ಕನ್ನಡನಾಡಿನ ಜನರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ಈ ಬಾರಿಯ ಕನ್ನಡ ರಾಜ್ಯೋತ್ಸವ ಐವತ್ತೈದನೆಯದು. ೧೯೫೬ರ ನವೆಂಬರ್ ೧ರಂದು, ಹರಿದು ಹಂಚಿ ಹೋಗಿದ್ದ ನಮ್ಮ ಕನ್ನಡ ನಾಡು ಒಂದಾದ ದಿನ. ಕನ್ನಡ ಕುಲಪುರೋಹಿತರೆನ್ನಿಸಿಕೊಂಡ ಶ್ರೀ ಆಲೂರು ವೆಂಕಟರಾಯರು ಕನ್ನಡ ನುಡಿಯಾಡುವ ಪ್ರದೇಶವೆಲ್ಲಾ ಒಂದಾಗಲೆಂಬ ಕನಸು ಕಂಡವರಲ್ಲಿ ಪ್ರಮುಖರು. ಸಾವಿರಾರು ಹೋರಾಟಗಾರರು ಏಕೀಕರಣಕ್ಕಾಗಿ ದುಡಿದು ಇಂದಿನ ಕರ್ನಾಟಕ ರಾಜ್ಯವು ರೂಪುಗೊಳ್ಳಲು ಕಾರಣರಾದರು. ಕನ್ನಡ ರಾಜ್ಯೋತ್ಸವವೆಂಬುದು, ಕನ್ನಡನಾಡಿನ ಮೂಲೆಮೂಲೆಯಲ್ಲೂ ಜನರಿಂದ ಆಚರಿಸಲ್ಪಡುವ ನಿಜವಾದ ನಾಡಹಬ್ಬವಾಗಿದೆ. ಇಂದು ನಾಡ ತುಂಬ ಸಂಭ್ರಮವೇನೋ ಕಾಣುತ್ತಿದೆ. ಬರೀ ಬಾವುಟ ಹಾರಿಸುವಂತಹ ಆಡಂಬರದ ರಾಜ್ಯೋತ್ಸವ ಆಚರಣೆಯ ಆಚೆಗೆ, ಕನ್ನಡಿಗರ ಬದುಕು ಕಟ್ಟಿಕೊಳ್ಳುವ ಕನಸನ್ನು ಕಾಣುವ, ಕನಸನ್ನು ನನಸಾಗಿಸುವತ್ತ ಹೆಜ್ಜೆ ಇಡುವತ್ತ ನಾವಿಂದು ಯೋಚಿಸಬೇಕಾದ ಸಮಯ ಬಂದಿದೆ. ಕನ್ನಡವನ್ನಲ್ಲದೆ ಇನ್ನೊಂದನ್ನು ಅರಿಯದ ಸಾಮಾನ್ಯ ಕನ್ನಡಿಗನೊಬ್ಬ, ಬೇರೊಂದು ನುಡಿಯನ್ನು ತಿಳಿದಿರಬೇಕಾದ ಅನಿವಾರ್ಯತೆಯಿಲ್ಲದೆ ಸುಗಮವಾಗಿ, ಕೀಳರಿಮೆಯಿಲ್ಲದೆ ಬದುಕನ್ನು ನಡೆಸಬಲ್ಲಂತಹ ವ್ಯವಸ್ಥೆಯೊಂದು ಕರ್ನಾಟಕದಲ್ಲಿ ರೂಪುಗೊಂಡಿದೆಯೇ? ಯಾವ ವ್ಯವಸ್ಥೆಯ ಭಾಗವಾಗಿ ನಾವಿಂದು ಬದುಕುತ್ತಿದ್ದೇವೆಯೋ ಆ ವ್ಯವಸ್ಥೆಯು ನಮ್ಮ ಏಳಿಗೆಗೆ ಪೂರಕವಾಗಿದೆಯೇ? ಇಲ್ಲವೇ? ಎಂದು ನೋಡಿದರೆ ನಿರಾಸೆಯಾಗುತ್ತದೆ. ನಮ್ಮೂರಿನ ವಿಮಾನ ನಿಲ್ದಾಣ, ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತೊಡಕಿಲ್ಲದೆ ಕನ್ನಡಿಗ ಸೇವೆ ಪಡೆದುಕೊಳ್ಳಬಲ್ಲನೇ? ಕನ್ನಡನಾಡಿನಲ್ಲಿನ ಉದ್ಯೋಗದ ಎಲ್ಲಾ ಅವಕಾಶಗಳು ಕನ್ನಡಿಗರಿಗೆ ಸಿಗುತ್ತಿದೆಯೇ? ನಮ್ಮ ಜನರ ಕಲಿಕೆ, ಮನರಂಜನೆ, ಉದ್ಯೋಗ ಎಲ್ಲವೂ ನಮ್ಮ ತಾಯ್ನುಡಿಯಲ್ಲಿ ಸಿಗುತ್ತಿದೆಯೇ? ಎಂದು ನೋಡಿದರೆ ಬೇಸರವಾಗುತ್ತದೆ. ಇಲ್ಲೆಲ್ಲಾ ಕನ್ನಡಿಗರನ್ನು ಶೂಲವಾಗಿ ತಿವಿದು ತಿವಿದು ಕಾಡುತ್ತಿರುವುದು ಹಿಂದೀ ಕಲಿಯಬೇಕೆಂಬ ಒತ್ತಡ. ಇದಕ್ಕೆ ಕಾರಣವಾಗಿರುವುದು ಭಾರತದ ಭಾಷಾನೀತಿ. ಕನ್ನಡಿಗರ ಏಳಿಗೆಗೆ ಇಂದಿರುವ ಅತಿದೊಡ್ಡ ತೊಡಕೆಂದರೆ ಭಾರತದ ಇಂದಿನ ಭಾಷಾನೀತಿಯೇ ಆಗಿದೆ. ಅಸಲಿಗೆ ಭಾರತದಂತಹ ಬಹುಭಾಷಾ ಜನಾಂಗಗಳ ನಾಡಿಗೆ ಚೂರೂ ಹೊಂದಿಕೆಯಾಗದ ತಾರತಮ್ಯದ ಭಾಷಾನೀತಿಯನ್ನು ಭಾರತವು ಆಚರಿಸುತ್ತಿದ್ದು, ಇದು ನಿಧಾನವಾಗಿ ಕನ್ನಡ ಕನ್ನಡಿಗರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಏನಿದು ಭಾರತದ ಭಾಷಾನೀತಿ? ಏನಿದರ ಹುಳುಕು? ಬನ್ನಿ ನೋಡೋಣ.
ಭಾರತದ ತಾರತಮ್ಯದ ಭಾಷಾನೀತಿ:
ಭಾರತವು, ಸಂವಿಧಾನದ ಮೂಲಕ ಹಿಂದೀಯನ್ನು ಭಾರತದೇಶದ ಏಕೈಕ ಆಡಳಿತ ಭಾಷೆಯನ್ನೆಂದು
ಘೋಷಿಸಿತು. ಹಿಂದೀಯೇತರರ ವಿರೋಧದ ಕಾರಣದಿಂದಾಗಿ ಜೊತೆಯಲ್ಲಿ ಇಂಗ್ಲೀಷಿಗೂ ಅದೇ ಸ್ಥಾನಮಾನ
ನೀಡಿತು. ಉಳಿದ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿ ಕಣ್ಣೊರೆಸಿತು. ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಹಿಂದೀಯನ್ನು ಆಡಳಿತ ಭಾಷೆಯಾಗಿಸಿದ ಬೆನ್ನಲ್ಲೇ ಆಡಳಿತ ಭಾಷಾ ಇಲಾಖೆ, ಆಡಳಿತ ಭಾಷಾ ನಿಯಮ, ಆಡಳಿತ ಭಾಷಾ ಕಾಯ್ದೆಗಳು ಜನ್ಮತಳೆದವು. ಇದರ ಅಂಗವಾಗಿ ಹಿಂದೀಯನ್ನು ಭಾರತದ ಎಲ್ಲೆಡೆ ಹರಡಲು ಒತ್ತಾಯ, ಆಮಿಷ ಮತ್ತು ವಿಶ್ವಾಸಗಳನ್ನು ಬಳಸುವುದು ಭಾರತ ಸರ್ಕಾರದ ನೀತಿಯೆಂದು ಘೋಷಿಸಲಾಯಿತು. ದೇಶದ ಉದ್ದಗಲಕ್ಕೆ ಹಿಂದೀ ಪ್ರಚಾರಕ್ಕೆ ಕೇಂದ್ರಸರ್ಕಾರ ಮುಂದಾಯಿತು. ಹಿಂದೀಯನ್ನು ಒಪ್ಪಿಸಲು ಹಿಂದೀ ಭಾರತದ ಸಂಪರ್ಕ ಭಾಷೆ ಎನ್ನಲಾಯಿತು. ಬಹುಮುಖ್ಯವಾಗಿ ಹಿಂದೀಯನ್ನು ಆಡಳಿತ ಭಾಷೆಯಾಗಿಸಲು ಕೊಡಲಾದ ಕಾರಣ ಅದು ಭಾರತೀಯ ಭಾಷೆಯೆನ್ನುವುದು ಮತ್ತು ಭಾರತದಲ್ಲಿ ಹೆಚ್ಚು ಜನರಿಗೆ ಅರ್ಥವಾಗುತ್ತದೆ ಎನ್ನುವುದು. ಹಿಂದೀಯನ್ನು ಒಪ್ಪಿಸಲು ಬಳಸಿದ ಕಾರಣಗಳು ಮುಂದಾಲೋಚನೆ, ಪರಿಣಾಮಗಳ ಬಗ್ಗೆ ಆಲೋಚನೆ ಮತ್ತು ವಾಸ್ತವಗಳ ಅರಿವಿಗಿಂತಾ ಹೆಚ್ಚಾಗಿ ಭಾವುಕತೆಯನ್ನು ಆಧರಿಸಿತ್ತು ಎಂದರೆ ತಪ್ಪಾಗಲಾರದು. “ಭಾರತ ಪರಾಧೀನವಾಗಲು ಒಗ್ಗಟ್ಟಿಲ್ಲದ್ದು ಕಾರಣ. ಒಗ್ಗಟ್ಟಿಗೆ ಒಂದೇ ಭಾಷೆ ಇರುವುದು ಅತ್ಯಗತ್ಯ, ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕೆ, ಕೇಂದ್ರ-ರಾಜ್ಯಗಳ ಸಂಪರ್ಕಕ್ಕೆ ಒಂದು ಭಾರತೀಯ ಭಾಷೆಯೇ ಇರಬೇಕು, ಇದಕ್ಕೆ ಸೂಕ್ತವಾದ ಭಾಷೆ ಹಿಂದೀ, ಸ್ವಾತಂತ್ರ ಹೋರಾಟದಲ್ಲಿ ಜನರ ಭಾಷೆ ಹಿಂದೀಯಾಗಿತ್ತು, ಹಾಗಾಗಿ ಹಿಂದೀಯೆಂದರೆ ದೇಶಪ್ರೇಮದ ಸಂಕೇತ, ಹಿಂದೀಯೆಂದರೆ ಭಾರತದ ಒಗ್ಗಟ್ಟಿನ ಸಾಧನ, ಪ್ರಪಂಚಕ್ಕೆ ತೋರಿಸಿಕೊಳ್ಳಲು ದೇಶಕ್ಕೆ ಒಂದು ಭಾಷೆ ಇರಬೇಕು” ಎಂಬ ಅನಿಸಿಕೆಗಳು ಇಂತಹ ನಿಲುವಿಗೆ ಕಾರಣವಾಯಿತು. ಈ ಅನಿಸಿಕೆಗಳು ಕಾಂಗ್ರೆಸ್ಸಿನ ಮಹಾತ್ಮಾಗಾಂಧಿಯವರಂತಹ ರಾಷ್ಟ್ರೀಯ ನಾಯಕರುಗಳಿಗೇ ಇದ್ದುದ್ದರಿಂದ ಅವರ ಅನುಯಾಯಿಗಳೆಲ್ಲಾ ಕಣ್ಣುಮುಚ್ಚಿ ತಮ್ಮ ತಮ್ಮ ರಾಜ್ಯಗಳಲ್ಲಿ ಹಿಂದೀ ಜಾರಿಗೆ ಪಣತೊಟ್ಟರು. ಇಂದಿಗೂ ಭಾರತದ ರಾಷ್ಟ್ರೀಯ ಪಕ್ಷಗಳ ಆಶಯವು ‘ಒಂದು ದೇಶ, ಒಂದು ಭಾಷೆ’ ಎನ್ನುವಂತೆಯೇ ಇದೆಯೆಂದರೆ ಅಚ್ಚರಿಯಾಗುತ್ತದೆ. ಇದರ ಒಂದು ಇತ್ತೀಚಿನ ಪರಿಣಾಮವನ್ನು ನಾವು
ಬೆಂಗಳೂರಿನ ಮೆಟ್ರೋ ರೈಲು ಸೇವೆಯಲ್ಲಿ ಕಾಣಬಹುದಾಗಿದೆ.
ನಮ್ಮ ಮೆಟ್ರೋ ಮತ್ತು ಅಲ್ಲಿನ
ಭಾಷಾ ನೀತಿ:
ಇತ್ತೀಚೆಗೆ ಆರಂಭವಾದ, ನಮ್ಮೆಲ್ಲರ ಹೆಮ್ಮೆಗೆ
ಕಾರಣವಾಗಬೇಕಾಗಿದ್ದ “ನಮ್ಮ ಮೆಟ್ರೋ” ರೈಲು ವ್ಯವಸ್ಥೆಯಲ್ಲಿ ಅನುಸರಿಸಿರುವ
ಭಾಷಾನೀತಿ ತಪ್ಪಾದುದಾಗಿದೆ. ಇಲ್ಲಿ ಕನ್ನಡದ ಜೊತೆಯಲ್ಲಿ ಇಂಗ್ಲೀಷ್ ಮತ್ತು ಹಿಂದೀ ಭಾಷೆಗಳನ್ನು
ಬಳಸಲಾಗಿದೆ. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ
ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಮೂರು ಭಾಷೆಗಳಲ್ಲಿವೆ.
ಈ ಮೂಲಕ ತ್ರಿಭಾಷಾಸೂತ್ರವನ್ನು ಕನ್ನಡನಾಡಿನೊಳಗೆ ತುರುಕಲಾಗುತ್ತಿದೆ. ಒಮ್ಮೆ ಇದು
ಒಪ್ಪಿತವಾಗಿಬಿಟ್ಟರೆ ನಾಳೆ ಕೇಂದ್ರಸರ್ಕಾರಿ ಕಛೇರಿಯಿಂದ ಗ್ರಾಮ ಪಂಚಾಯ್ತಿಯವರೆಗಿನ ಆಡಳಿತದವರೆಗೂ
ಇದು ವಿಸ್ತರಿಸಿಬಿಡುವ ಅಪಾಯವಿದೆ. ಹೀಗೆ ಮಾಡುವುದು ಸಾಧ್ಯವಾಗಿಬಿಟ್ಟರೆ ಕನ್ನಡನಾಡು ಹಿಂದೀ
ಭಾಷಿಕರ ವಸಾಹತಾಗಿಬಿಡುತ್ತದೆ. ಮೆಟ್ರೋ ಸೇವೆಯಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಮಾಡಲಾಗಿದೆ
ಎನ್ನುತ್ತಾರೆ ಸಂಬಂಧಪಟ್ಟವರು. ಆದರೆ ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ
(ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/
ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/
ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ
ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ
ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ ಪ್ರತಿಯೊಂದು ಭಾಷಾಜನಾಂಗಕ್ಕೂ ಸಹಜವಾಗಿ ಇರಬೇಕಾದ
ಹಕ್ಕುಗಳನ್ನು ಬೋಧಿಸುವ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ?
ಹಿಂದೀ ಭಾಷೆ
ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!
ನಾಡಿನ ಆಡಳಿತದಲ್ಲಿ ಹಿಂದೀ ಇರುವುದರ
ಪರಿಣಾಮವೇನಾಗುತ್ತದೆ ಎಂಬುದನ್ನು ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ
ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ
ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ
ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ
ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು ಬಳಗದ ಸಮೇತ ದೆಹಲಿಗೆ ವಲಸೆ ಹೋಗುವುದಿಲ್ಲವೇ? ಬೆಂಗಳೂರಿನಲ್ಲಿಯೂ
ಹಿಂದೀಯಲ್ಲಿ ವ್ಯವಸ್ಥೆಗಳು ಬಂದರೆ ಅದೇ ಆಗದೇ? ಮೊದಲೇ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀಭಾಷಿಕ
ಪ್ರದೇಶಗಳ ಜನರನ್ನು (ಬಿಹಾರ್ – ೧೧೦೨, ಉತ್ತರಪ್ರದೇಶ – ೮೨೮ ಜನ/ ಚ.ಕಿ) ಜನರು, ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ (೩೧೯ ಜನ/ಚ.ಕೀ) ಚಿನ್ನದನಾಡಿಗೆ ಸುನಾಮಿಯಂತೆ ನುಗ್ಗುವುದು ಖಂಡಿತಾ! ಇದರಿಂದಾಗಿ ನಮ್ಮೂರಿನಲ್ಲಿಯೇ
ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ
ಹುಟ್ಟುವುದಿಲ್ಲವೇ? ನಮ್ಮ ಜನರ ಉದ್ಯೋಗಾವಕಾಶಗಳು ಪರಭಾಷಿಕರ ಪಾಲಾಗದೆ? ಹೀಗಾಗುತ್ತಾ ಹೋದಲ್ಲಿ ನಾಳೆ
ಕನ್ನಡ ಉಳಿದೀತೇ? ಸಹಜವಾಗಿ ಹಿಂದೀ ತಾಯ್ನುಡಿ ಹೊಂದಿರುವವರ ಜೊತೆ ಶಾಲೆಯಲ್ಲಿ ಹಿಂದೀ ಕಲಿತ
ಕನ್ನಡಿಗ ಸ್ಪರ್ಧಿಸಿ ಕೆಲಸ ಗಿಟ್ಟಿಸಿಕೊಳ್ಳಬಲ್ಲನೇ? ಊಹೂಂ... ಸಾಧ್ಯವೇ ಇಲ್ಲ. ಇದು ನೂರು
ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಂದೀಭಾಷಿಕರನ್ನು ಎಂಬತ್ತು ಮೀಟರ್ ಮುಂದೆ ನಿಲ್ಲಿಸಿ ಸೀಟಿ
ಹೊಡೆದಂತಾಗುತ್ತದೆ. ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆ “ನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿ” ಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ.
ಇದು ಬರೀ ವಲಸೆ
ಪ್ರಶ್ನೆಯಲ್ಲ!
ಇಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆ ಮಾತ್ರವಲ್ಲ.
‘ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ.
ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ’ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ
ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಭಾರತಸರ್ಕಾರವು,
ಹಿಂದೀಯನ್ನು ಮಾತ್ರಾ ತಿಳಿದಿರುವ ಹಿಂದೀ ಭಾಷೆಯವನಿಗೆ ಇಡೀ ಭಾರತದ ಯಾವ ಮೂಲೆಯಲ್ಲೂ ಯಾವುದೇ
ತೊಡಕಾಗದಂತೆ ಬದುಕಬಲ್ಲ ವ್ಯವಸ್ಥೆಯನ್ನು ಕಟ್ಟಿಕೊಡುತ್ತಿದೆ. ಕನ್ನಡಿಗರಿಗೆ (ಉಳಿದೆಲ್ಲಾ
ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ
ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ
ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ
ಸರ್ಕಾರಕ್ಕಿಲ್ಲವೇ? ಕೊನೆಪಕ್ಷ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿಯಾದರೂ ಕಲಿಯಬಾರದೇ?
ಭಾರತವೆನ್ನುವ ಒಕ್ಕೂಟ ವ್ಯವಸ್ಥೆ:
ಭಾರತ ದೇಶವು ನಾನಾ ಭಾಷೆಯ ಜನರ ತವರು. ಇಲ್ಲಿ ಸಾವಿರಾರು ವರ್ಷಗಳ ಪರಂಪರೆ ಹೊಂದಿರುವ ಅನೇಕಾನೇಕ ಭಾಷಿಕ ಜನಾಂಗಗಳಿವೆ. ಈ ಪ್ರತಿಯೊಂದೂ ಒಂದು ಸಮೃದ್ಧವಾದ ಪರಂಪರೆಯನ್ನು ಬಿಂಬಿಸುತ್ತಿವೆ. ಪ್ರಪಂಚದ ಎಲ್ಲಾ ಭಾಷಿಕ ಜನಾಂಗಗಳಿಗಿರುವಂತೆಯೇ ಇಲ್ಲೂ ಭಾಷೆಯೆನ್ನುವುದು ಆಯಾ ಜನಾಂಗದ ಆಚರಣೆ, ನಂಬಿಕೆ, ಬದುಕು, ದುಡಿಮೆ, ಇತಿಹಾಸ, ಸಂವಹನ, ಸಹಕಾರಗಳ ವಾಹಿನಿಯಾಗಿದೆ. ಈ ಭಾಷೆಗಳು ತಮ್ಮವೇ ಆದ ಪ್ರಾದೇಶಿಕ ಚೌಕಟ್ಟನ್ನು ಬಹುತೇಕ ಹೊಂದಿವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳು
ಪರಿಣಾಮಕಾರಿಯಾಗಬೇಕಾದಲ್ಲಿ, ಜನರಿಂದ- ಜನರಿಗಾಗಿ ಆಡಳಿತ ನಡೆಯಬೇಕಾದಲ್ಲಿ, ಜನರ ಹತ್ತಿರಕ್ಕೆ
ಸರ್ಕಾರ ಹೋಗಬೇಕೆಂದಲ್ಲಿ... ಜನರ ಭಾಷೆಯಲ್ಲಿಯೇ ಆಡಳಿತ ನಡೆಯಬೇಕಾದ್ದು ಸರಿಯಾದದ್ದಾಗಿದೆ. ಜನರ
ಭಾಷೆಯಲ್ಲೇ ವ್ಯವಸ್ಥೆಗಳು ರೂಪುಗೊಳ್ಳಬೇಕಾದ್ದು ಸರಿಯಾದದ್ದಾಗಿದೆ. ಹೀಗೆ ಮಾಡಿದಾಗಲೇ ಜನರು
ಕಲಿಕೆಯಲ್ಲಿ ಸಾಧಿಸಿ, ದುಡಿಮೆಯಲ್ಲಿ ಉನ್ನತಿ
ಕಾಣಲು ಸಾಧ್ಯ. ಈ ಕಾರಣದಿಂದಲೇ ಭಾಷಾವಾರು ರಾಜ್ಯಗಳ ರಚನೆಯಾಗಿದ್ದು. ಜಗತ್ತಿನ ಮುಂದುವರೆದ
ನಾಡುಗಳೆಲ್ಲಾ ತಮ್ಮ ನಾಡಿನೆಲ್ಲ ವ್ಯವಸ್ಥೆಗಳನ್ನು... ವಿಶೇಷವಾಗಿ ಕಲಿಕೆ ಮತ್ತು ದುಡಿಮೆಗಳನ್ನು
ತಮ್ಮ ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಗಮನಿಸಿದಾಗ ಇದು ಮತ್ತಷ್ಟು ಸ್ಪಷ್ಟವಾಗಿ
ಅರ್ಥವಾಗುತ್ತದೆ. ಅಂದರೆ ಭಾರತವೆನ್ನುವುದು ನಾನಾ ಭಾಷಾ ಜನಾಂಗಗಳ ನಾಡು. ಇಂತಹ ವೈವಿಧ್ಯಪೂರ್ಣ
ನಾಡೊಂದರ ವ್ಯವಸ್ಥೆಯಲ್ಲಿ ಅದರ ಭಾಷಾನೀತಿಯು ಸಮಾನ ಗೌರವದ ಸಮಾನ ಅವಕಾಶವನ್ನು ಎಲ್ಲರಿಗೂ
ಕಲ್ಪಿಸುವಂಥದ್ದಾಗಿರಬೇಕಾಗುತ್ತದೆ. ಆದರೆ ಭಾರತದ ಇಂದಿನ ತಾರತಮ್ಯದ ಭಾಷಾನೀತಿಯು ಇದಕ್ಕೆ
ವಿರುದ್ಧವಾಗಿದ್ದು ಕನ್ನಡನಾಡನ್ನು ಅವನತಿಯತ್ತ ತಳ್ಳುತ್ತಿದೆ.
ಈ ಭಾಷಾನೀತಿಯು ಬದಲಾಗದೆ ಕನ್ನಡಿಗನ ರಾಜ್ಯೋತ್ಸವ ಸಂಭ್ರಮಕ್ಕೆ ಅರ್ಥವಿಲ್ಲ. ಜನತೆ ತಡಮಾಡದೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಸರ್ವನಾಶ ಹತ್ತಿರದಲ್ಲೇ ಇದೆ. ಯಾವ ಉದ್ದೇಶದಿಂದ ಏಕೀಕರಣವಾಗಬೇಕೆಂದು ನಮ್ಮ ಹಿರಿಯರು ಶ್ರಮಿಸಿದ್ದರೋ ಇಂದು ಆ ಉದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ? ನಾಡಿನ ಏಳಿಗೆಯತ್ತ ಒಂದೆರೆಡೆದಾದರೂ ಹೆಜ್ಜೆ ಇಡಲಾಗಿದೆಯೇ? ನಿಜವಾದ ರಾಜ್ಯೋತ್ಸವವು ಬಾವುಟ ಹಾರಿಸಿ, ವಾದ್ಯಗೋಷ್ಟಿ ಇಡಿಸಿ, ಜಾಥಾ ನಡೆಸಿ, ಸಿಹಿ ಹಂಚಿ, ಪ್ರಶಸ್ತಿ ನೀಡಿ ಸಂಭ್ರಮಿಸುವಷ್ಟರಲ್ಲಿ ಮಾತ್ರವಿದೆಯೇ? ಭಾರತದ ಹುಳುಕಿನ ಭಾಷಾನೀತಿಯ ಕಾರಣದಿಂದಾಗಿ ಇಂದು ಕನ್ನಡನಾಡಿನಲ್ಲಿ ಕನ್ನಡವನ್ನು ಮಾತ್ರಾ ಬಲ್ಲವನಿಗೆ ಯಾವುದೇ ತೊಡಕಿಲ್ಲದೆ ಬದುಕಲು ಸಾಧ್ಯವಿಲ್ಲದಂತಹ ವ್ಯವಸ್ಥೆ ರೂಪುಗೊಂಡಿದೆ. ಇದು ಬದಲಾಗದಿದ್ದರೆ ಕನ್ನಡಿಗ ವರ್ಷಕ್ಕೊಮ್ಮೆ ನವೆಂಬರ್ ಒಂದರಂದು ಕನ್ನಡ ಬಾವುಟ ಹಾರಿಸಿ ಹಾರಿಸಿ ಸುಸ್ತಾಗೇ ಭೂಪಟದಿಂದ ಮರೆಯಾಗಿ ನಶಿಸಿಹೋಗಿಬಿಡುತ್ತಾನೆ. ಕನ್ನಡಿಗನಿಗೆ ಇಂದು ತನ್ನ ಅಸ್ತಿತ್ವಕ್ಕೇ ಧಕ್ಕೆ ತರುತ್ತಿರುವುದು ಭಾರತದ ಹುಳುಕಿನ ಭಾಷಾನೀತಿ ಎನ್ನುವುದು ಅರಿವಾಗಲಿ. ಈ ಭಾಷಾನೀತಿ ಬದಲಾಗದಿದ್ದರೆ, ಇದಕ್ಕಾಗಿ ದನಿಯೆತ್ತದಿದ್ದರೆ ನಾಳಿನ ಪೀಳಿಗೆ ನಮ್ಮನ್ನು ಮನ್ನಿಸೀತೇ? “ಸತ್ತಂತಿಹರನು ಬಡಿದೆಚ್ಚರಿಸುವ ಕನ್ನಡ ಡಿಂಡಿಮವನ್ನು ನುಡಿಸುವ ಹೃದಯ ಶಿವನಾರು? ಅದನ್ನು ಕೇಳಿ ಮೈಕೊಡವಿ ಮೇಲೆದ್ದು ತ್ರಿವಿಕ್ರಮನಾಗುವ ಕನ್ನಡಿಗನಾರು?” ಎಂದು.. ಅಂದು ಹಂಪೆಯಳಿದಾಗ ತತ್ತರಿಸಿದ್ದ ಕನ್ನಡಮ್ಮ, ಇಂದು ತನ್ನ ಮಕ್ಕಳ ಮೈಮರೆಯುವಿಕೆ ಕಂಡು ಹೀಗೆ ಮರುಗುತಿರಬಹುದೇ?