ಬಂಡಿಪುರ ರಸ್ತೆ ಮತ್ತು ಒಕ್ಕೂಟ ವ್ಯವಸ್ಥೆ!

ಬಂಡಿಪುರ ಕಾಡಲ್ಲಿ ಇರುಳಲ್ಲಿ ಗಾಡಿಗಳು ಓಡಾಡಬಾರದು ಅಂತಾ ರಾಜ್ಯ ಹೈಕೋರ್ಟು ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಹೇಳಿದ್ದ ಸುದ್ದಿ ಇತ್ತೀಚಿಗೆ ನಾವೆಲ್ಲಾ ಓದಿದೀವಿ ಗುರು! ಕಾಡುಪ್ರಾಣಿಗಳು ಇರುಳಲ್ಲಿ ಓಡಾಡೋ ಗಾಡಿಗಳಿಗೆ ಸಿಕ್ಕಿ ಸಾಯ್ತಿವೆ ಅನ್ನೋ ಕಳವಳಕಾರಿ ವಿಷಯದಿಂದಾಗಿ ಇಂಥಾ ಕ್ರಮ ಜಾರಿಯಾಗಿದೆ ಅನ್ನೋದೂ ದಿಟ. ಹೊಸಾ ಸುದ್ದಿ (ಪ್ರಜಾವಾಣಿ, ದಿ.09.02.2010 ಪುಟ 3) ಏನಪ್ಪಾ ಅಂದ್ರೆ ಈಗ ಕೇಂದ್ರಸರ್ಕಾರದೋರು ಕರ್ನಾಟಕಕ್ಕೆ ಬುದ್ಧಿ ಹೇಳಿ, ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಕೊಡಿ ಅಂತಾ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಒತ್ತಡಾ ಹೇರಕ್ಕೆ ಮುಂದಾಗಿದಾರಂತೆ.

ಕೇರಳ ಹಾಕ್ತಿರೋ ಒತ್ತಡ!

ಕೇರಳದ ಸಾರಿಗೆ ಮಾಫಿಯಾ ಅಲ್ಲಿನ ರಾಜಕಾರಣದಲ್ಲಿ ಹೊಂದಿರೋ ಬಿಗಿ ಹಿಡಿತದಿಂದಾಗಿ ಆ ರಾಜ್ಯದ ರಾಜಕಾರಣಿಗಳು ‘ತಮ್ಮ ರಾಜ್ಯದ ಆರ್ಥಿಕತೆಗೆ ಈ ರಾತ್ರಿ ಪ್ರಯಾಣ ನಿಲ್ಲಿಸಿದ್ದರಿಂದ ತೊಂದರೆ ಆಗಿದೆ’ ಅನ್ನೋ ಶಂಖಾನಾ ಜೋರಾಗೇ ಹೊಡ್ಕೊಳ್ಳೋಕೆ ಶುರು ಮಾಡಿದಾರೆ. ಆ ಜನ ನಮ್ಮ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಬಂದು ಮೊದಲಿಗೆ ಚಾಮರಾಜನಗರದ ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧದ ಆಜ್ಞೇನಾ ಯಶಸ್ವಿಯಾಗಿ ತೆರವು ಮಾಡ್ಸಿದ್ರು. ಆದ್ರೆ ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ನಿಷೇಧ ಮತ್ತೆ ಜಾರಿಯಾಯ್ತು. ಇದು ರಾಜ್ಯಸರ್ಕಾರಕ್ಕೆ ಈ ವಿಷಯದಲ್ಲಿ ಇರೋ ಅಸಡ್ಡೇನಾ ತೋರ್ಸುತ್ತೆ ಅಂತಾ ಹಿಂದಿನ ಸಾರೀನೇ ಜನ ಬೇಜಾರಾಗಿದ್ರು! ಈ ಸಲ ಕೇರಳದ ಲಾಬಿ ದಿಲ್ಲಿಯಲ್ಲಿ, ಕೇಂದ್ರಸರ್ಕಾರದ ಮಟ್ಟದಲ್ಲಿ ಜೋರಾಗಿ ನಡೆದಿದೆ. ಅದುಕ್ಕೇ ಕೇಂದ್ರದೋರು ಹೊಸ ವರಸೆ ತೆಗೆದಿದ್ದಾರೆ! ರಾಜ್ಯಸರ್ಕಾರ ಶರತ್ತುಬದ್ಧ ಅನುಮತಿಯ ಹೆಸರಲ್ಲಿ ಗಾಡಿಗಳ ಓಡಾಟಕ್ಕೆ ಅನುಮತಿ ಕೊಡೋ ಲಕ್ಷಣಗಳು ಕಾಣ್ತಿವೆ.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಅಧಿಕಾರ ವ್ಯಾಪ್ತಿ!

ಈ ವರದಿಯಲ್ಲಿರೋ ತಮಾಶೆ ನೋಡಿ. ಯಾವುದೇ ರಾಜ್ಯ ಸರ್ಕಾರ ತನ್ನ ನೆಲದಲ್ಲಿ ಸಂಚಾರ ನಿರ್ಬಂಧ ಹೇರಲು ಅವಕಾಶ ಇದ್ಯಂತೆ. ಆದ್ರೆ ಎರಡು ರಾಜ್ಯಗಳಿಗೆ ಸಂಬಂಧಿಸಿದ ರಸ್ತೆ ಆಗ್ಬುಟ್ರೆ ಕೇಂದ್ರ ರಸ್ತೆ ಸಾರಿಗೆ ಇಲಾಖೆಯೋರು ತಲೆ ತೂರುಸ್ಬೋದಂತೆ. ಇದು ಸಾಮಾನ್ಯ ಸಂದರ್ಭಗಳಲ್ಲಿ ಒಪ್ಪಬಹುದಾದ ಒಂದು ವ್ಯವಸ್ಥೆ ಅಂದುಕೊಂಡ್ರೂ ಕೇಂದ್ರಸರ್ಕಾರಕ್ಕೆ ನಮ್ಮ ಮೇಲೆ ತನ್ನ ನಿಲುವು ಹೇರೋ ಅಧಿಕಾರ ಇರೋದು ಎಷ್ಟು ಸರಿ? ಅನ್ಸಲ್ವಾ! ಬೇಕಂದ್ರೆ ಎರಡೂ ರಾಜ್ಯಗಳ ನಡುವೆ ಬಿಕ್ಕಟ್ಟು ಬರದಂಗೆ ಮಧ್ಯಸ್ಥಿಕೆ ವಹಿಸ್ತೀನಿ ಅನ್ನೋದ್ನ ಒಪ್ಪಬಹುದು. ಈಗ ನ್ಯಾಯಾಲಯ ತನ್ನ ನಿಲುವು ಸೂಚಿಸಿರೋ ವಿಷಯಕ್ಕೆ, ಅದೂ ಕಾಡುಪ್ರಾಣಿಗಳು ವಾಹನಗಳಿಗೆ ಬಲಿಯಾಗ್ಬಾರ್ದು ಅನ್ನೋ ಕಾರಣಕ್ಕೆ ಜಾರಿಗೆ ತಂದಿರೋ ನಿರ್ಬಂಧಾನ ಹೀಗೆ ರಾಜಕೀಯ ಲಾಬಿಯ ಕಾರಣದಿಂದಾಗಿ ತೆಗೆದು ಹಾಕ್ಸೋ ಪ್ರಯತ್ನ ಮಾಡೋದು ಸರೀನಾ? ಗುರು! ಎರಡು ರಸ್ತೆಗಳಲ್ಲಿ ರಾತ್ರಿ ಒಂಬತ್ತರಿಂದ ಬೆಳಗಿನ ಆರರವರೆಗೆ ಸಂಚಾರ ನಿಷೇಧ ಮಾಡೋ ಕಾರಣದಿಂದಾನೆ ಹಾಳಾಗಿಬಿಡೋ ಅಷ್ಟು ಕಳಪೆ ಆರ್ಥಿಕ ಪರಿಸ್ಥಿತಿ ಯಾವುದಾದ್ರೂ ರಾಜ್ಯಕ್ಕೆ ಇದೆ ಅನ್ನೋದೇ ನಂಬಕ್ಕಾಗದ ಮಾತು. ಅಂಥಾದ್ರಲ್ಲಿ ಆ ಮಾತ್ ಕಟ್ಕೊಂಡು ನಮ್ಮ ಮೇಲೆ ಅಧಿಕಾರ ಚಲಾಯ್ಸೋಕೆ ಅವಕಾಶ ಮಾಡಿಕೊಡೋ ಅಂಥಾ ವ್ಯವಸ್ಥೆ ನಮ್ಮ ಭಾರತ ಒಕ್ಕೂಟದ್ದು ಅನ್ನೋದು, ನಿಜಕ್ಕೂ ಯೋಚನೆ ಮಾಡಬೇಕಾದ ವಿಷಯಾ ಅಲ್ವಾ? ಈಗ ಕರ್ನಾಟಕ ರಾಜ್ಯ ಸರ್ಕಾರದೋರೇ ‘ಕಾಡುಪ್ರಾಣಿಗಳ ಉಳಿವಿಗಾಗಿ ಲಾಬಿಗಳಿಗೆ ಮಣಿಯಲ್ಲಾ... ನಾಡು, ನಾಡಿನ ಜನ, ನಾಡಿನ ಸಂಪತ್ತು, ನಾಡಿನ ಜೀವವೈವಿಧ್ಯ ಕಾಪಾಡೋ ವಿಷಯದಲ್ಲಿ ರಾಜಿಯಾಗಲ್ಲಾ’ ಅನ್ನೋದನ್ನ ಸಾಬೀತು ಮಾಡ್ತಾರಾ? ಗುರು!

4 ಅನಿಸಿಕೆಗಳು:

Anonymous ಅಂತಾರೆ...

ಇದರ ಬಗ್ಗೆ ಪರಿಸರವಾದಿ "ಯಲ್ಲಪ್ಪ ರೆಡ್ಡಿ" ಅವರು ಒಂದು ಲೇಖನ ಬರೆದಿದ್ದಾರೆ. ಅವರ ಪ್ರಕಾರ ರಾತ್ರಿ ಸಂಚಾರ ನಿಷೇದದಿಂದ ಹೆಚ್ಚು ಹಾನಿ ಪರಿಸಕಕ್ಕೆ ಮತ್ತು ಪ್ರಾಣಿಗಳಿಗೆ...ಹಾಗಾಗಿ ರಾತ್ರಿ ಸಂಚಾರ ನಿಷೇದವಾಗಕೂಡದು ಅಂತ ಅವರ ಅನಿಸಿಕೆ. ಅವರನ್ನು ನೀವು ಒಮ್ಮೆ ಸಂಪರ್ಕಿಸಿ ಇದನ್ನು ಬರೆದಿದ್ದರೆ ಚಿನ್ನಿತ್ತು. ಅವರ ಲೇಖನ ಸಿಕ್ಕರೆ ನಿಮಗೆ ರವಾನಿಸುತ್ತೇನೆ.

ಬಂಡೀಪುರ ಕಾಡು ಪ್ರಾಣಿ...

sangee ಅಂತಾರೆ...

ಬಂಡಿಪುರ ದಾರಿಯಲ್ಲಿ ಸುಮ್ಮರು ಸಲ ಓಡಾಡಿದ್ದೇನೆ. ತುಂಬಾ ಚೆನ್ನಾಗಿದೆ. ಅಲ್ಲಿ ಪ್ರಕೃತಿ ಸೌMದರ್ಯ ಸವಿದುಕೊMಡು ಪ್ರಯಾಣ. ಆದರೆ ನಿಮ್ಮ ಲೇಖನದಲ್ಲಿ ಇನ್ನೊಂದು ಕಾರಣ ಬರೆದಿಲ್ಲ. ಕರ್ನಾಟಕದಿಂದ ಕೇರಳಕ್ಕೆ ೨-೩ ದಾರಿಗಳಿವೆ. ಒಂದು ನಾಗರಹೊಳೆ ಅಭಯಾರಣ್ಯದ ಕಡೆಯಿಂದ, ಇನ್ನೊಂದು ಬಂಡಿಪುರದಿಂದ, ಮತ್ತೊಂದು ವೀರಾಜಪೇಟೆ ಕಡೆಯಿಂದ. ವೀರಾಜಪೇಟೆ ಕಡೆಯ ದಾರಿ ತುಂಬಾ ಹತ್ತಿರ ಕೂಡ. ಆದರೆ ಹೈವೇ ಲೆವೆಲ್ ನಲ್ಲಿರುವುದು ಬಂಡಿಪುರದ್ದಷ್ಟೇ. ಮೊದಲು ವೀರಾಜಪೇಟೆ ಕಡೆ ದಾರಿ ಚೆನ್ನಾಗಿತ್ತು. ಬಸ್ಸು ಲಾರಿಗಳೆಲ್ಲ ಅಲ್ಲೇ ಹೋಗುತ್ತಿದ್ದುದು. ಅಲ್ಲಿ ಟೋಲ್ ಕೂಡ ಕೊಡಬೇಕಾಗಿಲ್ಲ. ಆದರೆ ಸುಮಾರು ೧೦ ವರ್ಷಗಳಿಂದ ರಿಪೇರಿ ಮಾಡದೇ ಆ ದಾರಿ ಸಕ್ಕಟ್ಟು ಹಾಳಾಗಿದೆ. ಅಲ್ಲಿ ಊದಾಡುವುದು ಸುಮಾರು ಕೇರಳದ ಗಾಡಿಗಳೇ. ಹಾಗಾಗಿ ಕೇರಳ ಸರ್ಕಾರ ರಿಪೇರಿ ಮಾಡಿಸಲಿ ಅಂತ ಕರ್ನಾಟಕ ಹೇಳತ್ತೆ. ಆದರೆ ದಾರಿ ಸುಮಾರು ೯೦% ಇರುವುದು ಕರ್ನಾಟಕದಲ್ಲಿ ಹಾಗಾಗಿ ಕರ್ನಾಟಕ ಮಾಡಿಸಲಿ ಅಂತ ಕೇರಳ ಹೇಳತ್ತೆ. ಹಿಂಗೆ ಇಬ್ಬರು ಮಾಡಿಸುತ್ತಿಲ್ಲ. ಆ ದಾರಿ ಸರಿ ಮಾಡಿಸಿದರೆ ಇಬ್ಬರು ಸೇರಿಕೊಂಡು ಈ ಸಮಸ್ಯೆ ಬಗೆಹರಿಸಬಹುದು. ಸುಮ್ಮನೇ ಬಂಡಿಪುರದಲ್ಲಿ ಪ್ರಾಣಿಗಳು ಉಳಿಯುತ್ತವೆ.

ಆಶೋಕ ಉಚ್ಚಂಗಿ ಅಂತಾರೆ...

ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧದಿಂದ ಗೇಟಿನ ಬಳಿ ನಿಲ್ಲುವ ವಾಹನಗಳಿಂದ ಪರಿಸರಕ್ಕೆ ಆಗುವ ಹಾನಿಯೂ ಹೆಚ್ಚು.ಈ ಬಗ್ಗೆ ನನ್ನ ಬ್ಲಾಗ್ ನಲ್ಲಿ ನಾಳೆ ಅಂದರೆ ಬುಧವಾರ ಲೇಖನವೊಂದನ್ನು ಹಾಕುತ್ತಿದ್ದೇನೆ....
ಅಶೋಕ ಉಚ್ಚಂಗಿ

Anonymous ಅಂತಾರೆ...

idarinda tourism Ge todare Agathe

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails