ಹೊಗೇನಕಲ್: ಸಂಧಾನಕ್ಕೆ ಬಲಿಯಾಗದಿರಲಿ ನಾಡಹಿತ!


ವಿವಾದಕ್ಕೆ ಕಾರಣವಾಗಿರೋ ಹೊಗೇನಕಲ್‍ನ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಬಗ್ಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಅಂತಾ ಕರ್ನಾಟಕ ರಾಜ್ಯಸರ್ಕಾರದ ಗೃಹಮಂತ್ರಿಗಳಾದ ಡಾII ವಿ.ಎಸ್.ಆಚಾರ್ಯ ಅವ್ರು ನೀಡಿರೋ ಹೇಳಿಕೆ, ಇವತ್ತಿನ (01.05.2010ರ) ದಿನಪತ್ರಿಕೆಗಳಲ್ಲಿ ಬಂದಿದೆ. ಭಾಳಾ ಸಂತೋಷ. ಅಂತರರಾಜ್ಯ ಸಂಬಂಧಗಳು ಮಾತುಕತೆ ಮೂಲಕ ಬಗೆಹರಿಯೋದು ಭಾಳಾ ಸಂತೋಷದ ವಿಷಯಾನೇ ಗುರೂ!
ಆದ್ರೆ ಮೂಲತಃ ಅಂತರರಾಜ್ಯ ವಿವಾದಗಳು ಯಾಕೆ ಹುಟ್ಟಿಕೊಳ್ಳುತ್ವೆ ಅನ್ನೋದ್ನ ಸ್ವಲ್ಪ ನೋಡೋಣ. ಯಾವುದೇ ಒಂದು ಸಂಪನ್ಮೂಲದ ಮೇಲೆ ಒಂದಕ್ಕಿಂತ ಹೆಚ್ಚು ರಾಜ್ಯದೋರು ಹಕ್ಕು ಸಾಧಿಸಕ್ಕೆ ಮುಂದಾದಾಗ ತಾನೆ ವಿವಾದ ಹುಟ್ಟೋದು? ಸೌಹಾರ್ದಯುತವಾಗಿ ಬಗೆಹರಿಯೋದು ಅಂದ್ರೆ ‘ಇಲ್ಲಿ ನಾವು ಸ್ವಲ್ಪ ಬಿಟ್ಟುಕೊಡ್ತೀವಿ - ನೀವೂ ಸ್ವಲ್ಪ ಬಿಟ್ಟುಕೊಡಿ. ನಾವೂ ಸ್ವಲ್ಪ ಗಳುಸ್ಕೊತೀವಿ - ನೀವೂ ಗಳಿಸಿಕೊಳ್ಳಿ' ಅನ್ನೋದು. ಈ ಸಣ್ಣ ವಿಷಯಾನಾ ಯಾಕಪ್ಪಾ ಹೇಳಬೇಕಾಯ್ತು ಅಂದ್ರೆ ನಮ್ಮ ಕರ್ನಾಟಕದ ಇಂದಿನ ಸರ್ಕಾರ ಬಹುಶಃ ಸಂಧಾನ ಅಂದ್ರೆ ನೆರೆಯವರ ಮುಂದೆ ಮಂಡಿಯೂರಿ ಕುಳಿತು ನಾಡಿನ ಹಿತ ಹಾಗೂ ಸ್ವಾಭಿಮಾನಾನ ಅವರುಗಳ ಪದತಲಕ್ಕೆ ಅರ್ಪಿಸುವುದು ಅಂದುಕೊಂಡಿರೋ ಹಾಗೆ ಕಾಣುತ್ತೆ.

ಕೊಡೋದೇನು? ಪಡ್ಯೋದೇನು?

`ನೀವು ಕುಡಿಯೋ ನೀರಿಗೆ ನಾವು ಅಡ್ಡಿ ಮಾಡಲ್ಲ, ನಮ್ಮ ವಿದ್ಯುತ್ ಯೋಜನೆಗೆ ನೀವು ಅಡ್ಡಿ ಮಾಡಬೇಡಿ' ಎನ್ನುತ್ತಿರೋ ಮಾತಿನ ಹಿಂದೆ ಎಂಥಾ ಅಪಾಯ ಇದೆ ನೋಡಿ. ಇದರಿಂದ ತಮಿಳುನಾಡಿನ ಕುಡಿಯೋ ನೀರಿನ ಯೋಜನೆಗೆ ನಾವು ಅಡ್ಡಿ ಮಾಡುತ್ತಿದ್ದೇವೆ ಅಂತಾ ಸರ್ಕಾರವೇ ಒಪ್ಪಿಕೋತಾಯಿದೆ. `ನಮ್ಮ ನೆಲದಲ್ಲಿ ನಾವು ವಿದ್ಯುತ್ ಯೋಜನೆ ಮಾಡಕ್ಕೆ ನೀವು ಅಡ್ಡಿ ಮಾಡಬೇಡಿ, ಆಗ ನಿಮ್ಮ ನೆಲದಲ್ಲಿ ನೀವು ಕುಡಿಯೋ ನೀರಿನ ಯೋಜನೆ ಮಾಡಿಕೊಳ್ಳಕ್ಕೆ ನಮ್ಮ ಅಡ್ಡಿ ಇಲ್ಲಾ' ಅಂತಾ ತಾನೆ ಇವರು ಹೇಳಬೇಕಾದ್ದು. ಸರ್ಕಾರದ ನಿಲುವು ಮಾತ್ರಾ `ಹೊಗೇನಕಲ್ ಯೋಜನೆಗೆ ನಮ್ಮ ತಕರಾರು ನೀರು ಹಂಚಿಕೆಗೆ ಸಂಬಂಧಿಸಿದ್ದು, ಗಡಿ ಒತ್ತುವರಿಗೆ ಸಂಬಂಧಿಸಿದ್ದಲ್ಲಾ, ಇದ್ದರೂ ಅದು ಆದ್ಯತೆಯ ವಿಷಯವಲ್ಲಾ' ಅನ್ನೋ ಹಾಗಿದೆ. ಈ ಲೆಕ್ಕದಲ್ಲಿ ಸಂಧಾನಕ್ಕೆ ಮುಂದಾದರೆ ಕೊನೆಗೆ ಕಳೆದುಕೊಳ್ಳೋದು ಕರ್ನಾಟಕವೇ ಹೊರತು ತಮಿಳುನಾಡಲ್ಲ. ಯಾಕಂದ್ರೆ ಇಂದಿನ ಈ ಉದ್ದೇಶಿತ ಸಂಧಾನ ಸೂತ್ರ `ನಮ್ಮ ನೆಲದಲ್ಲಿ ನಮಗೆ ವಿದ್ಯುತ್ ಯೋಜನೆಗೆ ಅಡ್ಡಿ ಮಾಡಬೇಡಿ, ಆಗ ನಮ್ಮ ನೆಲವನ್ನು ನೀವು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕುಡಿಯೋನೀರು ಯೋಜನೆ ಮಾಡಲು ನಾವು ಬಿಡ್ತೀವಿ' ಅಂದ ಹಾಗಿದೆಯಲ್ಲಾ ಗುರೂ!

ವಿವಾದದಲ್ಲಿರೋ ಸೂಕ್ಷ್ಮ!

ಕರ್ನಾಟಕ ಸರ್ಕಾರ ಬ್ರಿಟೀಷರ ಕಾಲದ ಟ್ರೋಪ್‍ಶೀಟ್ ಇಟ್ಕೊಂಡು ಹೊಗೇನಕಲ್ ತನಗೆ ಸೇರಿದ್ದು ಅಂತಾ ತಕರಾರು ಮಾಡ್ತಿದೆ. ಇದು ಸರಿಯಲ್ಲಾ... ಅನ್ನೋದು ತಮಿಳುನಾಡಿನ ನಿಲುವು. ಇದರಲ್ಲಿ ಈ ಟ್ರೋಪ್‍ಶೀಟ್ ಯಾವ್ದೋ ಓಬಿರಾಯನ ಕಾಲದ್ದು ಅನ್ನೋ ಒಳದನಿ ಕೇಳುತ್ತೆ. ಆದರೆ ಈ ಓಬೀರಾಯನ ಸೂತ್ರಾ, 1924ರ ಮೈಸೂರು-ಮದ್ರಾಸಿನ ಕಾವೇರಿ ಒಪ್ಪಂದಕ್ಕೆ ಅನ್ವಯ ಆಗಲ್ವಂತೆ. ತಮಿಳುನಾಡಿಗೆ 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಕೂಡಲೇ 1924ರ ಒಪ್ಪಂದ ಸಹಜವಾಗಿ ರದ್ದಾಗುತ್ತೆ ಅನ್ನೋದು ಮರೆತುಹೋಗುತ್ತೆ ಪಾಪ!
1997ರಲ್ಲೇ ಕರ್ನಾಟಕ ಸರ್ಕಾರ ಮತ್ತು ಕೇಂದ್ರಸರ್ಕಾರ ಈ ಯೋಜನೆಗಳಿಗೆ ಒಪ್ಪಿವೆ. ತಮಿಳುನಾಡು ಕರ್ನಾಟಕವು ಮೇಕೆದಾಟಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಾನೂನು ತೊಡಕು ಒಡ್ಡಲ್ಲ, ಕರ್ನಾಟಕ ಹೊಗೇನಕಲ್ ಯೋಜನೆಗೆ ಅಡ್ಡಿ ಮಾಡಲ್ಲಾ ಅನ್ನೋ ಒಪ್ಪಂದಕ್ಕೆ ಅಂದಿನ ಸಭೆಯಲ್ಲಿ ಬರಲಾಗಿತ್ತು. ಈಗ ಕರ್ನಾಟಕ ತಕರಾರು ಮಾಡೋದು ತಪ್ಪು ಅನ್ನೋ ಪ್ರಚಾರಾನೂ ನಡೀತಿದೆ. ನಿಜಕ್ಕೂ ನಮ್ಮ ಇಂದಿನ ವಿರೋಧ ಅಂದಿನ ಒಪ್ಪಂದದ ಉಲ್ಲಂಘನೇನಾ? ಸರ್ಕಾರವೇ ಇಂಥಾ ಗೊಂದಲಕ್ಕೆ ಕಾರಣವಾಗ್ತಿದೆ. 1997ರ ಒಪ್ಪಂದದ ಬಗ್ಗೆ ಗೊತ್ತಿದ್ದೋರಿಗೆ ಈಗ ಕರ್ನಾಟಕ ಸರ್ಕಾರ ಇನ್ಯಾವ ಹೊಸಸಂಧಾನದ ಪ್ರಸ್ತಾಪ ಇಡ್ತಿದೆ ಅಂತಾ ಗೊಂದಲ ಆಗೋದು ಸಹಜಾನೆ ಆಗಿದೆ.

ಸಮಗೌರವದ ಸಂಧಾನ ಸಾಧ್ಯವಾಗಲಿ!

ಕರ್ನಾಟಕ ಸರ್ಕಾರವು ಬಿಜೆಪಿ ಮತ್ತು ಡಿಎಂಕೆಗೆ ಹೇಗೆ ವಿವಾದ ಬಗೆಹರಿಸಿದ ಗೌರವ ದಕ್ಕುತ್ತೆ ಅನ್ನೋ ರಾಜಕೀಯ ಲಾಭದ ಬಗ್ಗೆ ಗಮನಕೊಡುತ್ತಾ, ಚಿನ್ನತಂಬಿ ಪೆರಿಯತಂಬಿ ನಾಟಕ ಮುಂದುವರೆಸುತ್ತಾ, ಕನ್ನಡನಾಡಿನ ಜನರ ಕಿವಿ ಮೇಲೆ ಲಾಲ್‍ಬಾಗ್ ಇಡೋ ಪ್ರಯತ್ನಾನಾ ಕೈಬಿಟ್ಟು ಈ ವಿಷಯವಾಗಿ ನಿಲುವು ತೆಗೆದುಕೊಳ್ಳಬೇಕಾಗಿದೆ. ನಾವು ಅಂದು ಒಪ್ಪಿದ್ದ ಕುಡಿಯುವ ನೀರಿನ ಯೋಜನೆಗೆ ಇಂದಿಗೂ ನಮ್ಮ ವಿರೋಧ ಇಲ್ಲ. ಆ ಒಪ್ಪಂದದಂತೆಯೇ ತಮಿಳುನಾಡು ಕೂಡಾ ಮೇಕೆದಾಟು ವಿದ್ಯುತ್ ಯೋಜನೆಗೆ ತಕರಾರು ಮಾಡದಿರಲಿ. ನಾವು ಕುಡಿಯುವ ನೀರು ಯೋಜನೆಗೆ ಅಡ್ಡಿ ಮಾಡುವುದು ಬೇಡ.
ಆದರೆ ತಮಿಳುನಾಡು ಈ ಯೋಜನೆಗಾಗಿ ಕನ್ನಡದ ನೆಲವನ್ನು ಅತಿಕ್ರಮಿಸುವುದನ್ನು ವಿರೋಧಿಸಲೇಬೇಕಾಗಿದೆ. ಎರಡೂ ರಾಜ್ಯಗಳ ಗಡಿಯನ್ನು ಜಂಟಿಯಾಗಿ ಸರ್ವೇ ಮಾಡಲೇಬೇಕು ಎನ್ನುವುದು ನಮ್ಮ ನಿಲುವಾಗಲಿ. ಸಂಧಾನದ ವಿಷಯವೇನೆಂದರೆ ಈ ಸರ್ವೇ ಬೇಕಾದರೆ ಕೇಂದ್ರಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೀಲಿ ಅನ್ನೋದಾಗಬೇಕು ಅಷ್ಟೆ. ನಿಜಕ್ಕೂ ಇಲ್ಲಿ ಆದ್ಯತೆಯ ವಿಷಯ ನೀರು ಬಳಕೆಯದ್ದಲ್ಲ, ಗಡಿ ಅತಿಕ್ರಮಣದ್ದು ಅನ್ನೋದನ್ನು ಸರ್ಕಾರ ಮರೆಯದಿರಲಿ. ಇಲ್ಲದಿದ್ದರೆ ಸಂಧಾನದ ಹೆಸರಲ್ಲಿ ಕೊನೆಗೆ ನಡೆಯೋದು ಕನ್ನಡಿಗರ ಶರಣಾಗತಿಯೇ, ಕಳೆದುಕೊಳ್ಳೋದು ಕರ್ನಾಟಕವೇ ಅನ್ನೋದಾಗುತ್ತೆ.

ಸಾಕು ಪ್ರತಿಮೆಯ ಉಪಮೆಯ ನಾಟಕ!

ಸರ್ಕಾರ ಪ್ರತಿಮೆಗಳ ವಿವಾದವನ್ನು ಬಗೆಹರಿಸಿದಂತೆ ಇದನ್ನೂ ಬಗೆಹರುಸ್ತೀವಿ ಅಂತಾ ಪದೇ ಪದೇ ಹೇಳ್ಕೊಳ್ಳೋ ಮೂರ್ಖತನಾನ ನಿಲ್ಲುಸ್ಲಿ. ಪ್ರತಿಮೆಗಳ ಸ್ಥಾಪನೆ ವಿಚಾರದಲ್ಲಿ ಇದ್ದ ವಿರೋಧವನ್ನು ಎರಡೂ ರಾಜ್ಯಗಳ ನಡುವಿನ, ಎರಡೂ ಜನಾಂಗಗಳ ನಡುವಿನ ಹತ್ತಾರು ವಿವಾದಗಳಿಂದ ಬೇರೆಯಾಗಿಸಿ "ಪ್ರತಿಮೆ ಸ್ಥಾಪಿಸಿದ್ದರಿಂದ ಸೌಹಾರ್ದ ಹೆಚ್ಚಿತು" ಅನ್ನೋ ಬೂಟಾಟಿಕೆಯ ಆತ್ಮವಂಚನೆ ಮಾಡಿಕೊಳ್ತಿರೋ ರಾಜ್ಯಸರ್ಕಾರ ಅರಿಯಬೇಕಾದ್ದು ಸಾಕಷ್ಟಿದೆ. ತಮಿಳುನಾಡು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಪ್ರಯೋಜನ ಸಿಗಲು, ತನ್ನಗೆ ಸಂಬಂಧವೇ ಇರದಿದ್ದರೂ ತೊಡಕುಂಟು ಮಾಡ್ತಿರೋ ಕಿತಾಪತಿ ಅರ್ಜಿಯನ್ನು ಇನ್ನೂ ವಾಪಸ್ಸು ತೆಗೆಸದಿರುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವೇನು? ತಮಿಳುನಾಡು, ಹೊಗೇನಕಲ್ ಜಂಟೀ ಸಮೀಕ್ಷೆಗೆ ಒಪ್ಪಿ ಒಟ್ಟಾಗಿ ಸಮೀಕ್ಷೆ ಮಾಡಿ, ಈ ಯೋಜನೆಯ ಕಾಮಗಾರಿಯನ್ನು ತಮ್ಮ ನೆಲಕ್ಕೆ ಸೀಮಿತಗೊಳಿಸುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವಲ್ಲವೇನು? ಇದೆಲ್ಲಾ ಬಿಟ್ಟು ಹಿಂದೆಯೇ ಆಗಿಹೋಗಿದ್ದ ಒಪ್ಪಂದವನ್ನು ಇವತ್ತು ಮಾಡಿಕೊಳ್ಳೋ ಹಾಗೆ ಸಂಧಾನಕ್ಕೆ ಮುಂದಾಗೋದು ಕರ್ನಾಟಕ ಸರ್ಕಾರಕ್ಕೆ ಶೋಭೆ ತಂದೀತೇನು? ಸರ್ಕಾರ 1997ರ ಒಪ್ಪಂದಕ್ಕೂ ಇಂದಿನ ಸಂಧಾನಕ್ಕೂ ಇರೋ ವ್ಯತ್ಯಾಸ ಏನು ಅಂತಾ ಜನಗಳ ಮುಂದೆ ಇಡೋ ಪ್ರಾಮಾಣಿಕತೆ ತೋರಿಸಲಿ ಗುರೂ! ಇದಕ್ಕೂ ಮೊದಲಿಗೆ ಕರ್ನಾಟಕ ಸರ್ಕಾರ ಮಾಡ್ಬೇಕಾದ ಒಂದು ಕೆಲ್ಸ ಇದೆ. ತಮಿಳುನಾಡು - ಇಡೀ ಹೊಗೇನಕಲ್ ಯೋಜನೆ ಧರ್ಮಪುರಿ ಭಾಗದ ಫ್ಲುರೋಸಿಸ್ ಅನ್ನೋ ಪೀಡೆಗೆ ಬಲಿಯಾಗಿರೋ ಜನಕ್ಕೆ ಶುದ್ಧ ಕುಡಿಯೋ ನೀರು ಒದಗಿಸೋ ಮಾನವೀಯ ಯೋಜನೆ, ಇದಕ್ಕೆ ಕರ್ನಾಟಕ ಅಡ್ಡಿ ಮಾಡಲು ಮುಂದಾಗಿರೋ ರಾಕ್ಷಸ - ಅನ್ನೋ ಅಪಪ್ರಚಾರ ಮಾಡ್ತಿರೋದನ್ನು ಗಮನಿಸಿ ನಮ್ಮ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ಪ್ರಚುರಪಡಿಸಬೇಕಾಗಿದೆ. ಇದೆಲ್ಲಾ ಇವರು ಮಾಡ್ತಾರಾ? ಇವ್ರಿಂದ ಆಗುತ್ತಾ? ಗುರೂ!!!

1 ಅನಿಸಿಕೆ:

Anonymous ಅಂತಾರೆ...

As usual, ಸಂಕ್ಷಿಪ್ತ ಮತ್ತು to the point. Great going, EnG :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails