ನಮ್ಮ ಜನಪ್ರತಿನಿಧಿ ನಮ್ಮೋರೇ ಆಗಿರಬೇಕಲ್ವಾ?


ಸಧ್ಯದಲ್ಲೇ ಕರ್ನಾಟಕದಿಂದ ರಾಜ್ಯಸಭೆಗೆ ಸಂಸದರನ್ನು ಆರಿಸಿಕಳಿಸಬೇಕಾಗಿದೆ. ನಮ್ಮ ನಾಡಿನ ಮೂರೂ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಆರಿಸೋ ಪ್ರಕ್ರಿಯೆಯಲ್ಲಿವೆ. ಇದೇ ಸಂದರ್ಭದಲ್ಲಿ `ರಾಜ್ಯಸಭೆಗೆ ಕನ್ನಡಿಗರನ್ನೇ ಆರಿಸಿ ಕಳಿಸಿ, ಇದುವರೆಗೂ ಕಳಿಸಿರೋ ಪರಭಾಷಿಕರಿಂದ ಈ ನಾಡಿನ ಹಿತ ಕಾಪಾಡಕ್ಕೆ ಆಗಿಲ್ಲಾ' ಅನ್ನೋ ಕೂಗು ಕೇಳಿಬಂದಿದೆ.

ಯಾಕೆ ಸ್ಥಳೀಯರನ್ನು ಆರಿಸಬೇಕು?
ಭಾರತ, ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರೋ ದೇಶ ಅಂತ ಹೆಸರು ಹೊಂದಿದೆ. ಸಂತೋಷ. ಇಂಥಾ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಮುಖ ಅಂಗ ಶಾಸಕಾಂಗ. ಜನಪ್ರತಿನಿಧಿಗಳು ಸೇರಿ ದೇಶಾನ ನಡ್ಸೋ ಉದ್ದೇಶ ಈ ವ್ಯವಸ್ಥೇದು. ಜನರಿಂದ, ಜನರಿಗೋಸ್ಕರ, ಜನರಿಗಾಗಿ ಅಂತನ್ನೋ ಮಾತಿಗೆ ಅರ್ಥ ಸಿಗ್ಬೇಕು ಅಂದ್ರೆ ಶಾಸಕಾಂಗ ಸಭೇಲಿ ಕೂಡೋ ನಮ್ಮ ಜನಪ್ರತಿನಿಧಿಗಳು ತಾವು ಯಾರಿಂದ ಅರಿಸಿ ಬಂದ್ರೋ ಅವರನ್ನು ಸರಿಯಾಗಿ ಪ್ರತಿನಿಧಿಸಬೇಕು.
ತಾಲೂಕು/ ಗ್ರಾಮ ಪಂಚಾಯ್ತಿಯಲ್ಲಾಗಲೀ, ವಿಧಾನಸಭೇಲಾಗಲಿ, ಲೋಕಸಭೇಲಾಗಲೀ, ರಾಜ್ಯಸಭೇಲಾಗಲೀ ನಮ್ಮುನ್ನ
ಪ್ರತಿನಿಧಿಸೋರಿಗೆ ಮೂಲಭೂತವಾಗಿ ಇರಬೇಕಾದ ಅರ್ಹತೆ ಏನಪ್ಪಾ ಅಂದ್ರೆ ನಮ್ಮ ಬದುಕು, ನಮ್ಮ ಸಮಸ್ಯೆ, ನಮ್ಮ ಅಗತ್ಯಗಳು, ನಮ್ಮ ಪರಿಸರ, ನಮ್ಮ ಸಂಪನ್ಮೂಲಗಳು... ಹೀಗೆ ನಮ್ಮದೆಲ್ಲದರ ಬಗ್ಗೆ ಅರಿವು ಇರಬೇಕಾದ್ದೇ ಆಗಿದೆ. ಇದರ ಜೊತೇಲಿ ನಮ್ಮ ಜನಕ್ಕೆ ಒಳ್ಳೇದು ಮಾಡಬೇಕು ಅನ್ನೋ ಕಾಳಜೀನೂ ಇರಬೇಕಾಗಿದೆ. ಒಟ್ಟಾರೆ ಅಂತಹ ಜನಪ್ರತಿನಿಧಿಯ ಬೇರು, ಹಿತಾಸಕ್ತಿಗಳು ಈ ನೆಲದಲ್ಲೇ ಇರಬೇಕಾದ್ದು ಅತ್ಯಂತ ಸರಳವಾದ ಮೂಲಭೂತ ಅಗತ್ಯವಾಗಿದೆ. ಯಾವ ಜನಪ್ರತಿನಿಧಿಗೆ ಕನಿಷ್ಠ ನಾವಾಡೋ ಭಾಷೇನೂ ಕಲಿಯಕ್ಕೆ ಸಾಧ್ಯವಾಗಿಲ್ಲವೋ ಅಂತಹವರು ನಮ್ಮನ್ನು ರಾಜ್ಯಸಭೇಲಿ ಸರಿಯಾಗಿ ಪ್ರತಿನಿಧಿಸಕ್ಕೆ ಸಾಧ್ಯಾನಾ? ನಿಜಕ್ಕೂ ಜನಕ್ಕೆ ಒಳ್ಳೇದು ಮಾಡಬೇಕು ಅನ್ನೋ ಮನಸ್ಥಿತಿ ನಮ್ಮ ರಾಜಕೀಯ ಪಕ್ಷಗಳಿಗೆ ಇದೆಯಾ? ಇದ್ದಿದ್ರೆ ಹೀಗೆ ಪರಭಾಷಿಕರನ್ನು ರಾಜ್ಯಸಭೇಗೆ ಪದೇ ಪದೇ ಕಳಿಸೋಕೆ ಮುಂದಾಗ್ತಾ ಇದ್ವಾ? ಹೋಗಲೀ, ಇದುವರೆಗೂ ಈ ರಾಜ್ಯಸಭಾ ಸಂಸದರು ನಾಡಿನ ಪರವಾಗಿ ಎಷ್ಟು ಸಲ ದನಿ ಎತ್ತಿದ್ದಾರೆ ಅನ್ನೋದನ್ನಾದ್ರೂ ಗಣನೆಗೆ ತೊಗೊಂಡಿದ್ದಾರಾ? ಏನಂತೀರಾ ಗುರುಗಳೇ?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails