ಮೊನ್ನೆ ಮೊನ್ನೆ ತಾನೇ ಜ್ಞಾನಪೀಠ ಪ್ರಶಸ್ತಿ ಗಳಿಸಿಕೊಂಡ ಕನ್ನಡದ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರರು ‘ಕನ್ನಡ ಶಾಲೆಗಳನ್ನು ಮುಚ್ಚುವ’ ಸರ್ಕಾರದ ನಿಲುವಿನ ವಿರುದ್ಧವಾಗಿ ಬಹು ಉಗ್ರವಾಗಿ ದನಿಯೆತ್ತಿದ್ದನ್ನು ಕಂಡು ತಲೆದೂಗಿದ್ದ ಕನ್ನಡಿಗರೆಲ್ಲಾ ಇದೀಗ ಬೆಚ್ಚಿ ಬೀಳುವಂಥಾ ಶಾಕ್ ಒಂದನ್ನು ಕಂಬಾರರು ನೀಡಿದ್ದಾರೆ. ವಿಷಯ ಏನಪ್ಪಾ ಅಂದ್ರೆ, ಶಬ್ದ ಹಿಂದೀ ಸಾಹಿತ್ಯದ ಕಾರ್ಯಕ್ರಮದಲ್ಲಿ ಶ್ರೀಯುತ ಕಂಬಾರರು ಶ್ರೀಮಾನ್ ಸಿದ್ದಲಿಂಗಪಟ್ಟಣಶೆಟ್ಟಿಯವರ ಜೊತೆ ಸೇರ್ಕೊಂಡು, ‘ಇಂಗ್ಲೀಶಿನ ಬದಲಾಗಿ ಸಂವಹನ ಭಾಷೆಯಾಗಿ ಹಿಂದಿಯನ್ನು ಬಳಸಬೇಕು’ ಎಂದಿದ್ದಾರೆ ಅಂತಾ ನಿನ್ನೆಯ (೧೯.೧೨.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಯಾಗಿದೆ.
ಚಿಂತನೆಯ ಬರಡುತನ ಮತ್ತು ಕೀಳರಿಮೆಯ ನರಳಾಟ!
ಆ ಕಾರ್ಯಕ್ರಮದಲ್ಲಿ ಮಾತಾಡಿದ ಈ ಇಬ್ಬರ ಮಾತುಗಳನ್ನು ನೋಡಿದಾಗ, ಇವರುಗಳಿಗೆ ವಿಚಾರ ಮಾಡುವ ಶಕ್ತಿಯೇ ಇಲ್ಲವೇನೋ ಎನ್ನಿಸಿದರೆ ಆಶ್ಚರ್ಯವಿಲ್ಲ. ಇವರಿಗೆ ಇಂಗ್ಲೀಶನ್ನು ಬಳಸುವುದರ ಬಗ್ಗೆ ಇರುವ ಆಕ್ಷೇಪಣೆ ಹಿಂದೀ ಬಳಕೆಯ ಬಗ್ಗೆ ಇಲ್ಲದಿರುವುದನ್ನು ಕಂಡಾಗ ಅಚ್ಚರಿ ಆಗುತ್ತದೆ. ‘ರಾಷ್ಟ್ರೀಯ ವಿಷಯಗಳನ್ನು ಮಾತಾಡುವಾಗ ಇಂಗ್ಲೀಶ್ ಬೇಡಾ, ಹಿಂದೀ ಇರಲಿ, ಪರಕೀಯ ಭಾಷೆ ಮಾತಾಡೋದ್ರಿಂದ ನೈಜಭಾವನೆಗಳ ಹಂಚಿಕೆ ಅಸಾಧ್ಯ’ ಎನ್ನುವ ಇವರು ಇಂಗ್ಲೀಶನ್ನು ಪರಕೀಯಗೊಳಿಸಿ ಹಿಂದೀಯನ್ನು ನಮ್ಮದೆನ್ನುತ್ತಿರುವುದು ತಮಾಶೆಯ ಮಾತಾಗಿದೆ. ಸರಿ, ಕಂಬಾರರೇ, ಹಿಂದೀಯನ್ನು ಭಾರತೀಯ ಎನ್ನುವ ಕಾರಣದಿಂದ ನಮ್ಮದು ಎಂದು ನಾವಂದುಕೊಳ್ಳುವಂತೆ (ನಾವಲ್ಲಾ... ನೀವು!) ಹಿಂದೀ ಭಾಷೆಯವರು ಕನ್ನಡವನ್ನು ಇಂಗ್ಲೀಶಿನ ಬದಲು ಒಪ್ಪುವರೇನು? ಒಮ್ಮೆ ಯೋಚಿಸಿ ನೋಡಿ. ಸ್ಥಳೀಯ ವಿಷಯಕ್ಕೆ ಕನ್ನಡ, ರಾಷ್ಟ್ರೀಯ ವಿಷಯಕ್ಕೆ ಹಿಂದೀ, ಅಂತರರಾಷ್ಟ್ರೀಯ ವಿಷಯಕ್ಕೆ ಇಂಗ್ಲೀಶ್ ಅನ್ನುವ ಕೀಳರಿಮೆಯ ಕೆಸರಿನ ನರಳಾಟದಂತೆ ಈ ಮಾತುಗಳು ಕೇಳಿದರೆ ಅಚ್ಚರಿ ಪಡಬೇಕಿಲ್ಲ! ವಾಸ್ತವದಲ್ಲಿ ಕನ್ನಡಿಗರಿಗೆ, ಕನ್ನಡವಲ್ಲದೆ ಬೇರೆಲ್ಲವೂ ಪರಕೀಯವೇ ಆಗಿದೆ. ಇಂಗ್ಲೀಶ್ ಭಾಷೆಯನ್ನು ಕಣ್ಣು ಚುಚ್ಚುವ ಸೂಜಿಯಂತೆ ಕಾಣುತ್ತಿರುವ ಇವರಿಗೆ ಹಿಂದೀ ಚಿನ್ನದ ಸೂಜಿಯಿದ್ದಂತೆ ಎಂಬುದೇಕೆ ಅರಿವಾಗುತ್ತಿಲ್ಲವೋ ಆಶ್ಚರ್ಯಕರವಾಗಿದೆ. ನಿಜಕ್ಕೂ ಹಿಂದೀ ಉಳಿದೆಲ್ಲಾ ಭಾರತೀಯ ಭಾಷೆಗಳಿಗೆ ಚರಮಗೀತೆ ಎನ್ನೋದನ್ನು ಗುರುತಿಸುವಲ್ಲಿ ಇವರು ವಿಫಲವಾಗ್ತಿರೋದು ವಿಚಿತ್ರವೆನ್ನಿಸುತ್ತಿದೆ!!
ಸಾಹಿತ್ಯ ಪ್ರಸಾರಕ್ಕೆ ಬೇಕಿರೋದು ಅನುವಾದ!
ಇಬ್ಬರು ಭಾರತೀಯರು ಭೇಟಿಯಾಗಿ ಇಂಗ್ಲೀಶಿನಲ್ಲಿ ಮಾತಾಡುವುದು ಕೃತಕವಾಗಿ ಕಾಣಿಸುವ ಇವರಿಗೆ, ಇಬ್ಬರು ಭಾರತೀಯರು (ಉದಾ: ಕನ್ನಡಿಗನೊಬ್ಬ ಮತ್ತು ತೆಲುಗಿನವನೊಬ್ಬ) ಹಿಂದೀಯಲ್ಲಿ ಮಾತಾಡಿದರೂ ಅದು ಕೃತಕವಾಗಿ ಕಾಣಿಸದೇ? "ಹಿಂದೀಯಲ್ಲಿ ಮಾತಾಡುವುದು ನಮ್ಮತನ ಇಟ್ಟುಕೊಂಡಂತೆಯೂ, ಇಂಗ್ಲೀಶಲ್ಲಿ ಮಾತಾಡುವುದು ನಮ್ಮತನ ಬಿಟ್ಟಂತೆಯೂ ಅನ್ನಿಸುತ್ತಿದೆ.." ಎಂಬ ಗಾಳಿಯಲ್ಲಿ ತೇಲಾಡೋ ಹಗುರವಾದ ಮಾತಾಡೋ ಇವರು ಅದೇಕೆ ಹಾಗೆ ಎಂದು ವಿವರಿಸಬಲ್ಲರೇನು? ಸಾಹಿತ್ಯ ಪ್ರಚಾರಕ್ಕೆ ಹಿಂದೀ ಕಲಿಯಬೇಕು ಅನ್ನುವ ಇವರ ಮಾತು ಹಾಸ್ಯಾಸ್ಪದವಾಗಿದೆ. ಅಲ್ಲಾ, ಶೇಕ್ಸ್ಪಿಯರ್ ತನ್ನ ಸಾಹಿತ್ಯದ ಹಿರಿಮೆಯನ್ನು ಭಾರತೀಯರಿಗೆ ತಿಳಿಸಲು ಹಿಂದೀ ಕಲಿತಿದ್ನಾ? ಕನ್ನಡದ ಮೇರು ಸಾಹಿತಿಗಳಿಗೆ ಹಿಂದೀ ಬರದ ಕಾರಣ ಅವರ ಸಾಹಿತ್ಯ ಉತ್ತರ ಭಾರತ ತಲುಪಲು ವಿಫಲವಾಗಿದೆ ಎನ್ನುವ ಮಾತುಗಳು ಕೀಳರಿಮೆಯದ್ದಲ್ಲವೇನು? ಕನ್ನಡ ಸಾಹಿತ್ಯದ ಹಿರಿಮೆ ಉಳಿದವರಿಗೆ ತಲುಪಬೇಕೆಂದಿದ್ದರೆ ಅದು ಅವರವರ ಭಾಷೆಗೆ ಅನುವಾದವಾದರೆ ಸಾಕು ಅನ್ನುವ ಆಲೋಚನೆಯೇ ಬೇಡವೇ? ಹೋಗಲೀ, ಹಿಂದೀ ಸಾಹಿತಿಗಳು ದಕ್ಷಿಣದವರನ್ನು ತಲುಪಲು ಏನಾಗಬೇಕೆಂದು ಇವರು ಯೋಚಿಸಬಲ್ಲರೇ? ಹಾಗಾಗಲು ದಕ್ಷಿಣದವರೆಲ್ಲಾ ಹಿಂದೀ ಕಲೀಲಿ ಅಂದರೂ ಅನ್ನಬಹುದೇನೋ? ಕುವೆಂಪುರವರು ಕನ್ನಡದಲ್ಲಿ ರಾಮಾಯಣ ದರ್ಶನ ಬರೆಯದೆ ಹಿಂದೀ ಕಲಿತು ಅದರಲ್ಲಿ ಬರೆಯಬೇಕಿತ್ತು ಅಂದಿದ್ದರೂ ಅಚ್ಚರಿ ಪಡುವಂತಿಲ್ಲ... ಅಲ್ವಾ ಗುರೂ!
8 ಅನಿಸಿಕೆಗಳು:
"ಜ್ಞಾನ"ಪೀಠ ಸಾಆಆಆಆಆಆಆಆಅರ್ಥಕ!
ಸರಿಯಾಗಿ ಹೇಳಿದ್ದಿಯ ಗುರು. ಇವರಿಗೆಲ್ಲ ಪ್ರಚಾರದ ಹುಚ್ಚು ಅದು ಬಿಟ್ರೆ ನಿಜವಾದ ಭಾಷಾಭಿಮಾನ ಇಲ್ವೆ ಇಲ್ಲ. ಮೊನ್ನೆ ‘ಕನ್ನಡ ಶಾಲೆಗಳನ್ನು ಮುಚ್ಚುವ’ ಸರ್ಕಾರದ ನಿಲುವಿನ ವಿರುದ್ಧವಾಗಿ ಬಹು ಉಗ್ರವಾಗಿ ದನಿಯೆತ್ತಿ ಕೂಗಾಡಿದ್ದು ಬಾರೆ ಪ್ರಚಾರ ಅಸ್ಟೇ ಗುರುಗಳೇ . ಇಂಥ ವರಿಗೆಲ್ಲ ಜ್ಞಾನಪೀಟ ಬೇರೆ ಕೇಡು
ಶ್ರೀಯುತ ಕಂಬಾರ ಅವರಿಂದ ಇಂಥ ಹಗುರವಾದ ಮಾತುಗಳು ಬರಬಾರದಿತ್ತು :-(
ಗುರೂ, ನೀವೂ ಹೇಳೋದು ಅಪ್ಪಟ ಸತ್ಯ..
ಕನ್ನಡಿಗರಿಗೆ ಕನ್ನಡವೇ ಜಗತ್ತನ್ನು ಅರಿಯುವ ಮಾಧ್ಯಮ....ಇದರಲ್ಲಿ ಸ್ಥಳೀಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಅನ್ನುವ ಹೇಳಿಕೆಯೆ ಸರಿಯಲ್ಲ!
ಹಾಗೆ ನೋಡಿದರೆ ಇಂಗ್ಲೀಷನ್ನು ಸೇರಿಸಿ ಯಾವ ಭಾಷೆಯೂ ಅಂತರಾಷ್ಟ್ರೀಯ ಅನ್ನೋದುಕ್ಕೆ ಆಗದು (ಚೀನಾ,ಜಪಾನ್,ಪ್ರಾನ್ಸ್, ಕೊರಿಯಾ ಇತ್ಯಾದಿ ದೇಶಗಳಲ್ಲಿ ನೋಡಿದರೆ ಇದರರ್ಥವಾಗುತ್ತೆ)
ನಮಗ್ಯಾರಿಗೂ ಯಾವುದೇ ಒಂದು ಭಾಷೆಯ ಮೇಲೆ ದ್ವೇಷವಿಲ್ಲ ಆದರೆ ಕನ್ನಡವನ್ನು ಬರೀ "ಸ್ಥಳೀಯ", ಇನ್ಯಾವುದೂ "ರಾಷ್ಟ್ರೀಯ" ಮತ್ತ್ಯಾವುದೋ ಅಂತರಾಷ್ಟ್ರೀಯ ಅನ್ನುವ ಪೊಳ್ಳುವಾದಕ್ಕೆ ವಿರೋಧವಿದೆ.
ಇದು ದೊಡ್ಡ ಶಾಕ್...ಒಂದು ಸ್ವಲ್ಪನಾದ್ರು vision ಅನ್ನೋದು ಇಲ್ವಾ ಇವ್ರಿಗೆ...ಅಡಿರೋ ಮಾತನ್ನ ಕೇಳಿದ್ರೆ ತುಂಬಾ ಬೇಜಾರು ಆಗುತ್ತೆ.
ಕನ್ನಡಕ್ಕೆ ಸದ್ಯಕ್ಕೆ ಬೇಕಾಗಿರೋದು ಕನ್ನಡದ ವ್ಯಾಪಕ ಬಳಕೆ, ನಮ್ಮ ಭಾಷೆ ಕೀಳಲ್ಲ ಅನ್ನೋ ಆತ್ಮ ಗೌರವ..ಮತ್ತು...ಓಡ್ತಾ ಇರೋ ತಂತ್ರಜ್ಞಾನದ ಜೊತೆ ಆಗಬೇಕಾದ update ಅನ್ನೋ ವಿಷಯಾನ ಇವ್ರಿಗೆ ಹೇಗೆ ಅರ್ಥ ಮಾಡಿಸಬೇಕು?
ಚಿಕ್ಕ ವಯಸ್ಸಲ್ಲಿ ಕೇಳಿದ ಒಂದು ಮಾತು, ಅದು ಈಗ ಯಾಕೆ ನೆನಪಿಗೆ ಬರ್ತಿದೆ ಅಂತ ಗೊತ್ತಿಲ್ಲ, ಈ ಸಂದರ್ಭಕ್ಕೂ ಆ ಮಾತಿಗೂ ಏನಾದರೂ ಸಂಬಂಧ ಇದೆಯಾ?
"ಸಾಗರದ ಕೆಳಗೆ ಮುತ್ತು ಇದ್ದರೂ ಹುಡುಕಲು ಆಗದಿದ್ದವರು ಕೈಗೆ ಸಿಕ್ಕ ಹೊಳೆಯುವ ಗಾಜಿನ ಚೂರಿಗೆ ಹೆಚ್ಚು ಮಹತ್ವ ನೀಡುತ್ತಾರಂತೆ."
-ಯಾವುದು ಕಲ್ಲು ಯಾವುದು ಗಾಜಿನ ಚೂರು ಗೊತ್ತಿಲ್ಲ, ಆದರೆ ಮುತ್ತಿಗೆ ಸಿಕ್ಕಬೇಕಾದ್ದು ಗಾಜಿನ ಚೂರಿನ ಪಾಲಾಗಿದೆ.
ಸರಿ ಮುಖ್ಯ ವಿಷಯಕ್ಕೆ ಬರ್ತೀನಪ್ಪ..
ಮಾನ್ಯಶ್ರೀ ಚಂದ್ರಶೇಖರ್ ಕಂಬಾರರೆ, (ಕ್ಷಮಿಸಿ)
-ರಾಜ್ಯದಲ್ಲಿ ಇಂಗ್ಲೀಷ್ ಬದಲು ಸಂವಹನ ಭಾಷೆಯಾಗಿ ಹಿಂದಿಯನ್ನು ಬಳಸುವಂತೆ ಕರೆ ನೀಡಿದ್ದೀರಿ..! ನಿಮ್ಮ ಮಾತು ಒಂದರ್ಥದಲ್ಲಿ ಅಷ್ಟೇ ಸರಿ, ನಿಮ್ಮ ಸ್ವಂತ ಅಭಿಪ್ರಾಯಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಆದರೆ ಅದು ಎಲ್ಲಾ ಪ್ರಕಾರವಾಗಿ ಸರಿಹೋಗಲ್ಲ! ನಮ್ಮ ನೆಲದಲ್ಲಿ ಕನ್ನಡವೇ ಸಂವಹನ ಭಾಷೆಯಾಗಿ ಉಳಿದಿಲ್ಲ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳೇ ಸಂವಹನ ಭಾಷೆಗಳಾಗಿ ಮೆರೆಯುತ್ತಿವೆ, ಅದರ ಜೊತೆಗೆ ಮತ್ತೊಂದಷ್ಟು ಭಾಷೆಗಳು ಸೇರಿಕೊಂಡು ಕನ್ನಡ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಸಂವಹನ ಭಾಷೆಯಾಗಿ ಹಿಂದಿಯನ್ನು ಮಾತ್ರ ಬಳಸಿ ಎಂದು ಹೇಳಿಕೆ ಕೊಡುವುದು ಯಾವ ಕೇಡಿಗೆ ಸ್ವಾಮೀ?
ಆಹಾ ಏನ್ ಮಾತು ಅಂತ ಆಡ್ತೀರಾ ಬುದ್ದಿ, ಇಂಗ್ಲೀಷ್ ಭಾಷೆಯನ್ನು ತಡೆಯಲು ಮತ್ತೊಂದು ಹಿಂದಿಯನ್ನು ತಂದು ತುರುಕುವ ಪ್ರಯತ್ನ ತುಂಬಾ ಚೆನ್ನಾಗಿದೆ, ಆದರೆ ಸಾಯುತ್ತಿರುವ ಕನ್ನಡವನ್ನು ನೋಡಿ ಸ್ವಾಮೀ, ನಮ್ಮ ಮನೆಯ ಛಾವಣಿಗೆ ಹತ್ತಿಕೊಂಡಿರುವ ಬೆಂಕಿ ಆರಿಸಲು ಎಲ್ಲಿ ನೀರು ಸಿಗುತ್ತದೆ ಎಂದು ಹುಡುಕಿಕೊಳ್ಳೋಣ.. ಆಮೇಲೆ ಪಕ್ಕದ ಮನೆಯವನ 'ಅಂಡು' ತೊಳೆಯಲು ನೀರು ಕೊಟ್ಟರಾಯಿತು.
"ಜ್ಞಾನಪೀಠ"ದಂತಹ ಮಹಾನ್ ಗೌರವ ಪಡೆದ ನಿಮಗೆ "ಶಬ್ದ ಹಿಂದಿ ಸಾಹಿತ್ಯ ಸಮ್ಮಾನ್" ಪ್ರಶಸ್ತಿ ಸಿಕ್ಕಿದ್ದಕ್ಕೆ ಸಂತೋಷ ಮತ್ತು ಈ ಶುಭ ಸಂದರ್ಭದಲ್ಲಿ ನಿಮಗೆ ಕನ್ನಡಿಗರೆಲ್ಲರ ಪರವಾಗಿ ಶುಭಾಶಯಗಳು., ನೀವು ಕನ್ನಡಿಗರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ. (ಆಗಲೇಬೇಕಲ್ಲ,)
ನೀವು ಅದೇನೋ ಹೇಳಿದ್ರಲ್ಲ ಗುರುವರ್ಯ- "ಕನ್ನಡ ಸಾಹಿತ್ಯದ ಪ್ರಚಾರಕಾಗಿ ಹಿಂದಿ ಭಾಷೆಯನ್ನು ಕಲಿಯಬೇಕು, ಹಿಂದಿ ಅನಿವಾರ್ಯ.." ಆ ನಿಮ್ಮ ಮಾತಿಗೆ ನಾವು ನಗಬೇಕೋ ಅಳಬೇಕೋ ಅಂತ ನೀವೇ ನಿರ್ಧಾರ ಮಾಡಿ ಮತ್ತೊಂದು ಹೇಳಿಕೆ ಕೊಡಿ! ನಾವು ನಿಮ್ಮ ಮಾತನ್ನು ಪಾಲಿಸುತ್ತೇವೆ....
ದಯವಿಟ್ಟು ಕನ್ನಡದ ನೆಲದಲ್ಲಿ ಕನ್ನಡವನ್ನು ಸಂವಹನ ಭಾಷೆಯನ್ನಾಗಿ ಬಳಸಿ ಎಂಬುದೊಂದು ಹೇಳಿಕೆ ನೀಡಿ ಪುಣ್ಯ ಕಟ್ಟಿಕೊಳ್ಳಿ..
ದೊಡ್ಡವರೆಲ್ಲಾ ಜಾಣರಲ್ಲ. ಚಿಕ್ಕವರೆಲ್ಲಾ ಕೋಣರಲ್ಲ.
ಏನ್ಗುರು ಹೇಳಿದ ಮಾತುಗಳೆಲ್ಲಾ ಎಂದೂ ಸುಳ್ಳಲ್ಲ.
ಕ೦ಬಾರರು ಹೇಳಿರುವುದು ಮೊದಲ ಆದ್ಯತೆ ಕನ್ನಡಕ್ಕೆ ನ೦ತರ ಹಿ೦ದಿಗೆ ಕೊಡಿ ಅ೦ತ, ನನಗೆ ಗೊತ್ತು ಹಿ೦ದಿಯ ಬಳಕೆ ಮಾಡಿದರೆ ಎನಾಗುತ್ತೆ ಅ೦ತ? ಆದರೆ ಒ೦ದು ವಿಷಯ ಹೇಳಲೆ ಬೇಕು, ತಮಿಳುನಾಡಿ ನಲ್ಲಿ ಆದ೦ತ ಹಿ೦ದಿಯ ವಿರುದ್ದ ಕೂಗು ಈಗ ನಮ್ಮಲ್ಲಿ ಕೇಳಿ ಬರುತ್ತಿದೆ, ಆದರೆ ಅದನ್ನು ಪೂರ್ತಿಯಾಗ೦ತು ತೆಗೆಯಲು ಸಾದ್ಯವಿಲ್ಲ ಕಾರಣ ನಮ್ಮ ವಿದ್ಯಬ್ಯಾಸ ಅದರಲ್ಲಿ ಹಿ೦ದಿ ತ್ರುತಿಯ ಬಾಷೆಯಾಗಿತ್ತು ಮತ್ತು ಒ೦ದು ಬಾಷೆ ಗೊತ್ತಿದ್ದು ಅದನ್ನು ಗೊತ್ತೆ ಇಲ್ಲ ಅನ್ನುವುದು ಕಷ್ಟ. ಈಗ ನೀವೆ ನೋಡಿ ಐಟಿ ಯ ಪ್ರಬಾವದಿ೦ದ ತಮಿಳರು, ತೆಲಗುವರು ಎಲ್ಲರು ಹಿ೦ದಿ ಕಲಿತ್ತಿದ್ದಾರೆ ಆದರೂ ಕನ್ನಡದ ವಾತವರಣ ನಿರ್ಮಾಣ ಮಾಡುವುದು ನಮ್ಮ ಕೈಯಲ್ಲೆ ಇದೆ, ಅದು ಇತ್ತಿಚಿಗೆ ಜೋರಾಗೆ ಸಾಗಿದೆ ಆದ್ದರಿ೦ದ ಒ೦ದು ಬಾಷೆಯ ವಿರುದ್ದ ದ್ವೇಷ ಸಲ್ಲದು
ಇತ್ತೀಚಿಗೆ ಪ್ರೊ.ಕಲಬುರ್ಗಿಯವರು ಕೂಡ ಒಂದು ಸಂದರ್ಶನದಲ್ಲಿ ಕನ್ನಡಿಗರು ಹಿಂದಿ ಕಲಿಯಬೇಕು ಎಂದು ಮತ್ತು ತ್ರಿ-ಭಾಷ ಸೂತ್ರದ ಪರವಾಗಿ ಮಾತಾಡಿದ್ದರು(ನವೆಂಬರ್ ಮಯೂರ).ಉತ್ತರ ಕರ್ನಾಟಕದವರಿಗೆ ಯಾಕೋ ಹಿಂದಿಯೆಂದರೆ ತುಂಬಾ ಇಷ್ಟ ! ನಾನೋದಿದ ಕಾಲೇಜಿನಲ್ಲಿ ಕೂಡ ಗುಲ್ಬರ್ಗ, ಬೀದರ್ ಹುಡುಗ್ರು ಯಾವಾಗಲು ತಮ್ಮ ತಮ್ಮಲ್ಲೇ ಕೂಡ ಹಿಂದಿ ಮಾತಾಡುತ್ತಿದ್ದರು. ಇನ್ನು ಕೆಟ್ಟ ಚಾಳಿ ಅಂದ್ರೆ ಕನ್ನಡ ಹಿಂದಿ ಸೇರಿಸಿ ಮಾತಾಡದು. ಹೀಗಾದಾಗ ನಾರ್ತಿಗಳು ಯಾಕೆ ಕನ್ನಡ ಕಲಿತಾರೆ ಹೇಳಿ. ಹಿಂದಿ ಕಲಿಕೆಯನ್ನು ಆದಷ್ಟು ಬೇಗ ನಮ್ಮ ಶಾಲಾ ಸಿಲಬಸ್ ಗಳಿಂದ ಕಿತ್ತೊಗೆಯಬೇಕು. ತಮಿಳ್ನಾಡಿನಲ್ಲಿ ಯಾರು ಕೂಡ ತಮಿಳ್ ಬಿಟ್ರೆ ಬೇರೆ ಭಾಷೆ ಮಾತಾಡಲ್ಲ. ತಮಿಳ್ ಇಲ್ಲಾಂದ್ರೆ ಇಂಗ್ಲಿಶ್ ಮಾತಾಡ್ತಾರೆ.ಹೀಗಾಗಿ ಎರಡು ಭಾಷೆಗಳು ಚೆನ್ನಾಗ್ ಗೊತ್ತಿರತ್ತೆ. ನಮ್ಮವರು ಕನ್ನಡವನ್ನು ನೆಟ್ಟಗೆ ಕಲೀದೆ,ಇಂಗ್ಲೀಶು ಟಸ್-ಪುಸ್ ಅಂತ ಕಲ್ತು,ಹಿಂದಿನು ಬಾಲಿವುಡ್ ಫಿಲಂ ನೋಡಿ ಕಲ್ತಿರ್ತಾರೆ. ಕೊನೆಗೂ ಯಾವ್ದೂ ಸರಿಯಾಗಿ ಗೊತಿಲ್ದೆ ಒದ್ದಾಡ್ತಾರೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!