ಎಲ್ಲ ಕನ್ನಡಿಗರಿಗಾಗಿ ಎಲ್ಲರಕನ್ನಡ !

ಕಳೆದ ಭಾನುವಾರ ನಡೆದ "ನುಡಿಯರಿಮೆ ಮತ್ತು ಕಲಿಕೆ" ವಿಚಾರ ಸಮ್ಮೇಳನದಲ್ಲಿ ಎಲ್ಲರಕನ್ನಡ ಅನ್ನುವ ಯೋಜನೆಯ ಅಂತರ್ಜಾಲ ತಾಣಕ್ಕೆ ಚಾಲನೆ ಸಿಕ್ಕಿದ್ರ ಬಗ್ಗೆ ಓದಿದ್ರಿ. ಈ ಎಲ್ಲರಕನ್ನಡ ಅಂದ್ರೇನು, ಈ ಯೋಜನೆಯಲ್ಲೇನಿದೆ ಅಂತ ವಸಿ ನೋಡ್ಮಾ ಬಾ ಗುರು..

ಎಲ್ಲರಕನ್ನಡ ಅಂದ್ರೇನು?
ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸುವ ಒಳನುಡಿಯನ್ನು "ಎಲ್ಲರಕನ್ನಡ" ಎಂದು ಕರೆಯಬಹುದು. ಕರ್ನಾಟಕದಲ್ಲ ಹಲವು ಬಗೆಯ ಆಡುನುಡಿಗಳನ್ನು ಬಳಸುತ್ತಿದ್ದರೂ, ಈ ದಿನ ಕನ್ನಡಿಗರೆಲ್ಲರೂ ಬರಹ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಬಳಸುತ್ತಿರುವ ಕನ್ನಡವೇ "ಎಲ್ಲರಕನ್ನಡ" ಅನ್ನಬಹುದು. ಈ ಎಲ್ಲರಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಬಗೆಗಿನ ಸಂಶೋಧನೆ ಮತ್ತು ಬೆಳವಣಿಗೆಯ ಯೋಜನೆಯ ಹೆಸರೂ "ಎಲ್ಲರಕನ್ನಡ"ವೆಂದೇ.

ಸದ್ಯಕ್ಕೆ ಬನವಾಸಿ ಬಳಗ ಈ ಯೋಜನೆಯನ್ನು ಪ್ರಾಯೋಜಿಸುತ್ತಿದ್ದು, ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಈ ಯೋಜನೆಯಲ್ಲಿ ಹಿರಿಯ ಸಂಶೋಧಕರಾಗಿ ತೊಡಗಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲರ ಕನ್ನಡದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಹೆಜ್ಜೆಯಾಗಿ ಅವರ ಕನ್ನಡದ ಕೆಲವು ಹೊತ್ತಿಗೆಗಳನ್ನು ಉಚಿತವಾಗಿ ಪಿ.ಡಿ.ಎಫ್ ರೂಪದಲ್ಲಿ ಈ ಯೋಜನೆಯ ಮಿಂಬಲೆಯ ತಾಣವಾದ http://www.ellarakannada.org/ ನಲ್ಲಿ ಕೊಡಲಾಗಿದೆ. ಈ ಹೊತ್ತಿಗೆಗಳನ್ನು ಓದಿ ಹೆಚ್ಚು ಹೆಚ್ಚು ಜನರು ಈ ವಿಷ್ಯಗಳ ಬಗ್ಗೆ ಅರಿವು ತಂದುಕೊಳ್ಳಬೇಕು ಎಂಬುದೇ ಇದರ ಉದ್ದೇಶ. ನೀವು ಓದಿ, ಹಾಗೆಯೇ, ನಿಮ್ಮ ಗೆಳೆಯರಿಗೂ ಈ ತಾಣದ, ಈ ಹೊತ್ತಿಗೆಗಳ ಪರಿಚಯ ಮಾಡಿಸಿ. ಬರುವ ದಿನಗಳಲ್ಲಿ ಇನ್ನೂ ಹತ್ತು ಹಲವು ವಿಷಯಗಳ ಮೇಲೆ ಈ ಯೋಜನೆ ಕೆಲಸ ಮಾಡಲಿದೆ, ಹಾಗಾಗಿ ಈ ತಾಣವನ್ನು ನಿಮ್ಮ ಬ್ರೌಸರ್ ನಲ್ಲಿ ಬುಕ್ ಮಾರ್ಕ್ ಮಾಡಿಕೊಳ್ಳಿ ಗುರು. ಹಾಗೆಯೇ ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಇಲ್ಲವೇ ಹಣವಿತ್ತು ಬೆಂಬಲಿಸುವ ಆಸೆ ನಿಮ್ಮಲ್ಲಿದ್ದಲ್ಲಿ ಬನವಾಸಿ ಬಳಗದ ಸಂಜೀವ ಕೌತಾಳ ಅವರನ್ನು ಸಂಪರ್ಕಿಸಿ.

4 ಅನಿಸಿಕೆಗಳು:

ಎಲ್ಲರ ಕನ್ನಡ? ಅಂತಾರೆ...

ಇದು ಬರೀಯ ಮೂದಲಿಕೆಯಲ್ಲ.. ಒಳ್ಳೆಯ ಗುರಿ ಹಾಗು ಮನದಿಂದ ಬರೆದ ಅನಿಸಿಕೆ.

ನಿಮ್ಮ ಗುರಿ ಸರಿ ಹಾಗು ಹೊಗಳತಕ್ಕದ್ದು.. ಆದರೆ ನಿಮ್ಮ ಬರಹಗಳಲ್ಲೇ ನುಡಿತಪ್ಪುಗಳಿವೆಯಲ್ಲ! ಹಾಗೇ ಕನ್ನಡದ ಹೆಸರುವಾಸಿ ಪದಗಳ ಬದಲು ಸಂಸ್ಕೃತ ಪದಗಳ ಬಳಕೆ ಇದೆಯಲ್ಲ.


ಸದ್ಯ = ಈಗ, ಈ ಹೊತ್ತು ( ಸಧ್ಯ ಇದು ಕನ್ನಡ ಹಾಗು ಸಂಸ್ಕೃತ ಎರಡರಲ್ಲೂ ತಪ್ಪು )
ಪ್ರಾಯೋಜನೆ = ಬೆಂಬಲ, ನೆರವು
ಉದ್ದೇಶ = ಗುರಿ
ಅಂತರ‍್ಜಾಲ = ಮಿಂಬಲೆ

ನೀವು ನೆರವಿತ್ತು "ಇಂಗ್ಲೀಶ್ ಪದಗಳಿಗೆ ಕನ್ನಡದ್ದೇ ಪದಗಳು" ಹೊತ್ತಗೆಯಲ್ಲಿ ಈ ಎಲ್ಲ ಪದಗಳಿವೆ.

ಎಲ್ಲರಕನ್ನಡ ಮಿಂನೆಲೆಯಲ್ಲಿ ತುಸು ನುಡಿಬಳಕೆಯ ಕಡೆ ನೋಡಿ.. ಒಂದೊಂದು ಬರಹ ಒಂದು ಬಗೆ/ಶೈಲಿ ಕನ್ನಡದಲ್ಲಿದೆ ಹಾಗು ಅವು ಯಾವವೂ ಆಡುಗನ್ನಡದಂತಿಲ್ಲ.


ನಿಮ್ಮ ಕೆಲಸಗಳಿಗೆ ಮೆಚ್ಚುಗೆ ಇದೆ. ಇದೊಂದು +ವ್ ಅನಿಸಿಕೆ

Kiran Batni ಅಂತಾರೆ...

@ ಎಲ್ಲರ ಕನ್ನಡ?

ಹೌದು ಸ್ವಾಮಿ! ನಮಗೆ ಗುರಿಯೊಂದೇ ಗೊತ್ತಿರುವುದು, ಅಲ್ಲಿಗೆ ಹೋಗುವ ಬಲ್ಮೆ ನಮ್ಮಲ್ಲಿಲ್ಲ!!! ನಮಗೆ ಗುರಿಮುಟ್ಟುವ ಯೋಗ್ಯತೆಯಿಲ್ಲವೆಂದ ಮಾತ್ರಕ್ಕೆ ಆ ಗುರಿಯ ಬೆಲೆಯೇನು ಕಡಿಮೆಯಾಗುವುದಿಲ್ಲ; ಹಾಗೆಯೇ ನಾವು ಆ ಗುರಿಯ ಬಗ್ಗೆ ಮಾತಾಡುವುದನ್ನಾಗಲಿ, ಅದರೆಡೆಗೆ ಕುಂಟಿಕೊಂಡು ನಡೆಯುವುದನ್ನಾಗಲಿ ನಿಲ್ಲಿಸುವುದಿಲ್ಲ.

ಬನ್ನಿ, ನಮ್ಮೊಡನೆ ಕೈಜೋಡಿಸಿ! ನಿಮ್ಮಂಥವರು ಕೈಜೋಡಿಸಿದರೆ ಕೆಲಸ ಬಿರುಸಾಗು ಸಾಗುತ್ತದೆ. ಬನ್ನಿ!

[ಅಂದಹಾಗೆ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳನ್ನೆಲ್ಲ ತೆಗೆದುಹಾಕುವುದೇನು ಈ ಯೋಜನೆಯ ಗುರಿಯಲ್ಲ. ಯಾವ ಸಂಸ್ಕೃತಮೂಲದ ಪದಗಳು ಸಾಕಷ್ಟು ಆಡುನುಡಿಯಲ್ಲಿ ಯಾವ ರೀತಿಯಲ್ಲಿವೆಯೋ ಅವುಗಳನ್ನು ಕಣ್ಗೊತ್ತಿಕೊಂಡು ಒಪ್ಪಿಕೊಳ್ಳುತ್ತೇವೆ. ಅವು ಕನ್ನಡದ ಪದಗಳೇ. ಹಾಗೆಯೇ ಬೇರೆ ನುಡಿಗಳಿಂದ ಎರವಲಾದವುಗಳನ್ನೂ.]

ಎಲ್ಲರ ಕನ್ನಡ ಅಂತಾರೆ...

ಹಣವಿರದವರು ಹೇಗೆ ನಿಮ್ಮೊಟ್ಟಿಗೆ ಕಯ್ಜೋಡಿಸಬಹುದು? ಅಂತೋರು ಪಾಲ್ಗೊಳ್ಳಲು ಇರುವ ಅನುವುಗಳು ಯಾವುವು? ತಿಳಿಸಿರಿ.

Kiran Batni ಅಂತಾರೆ...

@ಎಲ್ಲರ ಕನ್ನಡ

ಅನುವುಗಳಿಗೆ ಕೊನೆಯೇ ಇಲ್ಲ!

ಉದಾ: (೧) ಭಟ್ಟರ ಬೇರೆಬೇರೆ ಹೊತ್ತಗೆಗಳಿಂದ ನುಡಿಯರಿಮೆ/ಸೊಲ್ಲರಿಮೆಗೆ ಸಂಬಂಧಿಸಿದ ಹೊಸ ಪದಗಳ ಒಂದು ಗ್ಲಾಸರಿ ಮಾಡಬೇಕು. ಅದರಲ್ಲಿ ಕೈಜೋಡಿಸಬಹುದು. (೨) ಅದೇ ಎಲ್ಲರಕನ್ನಡ ಮಿಂದಾಣದಲ್ಲಿ ಇನ್ನೂ ಕೆಲಸಗಳು ಬಾಕಿಯಿವೆ, ಅವುಗಳಲ್ಲಿ ತೊಡಗಿಕೊಳ್ಳಬಹುದು. (೩) ಕನ್ನಡ ವಿಕ್ಷನರಿಯ ಕೆಲಸವೂ ಇದೇ ಯೋಜನೆಯಡಿಯಲ್ಲಿ ನಡೆಯುತ್ತಿದೆ (ಅದರ ಬಗ್ಗೆ ಎಲ್ಲೂ ಹೇಳಿಲ್ಲ ನಾವು), ಅದರಲ್ಲಿ ಕೈಜೋಡಿಸಬಹುದು. (೪) ನುಡಿಯರಿಮೆಗೆ ಅರಿಮೆಗಣ್ಣಿನ ಯುವಕ(ತಿಯ)ರನ್ನು ಸೆಳೆಯಬೇಕಿದೆ, ಅದರಲ್ಲಿ ಕೈಜೋಡಿಸಬಹುದು. (೫) ಮಾಧ್ಯಮಗಳಲ್ಲಿ ಬಳಸುವ ಕನ್ನಡವನ್ನು ಸರಿಪಡಿಸಬೇಕಿದೆ, ಅದರಲ್ಲಿ ಕೈಜೋಡಿಸಬಹುದು. (೬) ಬೆಂಗಳೂರಿನಲ್ಲಿರುವ ಕನ್ನಡ ಮಾಧ್ಯಮದ ಶಾಲೆಗಳ ಒಂದು ಡೇಟಾಬೇಸ್ ಮಾಡಬೇಕಿದೆ (ಇವತ್ತು ಬಹಳ ಜನ ಕನ್ನಡ ಮಾಧ್ಯಮಕ್ಕೆ ಸೇರಿಸುವ ಆಸೆಯುಳ್ಳವರಾಗಿದ್ದಾರೆ, ಆದರೆ ಅವರಿಗೆ ಮಾಹಿತಿಯೇ ಸಿಗುವುದಿಲ್ಲ)...

ಕೊನೆಯೇ ಇಲ್ಲ!

ನಮಗೆ ಬೇಕಾಗಿರುವುದು ನಿಜಕ್ಕೂ ಸಮಯ ಕೊಟ್ಟು (ವಾರಕ್ಕೆ ಕಡಿಮೆಯೆಂದರೆ 8 ಗಂಟೆ) ದುಡಿಯುವುದು. ಬರ್ತೀರಾ? ಸಂಜೀವ ಕೌತಾಳ ಅವರಿಗೆ ಮಿಂಚಿಸಿ ಇಲ್ಲವೇ ಅವರನ್ನು ಬಂದು ಭೇಟಿಯಾಗಿ. ಅವರ ಸಂಪರ್ಕ ಮಾಹಿತಿ ಎಲ್ಲರಕನ್ನಡ.ಆರ್ಗ್ ನಲ್ಲಿ ಇದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails