಟೆ ಕನ್ನಡ ಚಿತ್ರಗಳಿಗೂ ಇದೆ ಎನ್ನುವ ಕಲ್ಪನೆಯೇ ಇರಲಿಲ್ಲವೇನೋ ಅನ್ಸುತ್ತೆ. ಹಿಂದೆಲ್ಲಾ ಯಾವುದು ಅಸಾಧ್ಯವಾಗಿತ್ತೋ ಇವತ್ತು ಅದು ಸಾಧ್ಯವಾಗ್ತಿದೆ. ಕನ್ನಡ ಚಿತ್ರಗಳು ಹೊರನಾಡಿನಲ್ಲಿ, ಹೊರದೇಶಗಳಲ್ಲಿ ಇದೀಗ ಬಿಡುಗಡೆಯಾಗುತ್ತಾ ಇರುವುದು ಒಳ್ಳೆ ಬೆಳವಣಿಗೆ ಗುರು. ಇದು ಕನ್ನಡ ಚಿತ್ರರಂಗದಲ್ಲೇ ಒಂದು ಆತ್ಮವಿಶ್ವಾಸಕ್ಕೆ ಆ ಮೂಲಕ ಹೊಸ ಹೊಸ ಸಾಹಸಗಳಿಗೆ ಪ್ರೇರಣೆಯಾಗಿರುವುದು ನಿಜ.

ಅಯ್ಯಯ್ಯಪ್ಪ!

ಅಯ್ಯಪ್ಪ ಸ್ವಾಮಿಯ ಶಬರಿಮಲೆ ಯಾತ್ರೆ ಬದ್ಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ತಾಲೂಕಿನ ಬೂದಿಗೆರೆ ಹಳ್ಳಿಗರು ಮಾದಪ್ಪನ ಯಾತ್ರೆ ನಡುಸ್ತಾ ಇರೋ ಸುದ್ದಿ ಇವತ್ತಿನ ವಿ.ಕ.ದಲ್ಲಿ ಪ್ರಕಟವಾಗಿದೆ. ಇದು ಅಂಥಾ ದೊಡ್ಡ ಬೆಳವಣಿಗೆಯೇನಲ್ಲ ಅನ್ನಿಸಬಹುದು. ಆದ್ರೆ ನಿಜಕ್ಕೂ ನೋಡುದ್ರೆ ಧರ್ಮದ ಹೆಸರಲ್ಲಿ ಕನ್ನಡಿಗರ ಮೇಲೆ ಆಗ್ತಿರೋ ಭಾಷಾ/ಸಾಂಸ್ಕೃತಿಕ ದಾಳಿಗಳ ಈ ಯುಗದಲ್ಲಿ ಈ ಘಟನೆ ಸಕ್ಕತ್ ಸಂತೋಷ ನೀಡೋಂಥದ್ದು ಗುರು. ಈ ಹಲ್ಲೆಗಳು ಎಂಥವು, ಇದರ ಹೊರಮುಖ ಎಂಥದ್ದು, ಒಳಮುಖ ಎಂಥದ್ದು ಅನ್ನೋದರ ಬಗ್ಗೆ ಒಸಿ ನೋಡ್ಮ.

ಮುಂದೆ ದೇವ್ರು, ಹಿಂದೆ ಮಲಯಾಳಿಗಳ ವಲಸೆ


ಸುಮಾರು ಎಂಬತ್ತರ ದಶಕದ ಆರಂಭದಲ್ಲಿ ಕರ್ನಾಟಕಕ್ಕೆ ಪರಿಚಿತವಾದ ಶಬರಿಮಲೆ ಯಾತ್ರೆ ಮೈಸೂರು, ಬೆಂಗಳೂರುಗಳ ಸುತ್ತಮುತ್ತ ಶುರು ಆಗಿದ್ದು ಸಾಮೂಹಿಕವಾದ ಭಜನೆ, ವಿಭಿನ್ನ ಉಡುಪು, ಕಟ್ಟುನಿಟ್ಟಿನ ಆಚರಣೆಗಳು, ಎಲ್ಲರಿಂದ ಸ್ವಾಮಿ ಅಂತ ಕರೆಸಿಕೊಳ್ಳೋ ಗೌರವ, ಹರಿ ಮತ್ತು ಹರ ಸೇರಿ ಹುಟ್ಟಿದ್ದು ಅಯ್ಯಪ್ಪ ಅನ್ನೋ ಹೊಸ ಥರದ ಪುರಾಣ ಕಥೆಗಳಿಂದ ಜನರ ಗಮನ ಸೆಳೆಯಿತು. ಅದೇ ವೇಳೆಗೆ ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್ ಅವರು ಶಬರಿ ಮಲೈ ಯಾತ್ರೆಗೆ ಹೋಗುವ ಪರಿಪಾಠ ಆರಂಭಿಸಿದ್ದು, ಜೊತೆಗೊಂದೆರಡು ಅಯ್ಯಪ್ಪ ಭಜನೆಯ ಧ್ವನಿಸುರುಳಿ ಹೊರತಂದಿದ್ದು ಈ ಸಬರಿಮಲೈ ಯಾತ್ರೆ ಕನ್ನಡನಾಡಲ್ಲಿ ಬೇರೂರಲು ಕಾರಣವಾಯಿತು. ಇದೀಗ ಇದರ ವ್ಯಾಪ್ತಿ ಚಾಮರಾಜ ನಗರದಿಂದ ಬೀದರ ತನಕದ ಪ್ರತಿ ಊರಿಗೂ ಹರಡಿದೆ. ಎಲ್ಲ ಕಡೆಯಲ್ಲೂ ಡಿಸೆಂಬರ್-ಜನವರಿ ಬಂತೆಂದರೆ "ಸಾಮಿಯೇ ಸರಣಂ ಅಯ್ಯಪ್ಪ" ಎನ್ನುವ ಉದ್ಘೋಷ ಮೊಳಗುತ್ತದೆ.

ಆದ್ರೆ ಈ ಅಯ್ಯಪ್ಪ ಯಾತ್ರೆಯ ಹೆಸರಲ್ಲಿ ಮಲಯಾಳಿ ಸಂಸ್ಕೃತಿ ಹೇಗೆ ಕರ್ನಾಟಕಕ್ಕೆ ನುಗ್ತಿದೆ ಅಂತ ನೋಡೋಣ. ಇವತ್ತಿನ ದಿನ ಬೆಂಗಳೂರಿನ ವಸಂತನಗರದ ಅಯ್ಯಪ್ಪ ದೇಗುಲ, ಪೀಣ್ಯ ದಾಸರಹಳ್ಳಿಯ ಅಯ್ಯಪ್ಪ ದೇಗುಲಗಳು ಬರಿಯ ಭಕ್ತಿ ಕೇಂದ್ರಗಳಾಗದೆ ವಲಸೆ ಬರುವ ಮಲಯಾಳಿಗಳಿಗೆ ಮಹಾಮನೆಯಾಗಿವೆ. ಒಂದು ಅಯ್ಯಪ್ಪ ದೇವಸ್ಥಾನದ ಸುತ್ತ ನೂರಾರು ಮಲಯಾಳಿ ಕುಟುಂಬಗಳು ನೆಲೆಸಲು ಕಾರಣವಾಗಿವೆ.

ಸಾಂಸ್ಕೃತಿಕ ಮತ್ತು ಭಾಷಾ ದಾಳಿಗಳು ನಿಲ್ಲಬೇಕು


ಶಿರಡಿ ಬಾಬಾ ಆಗಲಿ, ಕರುಮಾರಿಯಮ್ಮನೇ ಆಗ್ಲಿ, ಸಬರಿಮಲೈ ಸಾಮಿ ಅಯ್ಯಪ್ಪನೇ ಆಗ್ಲಿ ಬರೀ ದೇವರಾಗಿ ಬಂದ್ರೆ ಅಡ್ಡಿಯಿಲ್ಲ. ಅವರನ್ನು ಕನ್ನಡದಲ್ಲಿ ಪೂಜಿಸೋಣ, ಕನ್ನಡದಲ್ಲಿ ಭಜಿಸೋಣ, ನಮ್ಮ ಥರಾ ಆಚರಣೆಗಳನ್ನು ನಡೆಸೋಣ. ಆದರೆ ಆಯಾ ಭಗವಂತರುಗಳ ಜೊತೆ ಆಯಾ ಭಾಷೆಗಳು, ಆಯಾ ಆಚರಣೆಗಳು, ಆಯಾ ಸಂಸ್ಕೃತಿಗಳು ನುಗ್ಗೋದು ಮಾತ್ರ ಸರಿಯಲ್ಲ ಗುರು. ಬೆಂಗಳೂರಿನ ಮಲ್ಲೇಶ್ವರ, ನರಸಿಂಹರಾಜ ಕಾಲೋನಿ ಸಾಯಿಬಾಬಾ ದೇವಸ್ಥಾನದಲ್ಲಿ ಹಿಂದೀಲಿ ಭಜನೆ ನಡ್ಯುತ್ತೆ, ಒಂದು ಕಾರ್ಯಕ್ರಮ ಅಂತ ನಡುದ್ರೆ ಹಿಂದೀ ಬ್ಯಾನರ್ ಹಾಕ್ತಾರೆ, ಮಲ್ಲೇಶ್ವರದಲ್ಲಿ ಕರುಮಾರಿಯಮ್ಮನ ಉತ್ಸವಾ ಅಂತ ತಮಿಳು ಹಾಡುಗಳನ್ನು ಹಾಕ್ಕೋಂಡು, ಸಂಪೂರ್ಣ ತಮಿಳು ವಾತಾವರಣ ಹುಟ್ ಹಾಕಿ ವಾರಗಟ್ಲೆ ಕಾರ್ಯಕ್ರಮ ಮಾಡ್ತಾರೆ.

ಅಯ್ಯಪ್ಪನ ಹೆಸರಲ್ಲಿ ತಿಂಗಳುಗಟ್ಲೆ ಕನ್ನಡಿಗರ ನಾಲಗೆಯಲ್ಲಿ "ಜಲ್ಲಿ ಕಟ್ಟು ಸಬರಿಮಲಕ್ಕು, ಕಲ್ಲುಂ ಮುಳ್ಳುಂ ಕಾಲಿಗೆ ಮೆಟ್ಟು" ಅಂತ ಪದ ಹಾಡುಸ್ತಾರೆ. ಬಡಾವಣೆಗಳಲ್ಲಿ ಆಯಾ ದೇವರ ದೇವಸ್ಥಾನ ಎಬ್ಬುಸ್ತಾರೆ, ಆಯಾ ಬಡಾವಣೆಗೆ ವಲಸೆ ಬಂದು ಮಿನಿ ಕೇರಳ, ಮಿನಿ ತಮಿಳುನಾಡು ಕಟ್ಕೋತಾರೆ. ಭಾಷಾ ಅಲ್ಪಸಂಖ್ಯಾತರು ಅಂತ ಸರ್ಕಾರಿ ಸವಲತ್ತು ಪಡೆದು ಛತ್ರ, ವಿದ್ಯಾಸಂಸ್ಥೆ ಅದೂ ಇದೂ ತೆಗೆದು ಅಲ್ಲೂ ತಮ್ಮೂರಿನ ಸಂಸ್ಕೃತಿಯನ್ನು ಕನ್ನಡದ ಮಕ್ಕಳ ತಲೆಗೆ ತುಂಬ್ತಾರೆ.

ಕನ್ನಡದ ಜನಕ್ಕೆ ಧರ್ಮಸ್ಥಳ ಮಂಜುನಾಥ, ಉಡುಪಿ ಕೃಷ್ಣ, ಎಡ್ಯೂರು ಸಿದ್ಧಲಿಂಗಪ್ಪ. ಉಳವಿ ಬಸಪ್ಪ, ಸವದತ್ತಿ ಎಲ್ಲಮ್ಮ, ಬಿಳಿಗಿರಿ ರಂಗಪ್ಪ, ಮಲೆ ಮಾದಪ್ಪಾ, ನಂಜನಗೂಡಿನ ನಂಜಪ್ಪಾ, ಮಂಚಾಲೆ ರಾಗಪ್ಪಾ... ಸಾಲ್ದಾ ಉಘೇ ಅನ್ನಕ್ಕೆ? ನಮ್ಮ ಊರು ಕಾಪಾಡಕ್ಕೆ ಅಂತಲೇ ಅಣ್ಣಮ್ಮ, ಜಲಗೇರಮ್ಮನಿಂದ ಹಿಡ್ದು ಪ್ಲೇಗಮ್ಮನ ತಂಕಾ ನೂರಾರು ಅಮ್ಮಂದಿರು ಇರೋವಾಗ ಇನ್ನೊಬ್ಬ ಕರುಮಾರಿಯಮ್ಮ ಬೇಕಾ? ಏನ್ ಗುರು?

ರೈಲ್ವೆ ಇಲಾಖೆ ಇರೋದು ಕರ್ನಾಟಕಕ್ಕೆ ವಲಸಿಗರನ್ನ ತಂದು ತುಂಬಕ್ಕಾ?

ಕರ್ನಾಟಕದಲ್ಲಿ ರೈಲ್ವೇ ಇಲಾಖೆ ಕನ್ನಡಿಗನಿಗೆ ಮಾಡ್ತಿರೋ ಅನ್ಯಾಯ ಇತ್ತೀಚಿನ ’ಡಿ’-ಗುಂಪಿನ ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಮೂಲಕ ಬಯಲು ಆಗಿದೆಯಷ್ಟೆ? ಈ ಸಂದರ್ಭದಲ್ಲಿ ಇಂತಹ ಅನ್ಯಾಯಗಳ ಒಂದು ಸರಪಳಿಯನ್ನೇ ಇತ್ತೀಚಿನ ಇತಿಹಾಸದಲ್ಲಿ ಕಾಣ್ಬೋದು. ಈಗಾಗ್ಲೇ ಇಲಾಖೆಯು ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಕೈಗೆತ್ತಿಕೊಂಡಿರೋ ಯಾವುದೇ ಯೋಜನೆಯ ಲಾಭವೂ ಕರ್ನಾಟಕಕ್ಕೆ ಸಂದಿಲ್ಲ. ಇಂತಹ ಅನ್ಯಾಯಗಳ ಹಿಂದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕರ್ನಾಟಕಕ್ಕೆ ಹೊರರಾಜ್ಯಗಳ ಜನರ ವಲಸೆ ಮಿತಿಮೀರಿಹೋಗಿದೆ ಗುರು!

ಅಲ್ಲಾ, ಬೆಂಗಳೂರು ಮಂಗಳೂರುಗಳ ಮಧ್ಯ ರೈಲು ಹಾಕಿ, ಹಾಕಿ ಅಂತ ವರ್ಷಗಳಿಂದ ಬಡ್ಕೊಂಡ ಮೇಲೆ, ಏನೋ ದೊಡ್ಡ ಕೆಲ್ಸ ಮಾಡಿದ ಹಾಗೆ ವರ್ಷಗಳ ನಂತರ ಈ ರೈಲನ್ನ ಬಿಡುಗಡೆ ಮಾಡಿದ್ರು ನಮ್ಮ ಲಾಲೂ ಸಾಹೇಬ್ರು. ಆದ್ರೆ ಮಂಗಳೂರಿಗೆ ಈಗಾಗ್ಲೇ ಹಲವಾರು ವರ್ಷಗಳಿಂದ ಚೆನ್ನೈಯಿಂದ, ಕೇರಳದಿಂದ ಹಲವಾರು ರೈಲುಗಳು ಅಲ್ಲಿಯ ಜನರನ್ನ ತಂದು ಸೇರಿಸ್ತಿದೆ ಅಂತ ನಿಮಗೆ ಗೊತ್ತಾ? ಇದರಿಂದ ತಮಿಳುನಾಡಿನ ಹಾಗೂ ಕೇರಳದ ಜನರಿಗೆ ಉಪಯೋಗ ಆಗಿದೆ ಹೊರತು ಕನ್ನಡದವರಿಗೆ ಒಂದು ಬಿಡಗಾಸು ಉಪ್ಯೋಗವೂ ಇಲ್ಲ. ಆದರೆ ಇಂತಹ ಬೆಳವಣಿಗೆಗಳಿಂದ ಹುಟ್ಟಿರೋ ವಲಸೆ ಸಮಸ್ಯೆಯಿಂದ ಮಂಗಳೂರಿನ ಜನರಿಗೆ ಆಗ್ತಿರೋ ಕಷ್ಟಗಳು ಮಾತ್ರ ತಪ್ಪಿದ್ದಲ್ಲ ಗುರು (ಹೆಚ್ಚಿನ ಓದಿಗೆ ಓದಿ: 1, 2)

ಇತ್ತೀಚೆಗೆ ಬೆಂಗಳೂರಿಗೆ ದೂರದ ರಾಜಾಸ್ಥಾನದ ಅಜ್ಮೀರದಿಂದ ಬರುತ್ತಿದ್ದ ರೈಲನ್ನು ಮೈಸೂರಿನವರೆಗೂ ವಿಸ್ತರಣೆ ಮಾಡ್ಸಿದೀವಿ ಅಂತ ಇಲ್ಲಿಯ ರೈಲ್ವೇ ಇಲಾಖೆಯೋರು ಹೆಮ್ಮೆಯೇನೋ ಪಟ್ರು, ಆದ್ರೆ ಇದ್ರಿಂದ ಕರ್ನಾಟಕಕ್ಕೆ ಯಾವ ಮಣ್ಣು ಲಾಭ ಆಯ್ತು? ಬೆಂಗಳೂರು ಮೈಸೂರಿನಲ್ಲಿ ಇನ್ನಷ್ಟು ಹೆಚ್ಚಾದ ರಾಜಾಸ್ಥಾನ ಮೂಲದ ದಿನಗೂಲಿ ಕೆಲಸಗಾರರು. ಅಂದು ಅಲ್ಲಿ ವಲಸಿಗ ದಿನಗೂಲಿ ಕೆಲಸಗಾರರು, ಇಂದು ರಾಜ್ಯದೆಲ್ಲೆಡೆ ಡಿ-ಗುಂಪಿಗೆ ಬಿಹಾರಿ ವಲಸಿಗರು! ಆದ್ರೆ ವಾಣಿಜ್ಯಕ್ಕೆ ಹೆಸರಾದ ಮಂಗಳೂರು ಮತ್ತೆ ಹುಬ್ಬಳ್ಳಿಯ ಮಧ್ಯ ಇನ್ನೂ ಇಲ್ಲದ ರೈಲಿಗಿಂತಲೂ ಈ ಅಜ್ಮೀರದ ರೈಲು ಮುಖ್ಯವೇ ಗುರು?

ಕರ್ನಾಟಕದಲ್ಲಿ ಕನ್ನಡಿಗನಿಗೆ ಅನ್ಯಾಯವಾದಂತಹ ಇಂತಹ ನೂರಾರು ಉದಾಹರಣೆಗಳು ಕಂಡು ಬರತ್ತೆ ಗುರು! ಇವೆಲ್ಲದರ ಮಧ್ಯ ಕೇಂದ್ರ ರೈಲ್ವೇ ಇಲಾಖೆಯು ಕರ್ನಾಟಕಕ್ಕೆ ಹೊರರಾಜ್ಯಗಳಿಂದ ಸತತವಾಗಿ ವಲಸಿಗರನ್ನು ತಂದು ಹಾಕುವ ಬಂಡಿಯಾಗಿ ತೋರಿದೆ ಗುರು! ಕರ್ನಾಟಕದಲ್ಲಿ ಕೇಂದ್ರ ಸ್ವಾಮ್ಯದ ರೈಲ್ವೇ ಇಲಾಖೆಯ ಕಚೇರಿಗಳಲ್ಲಿ ಸುಮಾರು ಹೊರರಾಜ್ಯದ ಜನರು ಕೆಲ್ಸ ಮಾಡ್ತಿರೋದನ್ನ ನೋಡಿದ್ರೇ ಈ ಬಿಹಾರಿಗಳಿಗೆ ಮಣೆ ಹೆಂಗೆ ಸಿಕ್ತು ಅಂತ ಗೊತ್ತಾಗತ್ತೆ ಅಲ್ವ ಗುರು?!

ರೈಲು ಸಮಸ್ಯೆಗೆ ಕನ್ನಡದ್ ದಾಸಯ್ಯನ ಪರಿಹಾರ

ನೈಋತ್ಯ ರೈಲ್ವೇ ಇಲಾಖಿ, ಇಡೀ ಕನ್ನಡದ ಮಂದೀನ ಹಾದಿ ತಪ್ಸಾಕ್ ಹತ್ತದಾ ಅಂತ ಮಂದಿ ಮುಂದ ನಮ್ ದಾಸಯ್ಯಾ ಶಂಖ ಹೊಡ್ಕೋತಾ ಹೊಂಟಾನ್ರಿ ಯಪಾ. ಅವಾ ಅಂತಾನಾ...
ಅಸ್ಸಾಮದಾಗಿನ ಅನ್ಯಾಯ

ಈ ಅನ್ಯಾಯ ನಮಗ್ ಮಾತ್ರಾ ಅಲ್ಲ ಬ್ಯಾರೀ ಕಡಿಗೂ ನಡೆದೈತ್ರಿ. ತುಸಾ ದಿನದ್ ಹಿಂದಾ ರೈಲ್ವೇ ವಿರುದ್ಧ ಅಸ್ಸಾಮದಾಗ ನಡೆದ ಭಯಂಕರ ಹೋರಾಟಕ್ಕ ಈ ರೇಲ್ವೇ ಇಲಾಖಿಯೋರು ಹೊರಗಿಂದ ಮಂದೀನಾ ಕರ್ಕೊಂಡು ಬಂದದ್ದೇ ಕಾರಣ ಅಂತ್ರೀಪಾ. ಅಸ್ಸಾಮದಾಗ ಖಾಲಿ ಇದ್ದ ರೇಲ್ವೆ ಕೆಲ್ಸದಾಗ ಆಗ್ಲೂ ಬಿಹಾರದಿಂದ ಮಂದಿನ್ ಕರ್ಕೊಂಡ್ ಹೋಗಿ ತುಂಬಾಕ್ ಹತ್ತಿದ್ರಂತ. ಅಸ್ಸಾಮದಾಗಿನ ಮಂದಿ ಜೋರು ಪ್ರತಿಭಟನೆ ನಡ್ಸುದ್ರಂತಾ. ಕನ್ನಡದ ಮಣ್ಣಿನ ಮಕ್ಕಳ್ರಾ, ನಿಮ್ ಮನೀಗೂ ಈ ಹಿಂದಿ ಮಾರಿ ಹೊಕ್ ಕುಂತದಾ. ಅದು ಬರಿ ನಿಮ್ಮ ಮಕ್ಕಳ ನೌಕರೀ ಮಾತ್ರಾ ಕಸ್ಗೊಳಂಗಿಲ್ಲಾ, ನಿಮ್ಮ ಭಾಷೀ, ನಿಮ್ ಸಂಸ್ಕೃತಿ, ನಿಮ್ಮ ಆಚರಣಿ ಎಲ್ಲಾ ನುಂಗ್ತದಾ. ಈಗಾರ ನೀವ್ ಏನ್ ಆ ಮಾರೀನ್ ಒದ್ದು ಹೊರಗ್ ಹಾಕೋರೋ ಅಥ್ವಾ ಮನೀ ಒಳಗ ಗಪ್ಪನೆ ಕೂಡೋರೊ ಅಂತಾನಂತ್ರಿ ಅವ.

ಮಹಾರಾಷ್ಟ್ರದಲ್ಲಿನ ಮೋಸಾ
ನಿನ್ನೀ ಮೊನ್ನೀ ಕೂಡಾ ಬಾಜೂಕಿನ್ ಮಾರಾಷ್ಟ್ರದಾಗ ಇಂಥದೇ ನಡೆದಿತ್ರಿ ಯಪಾ. ಪುಣೆಯಾಗಿನ ನೇಮಕಾತಿ ಪರೀಕ್ಷಾದಾಗ ಬರೀ ಬಿಹಾರಿ, ಉತ್ತರ ಪ್ರದೇಶದ ಮಂದಿಗ ನೌಕರಿ ಕೊಡಾಕ್ ಹತ್ಯಾರ ಅಂತ ಪುಣೇನಾಗೂ ಪ್ರತಿಭಟನೆ ನಡೆದಿತ್ತಂತ. ಇಂಥಾ ಹೋರಾಟ ಎದುಕ್ ನಡೀತವಾ ಅಂತ ತಿಳ್ಕೋರೀ... ನೀವ್ ಏನಾ, ಇನ್ನೂ ನಿದ್ದೀ ಮಾಡೋ ಮಂದೀನೋ ಇಲ್ಲಾ ಎದ್ದು ಹೊರಗ್ ಬರ್ತೀರೋ ಅಂತ ಅವ ಊರೂರು ಅಲ್ಕೊಂಡು ಹೊಂಟಾನಂತ್ರೀಪಾ.

ಕೇಂದ್ರ ಮಂತ್ರಿ ಒಪ್ಪಿದ ಸತ್ಯ
ಕಂಡ ಕಂಡ ಮಂದೀಗೆಲ್ಲಾ ನೋಡ್ರೀ, ಕೇಂದ್ರದ ಮಂತ್ರೀನೇ ಇಂಥಾ ಪಕ್ಷಪಾತ ನಡೀತೈತಿ ಅಂತ ಮಾತಾಡ್ಯಾರೆ ಅಂತ ವೇಲೂ ಮಾಮ ಕಡೀ ಬೆಳ್ ಮಾಡ್ತಾನಂತ್ರಿ. ಕನ್ನಡ್ ಮಂದಿ ಕಣ್ ಮುಚಗೊಂಡು ಕುಂತ್ರ ನಾಳಿ ನಿಮ್ಮ ಮಕ್ಳು ಮರೀಗ ಗುಲಾಮಗಿರಿ ಗಟ್ಟಿ ಅಂತಾನಂತ್ರೀಪಾ.
ನಮ್ಮೂರ ಕೆಲ್ಸ ನಮ್ಮೋರ ಹಕ್ಕು
ಈ ಅನ್ಯಾಯ ಸರಿ ಹೋಗ್ಬೇಕ್ ಅಂದ್ರಾ ಒಕ್ಕೂಟ ವ್ಯವಸ್ಥಿ ಅನ್ನೋದಾ ತುಸ ರಿಪೇರಿ ಆಗ್ಬೇಕಾಗೈತಿ. ಆಯಾ ರಾಜ್ಯದಾಗಿನ ಖಾಲೀ ಕೆಲ್ಸಾ ಎಲ್ಲಾ ಆಯಾ ರಾಜ್ಯದ ಮಕ್ಕಳಿಗೇ ಸಿಗಬೇಕ್ರೀ. ನಮ್ಮೂರಾಗ್ ಅಂಥಾ ಯೋಗ್ಯತೀ ಇರೋ ಮಂದಿ ಇಲ್ಲಾ ಅನ್ನೋದ ಸಾಬೀತಾತಂದ್ರ ಮಾತ್ರಾ ತಾತ್ಕಾಲಿಕವಾಗಿ ಹೊರಗಿನ ರಾಜ್ಯದವರಿಗೆ ಉದ್ಯೋಗ ಕೊಟ್ರೂ ಅಡ್ಡಿ ಇಲ್ಲ. ಹಾಂ ಮತ್ ಮರೀದೆ ಮುಂದಾ ನಮ್ ಮಂದಿಗ ಅಂಥಾ ಯೋಗ್ಯತಿ ಬರಿಸೋ ಏರ್ಪಾಡು ಮಾಡೋ ವ್ಯವಸ್ಥಾನೂ ಇರಬೇಕು. ಕರ್ನಾಟಕದಾಗ ಈಗ ನಡೀಲಿಕ್ ಹತ್ತಿರೋ ಚಳವಳಿ ಇಂಥಾ ಒಂದು ನೀತಿ ರೂಪ್ಸಕ್ ಕಾರಣ ಆಗಬೇಕ್ರೀಪಾ. ನಮ್ ನಾಡಾಗ್ ಹೊತ್ತೋ ಈ ದೀಪ ಇಡೀ ಭಾರತಾನ ಬೆಳಗೋ ಹಾಗ್ ಮಾಡೋಣು... ಕನ್ನಡಾ ಕನ್ನಡಾ.. ಬರ್ರಿ ನಮ್ಮ ಸಂಗಡ ಅಂತಾ ಊರೂರು ಕೇರಿಕೇರಿ ಶಂಖಾ ಹೊಡ್ಕೊಂತಾ, ಜಾಗಟಿ ಬಡಕೊಂತಾ ಹೊಂಟಾನ್ರಿ ಆ ದಾಸಯ್ಯಾ

ಇಕಾ ತುಸಾ ಬಾಗ್ಲಾ ತೆಗ್ದು ಹೊರಗ್ ಬರ್ರಿ, ನಿಮ್ ಮನಿ ಮುಂದೂ ಬಂದಾ ಅಂತ ಕಾಣ್ತೈತಿ.

ರೈಲ್ವೇ ಹುದ್ದೆಗಳ ವಿಷಯದಲ್ಲಿ ಕನ್ನಡಿಗರಿಗೆ ಮೋಸ - ಒಂದು ವಿಶ್ಲೇಷಣೆ

ಹುಬ್ಬಳ್ಳೀಲಿ ನೈಋತ್ಯ ರೈಲ್ವೆಯ "ಡಿ" ಗುಂಪಿನ ಹುದ್ದೆಗಳಿಗೆ ಬಿಹಾರಿಗಳು ಬಂದು ತುಂಬ್ಕೋತಿರೋದು, ಅದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾಗಿ ಪ್ರತಿಭಟನೆ ಮಾಡ್ತಿರೋದು - ಇದನ್ನೆಲ್ಲ ನೀವು ಮಾಧ್ಯಮಗಳಲ್ಲಿ ನೋಡೇ ಇರ್ತೀರಿ. ಮೇಲ್ನೋಟಕ್ಕೆ ಇದು ಅಂಥಾ ಹೇಳ್ಕೊಳೋ ಸುದ್ದಿಯೇನಲ್ಲ ಅನ್ನಿಸಬಹುದು. ಆದರೆ ನಿಜಕ್ಕೂ ನೋಡುದ್ರೆ ಇದೊಂದು ಘಟನೆಯಿಂದ ಕನ್ನಡಿಗನ ಮುಂದಿರೋ ಸವಾಲುಗಳಲ್ಲಿ ಎಷ್ಟೋಂದು ಅರ್ಥವಾಗುತ್ತವೆ.

ಔರು ಬಂದಿದ್ದು ಯಾಕೆ? ನಾವು ಬಿಟ್ಟಿದ್ದು ಯಾಕೆ?

ಬಿಹಾರಿಂದ ಈ ಹುದ್ದೆಗಳಿಗೆ ತುಂಬ್ಕೊಳಿ ಅಂತ ಬಿಹಾರಿಗಳಿಗೆ ಹೇಳ್ಕೊಟ್ಟು ಕಳಿಸೋದು ಅಥವಾ ಔರು ಬಂದು ತುಂಬ್ಕೊಳೋ ಪ್ರಯತ್ನ ಮಾಡೋದು ಭಾರತೀಯ ಸಂವಿಧಾನಕ್ಕೆ ಬಾಹಿರವೇನಲ್ಲ (ಔರಿಗೋಸ್ಕರ ವಿಶೇಷವಾದ ರೈಲುಗಳ್ನ ಹಾಕಿ ಲಾಲೂ ಯಾದವ್ ಕಳ್ಸಿದಾರೆ ಅನ್ನೋ ಕೆಲವರ ಊಹೆ ನಿಜವಾದ್ರೆ ಅದ್ ಬೇರೆ ವಿಷಯ). ಸಂವಿಧಾನಬಾಹಿರವಾಗದೆ ಇರೋದು ಸರೀನೋ ಅಲ್ಲವೋ, ಅನಿಯಂತ್ರಿತ ವಲಸೆ ತಡೆಗಟ್ಟೋ ಕಾನೂನೊಂದು ಬರಬೇಕೋ ಬೇಡವೋ ಅನ್ನೋ ಚರ್ಚೆ ಈಗ ಬೇಡ. ಒಟ್ನಲ್ಲಿ ಔರು ಬಂದ್ರು ಅಂದ್ಮೇಲ್ ಬಂದ್ರು. ನಮ್ಮ ಹುದ್ದೆಗಳ್ನ ಕಿತ್ಕೊಳಕ್ಕೆ, "ಈ ಪೆದ್ದಮುಂಡೇವ್ಗೆ ತಮ್ಮ ಅನ್ನ ಕಿತ್ಕೊಂಡ್ ಹೋಗ್ತಿದ್ರೂ ಗೊತ್ತಾಗಲ್ಲ, ನಾವಾರೂ ತಿಂಬೋಣ" ಅಂತ ಬಂದ್ರು.

ಆದ್ರೆ ಹಾಗೆ ಔರು ಬಂದಿದ್ದರ ಹಿಂದೆ ಏನೇನಿದೆ ಗೊತ್ತಾ? ಒರಿಗೋಸ್ಕರ, ಇಲ್ಲಿ (ಅಂದ್ರೆ ಕನ್ನಡದ ನಾಡಲ್ಲಿ) ಔರ ಭಾಷೇಲಿ ಮಾತ್ರ ಅರ್ಜಿ ತುಂಬಬೇಕು ಅಂತ ಹೇಳೋ ವ್ಯವಸ್ಥೆ ಇದೆ; ಔರಲ್ಲಿ ಒಬ್ಬನಾಗಿರೋ ಕೇಂದ್ರ ರೈಲ್ವೇ ಮಂತ್ರಿ ಇದಾರೆ; ಔರು ಬಂದು ಇಲ್ಲಿ ನಮ್ಮ ಹುದ್ದೆಗಳ್ನ ನುಂಗ್ಕೊಂಡು ಇಲ್ಲೇ ತಳ ಊರಿ ಇಲ್ಲೀ ನಾಡು-ನುಡಿ-ನಡೆಗಳ್ನ ಚಿಂದಿ-ಚಿತ್ರಾನ್ನ ಮಾಡ್ತಾ ಇದ್ರೂ ಔರ್ನ "ಇವರೂ ಭಾರತೀಯರಲ್ವೇ?" ಅಂತ ಕೇಳ್ಕೊಂಡು ಔರ್ನ ಔರ್ ಭಾಷೇಲೇ ಮಾತಾಡಿಸಿ ತಲೇಮೇಲೆ ಕೂರುಸ್ಕೊಳೋ ಮೂರ್ಖಶಿಖಾಮಣಿಗಳಾದ ನಾವಿದೀವಿ; ಇಡೀ ವೋಟ್ ಬ್ಯಾಂಕ್ ಕನ್ನಡಿಗರದೇ ಆಗಿದ್ದರೂ ಕನ್ನಡಿಗರಿಗೆ ಆಗ್ತಿರೋ ಅನ್ಯಾಯ ತಡಿಯಕ್ಕಾಗದೇ ಇರೋಂಥಾ ನರಸತ್ತ ಕನ್ನಡದ ರಾಜಕಾರಣಿಗಳಿದಾರೆ; ಔರ್ನ ದಿಲ್ಲೀದಾಸರಾಗಿ ಬಾಳಿಡೀ ಜೀತಕ್ಕೆ ಇಟ್ಕೊಂಡಿರೋಂಥಾ "ರಾಷ್ಟ್ರೀಯ" ಪಕ್ಷಗಳಿವೆ. ಇವೆಲ್ಲ ಇವೆ. ಅದಕ್ಕೇ ಔರು ಬಂದ್ರು, ನಾವು ಬಿಟ್ವಿ.

ರಾಜಕೀಯ ಪಕ್ಷಗಳು ಕಣ್ಣು ಬಿಟ್ಟಿವೆಯಾ?

ಈ ವಿಷಯದಲ್ಲಿ ಮೊದಲು ಎಚ್ಚೆತ್ತುಕೊಂಡು ಇದನ್ನ ತಡೀದೇ ಇರಕ್ಕಾಗಲ್ಲ ಅಂತ ಮುನ್ನುಗ್ದೋರು ಕರ್ನಾಟಕ ರಕ್ಷಣಾ ವೇದಿಕೆಯೋರು ಮಾತ್ರ. ಈ ವಿಷಯ ಏನು, ಇದರಿಂದ ಕನ್ನಡಿಗರಿಗೆ ಆಗ್ತಿರೋ ಮೋಸ ಏನು, ಇದರಿಂದ ನಾಡಿಗೆ ಹೇಗೆ ಕೆಡಕುಂಟಾಗ್ತಿದೆ, ಇದನ್ನ ತಡೆಗಟ್ಟೋದ್ರಲ್ಲಿ ತಮ್ಮ ಪಾತ್ರ ಏನು ಅಂತ ಅರ್ಥ ಮಾಡ್ಕೊಳಕ್ಕೆ ಬೇಕಾಗಿರೋ ಬುದ್ಧಿ ಯಾವ ರಾಜಕೀಯ ಪಕ್ಷಕ್ಕೂ ಮೊದಲು ಚಿಗುರಲಿಲ್ಲ. ವೇದಿಕೆಯೋರು ಈ ವಿಷಯದಲ್ಲಿ ಜಗ್ಗಲ್ಲ ಅಂದಾಗ, ಮಾಧ್ಯಮಗಳು ಒಂದೇತಪ್ಪ ಇದರ ಬಗ್ಗೆ ಬರೆದಾಗಲೇ ಚಿಗುರಿದ್ದು. ಒಟ್ನಲ್ಲಿ ಈ ವಿಷಯದಲ್ಲಂತೂ ವೇದಿಕೆಯೋರು ಕೊನೆಗೂ ಕರ್ನಾಟಕದ ರಾಜಕೀಯ ಪಕ್ಷಗಳಿಗೆ "ನೀವು ಕನ್ನಡದ ಪಕ್ಷಗಳಾಗಿ" ಅನ್ನೋ ಪಾಠಾನ ಅತ್ತು ಕರೆದು ಏಟು ತಿಂದು ಜೈಲಿಗೆ ಹೋಗಿ ಹೇಳ್ಕೊಟ್ಟಂಗಾಯ್ತು!

ಕನ್ನಡಿಗರು ಒಗ್ಗೂಡಿ ವಿರೋಧಿಸಬೇಕು

ಕೊನೆಗೆ ಈ "ಡಿ" ಹುದ್ದೆಗಳಲ್ಲಿ ಎಷ್ಟು ನಿಜಕ್ಕೂ ಕನ್ನಡಿಗರಿಗೇ ಸಿಗತ್ವೆ ಅನ್ನೋದು ಪ್ರಶ್ನೆ. ಕಾದು ನೋಡೋ ಬದ್ಲು "ಅಷ್ಟೂ ಕನ್ನಡಿಗರಿಗೇ ಕೊಟ್ರೆ ಸರಿ, ಇಲ್ದೇ ಇದ್ರೆ ಸುಮ್ನಿರಕ್ಕಿಲ್ಲ" ಅನ್ನೋ ಕೂಗ್ನ ಕನ್ನಡಿಗರೆಲ್ಲಾ ಕೂಗಬೇಕು, ವ್ಯವಸ್ಥೆಯಲ್ಲಿರೋ ಹುಳುಕುಗಳ್ನ ಉಪಯೋಗಿಸಿಕೊಂಡು ಬಿಹಾರಿಗಳ್ನ ಛೂ ಬಿಡೋರಿಗೆ ಕ್ಯಾಕರಿಸಿ ಉಗೀಬೇಕು. ಏನ್ ಗುರು?

ಬೆಂಗಳೂರಿಗೆ ಉದ್ದಿಮೆ ಕಾರಿಡಾರ್: ಲಾಭ ಮಾತ್ರಾ ಚೆನ್ನೈಗೆ

ದಿಲ್ಲಿ-ಮುಂಬೈ ನಡುವೆ ಉದ್ದಿಮೆ ಕಾರಿಡಾರ್ ಯೋಜಿಸಿರೋ ಹಾಗೆ ದಕ್ಷಿಣ ಭಾರತದಲ್ಲೂ ಒಂದು ಉದ್ದಿಮೆ ಕಾರಿಡಾರ್ ಮಾಡೋ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿರೋ ಸುದ್ದಿ ನಮ್ಮ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತೆ ಗುರು. ಆದ್ರೆ ಈ ಕಾರಿಡಾರು ನಾಡಿಗೆ ಲಾಭ ತರ್ಬೇಕು ಅಂದ್ರೆ ಅದು ಚೆನ್ನೈ -ಬೆಂಗಳೂರು ಮಧ್ಯೆ ಅಲ್ಲಾ ಪುಣೆ - ಬೆಂಗಳೂರು ನಡುವೆ ಆಗಬೇಕು. ಅದೆಂಗಪ್ಪಾ ಅಂತ ವಸಿ ನೋಡ್ಮಾ ಬನ್ನಿ.

ಚೆನ್ನೈ-ಬೆಂಗಳೂರು ಕಾರಿಡಾರಿಗೆ ಹೂಂ ಅಂದ್ರೆ ಕನ್ನಡಿಗರ ಕೈಗೆ ಚಿಪ್ಪೇ ಗತಿ.
ಕೈಗಾರಿಕಾ ಕೇಂದ್ರವನ್ನಾಗಿ ಹೊಸೂರನ್ನು ಬೆಳೆಸಿದ ತಮಿಳುನಾಡು ಹತ್ತಿರದ ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ಮುಂತಾದ ಸೌಕರ್ಯಗಳನ್ನು ಬಳಸಿಕೊಂಡೇ ಉದ್ಧಾರವಾಗಿ ಹೋಯಿತು. ಟೈಟಾನ್, ಅಶೋಕ್ ಲೈಲ್ಯಾಂಡ್, ಟಿವಿಎಸ್ ಮುಂತಾದ ಸಂಸ್ಥೆಗಳು ಅಲ್ಲಿ ಪ್ರಾರಂಭವಾದರೂ ಕನ್ನಡಿಗರಿಗೆ ಉದ್ಯೋಗಾವಕಾಶಗಳೂ ಗಿಟ್ಟಲಿಲ್ಲ, ಕರ್ನಾಟಕಕ್ಕೆ ಕಿಲುಬುಕಾಸಿನ ಆದಾಯವೂ ಹುಟ್ಟಲಿಲ್ಲ. ಅದಕ್ಕಿಂತ ಶೋಚನೀಯವಾದ ಸಂಗತಿಯೆಂದರೆ ಬೆಂಗಳೂರಿಗೆ ತಮಿಳರ ವಲಸೆ ಮತ್ತಷ್ಟು ಹೆಚ್ಚಾಯ್ತು ಅಷ್ಟೆ. ಈಗ ಯೋಜಿಸುತ್ತಿರುವ ಕಾರಿಡಾರ್ ಯೋಜನೆ ಕೂಡಾ ಹೆಸರಿಗೆ ಬೆಂಗಳೂರಿನಿಂದ ಚೆನ್ನೈ ತನಕ ಎಂದಿದ್ದರೂ ಈ ವಲಯ ಶೇಕಡಾ ನೂರರಷ್ಟು ಇರುವುದು ತಮಿಳುನಾಡಲ್ಲೇ. ಅತಿ ನಿರೀಕ್ಷಿತ ವಿದೇಶಿ ಬಂಡವಾಳ, ತೆರಿಗೆ, ಉದ್ಯೋಗಾವಕಾಶ, ಪೂರಕ ಉದ್ದಿಮೆಗಳು ಯಾವುದೂ ಕರ್ನಾಟಕಕ್ಕೆ ಗಿಟ್ಟದು. ಹಾಗಾಗಿ ಮೊಸರು ಮೂತಿಗೆ ಮೆತ್ತಿಸಿಕೊಂಡ ಮೇಕೆ ಆಗ್ತೀವಿ ಅಷ್ಟೆ.

ನಿಜವಾಗಿ ಆಗಬೇಕಾಗಿರೋದು ಬೆಂಗಳೂರು - ಪುಣೆ ಕಾರಿಡಾರು
ಕರ್ನಾಟಕದ ಅಧಿಕಾರಿಗಳು ಚರ್ಚೆ ಮಾಡ್ತಾ ಈ ಕಾರಿಡಾರನ್ನು ಬೆಳಗಾವಿವರೆಗೆ ವಿಸ್ತರಿಸಲು ಮನವಿ ಮಾಡ್ತಾರಂತೆ. ನಿಜ್ವಾಗ್ಲೂ ಕರ್ನಾಟಕ ಸರ್ಕಾರ ಚೆನ್ನೈ ಕಾರಿಡಾರಿನ ಬಗ್ಗೆ ಯಾವುದೇ ಆಸಕ್ತೀನೂ ತೋರುಸ್ದೆ, ದಕ್ಷಿಣ ಭಾರತಕ್ಕೆ ಕೊಡಮಾಡಲಿರುವ ಈ ಯೋಜನೆಯನ್ನು ತನ್ನದು ಮಾಡಿಕೊಳ್ಳಬೇಕು. ಕರ್ನಾಟಕದ ಹಿತ ಕಾಪಾಡಕ್ ಆಗೋದು ಇದ್ರಿಂದ ಮಾತ್ರ ಗುರು.

ಭಾರತಕ್ಕೂ ಲಾಭ ಇದ್ರಿಂದಲೇ...
ಈಗಾಗಲೇ ಯೋಜಿತವಾಗಿರೋ ದಿಲ್ಲಿ ಮುಂಬೈ ಕಾರಿಡಾರನ್ನು ಮುಂದೆ ವಿಸ್ತರಿಸುವ ಮೂಲಕ ಅದನ್ನು ದಿಲ್ಲಿ, ಮುಂಬೈ, ಬೆಂಗಳೂರು ಕಾರಿಡಾರ್ ಮಾಡಬೇಕು. ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ, ಬಜಾಜ್, ಫೆರೋಡಿಯಾ ಬಜಾಜ್, ಕೈನೆಟಿಕ್ ತರಹದ ದೈತ್ಯ ಸಂಸ್ಥೆಗಳಿಗೆ ತವರಾಗಿರೋ ಪೂನಾ, ಅಲ್ಯುಮಿನಿಯಂ ತಯಾರಿಕೆ ಮತ್ತು ಅಚ್ಚು ಉದ್ದಿಮೆಗೆ ಹೆಸರಾದ ಬೆಳಗಾವಿ ಇದೇ ವಲಯದಲ್ಲಿ ಬರುತ್ತವೆ. ಉಕ್ಕು ತಯಾರಿಕೆಯ ತೋರಣಗಲ್ಲು, ಕರ್ನಾಟಕದ ಸುಮಾರು ಆರುನೂರು ಕಿಲೋಮೀಟರ್ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಕಾರಿಡಾರ್ ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ನೀಡಲಿದೆ. ನಾವು ಮೈಮರೆಯದೆ ಸದುಪಯೋಗ ಮಾಡಿಕೋಬೇಕು ಅಷ್ಟೆ. ಈ ವಲಯದ ಉದ್ದಕ್ಕೂ ನೀರಿನ ಸೌಕರ್ಯ ಕಲ್ಪಿಸಲು ಕಾವೇರಿ, ಕೃಷ್ಣಾ, ತುಂಗಭದ್ರಾ ನದಿಗಳಿವೆ. ಉತ್ತಮ ರೈಲು ಸಂಪರ್ಕವಿದೆ. ನಾಲ್ಕು ದಾರಿಗಳ ಹೆದ್ದಾರಿ ಇದೆ. ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ವಿಮಾನ ನಿಲ್ದಾಣಗಳಿವೆ. ಉದ್ದಿಮೆ ಆರಂಭಿಸಲು ಬೇಕಾದ ಹಿತಕರವಾದ ವಾಯುಗುಣ ನಮ್ಮಲ್ಲಿ ಇದೆ. ಮೇಲಾಗಿ ನೈಸರ್ಗಿಕ ವಿಕೋಪಗಳ ಭೀತಿ ಕಡಿಮೆ ಇದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟು ನಮ್ಮ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಿ ಪುಣೆ-ಬೆಂಗಳೂರು ಉದ್ದಿಮೆ ಮೊಗಸಾಲೆಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಬೇಕು. ಕೇಂದ್ರದ ಹಣಕಾಸು ಸಚಿವರಾದ ಪಿ.ಚಿದಂಬರಂ ಇಡಿಯ ಭಾರತಕ್ಕೆ ಹಣಕಾಸು ಸಚಿವರೆಂಬುದನ್ನು ನೆನಪು ಮಾಡಿಕೊಟ್ಟು ಬರುವ ಮುಂಗಡ ಪತ್ರದಲ್ಲಿ ಈ ಯೋಜನೆ ಘೋಷಿತವಾಗುವಂತೆ ಮಾಡಬೇಕು ಗುರು.

ಹಳಿ ತಪ್ಪದಿರಲಿ ಒಕ್ಕೂಟ ವ್ಯವಸ್ಥೆ

ಹುಬ್ಬಳ್ಳಿ, ಮೈಸೂರು ಮತ್ತೆ ಬೆಂಗಳೂರಿನಲ್ಲಿ ನೈರುತ್ಯ ರೈಲು ವಿಭಾಗದಲ್ಲಿ ಖಾಲಿ ಇದ್ದ ಡಿ-ವರ್ಗದ ಹುದ್ದೆಗಳಲ್ಲಿ ಸಿಂಹಪಾಲು ಬಿಹಾರಿಗಳಿಗೇ ಸಿಗ್ಬೇಕು ಅಂತ, ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯೋರು ನಡೆಸಿರುವ ಹುನ್ನಾರದ ಬಗ್ಗೆ ಜನವರಿ ಐದರ ಕನ್ನಡಪ್ರಭದಲ್ಲಿ ವರದಿಯಾಗಿದೆ.
ಇತ್ತೀಚಿನ ಸುಮಾರು ತಿಂಗಳುಗಳಲ್ಲಿ ಇದು ಅದೆಷ್ಟನೇ ಬಾರಿ ಕನ್ನಡಿಗನಿಗೆ ರೈಲಿನ ವಿಚಾರದಲ್ಲಿ ಟೋಪಿ ಹಾಕಲಾಗಿದೆ ಅನ್ನೋದು ಎಣಿಕೆ ಮೀರಿ ಹೋಗಿದೆ.

ಏಳಿಗೆ ಆಗೋದು ಉದ್ಯೋಗ ಹುಟ್ಟಿದಾಗಷ್ಟೆ
ಯಾವುದೇ ಒಂದು ಪ್ರದೇಶದ ಜನರ ಏಳಿಗೆ ಆಗೋದೆ ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗೋದ್ರಿಂದ. ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗೇ ಪ್ರತಿ ಪ್ರದೇಶದಲ್ಲೂ ಉದ್ದಿಮೆಗಳು ಆರಂಭವಾಗಲಿ ಅಂತ ಆಯಾ ಸರ್ಕಾರಗಳು ಬಯಸೋದು. ಉದ್ಯೋಗ ಸೃಷ್ಟಿ ಆಗುತ್ತೆ ಅನ್ನೋ ಕಾರಣಕ್ಕೇ ಉದ್ದಿಮೆಗಾರಿಕೆಗೆ ಉತ್ತೇಜನ ಕೊಡೋದು.

ರೈಲ್ವೇಯಲ್ಲಿ ಇದೇನಾಗ್ತಿದೆ?
ನೈರುತ್ಯ ರೈಲ್ವೇ ವಲಯದಲ್ಲಿ ಇರೋ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗಲೇ ಹಿಂದಿ ಕಲಿತಿರಬೇಕಾದ ಕಟ್ಟಳೆಯನ್ನು ವಿಧಿಸಲಾಯಿತು. ಅಂದರೆ ಯಾವ ಹುದ್ದೆಗೆ ಎಂಟನೆ ತರಗತಿ ಮಟ್ಟದ ವಿದ್ಯಾರ್ಹತೆ ಬೇಕೋ ಅದಕ್ಕೆ ನಮ್ಮದಲ್ಲದ ಹಿಂದಿ ಭಾಷೆಯಲ್ಲಿ ಅರ್ಜಿ ಬರೆಯಬೇಕಾದಷ್ಟು ಅರಿವು ಇರಲೇಬೇಕು. ಕೆಲ್ಸ ಸಿಗ್ಬೇಕು ಅಂದ್ರೆ ಹಿಂದಿ ಭಾಷೆ ತಿಳ್ದಿರ್ಬೇಕು ಅನ್ನೋ ಭೂತದ ಭಯ ಕಾಡ್ತಿದ್ದಾಗ ಅಭ್ಯರ್ಥಿಗಳಲ್ಲಿ ಕನ್ನಡಿಗರು ಶೇಕಡ 5.4ರಷ್ಟೇ ಇರೋದು ಆಶ್ಚರ್ಯವೇನು ಅಲ್ಲ. ನೇರವಾಗಿ ಇದು ಕೊಡ್ತಿರೋ ಸಂದೇಶವಾದರೂ ಏನು? ಕರ್ನಾಟಕದಲ್ಲಿ ನಿಮಗೆ ಬರಿ ಕನ್ನಡ ಗೊತ್ತಿದ್ದರೆ ಕೆಲಸ ಸಿಗಲ್ಲ. ನಿಮ್ಮ ಇಡೀ ಬದುಕಿನಲ್ಲಿ ಒಮ್ಮೆಯೂ, ಒಂದಾದರೂ ಹಿಂದಿ ಭಾಷಿಕ ಪ್ರದೇಶವನ್ನು ನೋಡಿರದಿದ್ದರೂ, ನೋಡುವ ಆಸೆಯೇ ಇಲ್ಲದಿದ್ದರೂ, ನಮ್ಮ ನಾಡಲ್ಲೇ ಬದುಕ ಬೇಕೆಂದರೂ ಹಿಂದಿಯನ್ನು ಕಲಿತಿರಬೇಕು. ಇದು ನಿಜಕ್ಕೂ ಒಕ್ಕೂಟ ವ್ಯವಸ್ಥೆಯ ಘೋರ ವಿಡಂಬನೆ.

ಭಾರತೀಯರೆಲ್ಲ ಒಂದೇ... ಆದರೆ..
ಬಿಹಾರಿಯೂ ಭಾರತೀಯಾನೆ ಕಣ್ರಿ ಅನ್ನೋ ಜನರು ಅರ್ಥ ಮಾಡ್ಕೊಬೇಕಾದದ್ದು ಏನಂದರೆ ಬಿಹಾರದಲ್ಲಿ ಬಿಹಾರಿ ಉಳಿದವರಿಗಿಂತ ಹೆಚ್ಚು ಭಾರತೀಯ. ಅಂತೆಯೇ ಕರ್ನಾಟಕದಲ್ಲಿ ಕನ್ನಡಿಗ. ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರೋದೆ ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ. ಇದನ್ನು ಬಲಿಕೊಟ್ಟು ಭಾರತೀಯತೆ ಹೆಸರಲ್ಲಿ ಇಂತಹ ತ್ಯಾಗವನ್ನು ಕನ್ನಡಿಗರಿಂದ ನಿರೀಕ್ಷೆ ಮಾಡೋದು ಎಂಥಾ ಭಾರತೀಯತೆ ಗುರು?

ಹಳಿ ತಪ್ಪದಿರಲಿ ಒಕ್ಕೂಟ ವ್ಯವಸ್ಥೆ
ಇಡಿಯ ಭಾರತದಲ್ಲಿನ ವ್ಯವಸ್ಥೆಗಳು ಬಹುಸಂಖ್ಯೆಯ ನೆಪದಲ್ಲಿ ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡುವಂತೆ ರೂಪಿತವಾಗಿರುವುದು ಹೆಜ್ಜೆ ಹೆಜ್ಜೆಗೂ ಗೋಚರವಾಗುತ್ತಿದೆ. ಇಲ್ಲಿನ ಸರ್ಕಾರದ ಏಕೈಕ ಭಾರತೀಯ ಆಡಳಿತ ಭಾಷೆ ಹಿಂದಿ. ಭಾರತದ ಯಾವುದೇ ಮೂಲೆಯ ಕೇಂದ್ರ ಸರ್ಕಾರಿ ಕಛೇರಿಯಲ್ಲೂ ಹಿಂದಿಯಲ್ಲಿನ ಸೇವೆಯನ್ನು ನಿರಾಕರಿಸುವುಂತಿಲ್ಲ ಎನ್ನುವ ಆಡಳಿತ ಭಾಷಾ ಕಾನೂನು, ಕೇಂದ್ರ ಸರ್ಕಾರಿ ಕೆಲಸಗಳು ಬೇಕೆಂದರೆ ಹಿಂದಿ ಕಲಿತರಬೇಕು ಎನ್ನುವ ಕಟ್ಟಳೆಗಳು... ಒಂದೇ ಎರಡೇ? ಪ್ರಜಾಪ್ರಭುತ್ವ, ಸ್ವಾತಂತ್ರ ಇವುಗಳ ನಿಜವಾದ ಅರ್ಥವನ್ನೇ ಮರೆ ಮಾಚುತ್ತಿರುವ ಭಾರತದ ಈ ವ್ಯವಸ್ಥೆಗಳು ಆತಂಕಕ್ಕೆ ಕಾರಣವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆ ಹಳಿ ತಪ್ಪದಿರಲಿ.

ಒಕ್ಕೂಟ ವ್ಯವಸ್ಥೆ ಕನ್ನಡಿಗರ ಬದುಕನ್ನು ಹಸನು ಮಾಡಬೇಕೇ ಹೊರತು ಬರಿ ಬಲಿದಾನವನ್ನೇ ಬಯಸಬಾರದು.

’ಕನ್ನಡ ಕಲಿ’ ಕಾರ್ಯಕ್ರಮದಲ್ಲಿ ನೀವಿದ್ದರೆ ಚಂದ

ಬೆಂಗಳೂರಿನ ನಾನಾ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಕನ್ನಡ ಬಾರದ ಆದರೆ ಕಲಿಯಲು ಆಸಕ್ತಿಯಿರುವ ಬೇರೆ ಭಾಷೆಯವರಿಗೆ ಕನ್ನಡವನ್ನು ಕಲಿಸುವ ಕಾರ್ಯಕ್ರಮ "ಕನ್ನಡ ಕಲಿ"

ಕನ್ನಡ ಕಲಿ ಎನ್ನುವುದು "ನನಗೆ ಕನ್ನಡ ಗೊತ್ತಿಲ್ಲ" ಎನ್ನುವುದರಿಂದ "ಏನ್ ಗುರು, ಕಾಫಿ ಆಯ್ತಾ?" (I dont know kannadaದಿಂದ ಸುಲಲಿತವಾಗಿ ಕನ್ನಡದಲ್ಲಿಯೇ ಸಂಭಾಷಣೆ ಮಾಡೋ ಹಂತ) ತನಕ ಪರಭಾಷಿಕನ ಕೈ ಹಿಡಿದು ಜೊತೆ ಸಾಗುವ ಪಯಣ.
ಕರ್ನಾಟಕಕ್ಕೆ ಬರುವ ಬೇರೆ ಭಾಷೆಯವರಿಗೆ ಕನ್ನಡ ಕಲಿಯೋದರಿಂದ ಬಹಳ ಪ್ರಯೋಜನ ಆಗ್ತಾ ಇದೆ. ಅದಕ್ಕೆ ಈಗ ಕನ್ನಡ ಕಲಿಯೊಕ್ಕೆ ಬಹಳ ಜನ ಆಸಕ್ತಿ ತೋರಿಸುತ್ತಿರುವುದು ಒಂದೆಡೆಯಾದರೆ ಕಲಿಸಬೇಕೆಂಬ ಉತ್ಸಾಹಿಗಳ ದಂಡು ಇನ್ನೊಂದೆಡೆ ಇದೆ. ಈ ಇಬ್ಬರ ನಡುವಿನ ಸೇತುವೆಯಾಗಿದೆ, ಬನವಾಸಿ ಬಳಗದ ಈ ಕನ್ನಡ ಕಲಿ ಕಾರ್ಯಕ್ರಮ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಕೊಡೋದಕ್ಕೆ ಒಂದು ಚಿಕ್ಕ ಸಮಾರಂಭವನ್ನು ಆಯೋಜಿಸಲಾಗಿದೆ.
ಇದೇ ಜನವರಿ ಆರನೇ ತಾರೀಕಿನ ಭಾನುವಾರದಂದು ಸಂಜೆ 4 ಗಂಟೆಗೆ ಬಸವನಗುಡಿಯಲ್ಲಿ ಬಿ.ಪಿ.ವಾಡಿಯಾ ರಸ್ತೆಯಲ್ಲಿರೋ "ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್"ನ ಮನೋರಮಾ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಕಲಿ ನಡೆದು ಬಂದ ದಾರಿ, ಈ ಕಾರ್ಯಕ್ರಮ ನಡೆಸುವಲ್ಲಿನ ಅನುಭವಗಳು, ಇದನ್ನು ಹೇಗೆ ನಮ್ಮ ಸಂಸ್ಥೆಗಳಲ್ಲಿ ನಡೆಸಬಹುದು ಅನ್ನೋದೋರ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ. ಜೊತೆಗೆ ಕನ್ನಡ ಕಲಿ ಮೂಲಕ ಕನ್ನಡ ಕಲಿತವರ ಅನುಭವಗಳನ್ನೂ ಕೇಳೋಣ.
ಈ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿ ಚಂದ. ಅವತ್ತಿನ ಕಾರ್ಯಕ್ರಮಕ್ಕೆ ನೀವು ಬರಲೇಬೇಕು. ನಮ್ಮನ್ನೆಲ್ಲಾ ಭೇಟಿ ಆಗಲೇ ಬೇಕು, ನಮ್ಮ ಜೊತೇಲಿ ಒಂದೆರಡು ಗಂಟೆ ಕಳೀಲೇ ಬೇಕು. ಬರ್ತಿರಾ ಅಲ್ವಾ?

2008ರ ವರ್ಷ ಭವಿಷ್ಯ

ಎರಡು ಸಾವಿರದ ಎಂಟು ಬಂದಿದೆ, ಏನ್ ಗುರು ಓದುಗರಿಗೆಲ್ಲಾ ಛಳಿಗಾಲದ ಬೆಚ್ಚನೆಯ ಶುಭಾಶಯಗಳು.
ಈ ಶುಭ ಸಂದರ್ಭದಲ್ಲಿ ಬರಲಿರುವ ವರ್ಷದ ರಾಶಿ ಭವಿಷ್ಯವನ್ನು ನಿಮಗಾಗಿ "ಏನ್ ಗುರು" ತರುತ್ತಿದೆ.
ಇನ್ನೂ ಏನು ಯೋಚನೆ ಮಾಡ್ತಿದೀರಾ? ಎಚ್ಚರ ಮಾಡಿಕೊಳ್ಳಿ.
ಛಳಿ ಕೊಡವಿ ಏಳಿ, ಭವಿಷ್ಯ ನೋಡ್ಕಳಿ...

ಕುರಿ : ಕಳೆದ ವರ್ಷದಲ್ಲಿ ನಿಮಗೆ ಒದಗಿ ಬಂದಿದ್ದ ಕೆಟ್ಟಕಾಲಕ್ಕೆ ಕಾರಣ, ನೀವು ವರ್ಷದ ಮೊದಲನೆ ದಿನ ಬೆಂಗಳೂರಿನ ಫೋರಂನಲ್ಲಿ ಮೈ ಮರೆತು ಎಲ್ಲ ಸಿಬ್ಬಂದಿಗಳ ಜೊತೆ ಹಿಂದಿಯಲ್ಲಿ ಮಾತಾಡಿದ್ದು ಮತ್ತು ಹಿಂದಿ ನಮ್ಮ ರಾಷ್ಟ್ರಭಾಷೆ ಅಂತ ಅವರಂದಾಗ ಕುರಿ ತರಹ ತಲೆ ಹಾಕಿದ್ದು. ಈ ಸಾರಿಯಾದರೂ ನೀವು ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಮಾಡಲು ಹೋದಾಗ, ಕನ್ನಡದಲ್ಲೇ ವ್ಯವಹರಿಸಿದರೆ ಮಿತ್ರಲಾಭ.
ಎತ್ತು : ಗಾಣದ ಎತ್ತಿನಂತೆ ದುಡಿಯುವ ಸ್ವಭಾವದ ನಿಮ್ಮ ಬದುಕಲ್ಲಿ ಈ ವರ್ಷ ಒಳ್ಳೇ ಪ್ರತಿಫಲ ಸಿಗುವ ಸೂಚನೆಗಳಿವೆ. ಈ ಬಾರಿಯ ರಾಜ್ಯೋತ್ಸವಕ್ಕೆ ಮೊದಲು ನಿಮ್ಮ ಸಂಸ್ಥೆಯಲ್ಲಿ ಕಡಿಮೆಯೆಂದರೆ ಇಬ್ಬರು ಪರಭಾಷಿಕರಿಗೆ (ಪರದೇಶಿಗಳಿಗೆ) ಕನ್ನಡ ಕಲಿಸಿ. ಕೊನೆಪಕ್ಷ ಮಾತಾಡೋ ಅಷ್ಟಾದ್ರೂ ಕಲಿಸಿ. ಇಲ್ಲಾಂದ್ರೆ ಸಾಯೋತಂಕಾ ಹಿಂಗೇ ಕತ್ತೆ ಥರಾ ದುಡ್ಕೊಂಡು ಇರಬೇಕಾಗುತ್ತೆ.
ಜೋಡಿ : ಈ ಬಾರಿ ನಿಮಗೆ ಮದುವೆ ಯೋಗ ಇದೆ. ಮದುವೆ ಮಾಡ್ಕೊಬೇಕಾದ್ರೆ ಛತ್ರದ ಹೊರಗೆ ಬರೆಸಿಹಾಕೋ ಹೂವಿನ ಅಲಂಕಾರದ ಸ್ವಾಗತ ಕಮಾನನ್ನು ಕನ್ನಡದಲ್ಲೇ ಮಾಡ್ಸಿ. ಕರೆಯೋಲೆ ಕನ್ನಡದಲ್ಲಿರಲಿ. ಕನ್ನಡಿಗರು ಕನ್ನಡದಲ್ಲಿ ಕರೆಯೋಲೆ ಕೊಡದಿದ್ರೆ ಅಂಥಾ ಮದುವೆಗಳಿಗೆ ಹೋಗಲ್ಲ ಅಂತ ತೀರ್ಮಾನ ಮಾಡ್ಕೊಳ್ಳಿ. ಹೀಗಾದ್ರೆ ನೀವು ಬಹಳ ದಿನಗಳಿಂದ ಬಯಸ್ತಿದ್ದ ನಿಮ್ಮ ಪ್ರೇಮ ಫಲಿಸೀತು. ನಿಮ್ಮ ಬಾಳಸಂಗಾತಿಯ ಭೇಟಿ ಆದೀತು.
ಏಡಿ : ಅಡ್ಡಾದಿಡ್ಡಿ ಸಾಗ್ತಿದೆ ಬದುಕು ಅಂದ್ಕೋತಾ ಇದ್ರೆ ಈ ವರ್ಷದಲ್ಲಿ ಅದು ನೆಟ್ಟಗೆ ಸಾಗೊ ಲಕ್ಷಣಗಳಿವೆ. ಕೊಡೈಕೆನಾಲು, ಮೂನಾರಿಗೆ ಹನಿಮೂನಿಗೆ ಅಂತ ಹೊರಟಿರೋ ನಿಮ್ಮ ಗೆಳೆಯನನ್ನು ಮಡಿಕೇರಿಗೋ, ಕಾರವಾರಕ್ಕೋ ಕಳ್ಸಿಕೊಡಿ. ನೀವೂ ಕೂಡಾ ನೆಟ್ಟಗೆ ಹಂಪಿ, ಬನವಾಸಿ ಕಡೆಗೆ ಒಂದು ಪ್ರವಾಸ ಹೋಗಿಬನ್ನಿ. ಬಾಳುವ ರೀತಿ ನೀತಿ ಒಳ್ಳೇತರಹ ಬದಲಾದೀತು.

ಸಿಂಹ : ಕನ್ನಡದ ಅಭಿಮಾನದಿಂದ ನಾನಾ ಕೆಲಸಗಳನ್ನು ಮಾಡ್ತಾ ಇರೋ ತಾವು ತಮ್ಮ ಗೆಳೆಯರ ಮಧ್ಯೆ ಸಿಂಹದ ಹಾಗೇ ಪೌರುಷ ತೋರುಸ್ತಿರಬಹುದು. ಆದರೆ ಅಭಿಮಾನದ ಜೊತೆ ಅಧ್ಯಯನವೂ ಮುಖ್ಯ. ಕನ್ನಡದ ಇತಿಹಾಸ, ಹಿರಿಮೆಗಳ ಬಗ್ಗೆ ಕಲಿತು, ಕಲಿತಿದ್ದರ ಸಿಂಹಾವಲೋಕನ ಮಾಡಿದರೆ ನಿಮ್ಮ ಅಭಿಮಾನಕ್ಕೆ ಅರ್ಥ ಸಿಗುತ್ತೆ.
ಹುಡುಗಿ : ಈ ವರ್ಷದ ನಿಮ್ಮ ಭವಿಷ್ಯ ಭವ್ಯವಾಗಿದೆ. ಹಿಂದಿ ಮಾತಾಡುದ್ರೆ ಏಕತೆ, ಹಿಂದಿ/ ಇಂಗ್ಲಿಷು ಮಾತೋಡೋರು ಮಾತ್ರಾ ಲೆವೆಲ್ಲು ಅಂದ್ಕೊಂಡು ಅಂಥಹಾ ಹುಡುಗರನ್ನೇ ಮೆರೆಸೋದನ್ನು ಈ ರಾಶಿಯ ಹೆಣ್ ಮಕ್ಕಳು ಕೈಬಿಡಬೇಕಾಗುತ್ತೆ. ಕನ್ನಡದ ಸಂಸ್ಕೃತಿಯನ್ನು ಮೆರೆಸೋ ಜೀವನ ಶೈಲಿಯನ್ನು ತಾವೂ ಬಿಟ್ಟು ಹೋಗದೆ, ತಮ್ಮ ಸಂಗಾತಿಯೂ ಬಿಟ್ಟು ಹೋಗದ ಹಾಗೆ ನೋಡ್ಕೊಂಡ್ರೆ ಪುತ್ರಲಾಭ. ಅಂದ್ರೆ ಮುಂದಿನ ದಿನಗಳಲ್ಲಿ ದೊಡ್ಡವರಾದ ಮೇಲೆ ಮಕ್ಕಳು ಕೈ ಬಿಟ್ಟು ಹೋಗೋದು ತಪ್ಪುತ್ತೆ.
ತಕ್ಕಡಿ : ಹಿಂದೆ ಎಂದಾದ್ರೂ ನಿಮ್ಮ ಕಛೇರಿಯಲ್ಲಿ ಕೆಲಸ ಖಾಲಿ ಇದ್ದಾಗ ಕನ್ನಡದ ಹುಡುಗರ ರೆಫೆರೆನ್ಸ್ ಕೊಡದೆ ಹೋಗಿದ್ದರೆ ಈ ವರ್ಷ ನಿಮಗೆ ಸಖತ್ ಲತ್ತೆ ಹೊಡ್ಯೋದು ಹದಿನಾರಾಣೆ ಸತ್ಯ. ಈ ವರ್ಷದ ಕ್ಯಾಂಪಸ್ ಇಂಟರ್ವ್ಯೂಗೆ ಒರಿಸ್ಸಾ, ಆಂಧ್ರ ಅಂತ ಹೋಗೋ ಬದಲು ಕರ್ನಾಟಕದ ಕಾಲೇಜುಗಳಿಗೆ ಹೋದರೆ ನೀವೂ ನಿಮ್ಮ ಸಂಸ್ಥೇನೂ ಉದ್ಧಾರವಾಗೋದ್ರಲ್ಲಿ ಅನುಮಾನವೇ ಇಲ್ಲ.
ಚೇಳು : ನಿಮ್ಮ ಚೂಪಾದ ಬುದ್ಧಿಯನ್ನು ಕನ್ನಡಪರ ಹೋರಾಟಗಾರರನ್ನು, ಕನ್ನಡಪರ ಮನಸ್ಸುಗಳನ್ನು ಹೀಗಳೆಯೋಕ್ಕೆ ಬಳಸದೆ ನಾಡು ಕಟ್ಟೋ ಕೆಲಸದ ಕಡೆ ಹರಿಬಿಡಿ. ಕನ್ನಡಪರ ಅನ್ನೋದು ರಾಷ್ಟ್ರೀಯತೆಗೆ ವಿರುದ್ಧವಾದದ್ದು ಅನ್ನೋ ನಂಬಿಕೆ ಏನಾದ್ರೋ ಇದ್ರೆ ಮೊದಲು ಬದ್ಲಾಯ್ಸಿಕೊಳ್ಳಿ. ನಿಜವಾದ ರಾಷ್ಟ್ರೀಯತೆ ಕರ್ನಾಟಕತ್ವವೇ ಎಂದು ಮನಗಾಣಿರಿ. ಹೀಗಾದಲ್ಲಿ ಈ ವರ್ಷ ನಿಮ್ಮ ತುರಿಕೆ ಮತ್ತು ಹೊಟ್ಟೆಯಲ್ಲಿನ ಉರಿ ರೋಗಗಳು ವಾಸಿಯಾಗುತ್ವೆ.
ಬಿಲ್ಲು: ನಿಮ್ಮ ಬಾಸನ್ನ ಮೆಚ್ಚುಸ್ಬೇಕು ಅಂತಾ ಕನ್ನಡದ ವಿಷಯದಲ್ಲಿ ಬಿಲ್ಲಿನ ಥರಾ ಬಗ್ಗುದ್ರೆ ಬೆನ್ನು ಮುರ್ದು ಹೋಗುತ್ತೆ. ಹೋದವರ್ಷ ಯುಗಾದಿಗೆ ನಿಮ್ಮ ಕಛೇರಿಲಿ ರಜಾ ಕೊಡದೆ ಹೋಳೀಗೆ, ಬೈಸಾಖಿಗೆ ಕೊಡ್ತಾ ಇದ್ರೂ "ಹಾಜಿ.. ಹಾಜಿ" ಅಂತ ಡೊಗ್ಗು ಸಲಾಮು ಹಾಕಿದ್ರೆ ಈ ವರ್ಷಾನಾದ್ರು ಬದಲಾಗಿ. ನಮ್ಮತನಾನ ಬಲಿಕೊಟ್ಟು ಕನ್ನಡ ಸಂಸ್ಕೃತಿಯನ್ನು ಹಾಳು ಮಾಡೋ ಕೆಲಸಕ್ಕೆ ನೀವು ಕಾರಣರಾದರೆ ಏಳರಾಟದ ಶನಿ ನಿಮ್ಮ ಬೆನ್ನೇರೋದು ಖಚಿತ.
ಮೊಸಳೆ : ಕನ್ನಡಕ್ಕೆ ಹಾಗಾಗ್ತಿದೆ ಹೀಗಾಗ್ತಿದೆ ಅಂತ ಕಣ್ಣೀರು ಸುರಿಸದೆ ಇವತ್ತಿಂದ್ಲೆ ಕನ್ನಡ ದಿನಪತ್ರಿಕೆಗಳನ್ನು ಕೊಂಡ್ಕೊಳ್ಳೋದ್ನ ಶುರು ಮಾಡಿ. ಈ ವರ್ಷ ಒಂದೆರಡು ಸಖತ್ ಕನ್ನಡ ಸಿನಿಮಾ ನೋಡುದ್ರೆ, ಕನ್ನಡ ಹಾಡುಗಳನ್ನೇ ಹಾಕೋ FMಗಳನ್ನೇ ಕೇಳುತಿದ್ರೆ, ಇವತ್ತಿಂದ ಯೋಗ್ಯ ಕನ್ನಡಿಗನಾಗಿ ಬದುಕೋ ಸಂಕಲ್ಪ ಮಾಡುದ್ರೆ ಜ್ಞಾನ ಪ್ರಾಪ್ತಿ, ಮನರಂಜನಾ ಸುಖ ಲಭ್ಯ.
ಕೊಡ : ನಿಮ್ಮ ಕನ್ನಡ ಪ್ರೇಮ ಪರಿಪೂರ್ಣವಾಗೋ ಕಾಲ ಹತ್ತಿರವಾಗುತ್ತಿದೆ. ಇವತ್ತೇ ಒಂದು ಕೋರ್ಟ್ ಅಫಿಡವಿಟ್ ಮಾಡ್ಸಿ ನಿಮ್ಮ ಸಹಿಯನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಿ. ಬರೀ ನೂರೈವತ್ತು ರೂಪಾಯಿ ಖರ್ಚಾಗುತ್ತೆ. ಬ್ಯಾಂಕುಗಳಲ್ಲಿ, ಚೆಕ್ಕುಗಳಲ್ಲಿ, ಎಲ್ಲ ಕಛೇರಿಗಳ ಅರ್ಜಿಗಳನ್ನು ಕನ್ನಡದಲ್ಲೇ ತುಂಬಿ. ಕನ್ನಡದ ಸಹಿ ಮತ್ತು ಅರ್ಜಿ ಒಪ್ಪಲ್ಲ ಅನ್ನೋ ಅಧಿಕಾರ ಯಾರಿಗೂ ಇಲ್ಲ ಅಂತ ಮನವರಿಕೆ ಮಾಡಿಕೊಂಡ್ರೆ ಬಾಳೂ ಪರಿಪೂರ್ಣವಾಗುತ್ತೆ.
ಮೀನು : ಕನ್ನಡಿಗರು ಭೇಟಿಯಾದಾಗ ಟುಸ್ಸು ಪುಸ್ಸು ಇಂಗ್ಲಿಷಲ್ಲಿ ಮಾತಾಡ್ದೆ ಕನ್ನಡದಲ್ಲೇ ಮಾತಾಡ್ಸೋದ್ನ ಇವತ್ತಿಂದಲೇ ಶುರು ಹಚ್ಕೊಳ್ಳಿ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ದಿದ್ರೆ ನುಂಗಿ ಹಾಕೋಕ್ಕೆ ತಿಮಿಂಗಲಗಳು ಕಾಯ್ತಾ ಇರ್ತವೆ ಅಂತ ಅರ್ಥ ಮಾಡಿಕೊಂಡು ಸದಾ ಒಗ್ಗಟ್ಟಾಗಿರಿ. ಆಗ ನಿಮ್ಮ ಸಂತತಿ ಸಾವಿರವಾಗುತ್ತದೆ.
ರಾಹುಕಾಲ: ಗುಳಿಕ ಕಾಲ: ಯಮಗಂಡ ಕಾಲ : ಕನ್ನಡದ ಕೆಲಸಕ್ಕೆ ಇವ್ಯಾವುದು ಈ ವರ್ಷ ಅಡ್ಡಿ ಮಾಡಲ್ಲ. ನಿಸ್ಸಂಕೋಚವಾಗಿ ಮುಂದುವರೆಯಿರಿ.
Related Posts with Thumbnails