ಬೆಂಗ್ಳೂರಿನ ಗುಟ್ಟು ಬಾನುಲಿಯಲಿ ರಟ್ಟು

ಇತ್ತೀಚಿನ ಬಾನುಲಿ ಕೇಳುಗರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಮೂಂಚೂಣಿಯಲ್ಲಿರೋ ಎಫ್ ಎಂ ವಾಹಿನಿಗಳ ಪಟ್ಟಿ ಬಿಡುಗಡೆ ಆಗಿದೆ. ಹೆಚ್ಚಾಗಿ ಕನ್ನಡದಲ್ಲೇ ಪ್ರಸಾರ ಮಾಡೋ ಬಿಗ್ ಎಫ್.ಎಂ., ರೇಡಿಯೋ ಮಿರ್ಚಿ, ಎಸ್ ಎಫ್.ಎಂ. ಮತ್ತು ರೇಡಿಯೋ ಒನ್ - ಇವುಗಳು ಈ ಪಟ್ಟೀಲಿ ಪ್ರಮುಖ ಸ್ಥಾನದಲ್ಲಿದ್ದು ಬೆಂಗಳೂರಲ್ಲಿ ಕನ್ನಡಿಗ ಕೇಳುಗರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಅನ್ನೋದು ಇದರಿಂದ ಸ್ಪಷ್ಟವಾಗಿ ಹೊರಗೆ ಬಂದಿದೆ. ಬೆಂಗ್ಳೂರಲ್ಲಿ ಕನ್ನಡಿಗರು ಇಲ್ಲವೇ ಇಲ್ಲ, ಇರೋರೂ ಕನ್ನಡದ ಹಾಡು ಕೇಳಲ್ಲ ಅಂತ ಅನ್ಕೊಂಡಿರೋರ ಮುಖಕ್ಕೆ ಈ ಪಟ್ಟಿ ಮಂಗಳಾರತಿ ಎತ್ತಿದೆ ಗುರು!

ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಮನೆ ಮಾತಾಗಿರುವ ಆಕಾಶವಾಣಿ ಕೇಳುಗರ್ನ ಗಣನೆಗೆ ತೊಗೊಂಡಿಲ್ಲ ಅನ್ನೋದನ್ನ ಮರೀಬೇಡಿ! ಇವರನ್ನೂ ಸೇರಿಸಿಕೊಂಡರೆ ಶೇಕಡ 90ಕ್ಕೂ ಹೆಚ್ಚು ಬಾನುಲಿ ಕಾರ್ಯಕ್ರಮ ಕೇಳುಗರು ಕನ್ನಡ ಪ್ರಸಾರ ಮಾಡುವ ಬಾನುಲಿ ವಾಹಿನಿಗಳ ಜೊತೆಗೇ ಇರೋದು ಅನ್ನೋ ಅಂಕಿ-ಅಂಶ ಹೊರಗೆ ಬರತ್ತೆ.

ಈ ವಿವರಗಳು ಸಾರಿ ಸಾರಿ ಹೇಳ್ತಿರೋದು ಬೆಂಗಳೂರಲ್ಲಿ ಇರೋ ಮಾರುಕಟ್ಟೆ ಕನ್ನಡದ್ದು ಅನ್ನೋದನ್ನೇ. ಹಿಂದಿ ಹಾಡುಗಳ್ನ ಪ್ರಾಸಾರ ಮಾಡ್ಕೊಂಡು ಶುರುವಾಗಿದ್ದ ರೇಡಿಯೋ ಮಿರ್ಚಿಗೆ ರಂಗು ಬಂದಿದ್ದು ಔರು ಕನ್ನಡದ ಮಾರುಕಟ್ಟೇನ ಅರ್ಥ ಮಾಡ್ಕೊಂಡ ಮೇಲೆ ಮಾತ್ರ ಅಂತ ಈಗಾಗ್ಲೇ ತೋರಿಸಿಕೊಟ್ಟಾಗಿದೆ.

ಇನ್ನು ಕನ್ನಡ ಕಡೆಗಣಿಸಿರೋ ’ರೇಡಿಯೋ ಸಿಟಿ’ ನ ಇಡೀ ಸಿಟೀನೇ ಕಡೆಗಣಿಸಿದೆ ಅನ್ನೋದೂ ಇದೇ ಸಮೀಕ್ಷೆಯಿಂದ ಹೊರಕ್ಕೆ ಬಂದಿದೆ. ಹಿಂದಿಜ್ವರ ಹತ್ತಿರೋ ಫೀವರ್ ಎಫ್. ಎಂ. ಗಂತೂ ಆ ಜ್ವರದಿಂದ ಲಕ್ವಾ ಹೊಡೆಯೋ ಮುಂಚೆ ಕನ್ನಡದ ಮಾತ್ರೆ ತೊಗೊಂಡು ಚೇತರಿಸಿಕೊಳ್ಳಬೇಕು ಅನ್ನೋ ಉಪದೇಶಾನ ಈ ಸಮೀಕ್ಷೆ ಬಿಟ್ಟಿಯಾಗಿ ಕೊಟ್ಟಿದೆ! ಬುದ್ಧಿವಂತ್ರು ಅರ್ಥ ಮಾಡ್ಕೋಬೇಕು, ಅಷ್ಟೆ.

ವಾಹಿನಿಗಳಲ್ಲಿ ಹಿಂದೀಲಿ, ಇಂಗ್ಲೀಷಲ್ಲಿ ಜಾಹೀರಾತು ಕೊಟ್ಟಿರೋನಿಗೆ ಯಾಕೆ ನಾನಿನ್ನೂ ಬೆಂಗಳೂರಲ್ಲಿ ಹೆಚ್ಚು ವ್ಯಾಪಾರ ಮಾಡಕ್ಕಾಗಿಲ್ಲ ಅಂತ ನಿದ್ದೆ ಬರದೇ ಇರಬಹುದು. ಅವನಿಗೂ ಈ ಸಮೀಕ್ಷೆಯಲ್ಲೇ ಪಾಠ ಇದೆ. ಬುದ್ದಿವಂತನಾದೋನು ಆ ಪಾಠ ಕಲ್ತು, ಕನ್ನಡದಲ್ಲೇ ಜಾಹೀರಾತುಗಳ್ನ ಮಾಡಿ ತನ್ನ ವ್ಯಾಪಾರ ಹೆಚ್ಚುಸ್ಕೋತಾನೆ. ಈ ಬುದ್ಧಿವಂತಿಕೆ ತೋರಿಸೋರೂ ಸಕ್ಕತ್ ಜನ ಇದಾರೆ, ಇಲ್ಲದೆಯೇನಿಲ್ಲ. ಔರು ಮಾರುಕಟ್ಟೇಲಿ ಹೆಚ್ಚುಹೆಚ್ಚು ಜನರನ್ನ ಮುಟ್ತಾರೆ, ಪೆದ್ದರು ಸೋಲ್ತಾರೆ, ಅಷ್ಟೆ.

ಇದೆಲ್ಲಾ ಓದುದ್ರೆ ಬೆಂಗ್ಳೂರಲ್ಲಿ ಮತ್ತೊಮ್ಮೆ ಕನ್ನಡಿಗರ ಸಂಖ್ಯೆ ಹೆಚ್ತಾ ಇದೆ ಅಂತ ಯಾರಿಗಾದರೂ ಅನ್ನಿಸಬಹುದು. ಆದ್ರೆ ನಿಜಾಂಶ ಏನಪ್ಪಾ ಅಂದ್ರೆ - ಆ ಪ್ರಾಬಲ್ಯ ಹೋಗೇ ಇರಲಿಲ್ಲ. ಹೋದಂಗೆ ಮಾಧ್ಯಮಗಳು ಮಾಡಿದ್ವು, ಅಷ್ಟೆ.

8 ಅನಿಸಿಕೆಗಳು:

Anonymous ಅಂತಾರೆ...

ಇದು ಬಹಳ ಒಳ್ಳೆ ಸುದ್ದಿ. ಎಫ್ ಎಮ್ ಪ್ರಪಂಚದಲ್ಲಿ ಬೆಂಗಳೂರಿನಲ್ಲಿ ಮೊದಲನೆಯ ಬಾರಿಗೆ ಕನ್ನಡದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟದ್ದು ರೇಡಿಯೊ ಮಿರ್ಚಿ. ಹಾಗೆಯೆ ಕನ್ನಡದ ಮಾರುಕಟ್ಟೆಯನ್ನ ಅರ್ಥ ಮಾಡಿಕೊಂಡು ಕನ್ನಡ ಹಾಡುಗಳನ್ನ ೧೦೦% ಪ್ರಸಾರ ಮಡಲು ಶುರು ಮಾಡಿದರು. ಅಂತೆಯೇ ಬೇರೆಯವರು ಅನುಕರಿಸಿದರು. ಕರ್ನಾಟಕದಲ್ಲಿ ಕನ್ನಡವೇ ಸತ್ಯ ಬೇರೆಲ್ಲ ಮಿಥ್ಯ.

Anonymous ಅಂತಾರೆ...

ಅಲ್ಲಾ ಗುರು, ಬೆಂಗಳೂರಿನಲ್ಲಿ ಕನ್ನದಿಗರು ಬರೀ ೨೬% ಇದಾರೆ ಅಂತ ಸರ್ಕಾರದ ಜನಸಂಖ್ಯಾ ಸಮೀಕ್ಷೆಯ ವರದಿಗಳೇ ಹೇಳ್ತಾ ಇವೆಯಲ್ಲ.ಮಾಧ್ಯಮದವರೇನೂ ಈ ಥರಾ ಸಮೀಕ್ಷೆ ಮಾಡಲ್ಲವಲ್ಲಾ? ಅದೆಂಗೆ ಗುರುವೇ?

Anonymous ಅಂತಾರೆ...

ಶಿಷ್ಯೋತ್ತಮರೇ,
ಸಮೀಕ್ಷೆ ಮಾಡುವಾಗ ಬೆಂಗಳೂರಿನಲ್ಲಿ ನೂರಾರು ವರ್ಷದಿಂದ ವಾಸ ಮಾಡ್ತಿರೋ ಸಾಬರುಗಳು ತಮ್ಮ ಭಾಷೇ ಉರ್ದು ಅಂತ, ರೆಡ್ಡಿಗಳು ತೆಲುಗು ಅಂತ, ಅಯ್ಯಂಗಾರರು ತಮಿಳು ಅಂತ,ತಿಗುಳರು ತಮಿಳು ಅಂತ,ಕೊಡವರು ಕೊಡವ ಅಂತ, ತುಳುವರು ತುಳು ಅಂತ .... ಬರೆಸಿರ್ತಾರೆ. ವಾಸ್ತವವಾಗಿ ಅವರೆಲ್ಲರೂ ಕನ್ನಡಿಗರೇ ಅಂತ ಗುರುತಿಸಿಕೊಂಡಿದ್ರೂ 'ಮಾತೃಭಾಷೆ' ಅಂತ ಕೇಳಿದ ತಕ್ಷಣ ಮನೆಮಾತು ಅಂತ ಆ ಭಾಷೆಗಳನ್ನು ಬರೆಸಿರ್ತಾರೆ.
ಆ ಲೆಕ್ಕದಲ್ಲಿ ನೋಡಿದ್ರೆ ಕನ್ನದ ಓದಲು ಬರೆಯಲು ಬರುವ ಕನ್ನಡದ ಮನಸ್ಸುಗಳಿರುವ ಎಲ್ಲರೂ ಕನ್ನಡಿಗರೇ. ಕನ್ನಡಿಗರ ಸಂಖ್ಯೆ ಬೆಂಗಳೂರಲ್ಲಿ ಕಡಿಮೆ ಅಂದ್ರೂ ೮೦% ಇದೆ.

Anonymous ಅಂತಾರೆ...

ತಿಮ್ಮಯ್ಯ ಅವರೇ,
ಬರೋಬರಿ ಹೇಳಿರಿ ನೋಡ್ರಿ,, ಅವನೌನ್ ಎಲ್ಲ ಕೂಡಿ ಬೆಂಗಳುರನಾಗ್ ಕನ್ನಡ ಮಂದಿ ಇಲ್ಲ ಇಲ್ಲ ಅಂತ ಹೇಳಿ ಹೇಳಿ ಎಲ್ಲಾರು ಅದನ್ನ ನಂಬು ಹಂಗ ಮಾಡಿದ್ರು,, ಈಗ ಖರೆ ಸುದ್ದಿ ಹೊರಗ ಬಂದೆತಿ.. ಒಂದು ಸುಳ್ಳು ೧೦೦ ಸರ್ತಿ ಹೇಳಿದ್ರ ಅದು ಖರೆ ಆಗ್ತೆತಿ ಅನ್ನೋದು ಬಾಳ ನಿಜ ಐತಿ.
ಬಿಗ್ ಎಫ್ ಎಮ್ ಹುಬ್ಬಳ್ಳಿ ಮೈಸುರನಾಗು ಶುರು ಮಾದಕತ್ತಾರ್ ಅಂತ ಕೇಳಿದೆ ,, ಅಲ್ಲೂ ಇಲ್ಲಿ ಹಂಗಾ ಕನ್ನಡ ಹಾಡು ಹಾಕಲಿ .. ಒಟ್ಟಾರೆ ನಮ್ಮ ಊರಿನಾಗ್ ನಮ್ಮ ಭಾಷೆ ನಮ್ಮ ಹಾಡು ನಮ್ಮ ಮಂದಿಗೆ ಏನ್ ಚಲೋ ನಂ ಅದ ಆಗ್ಬೇಕು..
ಚಲೋ ಸುದ್ದಿ ಕೊಟ್ಟಿದ್ದಕ್ಕ ಥ್ಯಾಂಕ್ಸ್ ಗುರುಗೊಳಿಗೆ..

Unknown ಅಂತಾರೆ...

Haage ella theatre nallu kannada
movies bandu bitre innu Santhosha agutthe guru

siri gannadam gelge.

Suhas ಅಂತಾರೆ...

Kannada tumba spastavagi maataduva RJ's 101.3 kampanaka "FM Rainbow" dalli matra.

Haleya olle geetegalannu prasara maaduva ekaika radio channel "FM 101.3".

nAnuyAru ಅಂತಾರೆ...

ವಾಹ್.. ಸಕತ್ ಖುಷಿ ಕೊಡುವ ವಿಚಾರ. ಕನ್ನಡಿಗರು ಎಚ್ಚೆತ್ತುಕೊಂಡಿರುವದಕ್ಕೆ ಇದು ಸ್ಪಷ್ಟ ಉದಾಹರಣೆ. ಇದು ಹೀಗೆ ಮುಂದುವರಿಯಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಕೇಳಿಕೊಳ್ಳುತ್ತೇನೆ.

ಬಾಲರಾಜ

Ravi Hosamane ಅಂತಾರೆ...

evagalu keli kannada hadu nimma jeevana halujenu aaguvudhu

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails