PUC+CBSE+NEET = ಶಿಕ್ಷಣ ವ್ಯವಸ್ಥೆಯ ಉನ್ನತೀಕರಣವೇ?

(ಫೋಟೋಕೃಪೆ: ಮೆಗಾಮೀಡಿಯಾ ನ್ಯೂಸ್)
ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ಪದವಿಪೂರ್ವ ಕೋರ್ಸುಗಳ ವಿಜ್ಞಾನ, ಗಣಿತ ಪಠ್ಯಕ್ರಮಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ರಾಜ್ಯ ಶಿಕ್ಷಣ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಘೋಷಣೆ ಮಾಡಿದ್ದಾರೆ. ಇದರ ಜೊತೆಯಲ್ಲಿ ಪಿ.ಯು.ಸಿ ಪಠ್ಯಕ್ರಮ ಸಿ.ಬಿ.ಎಸ್.ಇನ ಪಠ್ಯಕ್ರಮದಂತೆ ಇರುತ್ತದೆ ಎಂದಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಕರ್ನಾಟಕದ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸುವುದು ಒಳ್ಳೆಯ ವಿಚಾರವಾಗಿದ್ದು, ಉಳಿದಂತೆ ಅದನ್ನು ಸಿಬಿಎಸ್ಇ ದರ್ಜೆಗೆ ಏರಿಸುತ್ತೇವೆ ಎನ್ನುವುದಾಗಲೀ, ಹಾಗೆ ಏರಿಸಲು ಸಚಿವರು ನೀಡುತ್ತಿರುವ ಕಾರಣವಾಗಲೀ ಚರ್ಚೆಗೆ ಅರ್ಹವಾಗಿರುವುದಾಗಿದೆ.

ಸರ್ಕಾರ ಹೀಗೆ ಪಿಯುಸಿ ಪಠ್ಯಕ್ರಮವನ್ನು ಸಿಬಿಎಸ್ಇಗೆ ಬದಲಿಸಲು ನೀಡುತ್ತಿರುವ ಕಾರಣ, ಕರ್ನಾಟಕದ ವಿದ್ಯಾರ್ಥಿಗಳು ೨೦೧೨ರಿಂದ ವೈದ್ಯಕೀಯ ಪ್ರವೇಶಕ್ಕೆ ರಹದಾರಿಯಾಗಲಿರುವ "ರಾಷ್ಟ್ರೀಯ ಅರ್ಹತಾ/ ಪ್ರವೇಶ ಪರೀಕ್ಷೆ"ಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಲಿ ಎನ್ನುವುದಾಗಿದೆ ಎಂಬುದಾಗಿದೆ.
The decision was taken in view of the Government's decision to seek two years' time to bring students in the State under the ambit of the National Eligibility-cum-Entrance Test (NEET) for admission to medical colleges.
ವಿಜ್ಞಾನ ವಿಷಯದಲ್ಲಿ ಪಿಯುಸಿ ಓದುವ ಎಷ್ಟು ಮಂದಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಎನ್ನುವುದರ ಒಂದು ಸಣ್ಣ ಅಂಕಿ-ಅಂಶ ಹೀಗಿದೆ. ಕರ್ನಾಟಕದಲ್ಲಿ ೨೦೧೦ರಲ್ಲಿ ಪಿಯುಸಿ (ವಿಜ್ಞಾನ/ ಗಣಿತ) ವಿದ್ಯಾರ್ಥಿಗಳ ಸಂಖ್ಯೆ: ೧೧೬,೨೬೪. ಉತ್ತೀರ್ಣರಾದವರು: ೭೫,೫೧೩ ಜನ. ಸಾಮಾನ್ಯವಾಗಿ ವರ್ಷವೊಂದರಲ್ಲಿ ಕರ್ನಾಟಕದಲ್ಲಿ ವೈದ್ಯಕೀಯ ಕಲಿಕೆಯನ್ನು ಮಾಡುವವರು : ಸುಮಾರು ೪೨೦೦ ಮಂದಿ. ಇದರಲ್ಲಿ ೧೬೪ ಜನ ಕೇಂದ್ರದ ಕೋಟಾದವರು. ಈ ಅಂಕಿ-ಅಂಶ ನೋಡಿದರೆ ನಿಜಕ್ಕೂ ಕೇವಲ ಅಖಿಲ ಭಾರತ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ ಎದುರಿಸಲು ಇಡೀ ಲಕ್ಷಾಂತರ ಜನರ ಕಲಿಕಾ ವ್ಯವಸ್ಥೆ ಬದಲಾಗಬೇಕೆ ಎನ್ನಿಸದಿರದು. ಹಾಗೆಂದ ಕೂಡಲೇ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಮೇಲ್ಮಟ್ಟಕ್ಕೇರುವುದು ಬೇಡ ಎಂದೇನಲ್ಲ. ಖಂಡಿತವಾಗಿ ನಮ್ಮ ಶಿಕ್ಷಣದ ಗುಣಮಟ್ಟ ಹೆಚ್ಚಬೇಕು. ಇದರಲ್ಲಿ ಎರಡನೇ ಅಭಿಪ್ರಾಯವಿಲ್ಲ. ಆದರೆ ರಾಜ್ಯಸರ್ಕಾರವು ತನ್ನ ತೆಕ್ಕೆಯಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರದ ಕೈಗೊಪ್ಪಿಸಿ ಅವರು ಹೇಳಿದಂತೆ ಕುಣಿಯುವುದು ಏತಕ್ಕೆ? ಮತ್ತು ಇಂತಹ ಕೇಂದ್ರೀಕೃತ ವ್ಯವಸ್ಥೆಯು ಸರಿಯೇ? ಎಂಬುದೇ ಇಲ್ಲಿ ಪ್ರಶ್ನೆಯಾಗಿದೆ.

ವಿಕೇಂದ್ರೀಕರಣದಿಂದ ದೂರ ಒಯ್ಯುವ ನಿಲುವು!

ಕಲಿಕೆ ಎನ್ನುವುದು ಈ ಹಿಂದೆ ರಾಜ್ಯಪಟ್ಟಿಯಲ್ಲಿದ್ದು ಇದೀಗ ಜಂಟಿಪಟ್ಟಿಗೆ ಬಂದಿರುವುದೇ ಸರಿಯಾದ ನಡೆಯಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಏಳಿಗೆಗೆ ಪೂರಕವಾಗಿರುವ ಆಡಳಿತದ ವಿಕೇಂದ್ರೀಕರಣಕ್ಕೆ ವಿರುದ್ಧ ದಿಕ್ಕಿನ ನಡೆಯಾದ ಇದಕ್ಕೆ ಕೇಂದ್ರಸರ್ಕಾರದ ಶಿಕ್ಷಣಕ್ಷೇತ್ರದ ಉದ್ದೇಶಿತ ಕ್ರಾಂತಿ ಇನ್ನಷ್ಟು ಬಲ ನೀಡುತ್ತದೆ. ಇಡೀ ದೇಶಕ್ಕೊಂದೇ ಕಲಿಕಾ ಪದ್ದತಿ, ವೈದ್ಯಕೀಯ ಶಿಕ್ಷಣಕ್ಕೊಂದು ಕೇಂದ್ರೀಯ ನಿಯಂತ್ರಣ ಮಂಡಲಿ, ಇದರ ಮೂಲಕ ಕೇಂದ್ರಸರ್ಕಾರ ಒಪ್ಪಿರುವ ಪದ್ದತಿಯಂತೆ ಪ್ರವೇಶ ಪರೀಕ್ಷೆಗಳು, ಅಂದರೆ ಕೇಂದ್ರ ಒಪ್ಪಿರುವ ಪಠ್ಯದಲ್ಲಿ ಕಲಿತರೆ ಮಾತ್ರಾ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಎನ್ನುವಂತಹ ವ್ಯವಸ್ಥೆಯನ್ನು ಕಟ್ಟಿರುವುದೇ ಒಪ್ಪುಕೂಟ ವಿರೋಧಿ ನಡೆಯಾಗಿದೆ. ಅಖಿಲ ಭಾರತ ವೈದ್ಯಕೀಯ ಮಂಡಲಿ(AIMS)ಯ ಮುಖ್ಯಸ್ಥರೂ ಕೂಡಾ ಸರ್ಕಾರದ ಈ ನಡೆಯ ವಿರುದ್ಧವಾಗಿ ದನಿ ಎತ್ತಿದ್ದಾರೆ. ಇಷ್ಟರ ನಂತರವೂ ಕೇಂದ್ರ (MCI) ತನ್ನ ನಿಲುವಿಗೆ ಬದ್ಧವಾಗಿದೆ ಮತ್ತು ರಾಜ್ಯಸರ್ಕಾರವೂ ವಿರೋಧಿಸಿದಂತೆ ಮಾಡಿ ಈಗ ಅದಕ್ಕೆ ಸೊಪ್ಪು ಹಾಕುತ್ತಿದೆ.

ನಮ್ಮೂರ ಸೀಟುಗಳು ನಮ್ಮ ಹುಡುಗರ ಕೈತಪ್ಪದೇ?

ಇನ್ನು ಕರ್ನಾಟಕದ ವೈದ್ಯಕೀಯ ಕಾಲೇಜುಗಳಲ್ಲಿ ಇದುವರೆಗೂ ಸ್ಥಳೀಯರ ಪಾಲಿಗಿದ್ದ (೪೨೦೦-೧೬೪ = ೪೦೩೬) ವೈದ್ಯಕೀಯ ಸೀಟುಗಳು ನಮ್ಮ ಹುಡುಗರ ಕೈತಪ್ಪುವುದಿಲ್ಲಾ ಎನ್ನಲು ಏನು ಆಧಾರವಿದೆ? ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ, ಅಖಿಲ ಭಾರತ ಮಟ್ಟದ ರ್ಯಾಂಕುಗಳು, ಅದರಂತೆ ಕಾಲೇಜು ಹಂಚಿಕೆಯಾದರೆ ಏನಾದೀತು? ಇವೆಲ್ಲವನ್ನೂ ರಾಜ್ಯಸರ್ಕಾರ ಪರಿಗಣಿಸಿದೆಯೇ? ಇಂದು ಮೆಡಿಕಲ್ ಸೀಟಿಗೆ ಆಗುತ್ತಿರುವುದು ನಾಳೆ ಇಂಜಿನಿಯರಿಂಗ್, ನಾಡಿದ್ದು ವಿಜ್ಞಾನ, ಕಲೆ, ಡಿಗ್ರೀ, ಪಿಯೂಸಿ, ಹೈಸ್ಕೂಲು ಎಲ್ಲಾ ಹಂತಕ್ಕೂ ವಿಸ್ತರಿಸಿದರೆ ಏನಾದೀತು? ಉತ್ತಮ ಗುಣಮಟ್ಟದ ಕಲಿಕೆ ಎಂದಕೂಡಲೇ ಅದು ಸಿಬಿಎಸ್ಇ ಪಠ್ಯಕ್ರಮದ್ದೇ ಏಕಾಗಬೇಕು? ಆ ಮಟ್ಟದ ವಿಜ್ಞಾನ, ಗಣಿತಗಳ ಕಲಿಕೆ ವೈದ್ಯಕೀಯ ಕಲಿಕೆಗೆ ನಿಜಕ್ಕೂ ಅಗತ್ಯವೇ? ಅದು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದೇ? ಹಾಗಾದರೆ ಇಂದು ಸಾಮಾನ್ಯ ಪದ್ದತಿಯಲ್ಲಿ ಕಲಿತು ವೈದ್ಯಕೀಯ ಓದಿದ ಮಂದಿ ಸಿಬಿಎಸ್ಇ ಪಠ್ಯಕ್ರಮದಲ್ಲಿ ಪಿಯೂಸಿ ಓದಿ ಡಾಕ್ಟರ್ ಆದವರಿಗಿಂತಾ ಕಡಿಮೆ ಗುಣಮಟ್ಟದವರೇ? ಈಗ ಇದ್ದಕ್ಕಿದ್ದಂತೆ ಎರಡು ವರ್ಷದ ಕಲಿಕೆಯಿಂದಾಗಿಯೋ, ಬ್ರಿಡ್ಜ್ ಕೋರ್ಸುಗಳಿಂದಾಗಿಯೋ ಏಕಾಏಕಿ ನಮ್ಮ ಮಕ್ಕಳು ಸಿಬಿಎಸ್ಇ ಆಧಾರಿತ ಪ್ರವೇಶ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬಲ್ಲರೇ? ಅದು ಸರಿ... ಇದಾದ ನಂತರವೂ ಸದರಿ ಪ್ರವೇಶ ಪರೀಕ್ಷೆಗಳು ಕೇಂದ್ರಸರ್ಕಾರ ನಡೆಸುವುದರಿಂದ ಹಿಂದೀ/ ಇಂಗ್ಲೀಷುಗಳಲ್ಲಿ ನಡೆಯಲಿವೆ ಎಂಬ ನಿಯಮ ಬರುವುದಿಲ್ಲ ಎನ್ನಲಾಗುವುದೇ? ಹಾಗಾದಲ್ಲಿ ತಾಯ್ನುಡಿಯಲ್ಲಿ ಬರೆಯುವ ಅವಕಾಶವು ಭಾರತದ ಒಂದು ಭಾಷೆಯ ಜನರಿಗೆ ಮಾತ್ರಾ ದೊರೆತು ಉಳಿದವರಿಗೆ ವಂಚನೆಯಾಗದೇ? (ಹೀಗೆ ಈಗಾಗಲೇ ಕೇಂದ್ರಸರ್ಕಾರಿ ನೌಕರಿಯ ಪರೀಕ್ಷೆಗಳಲ್ಲಿ ಆಗುತ್ತಿದೆ ಎಂಬುದು ನಮ್ಮ ಗಮನದಲ್ಲಿರಲಿ). ನಮ್ಮ ರಾಜ್ಯಸರ್ಕಾರ ಇಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ದುಡುಕುತ್ತಿರುವಂತೆ ತೋರುತ್ತಿದೆ. ಹಾಗೂ ಉತ್ತರವಿದ್ದಲ್ಲಿ ಜನರೊಡನೆ ಹಂಚಿಕೊಳ್ಳುವುದು ಉತ್ತಮ. ಆದರೆ ಎಲೆಯಲ್ಲಿ ಬಡಿಸಿದ್ದನ್ನೆಲ್ಲಾ ಒಟ್ಟಾಗಿ ಕಲಸುಮೇಲೋಗರ ಮಾಡುವಂತೆ ದೇಶದ ವಿದ್ಯಾರ್ಥಿಗಳನ್ನೆಲ್ಲಾ ಒಟ್ಟಾಗಿಸಿ ಇರುವ ೩೦೦ ಮೆಡಿಕಲ್ ಕಾಲೇಜಿಗೆ ಹಂಚುವ ಈ ವಿಧಾನ ನಾಳೆ ಸಮಾಜದಲ್ಲಿ ಎಂತೆಂತಹ ಏರುಪೇರುಗಳಿಗೆ ಕಾರಣವಾದೀತೋ ಎನ್ನುವ ಆತಂಕವಂತೂ ಇದ್ದೇ ಇದೆ.

