ಕರ್ನಾಟಕ ರಾಜ್ಯ ಸರ್ಕಾರದ, ನಗರಾಭಿವೃದ್ಧಿ ಮಂತ್ರಿಗಳಾದ ಶ್ರೀ ಸುರೇಶ್ ಕುಮಾರ್ ಅವ್ರು ಮೊನ್ನೆ ಒಂದು ಹೇಳಿಕೆ ಕೊಟ್ಟು ಶೀಘ್ರದಲ್ಲೇ ಕರ್ನಾಟಕದ ಎಲ್ಲಾ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿಯೋರ ಜೊತೆ ಸೇರ್ಕೊಂಡು ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಮಾಡ್ತೀವಿ
ಅಂದಿದ್ದಾರೆ. ಕರ್ನಾಟಕ ಸರ್ಕಾರದ ಈ ನಿಲುವು ನಾಡಿನ ಶಿಕ್ಷಣ ವ್ಯವಸ್ಥೆಯನ್ನು, ನಾಳಿನ ಪೀಳಿಗೆಯನ್ನು ವಿನಾಶದೆಡೆಗೆ ಒಯ್ಯುತ್ತಿರುವ ನಡೆಯಾಗಿದೆ.
ನಗರಾಭಿವೃದ್ಧಿ ಸಚಿವಾಲಯ ವ್ಯಾಪ್ತಿ ಮೀರಿದೆಯೇ?ಇಷ್ಟಕ್ಕೂ ಒಂದು ನಗರಪಾಲಿಕೆಯ ವ್ಯಾಪ್ತಿ ಏನು? ಹೊಣೆಗಾರಿಕೆ ಏನು? ಎಂಬುದನ್ನೆಲ್ಲಾ ಅರಿತೇ ರಾಜ್ಯಸರ್ಕಾರ ಇಂತಹ ನಿಲುವಿಗೆ ಬಂದಿದೆಯೇ ಎಂಬ ಅಚ್ಚರಿ ಮೂಡುತ್ತದೆ. ಏಕೆಂದರೆ ಕರ್ನಾಟಕ ಶಿಕ್ಷಣ ಇಲಾಖೆಯ ಎಲ್ಲೆಯನ್ನು ನಗರ ಪಾಲಿಕೆ, ನಗರಾಭಿವೃದ್ಧಿ ಸಚಿವಾಲಯ ಮೀರುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮಾನ್ಯ ಶಿಕ್ಷಣ ಮಂತ್ರಿಗಳಿಗೇಕೋ ಈ ವಿಷಯ ತೋಚಿದಂತಿಲ್ಲ. ಭಾರತೀಯ ಒಕ್ಕೂಟದಲ್ಲಿ ರಾಜ್ಯಗಳ ಹಿಡಿತದಲ್ಲಿರಬೇಕಾದ ಶಿಕ್ಷಣ ಕ್ಷೇತ್ರವು ಈಗಾಗಲೇ ಕಂಕರೆಂಟ್ ಪಟ್ಟಿಯಲ್ಲಿದೆ. ಕರ್ನಾಟಕ ಸರ್ಕಾರದ ಇಂದಿನ ನಡೆ ಶಿಕ್ಷಣವನ್ನು ಕೇಂದ್ರದ ಪಟ್ಟಿಗೆ ಸೇರಿಸಲು ತುದಿಗಾಲಲ್ಲಿ ನಿಂತಿರುವಂತಿದೆ.
ಕಟ್ಟಬೇಕಾದೋರೆ ಕೆಡವೋಕ್ಕೆ ನಿಂತಂತೆ!ನಾಡಿನ ನಾಳೆಗಳು ಚೆನ್ನಾಗಿರಬೇಕು ಅಂದ್ರೆ ನಾಡಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿರಬೇಕು. ಇದರರ್ಥ ನಮ್ಮ ವ್ಯವಸ್ಥೆಯನ್ನು ಅಷ್ಟೊಂದು ಚೆನ್ನಾಗಿಸುವ ಹೊಣೆಗಾರಿಕೆ ಸರ್ಕಾರದ್ದು. ಆದರೆ ಗುಣಮಟ್ಟದ ಈ ಮಾತನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳೋದು ಒಂದು ಸರ್ಕಾರ ತನ್ನ ಜನಕ್ಕೆ ಮಾಡೋ ದೊಡ್ಡ ಮೋಸ. ಯಾಕಂದ್ರೆ ತನ್ನ ನಿಲುವಿನಿಂದಾಗಿ ಕರ್ನಾಟಕ ಸರ್ಕಾರ, ಕನ್ನಡನಾಡಿನ ಶಿಕ್ಷಣ ವ್ಯವಸ್ಥೆ ಕಳಪೆ, ಗುಣಮಟ್ಟದ ಶಿಕ್ಷಣ ಅಂದ್ರೆ ಅದು ಸಿ.ಬಿ.ಎಸ್.ಇ ಪದ್ದತೀದು, ಅದಕ್ಕೆ ಆ ಕಲಿಕಾ ಪದ್ದತಿಗೇ ನಮ್ಮ ಪ್ರೋತ್ಸಾಹ ಅನ್ನುತ್ತಾ ಇದೆ. ಇದು ರಾಜ್ಯ ಪಠ್ಯಕ್ರಮದ ಶಿಕ್ಷಣವನ್ನು ಕಟ್ಟಬೇಕಾದ ಸರ್ಕಾರವೇ ತನಗೆ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಟ್ಟೋಕೆ ಯೋಗ್ಯತೆ ಇಲ್ಲಾ ಅಂತಾ ಡಂಗೂರಾ ಸಾರಿದ ಹಾಗಲ್ವಾ? ಕಳೆದ ವರ್ಷಾ ಇದೇ ಸರ್ಕಾರದ ಶಿಕ್ಷಣ ಸಚಿವರು ಕೇಂದ್ರೀಯ ಪಠ್ಯಕ್ರಮಗಳಲ್ಲಿ ದಯಮಾಡಿ ಕನ್ನಡವನ್ನು ಬೋಧಿಸಿ ಎಂದು ಗೋಗರೆದಿದ್ದರು. ಇಷ್ಟಕ್ಕೂ ಸರ್ಕಾರಕ್ಕೆ, ಶಿಕ್ಷಣ ಇಲಾಖೆಗೆ ನಾಡಿನ 85% ಮಕ್ಕಳು ಕಲೀತಾ ಇರೋ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಪಡಿಸಬೇಕು, ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನಾಡಿನ ಮಕ್ಕಳಿಗಾಗಿ ರೂಪಿಸಬೇಕು ಅಂತಾ ಅನ್ನುಸ್ತಾನೆ ಇಲ್ಲಾ ಅಂದ್ರೆ ಅದಕ್ಕಿಂತ ದುರಂತಾ ಇನ್ನೊಂದಿದ್ಯಾ? ನಮ್ಮ ಕಲಿಕಾ ವ್ಯವಸ್ಥೆಯ ಗುಣಮಟ್ಟದಲ್ಲಿ ಉಳಿದವಕ್ಕೆ ಸಾಟಿಯಾಗುವಂತೆ ಮಾಡೋದ್ರು ಬಗ್ಗೆ ಯೋಚಿಸದೆ ಇಡೀ ನಾಡಿಗೆ ಪಲಾಯನವಾದದ ದೊಡ್ಡ ಆದರ್ಶಾನ ಸರ್ಕಾರವೇ ತೋರಿಸಿಕೊಡ್ತಿದೆ. ಈ ನಡೆಯ ಮೂಲಕ ಸರ್ಕಾರ ನಾಡಿನ ಜನಕ್ಕೆ ಗುಣಮಟ್ಟದ ರಾಜ್ಯ ಪಠ್ಯಕ್ರಮವನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾದ ತನ್ನ ಮೂಲಭೂತ ಹೊಣೆಗಾರಿಕೆಯಿಂದ ತಲೆತಪ್ಪಿಸಿಕೊಂಡು ಓಡ್ತಾಯಿದೆ, ಅಷ್ಟೆ.
ಸಿ.ಬಿ.ಎಸ್.ಇ ಕಲಿಕಾ ಪದ್ದತಿ!ಸೆಂಟ್ರಲ್ ಬೋರ್ಡ್ ಫಾರ್ ಸೆಕಂಡರಿ ಎಜುಕೇಷನ್ ಎಂಬುದರ ಸಂಕ್ಷಿಪ್ತ ರೂಪ ಸಿ.ಬಿ.ಎಸ್.ಇ. ಇದರ ಪಠ್ಯಕ್ರಮಾನ ಕೇಂದ್ರೀಯ ಪಠ್ಯಕ್ರಮ ಅಂತಾನೂ ಅಂತಾರೆ. ಈ ಶಿಕ್ಷಣ ಪದ್ದತಿಯ ಮೂಲೋದ್ದೇಶಗಳಲ್ಲಿ ಪ್ರಮುಖವಾದದ್ದು, ಕೇಂದ್ರಸರ್ಕಾರಿ ನೌಕರರ/ ವರ್ಗಾವಣೆಗೆ ಈಡಾಗಬಲ್ಲಂತ ಕೆಲಸಗಳಲ್ಲಿರುವವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲೀ ಅನ್ನುವುದು. ಇದನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಹಿಂದಿ ಹೇರಿಕೆಯ ಪ್ರಬಲ ಅಸ್ತ್ರ!ಪ್ರಪಂಚದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಮೂಲ ಇರೋದೆ ಸ್ಥಳೀಯವಾದದ್ದನ್ನು, ಮಕ್ಕಳಿಗೆ ಪರಿಚಿತವಾದ ವಸ್ತುಗಳನ್ನು ಬಳಸಿ ಕಲಿಸೋದು ಪರಿಣಾಮಕಾರಿ ಅನ್ನೋದ್ರಲ್ಲಿ. ಇವತ್ತು ಸರ್ಕಾರ ಸಿ.ಬಿ.ಎಸ್.ಇ ಪದ್ದತಿಗೆ ಮಣೆ ಹಾಕೋದ್ರ ಮೂಲಕ ಈ ಮೂಲಭೂತ ನಿಯಮಕ್ಕೇ ಕೊಡಲಿ ಪೆಟ್ಟು ಹಾಕಲು ಮುಂದಾಗಿದೆ. ಯಾಕಂದ್ರೆ ಕರ್ನಾಟಕದ ಮಕ್ಕಳ ಕಲಿಕೆಯಲ್ಲಿ ಕಮಲ, ಬಸವ ಹೆಚ್ಚು ಪರಿಣಾಮಕಾರಿಯೇ ಹೊರತು ಶೀತಲ್, ಚಂಚಲ್ ಅಲ್ಲಾ. ಇನ್ನು ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಏನು ಕಲಿಸ್ತಾರೆ ಅಂತಾ ಆ ಪದ್ದತಿಯ ಪುಸ್ತಕಗಳನ್ನು ನೋಡಿದರೇ ತಿಳಿಯುತ್ತೆ. ಇಲ್ಲಿನ ಕಲಿಕಾ ಮಾಧ್ಯಮ ಇಂಗ್ಲಿಷ್. ಪ್ರಿ-ನರ್ಸರಿಯಿಂದಲೇ ಹಿಂದಿ ಕಡ್ಡಾಯ. ಎಲ್.ಕೆ.ಜಿ ಮಕ್ಕಳಿಗೆ ಇರೋ ಅತೀ ದಪ್ಪದ ಪುಸ್ತಕ ಹಿಂದೀದು. ಕನ್ನಡನಾಡಲ್ಲೇ ಇದ್ದರೂ, ಕನ್ನಡಿಗರೇ ಆಗಿದ್ದರೂ ಇಲ್ಲಿ ಕನ್ನಡದ ಅ,ಆ,ಇ,ಈ ಕಲಿಯೋಕೆ ಶುರುವಾಗೋದು ಐದನೇ ತರಗತಿಯಲ್ಲಿ. ಆರನೇ ತರಗತೀಲಿ ಕ,ಕಾ,ಕಿ,ಕೀ ಅನ್ನೋ ಕಾಗುಣಿತ, ಎಂಟನೇ ತರಗತಿ ಆದ ಕೂಡಲೇ ಅದಕ್ಕೆ ಎಳ್ಳುನೀರು. ಐದನೇ ತರಗತಿಯಿಂದ ಕನ್ನಡ ಕಲಿಯೋದೂ ಕೂಡಾ ಕಡ್ಡಾಯ ಏನಲ್ಲಾ. ಕನ್ನಡ ನಾಡಲ್ಲಿರೋ ವಿದ್ಯಾರ್ಥಿಗಳು ಭಾಷೆಯಾಗಿ ತಮಿಳು, ತೆಲುಗು, ಗುಜರಾತಿ, ಮರಾಠಿ ಹೀಗೆ ಯಾವ ಭಾಷೇನಾದ್ರೂ ಕಲೀಬೌದು. ಹಿಂದೊಮ್ಮೆ ಪಂಜಾಬು ತನ್ನಲ್ಲಿನ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಪಂಜಾಬಿ ಭಾಷೆಯನ್ನು ಕಡ್ಡಾಯ ಮಾಡಿ ಅಂತಾ ಬೋರ್ಡನ್ನು ಕೇಳ್ಕೊಂಡಿತ್ತು. ಆದ್ರೆ ಅಂತಹ ಅವಕಾಶವನ್ನು ನಿರಾಕರಿಸಲಾಗಿತ್ತು. ಇಂಥಾ ಪದ್ದತಿಯಿಂದಾಗೋ ಪರಿಣಾಮಾನಾದ್ರೂ ಸರ್ಕಾರ ಊಹೆ ಮಾಡೀತಾ? ನಾಡಲ್ಲಿ ಈಗಿರೋ ಪರಭಾಷಿಕರನ್ನು ಮುಖ್ಯವಾಹಿನಿಯಿಂದ ಇದು ದೂರಮಾಡೋದಿಲ್ವಾ? ಕನ್ನಡದ ಮಕ್ಕಳನ್ನೇ ಕನ್ನಡದಿಂದ ದೂರಾ ಮಾಡೋದಿಲ್ವಾ? ಭಾರತದ ವೈವಿಧ್ಯತೆಯನ್ನೇ ಅಳಿಸಿಹಾಕುವ ನಿಟ್ಟಿನಲ್ಲಿ ಇದು ಇದ್ದು, ಸಿ.ಬಿ.ಎಸ್.ಇ ಕಲಿಕಾ ಪದ್ದತಿಯ ಶಾಲೆಯನ್ನು ಪ್ರೋತ್ಸಾಹಿಸುವ/ ವಹಿಸಿಕೊಳ್ಳುವ ಮೂಲಕ ಕನ್ನಡಿಗರ ಮೇಲೆ ಹಿಂದೀ ಹೇರಿಕೆಯನ್ನು ಕನ್ನಡಿಗರ ಸರ್ಕಾರವೇ ಮಾಡಲು ಮುಂದಾಗ್ತಿರೋದು ಕಾಣ್ತಾಯಿದೆ.
ಸಿ.ಬಿ.ಎಸ್.ಇ ಎಂಬ ನೆಲದ ಬೇರು ಸಡಿಲಿಸೋ ಪದ್ದತಿ!ಇನ್ನು ಈ ಶಾಲೆಗಳಲ್ಲಿ ಕಲಿಸೋ ಇತಿಹಾಸ, ಸಮಾಜದ ಶಾಸ್ತ್ರಗಳಲ್ಲಿ ಕನ್ನಡನಾಡಿಗೆ ಎಳ್ಳಷ್ಟು ಮಹತ್ವವೂ ಇಲ್ಲ. ನಮ್ಮ ಇತಿಹಾಸ, ನಮ್ಮ ಆಚರಣೆ, ನಂಬಿಕೆಗಳು, ಪದ್ದತಿಗಳು, ಪರಂಪರೆಗಳ ಬಗ್ಗೆ ಸಣ್ಣ ಪರಿಚಯವನ್ನೂ ಕೂಡಾ ಇವು ನೀಡುತ್ತಿಲ್ಲ. ಕೆಲದಿನಗಳ ಹಿಂದೆ ಮಾಧ್ಯಮಗಳಲ್ಲಿ ಒಂದು ವರದಿ ಬಂದಿತ್ತು. ಕನ್ನಡವೆನ್ನುವುದು ಒಂದು ವಿಚಿತ್ರವಾದ ನುಡಿಯೆನ್ನುವಂತೆ ಕೇಂದ್ರೀಯ ಪಠ್ಯಕ್ರಮದಲ್ಲಿ ಬರೆಯಲಾಗಿದೆ ಎಂಬುದನ್ನು ಆ ವರದಿ ಬಯಲು ಮಾಡಿತ್ತು. ಇಂತಹ ಪಠ್ಯಗಳಿಂದ ಕನ್ನಡದ ಮಕ್ಕಳಲ್ಲಿ ಕೀಳರಿಮೆ ಹುಟ್ಟುವುದಿಲ್ಲವೇ? ನಾನು, ನನ್ನ ಹಿರಿಯರು, ನನ್ನ ನಾಡು, ನನ್ನ ನುಡಿಗಳೆಲ್ಲಾ ಕೀಳು ಎನ್ನುವ ಮನೋಭಾವನೆಗೆ ಕಾರಣವಾಗುವುದಿಲ್ಲವೇ? ನಮ್ಮ ಮುಂದಿನ ಪೀಳಿಗೆಯನ್ನೇ ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಗಳಿಂದ ದೂರ ಹೋಗುವಂತೆ ಮಾಡೋದಿಲ್ವಾ? ಒಟ್ಟಿನಲ್ಲಿ ಸರ್ಕಾರದ ಈ ನಿಲುವು ನಿಜಕ್ಕೂ ಮುಂದಿನ ದಿನಗಳಲ್ಲಿ ಕನ್ನಡದ ಮಕ್ಕಳನ್ನು ಈ ನೆಲದ ಸಂಸ್ಕೃತಿ, ಪರಂಪರೆಗಳಿಂದ ದೂರಮಾಡಲಿದೆ. ನಮ್ಮತನದ ನಮ್ಮ ಬುನಾದಿಯ ಬೇರುಗಳನ್ನೇ ಇದು ಸಡಿಲಗೊಳಿಸಲಿದೆ.
ಕರ್ನಾಟಕ ಸರ್ಕಾರ ಮತ್ತು ಅದನ್ನು ನಡೆಸುತ್ತಿರೋ ಭಾರತೀಯ ಜನತಾ ಪಕ್ಷ ತನ್ನ ಸ್ವಹಿತಾಸಕ್ತಿಗಳನ್ನು ಈ ವಿಷಯದಲ್ಲಾದರೂ ಬದಿಗಿಟ್ಟು ತನ್ನ ನಿಲುವನ್ನು ಬದಲಿಸಬೇಕಾಗಿದೆ. ರಾಜ್ಯಸರ್ಕಾರದ ಶಿಕ್ಷಣ ಸಚಿವರು ಇದರ ವಿರುದ್ಧ ದನಿಯೆತ್ತಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕಾಗಿದೆ. ನಾಡಿನ ಶಿಕ್ಷಣತಜ್ಞರುಗಳು, ಶಿಕ್ಷಣ ಇಲಾಖೆಯೋರು, ಬುದ್ಧಿಜೀವಿಗಳು, ಪ್ರಜ್ಞಾವಂತ ನಾಗರಿಕರು ಸರ್ಕಾರದ ಇಂದಿನ ನಿಲುವನ್ನು ಬದಲಾಯಿಸಲು ಸರ್ಕಾರದ ಒತ್ತಾಯಿಸಬೇಕಾಗಿದೆ.