ಕಳೆದೊಂದು ವಾರ ಕನ್ನಡಪರ ಹೋರಾಟಗಳಿಗ ಸುಗ್ಗೀ ಕಾಲ, ಹಬ್ಬದ ಕಾಲ. ಕನ್ನಡ್ ಮಂದಿಗಾ ಒಳ್ಳೀ ಸುದ್ದೀ ಮಳಿ ಧೋ ಅಂತಾ ಹುಯ್ದಾಂಗ.. ಮುಂಗಾರಿನ ಸಿಂಚನ!! ಹೌದ್ರೀ... ಅಂಥದ್ ಏನಾತಪ್ಪಾ ಅಂತೀರೇನ್ರೀ... ಇಕಾ ನೋಡಿ!!!
ಶಾಲೀ ಮುಚ್ಚೂ ಮಂದಿಗಾ ತಡೆಯಾಜ್ಞೆ!
ಮೊದಲಾ ಏನಾತಪಾ ಅಂದ್ರಾ ನಮ್ ರಾಷ್ಟೀಯತಿ ಹರಿಕಾರ್ ಪಾರ್ಟಿ ಭಾಜಪಾದ ಮಂತ್ರಿಗೋಳಾಗಿರೋ ಕಾಗೇರಪ್ಪನೋರು ಕರ್ನಾಟಕದಾಗಿರೂ ಕನ್ನಡ್ ಮಾಧ್ಯಮದ ಶಾಲಿಗಳೊಳಗಾ ಐದಕ್ಕಿಂತ ಕಡೀಮಿ ಮಕ್ಳಿದಾರಂದ್ರಾ ಬಂದ್ ಮಾಡ್ತೇವಿ ಅಂತಂದ್ರಲ್ಲಪಾ... ಮುಂದಾ ಮಂದಿ ಕಂಡಾಪಟ್ಟಿ ಉಗ್ಯಾಕ್ ಹತ್ತಿದ್ದೇ ನೋಡ್ರಪಾ ‘ಅದೂ ಮುಚ್ಚೋಣಲ್ಲಾ...ವಿಲೀನಾ’ ಅಂತಂದ್ ಬುಟ್ರು! ಪತ್ರಿಕೆಯೊಂದ್ರಾಗಂತೂ "ಇದು ಕೊಲಿ ಮಾಡಾಕ್ ಹತ್ತಿಲ್ಲಾ, ಸ್ವರ್ಗಕ್ ಕಳ್ಸಾಕ್ ಹತ್ತೀನಿ... ಅಂದಂಗಾತು" ಅನ್ನೂ ಓಲಿ ಬಂದಿತ್ರೀಪಾ. ಸರ್ಕಾರದ ಈ ಮಂಗ್ಯಾತನಾನ ಕರ್ನಾಟಕದಾಗಿನ ಹೆಚ್ಚೂ ಕಮ್ಮಿ ಎಲ್ಲಾ ಸಾಹಿತಿಗೋಳು ಬೈಯ್ಯಾಕಾ ಚಾಲೂ ಮಾಡುದ್ರುರೀ... ನವೆಂಬರ್ ಒಂದು ರಾಜ್ಯೋತ್ಸವಕ್ ಒಂದೀಟ್ ದಿನಕ್ ಮೊದ್ಲಾ, ಕರ್ನಾಟಕ ರಕ್ಷಣಾ ವೇದಿಕೆ ಮಂದಿ ಎಲ್ಲಾ ಜಿಲ್ಲಾದೊಳಗಾ ದೊಡ್ ಹೋರಾಟ ಮಾಡುದ್ರುರೀಪಾ...ಈಟಾದ್ರೂ ನಮ್ ಸರ್ಕಾರ್ ಜಗ್ಲಿಕ್ ಒಲ್ದಾತು! ಕಡೀಗ ಮೂರು ಮಂದಿ ಜ್ಞಾನಪೀಟ ಪ್ರಶಸ್ತಿ ಗೆದ್ದೋರು, ಮತ್ತೊಬ್ರು ರಾಷ್ಟ್ರಕವಿಗೋಳೂ ಕೋರ್ಟ್ ಬಾಗ್ಲ ಬಡ್ಯಾಕ್ ಮುಂದಾದ್ರು. ಈಗ ಹೈಕೋರ್ಟ್ ಸರ್ಕಾರಕ್ಕ ತುಸಾ ತಡೀರ್ರಲಾ...ಗಡಿಬಿಡಿ ಮಾಡ್ ಬ್ಯಾಡ್ರೀ ಅಂತಾ ಗಪ್ ಕುಂಡ್ರಾಕ್ ಆದೇಶ ಹೊರಡ್ಸೈತಿ!!! ಆಹಾ ಹಾಲ್ ಕುಡ್ದಂಗ್ ಆತಲ್ರೀಪಾ!!
ನಮ್ಮಮೆಟ್ರೋ ಮತ್ತು ಅಧಿಕಾರಿಗಳ ಉತ್ತರ!
ಈ ಕಡೀ ನಮ್ ಬೆಂಗಳೂರದಾಗ ನಮ್ಮ ಮೆಟ್ರೋ ಚಾಲೂ ಮಾಡಿ ಅದ್ರಾಗ ಹಿಂದೀನಾಗೂ ಅನೌನ್ಸ್ ಮಾಡ್ಲಿಕ್ ಹತ್ಯಾರಲಾ... ಅದು ನಿಲ್ಬೇಕಾ ಅಂತಾ, ನಮ್ ಕನ್ನಡ್ ಮಂದೀಗಾ ಕೆಲಸ ಕೊಡಾಬೇಕಂತಾ, ಮೆಟ್ರೋದಾಗ ಕನ್ನಡದಾಗ ಸೇವಿ ಸಿಗಬೇಕಂತಾ ಕರ್ನಾಟಕ ರಕ್ಷಣಾ ವೇದಿಕೆ ಮಂದಿ ದಿಸೆಂಬರ್ ೨ಕ್ಕ ಮೆಟ್ರೋ ಮುಂದಾ ಧರಣಿ ಕುಂತು ಒಂದು ಮನವಿ ಕೊಟ್ಟು ಬಂದಿದ್ರುರೀಪಾ..ಮೆಟ್ರೋ ಸಂಸ್ಥಿ ಮಂದಿ ಅದುಕ್ಕಾ ಒಂದು ಉತ್ರ ಬರ್ದು ಕಳುಸ್ಯಾರಾ. ನಾವ್ ಕೆಲಸಾ ಕೊಡೂ ಮಂದೀಗಾ ಕನ್ನಡ್ ಮಾತಾಡಕ್ಕ, ಬರೀಲಿಕ್ಕಾ, ಓದಲಿಕ್ಕಾ ಬರೋಣು ಕಡ್ಡಾಯ ಐತಿ, ಇಲ್ಲಿ ಗುತ್ತಿಗಿ ಮ್ಯಾಲ ಇರೋ ಸಂಸ್ಥಿಗಳೂ ಹಾಂಗ್ ಕನ್ನಡ್ ತಿಳಿದಿರೋ ಮಂದೀಗಾ ಕೆಲಸಾ ಕೊಡಾಕಬೇಕಂತ ಒಪ್ಪಂದ ಐತಿ, ಕನ್ನಡದ ಮಂದಿಗಾ ಕನ್ನಡದಾಗ ಸೇವಿ ಕೊಟ್ಟಾ ಕೊಡ್ತೀವ್ರೀ ಅಂತಾ ಪತ್ರ ಬರ್ದಾರ. ಇದರಾಗ ಎಶ್ಟ್ ಖರೀ ಐತನ್ನೋದು ಬ್ಯಾರೀ ಮಾತು. ಆದ್ರೂ ಹೀಂಗಾ ಬರವಣಿಗೀಲಿ ತಿಳಿಸ್ಯಾರಾ ಅಂದ್ರಾ ಆ ಮಟ್ಟಕ್ ಕಮಿಟ್ ಆದ್ರೂ ಅಂದಂಗೇ ಅಲ್ರೀ!!! ಹಾಂಗಾಗಿ ಇದೂ ಕನ್ನಡದೋರಿಗ್ ಛಲೋ ಸುದ್ದೀನೇ!!!
ಬೆಳಗಾವಿ ಪಾಲಿಕಿ ಸೂಪರ ಸೀಡ
ಇನ್ನು ನಮ್ ಬೆಳಗಾವಕ್ ಬರ್ರೀ... ಬರೀ ಪಟಾಕ್ಷಿ ಸದ್ದೇ ಸದ್ರೀಪಾ! ಅದಾ ಮತ್ತಾ... ಇರಲಾರ್ದ ಇರುವಿ ಬಿಟ್ಕೊಂಡಂಗ್ ನಮಗಾ ಆಳೂ ಮಂದಿ ಸಪೋರ್ಟ್ ಮಾಡ್ತಾರಾ ಅನ್ನೂ ಭ್ರಮೀ ಒಳಗಾ ಎಂಇಎಸ್ ಮೇಯರ್/ ಉಪಮೇಯರ್ ಕೂಡಾ ಕನ್ನಡ್ ರಾಜ್ಯೋತ್ಸವದ ದಿನ ಕರಾಳದಿನದಾಗ್ ಹೊಕ್ಕೊಂಡಿದ್ದು, ಅದುಕ್ ಕರ್ನಾಟಕ ರಕ್ಷಣಾ ವೇದಿಕೆ ಮಂದಿ ಮೇಯರ್ ಕಚೇರಿಗ್ ನುಗ್ಗಿ ಪ್ರತಿಭಟನಿ ಮಾಡಿದ್ದು...ಇದರ ಬೆನ್ ಹಿಂದಾ ರಗಡ್ ಒತ್ತಡ ಸರ್ಕಾರದ ಮ್ಯಾಲ್ ಬೀಳಕ್ ಚಾಲೂ ಅಗಿದ್ದು...ಕಡೀಕ ಪಾಲಿಕೆ ಸೂಪರ್ ಸೀಡ್ ಆಗೂ ಹಂತಕ್ ಬಂತ್ರಲಾ... ಅಲ್ಲಾ, ಈ ಎಂಇಎಸ್ ಮಂದಿ ಕರ್ನಾಟಕದಾಗಾ ಕುಂತು ಕಂಬಾರಪ್ನೋರಿಗೆ ಅಪಮಾನ ಮಾಡಿ, ರಾಜ್ಯೋತ್ಸವಕ್ಕ ಕಪ್ಪುದಿನಾ ಮಾಡಿ... ಸುಕಾಸುಮ್ನ್ ಕಿರಿಕ್ ಮಾಡಕ್ ಹತ್ತಿದ್ ನೋಡುದ್ರಾ ಸರ್ಕಾರ ಪಾಲಿಕೇನಾ ಸೂಪರ್ ಸೀಡ್ ಮಾಡಿ ಛಲೋ ಕೆಲ್ಸ ಮಾಡೈತಿ ಅನ್ಸೋದ್ರಾಗ್ ಅಚ್ಚರಿ ಏನಿಲ್ಲಾ ಬಿಡ್ರೀಪಾ..
ಹೀಂಗಾ... ಈ ಒಂದೆರಡು ವಾರದಾಗಾ ಕನ್ನಡದೋರ್ ಪಾಲಿಗೆ ಡೇಲಿ... ಖೀರ್ ಕುಡ್ದಂಗಾಗೈತಿ. ಇಂಥಾ ಹೋರಾಟ ನಡ್ಸಿರೋ ಎಲ್ಲಾ ಮಂದಿಗೂ.... ಇಕಾ... ಶರಣು, ಶರಣಾರ್ಥಿ!!
2 ಅನಿಸಿಕೆಗಳು:
ಹಬ್ಬದ್ ಹೋಳಿಗೆ ತಿಂದಂಗಾತ್ ನೋಡ್ರಿ... ಕನ್ನಡದವರೆಲ್ಲಾ ಒಟ್ಟಾದ್ರ ಯಾರಿಗೂ ತಡ್ಯಾಕ್ ಆಗಂಗಲ್ಲ ಬಿಡ್ರಿ :-)
ಲೇಖನ ಚೆನ್ನಾಗಿದೆ.ನಮ್ಮಕನ್ನಡದ ಚಾನೆಲ್ಗಗಳು ಅದರಲ್ಲೂ ಟಿ,ವಿ-9 ತೆಲುಗು ವ್ಯಾಮೋಹ ಜಾಸ್ತಿ ಇದೆ.ನಾಚಿಕೆ,ಮಾನ ,ಮರ್ಯಾದೆ ಏನು ಇಲ್ಲ.ಅವರು ತೆಲುಗು ಸಿನಿಮಾ`ಬಿಜಿನೆಸ್ ಮ್ಯಾನ್'ಗೆ ಕೊಡುವ ಪ್ರಚಾರ ನೋಡಿದರೆ ತಿಳಿಯುತ್ತದೆ.ಬೆಳಗಿನ 2 ಸುದ್ದಿ ಸಮಯದಲ್ಲಿ ಕೆವಲ 'ಬಿಜಿನೆಸ್ ಮ್ಯಾನ್ ' ಮಾತ್ರ ಅವಕಾಷ ಕೊಟ್ಟಿದ್ದಾರೆ.ಇಂಥ ವಾಹಿನಿಗೆ ಧಿಕ್ಕಾರ!ಧಿಕ್ಕಾರ!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!