ರಾಜ್ಯಸರ್ಕಾರದ ನೀತಿಗಳು!

ಮೊದಲಿಗೆ ಶಿಕ್ಷಣದ ಕೇಂದ್ರೀಕರಣದ ವಿರುದ್ಧವಾಗಿಯೇ ರಾಜ್ಯಸರ್ಕಾರ ದನಿಯೆತ್ತಬೇಕು. ಜಂಟಿ ಪಟ್ಟಿಯಿಂದ ಕಲಿಕೆಯು ರಾಜ್ಯಪಟ್ಟಿಗೆ ಮರು ವರ್ಗಾವಣೆಯಾಗಬೇಕು. ಕೇಂದ್ರ ರೂಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಎನ್ನುವ ಸಮಾನತೆಯ ಸಿಹಿ ಮಾತಿಗೆ ಮರುಳಾಗಿ ಈಗಿರುವ ನಾಲ್ಕು ಸಾವಿರ ಚಿಲ್ಲರೆ ವೈದ್ಯಕೀಯ ಸೀಟುಗಳನ್ನೂ ಹೊರರಾಜ್ಯದವರಿಗೆ ಬಿಟ್ಟುಕೊಡಬೇಕಾದೀತು ಎಂಬರಿವು ಸರ್ಕಾರಕ್ಕಿರಬೇಕಿತ್ತು. ಒಂದು ಕಡೆಯಲ್ಲಿ ರಾಜ್ಯಸರ್ಕಾರದ ಭಾಷಾನೀತಿಗೆ ಬದ್ಧವಾಗಿದ್ದೇವೆ ಎನ್ನುವ ಸರ್ಕಾರ ಮತ್ತೊಂದೆಡೆ ಬೆಂಗಳೂರಿನ ಪಾಲಿಕೆ ಶಾಲೆಗಳಲ್ಲಿ ಸಿಬಿಎಸ್ಇ ಪಠ್ಯಕ್ರಮ ಆರಂಭಿಸಲು ಖಾಸಗಿಯವರೊಂದಿಗೆ ಕೈಜೋಡಿಸುತ್ತದೆ. ೩೦೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಬಾಗಿಲೆಳೆಯಲು ಉತ್ಸಾಹ ತೋರಿಸುವ ಸರ್ಕಾರ ತಾಲೂಕಿಗೊಂದು ಇಂಗ್ಲೀಷ್ ಶಾಲೆ ತೆರೆಯಲು ಮುಂದಾಗುತ್ತದೆ. ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸುತ್ತೇವೆ ಮತ್ತು ಅದರ ಪ್ರಶ್ನೆಪತ್ರಿಕೆಗಳು ಕೇಂದ್ರ ಪಠ್ಯಕ್ರಮದಲ್ಲಿರುತ್ತವೆ ಎಂದರೆ ಕೋಲೆ ಬಸವನ ಹಾಗೆ ತಲೆ ಬಾಲ ಅಲ್ಲಾಡಿಸಿ ರಾಜ್ಯ ಪಠ್ಯಕ್ರಮವನ್ನೇ ಬದಲಿಸಲು ಮುಂದಾಗುತ್ತದೆ. ಒಟ್ಟಾರೆ ಇವೆಲ್ಲಾ ಒಂದು ಜನಪರ ಕಾಳಜಿಯ ಕೊರತೆಯಂತೆ ಜನಕ್ಕೆ ಕಂಡರೆ ಅಚ್ಚರಿಯೇನಿಲ್ಲಾ ಗುರೂ!

2 ಅನಿಸಿಕೆಗಳು:

Anonymous ಅಂತಾರೆ...

kannada kaliyiri ee simple videos nalli..

http://www.youtube.com/watch?v=2xa041qwuWE

karunadu ಅಂತಾರೆ...

ಚೆನ್ನಾಗಿ ಬರೆದಿದ್ದೀರ ಏನ್ಗುರು ಅವರೇ. ಈ NEET ಯ ವಿರುದ್ಧ ಬಂಗಾಲ,ತಮಿಳುನಾಡು ಮತ್ತು ಆಂಧ್ರ ಸರ್ಕಾರಗಳು ಕೂಡ ದನಿಯೆತ್ತಿವೆ. ನಮ್ಮ ಸರ್ಕಾರದವರು ಸದ್ಯ ಕುರಿಗಳ ಹಾಗೆ ಹಳ್ಳಕ್ಕೆ ಬೀಳದೆ ಇದ್ದರೆ ಸಾಕು. ನೀವು ಒಂದು ವಿಷಯ ಬರೆಯಬೇಕಿತ್ತು ಸರ್. ಅದೇನೆಂದರೆ ಯಾವಾಗ ಈ ಪರೀಕ್ಷೆಗಳು ಮತ್ತು ಅದರ ಪ್ರವೇಶ (admission)ಗಳು 'common ', 'ನ್ಯಾಷನಲ್' ಆಗುತ್ತವೋ ಆಗ ನಮ್ಮ ಮಕ್ಕಳಿಗೆ ನಮ್ಮ ಕರ್ನಾಟಕದ ಕಾಲೇಜುಗಳಲ್ಲಿ ಸೀಟ್ ಸಿಗುವುದು ಕಷ್ಟ ಆಗುತ್ತೆ. ಇಲ್ಲಿ ಗಮನಿಸಬೇಕಾದ್ದು ಏನೆಂದರೆ ಈಗ ಎ.ಐ.ಇ.ಇ.ಇ ಮತ್ತು ಐ.ಐ.ಟಿ ಗಳ ಹಾಗೆ ಇದು ಆದರೆ ನಮ್ಮ ಕನ್ನಡದ ಮಕ್ಕಳು ಉತ್ತರ ಭಾರತದ ಯಾವುದೋ ಹೆಸರಿಲ್ಲದ ಕಾಲೇಜುಗಳಿಗೆ ಹೋಗಬೇಕಾಗುತ್ತದೆ.ನಮ್ಮಲಿರುವ ಒಳ್ಳೆ ಕಾಲೇಜುಗಳಿಗೆ ಅಲ್ಲಿನ ಮಕ್ಕಳು ಬರುತ್ತಾರೆ.ಇದು ನಮಗೆ ಪೈಪೋಟಿ ಒಡ್ಡುವ ಅರ್ಹತೆ ಬಗೆಗಿನ ಪ್ರಶ್ನೆ ಅಂತ ಮೂದಲಿಸಿದರೂ ಪರವಾಗಿಲ್ಲ ನಮ್ಮ ಮಕ್ಕಳ ಭವಿಷ್ಯ ನಮಗೆ ಮುಖ್ಯ.ಅಲ್ಲಿರುವ ಹೆಚ್ಚಿನ ಜನಸಂಖ್ಯೆ ಮತ್ತು ಕೋಚಿಂಗ್ ಸೆಂಟರ್ ಗಳ ದೆಸೆಯಿಂದ ಅಲ್ಲಿನ ಮಕ್ಕಳು ಮೇಲಿನ ರಾಂಕ್ ಗಳನ್ನು ಹೆಚ್ಚಾಗಿ ಪಡೆಯುತ್ತಾರೆ.ಇದನ್ನು ತಮಿಳುನಾಡು ಸರ್ಕಾರ ಅರಿತು ಈ ಸಾಮಾನ್ಯ ಪ್ರವೇಶಾತಿಗೆ ನಿಷೇಧವೆ ಹೇರಿದ್ದಾರೆ. ಈಗಿರುವ ಐ.ಐ.ಟಿ ಗಳಲ್ಲಿ ಕನ್ನಡಿಗರು ಇರುವುದು ಕಡಿಮೆ. ಈಗ ಎ.ಐ.ಇ.ಇ.ಇ ನಲ್ಲಿಯೂ ಆಯಾ ರಾಜ್ಯಗಳ ಏನ್.ಐ.ಟಿ.ಗಳಲ್ಲಿ ಇದ್ದ ೫೦% ಮೀಸಲಾತಿ ಕೂಡ ತೆಗೆದು ಹಾಕಿದ್ದರೆ. ಹೀಗಾದಾಗ ಕನ್ನಡಿಗರಿಗೆ ಉನ್ನತ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವ್ಯಾಸಂಗ ಕೈಗೆಟುಕದ ಹಾಗೆ ಆಗುತ್ತದೆ.ಇದು ಹೊಸದಿಲ್ಲಿಯಲ್ಲಿರುವ ಹಿಂದಿ ನಾಯಕರ ಹುನ್ನಾರ. ಈಗಲೇ ಎಚ್ಚೆತ್ತರೆ ಒಳಿತು.
ನಾವು ಹೇಳೋದಕ್ಕೆ ಮಾತ್ರ ಕನ್ನಡನಾಡು ಚಿನ್ನದ ಬೀಡು,ಕರ್ನಾಟಕ ಕಬ್ಬಿಣ ಅದಿರುಗಳ ತವರು ಅಂತೆಲ್ಲ ಹೇಳ್ತಿವಿ ಆದರೆ ನಮ್ಮ ರಾಜ್ಯದಲ್ಲೇ ರಾಜ್ಯ ಸರಕಾರದ್ದೇ ಆದಂತಹ ಗಣಿಯರಿಮೆ(mining ) ಮತ್ತು ಲೋಹದರಿಮೆ(metallurgy) ಹೇಳಿಕೊಡುವ ಕಲಿಕೆ ಕಾಲೆಜುಗಲಿಲ್ಲ. ನೋಡಿ ನಮ್ಮಲ್ಲಿರುವ ಸಂಪತ್ತನ್ನೇ ಸರಿಯಾದ ರೂಪದಲ್ಲಿ ಪಡೆಯುವ ಕಸುಬುಗಾರಿಕೆ ನಮ್ಮಲ್ಲಿ ಇನ್ನು ಹುಟ್ಟಿಲ್ಲ. ಆಗಲೇ ಬೇರೆ ರಾಜ್ಯದವರು ನಮ್ಮಲ್ಲಿಗೆ ಬಂದು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುತ್ತಾರೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails