ಭಾರತ ಒಕ್ಕೂಟದಲ್ಲಿ ಸಮಾನತೆ ಅನ್ನೋ ಬಣ್ಣದ ರೈಲು!
3.6.08
"ಭಾರತ ಒಕ್ಕೂಟ ವ್ಯವಸ್ಥೆಯೆಂಬುದು ಪ್ರಪಂಚದ ಅತ್ಯದ್ಭುತ ವ್ಯವಸ್ಥೆ ಹೊಂದಿದ್ದು ನಾನಾ ಭಾಷೆ, ನಾನಾ ಸಂಸ್ಕೃತಿಗಳ ತವರು... ಇದರ ಮೂಲ ಮಂತ್ರವೇ ಅನೇಕತೆಯಲ್ಲಿ, ವೈವಿಧ್ಯತೆಯಲ್ಲಿ ಏಕತೆ... ಇಲ್ಲಿ ಎಲ್ಲ ಜಾತಿ, ಧರ್ಮ, ಭಾಷೆ, ಜನಾಂಗಳಿಗೂ ಸಮಾನ ಸ್ಥಾನಮಾನವಿದೆ... ಸಮಾನತೆಯೇ ಇದನ್ನು ಬಲಿಷ್ಟವಾಗಿಡಲು ಕಾರಣವಾಗಿರೋದು..."
ಅಬ್ಬಬ್ಬಾ... ಏನ್ ಸೊಗಸಾಗಿದೇರಿ ಈ ವಿವರಣೆ. ನಿಜವಾಗ್ಲೂ ಭಾರತ ದೇಶದ ವ್ಯವಸ್ಥೆ ಹೀಗೇ ಇದ್ದಿದ್ರೆ ಭಾಳಾ ಚೆನ್ನಾಗಿರೋದು. ಆದ್ರೆ ಅದು ಹಾಗಿಲ್ಲ ಅನ್ನೋದೇ ದೊಡ್ಡ ವಿಡಂಬನೆ. ಎಲ್ಲಾ ಪುಸ್ತಕದ ಬದನೇಕಾಯಿ ಅನ್ನೋಕೆ ಇಲ್ ಹಾಕಿರೋ ಇದೊಂದು ಫೋಟೋ ಸಾಕ್ಷಿ ನುಡಿತಾ ಇದೆ ಗುರುಗಳೇ!
ಭಾಷೆ ನೂರು ಭಾವ ಒಂದು ಅನ್ನೋ ರೈಲು...
ಈ ಫೋಟೋದಲ್ಲಿರೋ ಫಲಕ, ನಮ್ಮ ರೈಲೊಳಗೆ ಹಾಕಿರೋದು. ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಇಕಾ ಈ ಕಡೀಗಿರೋ ಬಾಗ್ಲು ತೆಕ್ಕೊಂಡು ಹೊರಕ್ಕೋಗಿ ಜೀವ ಉಳಿಸ್ಕೊಳ್ಳಿ ಅಂತ ಹಾಕಿರೋ ಸೂಚನೇ ಇದು. ಕರ್ನಾಟಕದಲ್ಲಿ ಓಡಾಡೊ ರೈಲುಗಳಲ್ಲಿ ಕನ್ನಡದಲ್ಲಿ ಯಾಕೆ ಸೂಚನೆ ಹಾಕಿಲ್ಲ? ಕನ್ನಡ ಮಾತ್ರಾ ಗೊತ್ತಿರೋರು ತಪ್ಪುಸ್ಕೊಳ್ದೆ ನೆಗೆದ್ ಬಿದ್ ಸಾಯ್ಲಿ ಅಂತ್ಲಾ?
"ಭಾರತದಲ್ಲಿ ಯಾವಾನಾರಾ ಬದುಕಬೇಕು ಅಂದ್ರೆ ಇಲ್ಲಾ ಇಂಗ್ಲಿಷ್ ಕಲೀರಿ ಇಲ್ಲಾ ಹಿಂದಿ ಕಲೀರಿ ಅಂತ ನೇರವಾಗೇ ಏಳ್ತಾ ಔರಲ್ಲಪ್ಪಾ ಇವ್ರು" ಅಂತ ಜನಾ ಬಾಯಲ್ ಬೆಳ್ಳಿಟ್ಕೊಂಡ್ ಕಣ್ ಕಣ್ ಬುಡ್ತಾ ಔರೆ.
ಅಲ್ಲಾ ಗುರು, ಇಡೀ ಪ್ರಪಂಚದ ಎಲ್ಲ ಕಡೆ ಸುರಕ್ಷತಾ ಸೂಚನೆಗಳನ್ನು ಜನರಿಗೆ ಅರ್ಥವಾಗೋ ಭಾಷೇಲಿ ಹಾಕಬೇಕು, ಅದಕ್ಕಿಂತ ಮೊದಲು ಓದು ಬರಹ ಬರ್ದೇ ಇರೋರ್ಗೂ ಅನುಕೂಲ ಆಗೋ ಥರ ಚಿತ್ರಗಳನ್ನು ಹಾಕ್ಬೇಕು ಅನ್ನೋ ವ್ಯವಸ್ಥೆ ಇದೆ. ಇದುನ್ನ ಮರೆತು "ಒಂದು ದೇಶ: ಒಂದು ಭಾಷೆ"ಅಂತಾನೋ, ಜನ ಕಡೇಪಕ್ಷ ಜೀವ ಉಳುಸ್ಕೊಬೇಕು ಅಂತಾದ್ರೂ ಹಿಂದಿ ಕಲೀಲಿ ಅಂತಾನೋ ಈ ವ್ಯವಸ್ಥೆ ಮಾಡಿರೋ ಕೇಂದ್ರ ಸರ್ಕಾರದ ದಬ್ಬಾಳಿಕೆ ಧೋರಣೇನ ಇದು ತೋರುಸ್ತಿದೆ ಗುರು.
ಭೂತದ ಬಾಯಲ್ಲಿ ಭಗವದ್ಗೀತೆ
ಭಾರತದ ಸಂವಿಧಾನದ ಒಂದು ಕಲಮ್ಮಿನಲ್ಲಿ ಭಾಷೆ ಆಧಾರದ ಮೇಲೆ ತಾರತಮ್ಯ ಮಾಡೋದು ಅಪರಾಧ ಅಂತ ಇದೆ. ಆದ್ರೆ ಈ ದೇಶದ ಆಡಳಿತ ನೀತಿಯೇ ಹೀಗೆ ತನ್ನ ಪ್ರಜೆಗಳ ಮೇಲೆ ಅವರದಲ್ಲದ ಭಾಷೆ ಹೇರಕ್ಕೆ ಮುಂದಾಗಿದೆ ಅನ್ನೋದು ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋ ಮಾತಿಗೆ ಒಳ್ಳೇ ಉದಾಹರಣೆ ಆಗಿದೆ ಗುರು. ಕನ್ನಡ ನಾಡಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಕೊಡ್ರೀ ಅಂತ ನಾವು ಹೋರಾಟ ಮಾಡೊ ಸ್ಥಿತಿಗೆ ನಮ್ಮನ್ನು ತಂದಿಟ್ಟಿರೋ ಈ ವ್ಯವಸ್ಥೆ ಬದಲಾಗಲೇ ಬೇಕು. ಇಲ್ಲಾಂದ್ರೆ ನಮಗೆ ಉಳಿಗಾಲವಿಲ್ಲ. ಅದುಕ್ಕಿಂತ ಹೆಚ್ಚಿನದಾಗಿ ತನ್ನ ವ್ಯವಸ್ಥೆಯಲ್ಲಿರೋ ಈ ಪೊಳ್ಳುತನದಿಂದಾಗಿ ಇಡೀ ಒಕ್ಕೂಟವೇ ಕುಸಿದು ಬಿದ್ದು ಹೋದೀತು ಅಷ್ಟೆ. ಅಲ್ವಾ ಗುರು?
17 ಅನಿಸಿಕೆಗಳು:
ಭಾಷಾ ಕಾಯಿದೆಗೆ ತಿದ್ದುಪಡಿ ಬರುವವರೆಗೆ ಇದೆ ಗತಿ. ಅದಕ್ಕಾಗಿ ನಮ್ಮ ಸಂಸದರು ಹೋರಾಡಬೇಕು.
thumba chennagide.. nimage kannada da bagge iruva kaaLaji, abhimaana da bagge nanage thuMbaa khushiyaagide.. naanu bahaLa articles gaLannu OdiddEne, thuMbaa chennaagi vivaraNegaLannu kodtaa idira...
Regards
Vijay, Kannadiga.
Software Engineer.
ಹೌದು , ರೈಲ್ವೇ ಹೋಗಿ ಹಿಂದಿ, ಟಿವಿ ನಲ್ಲಿ ಇಂಡಿಯಾ Ad ಸಹ ಹಿಂದಿ, "ಭಾರತ್ ನಿರ್ಮಾಣ್" ಅಂತ ಭಾರತಕ್ಕೆ ಹಿಂದಿ ಒಂದೇ ಭಾಷೇ ಅನ್ನೋಹಾಗೆ.
ಇನ್ನೂ ಹೊಸ ವಿಮಾನ ನಿಲ್ದಾಣದಲ್ಲಿ ಇಂಗ್ಲೀಷ್ ಮೊದಲ್ನೇ ಸ್ಥಾನಗಳಿಸಿದರೆ ಹಿಂದಿ ಎರಡನ್ ಸ್ಥಾನ , ಕನ್ನಡಕ್ಕೆ ಮೂರನೇ ಸ್ಥಾನ !, ಇನ್ನೂ Parking ನ ಕನ್ನಡದಲ್ಲಿ "ಪಾರ್ಕಿಂಗ್" ಅಂತ ಹಾಕಿದ್ದಾರೆ "ವಾಹನ ನಿಲ್ದಾಣ" ಅಂತ ಅಲ್ಲ.
ಇನ್ನು ನಾವು ಹೀಗೆ ಇದ್ರೆ ಕರ್ನಾಟಕದಲ್ಲಿ ಕನ್ನಡಿಗನೇ "ಅನಾಥ" ಆಗ್ಬೇಕಾಗುತ್ತೆ !
ವಿಮಾನ ನಿಲ್ದಾಣಗಳಲ್ಲಿ ಇಂಗ್ಲಿಷ್, ಹಿಂದಿ ಬಳಿಕ ಕನ್ನಡ ಬಳಸಿದ್ರೆ ಏನೂ ತೊಂದರೆ ಇಲ್ಲಾಂತ ನನ್ನ ಅಭಿಪ್ರಾಯ. ಆದ್ರೆ ಇಲ್ಲಿ ಚಿತ್ರದಲ್ಲಿ ತೋರಿಸ್ದಾಗೆ ಕನ್ನಡ ಮಾಯವಾಗಿದೆ; ಇದು ತಪ್ಪು. ಮತ್ತೆ ’ಪಾರ್ಕಿಂಗ್’ನ್ನು ಕನ್ನಡದಲ್ಲಿ ಬರೆದ್ರೆ (ನಿಲ್ದಾಣ, ನಿಲುಗಡೆ ಅಂತೆಲ್ಲಾ) ತುಂಬ ಗೊಂದಲಗಳುಂಟಾಗುತ್ತವೆ. ಕೆಲವು ಬಾರಿ ಇಂಗ್ಲೀಷ್ ಪದಗಳಿಗೆ ಪರ್ಯಾಯವಾದ ಅದೇ ಅರ್ಥ ಕೊಡುವ ಕನ್ನಡ ಪದಗಳು ಸಿಗೋದಿಲ್ಲ. ಉದಾಹರಣೆಗೆ ’ಕಾಮನ್ ಸೆನ್ಸ್’ನ್ನು ’ಸಾಮಾನ್ಯ ಜ್ಜ್ಯಾನ’ ಅಂದ್ರೆ ಸರಿಯಾಗೊಲ್ಲ - ’ಅವಶ್ಯ ಜ್ಜ್ಯಾನ’ ಎಂಬುದು ಸರಿ. ಈಗ ನಾನು ಸರಿ ಅಂದ್ರೂನು ಅದನ್ನು ತಪ್ಪು ಅನ್ನೋ ಮಂದಿ ತುಂಬ ಇದ್ದಾರೆ. ಹಾಗಾಗಿ ’ಬಸ್’, ’ಕಂಪ್ಯೂಟರ್’ ಇತ್ಯಾದಿ ಹಾಗೇನೇ ಬಳಸಿದರೆ ತಪ್ಪಲ್ಲ ಅನ್ನೋದು ನನ್ನ ಭಾವನೆ.
ಹರಿಜೋಗಿಯವರೇ,
ನಿಮ್ಮ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. ಕನ್ನಡಾಭಿಮಾನ ಅಂತ ಎಲ್ಲವನ್ನೂ ಕನ್ನಡೀಕರಣ ಮಾಡುವುದು ಸರಿಯಾಗಲಾರದೆಂಬುದಕ್ಕೇ ಇತ್ತೀಚೆಗಂತೂ ಅನೇಕ ಉದಾಹರಣೆಗಳು ಸಿಗುತ್ತವೆ. ಆದ್ದರಿಂದ, ಅತ್ಯಗತ್ಯವೆನಿಸುವ ಸ್ವರಲಾಲಿತ್ಯ ಹಾಗೂ ಅರ್ಥವಂತಿಕೆಯನ್ನು ಸ್ಫುರಿಸುವಂಥ ಇಂಗ್ಲೀಷ್ ಪದಗಳನ್ನೂ ಹಾಗೆಯೆ ಬಳಸಿಕೊಳ್ಳುವುದರಿಂದ ನಮ್ಮ ಭಾಷೆ ಇನ್ನಷ್ಟು ಸಮೃದ್ಧಿಯಾಗುತ್ತದೆ.
-ರೈಟರ್ ಶಿವರಾಂ
http://ritertimes.com
ಹರಿಜೋಗಿಯವ್ರೇ,
ಬೆಂಗಳೂರಲ್ಲಿ ಹಿಂದಿ ಯಾಕೆ ಬೇಕು?ಹಿಂದಿ ಗೊತ್ತಿರೋರಿಗಿಂತ ತೆಲುಗು ಬಲ್ಲವರು ಜಾಸ್ತಿ ಜನ ಇದಾರೆ , ತೆಲುಗು ಯಾಕೆ ಬೇಡ? ಅಂತ ವಾದ ಮಾಡುದ್ರೆ ಏನುತ್ತರ ಕೊಡ್ತೀರಾ? ಹಿಂದಿ, ತೆಲುಗು, ತಮಿಳು ಥರಾ ಕನ್ನಡ ಗೊತ್ತಿಲ್ಡೇ ಇರೋರು ಇಂಗ್ಲಿಷ್ ಓದ್ಕೊತಾರೆ ಬಿಡಿ. ನೀವೇನಾರ ದಿಲ್ಲಿಯಲ್ಲಿ ಕನ್ನಡದ ಫಲಕಗಳನ್ನು ಹಾಕಿರೋದುನ್ನ ನೋಡಿದೀರಾ? ಇಲ್ಲ ಅಂದಮೇಲೆ ಇಲ್ಲಿ ಹಿಂದಿ ಯಾಕೆ?
ಬೇರೆ ಭಾಷೆ ಪದ ನಮ್ ಭಾಷೆಗೆ ಬೇಕೇ ಬೇಕು. ಆದರೆ ಹಾಗ್ ಬರ್ಓವಾಗ ಅದು ಕನ್ನಡದ ಸ್ವರೂಪ ತೊಗೊಬೇಕು. ನಾವು ಏನೇ ಬೇಡ ಅಂದ್ರು ಅದು ಬಂದೇ ಬರುತ್ತೆ ಮತ್ತು ಉಲಿಯಲು ಸುಲಭವಾಗಿದ್ದಲ್ಲಿ ಉಳಿಯುತ್ತೆ. ಸ್ವರಲಾಲಿತ್ಯ, ಪಾಲಿತ್ಯ ಎಲ್ಲಾ ಬಳ್ಸೋ ಜನಕ್ಕೆ ಗೊತ್ತಾಗಲ್ಲ. ಸುಲಭವಾಗಿ ಹೇಳಕ್ಅಆಗೋ ಪದ ಬಳುಸ್ತಾರೆ, ಅಷ್ಟಕ್ಕೂ ಬಲವಂತವಾಗಿ ಕಷ್ಟದ ಪದ ಇದ್ರೆ ಅಪಭ್ರಂಶಗೊಳಿಸಿ ಸರಳ ಮಾಡ್ಕೋತಾರೆ. ಇದು ಸಹಜ. ಎಲ್ಲ ಕನ್ನಡದಲ್ಲೇ ಇರಲಿ ಅಂತಾ ಮುಂದುವರೆಯೋದು ಎಷ್ಟು ತಪ್ಪೋ ಕನ್ನಡದಲ್ಲಿ ಪದಗಳಿದ್ದಾಗ್ಲೂ ಕಡ ತೊಗೊಳ್ಳೋದು ಅಷ್ಟೇ ತಪ್ಪು
ತಿಮ್ಮಯ್ಯನವರೇ,
೧) ನಾನು ಹಿಂದಿ ಬಳಸಬೇಕು ಅನ್ನೋದು ಅದು ರಾಷ್ಟ್ರೀಯ ಭಾಷೆ ಎಂಬ ನೆಲೆಯಿಂದ. ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆ ಅದು ಬೇಕೇ. ನಾವು ಭಾರತವನ್ನು ಹೇಗೆ ನಮ್ಮ ದೇಶವೆಂದು ಒಪ್ಪಿಕೊಂಡಿದ್ದೇವೋ ಹಾಗೆಯೇ ಹಿಂದಿಯನ್ನೂ ಸ್ವೀಕರಿಸುವುದರಲ್ಲಿ ಏನೂ ತಪ್ಪಿಲ್ಲ. ತೆಲುಗು, ತಮಿಳು ನಮ್ಮ ಹಾಗೇ ಪ್ರಾದೇಶಿಕ ಭಾಷೆಗಳು, ಅವುಗಳನ್ನು ನಮ್ಮ ರಾಜ್ಯದಲ್ಲಿ ಬಳಸುವ ಅಗತ್ಯವಿಲ್ಲ. ಹಾಗೆಯೇ ಕನ್ನಡವನ್ನು ದಿಲ್ಲಿಯಲ್ಲೋ ಅಥವ ಇತರ ಪ್ರದೇಶಗಳಲ್ಲಿ ಬಳಸಲು ಯಾರೂ ಒತ್ತಾಯಿಸುವುದಿಲ್ಲ.
೨)ನಮ್ಮ ಭಾಷೆ ಬೆಳೆಯಬೇಕೆಂದರೆ, ನಾವು ಇತರ ಭಾಷೆಗಳ ಕೆಲವು ಪದಗಳನ್ನು ಬಳಸುವುದು ಅನಿವಾರ್ಯ. ಆದರೆ ಅದನ್ನು ಕನ್ನಡೀಕರಿಸುವುದರಲ್ಲಿ ಏನೂ ತಪ್ಪಿಲ್ಲ. ನಾನು ಆಗಲೇ ಹೇಳಿದಹಾಗೆ ಬಸ್ = ಬಸ್ಸು, ರೋಡ್ = ರೋಡು; ಪೆನ್=ಪೆನ್ನು ಹೀಗೆ ಬಳಸಬಹುದು. ಅಲ್ಲದೆ ಆಧುನಿಕ (ಆಂಗ್ಲ)ಪದಗಳಿಗೆ ಸಮಾನಾರ್ಥಕ ಪದಗಳು ಯಾವ ಭಾಷೆಯಲ್ಲೂ ಇಲ್ಲ. ಕಂಪ್ಯೂಟರ್, ಕ್ಯಾಲ್ಕುಲೇಟರ್, ಸ್ಕ್ಯಾನ್ನರ್, ಪ್ರೊಜೆಕ್ಟರ್ ಇವುಗಳನ್ನು ನಾವು ಹಾಗೆಯೇ ಬಳಸುವುದಿಲ್ಲವೇ? ’ಪಾರ್ಕಿಂಗ್’ಗೆ ಅದೇ ಅರ್ಥ ಬರುವ ಕನ್ನಡ ಪದ ನಾಕಾಣೆ. arrival=ಆಗಮನ, departure=ನಿರ್ಗಮನ ಸರಿ. ಇಂತಹ ಪದಗಳು ಲಭ್ಯವಿದ್ದರೆ ಅದನ್ನು ಖಂಡಿತ ಬಳಸಲೇಬೇಕು. ’ನೋ ಪಾರ್ಕಿಂಗ್’ ಅಂತ ಬರೆಯುವುದು ತಪ್ಪು; ’ಪಾರ್ಕಿಂಗ್ ಇಲ್ಲ/ಅವಕಾಶ ಇಲ್ಲ’ ಹೀಗೆ ಬರೆದರೆ ಓಕೆ(!). ಮತ್ತೆ ಇನ್ನೊಂದು ವಿಷಯ; ಬಹಳ ಮಂದಿಗೆ ಇದು ಇಷ್ಟವಾಗದು..ಆದರೂ ಹೇಳುತ್ತೇನೆ.. ನಾನು ನಮ್ಮ ಭಾಷೆಯನ್ನು ಪ್ರೀತಿಸಬೇಕು, ಹೆಚ್ಚಾಗಿ ಬಳಸಬೇಕು ನಿಜ, ಆದರೆ ಬೇರೆ ಭಾಷೆಯನ್ನು ದ್ವೇಷಿಸುವುದು ತಪ್ಪು.
ಪ್ರಿಯ ಹರಿಜೋಗಿಯವರೇ,
ಭಾರತವನ್ನು ನಾವುಒ ಪ್ಪಿದ್ದ ಕಾರಣಕ್ಕೆ ಹಿಂದಿಯನ್ನು ಒಪ್ಪಬೇಕು ಅನ್ನುವುದು ಸರಿಯಲ್ಲ. ಜೊತೆಗೆ ಹಿಂದಿ ಈ ದೇಶದ ರಾಷ್ಟ್ರಭಾಷೆ ಕೂಡಾ ಅಲ್ಲ. (ರಾಷ್ಟ್ರ ಭಾಷೆ ಮತ್ತು ರಾಷ್ಟ್ರೀಯ ಭಾಷೆಗಳನ ಡುವಿನ ವ್ಯತ್ಯಾಸ ತಿಳಿಯುತ್ತಿಲ್ಲ.)ಹಿಂದಿಯೂ ಕೂಡ ಉತ್ತರಪ್ರದೇಶಗಳಂತಹ ಕೆಲ ಪ್ರದೇಶಗಳ ಪ್ರಾದೇಶಿಕ ಭಾಷೆಯೇಆಗಿದ್ೆ. ಬೆಂಗಾಲಿ, ಪಂಜಾಬಿ, ಗುಜರಾತಿ, ರಾಜಸ್ಥಾನಿ, ಪಹಾಡಿ(ಹಿಮಾಚಲ, ಅಸ್ಸಾಮಿ, ಕನ್ನಡ, ತಮಿಳು, ತೆಲುಗು, ಮಲಯಾಳಗಳ ಹಾಗೆ ಹಿಂದಿಯೂ ಭಾರತದ ಒಂದು ಭಾಷೆ. ಅದಕ್ಕೆ ನೀವನ್ನುವಂತೆ ರಾಷ್ಟ್ರಭಾಷಾ ಸ್ಥಾನಮಾನ ಇಲ್ಲ. ಇದ್ದರೂ ಅದು ಕನ್ನಡಕ್ಕೆ ಮಾರಕವಾಗುವುದರಿಂದ ಅದನ್ನು ಕನ್ನಾಡಿಗರು ಒಪ್ಪುವುದೂ ಸಾಧ್ಯವಿಲ್ಲ. ನಿಲ್ದಾಣ ಅನ್ನುವುದು ಬಳಕೆಯಲ್ಲಿರುವ ಕನ್ನಡದ್ದೇಅಆದ ಪದ. ನಿಲ್ಲುವ ತಾಣ = ನಿಲ್ದಾಣ. ಇದು ಉಲಿಯಲು ಸುಲಭವೂ ಆಗಿದೆ. ಇಷ್ಟಕ್ಕೂ ಯಾವ ಪದ ಉಲಿಯಲುಸು ಲಭವೋ ಅದು ಬಳಕೆಯಲ್ಲಿರುತ್ತದೆ, ಇಲ್ಲದಿದ್ದರೆ ಸಾಯುತ್ತದೆ.
ನಿಮಗೆ ನನ್ನ ಪ್ರತಿಕ್ರಿಯೆಯಲ್ಲಿ ಪರಭಾಷಾ ದ್ವೇಷ ಕಂಡಿದ್ದರೆ, ಅದಕ್ಕೆ ನಿಮ್ಮ ದೃಷ್ಟಿಕೋನ ಕಾರಣವೇ ಹೊರತು, ನನ್ನ ಬರಹವಲ್ಲ ಅಂತ ನನ್ನ ಭಾವನೆ.
ಪ್ರೀತಿಯ ತಿಮ್ಮಯ್ಯನವರೇ,
ನಾನು ನಿಮ್ಮ ಪ್ರತಿಕ್ರಿಯೆಯಲ್ಲಿ ಪರಭಾಷಾ ದ್ವೇಷ ಕಂಡಿದ್ದೇನೆಂದು ಎಲ್ಲೂ ಹೇಳಿಲ್ಲ. ಈಗಿನ ಪರಿಸ್ಥಿತಿಗೆ, ಸಾಮಾನ್ಯವಾಗಿ ಎಲ್ಲರಿಗೂ ಅನ್ವಯವಾಗುವಂತೆ ನಾನು ಅದನ್ನು ಹೇಳಿದ್ದು.
ಇನ್ನು, ನೀವಂದಂತೆ ’ಹಿಂದಿಗೆ ರಾಷ್ಟ್ರಭಾಷಾ ಸ್ಥಾನಮಾನ ಇಲ್ಲ. ಇದ್ದರೂ ಅದು ಕನ್ನಡಕ್ಕೆ ಮಾರಕವಾಗುವುದರಿಂದ ಅದನ್ನು ಕನ್ನಾಡಿಗರು ಒಪ್ಪುವುದೂ ಸಾಧ್ಯವಿಲ್ಲ’ ಎಂಬ ಹೇಳಿಕೆ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ಉಳಿದ ಓದುಗರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕಾಗಿ ವಿನಂತಿ. ನಿಮ್ಮ ವರಸೆಯಲ್ಲೇ ಹೇಳುವುದಾದರೆ, ’ಕನ್ನಡ ರಾಜ್ಯಭಾಷೆಯಾದರು ಅದನ್ನು ಒಪ್ಪುವುದಿಲ್ಲ’ ಎಂದು ರಾಜ್ಯದ ಅನ್ಯಭಾಷಿಕರು ಹೇಳಿದರೆ? ನೆನಪಿಡಿ, ಕರ್ನಾಟಕದಲ್ಲಿ ಪ್ರಾದೇಶಿಕ ಭಾಷೆ ಇರುವುದು ಕನ್ನಡ ಒಂದೇ ಅಲ್ಲ. ತುಳು, ಕೊಡವ ಅಂತಹ ಅನೇಕ ಇವೆ. ನಾವೆಲ್ಲರೂ ಸಾಂವಿಧಾನಿಕವಾಗಿ ಕೆಲವು ವಿಷಯಗಳನ್ನು - ಅವು ಅಪ್ರಿಯವಾದರೂ - ಸ್ವೀಕರಿಸಬೇಕಾಗುತ್ತದೆ ಅಲ್ಲವೆ?
ತಿಮ್ಮಯ್ಯನವರೇ,
ಇನ್ನೊಂದು ವಿಷಯ ಮರೆತುಬಿಟ್ಟೆ.. ನೀವು ಪಾರ್ಕಿಂಗ್ ಗೆ ನಿಲ್ದಾಣ ಎಂಬ ಪದವನ್ನು ಸೂಚಿಸಿದ್ಡೀರಿ. ಆದರೆ ಅದು ಸೂಕ್ತ ಪದ ಅಲ್ಲ. ಯಾಕೆಂದರೆ ನಾವು ನಿಲ್ದಾಣವನ್ನು ವಿಮಾನ ನಿಲ್ದಾಣ, ಬಸ್ಸು ನಿಲ್ದಾಣ, ರಿಕ್ಷಾ ನಿಲ್ದಾಣ ಇತ್ಯಾದಿಗಳಿಗೆ ಉಪಯೋಗಿಸುತ್ತಿದ್ದೇವೆ. ’ವಾಹನ ನಿಲ್ದಾಣ’ ಎಂದು ಬಳಸಬಹುದಾದರೂ ಅದನ್ನು ಪಾರ್ಕಿಂಗ್ ಎಂದು ಅರ್ಥೈಸುವುದು ಕಷ್ಟ ಅಂತ ನನ್ನ ಭಾವನೆ.
ಹರಿಜೋಗಿಯವರಿಗೆ ನಮಸ್ಕಾರ,
ವಾಹನ ನಿಲುಗಡೆ ಅಂತ ಅನೇಕ ಕಡೆ ಈಗಾಗಲೇ ಬಳಕೆಯಲ್ಲಿದೆ.ನಾನು ಹೇಳ್ತಿರೋದು ಏನಂದ್ರೆ ಎಲ್ಲ ಪದಗಳನ್ನೂ ಕನ್ನಡದಲ್ಲಿ ತರ್ಜುಮೆ ಮಾಡಲು ಮುಂದಾಗುವುದು ಎಷ್ಟು ತಪ್ಪೋ ಕನ್ನಡದಲ್ಲಿ ಇರುವ ಪದವನ್ನು ಬಳಸದೆ ಇರುವುದೂ ಅಷ್ಟೆ ತಪ್ಪು. ಅದೇನೆ ಇದ್ದರೂ ಹೊಸಪದಗಳು ಹೂಟ್ಟೊದೂ ಇರೋ ಕೆಲವು ಮರೆಯಾಗೋದೂ ಸಹಜವೇ ಆಗಿದೆ.
ತಿಮ್ಮಯ್ಯ
ಹರಿಜೋಗಿಯವರೇ,
ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿಕೊಳ್ಳಬಾರದು ಅಲ್ವಾ? ಹಿಂದಿಯನ್ನು ಭಾರತದ ರಾಷ್ಟ್ರಭಾಷೆ ಅಂತ ಒಪ್ಪುವುದು ಅಂಥದೇ ಕ್ರಿಯೆಯಾಗುತ್ತೆ. ಈಗ ಹಾಗೆ ಮಾಡದಲೆಯೇ ಕನ್ನಡಕ್ಕೆ ಎಷ್ಟು ತೊಡಕಾಗಿದೆ ಅಂತ ನಮಗೆ ಕಾಣುತ್ತಿದೆ. ನಮ್ಮ ನಾಡಿನಲ್ಲಿ ನಮ್ಮ ಮಕ್ಕಳಿಗೆ ಕೆಲ್ಸ ಬೇಕು ಅಂದರೆ ಹಿಂದಿ ಕಡ್ಡಾಯ ಅನ್ನೋ ಸ್ಥಿತಿಗೆ ತಲುಪಿದ್ದೀವಿ ಅನ್ನೋದ್ನ ಮರೀಬೇಡ್ವಿ (ರೇಲ್ವೆ ನೇಮಕಾತಿ, ಬ್ಯಾಂಕ್ ನೇಮಕಾತಿಗಳಲ್ಲಿ ಹಿಂದಿ ಕಡ್ಡಾಯ ಮಾಡಿರೋ ಲೇಖನಗಳನ್ನು ಏನ್ ಗುರುವಿನಲ್ಲೇ ಓದಿ ನೋಡಿರಿ). ಹಿಂದಿ ಹೇರಿಕೆಯ ನಾನಾ ಮುಖಗಳನ್ನೂ, ಪರಿಣಾಮಗಳನ್ನೂ ಓದಿ ನೋಡಿ.
ಕನ್ನಡ ನಾಡಿನ ಒಳನುಡಿಗಳ ಬಗ್ಗೆ ಮಾತೆತ್ತಿದ್ದೀರಾ, ಸಂತೋಷ. ಕೊಡಗಿನಲ್ಲಿ ಕೊಡವ, ತುಳುನಾಡಿನಲ್ಲಿ ತುಳು ಭಾಷೆಗೆ ಮೊದಲ ಸ್ಥಾನ ಕೊಡುವುದೇ ಸರಿಯಾದದ್ದು ಅನ್ನುವ ನಿಲುವು ನನ್ನದು. ಇಲ್ಲಾ ನಿಮ್ಮ ನೆಲದಲ್ಲೂ ನಿಮ್ಮದಲ್ಲದ ನುಡಿಯೇ ಸಾರ್ವಭೌಮ ಭಾಷೆ ಅಂದ್ರೆ ಅದು ದಬ್ಬಾಳಿಕೆ ಆಗುತ್ತೆ ಮತ್ತು ಸಹಜವಾಗೇ ಪ್ರತ್ಯೇಕತೆಯ ಕೂಗು ಏಳಲು ಕಾರಣವಾಗುತ್ತದೆ. ಇನ್ನು ನೀವು ಒಂದು ದೇಶ ಒಂದು ಭಾಶೆ ಅಂತ ನಂಬುವುದಾದರೆ ಭಾರತ ಒಂದು ದೇಶವಾಗಿರಲೇ ಲಾಯಕ್ಕಲ್ಲ ಅಂತ ವಾದಿಸಿದ ಹಾಗಾಗುತ್ತೆ. ಅನೇಕ ಭಾಷಿಕ ಸಮುದಾಯಗಳಿರುವ ಭಾರತಕ್ಕೆ ಒಂದೇ ಭಾಷೆ ಇರಬೇಕು ಅನ್ನೋದಾದ್ರೆ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡಿದಂತಾಗುತ್ತದೆ. ಇನ್ನು ಸಂವಿಧಾನದಲ್ಲಿ ಎಲ್ಲವೂ ಸರಿಯಿರುತ್ತದೆ ಅನ್ನೋ ಭ್ರಮೆ ಬೇಕಾಗಿಲ್ಲ. ಇಲ್ಲದಿದ್ದರೆ ನೂರಾರು ತಿದ್ದುಪಡಿಗಳನ್ನು ಮಾಡುತ್ತಿರಲಿಲ್ಲ. ಮತ್ತು ತಿದ್ದುಪಡಿಗೆ ಅವಕಾಶವನ್ನೇ ಕೊಡ್ತಿರಲಿಲ್ಲ ಅಲ್ಲವೇ?ಏನಂತೀರಾ?
ಈ ದೇಶದಲ್ಲಿ ಯೋಗ್ಯವಾದ ಸರಿಯಾದ ಒಕ್ಕೂಟ ವ್ಯವಸ್ಥೆ ಬರಲಿ, ಇಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಗೌರವ ಸ್ಥಾನಮಾನ ಇರಲಿ ಅಂತ ಅಂದುಕೊಳ್ಳೋದು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸೋ ಚಿಂತನೆ ಎಂಬುದು ನನ್ನ ನಿಲುವು.
ತಿಮ್ಮಯ್ಯ
ಪ್ರೀತಿಯ ತಿಮ್ಮಯ್ಯನವರೇ,
ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ಆದರೂ ನಾವು ಪರದೇಶಿ ಭಾಷೆ ಇಂಗ್ಲೀಷನ್ನು ಒಪ್ಪಿಕೊಂಡಿರುವಾಗ ಹಿಂದಿ ಯಾಕೆ ಬೇಡಾಂತ ನನ್ನ ಪ್ರಶ್ನೆ. ಹಾಗೆ ನೋಡಿದರೆ ನಮ್ಮ ಯುವಪೀಳಿಗೆ ನಾಡ ಭಾಷೆ ಕಲಿಯದಿರಲು/ದ್ವಿತೀಯ ಸ್ಥಾನದಲ್ಲಿಡಲು ಇಂಗ್ಲೀಷ್ ಕಾರಣ. ಈಗ ಇಂಗ್ಲಿಷ್ ರಾಷ್ಟ್ರೀಯವಾಗಿ ಬಳಕೆಯಾಗುತ್ತಿದೆ; ಅದು ಇಲ್ಲದಿದ್ದರೆ ಇಂದು ಸಂವಹನಕ್ಕೆ ಬಹಳ ತೊಂದರೆಯಾಗುತಿತ್ತು. ಆ ಸ್ಥಾನಕ್ಕೆ ಹಿಂದಿಯನ್ನು ಯಾಕೆ ಬರಬಾರದು? ನಾನು ಭಾಷೆಯ ’ಯೋಗ್ಯತೆ’ಯ ದೃಷ್ಟಿಯಿಂದ ಹೇಳುತ್ತಿಲ್ಲ. ಹಾಗೆ ನೋಡಿದರೆ ಇಂಗ್ಲಿಷ್ ಗೂ ಆ ಯೋಗ್ಯತೆ ಇಲ್ಲ.
ಇನ್ನು ನಮ್ಮ ಒಳಭಾಷೆಗಳ ಬಗ್ಗೆ ನಿಮ್ಮ ನಿಲುವು ಸಾಧುವಾದದ್ದು. ಆದರೆ ಉಳಿದ ಹೆಚ್ಚಿನವರು ಇದನ್ನು ವಿರೋಧಿಸುತ್ತಾರೆಂದು ನನ್ನ ಅನಿಸಿಕೆ. ಆಗ ತುಳುವರಿಗೆ/ ಕೊಡವರಿಗೆ ಕನ್ನಡ ’ಹಿಂದಿಯ ಸ್ಥಾನದಲ್ಲಿ’ ಕಂಡರೆ?
ಪ್ರಿಯ ಹರಿಜೋಗಿ,
ನನ್ನ ಅನಿಸಿಕೆ ’ಇಂಥದ್ದು ಸರಿಯಾದದ್ದು’ ಅನ್ನುವ ಬಗ್ಗೆ ಮಾತ್ರಾ, ಇದನ್ನು ಯಾರು ಒಪ್ಪಿದರೂ ಒಪ್ಪದಿದ್ದರೂ ಕೂಡಾ. ಇದ್ಯಾಕೆ ಹೇಳಿದೆ ಅಂದ್ರೆ ಯಾರ ಮೇಲೆ ಯಾರೂ ದಬ್ಬಾಳಿಕೆ ನಡೆಸಬಾರದು, ಯಾರ ಮೇಲೆ ಏನನ್ನೂ ಹೇರಬಾರದು ಅಂತ. ಆದರೆ ಸಂವಿಧಾನದಲ್ಲಿ ಸಮಾನತೆ ಅಂತ ಹೇಳ್ತಾ ಹಿಂದಿಯನ್ನು ಬಲವಂತ, ಬೆದರಿಕೆ, ಬಹುಮಾನಗಳ ಆಮಿಷಗಳ ಮೂಲಕ ಹರಡುವುದಕ್ಕೆ ಭಾರತ ಸರ್ಕಾರವೇ ಮುಂದಾಗಿರುವುದಕ್ಕೆ ನನ್ನ ತೀವ್ರ ವಿರೋಧವಿದೆ.
ಹಿಂದಿಯನ್ನು ಒಪ್ಪಿಕೊಳ್ಳಿ ಎನ್ನುವವರು ಬಳಸುವ ಮಾತನ್ನೇ ನೀವೂ ಆಡಿದ್ದೀರಾ... "ಹೊರದೇಶದ ಇಂಗ್ಲಿಷ್ ಪರ್ವಾಗಿಲ್ಲ, ಹಿಂದಿ ಬೇಡ ಅಂದ್ರೆ ಸರೀನಾ" ಅನ್ನೋ ಅರ್ಥದಲ್ಲಿ.
ನಿಜ ಏನಂದ್ರೆ ಕನ್ನಡ ಮಾತ್ರಾ ನಮ್ಮದು. ಅದು ಬಿಟ್ಟು ಉಳಿದದ್ದೆಲ್ಲಾ ನಮ್ಮದಲ್ಲ. ಅದು ಸಂಸ್ಕೃತ, ಹಿಂದಿ, ತಮಿಳು, ಇಂಗ್ಲಿಷ್, ಜಪಾನೀಸ್.... ಇತ್ಯಾದಿ ಯಾವುದೇ ಆಗಿದ್ದರೂ. ಹಾಗೆಂದ ಮಾತ್ರಕ್ಕೆ ಇದ್ಯಾವುವೂ ಬೇಡವಾ? ಅನ್ನಬೇಡಿ. ಎಲ್ಲ ಭಾಷೆಗಳು ಬೆಳೆಯೋದೇ ಹೊರ ಭಾಷೆಗಳಿಂದ ಪದಗಳನ್ನು ಪಡೆಯುತ್ತಾ. ಹಾಗೇ ಕನ್ನಡದಲ್ಲಿ ತುಂಬಾ ಪರಭಾಷಾ ಪದಗಳಿವೆ. ಅದು ಸಹಜವಾದದ್ದೇ ಆಗಿದೆ. ನಮ್ಮ ಬದುಕು ಕನ್ನಡದಲ್ಲಿಯೇ ಇರಬೇಕು. ಅಂದರೆ ನಮ್ಮ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಆಡಳಿತ, ಕಲಿಕೆ, ಉದ್ಯೋಗ, ಮನರಂಜನೆ....ಎಲ್ಲಾ. ಈಗ ಹಾಗಿಲ್ಲ ಅನ್ನುವುದನ್ನೂ ನಾನು ಬಲ್ಲೆ. ಆದರೆ ನಮ್ಮ ಪಯಣ ಹಾಗೆ ಮಾಡುವ ಕಡೆ ಸಾಗಬೇಕು ಪ್ರಪಂಚದ ಜ್ಞಾನವೆಲ್ಲ ನಮಗೆ ಕನ್ನಡದಲ್ಲಿ ಬೇಕು. ಈಗಿಲ್ಲ. ಎಲ್ಲ ಜ್ಞಾನ ವಿಜ್ಞಾನಗಳ ಕಲಿಕೆ ಇಂದು ಇಂಗ್ಲಿಷ್ ನಲ್ಲಿ ನಡೆದಿದೆಯಲ್ಲಾ. ಹೇಗಿದ್ದರೂ ಭಾರತದ ಎಲ್ಲ ಮಕ್ಕಳೂ ಇಂಗ್ಲಿಷ್ ಕಲ್ತೇ ಕಲೀತಾರೆ. ಇಷ್ಟರ ಮೇಲೆ ನಮಗೆ ಫ್ರೆಂಚ್ ಭಾಷೆ ಕಲಿಯುವುದರಿಂದ ಇನ್ನೇನೋ ಅರಿವು ಸಿಗುತ್ತದೆ ಅಂದ್ರೆ ಅದನ್ನೂ ಕಲೀಬೇಕು. ಸಂಸ್ಕೃತದಿಂದ ಇಂಥಿಂಥಾ ಲಾಭ ಸಿಗುತ್ತದೆ ಅನ್ನೋದಾದ್ರೆ ಅದನ್ನೂ ಕಲೀಬೇಕು. ಆದರೆ ಇಡೀ ಜನಾಂಗವೆಲ್ಲಾ ಅದನ್ನು ಕಲೀಲಿ ಅನ್ನೋದು ಸರಿಯಲ್ಲ. ಕೆಲವರು ಕಲಿತು ಕನ್ನದಕ್ಕೆ ಅದನ್ನು ತರುವ ಮೂಲಕ ಎಲ್ಲ ಕನ್ನಡಿಗರ ಕಲಿಕೆಯನ್ನು ಸರಳ ಮಾಡಬೇಕು. ಬಹುಷಃ ನನ್ನ ನಿಲುವು ನಿಮಗೆ ಅರ್ಥವಾಗುತ್ತಿದೆ ಎಂದುಕೊಳ್ಳುತ್ತೇನೆ. ನಮ್ಮವರಲ್ಲದವರೊಡನೆ ವ್ಯವಹರಿಸಲು ನಮಗೆ ಇಬ್ಬರೂ ಬಲ್ಲ ಸಾಮಾನ್ಯ ಭಾಷೆ ಬೇಕು. ಅದು ಇಂಗ್ಲಿಷ್ ಆಗಿರಲಿ ಬಿಡಿ.
ಇದಕ್ಕೆ ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳಿ. ನೀವು ತಮಿಳುನಾಡಿಗೆ ವಲಸೆ ಹೋಗುವಿರಿ ಎಂದಾದರೆ ನೀವು ಕಲಿಯಬೇಕಾದ ಭಾಷೆ ತಮಿಳು. ಅಲ್ಲಿ ಹೋಗಿ ಕನ್ನಡವನ್ನಾಗಲೀ, ಹಿಂದಿಯನ್ನಾಗಲೀ ಬಳಸುವುದರಿಂದ ಆ ನೆಲದ ಸಂಸ್ಕೃತಿಗೆ ಧಕ್ಕೆ ಬರುವುದಿಲ್ಲವೇ. ಅದು ಆಗಬಾರದು. ಭಾರತದ ಪ್ರತಿಯೊಂದು ಪ್ರಾಂತ್ಯಕ್ಕೂ ಇರುವ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಇದೇ ನಿಜವಾದ ಒಕ್ಕೂಟ ಧರ್ಮ.
ಈಗ ಹಿಂದಿ ಬೇಡ ಅನ್ನುವುದಕ್ಕೆ ಇರೋ ಕಾರಣ ನೋಡೋಣ. ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಅರವತ್ತು ಮೀಟರ್ ಮುಂದೆ ನಿಂತವನಿಗೆ ಸಿಗುವ ಲಾಭವೇ ಹಿಂದಿ ಭಾಷಿಕನಿಗೆ ಇದರಿಂದ ದೊರೆಯುತ್ತದೆ. ಭಾರತದಲ್ಲಿ ಯಾವುದೇ ಕೆಲಸಕ್ಕೆ ಹಿಂದಿಯ ಜ್ಞಾನ ಇರಬೇಕು ಅನ್ನೋ ಕಟ್ಟಳೆ ವಿಧಿಸಿರುವುದರಿಂದ ಆ ಕೆಲಸಗಳಲ್ಲಿ ಸಹಜವಾಗಿ ಹಿಂದಿ ಭಾಶಿಕನಿಗೆ ಅವಕಾಶ ಹೆಚ್ಚು ಅಲ್ಲವೇ? ವಲಸಿಗ ಆಯಾ ಪ್ರದೇಶದ ಭಾಷೆ ಕಲೀಬೇಕು. ಸಂಪರ್ಕ ಭಾಷೆಯಾಗಿ ಅಂದರೆ ಬೋರ್ಡುಗಳಲ್ಲಿ, ಅರ್ಜಿಗಳಲ್ಲಿ ಅವರಿಗೂ ನೆರವಾಗಲು ಇಂಗ್ಲಿಷ್ ಸಾಕು. ಸುಮ್ನೆ ಯೋಚಿಸಿ, ನೀವೇ ಬೇರೆ ದೇಶಕ್ಕೆ ಹೋದಾಗ ಊರುಗೋಲು ಭಾಷೆಯಾಗಿ ಇಂಗ್ಲಿಷ್ ಇರುತ್ತದೆ ಮತ್ತು ಪ್ರಮುಖ ಭಾಷೆಯಾಗಿ ಆ ನೆಲದ ಭಾಷೆಯಿರುತ್ತದೆ. ಇಲ್ಲೂ ಹಾಗೇ ಇರಬೇಕು ಅನ್ನುವುದೇ ಸರಿ ಅಲ್ಲವೇ? ಇಲ್ಲಿ ಇನ್ನೊಂದು ಮಾತೆಂದರೆ ನಾವು ಇಂಗ್ಲಿಷ್ ಒಪ್ಪುವುದರಿಂದ ಇಂಗ್ಲಿಷಿನವನು ನಮ್ಮನ್ನು ಆಳುವುದಿಲ್ಲ, ಅದೇ ಹಿಂದಿ ಒಪ್ಪಿದರೆ ಈ ಮಾತನ್ನು ಖಚಿತವಾಗಿ ಹೇಳಲು ಆಗಲ್ಲ. ಏನಂತೀರಾ?
ನಮ್ಮ ಜನಕ್ಕೆ ಒಳಿತಾಗಲೀ ಅನ್ನೋ ಕಾರಣದಿಂದಲೇ ನಾವು ದೇಶ, ಒಕ್ಕೂಟ ಅನ್ನೋ ಚೌಕಟ್ಟಿನಲ್ಲಿ ಇರುವುದು. ಇಲ್ಲಿ ಇರುವುದು ಇಬ್ಬರಿಗೂ ಲಾಭವಾಗಲೀ ಅನ್ನೋ ಕಾರಣದಿಂದ ಮಾತ್ರಾ. ಇದಕ್ಕೆ ವಿರುದ್ಧವಾಗಿ ನಡೆದರೆ ಯಾಕೆ ಇಲ್ಲಿರಬೇಕು ಅನ್ನೋ ಮನಸ್ಥಿತಿ ಹುಟ್ಟುವುದು ಸಹಜ ಅಲ್ಲವೇ? ಅಸ್ಸಾಮಿನಂತಾ ನಾಡಿನಲ್ಲಿ ಪ್ರತ್ಯೇಕತಾವಾದಕ್ಕೆ ಕಾರಣವೇ ಈ ಹಿಂದಿ ಹೇರಿಕೆ, ಹಿಂದಿ ಜನರ ವಲಸೆಯಿಂದ ಕೈತಪ್ಪಿದ ಕೆಲಸಗಳು ಅಲ್ಲವೇ?
ನೀವು ಹೇಳಿದಂತೆ ಕೊಡವರಿಗೆ, ತುಳುವರಿಗೆ ಕನ್ನಡ ಹಿಂದಿಯಾಗಿ ಕಾಣದ ಹಾಗೇ ನಾವು ಅವರನ್ನು ನಡೆಸಿಕೊಳ್ಳಬೇಕು. ಕೊಡವ, ತುಳು ಭಾಷೆಗಳ ಬೆಳವಣಿಗೆಗೆ ಪ್ರೋತ್ಸಾಹ ಕೊಡಬೇಕು. ನಾನು ಆಗಲೇ ಅಂದಂತೆ ಒಂದು ನಾಡಿಗೆ ಒಂದೇ ಭಾಷೆ ಇರಬೇಕು ಅಂದುಕೊಳ್ಳುವ ಅಗತ್ಯವಿಲ್ಲ. ಅನ್ಯೋನ್ಯತೆಯಿಂದ ಇರಲಿಕ್ಕೆ ಬೇಕಾದ್ದು ನಿಮ್ಮ ಜೊತೆ ಇರುವುದರಿಂದ ನಮ್ಮ ರಕ್ಷಣೆ ಮತ್ತು ಏಳಿಗೆ ಸಾಧ್ಯ ಅನ್ನುವುದು ಮನವರಿಕೆ ಆಗುವುದು ಮಾತ್ರಾ.
ನಮಸ್ಕಾರ
ತಿಮ್ಮಯ್ಯ
ಪ್ರೀತಿಯ ತಿಮ್ಮಯ್ಯನವರೇ,
ಬಹಳ ಧೀರ್ಘವಾದ ಉತ್ತರವನ್ನೇ ನೀಡಿದ್ದೀರಿ. ನನಗೆ ಯಾವ ಭಾಷೆಯ ಮೇಲೂ ಪಕ್ಷಪಾತವಿಲ್ಲ. ಹಿಂದಿಯ ಮೇಲಿನ ದೋಷಾರೋಪಣೆ ತುಸು ’ಅತಿ’ಯಾಯಿತು ಎಂದು 'ನನಗೆ' ತೋಚಿದುದರಿಂದ ನಾನು ಪ್ರತಿಕ್ರಿಯೆ ನೀಡಿದೆ ಅಷ್ಟೆ. ನಿಮ್ಮದೇ ಮನೋಭಾವ ಎಲ್ಲರಲ್ಲೂ ಇದ್ದರೆ ಈ ಗೊಂದಲಗಳೇ ಇರುತ್ತಿರಲಿಲ್ಲ. ಆದರೆ ನಿಜ ಪರಿಸ್ಥಿತಿ ಹಾಗಿಲ್ಲ ಎಂಬುದು ವಿಷಾದನೀಯ. ನೀವು ನಿಮ್ಮ ಅಮೂಲ್ಯ ಸಮಯವನ್ನು ವ್ಯಯಿಸಿ ಚರ್ಚಿಸಿದ್ಡೀರಿ. ಇಂತಹ ಆರೋಗ್ಯಪೂರ್ಣ ಚರ್ಚೆಯಿಂದ ಕೆಲವು ಒಳ್ಳೆಯ ವಿಚಾರಗಳು ಹೊರಬರುತ್ತವೆ; ಅವು ಮುಂದಿನ ಕೆಲವು ನಿರ್ಣಯಗಳಿಗೆ ದಿಕ್ಸೂಚಿಯಾಗಬಲ್ಲುದು ಅಲ್ಲವೆ?
ಹರಿಜೋಗಿ ಅವ್ರೆ,
ಕೇಂದ್ರ ಸರ್ಕಾರ ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರುತ್ತಿದೆ. ತಿಮಯ್ಯ ಅವರು ಹೇಳಿದ್ದು ಕಹಿ ಸತ್ಯವಾಗಿದೆ. ವಿದೇಶಗಳಲ್ಲಿ ಒಮ್ಮೆ ನೋಡಿ, ಜರ್ಮನಿ ದೇಶದವರು ಜರ್ಮನಿಯಲ್ಲಿ ಓದಿ ಬರೆದು ಜಗತ್ತಿನಲ್ಲಿ ಮೂನ್ಚುನಿಯಲ್ಲಿದ್ದರೆ,ಅದೇ ರೀತಿ ಚೀನಾ,ಜಪಾನ್,ಫ್ರಾನ್ಸ್ , ಇಟಲಿ,ಮುಂತಾದ ದೇಶಗಳು ಸೇರಿವೆ. ಇವರು ತಮ್ಮ ಭಾಷೆಯಲ್ಲಿ ಕಲಿಕೆಯಿಂದನೆ ಮುಂದುವರೆದಿದ್ದಾರೆ.ಹಿಂದಿ ರಾಷ್ಟ್ರ ಭಾಷೆ ಅಂತ ಎಲ್ಲಿಯೂ ಬರೆದಿಲ್ಲ, ಇದು ಕೇಂದ್ರ ಸರ್ಕಾರದವರು ಉಣಬಡಿಸುತ್ತಿರುವ ವಿಷ.ಇತ್ತೀಚಿಗೆ ಗುಜರಾತ್ ನ ಉಚ್ಹ ನ್ಯಾಯಾಲಯ ಕೂಡ ಹಿಂದಿ ರಾಷ್ಟ್ರಭಾಷೆ ಅಲ್ಲ ಅಂತ ತೀರ್ಪು ನೀಡಿದೆ.
ಅದೇ ನಮ್ಮ ನೆರೆಯ ತಮಿಳುನಾಡಲ್ಲಿ ಸ್ವಲ್ಪ ನೋಡಿ, ಮೊದಲಿನಿಂದಲೂ ಹಿಂದಿ ಹೇರಿಕೆ ವಿರೋಧಿಸಿದ ಈ ಜನ, ಕೇಂದ್ರ ಸರ್ಕಾರವನ್ನು ತಮ್ಮ ಆಟಕೆ ತಕ್ಕಂತೆ ಕುಣಿಸಿ ಕೊಳ್ಳುತ್ತಾರೆ. ಯಾವುದೇ ಸರ್ಕಾರ ಚುನಯಿತವಾದರು ತಮಿಳು ನಾಡಿನ ೪-೬ ಕ್ಯಾಬಿನೆಟ ದರ್ಜೆ ಸಚಿವರು, ಹತ್ತಾರು ನೂತನ ಯೋಜನೆಗಳು ಇಲ್ಲಿ ಆರಂಭ ಗೊಳ್ಳುತ್ತವೆ. ಇಲ್ಲಿ ಯಾವುದು ರಾಷ್ಟ್ರೀಯ ಪಕ್ಷ ಕೂಡ ಆರಿಸಿ ಬರದಂತೆ ನೋಡಿ ಕೊಂಡಿದ್ದಾರೆ.
ತಿಮಯ್ಯನವರು ಹೇಳಿದಂತೆ, ನಾವು ಕನ್ನಡಿಗರು ಒಗ್ಗಟ್ಟಾಗಿ, ಕೇಂದ್ರ ಸರ್ಕಾರದ ತಲೆ ಬಗ್ಗಿಸಿ, ನಮ್ಮ ಪರವಾದ ಕೆಲಸಗಳನ್ನು ಮಾಡಿಸಿಕೊಳ್ಳಬಹುದು.
Namage kannada dalli beku anno bhavane ege 1970 ra dashaka dalli namma iriyarige bandidadre, navu ivathu idra bagge yochisabekiralla, mate namma bashe bagge horada bekaralilla,idarellenu tappenu illa, namma yaradru samsadaru idara bagge omme sollethidre sakithu, anustana agoke.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!